ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೀಲಿಮಣೆ ವೀರರು(ಕವಿತೆ)

ದೀಪಕ್ ಮೇಟಿ
ಇತ್ತೀಚಿನ ಬರಹಗಳು: ದೀಪಕ್ ಮೇಟಿ (ಎಲ್ಲವನ್ನು ಓದಿ)

ನಾವು ವೀರರು; ನಾವು ಶೂರರು;
ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದ
ಶತ್ರುಗಳ ನಿರ್ನಾಮ ಮಾಡುವೆವು.

ನಾವು ಮಾತ್ರ ಧರ್ಮರಾಜ.
ನಮ್ಮ ನಿಲುವು ಒಪ್ಪಿದರೆ
ದುರ್ಯೋಧನನೂ ಪಾಂಡವ,
ಒಪ್ಪದಿರೆ ಭೀಮನೂ ಕೌರವ

ಎಡದಲ್ಲೂ ನಿಂತು, ಬಲದಲ್ಲೂ ನಿಂತು
ದಿನಂಪ್ರತಿ ಬಡಿದಾಡುವೆವು
ಎಡ – ಬಲಗಳಾಚೆ ನಿಂತವರ ಮೇಲೆ
ನಾವೊಂದಾಗಿ ಮುಗಿ ಬೀಳುವೆವು

ಯಾವ ವಿಷಯವೇ ಇರಲಿ
ಕೈ – ಕಮಲದ ಕದನಕೆ ವಿಷಯಾಂತರ ಮಾಡಿ
ನಮ್ಮದೇ ಸರಿಯೆಂದು ಬಿಂಬಿಸುತ
ವಿಷಯವೇನೆಂಬುದನೇ ಮರೆಸುವೆವು

ಭ್ರಷ್ಚಾಚಾರ, ಅತ್ಯಾಚಾರ, ಮೋಸಗಳಿಂದ
ನೊಂದವರ ನಿಟ್ಟುಸಿರ ಶಾಖಕೆ
ಕಬ್ಬಿಣವು ಕರಗುವುದು
ಕರಗದು ಮಾತ್ರ ನಮ್ಮೀ ಪವಿತ್ರ ಹೃದಯ

ನಾವು ವೀರರು; ನಾವು ಶೂರರು;
ಕೀಲಿಮಣೆ ಕುಟ್ಟಿ ಬರೆವ ಶಬ್ದಗಳಿಂದ
ಶತ್ರುಗಳ ನಿರ್ನಾಮ ಮಾಡುವೆವು.