- ತೂತುಗಳ ತಲೆಮಾರು - ನವೆಂಬರ್ 26, 2020
- ಜೇಡ ಮತ್ತು ಅವನು - ಆಗಸ್ಟ್ 2, 2020
- ಉಸಿರೇ ಓ ಉಸಿರೆ - ಜುಲೈ 23, 2020
ಇತ್ತೀಚೆಗೆ ಸ್ನಾನದ ವೇಳೆಯಲ್ಲಿ ಅವನಿಗೆ ಮುಜುಗರ. ಒಂದು ರೀತಿಯ ಭಯ. ಪುಟ್ಟ ಕಿಟಕಿಯ, ಮಂಕು ದೀಪದ ಸ್ನಾನದ ಕೋಣೆ ಬೇರೆ! ಸ್ನಾನ ಮಾಡುವಾಗ, ಎತ್ತರದ ಸೂರಿನ ಕೆಳಗೆ ದೊಡ್ಡ ಜೇಡರ ಬಲೆ. ಆದರೆ ಜೇಡ ಕಾಣವುದಿಲ್ಲ. ಕೋಲು ಹಿಡಿದು ಬಲೆಯನ್ನು ಕೆಡವಲು ಅದೇನೋ ಹಿಂಜರಿಕೆ. ಕೆಡವಲೂಲಾರ. ಅದು ಹಾಗೇ ಇತ್ತು. ಅವನಿಗೆ ಕ್ರಿಮಿ, ಕೀಟಗಳೆಂದರೆ ಮೈಯೆಲ್ಲಾ ಮುಲಮುಲ ಆಗಿಬಿಡುತ್ತಿತ್ತು. ಏಕೆ ಹಾಗೆ? ಅವನಿಗೂ ತಿಳಿಯುತ್ತಿರಲಿಲ್ಲ.
ಮುಂದೆ ಓದಿ….
ಅರವತ್ತು ವಸಂತಗಳನ್ನಾಗಲೇ ಅನುಭವಿಸಿದ್ದ ಅವನು ಈಗ ನಿವೃತ್ತ. ಒಬ್ಬಂಟಿ. ಅವನ ಬವಣೆ ಕೇಳುವ ಕಿವಿಗಳೇ ಇಲ್ಲ. ಯಾರಿಗೆ ತಾನೆ ಬೇಕು!
ಇದ್ದೊಬ್ಬ ಮಗ ಹತ್ತು ವರುಷಗಳ ಕೆಳಗೆ ರಸ್ತೆ ಅಪಘಾತದಲ್ಲಿ ಸತ್ತಾಗ, ಹೆಂಡತಿ ಎರಡು ವರುಷ ಕೊರಗಿ ಕೊರಗಿ ಪ್ರಾಣ ಬಿಟ್ಟಿದ್ದಳು. ದಶಕಗಳ ಹಿಂದೆ “ಉಳುವವನಿಗೇ ಭೂಮಿ” ಕಾಯಿದೆಯಲ್ಲಿ ಇದ್ದ ಜಮೀನು ಕಳೆದುಕೊಂಡು ಕಂಗಾಲಾಗಿದ್ದ ಅವನ ಅಪ್ಪ-ಅಮ್ಮ ತೀರ್ಥಯಾತ್ರೆಗೆ ಹೋದವರು ಯಾವ ತೀರ್ಥದಲ್ಲಿ ಮುಳುಗಿದರೋ ಬಲ್ಲವರೇ ಇಲ್ಲ. ಹುಡುಕು ಅವನಿಗೆ ಹುಚ್ಚು ಹತ್ತಿಸದಿದ್ದದ್ದು ಹೆಚ್ಚು! ವೃತ್ತಿಯಲ್ಲೋ ಅನ್ಯಾಯದ ಮೇಲೆ ಅನ್ಯಾಯ. ಆಸ್ತಿಕನಾಗಿ ದೇವರು, ಪೂಜೆ, ಧ್ಯಾನಗಳಲ್ಲಿ ಹೆಚ್ಚು ನಂಬಿಕೆ ಇದ್ದವನಿಗೆ ಈಗೀಗ ಮನಸ್ಸು ಚಡಪಡಿಸಿ ಬದುಕು, ದೇವರು-ದಿಂಡರು, ಧರ್ಮ-ಕರ್ಮಗಳ ಬಗ್ಗೆ ನಮ್ಮ ಕಲ್ಪನೆಗಳೇ ಸರಿಯಿಲ್ಲ ಎನಿಸುವ ಭಾವನೆ. ಈ ಪ್ರಪಂಚ, ಪ್ರಕೃತಿ, ಜೀವ, ಜೀವನ ಎಲ್ಲ ಒಂದು ಅವ್ಯಕ್ತ ಶಕ್ತಿಯ ಸಂಚಲನದಲ್ಲಿ ತನ್ನ ಪಾಡಿಗೆ ತಾನು ಯಾವುದೇ ಉದ್ದೇಶ, ಜಾಲ, ಕರ್ಮ-ಮರ್ಮಗಳಿಲ್ಲದೆ ನಡೆದು ಸಾಗುವ ಪ್ರಕ್ರಿಯೆಯಷ್ಟೇ. ಸಮಯ ಸಾಗರದಲ್ಲಿ ತೇಲುತ್ತಾ ಹೋಗುವ ರಾಶಿ ರಾಶಿ ಜೀವಗಳ ಜೊತೆಗೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಅನ್ನುವ ಹಾಗೆ ನಾನೂ ಒಂದು ಜೀವವಷ್ಟೇ ಎಂಬ ಭಾವನೆ ಬಂದುಬಿಟ್ಟಿತ್ತು. ಹತ್ತಾರು ಪುಸ್ತಕಗಳನ್ನು ಹಿಡಿದು ಆಳವಾದ ಅಧ್ಯಯನದಲ್ಲಿ ತನ್ನ ಹೆಚ್ಚಿನ ಸಮಯ ಕಳೆಯುವ ಹವ್ಯಾಸ ಹಚ್ಚಿಕೊಂಡಿದ್ದ.
ಪ್ರತಿನಿತ್ಯ ಸಂಜೆ ವೇಳೆಗೆ ಸ್ವಲ್ಪ ಹೊತ್ತು ಬಡಾವಣೆಯ ಪಾರ್ಕಿಗೆ ಹೋಗಿ ಕಟ್ಟೆಬಳಗದ ಮಿತ್ರರುಗಳೊಡನೆ ಹರಟೆ- ಮಾತುಗಳಲ್ಲಿ ಸಮಯ ಕಳೆದು ಬರುವ ಅಭ್ಯಾಸ ಇಟ್ಟುಕೊಂಡಿದ್ದ. ಅಲ್ಲಿ ಬರುವವರಲ್ಲಿ ಹೆಚ್ಚುಮಂದಿ ಇವನಿಗಿಂತಲೂ ಹೆಚ್ಚು ವಯಸ್ಸಿನವರು. ದೇವರೆಂದರೆ ಅಗಾಧ ನಂಬಿಕೆಯುಳ್ಳವರು. ಒಬ್ಬೊಬ್ಬರ ಕೆಲಸ, ಸನ್ನಿವೇಶ, ಅನುಭವ, ಅರಿವಿನ ಆಳಗಳಲ್ಲಿ ವ್ಯತ್ಯಾಸಗಳಿದ್ದುದರಿಂದ ಮಾತು-ಚರ್ಚೆ ಒಮ್ಮೊಮ್ಮೆ ವಾದ-ವಿವಾದ-ವಿತಂಡವಾದಗಳಲ್ಲಿ ನಿಂತು ಇವನ ಮನಸ್ಸಿಗೆ ಕಿರಿಕಿರಿಯಾಗುತ್ತಿತ್ತು.
