ಅದು ಚುಕ್ಕಿಯಿಂದ ಚುಕ್ಕಿಗೆ ನೆಗೆಯುವ ಬಾಲ್ಯ. ಏನೆಂದರೆ ಏನೂ ಸಿಕ್ಕುಸಿಕ್ಕುಗೊಳ್ಳದ, ಹೂವು ಮೃದು ಪಕಳೆಗಳನ್ನು ತೆರೆದಂತೆ ಅರಳಿಕೊಂಡ ಬಾಲ್ಯ. ಆ ಹಂಚಿನ ಮನೆ, ದುಡಿದು ಬಂದು ಗೋಡೆಗೆ ಒರಗಿ ಅಜ್ಜಿ ರಾಮಾಯಣ,ಭಾರತ .. ಉದ್ದ ಕಥೆಗಳ ಸರಣಿ ನನ್ನ ಪುಟ್ಟ ತಲೆಗೆ ಲೇಪಿಸುವುದು,ಅದರ ತಂಪಿಗೆ ಪುಳಕಗೊಂಡು “ಅಮ್ಮಾ..ಇನ್ನೊಂದು ಹೇಳು..” ಆಕೆ ದೇಹದ ಸುಸ್ತು ಒಂದಿಷ್ಟೂ ಗಣನೆಗೇ ತಾರದೆ ಕಥೆ,ಉಪಕಥೆ,ಅದರೊಳಗಿನ ನೀತಿ,ಧರ್ಮ ಅದೆಷ್ಟು ಅಲಂಕರಿಸಿ ನನ್ನ ಒಳಗೆ ಕುಣಿಸುತ್ತಿದ್ದಳು!
ಹೌದು. ನನ್ನ ಬದುಕಿನ ಆಧ್ಯಾತ್ಮವೆಂದರೆ ನನ್ನಿಂದ ಅಮ್ಮನೆಂದೇ ಕರೆಯಿಸಿಕೊಂಡ ನನ್ನಜ್ಜಿ. ನಮ್ಮ ಮನೆಯ ಮುಂದುವರಿದ ಭಾಗವೇ ದನದ ಹಟ್ಟಿ. ಹಿಂಬಾಗಿನಿಂದ ಹೊರ ಹೋಗಬೇಕೆಂದರೆ ದನಗಳನ್ನು ದಾಟಿಯೇ ಹೋಗಬೇಕು. ಅವರೂ ಮನೆಯ ಸದಸ್ಯರು. ಆಕೆ ಬೆಳಗ್ಗೆ ತಯಾರಿಸುವ ದೋಸೆಯಲ್ಲಿ ಅವರಿಗೂ ಅಷ್ಟೇ ಪಾಲು ಬೇಕು. ದೋಸೆ ಕಾವಲಿಗೆ ಹಿಟ್ಟು ಹೊಯ್ದ ತಕ್ಷಣ “ಅಂಬಾ” ಎಂಬ ಆಲಾಪ ಶುರು. ಆಕೆ ಅವರ ಜೊತೆ ಮಾತನಾಡುತ್ತಲೇ ತನ್ನ ಕೆಲಸ ಮುಂದುವರಿಸುತ್ತಿದ್ದಳು. ಅವಳು ದನಗಳನ್ನು ಸಾಕುತ್ತಿದ್ದಳೋ,ಅಥವಾ ದನಗಳು ಆಕೆಯ ಸಂಸಾರವನ್ನು ಪೊರೆಯುತ್ತಿದ್ದವೋ..
ಅಂತಹ ವಾತ್ಸಲ್ಯಮಯಿಯ ಅಷ್ಟೂ ಮುದ್ದು ಸೆಳೆದುಕೊಂಡಂತೆ ಆವಳ ಸೆರಗಿನಡಿ ಅವಿತು ಬಾಲ್ಯವನ್ನು ಬೆಚ್ಚಗಾಗಿಸಿಕೊಂಡವಳು ನಾನು. ಹೀಗಾಗಿ ನನ್ನ ಅಜ್ಜಿಯ ಗೋಕುಲ ನನ್ನ ಭಾವಪ್ರಪಂಚವೂ ಆಗಿತ್ತು . ಅಂಬೆಗಾಲಿನಿಂದ ನಡಿಗೆ ಕಲಿತು ಓಡಾಡಲು ಆರಂಭಿಸಿದಾಗ ಬೆಳಿಗ್ಗೆ ಆಕೆ ಸುರ್ರ್ ಸುರ್ರ್ ನಾದದಲ್ಲಿ ಹಾಲು ಕರೆಯುತ್ತಿದ್ದರೆ ನಾನು ಪಾತ್ರೆಯಲ್ಲಿ ನೊರೆ ಉಕ್ಕುವ ಅದ್ಭುತವನ್ನು ಆಕೆಯ ಬೆನ್ನ ಹಿಂದೆ ನಿಂತು ನೋಡುತ್ತಿದ್ದೆ. ಕೈಯಲ್ಲಿ ಪುಟ್ಟ ಲೋಟ. ಆ ನೊರೆನೊರೆ ಹದಬಿಸಿ ಹಸಿಹಾಲು ಅವಳ ಪಾತ್ರೆಯಿಂದ ನನ್ನ ಲೋಟದೊಳಗೆ ಹರಿದು ನಾನು ಅದನ್ನು ಅಲ್ಲೇ ಗುಟಕರಿಸಿ ಬಿಳಿಮೀಸೆ ಮೂಡಿಸಿಕೊಂಡು ಓಡುತ್ತಿದ್ದೆ. ಈ ನೆನಪು ಮಾಸದಂತೆ ಉಳಿಯಲು ಈ ದಿನಚರಿಯನ್ನು ಮೂರು ,ನಾಲ್ಕನೇ ತರಗತಿಗೆ ಹೋಗುವವರೆಗೂ ಮುಂದುವರಿಸಿದ್ದೆ. ಹೀಗಾಗಿ ಗೋ ನನಗೆ ಮಾತೆ.
ಆಗ ನಮ್ಮ ಹಟ್ಟಿಯಲ್ಲಿ ಒಂದಷ್ಟು ಹಸುಗಳು. ನನ್ನ ಅಜ್ಜ ಅಜ್ಜಿಯರಿಗೆ ಉದರ ಪೋಷಣೆಗೆ ಆಧಾರ. ಪುಣ್ಯಕೋಟಿ,ನಂದಿನಿ,ಗಂಗೆ,ಗೌರಿ,ಪುಷ್ಪ..
ಶಾಲೆಯಿಂದ ಬಂದ ತಕ್ಷಣ ಅಜ್ಜಿ ತಂಬಿಗೆಯಲ್ಲಿ ಹಾಲು ಹೊಯ್ದು ಕೊಟ್ಟರೆ ಮನೆಮನೆಗೆ ಹಾಲು ಕೊಟ್ಟು ಬರುವ ಕೆಲಸ ನನ್ನದೇ.
ಮುಂದೆ ಮದುವೆಯಾಗಿ ಸೇರಿದ ಮನೆಯಲ್ಲೂ ಅಂಬಾ ಎನ್ನುವ ಕರೆ ಕೇಳಿದಾಗ ಆತ್ಮೀಯರು ಹತ್ತಿರದಲ್ಲೇ ಇದ್ದಾರೆ ಎನ್ನುವ ಆಪ್ತತೆ ಜಿನುಗಿತ್ತು. ಇಲ್ಲಿ ನನಗೊಂದು ಭಡ್ತಿ ದೊರಕ್ಕಿತ್ತು. ಅತ್ತೆಯ ಜೊತೆ ಸೇರಿ ದನದ ಹಾಲು ಕರೆಯುವ ಜವಾಬ್ದಾರಿ ವಹಿಸಿಕೊಂಡಿದ್ದೆ. ಹಳ್ಳಿಯ ತೋಟದ ನಡುವಿನ ಮನೆ,ಅಡಿಕೆ,ತೆಂಗಿನ ಮರಗಳು. ಮನೆಗಳೆಂದರೆ ನಮ್ಮದು ಜೊತೆಗೆ ಇನ್ನೊಂದು. ಇಂತಹ ಸಮಯದಲ್ಲೇ ಅತ್ತೆಯವರೂ ತಮ್ಮ ಇಹದ ಪಯಣ ಮುಗಿಸಿ ಆ ದೊಡ್ಡ ಮನೆಯಲ್ಲಿ ಹಗಲಿನಲ್ಲಿ ನನ್ನನ್ನು ಒಂಟಿಯಾಗಿಸಿದ್ದರು. ಹೊರಬಂದರೆ ದನಗಳು.
