ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸೋ. ನಳಿನಾ ಪ್ರಸಾದ್
ಇತ್ತೀಚಿನ ಬರಹಗಳು: ಸೋ. ನಳಿನಾ ಪ್ರಸಾದ್ (ಎಲ್ಲವನ್ನು ಓದಿ)

ಪ್ರೈಮರಿ ಸ್ಕೂಲಿನಲ್ಲಿ ಓದುವಾಗ ಸದಾ ವಟಗುಡುತ್ತಿದ್ದ, ತಾನೇ ಮಾನಿಟರ್ ಎಂಬಂತೆ ಮೇಲ್ದನಿಯಲ್ಲಿ ಮಾತನಾಡುತ್ತಿದ್ದ ಗೆಳತಿಯನ್ನು ನಮ್ಮ ಮೀನಾಕ್ಷಿ ಟೀಚರ್ ಅದೇನು ಬಾಯಿ ನಿಂದು ಬೊಂಬಾಯಿ ಅಂದಾಗಲೇ ನನಗೆ ಆ ಹೆಸರಿನ ಪರಿಚಯವಾಗಿದ್ದು.‌ಅದೊಂದು  ಶೆಹರವೆಂದಾಗಲೀ ಅಥವಾ ಇನ್ನೊಂದು ರಾಜ್ಯದ ರಾಜಧಾನಿಯೆಂದಾಗಲೀ ತಿಳಿಯದ ವಯಸ್ಸು. ಬೊಂಬಾಯಿ ಎಂದರೆ ಏನೋ ದೊಡ್ಡದು, ಎರಡೂ ಕೈಗಳನ್ನು ಅರಳಿಸಿದರೂ ಸಿಕ್ಕದಷ್ಟು ಅಗಾಧವೆಂಬಂತ ಭಾವ!!

ನಂತರದ ದಿನಗಳಲ್ಲಿ ಮಂಡ್ಯದ ರಸ್ತೆಗಳಲ್ಲಿ ಬಾಂಬೆ ಫ್ಯಾಶನ್, ಮೈಸೂರಿನಲ್ಲಿ ಬಾಂಬೆ ಟಿಫಾನೀಸ್ ನೋಡಿದಾಗಲೂ ಅದೇನೋ ನಮ್ಮದಲ್ಲದ ಉಡುಪು, ನಮಗೊಗ್ಗದ ಊಟ ಸಿಗುವ ಜಾಗವೆಂದೇ ಅನಿಸುತ್ತಿತ್ತೇ ಹೊರತು ಸೋಮನಾಥ ಪುರ, ಬ್ಲಫ್ ನಷ್ಟು ಆಸಕ್ತಿ ಹುಟ್ಟಿಸುತ್ತಿರಲಿಲ್ಲ.

ಸ್ನಾತಕೋತ್ತರ ಪದವಿಯ ಕೊನೆಯ ಸೆಮಿಸ್ಟರ್ನಲ್ಲೇ ಮದುವೆ ನಿಶ್ಚಯವಾದಾಗ ಕೂಡ ಹುಡುಗ ಮುಂಬಯಿಯಲ್ಲಿ ಇದ್ದಾನೆ ಎಂದಾಗಲೂ  ಆಸಕ್ತಿ ಹುಟ್ಟಿಸಿದ್ದು ಮುಂಬಯಿಯ ಆಧುನೀಕತೆಯಾಗಲೀ, ಆಡಂಬರವಾಗಲೀ ಅಲ್ಲ, ನನ್ನ ಸ್ನಾತಕೋತ್ತರ ಪದವಿಯ ವಿಷಯವಾದ ಬಯೋಕೆಮಿಸ್ಟ್ರಿಗೆ ಕಾಶಿ ಯಂತಿದ್ದ TIFR ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಕನಸು ಮೂಡಿಸುವ BARCಯ ಮೆಟ್ಟಿಲೇರುವ ಮಹತ್ವಾಕಾಂಕ್ಷೆ ಜೊತೆಗೆ ಭಾರತ ಭೂಪಟದ ಪಕ್ಕದಲ್ಲಿ ಸದಾ ಗುರುತಿಸುತ್ತಿದ್ದ ಅರಬ್ಬೀ ಕಡಲೆಂಬ ಕಥನ – ಕಾವ್ಯ..

