- ಗೆಜ್ಜೆ ಸುರಿವ ಸದ್ದು - ಜನವರಿ 8, 2021
- ಹೀಗೂ ಒಂದು ಕಾಯುವಿಕೆ - ಜೂನ್ 6, 2020
- ಹಕ್ಕಿ ಹೋದದ್ದು ಎಲ್ಲಿಗೆ - ಏಪ್ರಿಲ್ 30, 2020
ಮಗೂ!
ಎಂದಿನಂತೆ ಇಂದೂ ಒಂದು ದಿನ ಕಳೆಯಿತು. ನಿನ್ನ ನೇವರಿಕೆಯ ಸ್ಪರ್ಶವಿಲ್ಲದೇ..ನನ್ನ ಮಾಗಿದ ಹಣ್ಣುಗಳ ಮುಟ್ಟಿ ಮುತ್ತಿಕ್ಕಿ ಉಂಡು ಕುಣಿದು ಕುಪ್ಪಳಿಸೋ ನಿನ್ನ ಸಂಭ್ರಮವಿಲ್ಲದೇ..
ಹಳ್ಳದ ಬದಿಯ ಗುಡ್ಡಗಾಡಿನ ಪಕ್ಕ ಎದೆತೆರೆದು ಮುಗಿಲಿಗೆ ಮುಖಮಾಡಿ ಬಿದ್ದುಕೊಂಡಿರೋ ವಿಶಾಲ ವಿಸ್ತಾರ ಬೇಣದ ತುಂಬ ಸಣಕಲಾದರೂ ಸಶಕ್ತ ದೇಹದಲ್ಲಿ ನಾಲಿಗೆಯ ರುಚಿಮೊಗ್ಗುಗಳನ್ನೆಲ್ಲ ತಟ್ಟಿ ಬಡಿದೆಬ್ಬಿಸಿಬಿಡಬಲ್ಲ ಬಣ್ಣಬಣ್ಣದ ಪುಟ್ಟ ರಸಭರಿತ ಹಣ್ಣುಗಳ ಗೊಂಚಲಿಟ್ಟುಕೊಂಡು ಕಾದು ಕುಳಿತು ಎಷ್ಟೋ ದಿನಗಳಾದವು.ಎಂದು ಬರುವೆಯಾ ನೀನು..?
ನಿನಗಾಗಿ,ನನ್ನ ಕಂಡೊಡನೆ ಕಿಲಕಿಲ ನಗುವ ನಿನ್ನ ವರ್ಷಧಾರೆಗಾಗಿ ನಾ ಕಾಯುತ್ತಿದ್ದೇನೆ ಮಗೂ.. ಆ ರವಿಯನ್ನೊಮ್ಮೆ ಕೇಳಿನೋಡು ಆತ ಮಾತ್ರ ದಿನವೂ ಬರುತ್ತಾನೆ.ನಿನ್ನ ಬಯಸುವ ನನ್ನನ್ನು ನೋಡಿ ಮುಗುಳ್ನಗುತ್ತಾನೆ.ವರುಣರಾಯನ ಸ್ಪರ್ಶವಿಲ್ಲದಿದ್ದರೂ ಮೈತುಂಬ ಮೊಗ್ಗಾಗಿ ಫಲವಂತಿಕೆಯಾಗಿ ನಳನಳಿಸುವ ನನ್ನೊಳಗಿನ ನಿನಗಾಗಿ ಕಾತರಿಸುವಿಕೆಯ ನಿಟ್ಟುಸಿರನ್ನು ಸಮಾಧಾನಿಸುತ್ತ ದೂರದಿಂದಲೇ ಮುಟ್ಟಿ ಮುದ್ದಿಸುತ್ತಾನೆ.ನಿನ್ನ ಬೆತ್ತಲೆ ಪಾದಗಳ ಅನುಭವ ದೊರಕದೇ ಬಣಗುಡುವ ಗುಂಡುಕಲ್ಲುಗಳು ಉರುಳುವ ಈ ಪುಟ್ಟ ಗುಡ್ಡದಲ್ಲಿ ತಂಗಾಳಿ ಕೂಡ ನನ್ನನ್ನು ಆಗಾಗ ಸಮಾಧಾನಿಸುತ್ತ ಮೈದಡವುತ್ತದೆ..ಬೇಸರವೇಕೆ ಪಕ್ವಸಾರವೇ.ಎಂದಾದರೊಮ್ಮೆ ನಿನಗೆ ಬೇಕಾದವರ ಸ್ಪರ್ಶಸುಖ ನಿನಗೆ ದೊರಕೀತು ಅಳಬೇಡವೇ ಹುಡುಗೀ ಎಂದು ಸಮಾಧಾನಪಡಿಸುತ್ತದೆ..