ಆ ಸಮಯ ಹಟ್ಟಿಯಲ್ಲಿ ಹಿರಿಯ ದನ ಗಬ್ಬವಿತ್ತು. ಮನೆಯ ಒಳಗಡೆ ಹಿರಿಯರೆಂದು ಯಾರೂ ಇಲ್ಲ. ಹತ್ತಿರದಲ್ಲಿರುವ ಸಂಬಂಧಿಕರು ಎಚ್ಚರ ಕೊಟ್ಟಿದ್ದರು,” ರಾತ್ರಿ ಗಂಗ ಕರು ಹಾಕಿಯಾಳು ಜಾಗೃತೆ. ದನ ಗರ್ಭದ ಕಸ ತಿನ್ನಬಾರದು. ಕರು ನೋಡಿಕೊಳ್ಳುವುದೂ ಮುಖ್ಯ..ಏನು ಮಾಡುತ್ತಿ ಮಾರಾಯ್ತಿ? ನಿನ್ನ ಗಂಡನಿಗೆ ಇದೆಲ್ಲ ಗೊತ್ತಾಗುತ್ತದಾ..?” ನನಗೂ ಸಣ್ಣಗೆ ಶುರುವಾದ ಪುಕುಪುಕು ಹೆಚ್ಚುತ್ತ ಹೋಯಿತು. ಹೌದು ಇದೆಲ್ಲ ನನಗೆ ತಿಳಿಯದ ಸಂಗತಿಗಳು. ರಾತ್ರಿ ಯಾರನ್ನು ಕರೆಯುವುದು? ಇಷ್ಟಕ್ಕೂ ಅದರ ಬೇನೆ ತಿಳಿಯುವುದಾದರೂ ಹೇಗೆ? ಹಗಲಾದರೆ ತೋಟಕ್ಕೆ ಬರುವ ಆಳುಗಳು,ಆಚೆ ಮನೆಯವರು ಕೂಗಿದರೆ ಬರುವರು. ರಾತ್ರಿ..ಯಾರು ಯಾರನ್ನು ಕೂಗಿ ಕರೆಯುವುದು? ಸಂಕಟ ದಿನ ಕಳೆದಂತೆ ವ್ಯಥೆಯಾಗಿತ್ತು.
ದನಗಳಿಗೆ ಅಕ್ಕಚ್ಚು ಇಡಲು ಹೋದಾಗ ಅವರ ಮೈ ಸವರಿ ಮಣಮಣಿಸುತ್ತಿದ್ದೆ..”ನೀನು ಹಗಲಲ್ಲೇ ಕರು ಹಾಕುವುದು ಆಯಿತಾ..ನಾನು ಆಚೀಚೆ ತಿರುಗುವಾಗಲೇ ಕರೆದುಬಿಡು. ನಿನ್ನ ನೋವು, ಬಾಣಂತನ ನನಗೆ ಗೊತ್ತಿಲ್ಲ. “
ಅಂತಹ ಒಂದು ರಾತ್ರಿ ಗಾಢ ನಿದ್ದೆ. ಗಂಗೆ ಕರೆಯತೊಡಗಿದಳು. ಅದೇನು..ಮುಖ ಮುಂದಕ್ಕೆ ತಂದು ಬಾಯಿ ತೆರೆದು,ಕಣ್ಣು ಅಗಲಿಸಿ..’ಬಾಂ..ಅಮ್..ಂಬಾ..ಅಂಬ್ಯಾ’.ಹೋಗಿ.ನೋಡಿದರೆ ಪುಟ್ಟ ಕರು ಅರ್ಧ ಹೊರಬಂದಿದೆ. ಅದುವರೆಗೂ ದನ ಈಯುವುದನ್ನು ಕಂಡವಳಲ್ಲ. ಕೈ ಕಾಲು ನಡುಗುತ್ತಿತ್ತು. ಏನು ಮಾಡಬೇಕು..ಎಲ್ಲಿ..ಎಲ್ಲಿ ಹಿಡಿಯುವುದು..ಏನನ್ನು..ಕರು ಬಿದ್ದರೆ..ಇವಳು ನಿಂತೇ ನೋವು ಕೊಡುತ್ತಿದ್ದಾಳೆ..ದೇವರೇ ಸಹಾಯ ಮಾಡು..ಅವಳ ನೋವಿನ ಆಕ್ರಂದನ ಹೆಚ್ಚಿತ್ತು. ನನ್ನ ಭಯವೂ ಅದೇ ವೇಗದಲ್ಲಿ ಏರುತ್ತಿದೆ.