        ತವರೂರೆಂಬ  ಗರ್ಭಗುಡಿಯನ್ನು ಬಿಟ್ಟು ಹೊರಟ ಮನಸ್ಸಿನಲ್ಲಿ   ಹೊಸ ಜನರ, ನೆಲದ ಆತಂಕ, ಭಾವ ತುಮುಲಗಳು ಹೊಯ್ದಾಡುತ್ತಿದ್ದವು. ಪೂನಾ ಬಂದಮೇಲೆಯೇ ಹೊರ ರಾಜ್ಯಕ್ಕೆ ಬಂದ ಅನುಭವವಾಗಿದ್ದು. ಇಲ್ಲಿ ನಾನು ಮುಂಬಯಿಯ  ಭೌಗೋಳಿಕ  ಅಥವಾ ಚಾರಿತ್ರಿಕ ಚಿತ್ರಣವನ್ನು ನೀಡುವ ಉದ್ದೇಶ ನನಗಿಲ್ಲ ಹಾಗೂ ನಾನಿಲ್ಲಿ ಕರ್ನಾಟಕ- ಮಹಾರಾಷ್ಟ್ರ ಎಂಬ ಅಡ್ಡವಾಗುವ ಹಾಗೂ ತೊಡರುವ ಗಡಿರೇಖೆಗಳನ್ನೆಳೆಯುವ ಯಾವುದೇ ರಾಜಕೀಯ ವಿಷಯನ್ನು ಪ್ರಸ್ತಾಪಿಸುತ್ತಿಲ್ಲ.  ಹೊಸದಾರಿ,  ಹೊಸ ಸಾಧನೆಗಳನ್ನು ಗಮ್ಯದತ್ತ ಕೊಂಡೊಯ್ಯುವ  ಸಂಭ್ರಮದಿಂದ ಕುರ್ಲಾ ಎಕ್ಸ್ಪ್ರೆಸ್ ನ  ಗಡಗಡದ ಸಡಗರ ಇಂದಿಗೂ ಕಿವಿಯಲ್ಲಿ ಗುನುಗುತ್ತದೆ. ಭವಿಷ್ಯ ಗರ್ಭದೊಳಗೆ ತೂರಿಬಂದಂತೆ ಮುಂಬಯಿಯನ್ನು ಪ್ರವೇಶಿಸಿದಾಗ ಇಕ್ಕೆಲಗಳಲ್ಲೂ ಹಳೆ‌ಪುರಾಣದಂತೆ ನಿಂತ ಮಾಸಲು ಕಟ್ಟಡಗಳು, ರೈಲು ಹಳಿಯ ಅಕ್ಕ ಪಕ್ಕದಲ್ಲಿ ನಿಂತ ಅಂಗವಿಕಲರಂತಹ ಮುರಿದ ಜೋಪಡಿಗಳು ( ಗುಡಿಸಲುಗಳು) ಅಷ್ಟೇನೂ ಸುಂದರ ಪುರ ಪ್ರವೇಶವೆಂದೆನಿಸಲಿಲ್ಲ. ಕುರ್ಲಾ ಇಂದ ಮುಲುಂಡ್ ಗೆ ಬರುವ ರಸ್ತೆ ನೇರವಾಗಿ, ದಿಟ್ಟವಾಗಿ ನಿಂತಿತ್ತಾದರೂ ತಲೆಯ ಮೇಲೆ ಪ್ರಭಾವಳಿಯಿದ್ದಂತೇನೂ ಕಾಣಲಿಲ್ಲ. ಆದರೆ ದಾರಿಯುದ್ದಕ್ಕೂ ಗೋಚರಿಸುತ್ತಿದ್ದ ಬಿಳುಪಾದ ಚೌಕಗಳು ನಿಂತ ನೀರಿನ ಧ್ಯಾನ ಹರಳುಗಟ್ಟಿದಂತೆ ಉಪ್ಪಾಗುವ ಪರಿಯ ಪರಿಚಯಿಸುತ್ತಿದ್ದವು. ಮೊದಲ ಬಾರಿಗೆ ಮುಂಬಯಿ ರುಚಿ ನೋಡಬೇಕಿನಿಸಿದ್ದು ಆಗ..