ಮೊನ್ನೆ ಮೊನ್ನೆ ನನ್ನ ಕಳವಳ ನೊಡಲಾಗದೇ ವರುಣರಾಯ ನಾನಾದರೂ ಕೊಂಚ ನಿನ್ನೊಡಲ ಬೇಗೆ ತಣಿಸಲೇ..ನಿನ್ನ ಮೈದುಂಬಿದ ಚಲುವಿಗೆ ಕಾರಣವಾದ ನಿನ್ನ ಬೇರುಗಳನ್ನು ಮುಟ್ಟಿ ಮುದ್ದಿಕ್ಕಿ ಕೃತಜ್ಞತೆ ಹೇಳಲೇ ಎಂಬಂತೆ ಗುಡುಗು ಸಿಡಿಲು ಮಿಂಚಿನ ವಾದ್ಯಮೇಳದೊಂದಿಗೆ ಆಗಮಿಸಿ ನನ್ನ ತೊಯ್ದು ತೊಪ್ಪೆಯಾಗಿಸಿ ನಾ ನಾಚಿ ನೀರಾಗಿ ಮತ್ತಷ್ಟು ಹೊಳೆಯುವಂತೆ ಮಾಡಿ ಹೋಗಿಬಿಟ್ಟ.ಆದರೆ ಅದು ಆ ಕ್ಷಣದ ಸಂತೋಷವಷ್ಟೇ.ಮತ್ತೆ ನನಗೆ ನಿನ್ನದೇ ನೆನಕೆ.ಅವರ್ಯಾರೂ ನಿನ್ನಂತೆ ನನ್ನ ಎಳೆದು ಚುಂಬಿಸಲಾರರು.ಹುಸಿಮುನಿಸು ತೋರಿ ಮುಳ್ಳುಗಳಿಂದ ನಿನ್ನ ತರಚಿದರೂ ಮೆತ್ತಗೆ ಬಿಡಿಸಿಕೊಳ್ಳುತ್ತ ಕೈ ಹಾಕಿ ಸೆಳೆದು ಸವಿ ಉಣ್ಣುವ ತೀವೃ ಅನುಭವವನ್ನು ದಕ್ಕಿಸಿಕೊಳ್ಳಲಾರರು.ಹೇಳು ಪುಟ್ಟಾ ಹೇಳು “ಇರುವುದೆಲ್ಲವ ಬಿಟ್ಟು” ಎಂಬಂತೆ ನಿನ್ನ ಹಾಗೂ ನಿನ್ನ ಗೆಳೆಯ ಗೆಳತಿಯರ ಸ್ಪರ್ಶ ಸುಖಕ್ಕೆ ಕಾತರಿಸುತಿದೆ ಮನ..ಎಂದು ಬರುವೆಯಾ ನೀನು.?
ನೀ ವ್ಯಾನ್, ರಿಕ್ಷಾ, ಬಸ್ಗಳ ಮೇಲೆ ಶಾಲೆಗೆ ಹೋಗುವುದನ್ನು ಬೋಳುಗುಡ್ಡದ ಮೇಲಿನ ಬರೀ ಒಂದು ಸೊಪ್ಪಿನ ಬೆಟ್ಟವಾಗಿ ದೂರದಿಂದಲೇ ವರ್ಷದುದ್ದಕ್ಕೂ ನೋಡುತ್ತಿದ್ದೆ ನಾನು.. ವೈಶಾಖದ ರಜಾ ಅವಧಿಯಲ್ಲಾದರೂ ನಿನ್ನ ಪುಟ್ಟ ಪಾದದ ಗುರುತು ನನ್ನನ್ನು ಸಾಕಿ ಸಲಹಿದ ಈ ಗುಡ್ಡರಾಯನಿಗೆ ನಿಲುಕಿತೆನೋ ಅಂತ ಆ ಅವಧಿಗೆ ಕಾದುಕುಳಿತು ಬಣ್ಣಬಣ್ಣದ ಹೂ ಹಣ್ಣುಗಳನ್ನರಳಿಸಿ ನಿನಗಾಗಿ ಕಾದದ್ದೇ ಬಂತು..ಎಪ್ರಿಲ್ ತಿಂಗಳು ಕಳೆದೇ ಹೋಗಿ ಮೇ ತಿಂಗಳು ಬಂದುಬಿಟ್ಟಿದೆ ಇನ್ನೂ ನಿನ್ನ ತಾವರೆಯಂಥ ಮೊಗದ ಬೆಣ್ಣೆಯಂತಹ ಮೃದುಬೆರಳ ಸ್ಪರ್ಶವಿಲ್ಲ ಗೆಳೆಯಾ..ಎಲ್ಲಿ ಹೋದೆ ನೀನು..?
ನಿನ್ನ ಹತ್ತು ಹಲವು ಅಧ್ಯಾಪಕರಲ್ಲಿ ಕೆಲವರಿಗಾದರೂ…ನಿನ್ನ ಅಪ್ಪ ಅಮ್ಮಂದಿರಲ್ಲಿ ಒಬ್ಬರಿಗಾದರೂ ಪ್ರಕೃತಿಯ ಬಗ್ಗೆ..ಅದರೊಳಗಿನ ನನ್ನ ಬಗ್ಗೆ ಕಿಂಚಿತ್ತಾದರೂ ಕುತೂಹಲ ಉಳಿಸಿಕೊಳ್ಳುವ ಬುದ್ದಿ ಇದ್ದರೆ ನೀ ಹೀಗಾಗುತ್ತಿರಲಿಲ್ಲ ಮಗೂ.. ಅದು ನನಗೆ ಗೊತ್ತು. ಅವರೆಲ್ಲರೂ ವೇಗದ ಬದುಕಿನ ಧಾವಂತದಲ್ಲಿ ಕುತೂಹಲ, ಪ್ರೀತಿ ಮತ್ತು ಕ್ರಿಯಾಶೀಲತೆಯನ್ನು ಕಳೆದುಕೊಂಡುಬಿಟ್ಟಿದ್ದಾರೆ..ಎಡಗೈಯಲ್ಲಿ ಸ್ಟೇರಿಂಗ್ ಬಲಗೈಯಲ್ಲಿ ಮೊಬೈಲ್ ಹಿಡಿದು ಡ್ರೈವಿಂಗ್ ಮಾಡುತ್ತಿರುವ ನಿನ್ನಪ್ಪನನ್ನೊಮ್ಮೆ ಕೇಳಿ ನೋಡು ಅವನು ನಿನ್ನಷ್ಟಿರುವಾಗ ಶಾಲೆ ಆರಂಭವಾಗುವ ತಾಸೆರಡುತಾಸು ಮೊದಲು ಮನೆಬಿಟ್ಟು ರಸ್ತೆಯ ಅಕ್ಕಪಕ್ಕದ ಗುಡ್ಡ ಬೆಟ್ಟ ಬೇಣ ಸುತ್ತಿ ನನ್ನ ಪಕ್ವ ಫಲವನ್ನೆಲ್ಲ ಕೊಯ್ದು ತಿಂದು, ಕಿಶೆಯೊಳಗೊಂದಿಷ್ಟು,ಪಾಟಿಚೀಲದೊಳಗೊಂದಿಷ್ಟು ತುಂಬಿಸಿ,ನೆಲಕ್ಕೆ ಬಿದ್ದು ಎಲ್ಲಿ ಮಣ್ಣಲ್ಲಿ ಮಣ್ಣಾಗಿ ಬಿಡುತ್ತದೋ ನನ್ನ ವರ್ಷದ ಫಸಲು ಎಂಬ ಹೆದರಿಕೆಗೆ ತಿಲಾಂಜಲಿ ಇತ್ತು ನನ್ನೊಳಗೊಂದು ಧನ್ಯತಾಭಾವ ಮೂಡಿಸಿಬಿಡುತ್ತಿದ್ದ.ಅವನು ಹಾಗೂ ಅವನಂಥವರಿಗೆಲ್ಲ ನಾನೀಗ ಮರೆತ ಅಧ್ಯಾಯ.ಪುಟ್ಟಾ..ನೀನಾದರೂ ಅವರನ್ನೆಲ್ಲ ಕೈ ಹಿಡಿದು ನನ್ನಲ್ಲಿಗೆ ಕರೆತರುವೆಯಾ..?
