- ನನ್ನ ಪ್ರತಿಬಿಂಬ ನೀನು.. - ನವೆಂಬರ್ 6, 2020
- ಪ್ರೇಮಕ್ಕೊಂದೇ ಒಲಿವ ಮಾಯಾಕೋರ - ಆಗಸ್ಟ್ 29, 2020
- ಲವ್ಯೂ….. ಚಿನ್ನು..! - ಜೂನ್ 19, 2020
ನನ್ನ ಪ್ರತಿಬಿಂಬ ನೀನು… ಬೆಳ್ಳಿ ಮೋಡಗಳು ನಿಧಾನವಾಗಿ ಸರಿಯುತ್ತಿರುವಂತೆ ಸೂರ್ಯನ ಕಿರಣಗಳು ಎನ್ನೆದೆಯ ಒಳ ಸೇರಿದಂತಹ ಅನುಭವ. ಎಂಥ..ಪ್ರಜ್ವಲ ತೇಜಸ್ಸು.ರವಿಯಂತೆ ಇಡೀ ನಭವ ಬೆಳಗಬೇಕೆಂಬ ತವಕ.ನನ್ನೊಳಗಿನ ಪ್ರೇಮದ ಬಿಂಬ ಎಲ್ಲಿಹುದೊ ಎಂದಾಗೊಮ್ಮೆ ಕಡಲ ಅಲೆಗಳು ತಾ ಮುಂದು ತಾ ಮುಂದೆಂದು ಹೇಳುವವರಂತೆ ನನ್ನತ್ತ ಬರುವ ಅಲೆಗಳ ದಾಳಿಗೆ ಮೈಯೊಡ್ಡುತ್ತಾ ಕಡಲ ದಂಡೆಲಿ ಹೆಜ್ಜೆ ಇಡುತ್ತಿದ್ದೆ.
ನೀರಲ್ಲಿ ಒಮ್ಮೆ ಶ್ವಾಸಹಿಡಿದು ಮುಳುಗುವವರ ಕಂಡು ನಾನು ಹಾಗೆ ಮಾಡಬೇಕೆಂದು ಸೊಂಟದ ತನಕ ನೀರಿರುವಷ್ಟು ಜಾಗಕೆ ಹೋಗಿ ಮುಳುಗಿದ್ದೆ.ಏನೋ ಸಾಧನೆ ಮಾಡಿದವಳಂತೆ ಕೂತಗಳಿಗೆ ಉಸಿರಾಟದಲ್ಲಿ ಎರುಪೇರಾಗಿ ನೀರಲ್ಲಿ ಬುಡ ಮೇಲಾದೆ.ಗಿರಗಿಟ್ಲೆತರ ತಿರುಗುವಾಗ ಮೂಗು,ಬಾಯಿಗೆ ನೀರು ಹೋಗಿ ಏನೂ ಕಾಣದಂತಾಗಿ, ಇನ್ನೂ ನಾನು ಸತ್ತಂತೆ ಅನ್ನಿಸಿ ಮುಳುಗ ತೊಡಗಿದೆ.ಕಡಲು ತನ್ನೊಳಗೆ ಸೆಳೆಯತೊಡಗಿತ್ತು. ಜೀವದ ಆಸೆ ಮರೆತಂತಾಗಿ ಕೈ ಮೇಲೆ ಮಾಡಲು ಆಗದೆ ಅಲೆಗಳಿಗೆ ಆಹಾರವಾದಂತೆ ಮೇಲೆ ಕೆಳಗೆ ಮುಳುಗುತ್ತಿದ್ದೆ….