ಈಗ ನಾಲ್ಕು ತಿಂಗಳುಗಳಿಂದ ಕೊರೋನ ವೈರಸ್ಸು, ಕೋವಿಡ್ ಪೀಡೆ ಬಂದದ್ದರಿಂದ ಲಾಕ್ಡೌನ್- ಗೃಹಬಂಧನ ಅಷ್ಟೇ ಆಗಿತ್ತು. ಕಾಲಹರಣಕ್ಕೆ ಟಿ.ವಿ.ಯಲ್ಲಿ ಬರುವುದು ತಾನೇ ಏನು? ದಿನದಿನಕ್ಕೆ ವೈರಾಣುವಿನ ಕಾಟ, ಭ್ರಮೆ , ದಿಗ್ಭ್ರಮೆ ಹೆಚ್ಚಾಗುತ್ತಿದೆಯೆಂಬ ಸುದ್ದಿ, ಸಾವು-ನೋವು ಪರಿಹಾರಗಳ ಬಗ್ಗೆ ಭಯಂಕರ ಚರ್ಚೆ! ಕೇಳೀ ಕೇಳೀ ಸಾಕಾಗಿತ್ತು. ಮನೆಯಲ್ಲೇ ಕುಳಿತು ಎಲ್ಲೂ ಹೋಗಲಾಗದೆ ತಲೆ ಪಟಪಟಿಸಿ ಚಿಟ್ಟೋ ಚಿಟ್ಟು!
ಇತ್ತೀಚೆಗೆ ಸ್ನಾನದ ವೇಳೆಯಲ್ಲಿ ಅವನಿಗೆ ಮುಜುಗರ. ಒಂದು ರೀತಿಯ ಭಯ. ಪುಟ್ಟ ಕಿಟಕಿಯ, ಮಂಕು ದೀಪದ ಸ್ನಾನದ ಕೋಣೆ ಬೇರೆ! ಸ್ನಾನ ಮಾಡುವಾಗ, ಎತ್ತರದ ಸೂರಿನ ಕೆಳಗೆ ದೊಡ್ಡ ಜೇಡರ ಬಲೆ. ಆದರೆ ಜೇಡ ಕಾಣವುದಿಲ್ಲ. ಕೋಲು ಹಿಡಿದು ಬಲೆಯನ್ನು ಕೆಡವಲು ಅದೇನೋ ಹಿಂಜರಿಕೆ. ಕೆಡವಲೂಲಾರ. ಅದು ಹಾಗೇ ಇತ್ತು. ಅವನಿಗೆ ಕ್ರಿಮಿ, ಕೀಟಗಳೆಂದರೆ ಮೈಯೆಲ್ಲಾ ಮುಲಮುಲ ಆಗಿಬಿಡುತ್ತಿತ್ತು. ಏಕೆ ಹಾಗೆ? ಅವನಿಗೂ ತಿಳಿಯುತ್ತಿರಲಿಲ್ಲ.
ಅಂದೊಂದು ದಿನ ಮೇಲೊಮ್ಮೆ ನೋಡಿ… ಅದೇ ಗುಂಗಿನಲ್ಲೇ ಸ್ನಾನ ಮಾಡುತ್ತಾ ಕಣ್ಣುಮುಚ್ಚಿಕೊಂಡು ಮೈಮೇಲೆ ನೀರು ಸುರಿದುಕೊಳ್ಳುತ್ತಿದ್ದ. ಸ್ವಲ್ಪ ಸಮಯದ ನಂತರ ಮಸುಕು ಮಸುಕಾದ ಜೇಡರ ಬಲೆ ಕಂಡಿತು. ಅದರ ನಡುವೆ ದೊಡ್ಡ ಕರಿಯ ಜೇಡ! ಸರಕ್ಕನೆ ಕಣ್ಣು ಬಿಟ್ಟ! ಮೇಲೆ ಕತ್ತೆತ್ತಿ ನೋಡಿದರೆ ಬಲೆ ಇದೆ. ಜೇಡ ಇಲ್ಲ! ಅವನಿಗೆ ಏನೋ ಕಸಿವಿಸಿ. ಬೇಗ ಸ್ನಾನ ಮುಗಿಸಿ ಹೊರಬಂದ. ಮಾರನೇ ದಿನ ಸ್ನಾನ ಮಾಡುವಾಗ, ಮೇಲೆ ನೋಡಿದ. ಸುತ್ತ-ಮುತ್ತಲೂ ಗಮನಿಸಿ ಗಮನಿಸಿ ನೋಡಿದ. ಜೇಡ ಅಲ್ಲೆಲ್ಲೂ ಇಲ್ಲ. ನೀರು ಸುರಿದುಕೊಳ್ಳುತ್ತಾ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡ. ಕರಿಯ ಜೇಡ ಮಧ್ಯದಲ್ಲಿ, ಕಾಲಾಡಿಸುತ್ತ ಕುಳಿತಿದೆ! ಗಾಬರಿಯಲ್ಲಿ ಕಣ್ಣು ಬಿಟ್ಟ. ಮೇಲೆ ನೋಡಿದರೆ ಬಲೆ ಮಾತ್ರವಷ್ಟೆ. ತನ್ನ ಅರೆ-ಬೋಳು ತಲೆ ಕೆರೆದುಕೊಳ್ಳುತ್ತಾ, ಮೈ ಒರಸಿಕೊಂಡು ಹೊರಬಂದ. ಮೂರನೆ, ನಾಲ್ಕನೆ, ಐದನೇ ದಿನವೂ ಹೀಗೇ ಆದಾಗ ತನಗೆ ಏನೋ ಭ್ರಮೆ ಕಾಡುತ್ತಿದೆ. ಹೀಗೆ ಆದರೆ ಹೇಗಪ್ಪಾ ಎಂದುಕೊಂಡ. ವೈದ್ಯರನ್ನು ನೋಡಬೇಕಾಗಬಹುದು…. ಅಯ್ಯೋ…ಬೇಡ, ಬೇಡಾಪ್ಪ. ನಾನೇ ಸರಿಮಾಡಕೊಳ್ಳಬೇಕು. ಈ ಕೊರೋನ ಸಮಯದಲ್ಲಿ ಎಲ್ಲಿ ತಾನೆ ಹೋಗುವುದು. ಯಾಕೆ ಹೋಗಬೇಕು ಎಂದುಕೊಂಡು, ಧೈರ್ಯ, ಸ್ಥೈರ್ಯಗಳಿಂದ ಇದನ್ನು ಎದುರಿಸಬೇಕು ಎಂದು ನಿರ್ಧಾರ ಮಾಡಿಕೊಂಡ.
ಸ್ವಲ್ಪ ದಿನ ಹೀಗೇ ಆಗುತ್ತಿದ್ದರೂ ಅವನಿಗೆ ಭಯ, ಮುಜುಗರ, ಕಡಿಮೆಯಾಗುತ್ತಾ, ನಿತ್ಯದ ವಿಚಿತ್ರ ಅನುಭವ ಕುತೂಹಲ ಹುಟ್ಟಿಸಿತ್ತು – ಏಕೆ ಹೀಗಾಗುತ್ತಿರಬಹುದು ಎಂದು.
ಕುತೂಹಲದ ಜೊತೆಗೆ ಅದಕ್ಕೊಂದು ಅರ್ಥ, ವಿಶ್ಲೇಷಣೆಯೂ ಅವನ ತಲೆಯಲ್ಲೇ ಹುಟ್ಟಿಕೊಂಡಿತ್ತು! ತನ್ನ ಇತ್ತೀಚಿನ ನಂಬಿಕೆಗಳಿಗೆ ವಿರುದ್ಧವಾಗಿ ಪಾರ್ಕಿನ ಕಟ್ಟೆ-ಬಳಗದ ಮಂದಿಯೊಡನೆ ನಡೆದ ಮಾತು, ವಾದಗಳೇ ಇದಕ್ಕೆ ಕಾರಣವಾಗಿರಬಹುದು ಎಂದು. ತನ್ನ ಮನಸ್ಸಿನಲ್ಲಿ ಆ ಜೇಡರ ಬಲೆ ಒಂದು ಪ್ರಾಪಂಚಿಕ ಬಲೆಯಾಯಿತೇ? ನಾನು ಬಲೆಗೆ ಬೀಳುವ ಕ್ರಿಮಿ ಆದೆನೇ? ಮತ್ತೆ ಜೇಡ ನಮ್ಮ ವಿಧಿಯೇ? ಎಂದೆಲ್ಲಾ ಯೋಚಿಸಿದ್ದ.