          ದೂರದೂರಿನಿಂದ ಬಂದು ಗೊತ್ತಿರದ ಊರಿನಲ್ಲಿ ಪರಿಚಯಸ್ಥರನ್ನು  ಹುಡುಕಿಕೊಂಡು ಹೋಗಿದ್ದು  ಗಣಪ, ಶಿವ, ಶಕ್ತಿಯನ್ನು, ಗುರುರಾಯರನ್ನು.  ಬದಲಾಗಿದ್ದುದು ಊರು, ವಿಳಾಸ ಬೇರೆನಿಲ್ಲ. ಇಷ್ಟು ಹೊತ್ತಿಗಾಗಲೇ ರಾಘವೇಂದ್ರ ಸ್ವಾಮಿ ಮಠದ ಹೆಜ್ಜೆ ನಮಸ್ಕಾರ, ಜವೇರ್ ರಸ್ತೆ ಬದಿಯಲ್ಲಿ ಹರಡಿ, ಬೀಗಿ, ರೆಕ್ಕೆಬಿಚ್ಚಿ, ರಂಗೇರಿಸಿ ಮೆರೆವ ತರಕಾರಿ, ಹಣ್ಣು, ಹೂವು, ಬಳೆ, ಕ್ಲಿಪ್ಪು, ಕಿವಿಯೋಲೆಗಳು , ಪರ್ಸು, ಬಟ್ಟೆ ಬರಿಗಳು , ಪಾನಿ‌ಪೂರಿ, ಕಾಲಾಕಟ್ಟಾ , ವಡಾಪಾವ್- ಪಾವ್ ಬಾಜಿಗಳ ಮೇಳ ತಮ್ಮದೇ ಅಸ್ತಿತ್ವವನ್ನು ಹಾಡುತ್ತಾ ಸಮರ್ಥಿಸಿಕೊಳ್ಳುತ್ತಾ ಬದುಕಿನ‌ ಪಾಠವನ್ನು ಹೇಳಲು ಆರಂಭಿಸಿದ್ದವು.

        ಉದ್ದುದ್ದಕ್ಕೆ ಬೆಳದ ನಗರವನ್ನೊಮ್ಮೆ ರೌಂಡ್ ಹಾಕಿ ಬಂದರೆ ವಸಂತ ಋತುವಿನಲ್ಲಿ ಊರಿನಲ್ಲಿ ನಡೆವ ಜಾತ್ರೆಯಂತೆ.  ಭಾಷೆ – ಬದುಕು, ಸಂಸ್ಕೃತಿ – ಸರಕು ಒಂದೇ ಎರಡೇ…ನೂರಾರು ಬಣ್ಣ!  ಎಲ್ಲರಿಗೂ ತಮ್ಮ ಹರಕೆ ಪೂರ್ತಿಗಾಗಿ  ಉತ್ಸವ ಮೂರ್ತಿಯೆಡಗೆ ಬಾಳೆ – ಜವನ ಗುರಿ ಮಾಡಿ ಎಸೆವ ಸಂಭ್ರಮ – ಗಡಿಬಿಡಿ.ಅಷ್ಟೇ ಅಲ್ಲದೆ ಬಹು ಭಾಷಾ, ಬಹು ಸಂಸ್ಕೃತಿಗಳ ಭಾವನಾತ್ಮಕ ಸಂವೇದನೆಗಳು  ವರ್ಷದುದ್ದಕ್ಕೂ ಹಬ್ಬದಿಬ್ಬಣವಾಗಿ ರಂಗೇರುತ್ತವೆ. ಇಂತಹ ಆಚರಣೆಗಳು  ರಾಜಸೀ ಪ್ರವೃತ್ತಿಯ ಮುಂಬಾ ನಗರಕ್ಕೆ ಸಾತ್ವಿಕ ವರ್ಚಸ್ಸನ್ನು ನೀಡುತ್ತದೆ. ಅದರಲ್ಲೂ ಸುಖ ಕರ್ತಾ ವಿಘ್ನ ಹರ್ತನಾಗಿ ಸಲಹುವ ಗಣಪತಿ ಬಪ್ಪಾ ನನ್ನು ಬರಮಾಡಿಕೊಳ್ಳವ ಸಂಭ್ರಮ ಕಣ್ಣು ಕಟ್ಟುತ್ತದೆ.