ಅಷ್ಟರಲ್ಲಿ ಯಾರೋ ನನ್ನ ಬಲವಾಗಿ ಹಿಡಿದು ಎಳೆದಂತಾಯಿತು.ಬಲೆಯಲಿ ಮೀನು ಸಿಕ್ಕಂತೆ ನಾನು ಮುದ್ದೆಯಾಗಿ ಮಲಗಿದ್ದೆ.ದಂಡೆಯ ಮೇಲೆ ತಂದು ಅಂಗಾತ ಮಲಗಿಸಿ ಎದೆಯ ಒತ್ತಿ ಕುಡಿದ ನೀರು ಹೊರಬರಲು ಪ್ರಯತ್ನಿಸುತ್ತಿದ್ದವರಾರೋ. ಧೀರ್ಘ ವಾಗಿ ಚುಂಬಿಸಿ ಉಸಿರಾಟ ಬರಿಸಿದಂತಿತ್ತು. ಎದೆಯಲ್ಲಿ ಸಿಕ್ಕ ಉಸಿರು ಒಮ್ಮೆಲೆ ಕೆಮ್ಮಿನೊಂದಿಗೆ ಕುಡಿದ ಕಡಲ ಅಮೃತವೂ ಹೊರಬಿದ್ದಿತು.ನನ್ನ ಸ್ಥಿತಿ ಸತ್ತು ಹೋದಂತೆ.ಪುನಃ ಬದುಕುವೆನೆಂಬ ನಿರೀಕ್ಷೆ ಇರದ ಗಳಿಗೆಯಲಿ ದಂಡೆಯ ವಾರಸುದಾರಳಾಗಿ ಬಿದ್ದದ್ದು ಬದುಕಿರುವುದಕ್ಕೆ ಸಾಕ್ಷಿಯೆನಿಸಿ ಕೃತಜ್ಞತೆಯ ಅರ್ಪಿಸಲು ಎಲ್ಲರಿಗೆ ಕೈ ಮುಗಿದೆ.
ಅಲ್ಲೊಬ್ಬರು ನಿಮ್ಮ ಬದುಕಿಸಿದ್ದು ಈ ಹುಡುಗ ನೀವು ಮುಳುಗುತ್ತಿರುವುದನ್ನು ಕಂಡು ತನ್ನ ಪ್ರಾಣವೂ ಲೆಕ್ಕಿಸದೆ ನಿಮ್ಮನ್ನು ಆಳ ಜಾಗದಿಂದ ಹೊತ್ತು ತಂದವನಿಗೆ ಥಾಂಕ್ಯ್ಸ ಹೇಳಿ ಅಂದರು.ಯಾರಂತ ನೋಡಿದರೆ ಅಪರೂಪವೆಂದೆನಿಸುವ ಕಟುಮಸ್ತ,ಬಾಹು ಬಲಿಯಂತಿರುವ ಸುಂದರಾಂಗ ರವಿಯ ತೇಜವನ್ನು ಹೊತ್ತು ತಂದವನಂತೆ ಕಂಗೊಳಸುವ ಯುವಕ ನನ್ನೆ ನೋಡುತ್ತಿದ್ದ.ಅವನ ಕಂಗಳಲ್ಲಿ ನಾನು ಬದುಕಿದ್ದು ಸಂತಸ ತಂದಿತ್ತು.”ಅದೆಲ್ಲ ಬೇಡ ಬಿಡ್ರಿ…ನೀವು ಬಚಾವಾದಿರಲ್ಲ…ಅಷ್ಟು ಸಾಕು”.ನಿಧಾನವಾಗಿ ಮನೆಗೆ ಹೋಗಿ ಅನ್ನುತ್ತ ನನಗೆ ಥಾಂಕ್ಯೂ ಕೂಡ ಹೇಳಲು ಬಿಡದೇ ಗುಂಪಿನಲ್ಲಿ ಮರೆಯಾದ.
—
ಎಲ್ಲರೂ ತಮ್ಮ ತಮ್ಮ ಪಾಡಿಗೆ ಹೊರಟು ಹೋದರು. ನಾನು ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳಲು ಅಲ್ಲೆ ಕುಳಿತೆ. ಎಂಥ ಅನಾಹುತವಾಗುತ್ತಿತ್ತು,ಸ್ವಲ್ಪ ಯಾಮಾರಿದರೂ ಕಡಲೊಳಗೆ ಸೇರಿಬಿಡುತ್ತಿದ್ದೆ ಎಂದು ನಿಟ್ಟುಸಿರು ಬಿಟ್ಟೆ. ನನಗೆ ಮರುಜನ್ಮ ನೀಡಿದವನ ಪರಿಚಯವೂ ಆಗಲಿಲ್ಲ. ಎಂದು ನೊಂದುಕೊಂಡೆ. ಹೇಗೆ ಹುