ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುರಿದಬೆನ್ನು- ಹೇಳಿದ್ದೇನು?                                                          

ಸಂಧ್ಯಾ ಹೆಗಡೆ ದೊಡ್ಡಹೊಂಡ
ಇತ್ತೀಚಿನ ಬರಹಗಳು: ಸಂಧ್ಯಾ ಹೆಗಡೆ ದೊಡ್ಡಹೊಂಡ (ಎಲ್ಲವನ್ನು ಓದಿ)

 ‘ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ..

  ದು:ಖ ಸುಖವು, ನಗೆಯು-ಹಗೆಯು ಎಲ್ಲ ಅಂತೆ-ಕಂತೆ’

ಯಾಕೋ ಗೊತ್ತಿಲ್ಲ, ಮೇಲಿನ ಸಾಲುಗಳು ಆಗಾಗ ನೆನಪಾಗುತ್ತಿರುತ್ತವೆ. ಎದ್ದಾಗ, ಬಿದ್ದಾಗ; ನಕ್ಕಾಗ, ಅತ್ತಾಗ; ಅವಮಾನಿಸಲ್ಪಟ್ಟಾಗ, ಸನ್ಮಾನಗೊಂಡಾಗ …………ಯಾವಾಗೆಂದರೆ ಆವಾಗ. 

  ‘ಬದುಕು’- ಎಲ್ಲರಿಗೂ ಹಾಗೇ ಅಲ್ಲವೇ?! ಅದು ಆಕಸ್ಮಿಕಗಳ ಸಂತೆ. ಎಲ್ಲಿ? ಯಾವಾಗ? ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬ ಕಲ್ಪನೆಯಾದರೂ ಸಾಧ್ಯವೇ? ಬಂದದ್ದನ್ನು ಸ್ವೀಕರಿಸುತ್ತ ‘ಪಕ್ವತೆ’ಗೇರುವುದು ಮಾತ್ರ ನಮಗಿರುವ ಅವಕಾಶ. ಎಲ್ಲರ ಬದುಕಿನಂತೆ ನನ್ನ ಬದುಕು ಕೂಡಾ ಹಲವು ಆಕಸ್ಮಿಕಗಳನ್ನು ಕಂಡಿದೆ. ಅನೇಕ ಘಟನೆಗಳು ನನ್ನನ್ನು ಬೆಳೆಸಿವೆ. ಇನ್ನು ಕೆಲವು ಗಟ್ಟಿಗೊಳಿಸಿವೆ. ಮತ್ತೆ ಕೆಲವು ಆತ್ಮವಿಶ್ವಾಸದ ಅಕ್ಷರಗಳನ್ನು ನನ್ನೆದೆಯಲ್ಲಿ ಕೊರೆದಿವೆ. ಆದರೆ ಎಲ್ಲ ಘಟನೆಗಳೂ ದೇವರು, ಪ್ರಕೃತಿ ಎಂಬ ಶಕ್ತಿಯ ಮುಂದೆ ನಾನೇನೂ ಅಲ್ಲ ಎಂಬ ವಿನೀತ ಭಾವವನ್ನು ಮನಸ್ಸಿನಲ್ಲಿ ಮೂಡಿಸಿ ಹೊಟ್ಟೆಯಲ್ಲಿನ ಪಿತ್ಥ ಯಾವತ್ತೂ ನೆತ್ತಿಗೇರದಂತೆ ಕಾಪಿಟ್ಟಿವೆ. ಈ ನನ್ನ ಅಕ್ಷರದ ಮೂಲಕ ಕೃತಜ್ಞತೆ! ಎಲ್ಲ ಘಟನೆಗಳಿಗೆ. 

 ಹೌದು! ಮರುಹುಟ್ಟು ಎನ್ನಿಸುವ ಘಟನೆಯೊಂದನ್ನು ಮನಸ್ಸು ಮೆಲುಕುತ್ತಿದೆ. ಹೇಳುತ್ತೇನೆ ಕೇಳಿ…….

               ಅವತ್ತು ನವೆಂಬರ್ ಮೂರನೇ ತಾರೀಖು. ನನ್ನೆರಡು ಪುಟ್ಟ ಮಕ್ಕಳೊಂದಿಗೆ ಬೆಂಗಳೂರಿನಿಂದ ಹೊನ್ನಾವರದ ನನ್ನ ತವರೆಂಬ ಶಾಂತಿಧಾಮಕ್ಕೆ ಬಸ್ಸಿನಲ್ಲಿ ಪ್ರಯಾಣ ಹೊರಟಿದ್ದೆ. ರಾತ್ರಿ ಸ್ಲೀಪರ್ ಕೋಚಿನ ಬಸ್ಸಿನಲ್ಲಿ ಪ್ರಯಾಣಿಸುವ ಅನುಭವಕ್ಕೆ ತೆರೆದುಕೊಂಡಿದ್ದ ಮಕ್ಕಳ ಕಣ್ಣುಗಳಲ್ಲಿ ನಕ್ಷತ್ರದ ಮಿಂಚು. ಹೆಂಡತಿಯೊಬ್ಬಳನ್ನೇ ಎರಡು ಮಕ್ಕಳೊಂದಿಗೆ, ಕಳುಹಿಸುವ  ಕಾರಣಕ್ಕೆ ಆತಂಕದ ಮುಖ ಹೊತ್ತಿದ್ದ ಗಂಡ, ಹೆಗಲು ನೇವರಿಸಿ ‘ಹುಷಾರು’ ಎಂದು ಹೇಳುತ್ತಾ ಕಣ್ಣಲ್ಲೇ ಮಾತಾಡಿದ್ದ. ಅಪ್ಪರ್ ಸ್ಲೀಪರ್‍ನಲ್ಲಿ ಕುಳಿತ ಮಕ್ಕಳು ಅಪ್ಪನಿಗೆ ಪಪ್ಪಿ ಕೊಟ್ಟು ‘ಟಾಟಾ’ ಹೇಳಿದ್ದರು. ‘ನೀವು ಹುಷಾರು ರೀ’ ಎಂದವಳಿಗೆ ‘ಆಯ್ತು ನಿಧಾನಹೋಗು, ಮಕ್ಕಳು ಜೋಪಾನ, ಫೋನ್ ಮಾಡು’ ಎಂದು ಹೇಳುತ್ತಾ ಕೆಳಗಿಳಿದಿದ್ದರು. ಗಂಡನಿಲ್ಲದ ಖಾಲಿತನವನ್ನು ಮನಸ್ಸು ಅನುಭವಿಸಿದರೂ ತವರಿನ ನೆನಪಿಗೆ ಅದೇ ಮನಸ್ಸು ಆರ್ದ್ರಗೊಂಡಿತ್ತು. ಅಂತೂ ಬಸ್ಸು ಬೆಂಗಳೂರು ಬಿಟ್ಟಾಗ 10 ಗಂಟೆ. ಅಮ್ಮನ ಫೋನು, ಮನೆಯವರ ಫೋನು ಎಲ್ಲವೂ ಮುಗಿಯುತ್ತಿದ್ದ ಹಾಗೆ ಮಕ್ಕಳಿಬ್ಬರೂ ನಿದ್ದೆಗೆ ಜಾರಿದ್ದರು.

                 ಸುಮಾರು ಎರಡು ಗಂಟೆ ಆಗಿರಬಹುದು. ಬಸ್ಸಿನಲ್ಲಿ ಸಣ್ಣದಾಗಿ ಮಿನುಗುತ್ತಿರುವ ನೀಲಿ ಬಲ್ಪ್ ಬಿಟ್ಟರೆ ಪೂರ್ತಿ ಕತ್ತಲು. ಎಲ್ಲರೂ ಅವರವರ ಜಾಗದಲ್ಲಿ ಮಲಗಿ ಗೊರಕೆ ಹೊಡೆಯತ್ತಿರುವ ಸದ್ದು ಕೇಳುತ್ತಿತ್ತು. ದೊಡ್ಡ ಮಗ ನಿಧಾನಕ್ಕೆ ಮಗ್ಗಲು ಬದಲಾಯಿಸಿದ. 7 ವರ್ಷದ ಹುಡುಗ ಏನು ಕನಸು ಕಾಣುತ್ತಿರಬಹುದು? ಸಾಲ್ಕೋಡಿನ ಹೊಳೆಯ ನೀರಿನಲ್ಲಿ ತೆಕ್ಕೆ ಬೀಳಬಹುದೆಂದೇ? ಚಿಕ್ಕದಿನ್ನೂ ಹಾಲ್ಗೂಸು. ಒಂದೂಕಾಲು ವರ್ಷ ಅದಕ್ಕೆ. ಮುದ್ದಾದ ಅದರ ಕೆನ್ನೆಯನ್ನು ರಾತ್ರಿಯ ಮಬ್ಬು ಬೆಳಕಿನಲ್ಲಿ ನೇವರಿಸಿದೆ. ಮೃದುವಾಗಿ ನಕ್ಕಂತೆ ಭಾಸವಾಯಿತು. ಇದಕ್ಕೇನು ಕನಸು? ಓಡುತ್ತಿರುವ ದೊಡ್ಡಹೊಂಡದ ದೊಡ್ಡ ಚಿಟ್ಟೆಯನ್ನು ಅಟ್ಟಿಸಿಕೊಂಡು ಹೋಗುತ್ತೇನೆಂದೆ?……ಹೊರಗಡೆ ನಕ್ಷತ್ರ ತುಂಬಿದ ಬಾನು….. ದೇವರೇ ಈ ಬದುಕೆಷ್ಟು ಸುಂದರ! ತುಟಿಯಂಚಿನಲ್ಲಿ ಸಣ್ಣ ನಗು! ಹಾಗೇ ಕಣ್ಣುಮುಚ್ಚಿ ಮಲಗಿದ್ದೆ. ನಿದ್ದೆಯೇನೂ ಬಂದಿರಲಿಲ್ಲ…. ಒಂದೇ ಒಂದು ಕ್ಷಣ. ಧಡ್…..ಧಡಾರ್…..ಕ್ರೀಚ್…….ಎಂಬ ದೊಡ್ಡ ಶಬ್ದ. ಬಸ್ ಅರ್ಧ ವಾಲಿತ್ತು. ಏನಾಯಿತೆಂದು ತಿಳಿಯುವಷ್ಟರಲ್ಲಿ ಮಲಗಿದ್ದಲ್ಲಿಂದ ಮೇಲಕ್ಕೆ ಎಗರಿ ಸೀಟಿನಲ್ಲಿ ಕೆಳಕ್ಕೆ ಬಿದ್ದಿದ್ದೆ…..ಮರುಕ್ಷಣವೇ ಹಾಹಾಕಾರ ಕೇಳಿತ್ತು. ಅಯ್ಯೋ ನನ್ನ ಮಕ್ಕಳು! ದೊಡ್ಡವನ ಎರಡೂ ಕಾಲೂ ತರಚಿತ್ತು. ಚಿಕ್ಕದು ಒಂದು ಕಾಲು ಗಟ್ಟಿ ಹಿಡಿದು ಅಳುತ್ತಿತ್ತು. ದೇವರೇ!ಜೀವಕ್ಕೇನೂ ಅಪಾಯ ಆಗಲಿಲ್ಲವಲ್ಲ. ತಬ್ಬಬೇಕೆಂದು ಎದ್ದರೆ, ಏಳಲೇ ಆಗುತ್ತಿಲ್ಲ. ಬೆನ್ನು? ಮಗ್ಗಲು ಬದಲಾಯಿಸಹೋದರೆ ಪ್ರಾಣಾಂತಿಕ ನೋವು! ಮಲಗಿದ್ದಲ್ಲಿಂದಲೇ ಮಕ್ಕಳನ್ನು ಸಮಾಧಾನಿಸಿದೆ. ಅತ್ತು ಸುಸ್ತಾದ ಮಕ್ಕಳು ಸುಮ್ಮನಾದರು. ಎಲ್ಲಿಂದಲೋ ಅಂಬ್ಯುಲೆನ್ಸ್ ಬಂತು. ‘ಡ್ರೈವರ್‍ನ ಕಿಡ್ನಿ ಫೇಲಾಗಿರಬಹುದು, ಸಣ್ಣವಯಸ್ಸಿನವನು ಪಾಪ’ ಮಾತಾಡಿಕೊಂಡ ಶಬ್ದ ಕಿವಿಗೆ ಕೇಳಿಸುತ್ತಿತ್ತು. ಬಸ್ಸಿನ ಎಮರ್ಜೆನ್ಸಿ ಬಾಗಿಲು ತೆಗೆಯಲಾಯಿತು. ಎಲ್ಲರಿಗೂ ಏಟಾಗಿರಲಿಲ್ಲ. ನನ್ನಂತಹ ಇನ್ನೂ ಕೆಲವರು ಬಸ್ಸಿನಲ್ಲಿ ನರಳಾಡುತ್ತಿದ್ದರು. ಒಂದು ಹುಡುಗಿಯ ಕಾಲು ಮುರಿದಿತ್ತು. ಕರೆದುಕೊಂಡು ಬಂದ ಬಸ್ಸಿನವರು ಯಾವ ಸಹಾಯವನ್ನೂ ಮಾಡಲಿಲ್ಲ. ಹೇಗೆ ಕೆಳಕ್ಕಿಳಿದೆನೋ ದೇವರೇ ಬಲ್ಲ. ಮಕ್ಕಳು! ಲಗ್ಗೇಜು…. ಯಾರೋ ಇಳಿಸಿದರು. ಆಗ ಗಂಟೆ ಎರಡೂಕಾಲು. ಚಿತ್ರದುರ್ಗದ ನ್ಯಾಷನಲ್ ಹೈವೇಯಲ್ಲಿ ನವೆಂಬರ್‍ನ ಚಳಿಯಲ್ಲಿ ಗಡಗಡ ನಡುಗುತ್ತ ಎರಡು ಮಕ್ಕಳೊಂದಿಗೆ ಬಿದ್ದಿದ್ದೆ. ಸಹಪ್ರಯಾಣಿಕರು ನನ್ನ ಬಗ್ಗೆ ಆತಂಕಗೊಂಡರು. ಬಂದ ಹೈವೆ ಪೋಲೀಸ್ ಬಸ್ಸಿನವರಿಗೆ ಚೆನ್ನಾಗಿ ಬೈದರು. ಅವರಲ್ಲಿ ಇಬ್ಬರು ಪೋಲೀಸರು ಯಾವ ಜನ್ಮದಲ್ಲಿ ನನ್ನ ಅಣ್ಣತಮ್ಮಂದಿರಾಗಿದ್ದರೋ ಗೊತ್ತಿಲ್ಲ. ನನ್ನ ಚಿಕ್ಕ ಮಗುವನ್ನು ಅವರ ಜೀಪಿನಲ್ಲಿ ಕೂರಿಸಿಕೊಂಡು ಶಾಲು ಹೊದಿಸಿದರು. ಕನಿಷ್ಠ ಸಾವಿರ ಬಾರಿ ನನ್ನ ಹತ್ತಿರ ಆಸ್ಪತ್ರೆಗೆ ಅಡ್ಮಿಟ್ ಆಗಿ ಎಂದು ದುಂಬಾಲು ಬಿದ್ದರು. ಆದರೆ ಅಂತಹ ನೋವಿನಲ್ಲೂ ನಾನದನ್ನು ನಿರಾಕರಿಸಿದೆ. ನಾನು ಆಸ್ಪತ್ರೆಗೆ ಅಡ್ಮಿಟ್ ಆದರೆ ನನ್ನ ಮಕ್ಕಳನ್ನು ನೋಡಿಕೊಳ್ಳುವವರಾರು? ಅವರನ್ನು ಯಾರ ಹತ್ತಿರ ಬಿಡಲಿ? ಆದರೆ ಖಂಡಿತ ಮನಸ್ಸು ಹೇಳುತ್ತಿತ್ತು, ಬೆನ್ನು ಮುರಿದಿರಬಹುದು ಎಂದು. ಯಾರೋ ನೀರು  ಕೊಟ್ಟರು, ಕುಡಿದೆ. ಯಾರೋ ಪ್ರಯಾಣಿಕರು ಕೊಟ್ಟ ಬಿಸ್ಕೆಟ್ ಪ್ಯಾಕೆಟ್ ನನ್ನ ಮಕ್ಕಳಿಗೂ ನನಗೂ ಆಯಿತು. ಗಂಡನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್. ತಮ್ಮನಿಗೆ ಫೋನ್ ಮಾಡಿದೆ. ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಫೋನ್ ತೆಗೆಯುವವರಾರು? ಅಂತೂ ತಮ್ಮ ಫೋನ್ ತೆಗೆದ. ಕಂಗಾಲಾದ ಅವನು ‘ಚಿತ್ರದುರ್ಗದಲ್ಲಿ ಕಾಂಟಾಕ್ಟ್ ಮಾಡಿ ಗಾಡಿ ಕಳುಹಿಸುತ್ತೇನೆ ಬಂದುಬಿಡು’ ಎಂದ. ನಾಲ್ಕು ಗಂಟೆಯ ಜಾವದಲ್ಲಿ ಮಕ್ಕಳೊಂದಿಗೆ ಒಬ್ಬಳೇ ಬರುವುದು ಕ್ಷೇಮವಲ್ಲ ಎನಿಸಿತು. ಅದೂ ಅಲ್ಲದೇ ಕುಳಿತುಕೊಂಡು ನಾಲ್ಕು ಗಂಟೆ ಪ್ರಯಾಣ ಮಾಡುವೆನೆಂಬ ಯಾವ ವಿಶ್ವಾಸವೂ ನನಗಿರಲಿಲ್ಲ. ಯಾವತ್ತೂ ಸ್ವಿಚ್ ಆಫ್ ಆಗಿರದ ನನ್ನೆಜಮಾನರ ಫೋನ್ ಅವತ್ತು ಸ್ವಿಚ್ ಆಫ್ ಆಗಿತ್ತು.

    ಬೆಳಿಗ್ಗೆ 6.30ರ ಸಮಯ. ಗಂಡನ ಫೋನ್ ಬಂತು. ‘ತಲುಪಿದಿರಾ?’.. ನನ್ನ ಹತ್ತಿರ ಮಾತನಾಡಲೇ ಆಗಲಿಲ್ಲ. ಇಷ್ಟು ಹೊತ್ತಿಂದ ತಡೆದ ನೋವು, ದು:ಖ, ಸಂಕಟ ಎಲ್ಲ ಒಟ್ಟಿಗೇ ಕಣ್ಣೀರಾಗಿ ಹರಿಯಿತು. ‘ಆಕ್ಸಿಡೆಂಟ್ ಆಯಿತು, ಮೇಲೇಳಲು ಆಗುತ್ತಿಲ್ಲ…’ ಇಷ್ಟು ಹೇಳಲು 5 ನಿಮಿಷ ಬೇಕಾಯ್ತು. ಅತ್ತ ಕಡೆಯಿಂದ ಜೋರು ಅಳುವಿನ ಧ್ವನಿ. ಸಾಂತ್ವನ ಬಯಸಿದ್ದ ನನಗೆ ಜಂಘಾಬಲವೇ ಉಡುಗಿಹೋದ ಅನುಭವ. ಯಾವತ್ತೂ ಸಪ್ಪೆ ಮುಖ ಹಾಕದ, ಕಿರುನಗೆಯನ್ನೇ ಮುಖದ ಆಭರಣ ಮಾಡಿಕೊಂಡ ಗಂಡ, ‘ಅಯ್ಯೊ ದೇವ್ರೇ! ನಾನು ತಪ್ಪು ಮಾಡಿದೆ ಕಣೇ, ನಿನ್ನೊಬ್ಬಳನ್ನೇ ಬಸ್ಸಿನಲ್ಲಿ ಕಳುಹಿಸಬಾರದಿತ್ತು, ನಾನೆಂಥ ಪಾಪಿ, ಈಗಲೇ ಕಾರು ತೆಗೆದುಕೊಂಡು ಬರುತ್ತೇನೆ’ ಎಂದು ಅಳುತ್ತಿರುವ ಶಬ್ದ ಹೃದಯ ಭೇದಿಸುತ್ತಿತ್ತು. ಅವರು ಆ ಸ್ಥಿತಿಯಲ್ಲಿ 4 ತಾಸುಗಳ ಕಾಲ ಕಾರು ಡ್ರೈವ್ ಮಾಡಿಕೊಂಡು ಬಂದರೆ ಅವರಿಗೆ ಎಲ್ಲಾದರೂ ಅಪಾಯವಾದರೆ ಎಂಬ ಚಿಂತೆ ಹೆಚ್ಚಾಗಿ ಮನೆಯವರಿಗೆ ‘ನೀವು ದಯವಿಟ್ಟು ಬರಬೇಡಿ’ ಎಂದೆ.  ನನ್ನ ಪ್ರಾಣಾಂತಿಕ ನೋವಿನಲ್ಲೂ ನನ್ನ ಗಂಡನ ಬಗ್ಗೆ ಚಿಂತೆ ಕಾಡಿತ್ತು. ಅವರಿಗೆ ಗೊತ್ತಾದ ಮೇಲೆ ಜಾಸ್ತಿ ತಡವಾಗಲಿಲ್ಲ. ‘ಅಂಬ್ಯುಲೆನ್ಸ್ ಕಳುಹಿಸಿದರು. ಸಹಪ್ರಯಾಣಿಕರು ನನ್ನನ್ನು ಎತ್ತಿ ಅಂಬ್ಯುಲೆನ್ಸ್ ಮೇಲೆ ಮಲಗಿಸಿದರು. ದೊಡ್ಡ ಮಗ ಪಕ್ಕದ ಸೀಟಿನಲ್ಲಿ ಕೂತ. ಚಿಕ್ಕ ಮಗುವಿಗೆ ಕೂರಲೂ ಬರುತ್ತಿರಲಿಲ್ಲವಲ್ಲ. ಮತ್ತೇನು ಮಾಡುವುದು? ಜೊತೆಗೆ ಯಾರೂ ಇಲ್ಲ. ʼಮರಣವೇ ಮಹಾನವಮಿʼ ಎನ್ನಿಸುವ ಆ ದಯನೀಯ ಸ್ಥಿತಿಯಲ್ಲಿ ನನ್ನ ಮುದ್ದು ಕಂದನನ್ನು ಎದೆಯ ಮೇಲೆ ಮಲಗಿಸಿಕೊಂಡು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ಬಂದು ದಾಖಲಾದೆ. ಶ್ರೀಧರಮೂರ್ತಿ ಸರ್ ಎಲ್ಲ ವ್ಯವಸ್ಥೆ ಮಾಡಿದ್ದರು. ಗಂಡ, ತಮ್ಮ ವಿನು ಆಸ್ಪತ್ರೆಗೆ ತಲುಪಿದ್ದರು. ಎಕ್ಸರೇ, ಎಂ. ಆರ್. ಐ. ಎಲ್ಲ ಮುಗಿಯುವ ಹೊತ್ತಿಗೆ ಸಂಜೆ ಗಂಟೆ 5. ನಿನ್ನೆ ರಾತ್ರಿ 8 ಗಂಟೆಗೆ ತಿಂದ ಊಟ ಬಿಟ್ಟರೆ ಹೊಟ್ಟೆಗೇನೂ ಇರಲಿಲ್ಲ. ಹಾಲು ಕುಡಿಯುವ ನನ್ನ ಕೂಸಿನ ಹೊಟ್ಟೆಗೇನಿರಬಹುದು? ಪ್ರಜ್ಞೆ ತಪ್ಪುವಂತಾದ ನೋವಿನಲ್ಲಿ ಒಬ್ಬಳೇ ಆಸ್ಪತ್ರೆಯ ಬೆಡ್ಡಿನಲ್ಲಿ ಬಿದ್ದಿದ್ದೆ. 