ಹೊಸ ಜನ,ಹೊಸ ಜೀವನದ ಹೊಸ್ತಿಲಿನ ಪಡಿಯನ್ನು ಚೆಲ್ಲಿ ಒಳಗೆ ಬಂದವಳಿಗೆ ವೈಯಕ್ತಿಕ ಜೀವನದಲ್ಲಿನ ಹೊಸ ಪಾತ್ರಗಳು, ಪಾತ್ರೆಗಳು, ಹೊಂದಾಣಿಕೆಗಳು, ಆದ್ಯತೆಗಳು, ವ್ರತ- ಕಥೆಗಳು, ಮೆಣಸಿನ ಪುಡಿ- ಹುಳಿ ಪುಡಿ- ಉಪ್ಪಿನ ಕಾಯಿಗಳು, ಮಧುಚಂದ್ರಗಳ ನಡುವೆ ಕುಂಟೆಬಿಲ್ಲೆ ಆಡುತ್ತಾ  ಅರ್ಥ ಕಂಡುಕೊಳ್ಳುತ್ತಿದ್ದೆ. ಮನದ ಮೂಲೆಯಲ್ಲಿ  ವಿದ್ಯಾಭ್ಯಾಸವನ್ನು ಮುಂದುವರೆಸಲಾಗದ್ದಕ್ಕೆ  ನಿದ್ದೆ ಬಾರದ ರಾತ್ರಿಗಳು ಕೂಗು ಹಾಕುತ್ತಲೇ ಇದ್ದವು. ಆದರೆ ನಾನೀಗ ಮೊದಲ ಪಾಠಶಾಲೆಯ ಗುರುವಾಗಿದ್ದೆ.. ಪ್ರಣವ ನನ್ನ ಮಡಿಲನಲ್ಲಿದ್ದ!!

ಮುಂಬಯಿ ನಿಜ ಅರ್ಥದಲ್ಲಿ ಪಾಠಶಾಲೆಯೇ ಹೌದು. ಹೊರಗಿನಿಂದ ನೋಡುವವರಿಗೆ ಆತುರಗಾರನಂತೆ ಕಾಣುವ ಮುಂಬಯಿಯ ಅಂತರಂಗದಲ್ಲಿ ಆಳವಾದ ಆಧ್ಯಾತ್ಮವಿದೆ. ಬಿಸಿಲಿನ ಝಳ, ಕಡಲಿನಾಳದಲಿ ಹಗುರಾಗುವ ಮೀನುಗಳು, ಮುಗ್ಧತೆಯು ಹರಿವಂತೆ ಎಡೆಬಿಡದೆ  ಸುರಿವ ಭಾನು, ಬಿಡಿಕವನಗಳಂತೆ ಬಿಡಿಸಿಟ್ಟರೂ ಒಗ್ಗಟ್ಟಿನ ಹಾಡು ಹಾಡುವ ಚಾಳ್ ಗಳು, ಎರಡು( ಬ್ರೆಡ್) ಪದರಗಳ ನಡುವೆ ಸಿಲುಕಿದರೂ ರುಚಿಯುಣಿಸುವ ವಡಾಪಾವ್  ಸ್ಥಿತ ಪ್ರಜ್ಞತೆಯನ್ನು ಮೆರೆಯುತ್ತವೆ.

