- ನಸುಕಿನೆಸಳು ೨ - ಸೆಪ್ಟೆಂಬರ್ 10, 2021
- ಮುಂಬಯಿ ಲೋಕಲ್ - ಜುಲೈ 31, 2021
- ಭಾಷಾಂತರ ಬಹುದೊಡ್ಡ ಜವಾಬ್ದಾರಿ - ಅಕ್ಟೋಬರ್ 27, 2020
26.10.2020 ರಂದು ಕನ್ನಡ ವಿಭಾಗ,ಮುಂಬಯಿ ವಿಶ್ವವಿದ್ಯಾಲಯವು ವಿಭಾಗದ ಮುಖ್ಯಸ್ಥರಾದ ಡಾ ಜಿಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಭಾಷಾಂತರವನ್ನು ಕುರಿತಾದ ಉಪನ್ಯಾಸ ಮಾಲಿಕೆಯ ಎರಡನೆಯ ಕಾರ್ಯಕ್ರಮ ಬಹಳ ಮಾಹಿತಿ ಪೂರ್ಣ ಹಾಗೂ ಮೌಲ್ಯಯುತವಾಗಿತ್ತು.ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನಾಡಿನ ಖ್ಯಾತ ಸಾಹಿತಿ ಹಾಗೂ ಅನುವಾದಕಾರರಾದ ಡಾ. ಬಿ. ಜನಾರ್ದನ ಭಟ್ ಅವರು ಭಾಷಾಂತರ ಬೆಳೆದು ಬಂದ ಹಾದಿ, ಭಾಷಾಂತರದ ಅಧ್ಯಯನದ ನೆಲೆಗಳು, ತಾಂತ್ರಿಕ ವಿಧಾನಗಳು ಹಾಗೂ ಅನುವಾದದ ಹಲವು ಪ್ರಕಾರಗಳನ್ನು ಕುರಿತಾಗಿ ಸಾಕಷ್ಟು ವಿಸ್ತಾರವಾದ ಹಾಗೂ ಸ್ಪಷ್ಟವಾದ ಚಿತ್ರಣವನ್ನು ನೀಡಿದರು.
ಅನುವಾದದ ಈ ಪ್ರಕ್ರಿಯೆ ಮೇಲ್ನೋಟಕ್ಕೆ ಯಾವುದೋ ಒಂದು ಪರಭಾಷಾ ಚಿತ್ರವನ್ನು ನೋಡುವಾಗ ಕೆಳಗೆ ಓಡುವ ಅಡಿಬರಹದಂತೆ ಸುಲಭವಾಗಿ ಕಂಡರೂ ತನ್ನದೇ ಆದ ಸಂಕೀರ್ಣತೆಯನ್ನು ಹೊಂದಿರುವುದು ಡಾ. ಭಟ್ ಅವರ ಉಪನ್ಯಾಸದಿಂದ ಮನದಟ್ಟಾಯ್ತು. ಅದರ ಹಿನ್ನೆಲೆಯಲ್ಲಿ ಭಾಷಾಂತರ ಕುರಿತಾಗಿ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಯಸುತ್ತೇನೆ.
ಭಾಷಾಂತರವೆನ್ನುವುದು ಇಂದು ಕೇವಲ ಸಾಹಿತ್ಯದ ಪ್ರಕಾರವಾಗಿರದೆ ಅಧ್ಯಯನವನ್ನು ಬೇಡುವ ಶಾಸ್ತ್ರವಾಗಿ ಬೆಳೆದುನಿಂತಿರುವುದು ಪ್ರಶಂಸನೀಯ. ಆರಂಭದ ದಿನಗಳಲ್ಲಿ ಕೇವಲ ವಿವಿಧ ಭಾಷೆಗಳ ಮಣ್ಣಿನ ಸಂಸ್ಕೃತಿಗಳ, ಆಚಾರ ವಿಚಾರಗಳ ತೌಲನಿಕ ಅಧ್ಯಯನಕ್ಕೆ , ಜಾಹೀರಾತು ಮೊದಲಾದ ವಾಣಿಜ್ಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಅನುವಾದ ಪ್ರಕಾರವು ಗಮನೀಯವಾಗಿ ಬೆಳೆದು ಇಂದು ಸಾಹಿತ್ಯ ಅಧ್ಯಯನದ ವ್ಯಾಪ್ತಿಯನ್ನು ಹೆಚ್ಚಿಸಿರುವುದು ಆರೋಗ್ಯಕರ ಸಂಗತಿಯಾಗಿದೆ. ಆದರೆ ಇಂದಿಗೂ ಅನುವಾದಸಾಹಿತ್ಯವನ್ನು ಸೃಜನಶೀಲ ಸಾಹಿತ್ಯದಿಂದ ಬೇರ್ಪಡಿಸಿ ನೋಡುವ ಮನೋಭಾವ ವಿಪರ್ಯಾಸವಾಗಿಯೇ ಕಂಡೀತು.