              ರಿಪೋರ್ಟ್ ನೋಡಿದ ಡಾಕ್ಟರ್ ನನ್ನನ್ನೂ, ನನ್ನ ಯಜಮಾನರನ್ನೂ ಕರೆಸಿ ಮಾತನ್ನಾಡಿದರು. ನಾನು ಜೀವಂತ ಶವದಂತೆ ಅತ್ತಿತ್ತ ಮಿಸುಕಾಡಲೂ ಆಗದೇ ಎದ್ದೇಳಲೂ ಆಗದೆ ಬಿದ್ದುಕೊಂಡಿದ್ದೆ.  “ನೋಡಿ ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ಬೇಸರಿಸದಿರಿ. ಬೆನ್ನು ಹುರಿಯ ಎಲ್2, ಎಲ್4 ಮೂಳೆ ಮುರಿದಂತಾಗಿದೆ. ಅವರು ಮೊದಲಿನಂತೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ನೀವು ಧೈರ್ಯ ತೆಗೆದುಕೊಳ್ಳಬೇಕು, ಹಾಗೂ ಆಪರೇಷನ್‌ ಮಾಡಲೇಬೇಕು….ನನ್ನ ಗಂಡ ನನಗೆ ಕಾಣದಂತೆ ಅಳುತ್ತಿದ್ದರು….” ನೆನೆಸಿಕೊಂಡರೆ ಈಗಲೂ ಆಶ್ಚರ್ಯವೆನಿಸುತ್ತದೆ….. ನನ್ನೊಳಗೆ ಅದೆಲ್ಲಿತ್ತೋ ಶಕ್ತಿ!! ಎರಡೂ ಕಡೆ ಮುರಿದ ಅದೇ ಬೆನ್ನುಮೂಳೆಯಲ್ಲಿ ಮಿಂಚಿನ ಸಂಚಾರ. ಕಿರುಚಿದ್ದೆ. “ಸತ್ತರೂ ಪರವಾಗಿಲ್ಲ. ಆಪರೇಶನ್ ಮಾಡಿಸಿಕೊಳ್ಳಲಾರೆ, ಈಗಾಗಲೇ ನನಗೆ ಎರಡು ಆಪರೇಶನ್ ಆಗಿದೆ. ಮತ್ತೆ ಬೆನ್ನುಹುರಿಗೆ ಅನಸ್ತೇಶಿಯಾ ತೆಗೆದುಕೊಳ್ಳಲಾರೆ. ನನಗಷ್ಟು ಪುರುಸೊತ್ತಿಲ್ಲ.” ಡಾಕ್ಟರ್ ಸಂತೈಸುವ ಧ್ವನಿಯಲ್ಲಿ ಹೇಳಿದರು. “ಬೇಸರಿಸದಿರಿ………..’ ನನಗೆ ಕೇಳಿಸಲೇ ಇಲ್ಲ. ನಿರ್ಧಾರದಿಂದ ಹೇಳಿದೆ. ‘

