- ದಿ ಬ್ಯಾಂಕಿಂಗ್ ವಾರಿಯರ್ಸ್.. - ಆಗಸ್ಟ್ 24, 2020
- ಆತ್ಮವನ್ನು ಗುರುತಿಸುವ ಬಗೆ - ಆಗಸ್ಟ್ 11, 2020
- ಬೆಣ್ಣೆ ಕದ್ದನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ - ಆಗಸ್ಟ್ 10, 2020
…..ಇತ್ತ ರಾಧಿಕಾಗೆ ಕೆಲಸ ಮುಗಿದ ಮೇಲೆ, ಮನೆಗೂ ಹೋಗಲು ಮನಸ್ಸಿಲ್ಲದೇ, ಏನೂ ಮಾಡಲು ತೋಚುತ್ತಿರಲಿಲ್ಲ. ಆಗ ಸಾಂಬಮೂರ್ತಿಯೇ ಅವಳಿಗೆ ದಾರಿ ತೋರಿಸಿದ್ದನು. ಸಂಜೆಯ ವೇಳೆಯಲ್ಲಿ ಒಂದು ಘಂಟೆ ಕೇರಂ ಮತ್ತು ಒಂದು ಘಂಟೆ ಟೇಬಲ್ ಟೆನ್ನಿಸ್ ಆಡುವುದನ್ನು ಹೇಳಿಕೊಡುತ್ತಿದ್ದನು. ಬಹಳ ಬೇಗ ಈಕೆಯೂ ಬ್ಯಾಂಕಿನ ಟೀಮಿನ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗಳಲ್ಲಿ ಭಾಗವಹಿಸಹತ್ತಿದ್ದಳು. ಅವರಿಬ್ಬರಲ್ಲಿ ಹೆಚ್ಚಿನ ನಿಕಟತೆ ಉಂಟಾಗುತ್ತಿತ್ತು.
ಗಂಡ ನೋಡಿದ್ರೆ, ಕೆಲಸ, ಕೆಲಸ, ಹಣ, ಮ್ಯಾಕ್ರೊ ಲೆವೆಲ್ ವಿಷಯಗಳಲ್ಲೇ ತಲ್ಲೀನ, ಮನೆ, ಮಡದಿ, ಮಗುವಿನ ಕಡೆಗೆ ಗಮನವೇ ಇಲ್ಲ. ಮುಂದಿನ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ಹೊಂಚು ಹಾಕುತ್ತಿದ್ದನು. ಸುಖ, ದುಃಖ, ಏನೇ ಇದ್ದರೂ ಹೇಳಿಕೊಳ್ಳಲು ಅಥವಾ ಹಂಚಿಕೊಳ್ಳಲು ಆಕೆಗೆ ಹತ್ತಿರದವರು ಯಾರೂ ಇಲ್ಲ. ಏಕಾಂತದಲ್ಲಿ ಹೇಳಿಕೊಳ್ಳಲಂತೂ ಯಾರೂ ಇಲ್ಲವೇ ಇಲ್ಲ. ತನ್ನಲ್ಲಿನ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಒಡನಾಡಿ ಬೇಡವೇ? ಇಂತಹ ಸಮಯದಲ್ಲಿ ಅವಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಸಾಂಬಮೂರ್ತಿಯೇ ತನ್ನವನಾಗಿಬಿಟ್ಟ.
ಸಾಂಬಮೂರ್ತಿ ಉಳಿದುಕೊಳ್ಳಲು ಮಲ್ಲೇಶ್ವರದಲ್ಲಿ ಒಂದು ರೂಮು ಮಾಡಿಕೊಂಡಿದ್ದ. ಅಡುಗೆ ಮಾಡಲೂ ಬರುತ್ತಿರಲಿಲ್ಲದವನು ಪ್ರತಿನಿತ್ಯ ಮೆಸ್ಸಿನಲ್ಲಿ ಊಟ ಮಾಡುತ್ತಿದ್ದನು. ಈಕೆಯ ಸಹವಾಸವಾದ ಮೇಲೆ, ಬ್ಯಾಂಕಿನ ಕೆಲಸವಾದ ನಂತರ ಇಬ್ಬರೂ ಸ್ವಲ್ಪ ಹೊತ್ತು ಆಟವಾಡಿ ಅವನ ರೂಮಿಗೆ ಹೋಗುತ್ತಿದ್ದಳು. ಅಲ್ಲಿ ಸ್ವಲ್ಪ ಕಾಲ ಕಳೆದು ನಂತರ ರಾತ್ರಿ 8ರ ವೇಳೆಗೆ ಅವನು ಮೆಸ್ಸಿಗೆ ಊಟಕ್ಕೆ ಹೋಗುವ ಸಮಯದಲ್ಲಿ, ಆಕೆ ತನ್ನ ಮನೆಗೆ ಹೊರಡುತ್ತಿದ್ದಳು. ಎಷ್ಟೇ ಆಗಲಿ ಉಪ್ಪು ಖಾರ ತಿನ್ನುವ ದೇಹ. ದೈಹಿಕ ಆಸೆಯನ್ನು ಎಷ್ಟು ದಿನಗಳೂಂತ ಹತ್ತಿಟ್ಟುಕೊಳ್ಳಲು ಸಾಧ್ಯ. ಅವರಿಬ್ಬರ ಒಡನಾಟ ದಿನೇ ದಿನೇ ಬಹಳ ಹತ್ತಿರವಾಗುತ್ತಿತ್ತು.
ಒಮ್ಮೆ ಮಧ್ಯಾಹ್ನ ಮಗುವಿಗೆ ನಿರ್ಜಲೀಕರಣವಾಗಿ (ಡಿಹೈಡ್ರೇಷನ್) ಆಸ್ಪತ್ರೆಗೆ ದಾಖಲು ಮಾಡಬೇಕಾಯ್ತು. ಆತಂಕಗೊಂಡ ಆಕೆಯ ಮಾವ ಅವಳನ್ನು ಫೋನಿನ ಮೂಲಕ ಸಂಪರ್ಕಿಸಲು, ಅವಳು ಅಂದು ಕೆಲಸಕ್ಕೆ ಬಂದಿಲ್ಲ ಎಂದು ತಿಳಿಯಿತು. ಅರೇ! ಬೆಳಗ್ಗೆ ಮನೆಯಿಂದ ಬ್ಯಾಂಕಿಗೇಂತ ಹೊರಟವಳು, ಅದೂ ಊಟದ ಡಬ್ಬಿಯನ್ನೂ ತೆಗೆದುಕೊಂಡು ಹೋಗಿದ್ದವಳು, ಬ್ಯಾಂಕಿಗೆ ಹೋಗದೇ ಎಲ್ಲಿ ಹೋದಳು, ಅಂತ ಅಂದುಕೊಂಡೇ ಮಗನಿಗೆ ಫೋನಾಯಿಸಿದರು. ಆತ ಅಂದೇಕೋ ಪುರುಸೊತ್ತಾಗಿದ್ದ. ಹತ್ತು ನಿಮಿಷಗಳಲ್ಲಿ ತಾನೇ ಬ್ಯಾಂಕಿನ ಹತ್ತಿರಕ್ಕೆ ಬರುವೆ, ನೀವೂ ಅಲ್ಲಿಗೆ ಬನ್ನಿ ಎಂದು ಹೇಳಿದ್ದನು. ಹೇಳಿದಂತೆಯೇ, ಇಬ್ಬರೂ ಬ್ಯಾಂಕಿನ ಮುಂಭಾಗದಲ್ಲಿ ಭೇಟಿ ಆಗಿ, ಒಳ ಹೋದರು. ಅಲ್ಲಿಯ ಮೇಲಧಿಕಾರಿಗಳನ್ನು ಅವನು ಭೇಟಿ ಮಾಡಿ ರಾಧಿಕಾ ಎಲ್ಲಿಗೆ ಹೋಗಿರಬಹುದು ಎಂದು ಕೇಳಿದನು. ಮೇಲಧಿಕಾರಿಗಳು, ತಮಗೆ ತಿಳಿದ ಮಾಹಿತಿಯನ್ನೆಲ್ಲಾ ಕೊಟ್ಟರು. ಇತ್ತೀಚೆಗೆ ಸಾಂಬಮೂರ್ತಿಯೊಂದಿಗೆ ಅವಳು ನಿಕಟವಾಗುತ್ತಿದ್ದುದನ್ನೂ ಗಮನಿಸಿದರೆಂದೂ, ತಂದೆಯ ಸ್ಥಾನದಲ್ಲಿದ್ದ ತಮ್ಮ ಯಾವ ಮಾತುಗಳೂ ಅವಳ ಕಿವಿಗೆ ಹೋಗುತ್ತಿರಲಿಲ್ಲವೆಂದೂ ತಿಳಿಸಿದ್ದರು. ತಕ್ಷಣವೇ ತಂದೆ-ಮಗ ಇಬ್ಬರೂ, ಬ್ಯಾಂಕಿನಲ್ಲಿ ದೊರೆತ ವಿಳಾಸದ ಸಹಾಯದಿಂದ ಮಲ್ಲೇಶ್ವರಂನ ಸಾಂಬಮೂರ್ತಿಯ ರೂಮಿಗೆ ತಲುಪಿದರು. ರೂಮಿನ ಬಾಗಿಲು ಬಡಿಯಲು, ಒಳಗಿನಿಂದ ಯಾರು ಎಂಬ ಗಂಡಸಿನ ಶಬ್ದ ಬಂದಿತೇ ವಿನಹ ಬಾಗಿಲು ತೆರೆಯಲಿಲ್ಲ. ಅದೇನೋ ಅನುಮಾನ ಬಂದು ರತ್ನಾಕರ ಹತ್ತಿರದ ಪೊಲೀಸ್ ಸ್ಟೇಷನ್ನಿಗೆ ಫೋನಾಯಿಸಿ, ಇನ್‍ಸ್ಪೆಕ್ಟರ್ ಅವರನ್ನು ಅಲ್ಲಿಗೆ ಕರೆಸಿದನು.
’ಬಾಗಿಲು ತೆಗೆ, ಇಲ್ಲದಿದ್ದರೆ ಬಾಗಿಲು ಒಡೆಯುವೆ’ ಎಂದು ಇನ್‍ಸ್ಪೆಕ್ಟರ್ ಗುಡುಗಿದ ಮೇಲೆ ಸಾಂಬಮೂರ್ತಿ ಮೆಲ್ಲಗೆ ಬಾಗಿಲು ತೆರೆದನು. ಒಳನಡೆದ ಇನ್‍ಸ್ವ್ಪೆಕ್ಟರ್, ರಾಧಿಕಾ ಅಲ್ಲಿರುವುದನ್ನು ನೋಡಿದ. ಅವಳನ್ನು ನೋಡಿದೊಡನೆಯೇ, ರತ್ನಾಕರ ಕೂಗಾಡ ಹತ್ತಿದ. ಅದ ಕಂಡ ಇನ್‍ಸ್ಪೆಕ್ಟರ್, ’ತಾವು ಸ್ವಲ್ಪ ಸುಮ್ಮನಿರಿ, ನಾನೆಲ್ಲಾ ವಿಚಾರಿಸ್ತಿನಿ’, ಎಂದು, ರಾಧಿಕಾಳನ್ನು ಪ್ರಶ್ನಿಸತೊಡಗಿದ. ’ಯಾಕಮ್ಮಾ ಇಲ್ಲಿದ್ದೀಯೆ, ಯಾರಮ್ಮಾ ನಿನ್ನ ಜೊತೆಗಿರುವವನ’, ಎಂದು ಪ್ರಶ್ನಿಸಲು, ರಾಧಿಕಾ ಹೇಳಿದ್ದನ್ನು ಕೇಳಿ, ಅಲ್ಲಿದ್ದವರೆಲ್ಲರೂ ಸ್ಥಂಭೀಭೂತರಾಗಿದ್ದರು. ’ಸಾರ್, ಇವನು ನನ್ನ ಗಂಡ. ಈಗ ಕಂಪ್ಲೇಟ್ ಮಾಡಿಕೊಂಡು ಬಂದಿರೋವ್ರು, ಯಾರೋ ನನಗೆ ಗೊತ್ತಿಲ್ಲ. ಯಾರೋ ಬಂದು ನನ್ನ ಹೆಂಡತಿ ಅಂತ ಅಂದ್ರೆ, ನೀವೂ ಕೇಳೋದಾ?’ ಅವಳ ಆ ಮಾತುಗಳನ್ನು ಕೇಳಿ, ರತ್ನಾಕರ ಮತ್ತು ಅವನ ತಂದೆಗೆ ಮೂರ್ಛೆ ಹೋಗೋದು ಒಂದು ಬಾಕಿ ಆಗಿತ್ತು.
ಇಷ್ಟು ದಿನ ಮನೆ ಕಡೆ ಗಮನ ಕೊಡದಿದ್ದ ರತ್ನಾಕರ, ಈಗ ಭೂಮಿಗೆ ಇಳಿದಿದ್ದ. ಇಂದಿನವರೆವಿಗೆ ತಾನು ಮಾಡಿದ ತಪ್ಪಿಗೆ ಏನು ಮಾಡೋದು ಎಂದು ತೋಚದೇ, ಅಪ್ಪನ ಮುಂದೆ ಗೊಳೋ ಎಂದು ಅತ್ತುಬಿಟ್ಟನು. ಇತ್ತ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ಬಗ್ಗೆ ತಿಳಿಯಲು, ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದರು. ದೇವರ ದಯೆಯಿಂದ ಆಸ್ಪತ್ರೆ ಸೇರಿದ್ದ ಮಗು ಹುಷಾರಾಗಿ ಡಿಸ್ಚಾರ್ಜ್ ಮಾಡುವವರಿದ್ದರು. ವಯಸ್ಸಾಗಿದ್ದ ಆತನ ತಂದೆ, ಮುಂದೆ ನಿಂತು, ರಾಧಿಕಾಗೆ ಫೋನ್ ಮಾಡಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸು, ಮನೆಯ ಮರ್ಯಾದೆಯಾದರೂ ಉಳಿಯಲು ಎಂದು ಕೇಳಿಕೊಂಡಿದ್ದರು. ಅದಕ್ಕೆ ಅವಳು, ’ನಾನ್ಯಾಕೆ ವಿಚ್ಛೇದಿಸಲಿ – ಬೇಕಿದ್ರೆ ಅವನೇ ಅಪ್ಲೈ ಮಾಡ್ಲಿ – ಮನೆ ಮಾತ್ರ ತನ್ನ ಹೆಸರಿಗೆ ಬರೀಲಿ, ನಾನು ಬೇರೆ ಇನ್ನೇನೂ ಕೇಳೋದಿಲ್ಲ’ ಎಂದಿದ್ದಳು.
ಈ ಇಳಿ ವಯಸ್ಸಿನಲ್ಲಿ ಹಾಯಾಗಿರಬೇಕಾಗಿದ್ದ ರಾಯರಿಗೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು. ಲೋಕಕ್ಕೆ ಹೆದರಿ, ಸುತ್ತ ಮುತ್ತಲ ಜನಗಳನ್ನು ಎದುರಿಸಲಾರದೇ, ಮಗನಿಗೆ ವಿಚ್ಛೇದನ ಕೊಡಿಸಿ, ಇದ್ದ ಮನೆಯನ್ನು ರಾಧಿಕಾ ಹೆಸರಿಗೆ ಮಾಡಿ, ತನ್ನ ಸ್ವಂತ ಸ್ಥಳಕ್ಕೆ ಹೊರಟು ಹೋಗಿದ್ದರು. ಇತ್ತ ಮೊಮ್ಮಗಳನ್ನು ಊಟಿಯ ರೆಸಿಡೆನ್ಷಿಯಲ್ ಸ್ಕೂಲಿಗೆ ಸೇರಿಸಿದರು. ರತ್ನಾಕರ ಯಥಾಪ್ರಕಾರ ತನ್ನ ಕೆಲಸದಲ್ಲಿ ಮುಳುಗಿ ಹೋದ. ಮೊಮ್ಮಗಳು ವರುಷಕ್ಕೊಮ್ಮೆ, ಅಜ್ಜ ಅಜ್ಜಿಯರನ್ನು ನೋಡಲು ಊರಿಗೆ ಹೋಗುತ್ತಿದ್ದಳು.
ಎಷ್ಟೋ ವರ್ಷಗಳ ಮೇಲೆ ತಿಳಿದುಬಂದದ್ದೇನೆಂದರೆ, ಈ ಘಟನೆ ನಡೆದ ಸ್ವಲ್ಪ ದಿನಗಳಲ್ಲೇ ರಾಧಿಕಾ ಮತ್ತು ಸಾಂಬಮೂರ್ತಿ ಪ್ರಮೋಶನ್ ತೆಗೆದುಕೊಂಡು ಇಬ್ಬರೂ ದೂರದ ಮುಂಬಯಿಗೆ ಹೋಗಿ ನೆಲೆಸಿದ್ದರು. ಮೂರು ವರುಷಗಳಲ್ಲೇ ಸಾಂಬಮೂರ್ತಿ ಮತ್ತು ರಾಧಿಕಾಳ ನಡುವೆ ಮಗು ಮಾಡಿಕೊಳ್ಳಬೇಕೆಂಬ ವಿಷಯಕ್ಕೆ ಮನಸ್ತಾಪ ಬಂದು, ಇಬ್ಬರೂ ಬೇರೆ ಬೇರೆಯಾಗಿದ್ದರು. ರಾಧಿಕಾಳಿಗೆ ಮತ್ತೆ ಮಗು ಬೇಕಿರಲಿಲ್ಲ ಆದರೆ ಸಾಂಬಮೂರ್ತಿಗೆ ಮಗು ಬೇಕೆನಿಸುತ್ತಿತ್ತು. ರಾಧಿಕಾಳಿಗೆ ಇನ್ನೂ ಹೆಚ್ಚು ಹೆಚ್ಚು ಪ್ರಮೋಶನ್ ತೆಗೆದುಕೊಂಡು ಮಾದರಿ ಹೆಣ್ಣಾಗಬೇಕೆಂಬ ಹಂಬಲ. ಆದರೆ ಸಾಂಬಮೂರ್ತಿಗೆ ಇಲ್ಲಿಯವರೆವಿಗೆ ತಾನು ಮಾಡಿದ್ದುದು ತಪ್ಪು ಎಂದೆನಿಸಿ, ಈ ಕೂಪದಿಂದ ಹೊರಬರಬೇಕೆಂದೂ, ತಾನೂ ಸಮಾಜದಲ್ಲಿ ಬಾಳಬೇಕೆಂದೂ ಅನಿಸುತ್ತಿತ್ತು. ಇಬ್ಬರಲ್ಲೂ ಆಗಾಗ ಜಗಳವೂ ಆಗುತ್ತಿತ್ತು. ಅಕ್ಕ ಪಕ್ಕದವರ ಮನೆಯವರುಗಳ ಮುಂದೆ ತಮ್ಮ ಮಾನ ಹೋಗುತ್ತಿದೆ, ಅದರ ಬದಲಿಗೆ ಇಬ್ಬರೂ ಬೇರೆ ಬೇರೆ ಇರುವುದೇ ಲೇಸೆಂದು, ಸಾಂಬಮೂರ್ತಿ ಮತ್ತೆ ಬೆಂಗಳೂರಿಗೆ ವರ್ಗ ತೆಗೆದುಕೊಂಡು ಬಂದಿದ್ದನು. ಆದರೆ ರಾಧಿಕಾ ಮಾತ್ರ ಮುಂಬಯಿಯಲ್ಲೇ ಇದ್ದಳು.
ಒಬ್ಬಂಟಿಯಾದ್ದವಳಿಗೆ ಆಗಾಗ, ಹಳೆಯದೆಲ್ಲಾ ನೆನಪಾಗಿ, ತಾನು ಮಾಡಿದುದು ತಪ್ಪೆನಿಸುತ್ತಿತ್ತು. ಅದೂ ಅಲ್ಲದೇ ಎಳೆಯ ಮಗುವನ್ನು ಬಿಟ್ಟು ಬಂದಿದ್ದ ಅವಳಿಗೆ, ಮಗುವಿನ ನೆನಪಾಗಿ ಆಗಾಗ್ಯೆ ಅಪಸ್ಮಾರ ಬರುತ್ತಿತ್ತು. ಎಲ್ಲೆಂದರಲ್ಲಿ ಬಿದ್ದುಬಿಡುತ್ತಿದ್ದಳು. ಅವಳನ್ನು ನೋಡುವವರು ಯಾರೂ ಇರಲಿಲ್ಲ. ಜೊತೆಗೆ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದಳಂತೆ. ಮೊದಲನೆಯ ಬಾರಿಗೆ ಕೆಮೋಥೆರಪಿ ನಡೆದ ನಂತರ, ಜೀವನದಲ್ಲಿ ಜಿಗುಪ್ಸೆ ಬಂದು ನೇಣಿಗೆ ಶರಣಾಗಿದ್ದಳು.
ಇದೂ ಒಂದು ಜೀವನವೇ! ಹುಹ್
ನಾವು ಈ ಜಗತ್ತಿಗೆ ಬಂದಿರುವುದೇಕೆ? ಜಗತ್ತನ್ನು ಚಾಲ್ತಿಯಲ್ಲಿಡಲು ನಾವು ವಾಹಕವಷ್ಟೇ. ಎಲ್ಲಿಂದಲೋ ಬಂದು ಎಲ್ಲೋ ಹೋಗುವವರು, ನಾವು. ಇಂತಹ ಅವಘಡಗಳು ಸಂಭವಿಸಬಾರದು. ಅದಕ್ಕಾಗಿಯೇ ಒಂದು ಚೌಕಟ್ಟಿನಲ್ಲಿ ಬದುಕಬೇಕು. ಒಂದು ಕ್ಷಣ ಯಾ ದಿನ ಯಾ ಕಾಲದ ಸುಖಕ್ಕಾಗಿ ಸಮಾಜಕಂಟಕ ಆಗಬಾರದು. ಈ ಕಥೆಯಲ್ಲಿ ಬರುವ ಆ ಮಗುವಿನ ಮುಂದಿನ ಜೀವನದ ಬಗ್ಗೆ ಯೋಚಿಸಿ ನೋಡಿ. ಜೀವಿತ ಪೂರ್ತಿ ಒಂದು ಪಟ್ಟಿಯನ್ನು ಕಟ್ಟಿಕೊಂಡೇ ಆ ಮಗು ಈ ಸಮಾಜವನ್ನು ಎದುರಿಸಬೇಕು.
ತಳುಕು ಶ್ರೀನಿವಾಸ
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..