ಅಯ್ಯೋ..ಏನಾಗುತ್ತಿದೆ..ಇವಳಿಗೆ ಅಪಾಯ ಆಗದಿದ್ದರೆ ಸಾಕು..ಯಾರನ್ನು ಕರೆಯುವುದು? ಹ್ಹೋ..ನನ್ನ ಗಂಡನನ್ನು..ಕರೆದೇ ಇಲ್ಲ. ಥಟ್ಟನೆ ಎದ್ದು.. ಎದ್ದು..ಎದ್ದೆ. ಓ..ಅದು ಕನಸು. ಕುತ್ತಿಗೆ,ಹಣೆ ಬೆವತಿದ್ದೆ. ಯೋಚಿಸಲು ಸಮಯವಿಲ್ಲ. ನನ್ನವರನ್ನು ಎಬ್ಬಿಸಿದೆ. ಕನಸಿನ ನಶೆ ನನ್ನ ಒಳಗಿನ್ನೂ ಪೂರ್ತಿ ಇಳಿದಿರಲಿಲ್ಲ. “ನೋಡಿ,ಬೇಗ..ಬೇಗ ಬನ್ನಿ. ಗಂಗೆಗೆ ಹೊಟ್ಟೆನೋವು.” ಅವರೋ ದಡಕ್ಕನೆ ಎದ್ದು ಟಾರ್ಚ್ ಹಿಡಿದು ಮನೆಯಿಂದ ಹೊರ ಓಡಿದರು. ನಾನು ಹಿಂಬಾಲಿಸಿದೆ. ದನದ ಹಟ್ಟಿ ಮನೆಯಿಂದ ಒಂದು ಐವತ್ತು ಹೆಜ್ಜೆಯಷ್ಟು ದೂರ. ಹಟ್ಟಿಯ ಬಾಗಿಲು ತೆರೆದರೆ..ನನ್ನ ಕನಸಿನ ಘಟನೆ ಅಲ್ಲಿ ನಡೆಯುತ್ತಿತ್ತು. ಸಾಕ್ಷತ್ ಅದೇ ನೋಟ..ಮತ್ತೆ ಪುನರಾವರ್ತನೆ. ನಾವಿಬ್ಬರೂ ಸೇರಿ ಕರುವನ್ನೂ ಎಳೆದು..ಅವಳ ಹೆರಿಗೆ ಮಾಡಿಸಿ, ಕರುವಿನ ಎಳತು ಉಗುರು ಕೈಯಿಂದ ತೆಗೆದು ಆಕಾರ ಕೊಟ್ಟು..ಮತ್ತೆ ಮನೆಯೊಳಗೆ ಬಂದೆವು. ಆಗ ಇವರಿಗೆ ಒಂದು ಪ್ರಶ್ನೆ ಕಾಡಿತು..ಅಲ್ಲಾ..ಈ ರಾತ್ರಿ ಹಟ್ಟಿಗೆ ಒಬ್ಬಳೇ ಹೋದೆಯಾ? ಹೇಗೆ ಗೊತ್ತಾಯಿತು? ನಾನು ನಿಧಾನವಾಗಿ ಅಂದೆ. ” ಇಲ್ಲ. ಕನಸಾಯಿತು.” ನಕ್ಕು ಬಿಟ್ಟರು. “ನಿಜಕ್ಕೂ ಕನಸು ಬಿದ್ದಿತ್ತು..ನಾವು ಹಟ್ಟಿಗೆ ಹೋದಾಗ ನೋಡಿದ ದೃಶ್ಯವೇ ಕನಸಿನಲ್ಲಿ ಕಂಡು ಹೆದರಿ ನಿಮ್ಮನ್ನು ಎಚ್ಚರಿಸಿದೆ.”- ಒಂದು ಕ್ಷಣ ನನ್ನ ನೋಡಿ..”ಗೊತ್ತಾಗುತ್ತಿಲ್ಲ” ಎಂದು ಭಾರವಾಗುತ್ತಿದ್ದ ಕಣ್ಣಿನಿಂದ ಮತ್ತೆ ಅಡ್ಡವಾದರು. ನನಗೋ ಬೆಳಗು ಮೂಡುವ ಮುನ್ನವೇ ಎದ್ದು ಹಸುಗಳ ಬಳಿ ಓಡುವ, ಮಲಗಲು ಹೋಗುವ ಕ್ಷಣದಲ್ಲೂ ಒಂದು ಕರೆಕೂಗಿ ಮಲಗುವ, ಆ ದನಗಳ ಸಾಮಿಪ್ಯದಲ್ಲೇ ಬದುಕು ಕಂಡ ಅಜ್ಜಿ ನೆನಪಾದಳು.