‘Give me an another option’. ಡಾಕ್ಟರಿಗೆ ನಾನು ಹುಚ್ಚಿಯಂತೆ ಕಂಡಿರಬೇಕು. ‘ಆಪರೇಷನ್ ಮಾಡದೇ ಇದ್ದರೆ ಜೀವನಪರ್ಯಂತ ನಡೆಯಲಿಕ್ಕಾಗುವುದಿಲ್ಲ. ನಾನೊಬ್ಬ ಡಾಕ್ಟರ್, ನಂಬಿ’. ‘ದೇಹ ನನ್ನದು, ನನ್ನ ಕೇಳದೇ ನೀವದನ್ನು ಮುಟ್ಟಲಾರಿರಿ’. ಅವರು ಅಸಹಾಯಕತೆಯಿಂದ ಯಜಮಾನರ ಕಡೆ ನೋಡಿದರು. ನನಗೆ ತಲೆಯಲ್ಲಿ ಒಂದೇ ಯೋಚನೆಯಿತ್ತು. ಆಪರೇಷನ್‌ ಮಾಡಿಸಿಕೊಂಡು ಮಲಗಿದರೆ ನನ್ನ ಹಸುಗೂಸುಗಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ, ಮತ್ತು ಈಗ ಹಾಲ್ಗೂಸಾಗಿರುವ ಕಂದನನ್ನು ದೂರಮಾಡಿಕೊಳ್ಳಬೇಕಾಗುತ್ತದೆ ಎಂದು. ನಾನಿದಕ್ಕೆ ಸುತರಾಂ ಸಿದ್ಧಳಿರಲಿಲ್ಲ. ತಮ್ಮ ವಿನು, ಯಜಮಾನರು, ಶ್ರೀಧರಮೂರ್ತಿ ಸರ್,‌ ರವಿ ಸರ್ ಎಲ್ಲ ಸೇರಿ ತೀರ್ಮಾನಕ್ಕೆ ಬಂದರು. ಹುಚ್ಚು ಹಿಡಿದವರಂತೆ ಹಠ ಮಾಡಿದೆ.  ಕನಿಷ್ಠ 15 ಡಾಕ್ಟರ್ಸ್ ನನ್ನನ್ನು ಭೇಟಿ ಮಾಡಿದರು, ಆಪರೇಷನ್‌ ಮಾಡಿಸಲು ನನ್ನನ್ನು ಒಪ್ಪಿಸುವ ಸಲುವಾಗಿ ……

ನರ್ಸ್ ಬಂದು ಇಂಜೆಕ್ಷನ್ ಚುಚ್ಚಿ ಹೇಳಿದಳು. ” ಮೇಡಂ, ನಿಮ್ಮ ರಿಪೋರ್ಟ್ ನೋಡಿದ ಡಾಕ್ಟರ್ ಹೇಳುತ್ತಿದ್ದಾರೆ. ನೀವಿರುವ ಸ್ಥಿತಿಯಲ್ಲಿ ನಿಮಗೆ ಪ್ರಜ್ಞೆ ತಪ್ಪದಿರುವುದೇ ಹೆಚ್ಚು”. ನನಗೆ ನನ್ನ ಮೇಲೆ ಪ್ರಜ್ಞೆ ಇದ್ದರೆ ತಾನೆ? ನನ್ನ ಪ್ರಜ್ಞೆಯೆಲ್ಲ ಮಕ್ಕಳ ಮೇಲಿತ್ತು. ಇನ್ನೊಂದು ಆಗಲೇ ನಾನು ನಂಬಿದ ದೈವದ ಹತ್ತಿರ ಹೋಗಿತ್ತು. (ಅದು ನನ್ನ ಬಾಯಿಂದ ಏನು ನುಡಿಸುತ್ತದೋ ಅದನ್ನೇ ನುಡಿಯುತ್ತಿದ್ದೆ) ಅದನ್ನು ನಂಬಿ ಡಾಕ್ಟರನ್ನು ಎದುರಿಸಿದೆ. ಆಪರೇಶನ್ ಬೇಡ ಎಂದರೆ ಬೇಡ. ವಿನು ನನ್ನನ್ನು ಸಪೋರ್ಟ್ ಮಾಡಿದ. ಡಾಕ್ಟರ್ಸ್ ಕೊನೆಗೆ ಒಂದು ಕಂಡೀಶನ್ ಮೇಲೆ ಒಪ್ಪಿದರು. 6 ತಿಂಗಳು ಕಂಪ್ಲೀಟ್ ಬೆಡ್ ರೆಸ್ಟ್ ಮಾಡಿದರೆ ಒಂದೂ ಹೆಜ್ಜೆ ನಡೆಯದಿದ್ದರೆ, ಮಗ್ಗಲು ಬದಲಾಯಿಸದೇ ಇದ್ದರೆ ಒಂದು ಛಾನ್ಸ್ ತೆಗೆದುಕೊಳ್ಳಬಹುದು. ಮೂಳೆ ಕೂಡಬಹುದು. “ಸರಿ, ನೀವು ಹೇಳಿದ ಎಲ್ಲವನ್ನೂ ಮಾಡುತ್ತೇನೆ, ಆಪರೇಶನ್ ಬಿಟ್ಟು” ಹೊತ್ತಿಗೆ 6 ಮಾತ್ರೆಗಳು, ದಿನಕ್ಕೆ 24. ಬೆನ್ನಿಗೆ, ಸೊಂಟಕ್ಕೆ ಮೆಗ್ನೇಟ್ ಬೆಲ್ಟ್. ಸೆಲ್ಫ್ ರಿಸ್ಕ್ ತೆಗೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದೆ. ಎಂಟು ದಿನ ಸುಧತ್ತೆ, ಶ್ರೀಧರ ಮಾವ ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡರು. ಅಂಥ ವ್ಯಕ್ತಿತ್ವದವರಿಂದಲೇ ಸಮಾಜ ತುಂಬಾ ಸ್ವಸ್ಥವಾಗಿರುವುದು. 