     ಮೊದಲಿಗೆ ಮುಂಬಯಿ ನಿಜವಾಗಿಯೂ ಅರ್ಥವಾಗೋಲ್ಲ. ಟೂ ಮೆನಿ ಥಿಂಗ್ಸ್.. ಕಯೋಸ್.. ( chaos) ತೆರದು ಕೊಡಂತೆನಿಸಿದರೂ ಎಲ್ಲವೂ ಅಸ್ಪಷ್ಟ. ಮಳೆ ಬೀಳಬೇಕು, ನೆಲ ತೋಯಬೇಕು,  ಅರ್ಥವಾಗಬೇಕು, ಅನುಸಂಧಾನವಾಗಬೇಕು ಕೊನೆಗೆ ದರ್ಶನವಾಗಬೇಕು. ಎಲ್ಲರೂ ಹೇಳುವಂತೆ ಮುಂಬಯಿ ಜೀವನ ಯಾಂತ್ರಿಕ (ಮೆಕ್ಯಾನಿಕಲ್) ವೆನಿಸಿದರೂ ಧಾವಂತ ಕಲಿಸುವ ಸಮಾಧಾನ, ಸಮಯ ಪ್ರಜ್ಞೆ, ಶಿಸ್ತು, ಸರಳ ಜೀವನ, ಸಹಜ ಮಾಗುವಿಕೆ ತರ್ಕಕ್ಕೆ ಸಿಲುಕದ ಸತ್ಯಗಳನ್ನು ಸೂಚ್ಯವಾಗಿ ಪ್ರತಿಪಾದಿಸುತ್ತದೆ. ಸಪ್ತದ್ವೀಪಾ ವಸುಂಧರೆಯಾದ ಮುಂಬಾದೇವಿ ದಿನದ ದಣಿವಿನಾಚೆಗೂ ಹೆತ್ತ ವಾತ್ಸಲ್ಯಕೋ , ಹೊತ್ತ ಕರುಣೆಗೋ ಪ್ರತಿ ಜೀವಿಯನ್ನೂ ನೇವರಿಸಿ ಮುದ್ದಿಸುತಾಳೆ, ಅವರವರ ಭಾವಕ್ಕೆ ಅವರವರ ಭಕುತಿಗೆ ಒದಗುತ್ತಾಳೆ, ಬದುಕಿನ ಸವಾಲುಗಳ ಜೊತೆಗೆ ಸಾಧ್ಯತೆಗಳನೂ ಉಣಬಡಿಸುತ್ತಾಳೆ.

ಮುಂಬಯಿಯ ಹೆಗ್ಗಳಿಕೆ, ಹೆಗ್ಗುರುತು  ಮುಂಬಯಿ ಲೋಕಲ್ , ಹೆಸರೇ ಹೇಳುವಂತೆ ಸರಳತೆ , ಆಪ್ತತೆಯ ಪ್ರತೀಕ. ಎರಡು ಸಮಾನಾಂತರ ಹಳಿಗಳ ಮೇಲೆ ಸಾಗುವ ಮುಂಬಯಿಗನ ಜೀವನ, ಸಮಾಜದ ಎತ್ತರ ಹಾಗೂ ಕೆಳ ಸ್ತರಗಳ ಪ್ರತೀಕವಾದರೂ ಯಾವುದೇ ತಾರತಮ್ಯವಿಲ್ಲದೆ ತಾವು ಸಂಧಿಸದಿದ್ದರೂ ಪಯಣಿಗನನ್ನು ಗಮ್ಯ ಸೇರಿಸುವ ಪರಿ ಅನನ್ಯವಾದದ್ದು. ಪ್ರತಿನಿತ್ಯ ‌ಮನೆ, ಕಛೇರಿ, ಲೋಕಲ್‌ ನಲ್ಲಿ ‌ಕಳೆವ ಮುಂಬಯಿಗನ ಬಹುಪಾಲು ಸಮಯ ಲೋಕಲ್ ನಲ್ಲೇ. ಮಾರಾಟಕ್ಕೆ ದೊರೆವ 15-20 ರೂಪಾಯಿಯ ಪುಟ್ಟ ಕನಸುಗಳು, ಒಂದು ಹೊತ್ತಿನ ಹಸಿವಿಗುಣಿಸುವ ತರಕಾರಿ, ನಾಲಿಗೆ ಋಚಿ ತಣಿಸುವ ಚಕ್ಕುಲಿ ಓ ಮೌಷಿ, ಓ ಭಾವೂ ..ಎಲ್ಲಾ ಎರಡು ನಿಲ್ದಾಣದ ನಡುವೆ 3-4 ನಿಮಿಷಗಳಲ್ಲಿ ತೆರೆದು ಕೊಳ್ಳುವ, ತನ್ನೆಡೆಗೆ ಸೆಳೆವ ಜಗತ್ತು!! *ಆಮ್ಚೀ ಮುಂಬೈ*

 