ಮೇಯಲು ಹೋದ ದನ, ತನ್ನ ಪುಟ್ಟ ಕರುವನ್ನು ಕಾಣದಾದಾಗ ಅಂಬಾ ಅನ್ನುತ್ತೆ, ಆಗ ಎಲ್ಲಿಯೋ ಆಡುತ್ತಿದ್ದ ಕರು ಬಾಲವನ್ನೆತ್ತಿ ಕುಣಿ ಕುಣಿಯುತ್ತಾ ಜಿಗಿದು, ಅಮ್ಮನತ್ತ ಓಡಿದಾಗ, ಅ ದನ, ಕರುವನ್ನು ನೋಡಿ ಕಣ್ಣರಳಿಸುವಾಗ, ಪ್ರೀತಿ ಭಾವ ಹರಿಯುವುದನ್ನು ನೋಡುವುದೇ ಚಂದ. ದನದ ಹಣೆ ನೇವರಿಸಿ, ನೀವು ಮಾತಾಡಿದರೆ, ದನ ತಲೆಯಾಡಿಸಿ ಪ್ರೀತಿ ಸೂಸುತ್ತೆ. ನಿಮ್ಮ ಕೈ ಬಳಿ ಬಿಸಿ ಉಸಿರ ಬಿಟ್ಟು ನೆಕ್ಕುತ್ತದೆ. ಥೇಟು ತನ್ನ ಕರುವನ್ನು ಮುದ್ದಿಸಿದಂತೆ.
ನಾವು ಸಂವಹನಕ್ಕಾಗಿ ಕಟ್ಟಿರುವ ಭಾಷೆಯನ್ನು ಮಾತನಾಡಲು ಸಾಧ್ಯವಾಗದ ಈ ಪ್ರಾಣಿಗಳು. ಅವುಗಳ ದೇಹ,ಮನಸ್ಸಿನ ಭಾಷೆ ಓದಲು ನಮಗೆ ಅದೊಂದು ಪ್ರೀತಿಯ ಕಣ್ಣು,ಮನಸ್ಸು ಬೇಕು. ದನಗಳ ಜೊತೆಗಿನ ನನ್ನ ಒಡನಾಟದಲ್ಲಿ ಅನುಭವಕ್ಕೆ ದಕ್ಕಿದ ಇನ್ನೊಂದು ದೃಷ್ಟಾಂತವನ್ನೂ ಹೇಳುವೆ.
ಅದು ನಾನು ತಾಯಿಯಾಗುವ ಸಂದರ್ಭ. ಕೂಸಿನ್ನೂ ಮಡಿಲಿಗೆ ಬಂದಿರಲಿಲ್ಲ. ನಮ್ಮದೋ ಹಳ್ಳಿಮನೆ. ಒಂದು ದಿನ ಹೊರ ಜಗವೆಲ್ಲ ಅರ್ಧ ಕಪ್ಪಾದಂತೆ ಕಾಣಿಸತೊಡಗಿತು. ಅಚ್ಚರಿ. ಏನಿದು..ಮನಸ್ಸಿಗೆ ಏನೋ ಹೊಳೆದು ಥಟ್ಟಂತ ಒಂದು ಕಣ್ಣು ಮುಚ್ಚಿದೆ. ಹೌದು , ನನ್ನ ಒಂದು ಕಣ್ಣು ಬೆಳಕು ಆರಿಸಿ ಕೂತಿದೆ. ಅರೇ,ಇದೇನು? ಮತ್ತೆಮತ್ತೆ ಪರೀಕ್ಷಿಸಿದರೂ ಫಲಿತಾಂಶ ಅದೇ. ಡಾಕ್ಟರ್ ಬಳಿ ಹೋದೆ. ಎಲ್ಲ ಪರೀಕ್ಷೆಗಳು ನಡೆದವು. ಕಣ್ಣಿನ ವೈದ್ಯರು ಕಣ್ಣಿನ ನರಗಳಿಗೆ ಸೋಂಕು ತಗಲಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಅದಕ್ಕೆ ಒಂದು ವಾರದ ಚಿಕಿತ್ಸೆ ಅಗತ್ಯ ಎಂದರು. ಆದರೆ ತುಂಬು ಗರ್ಭಿಣಿಗೆ ಇದು ಸಾಧುವೇ ಎಂಬ ಸೂಕ್ಷ್ಮತೆ ಎದುರಾಗಿ ಹೆರಿಗೆಯ ಬಳಿಕವೇ ಈ ಚಿಕಿತ್ಸೆಗೆ ಒಳಗಾಗುವುದು ಎಂಬ ನಿರ್ಣಯಕ್ಕೆ ಬಂದೆವು. ನಾನೂ ಪರವಾಗಿಲ್ಲ, ಇದೂ ಒಂದು ನವೀನ ಅನುಭವ. ಎರಡು ತಿಂಗಳು ಕಪ್ಪು ಬಿಳುಪು ಜಗವನ್ನು ನನ್ನೊಳಗೆ ಇಳಿಸಿಕೊಳ್ಳುವೆ ಎಂಬ ಆಲೋಚನೆಯಲ್ಲಿ ಹಿಂತಿರುಗಿದೆ.