ಎಂಟು ದಿನ ಬಿಟ್ಟು ಮನೆಗೆ ಬಂದರೆ ಹಾಸಿಗೆಯಲ್ಲಿ ಒಬ್ಬಳೇ ಮಲಗಬೇಕಾದ ಸವಾಲಿತ್ತು. ಮಗ್ಗಲು ಬದಲಾಯಿಸದೇ!! ಹಗಲು-ರಾತ್ರಿ ಮತ್ತು ರಾತ್ರಿ-ಹಗಲು. ಪಕ್ಕದಲ್ಲಿ ತಬ್ಬಿ ಮಲಗುವ ಮಕ್ಕಳಿಲ್ಲ. ಅವರೊಟ್ಟಿಗೆ ಆಟವಾಡಿ ಸಂತೋಷಪಡುವ ದಿನಚರಿಯಿಲ್ಲ. ಅಡುಗೆಮನೆಯ ಧಾವಂತವಿಲ್ಲ. ಕಾಲೇಜಿಗೆ ಓಡುವ ಅವಸರವಿಲ್ಲ. ಎಲ್ಲರ ಕೆಲಸ ಮಾಡಿಕೊಡುವ ಅಮ್ಮನೀಗ ಎಲ್ಲರಿಂದಲೂ ಕೆಲಸ ಮಾಡಿಸಿಕೊಳ್ಳುವ ಅಸಹಾಯಕಿ. ಆದರೆ ನಾನಾಗಲೇ ಈ ಹೋರಾಟಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೆ. ಹಾಲ್ಗೂಸು ತವರಿನಲ್ಲಿ ನನ್ನ ಅಮ್ಮನ, ಅಜ್ಜಿಯ ಆರೈಕೆಯಲ್ಲಿ ಮುಗ್ಧತೆಯ ಜೊತೆ ಜೋಪಾನವಾಗಿತ್ತು. ದೊಡ್ಡವ ಅಪ್ಪನ ಆರೈಕೆಗೆ ಹೊಂದಿಕೊಂಡ. ಅತ್ತೆ ಅಡುಗೆಗೆ ನಿಂತರು. 

                            ಮನೆಗೆ ಬಂದು ಮಾಡಿದ ಮೊದಲ ಕೆಲಸವೆಂದರೆ ಡಾಕ್ಟರ್ ಕೊಟ್ಟ ಎಲ್ಲ ಮಾತ್ರೆಗಳನ್ನೂ ನಿಲ್ಲಿಸಿದ್ದು. ಜೊತೆಗೇ ಎಲ್ಲ ಸುದ್ದಿಗಳು, ಆಂಡ್ರಾಯ್ಡ್ ಫೋನ್, ಮನುಷ್ಯರೊಂದಿಗಿನ ಮಾತುಕತೆ- ಎಲ್ಲ- ಎಂದರೆ-ಎಲ್ಲ ನಿಲ್ಲಿಸಿದೆ. ನನಗೊಂದು ಬೃಹತ್ ಏಕಾಂತ ಬೇಕಾಗಿತ್ತು. ನನ್ನೊಳಗೆ ನಾನೇ  ಇಳಿಯಬೇಕಿತ್ತು. ‘ಮೌನ’ದ ಆನಂದವನ್ನು ಅನುಭವಿಸಬೇಕಿತ್ತು. ಜೀವ ಹಿಂಡುವ ಆ ನೋವಿನಲ್ಲಿ ಹೊರಗಣ್ಣಿಗೆ ಕಾಣದ ಆದರೆ ಒಳಗಣ್ಣಿಗೆ ಮಾತ್ರ ಕಾಣಬಹುದಾದ ಆ ರಣಗಾಯವನ್ನು ಮನಸ್ಸಿನಲ್ಲೇ ಮುಟ್ಟಿ ಸವರಬೇಕಿತ್ತು. ಮಗ್ಗಲು ಬದಲಾಯಿಸದ ಈ ಕಹಿ ದಿನಗಳನ್ನು ಜೀವನದ ಅತ್ಯಂತ ಆನಂದದ ಕ್ಷಣಗಳಾಗಿ ಮಾರ್ಪಡಿಸಿಕೊಳ್ಳಬೇಕಿತ್ತು. ಹಾಗಾಗಿ ಸಂಪೂರ್ಣ ಏಕಾಂಗಿಯಾದೆ. ಊಟ, ತಿಂಡಿ, ಸ್ನಾನದ ಹೊರತಾಗಿ ಯಾರೂ ನನ್ನನ್ನು ಮಾತನಾಡಿಸಕೂಡದೆಂದು ಬಲವಂತ ಮಾಡಿದೆ. ಈ ನಡುವೆ ಗಂಡ, ತಮ್ಮ ಇಬ್ಬರೂ ಸೇರಿ ಸೆಕೆಂಡ್ ಡಾಕ್ಟರ್ ಒಪೀನಿಯನ್ ಪಡೆದಿದ್ದರು. ಅದೇ ಮಾತುಗಳ ಪುನರಾವರ್ತನೆ. ಆರು ತಿಂಗಳ ರೆಸ್ಟ್. 4 ತಿಂಗಳ ನಂತರ ಮನೆಯೊಳಕ್ಕೆ ನಿಧಾನ ನಡೆಯಲು ಸಾಧ್ಯವಾಗಬಹುದು. ಅಂತರಾತ್ಮ ಕೂಗಿ ಹೇಳುತ್ತಿತ್ತು. ಅಲೋಪತಿಯ ಎಲ್ಲ ಮಾತ್ರೆಗಳನ್ನೂ ಮೊದಲು ನಿಲ್ಲಿಸಿದೆ. ಅಂಕೋಲೆಯ ಸಾಂಪ್ರದಾಯಿಕ ಔಷಧಕ್ಕೆ ನನ್ನೊಳಗೆ ಜಾಗ ಕೊಟ್ಟೆ. ಜೊತೆಗೆ ನಕಾರಾತ್ಮಕ ವಿಷಯಗಳನ್ನು ಸಂಪೂರ್ಣ ಹೊರಗಿಟ್ಟೆ. ‘ಅವಳಿನ್ನು ನಡೆಯುವುದು ಕಷ್ಟ, ಮತ್ತೆ  ನಡೆದಾಡಿದರೆ ಸಾಕು, ಬೆನ್ನಲ್ಲವಾ ಏನಾಗುತ್ತೋ ಏನೋ?, ಅಯ್ಯೋ ದೇವರೇ!!, ಅಳು ದುಃಖ, ನಮ್ಮಲ್ಲೊಬ್ಬರಿಗೆ ಹೀಗೇ ಆಗಿದೆ, ಅವರಿನ್ನೂ ನಡೆಯುತ್ತಿಲ್ಲ…….’ ಬೇರೆಯವರ ಈ ಉದ್ಗಾರಗಳು ನನ್ನ ಕಿವಿ ತಮಟೆಯ ತನಕ ಹೋಗಲೇ ಇಲ್ಲ. ನನಗೆ ಗೊತ್ತಿತ್ತು. ದೇವರು ನನ್ನ ಜೊತೆ ಇದ್ದಾನೆ, ಮತ್ತು ನಾನು ಸಂಪೂರ್ಣ ಗುಣ ಹೊಂದುತ್ತೇನೆ. ಒಂದೂವರೆ ತಿಂಗಳಲ್ಲಿ 40 ಒಳ್ಳೆಯ ಪುಸ್ತಕಗಳನ್ನು ಓದಿ ಮುಗಿಸಿದೆ. ರಾಮಕೃಷ್ಣ ಪರಮಹಂಸರ, ರಮಣ ಮಹರ್ಷಿಗಳ, ಲಕ್ಷ್ಮೀಶ ತೋಳ್ಪಾಡಿಯವರ ಪುಸ್ತಕಗಳು ನನ್ನ ನೋವಿನ ದಿನಗಳನ್ನು ಅತ್ಯಂತ ಮಧುರವಾಗಿಸಿದವು. ಮಲಗಿದ್ದಲ್ಲೇ ಪೆನ್ನು ಹಿಡಿದು ಬರೆದೆ. ಮೊದಲ ಕಥಾಸಂಕಲನ ‘ಗುಲಾಬಿ ಕಚ್ಚಿನ ಬಳೆಗಳು’ ಆವಾಗಲೇ ಅಚ್ಚಾಯಿತು. ಆಮೇಲದಕ್ಕೆ ಕರ್ನಾಟಕ ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಮಲ್ಲಿಕಾ ದತ್ತಿ’ ಪ್ರಶಸ್ತಿಯೂ ಬಂತು ಅನ್ನಿ. ರನ್ನನ ‘ಗಧಾಯುದ್ಧ’ ಪ್ರೂಫ್ ರೀಡಿಂಗ್ ಮುಗಿಸಿದೆ. ಒಳಗೆ ಒಂದು ಏಕಾಂತದ ತಲ್ಲೀನತೆಯನ್ನು ಅನುಭವಿಸಿದೆ. ಮಧ್ಯೆ ಈ ನಾಡಿನ ಬಹುಶ್ರುತ ವಿದ್ವಾಂಸರೂ, ಸಾಹಿತಿಗಳೂ, ಮಾನವೀಯತೆಯ ಉತ್ತುಂಗ ಎನಿಸಿಕೊಂಡಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ರವಿಸರ್‌ ಜೊತೆ ಬಂದು ಹೋಗಿದ್ದು ಮನಸ್ಸಿಗೆಷ್ಟೋ ಧೈರ್ಯ ಕೊಟ್ಟಿತ್ತು. 

                   ಒಂದೂವರೆ ತಿಂಗಳು ಮುಗಿದಿತ್ತು. ಡಾಕ್ಟರ್ ಹತ್ತಿರ ಹೋಗಿ ದುಂಬಾಲು ಬಿದ್ದೆ. ‘ಪ್ಲೀಸ್ ಎಕ್ಸರೇ ಮಾಡಿಸಿ’. 

‘ಮೂರು ತಿಂಗಳಾದರೂ ಬೇಕು ವಾಸಿಯಾಗಲು, ಈಗಲೇ ಎಕ್ಸರೇ ಬೇಡ’

‘ಇಲ್ಲ ಸರ್, ನೋಡುವಾ’

‘ಆಯ್ತು ಮಾಡಿಸಿ’.

ಎಕ್ಸರೇ ರಿಪೋರ್ಟ್ ಬಂದಿತ್ತು. ಅದನ್ನು ಕೈಲಿ ಹಿಡಿದು ನೋಡಿದ ಡಾಕ್ಟರ್ ತಾವು ಕುಳಿತ ಕುರ್ಚಿಯಿಂದ ದಢಕಕ್ಕನೆ ಎದ್ದು ನಿಂತರು. ಅವರ ಬಾಯಿಂದ ಉದ್ಗಾರ ಹೊರಟಿತ್ತು. ‘ಐ ಕಾಂಟ್ ಬಿಲೀವ್ ಇಟ್, ಐ ಕಾಂಟ್ ಬಿಲೀವ್ ಇಟ್, ನಿಮ್ಮ ಮೂಳೆಗಳು ಕೂಡಿಕೊಂಡಿವೆ. ನಮ್ಮ ಅನುಭವದ ಪ್ರಕಾರ ಇದು ಸಾಧ್ಯವೇ ಇಲ್ಲ. ಮಿರಾಕಲ್!! ಇದು ನಿಮ್ಮದೇ ರಿಪೋರ್ಟಾ? ಏನು ಮ್ಯಾಜಿಕ್ ಮಾಡಿದ್ರಿ?’ ಬಹುಶ: ನನ್ನ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳ ಮಿಂಚು. ಹನಿ ಹನಿ ಸೋನೆ ಮಳೆಯಂತಹ ಕಣ್ಣೀರು. ನನ್ನ ಮೂಳೆಗಳು ಕೂಡತೊಡಗಿವೆ. THANK GOD! ಹೇ ದೇವರೇ ನೀನು ನನ್ನ ಪಾಲಿಗೆ ಎಷ್ಟೊಂದು ಕರುಣಾಮಯಿ! ಗಂಡ ಸಂತೃಪ್ತನಾದ. ಡಾಕ್ಟರ್ ನೂರು ಸಲ ಹೇಳಿದ್ರು. ‘ ಇಷ್ಟು ವರ್ಷದ ಅನುಭವದಲ್ಲಿ ಇದು ಮೊದಲನೇ ಕೇಸ್. ಏನು ಮಾಡಿದ್ರಿ?’

‘ಸರ್, ನೀವು ಕೊಟ್ಟ ಮಾತ್ರೆ ತೆಗೆದುಕೊಳ್ಳಲಿಲ್ಲ’

‘ವ್ಹಾಟ್?’ ಡಾಕ್ಟರ್ ಹೌಹಾರಿದ್ದರು. ಮಾತು ಬೆಳೆಸಲು ಇಷ್ಟವಿರಲಿಲ್ಲ. ಒಳಗೆ ಸಂತೋಷ ದೀಪವಾಗಿತ್ತು. ನಕ್ಕು ಸುಮ್ಮನಾದೆ. ಡಾಕ್ಟರ್ ಮಾತ್ರೆ ಕಡಿಮೆ ಮಾಡಿ ಬೇರೆ ಮಾತ್ರೆ ಬರೆದರು. ‘ನೀವಿನ್ನು ನಿಧಾನ ನಡೆದಾಡಬಹುದು. ಕೆಲವು ಎಕ್ಸರ್ಸೈಸ್ ಹೇಳುತ್ತೇನೆ, ಮಾಡಿ’. ನಡೆಯುವುದೇನು? ಬೆನ್ನಿಗೆ ರೆಕ್ಕೆಗಳು ಮೂಡಿದ್ದವು. ಹಾರಲು ಸಿದ್ಧವಾದೆ. 