ಸೊಂಟದಮೇಲೊಂದು ಬುಟ್ಟಿ, ಕೈಯಲ್ಲೊಂದು ಕತ್ತಿ ಹಿಡಿದು ಬಾಲಬಾಸ್ಕರ ನಗುವ ಮೊದಲೇ ಕೊಟ್ಟಿಗೆಯ ಎಮ್ಮೆ ಕೋಣಗಳ ಸೊಪ್ಪಿನ ಮೆತ್ತೆಗಾಗಿ ತುರುಬಿನ ಮೇಲೊಂದು ಹೂ ದಂಡೆ ಮುಡಿದು ರಸಗವಳ ಮೆದ್ದು ಕೆಂಪಾದ ತುಟಿಯತುಂಬ ಜನುಮಕ್ಕಾಗುವಷ್ಟು ನಗು ಹಾಗೂ ಮಾತನ್ನರಳಿಸುತ್ತ ಓಡೋಡಿಬರುತ್ತಿದ್ದ ನಿನ್ನೂರಿನ ಹೆಂಗಳೆಯರೂ…ಚಿಕ್ಕದೊಂದು ಬುಟ್ಟಿ ಹಿಡಿದು ನನ್ನನ್ನೂ ನನ್ನ ಸೋದರ ಸಂಬಂಧಿಗಳಾದ ಕವಳಿ,ಗುಡ್ಡೇಗೇರು,ಕುಡತಿ,ಸಂಪಿಗೆ,ಕುಂಟಾಲ,ನೇರಳೆ,ಕುಸುಮಾಸೆ,ಪುನರ್ಪುಳಿ,ಚಾವಣಿಗೆ,ಮುಳ್ಳುಹಣ್ಣು, ಮುಂತಾದ ಪುಟ್ಟಪುಟ್ಟ ಹಣ್ಣುಗಳನ್ನೆಲ್ಲ ಗಿಡಕ್ಕೆ ಘಾಸಿಯಾಗದಂತೆ ಕೊಯ್ದು ಎಲೆಯ ಸುರುಳಿಯಲ್ಲಿಟ್ಟು ಊರತುಂಬ ಮಾರಾಟಕ್ಕೆ ಹೊರಟುಬಿಡುತ್ತಿದ್ದ ನಿನ್ನ ಪಕ್ಕದೂರಿನ ಅಜ್ಜಿಯರೂ ಎಲ್ಲಿ ಹೋದರು ಪುಟ್ಟ ಗೆಳೆಯಾ..?ಎಮ್ಮೆ ಕೋಣಗಳೆಂದರೆ ಹೀಗೇ ಇರುತ್ತವೆ ಎಂದು ಮಾದರಿಗೆ ತೋರಿಸಲೂ ಇಲ್ಲದೇ ಅವು ಕಾಣೆಯೇ ಆಗಿಬಿಟ್ಟ ಊರುಕೇರಿಗಳಲ್ಲಿ ಸೊಪ್ಪಿನ ಅವಶ್ಯಕತೆಯಾದ್ರೂ ಏನು..ಹಾಗೂ ಮ್ಯಾಗಿ ಮಂಚೂರಿ ಬರ್ಗರ್ ಪಿಜ್ಜಾಗಳ ಹಾವಳಿಯಲ್ಲಿ ಹಣ್ಣುಕೊಯ್ಯುವ ಬುಟ್ಟಿಗೆ ಕೆಲಸವಾದ್ರೂ ಏನು ಎಂದು ಅವರೆಲ್ಲ ಕೈ ಸೋತು ಮೈ ಸೋತು ಮನೆಯ ಮೂಲೆ ಹಿಡಿದಿದ್ದಾರೆಂದು ಹೇಳುತ್ತಿದ್ದೀಯಾ..?