ಒಬ್ಬ ಸೃಜನಶೀಲ ಕವಿ ಅಥವಾ ಸಾಹಿತಿಯು ಸೃಷ್ಟಿಯ ವಿಭೂತಿಗಳನ್ನು ತನ್ನ ಕಣ್ಣುಗಳಿಂದ ಕಂಡು, ಅನುಭವಿಸಿ ಕವನ, ಕಥೆಗಳನ್ನು ಸೃಷ್ಟಿಸುವಂತೆ, ಒಬ್ಬ ಚಿತ್ರಕಾರ ತನ್ನೆದುರಿಗೆ ಕುಳಿತ ವ್ಯಕ್ತಿಯ ಚಿತ್ರವನ್ನು ಯಥಾರೂಪವಾಗಿ ಚಿತ್ರಿಸುವಂತೆ, ಪ್ರವಾಸಿಗನೊಬ್ಬ ದೇಶ ವಿದೇಶಗಳಲ್ಲಿ ಸಂಚರಿಸಿ ಅಲ್ಲಿನ ಪಳೆಯುಳಿಕೆಗಳು ಸಾರಿಹೇಳುವ ಐತಿಹಾಸಿಕ, ಚಾರಿತ್ರಿಕ, ಸಾಂಸ್ಕೃತಿಕ ಮಹತ್ವಗಳನ್ನು ಕಂಡು ಕಥನವನ್ನಾಗಿಸುವಂತೆ ಅನುವಾದಕನೂ ಸಹ ತಾನು ಓದಿದ ಸಾಹಿತ್ಯ ಚಿತ್ರಣವನ್ನು ಕಂಡು, ಗ್ರಹಿಸಿ, ಜೀರ್ಣಿಸಿಕೊಂಡು, ಪುನರುಚ್ಛಾರದ ಕಳಂಕ ತಗಲದಂತೆ ಮೂಲಭಾಷೆ ಹಾಗೂ ಸ್ವೀಕಾರಭಾಷೆಯ ಮನೋಭಾವಗಳಿಗೆ ಕುಂದುಬರದಂತೆ ಸೃಷ್ಟಿಸುವುದೂ ಯಾವ ಸೃಜನಶೀಲತೆಗೂ ಕಡಿಮೆಯಲ್ಲವೆಂದೆನಿಸುತ್ತದೆ. ಒಬ್ಬ ಸಾಹಿತಿಗೆ ತನ್ನ ನೆಲದ, ಸಂಸ್ಕೃತಿಯ, ಕಾಲಘಟ್ಟದ ಆಗುಹೋಗುಗಳನ್ನು ತನ್ನ ಸಂವೇದನೆಗಳ ಮೂಲಕ ಸೃಷ್ಟಿಸಿ ದಾಖಲಿಸುವುದು ಮಹತ್ತರ ಜವಾಬ್ದಾರಿ ಎನಿಸಿದರೆ, ಅನುವಾದಕನು ತನ್ನ ಜನರಿಗೆ ಸ್ವೀಕೃತ ಭಾಷೆಯಲ್ಲಿ ವಿಶ್ವವನ್ನು ಪರಿಚಯಿಸುವ ಜೊತೆ ಜೊತೆಗೆ ಎರಡೂ ಭಾಷೆಗಳ ಸಾಹಿತ್ಯವನ್ನು ಅವುಗಳ ಅಸ್ಮಿತೆಯನ್ನು ವಿಶ್ವವೇದಿಕೆಯೊಂದರಲ್ಲಿ ನೆಲೆ ನಿಲ್ಲಿಸುವ, ಜೋಪಾನ ಮಾಡುವ ಮಹತ್ತರ ಜವಾಬ್ದಾರಿಯನ್ನು ಪ್ರದರ್ಶಿಸುತ್ತಾನೆಂದರೆ ತಪ್ಪಾಗಲಾರದು.
ಅಂಗಳದಾಚೆಯ ಪ್ರಪಂಚಕ್ಕೆ ತಲುಪಿಸುವ, ಸಾಹಿತ್ಯ ಕೃತಿಯೊಂದನ್ನು ಸೃಷ್ಟಿಯಿಂದ ಸಮಷ್ಟಿಗೆ ಕೊಂಡೊಯ್ಯುವ ಈ ಕಾರ್ಯಕ್ಕೆ ಅನುವಾದಕಾರನಿಗೆ ದೇಸೀ ಸಂಪ್ರದಾಯ, ಸಂಸ್ಕೃತಿ, ಜಾಯಮಾನಗಳ ಜೊತೆಗೆ ವಾಸ್ತವ ಪ್ರಜ್ಞೆಯೂ ಅತ್ಯಗತ್ಯ. ಇಷ್ಟೆಲ್ಲಾ ಹದವರಿತು ಹೆಚ್ಚುಗಾರಿಕೆಯೂ ಇಲ್ಲದಂತೆ, ಹಿಂಜರಿಕೆಯೂ ಆಗದಂತೆ ಮಾಡುವ ಅನುವಾದ ನಿಜವಾದ ಅರ್ಥದಲ್ಲಿ ಬೌದ್ಧಿಕ ಕಸರತ್ತೇ ಸರಿ.
ಸಾಹಿತ್ಯ ಸೃಷ್ಟಿಯೊಂದರ ಅನುಸೃಷ್ಟಿಯ ಜೊತೆಗೆ ಹೊಸ ಸೃಷ್ಟಿಗೂ ಪ್ರೇರಣೆಯಾಗಬಲ್ಲ ಭರವಸೆಯನ್ನು ಭಾಷಾಂತರ ಜಗತ್ತು ನೀಡಿರುವುದಕ್ಕೆ ಹತ್ತು ಹಲವು ಉದಾಹರಣೆಗಳಿವೆ.
ಹಾಗಾಗಿ ಭಾಷಾಂತರವೆಂಬ ಸಾಹಿತ್ಯ ಪ್ರಕಾರಕ್ಕೂ ಸೃಜನಶೀಲ ಸಾಹಿತ್ಯ ವಲಯದಲ್ಲಿ ಮನ್ನಣೆದೊರೆಯಲಿ, ಹೆಚ್ಚು ಹೆಚ್ಚು ಅನುವಾದ ಕಾರ್ಯಗಳು ನಡೆದು ನಾವೂ ಸಾಹಿತ್ಯ ಮುಖೇನ ವಿಶ್ವದರ್ಶನವನ್ನು ಮಾಡುವಂತಾಗಲಿ ಎಂಬುದೇ ಆಶಯ.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸನ್ಮಾನ