                          ನಾನು ಹಾಸಿಗೆಯಲ್ಲಿ ಒಬ್ಬಳೇ ಬಿದ್ದಿದ್ದೇನೋ ನಿಜ. ಆದರೆ ಒಂದೇ ಒಂದು ಸಲವೂ ‘ನನಗೆ ಹೀಗಾಗೋಯ್ತು, ನಾನು ಎಷ್ಟೊಂದು ಪಾಪ, ನನಗೇ ಯಾಕೆ ಈ ಕಷ್ಟ?, ನಾನು ಸೋತೆ, ಈ ನೋವಿಗೆ ಸತ್ತೇ ಹೋಗುತ್ತೇನೆ, ನನ್ನಿಂದ ಈ ಜೀವನ ಸಾಧ್ಯವಿಲ್ಲ…..ಇದನ್ನೆಲ್ಲ ಅಂದುಕೊಳ್ಳಲೇ ಇಲ್ಲ. ನಾನು ಆನಂದವಾಗಿದ್ದರೆ ಬೇಗ ಗುಣವಾಗುತ್ತೇನೆಂದು ಸಾವಿರ ಪರ್ಸೆಂಟ್ ಗೊತ್ತಿತ್ತು. ಹಾಗೆಯೇ ನಡೆದುಕೊಂಡೆ. ನಾನು ನಂಬಿದ ದೈವ ನನ್ನೊಳಗೆ ಕುಳಿತಿತ್ತು. ಅದು ನನ್ನ ಮೇಲೆ ಕರುಣೆಯಿಟ್ಟು ನನ್ನನ್ನು ಕಾಪಾಡುತ್ತದೆಂಬ ಭರವಸೆಯನ್ನೇ ಹಿಡಿದು ದಿನ ತಳ್ಳಿದೆ. ಮನಸ್ಸಿನೊಳಗೆ ನಾನು ಮುಂದೊಂದು ದಿನ ನಡೆಯಲಾರೆ ಎಂದು ಅಂದುಕೊಳ್ಳಲೇ ಇಲ್ಲ. ನಂಬಿದ ದೈವ ಕೈ ಬಿಡಲಿಲ್ಲ.   10-15 ಜನ ಡಾಕ್ಟರ್ಸ್ ಹೇಳಿದ ಮಾತು ಸುಳ್ಳಾಯಿತು. ಮತ್ತು ಮುರಿದ ಬೆನ್ನು ನನ್ನ ಆನಂದದ ಭಾಗವಾಯಿತು. 

                               ಹ್ಞಂ….. ಇದರ ಮುಂದುವರೆದ ಭಾಗವನ್ನು ಹೇಳುತ್ತೇನೆ, ಮೊನ್ನೆ ಮಗನ ಸ್ಕೂಲಿನಲ್ಲಿ ಪೋಷಕರ ಮ್ಯಾರಥಾನ್ ಓಟದ ಸ್ಪರ್ಧೆ ಇತ್ತು. ಸಾವಿರ ಮೀಟರ್. ನನ್ನ ಆತ್ಮವಿಶ್ವಾಸದ ಪರೀಕ್ಷೆ ನಡೆಸಿಕೊಳ್ಳಬೇಕಿತ್ತು. ಭಾಗವಹಿಸಿದೆ…. ಅದೇ ಮುರಿದ ಬೆನ್ನಿನ ಜೊತೆ. ದ್ವಿತೀಯ ಬಹುಮಾನ!! ನನಗಿಂತ  ಗಟ್ಟಿ ಮುಟ್ಟಾದ ಬೆನ್ನು ಹೊಂದಿದವರು ಹಿಂದೆ ಬಿದ್ದಿದ್ದರು. ಅಮ್ಮ ಬಹುಮಾನ ಗೆದ್ದಾಗ ಮಗ ಕಣ್ಣಿಂದ ಸೂಚಿಸಿದ ಆನಂದ! ಆಹಾ!! ಯಾವುದನ್ನು ಕೊಟ್ಟರೂ ಇದು ಸಿಕ್ಕೀತೇ? ಅವನ ಸ್ಕೂಲಿನ ಪ್ರಿನ್ಸಿಪಾಲ್‌ ಶಶಿರೇಖಾ ಓಡಿ ಬಂದು ಹೇಳಿದರು, ‘ನಿಮ್ಮ ಬೆನ್ನು!!’ 

ನಕ್ಕು ಹೇಳಿದೆ, ‘ಪರೀಕ್ಷೆಗೊಳಪಡಿಸಿದೆ’. 

ನನ್ನನ್ನು ತಬ್ಬಿ ಅವರು ಹೇಳಿದ್ದರು,.’ನಮಸ್ಕಾರ, ನಿಮಗಲ್ಲ, ನೀವು ನನಗಿಂತ ಚಿಕ್ಕವರು, ನಿಮ್ಮ ವಿಲ್ ಪವರ್‍ಗೆ’. ಕಣ್ಣಂಚಲ್ಲಿ ಸಣ್ಣಗೆ ಜಿನುಗಿದ ನೀರು.

ಕೊನೆಗೆ………

ಪ್ರಕೃತಿ ಹೊರಳುವುದು ಸೂರ್ಯನ ಕಡೆಗೆ

ನಮ್ಮ ದಾರಿ ಮಾತ್ರ ಯಾಕೆ ಚಂದ್ರನ ಕಡೆಗೆ?

ಬಿದ್ದ ಮರ ಮತ್ತೆ ಚಿಗುರುತ್ತದೆ, ಸುಟ್ಟ ಭೂಮಿಯಲ್ಲೇ ಹಸಿರಿನ ಗರಿಕೆ ಮೊಳೆಯುತ್ತದೆ. ಎಂಥ ಸಂದರ್ಭದಲ್ಲೂ ಬದುಕಿನೊಂದು ಆಶಾಕಿರಣ ಕೈ ಹಿಡಿದು ದಾರಿ ತೋರುತ್ತದೆ. ಬರಿದೇ ನಿರಾಶೆಯೇಕೆ? ಬಂದದ್ದು ಸ್ವೀಕರಿಸುವ ವಿನಮ್ರತೆ ಎಷ್ಟೋ ದುಃಖವನ್ನು ಸಹಿಸಲು ಸಹಾಯ ಮಾಡುತ್ತದೆ. 

ನಂಬಿ!!! ಜೀವನವನ್ನು ಸಂತೋಷದಿಂದ ಅನುಭವಿಸಿದರೆ ಅದೇ ಗೆಲುವು. ಬದುಕನ್ನು ಬದುಕಿಸುತ್ತ ಬದುಕುವುದೇ ಬದುಕಿನ ಚೆಲುವು.