ಆದರೂ ಇತ್ತೀಚೆಗೆ ಇದು ಅತಿರೇಕ ಅನ್ನಿಸತೊಡಗಿದೆ ನನಗೆ.ಎಚ್ಚರಿಸುವರಿದ್ದರೆ ತಾನೇ ಕೇಳುವವರಿರೋದು..?ನಿನ್ನ ಎಚ್ಚರಿಸುವವರೆಲ್ಲ ಹಾದಿಬಿದಿಯ ಜಂಕ್ಪುಡ್ಗಳಿಗೆ,ಬಣ್ಣಬಣ್ಣದ ರಾಸಾಯನಿಕ ತುಂಬಿ ಚಿತ್ತಾಕರ್ಷಕವಾದ ಬಾಟಲ್ ಹಾಗೂ ಸ್ಯಾಚೆಟ್ ತುಂಬಿ ಮಾರಾಟವಾಗೋ ಜ್ಯೂಸ್ಗಳೆಂಬ ದ್ರವಗಳಿಗೆ ನಿನ್ನ ಪಕ್ಕಾಗಿಸಿಬಿಟ್ಟಿದ್ದಾರೆ.ತಮ್ಮ ಮಧ್ಯವಯಸ್ಸಿಗೆ ಬೆಳೆಸಿಕೊಂಡ ಚರ್ಬಿಯನ್ನು ನಿನ್ನ ಹತ್ತು ಹನ್ನೆರನೇ ವಯಸ್ಸಿಗೆ ಬೆಳೆಸಿಬಿಡುತ್ತಿದ್ದಾರೆ.ಮೊಬೈಲ್,ಟಿವಿ,ಕಂಪ್ಯೂಟರ್,ಕೋಚಿಂಗ್ ಕ್ಲಾಸುಗಳಿಂದ ನೀ ಹೊರಬರಲಾರದಷ್ಟು ದೊಡ್ಡ ಚಕ್ರವ್ಯೂಹವನ್ನು ಕಟ್ಟುತ್ತಿದ್ದಾರೆ.ಜಾಗ್ರತೆ ಮಗೂ ಅವರಿಗೆ ಅವರ ತಪ್ಪಿನ ಅರಿವಾಗುತ್ತಿಲ್ಲ.ಭೂತಾಯಿ,ಪ್ರಕೃತಿಮಾತೆ ,ಕುಬೇರನೊಡಲು ನಿನ್ನ ಹಿರಿಯರನ್ನೆಲ್ಲ ಎಚ್ಚರಿಸಲು ಹರಸಾಹಸಪಡುತ್ತಿದೆ..ಆಗಾಗ ಚೂರು ಅನಾಹುತಕ್ಕೆಡಮಾಡಿ ಜಗ್ಗಿ ನಿಲ್ಲಿಸುತ್ತಿದೆ.ಆದರೆ ಗಾಯವಾದಷ್ಟೇ ಹೊತ್ತು..ಗುಣವಾದ ಮೇಲೆ ಮತ್ತೆ ಅದೇ ದೌರ್ಬಲ್ಯ..ಅದೇ ಕೊಳ್ಳುವ ಮತ್ತು ಬಿಸುಟುವ ಪರಿಸರ ಮಾಲಿನ್ಯ. ಎಂದು ಬುದ್ದಿ ಬಂದೀತು ಹೇಳು ಅವರಿಗೆ.?