ಮಾರನೇ ದಿನದಿಂದ ಸ್ನಾನ ಮಾಡುವಾಗ ಕಣ್ಣು ಮುಚ್ಚಿ ಕೊಳ್ಳುವುದನ್ನು ಬಲವಂತವಾಗಿ ತಡೆಹಿಡಿಯಲು ಯತ್ನಿಸಿದ. ಅಭ್ಯಾಸ ಬಿಡುವುದು ಕಷ್ಟವಿತ್ತು. ಹಲವು ದಿನಗಳಲ್ಲಿ ನಿಯಂತ್ರಣ ಸಾಧಿಸಿದ! ಮೇಲೆ ಜೇಡ ಇಲ್ಲದ ಬಲೆ ನೋಡಿದಾಗಲೆಲ್ಲ ಒಂದು ಮುಗುಳ್ನಗೆಯಲ್ಲಿ ಅವನ ಸ್ನಾನ ಮುಂದುವರೆದು ಮುಗಿಯುತ್ತಿತ್ತು.
ಮುಂದೊಂದು ದಿನ ಪರೀಕ್ಷಿಸುವವನಂತೆ ಕಣ್ಣು ಮುಚ್ಚಿದ. ಕತ್ತಲು ಬಿಟ್ಟು ಬೇರೇನನ್ನೂ ಅವನು ನೋಡಲಿಲ್ಲ! ಎರಡು ಮೂರು ಬಾರಿ ಪ್ರಯತ್ನಿಸಿದರೂ, ಕತ್ತಲು ಮಾತ್ರವಷ್ಟೇ! ಅಬ್ಬಾ! ಅದೇನು ಮಾಯಗಾರ ಜೇಡ ಎಂದುಕೊಂಡು, ಮತ್ತಷ್ಟು ನೀರು ಮೈಮೇಲೆ ಸುರಿದುಕೊಂಡು, ಮೈ ಒರೆಸಿಕೊಂಡು, ಬಟ್ಟೆ ಹಾಕಿಕೊಂಡು ಹೊರಬಂದು, ಉಶ್ಶಪ್ಪಾ ಎನ್ನುತ್ತ, ಸೂರು ನೋಡುತ್ತಾ ಕುರ್ಚಿಯ ಮೇಲೆ ಕುಳಿತ.
ಮಾರನೆಯ ದಿನ ಧೈರ್ಯ ಮಾಡಿ, ಒಂದು ಕೋಲು ಹಿಡಿದು ಬಚ್ಚಲು ಮನೆಯಲ್ಲಿದ್ದ ಬಲೆಯನ್ನು ತೆಗೆದು ಸ್ನಾನಕ್ಕಿಳಿದಾಗ, ಅದೇನೋ ಸಂತಸ, ಸಮಾಧಾನ, ಬಿಡುಗಡೆಯ ತೃಪ್ತಿ. ಚಿಂತೆ ಕಾಡದ ಹಗುರತೆಯಲ್ಲಿ ಸ್ನಾನ ಮುಗಿಸಿದ್ದ.
ಕಣ್ಣುಮುಚ್ಚಿ ಕಣ್ಣುತೆಗೆದು ಪರೀಕ್ಷಿಸುವ ಆಟ ಒಂದು ವಾರ ನಡೆದು ಅಂದು ಸ್ನಾನ ಮುಗಿಸಿ ಹೊರಬಂದಾಗ ಪೂರ್ತಿ ನಿರುಮ್ಮಳ! ಕುರ್ಚಿಯ ಮೇಲೆ ಕುಳಿತು ಬಿಟ್ಟ ಒಂದು ದೀರ್ಘ ನಿಟ್ಟುಸಿರೇ ಅದಕ್ಕೆ ಸಾಕ್ಷಿ!
ಸುಮಾರು ಹೊತ್ತು ಕಿಟಕಿಯ ಹೊರಗೆ ಸುಮ್ಮನೆ ನೋಡುತ್ತಾ ಕುಳಿತಿದ್ದವನ ತಲೆಗೆ ನೇರವಾಗಿ ಮೇಲೆ ಸೂರಿನ ಮೂಲೆಯಲ್ಲಿ ಹೊಸತೊಂದು ಬಲೆಯನ್ನು ಕಟ್ಟಿಕೊಳುತ್ತಿದ್ದ ಒಂದು ಕಪ್ಪು ಜೇಡ ಅವನನ್ನು ಗಮನಿಸಿದರೂ, ಅವನು ಮಾತ್ರ ಅದನ್ನು ಗಮನಿಸಲೇ ಇಲ್ಲ!
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