ಮನೆ ತಲುಪಿದರೆ ತೋಟದ ಆಳು ನುಡಿದ: ‘ನಮ್ಮ ಪ್ರೀತಿಯ ಹಸು ಗಂಗೆ ತೋಡಿನಲ್ಲಿ ಬಿದ್ದದಲ್ವಾ..ಹೆಚ್ಚು ಪೆಟ್ಟು ಆಗಲಿಲ್ಲ. ಗಬ್ಬದ ದನ ಅಲ್ವಾ..ಹೆದರಿಕೆ ಆಯಿತು. ನಾನು ಡಾಕ್ಟರಿಗೆ ಫೋನ್ ಮಾಡಿದೆ.ವೈದ್ಯರು ಬಂದು ಹೋದರು. ಈಗ ಮಲಗಿದ್ದಾಳೆ. ಆದರೆ ಡಾಕ್ಟರ್ ಹೇಳ್ತಾರೆ..ಅದರ ಒಂದು ಕಣ್ಣಿನ ದೃಷ್ಟಿ ಹೋಗಿದೆಯಂತೆ. ಇನ್ನು ಸರಿಯಾಗುವುದೋ ಗೊತ್ತಿಲ್ಲ ಅಂದ್ರು.’
ಸ್ತಬ್ಧಳಾದೆ. ಮನಸ್ಸು, ಬುದ್ದಿ ಮೌನ ಆಚರಣೆ. ಕಣ್ಣಾಲಿಗಳ ತುಂಬಾ ನೀರು.
ಮನೆಯೊಳಗೆ ತುಂಬು ಬಸಿರು ಹೊತ್ತು, ನನ್ನ ಸಮಸ್ಯೆಗೆ ಕಾರಣ ಹುಡುಕುತ್ತಿದ್ದೆ. ಗರ್ಭಿಣಿ ಕಾಲದಲ್ಲಾಗುವ ಹಾರ್ಮೋನುಗಳ ಬದಲಾವಣೆಯ ಪರಿಣಾಮ ಇರಬೇಕು. ಆದರೆ ಇದು..ಗಬ್ಬದ ದನ ಅದೇ ಸಮಸ್ಯೆ ಎದುರಿಸುತ್ತಿದೆ. ಮುಂದೆ ಅದು ಎದುರು ಇರುವ ವಸ್ತುಗಳು ಕಾಣಿಸದೆ ಮರ,ಗಿಡ ಡಿಕ್ಕಿ ಹೊಡೆದು ಕೊನೆಗೆ ತನ್ನ ಹಟ್ಟಿಯೊಳಗೇ ಇರುವಂತಾಯಿತು.