ಮೂರ್ಖರ ಪೆಟ್ಟಿಗೆಯೊಳಗಿನ ಕ್ರಿಕೆಟ್ ಸರಣಿಗಳಿಂದ,ಮೊಬೈಲ್ ಗೇಮ್ಗಳಿಂದ,ತುಸು ಪುರಸೊತ್ತು ಮಾಡಿಕೊಂಡು,ನಿನ್ನಿಂದ ನನ್ನ ಮರೆಮಾಚಿ”ಮೊದಲು ನಾವು ತಿಂದ ಹತ್ತಾರು ನಮೂನೆಯ ಕಾಡುಹಣ್ಣುಗಳು ಈಗ ನೋಡಲೂ ಸಿಗುತ್ತಿಲ್ಲ”ಎಂದು ಸುಳ್ಳೇ ನಿನಗೆ ಬಿಂಬಿಸುತ್ತಿರುವ ನಿನ್ನ ಹಿರಿಯರಿಗೆ ನಾನು ಅಂದೂ ಇದ್ದೆ,ಇಂದೂ ಇದ್ದೇನೆ.ಸಾಕಿ ಸಲಹುವ ಭೂತಾಯಿ ಇದ್ದರೆ ಅಲ್ಪ ಮಾನವನ ಕತ್ತಿ ಕೊಡಲಿಗೆ ಅಂಜಲೇಕೆ…? ಎಂಬಂತೆ ಮುಂದೂ ಇರುತ್ತೇನೆ ಎಂಬ ನಿಜ ಸತ್ಯವನ್ನರಹಿ ನನ್ನ ಹುಡುಕಿ ಪಡೆವ ಕುತೂಹಲವನ್ನು ವೇಗದ ಬದುಕಿನಲ್ಲಿ ಕಳೆದುಕೊಂಡು ಮೈ ಮನ ಎರಡನ್ನೂ ಸಂಕುಚಿತವಾಗಿಸಿಕೊಂಡುಬಿಟ್ಟ ಅವರನ್ನು ಪುಟ್ಟ ಪಾದದ ಝಲಕಿನೊಂದಿಗೆ ಎಳೆದು ತಾ.
ನಾನಿರುವ ಗುಡ್ಡದ ನೆತ್ತಿಯವರೆಗಾಗದಿದ್ದರೆ ಪಾದದವರೆಗಾದರೂ ಸೆಳೆದು ತಾ.
ಕಣ್ಣೋಡುವವರೆಗೆ ಹಬ್ಬಿದ ಕರಾವಳಿಯ ಎಲ್ಲ ತಾಲೂಕುಗಳ ಗುಡ್ಡ ಬೆಟ್ಟ ಬೇಣದಲ್ಲಿ ನಾನೀಗ ಹಣ್ಣುಗಳ ಭಾರಕ್ಕೆ ತೂಗಿ ತೊನೆದು ನಿಂತಿದ್ದೇನೆ.ಗಿಳಿ,ಗುಬ್ಬಿ,ಗೊರವಂಕ,ಪಿಕಳಾರ,ಕಾಜಾಣ ಎಲ್ಲವಕ್ಕೂ ಉಣಿಸಿ ನಿನಗೂ ನನ್ನ ಅಮೃತ ಸಮಾನ ಫಲಗಳನ್ನು ತಿನ್ನಿಸಲು ಕಾಯುತ್ತಿರುವೆ.ಬಾ ಪುಟ್ಟಾ ಬಾ ನಿನ್ನಂತಹ ಪುಟಾಣಿಗಳನ್ನೆಲ್ಲ ಕರೆದು ತಾ.ಕೆಲವೇ ಕೆಲವು ದಿನ ಇರುವೆ ನಾ.ನಿನಗೂ ರಜೆ ಮುಗಿಯುತ್ತ ಬಂತು.ಕೊನೆಗೊಮ್ಮೆ ನಿನಗೆ ಅದೇ ವ್ಯಾನ್,ರಿಕ್ಷಾಗಳು…ನನಗೋ ವರುಣನ ಅಬ್ಬರಿಸುವಿಕೆಯಲ್ಲಿ ರೆಂಬೆ ಕೊಂಬೆ ಎಲೆಯನ್ನರಳಿಸೋ ವಂಶಾಬಿವೃದ್ಧಿಯ ಬಿಡುವಿಲ್ಲದ ಮತ್ತದೇ ಹಳೆಯ ಕಾಯಕ.ಬರುವುದಾದರೆ ಈಗಲೇ ಬಂದುಬಿಡು.ಒಮ್ಮೆ ನನ್ನ ಹಣ್ಣುಗಳನ್ನು ಸವಿದರೆ ಮುಂದೆ ನನ್ನ ಹುಡುಕಿ ನೀನೇ ಬರುತ್ತೀಯಾ ಎಂಬ ವಿಶ್ವಾಸದೊಂದಿಗೆ ನಿನಗಾಗಿ ಕಾಯುತ್ತ ನಿನಗೆ ಅನತಿ ದೂರದಲ್ಲೇ ಇರುವ ಗುಡ್ಡ .ಬೇಣದೊಳಗಿನ ಒಂದು
ಇಂತಿ ,
–ಕಾಡುಹಣ್ಣು ತುಂಬಿರುವ ಪುಟ್ಟ ಪೊದೆ.
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