      ಮುಂಬಯಿಯ ನಾಗರೀಕತೆ,  ವಾಣಿಜ್ಯ- ವಹಿವಾಟು, ಲವಲವಿಕೆಗಳ ಬಿಸಿಯೇರಿ ಕಡಲಿಂದ ಆವಿಯಾಗುವ ನೀರು ಮೋಡಗಟ್ಟಿ ಮಳೆಯಾಗಿ ಭಾಷಾಂತರವಾಗುವ ಪ್ರಕ್ರಿಯೆ ಬಲು ಸೊಗಸು.ಮುಂಬಯಿ ಸಾಗರ್ ಕಿನಾರೆಯ ಬಗ್ಗೆ ಹೇಳದಿದ್ದರೆ ಉಪ್ಪಿಲ್ಲದ ಊಟದಂತೆ. ಕಡಲೆದುರು ಕಡಲಾಗಿ ನಿಲ್ಲಬೇಕೆನುವ ತುಡಿತ ಬಾಲ್ಯದಿಂದಲೂ. ದಡ ಮುಟ್ಟಿದ್ದು ಇಲ್ಲಿ ಬಂದಮೇಲೆ.  ಜುಹೂ ಬೀಚಿನಲ್ಲಿ  ಅಬ್ಭಾ!  ಭೋರ್ಗರೆವ ಜನಸಾಗರದ ಗದ್ದಲದಲ್ಲಿ ಅವನ ಮೊರೆತಕ್ಕೆ ಕಿವಿಯಾಗುವುದೂ ಒಂದು ಸವಾಲೇ. ಕಣ್ಗೆಕಾಣುತ,ಮನವರಳಿಸುವ

,ಜಿಹ್ವೆಯ ನಲಿದು ನಲಿಸುವ, ರಸಾನುಭವವ ಸಲಿಸಲು  ಚೌಪಾಟಿಯ ಬೀಚಿನಲ್ಲಿನ ತಣಿಯದ ಸುಖಸಲ್ಲಾಪಗಳು.  ಚಿಟ್ ಚಿಟ್ ಚಿಟಕಿ ಹೊಡೆಸುವ  ಚಾಟ್ ಗಳು, ಮಿಸಳ್ – ಪಾವ್- ಬಾಜಿಗಳು, ವಡಾ – ಪಾವ್, ಕಟ್ಟಿಂಗ್ ಚಾ ನಲ್ಲಿ ಮುಳುಗೇಳುವ ಖಾರಿ, ಮಸ್ಕಾ ಮಾರ್ ಕೇ ಗಂಟಲಲಿ ಜಾರಿಕೊಳ್ಳುವ ಬನ್ ಒಂದೇ ಎರಡೇ.

ಈ ನಗರಕ್ಕೆ ಬಹು ಪರಾಕ್ ಹೇಳಲು ನೂರು ನೆಪಗಳು !!

ಮುಂಗಾರೆಂಬುದು  ಇಲ್ಲಿನ ಮಣ್ಣಿನ ಮೌಖಿಕ ಪರಂಪರೆಯಿದ್ದಂತೆ.ತುಂಬಿದ ಘಟದಂತೆ ಸದ್ದು ಮಾಡದೆ, ಹದವಾದ ಒಂದೆಳೆಯ ಸಿಹಿಪಾಕದಂತೆ ಸುರಿವ ಮುಂಗಾರಿನ ತಂತಿಗಳಲ್ಲಿ ಹೊಮ್ಮುವ  ಲಯಬದ್ಧ ಶೃತಿಯಲ್ಲಿ ಮುಂಬಯಿ ಜೀವನಕ್ಕೆ ನಮ್ಮನ್ನು ಒಪ್ಪಿಸುವ, ಒಗ್ಗಿಸುವ ಧಾಟಿಯಿದೆ.

 ದಿನ ನಿತ್ಯದ ದಿರಿಸುಗಳ ಬಗೆಗಾಗಲೀ, ತೋರ್ಪಡಿಕೆಗಾಗಲೀ ಕ್ಯಾರೇ ಅನ್ನದ  ಜನಸಾಗರ ಸಮಸ್ಯೆಗಳೆದುರಾದಾಗ ಒಟ್ಟಾಗಿ ನಿಂತು ಎದೆಯೊಡ್ಡುವ ರೀತಿ, ನೀತಿ ಪ್ರತಿಬಾರಿಯೂ ಸೋಜಿಗವೇ. ಸಮಸ್ಯೆಗಳನ್ನು ಸಮತಟ್ಟಾಗಿಸಿದ ಮೇಲೆ ತೋರುವ ಸ್ಥಿತಿ ಸ್ಥಾಪಕತ್ವ ಮುಂಬಯಿಯ ಮಣ್ಣಿನಲ್ಲಿ ಸದಾ ಆರ್ದ್ರ.

