ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಧೆಯೊಲವಲಿ ಮಗ್ನ ನೀನು ಪ್ರೇಮರೂಪಿ ಮಾಧವ..

ಗೋವಿಂದ ಹೆಗಡೆ ಅವರ ೫ ಕವಿತೆಗಳ ಗುಚ್ಛ, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ...
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಭಾಗ್ಯ…

ಯಾರು ಕರೆದರು ಗೆಳತಿ ನಮ್ಮನು
ಅಲ್ಲಿ ಯಮುನೆಯ ತೀರಕೆ
ಯಾವ ಕೊಳಲದು ಬಿಡದೆ ಕರೆಯಿತು
ನಿಶೆಯ ರಾಸದ ಮೋದಕೆ

ಹೆಜ್ಜೆ ಹೆಜ್ಜೆಗೆ ಗೆಜ್ಜೆ ಸದ್ದದು
ಘಳಿರು ಘಳಿರೆನುತಿರುವುದು
ಮುರಲಿಲೋಲನ ವೇಣು ನಾದಕೆ
ಕಾಲು ನಡೆಯದು, ಕುಣಿವುದು !

ಜೊನ್ನೆಯನು ತುಂಬುವನು ಚಂದಿರ
ನಮ್ಮ ಗಾನಕೆ ನಾಟ್ಯಕೆ
ಯಾಕೆ ಬೇಸರ ಏಳು ಪ್ರಿಯಸಖಿ
ನಡೆವ ರಂಗಿನ ಹಬ್ಬಕೆ

ರಾಧೆಯಿದ್ದರೆ ಇರಲಿ ಬಿಡು ಸಖಿ
ನಮ್ಮ ಮೋದವು ನಮ್ಮದು
ರಂಗನೊಂದಿಗೆ ಒಲಿದು ಬೆರೆಯುವ
ಭಾಗ್ಯ ನಮ್ಮದು ನಮ್ಮದು !

********

ಅಳಲು

ಕಾಣೆಯಾದನೇ ರಂಗ
ಕಳೆದುಹೋದನೇ
ಜೀವದನಿಯ ಉಲಿವ ಕೊಳಲ
ಮರೆತುಹೋದನೇ

ಯಮುನೆ ತಟದ ಮರಳು ಆಗ
ಹಂಸ ತೂಲಿಕೆ
ಸುಡುಕೆಂಡದ ಕುಲುಮೆಯೀಗ
ಯಾವ ಹೋಲಿಕೆ !

ಕಣ್ಣನೀರ ಮಿಡಿವ ತುರು
ಮಂದೆ ಸುತ್ತಲು
ಹಸುಕಂದಗೆ ಉಣಿಸೇನಿದೆ
ಬರಿದು ಕೆಚ್ಚಲು

ಹೋಗುವವನು ಹೋದ-ಕೊಳಲ
ಕಲಿಸಿ ಹೋದನೆ ?
ನುಡಿಸಿ ಜೀವ ಹಿಡಿಯುತಿದ್ದೆ –
ಶೂನ್ಯವೀ ಎದೆ !

**********

ಒಲವಿನ ಪಾಲು

ರಾಧೆಯೊಲವಲಿ ಮಗ್ನ ನೀನು
ಪ್ರೇಮರೂಪಿ ಮಾಧವ
ದಿವದ ಒಲವಿನ ಧಾರೆ ಹರಿಸುವೆ
ಎಂಥ ಮೋದವು,ಸೋಜಿಗ

ನೋಡುತಿರುವುದು ಹೇಗೆ ನಿಮ್ಮನು
ದೃಷ್ಟಿಯಾಗದೆ ಒಲುಮೆಗೆ
ಲಜ್ಜೆ ಸುಳಿಯಲಿ ನಮ್ಮ ನೂಕಿದೆ
ಹೇಗೆ ಇರುವುದು ಬಳಿಯಲೆ

ಬಿಟ್ಟು ತೆರಳಲಿ ಹೇಗೆ ನಿನ್ನನು
ಬಿಡಲೆ ಒಲವಿನ ಪಾಲನು
ಗಾಳಿ ಬೀಸುತ ಸೇವೆಗೈಯುತ
ಕಣ್ಣ ಹೊರಳಿಸಿ ನಿಲುವೆನು

ಚಣವೆ ಸಾಕು ನೋಡು ನನ್ನನು
ಸಫಲವೆನ್ನಯ ಜೀವನ
ಉಸಿರಿನುಸಿರಲಿ ತುಂಬಿಕೊಳುವೆನು
ಜನುಮ ಜನುಮವು ಪಾವನ

**********

ಬರುವನೇ

ಹೊರಟು ಹೋದನೇ ಸಖೀ ಎಲ್ಲಿ ಹೋದನೇ
ಎಂದು ಬರುವನೇ ಪ್ರಿಯ ಮರಳಿ ಬರುವನೇ

ಇರುಳು ಮಾತ್ರವಲ್ಲ ಎನಗೆ ಹಗಲೆ ಹುಣ್ಣಿಮೆ
ಜೊನ್ನದ ಹೊನಲಿನಲ್ಲೆ ತೇಲುತಿದ್ದೆನೇ

ಎದೆಯ ಚಂದ್ರಾಮನೀಗ ಎಲ್ಲು ಕಾಣನೇ
ತೊರೆದೆ ಹೋದನೇ ಸಖಿ ಇಷ್ಟು ಕಠಿಣನೇ ?!

ಹಗಲು ಕತ್ತಲೇ ಗೆಳತಿ ಒಳಗು ಕತ್ತಲೇ
ಕವಿದ ಕತ್ತಲಲ್ಲಿ ಪ್ರಿಯನ ಎಲ್ಲಿ ಹುಡುಕಲೇ

ಯುಗವೆ ಮುಗಿದರು ಬಿಡದೆ ಕಾಯುತಿರುವೆನೆ
ಬರುವನೇನೆ ನನ್ನ ಶ್ಯಾಮ ಮರಳಿ ಬರುವನೇ

**********

ದಿವದ ಹಾಡು

ಯಾವ ಕೊಳಲಿನ ಹಾಡು ನೀನು
ಎದೆಯನೀ ಪರಿ ಮಿಡಿದಿಹೆ..
ಯಾವ ಭಾವದ ಮಂತು ನೀನು
ಪ್ರಾಣವನ್ನೇ ಕಡೆದಿಹೆ ।।

ಕವಿದ ಕತ್ತಲಿನಲ್ಲಿ ಬಳಲಿದೆ
ದಾರಿಯನು ನಾಕಾಣದೇ
ನಾದ ಸುಧೆಯು ತುಂಬಿ ಹರಿದು
ಕಾಂತಿ ಪಥವನೆ ತೆರೆದಿದೆ ।।

ದಿವದ ಸೊಗದಲಿ ಬಾನು ಬೆಳಗಿದೆ
ಮನದ ಕಾವಳ ಕಳೆದಿದೆ
ನೆಲವ ನಭವs ಒಂದು ಮಾಡುತ
ನಿನ್ನ ಹಾಡದು ಬೆಳೆದಿದೆ ।।