ನನ್ನ ಈ ಸಮಸ್ಯೆ ಕಂದ ಹೊಟ್ಟೆಯಿಂದ ಕೈಗೆ ಬರುವುದರೊಂದಿಗೆ ಸುಖಾಂತ್ಯವಾಯಿತು. ಗಂಗೆಗೂ ಪಕ್ಕದಲ್ಲಿ ಮುದ್ದು ಕರು. ಏನೋ ಸಂಶಯ ಬಂದು ಅವಳ ಬಳಿ ಓಡಿದೆ ಮುಖದ ಎದುರು ಕೈ ಆಡಿಸಿದೆ. ಮೇಲೆ ಕೆಳಗೆ ತಲೆ ಆಡಿಸಿ ಒಂದು ಹೆಜ್ಜೆ ಮುಂದೆ ಬಂದಳು. ಕೈಯನ್ನು ಪ್ರೀತಿಯಿಂದ ತನ್ನ ದೊರಗು ನಾಲಗೆಯಿಂದ ನೆಕ್ಕಿದಳು. ಇವಳಗೆ ದೃಷ್ಟಿ ಬಂದಿದೆಯೇ? ಕುತ್ತಿಗೆಗೆ ಕಟ್ಟಿದ ಹಗ್ಗ ಬಿಚ್ಚಿದೆ. ಮೊದಲಿನಂತೆ ವಾರೆವಾರೆ ನಡೆಯದೆ ನೇರ ಹೋಗುತ್ತಿದ್ದಾಳೆ. ಮೊದಲಿನದ್ದೇ ರಾಣಿ ಗಾಂಭೀರ್ಯದ ಠೀವಿ. ಅರೇ, ಇದು ಹೇಗೆ ಸಾಧ್ಯ, ನನಗೂ, ನನ್ನ ಪ್ರೀತಿಯ ಹಸು, ಗಂಗೆಗೂ ಒಂದೇ ಸಮಯದಲ್ಲಿ, ಒಂದೇ ಅನುಭವ!?. ನನ್ನ ಅರಿವಿಗೆ ಮೀರಿದ ಇಂತಹ ಅನುಭೂತಿಯನ್ನು ನೆನೆದಾಗ, ಮೈ ಜುಂ ಎನಿಸುವ ಹಿತ ಮತ್ತು ಏಕತ್ವದ ಭಾವದಲ್ಲಿ ನಾನು ಕರಗುತ್ತೇನೆ.
ಸೃಷ್ಟಿಯ ಪ್ರತಿಯೊಂದು ವಸ್ತು, ಪ್ರಾಣಿ, ಮರ ಗಿಡಗಳಲ್ಲೂ ಚೈತನ್ಯದ ಬೆಳಕಿದೆ. ಅದನ್ನು ಸ್ಪರ್ಶಿಸಲು ಪ್ರೀತಿ ಎದೆಯಲ್ಲಿ ಹಸಿರಾಗಬೇಕು. ನಮ್ಮ ಊರಿನ ಬಳಿಯಲ್ಲಿ ಮಲ್ಲಿಗೆ ಬೆಳೆಯುವ ಒಬ್ಬ ಜೀವ ಪ್ರೀತಿಯ ಬಡ ಮಹಿಳೆಯೊಬ್ಬರನ್ನು ಮಾತನಾಡಿಸಿದ್ದೆ. ಅವರು ಹೇಳುತ್ತಿದ್ದ ಮಾತು ” ಮೇಡಂ,ನಾನು ಯಾವ ಗಿಡದ ಬಳಿ ಹೋಗಿ ಮೃದುವಾಗಿ ಮುಟ್ಟಿ, ಒಲುಮೆಯಿಂದ ಎಲೆಗಳನ್ನು ಸವರಿ ಮಾತಾಡಿಸಿ ಬರುತ್ತೇನೋ, ಆ ಗಿಡ ಒಂದು ಮುಷ್ಠಿ ಜಾಸ್ತಿ ಮೊಗ್ಗೊಡೆದು ಹೂ ಅರಳಿಸುತ್ತೆ! .”
ಎಂತಹ ಅದ್ಭುತ ಈ ಜಗತ್ತು. ಒಂದು ಶಕ್ತಿ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ನಡೆಸುತ್ತಿದೆ. ಆ ಸೂತ್ರದ ಹೆಸರು “ಪ್ರೀತಿ” ಎಂದು ಇರಬಹುದೇ..
ಕವಿ ಮಾತಿನಂತೆ “ಪ್ರೀತಿ ಇಲ್ಲದೆ ಹೂವು ಅರಳೀತೇ..” ನಿಜ, ಪ್ರೀತಿಯನ್ನು ಮೀರಿದ ಆಧ್ಯಾತ್ಮ ಬೇರಿಲ್ಲ ಅಂತ ನನ್ನ ಅನುಭವ. ನಮ್ಮೆಲ್ಲರ ಒಳಗಣ್ಣು ಪ್ರೀತಿ,ಕರುಣೆಗಳನ್ನು ನೇವರಿಸಲಿ.
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