ಹುಟ್ಟು ನೆಲದಲ್ಲಿರುವುದು ಪುಣ್ಯ ಸರಿ. ಆದರೆ ಅದರೊಳಗೆ ಇದ್ದು ಜಗವ ನೋಡುವ ದೃಷ್ಟಿಗೂ ಜಗದಗಲ ಹಬ್ಬಿ  ನೋಡುವ ನೋಟಕ್ಕೂ ಅಂತರವಿದೆ. ಎಲ್ಲಿದ್ದರೂ ಮನುಷ್ಯನ ಗುಣಗಳು ಅವೇ ಆರು.‌ಆದರೆ ಅವುಗಳನ್ನು ಪ್ರತಿಬಾರಿ ಚಿಮ್ಮಿದಾಗ ಮೂಡುವ ಹೊಸ ಕಸೂತಿಯಂತೆ ಹೊಸ ಚಿತ್ರಗಳು ಮೂಡಲು, ಲೋಕಾನುಭವದ ಒರೆಗಲ್ಲಿಗೆ ಉಜ್ಜಿದಾಗ ಹೊಸ ಹೊಳಪು ಮೂಡಲು ಊರಿನಿಂದ ಹೊರ ಬರಬೇಕು. ಇದು ನಮಗೆ ಕಳೆದುಕೊಳ್ಳಲು, ಪಡೆದುಕೊಳ್ಳಲು, ತಗ್ಗಲು, ಬಗ್ಗಲು, ಬೆರೆಯಲು, ಎಲ್ಲರೊಳಗೊಂದಾಗಲು‌, ಎಲ್ಲರೊಳಗೊದಾಗಿಯೂ ವಿಶೇಷವಾಗಿ ನಿಲ್ಲಲು ಅವಕಾಶ ಕಲ್ಪಿಸುತ್ತದೆ.

ಇದುವೆ ಜೀವನ!

ಮುಂಬಯಿ ಮಲಗುವುದಿರಲಿ ತೂಕಡಿಸಿದ್ದೂ ನೋಡಿಲ್ಲ. ಕ್ಷಣ ಕ್ಷಣದ ಆಗುಹೋಗುಗಳಿಗೂ ಲೆಕ್ಕವಿಡುವ, ನಡುರಾತ್ರಿಯಲ್ಲೂ ನಿರ್ಭಿಡೆಯಿಂದ ನಡೆವ ಹುಡುಗಿಯನ್ನು ಕ್ಷೇಮವಾಗಿ ಮನೆಸೇರಿಸುವ ಜವಾಬ್ದಾರಿ ತನದೋ ಎಂಬಂತೆ.ಬೆಂದು, ಬೇಯಿಸುವ ಸೆಕೆಯಲ್ಲೂ, ರಾತ್ರಿಯಿಡೀ ದಣಿವಿಲ್ಲದೆ ಸುರಿವ ಮಳೆಯಲ್ಲೂ  ಸಮಯಕ್ಕೆ ಮುಂಬಯಿ ಲೋಕಲ್ ರೈನ್ ಹಾಗೂ ಟ್ರೈನ್ ತನ್ನ ಪಾಳಿಯನ್ನಾರಂಭಿಸುತ್ತವೆ…

ಬೆಳಗ್ಗೆ 5.33

ಡೊಂಬಿವಲಿ ಯಿಂದ ದಾದರ್ ಗೆ ಹೊರಡುವ ಸ್ಲೋ ಟ್ರೈನ್

ಪ್ಲಾಟ್ ಫಾರಂ ನಂಬರ್ ಎರಡರಿಂದ ಹೊರಡುತ್ತದೆ

ಮೀನಿನ ಬುಟ್ಟಿ ಹೊತ್ತು ಮಲ್ಲಿಗೆ ಮುಡಿದ ರುಕ್ಮಿಣಿ ಮೌಷಿ ನಗೆ ಬೀರುತ್ತಾಳೆ..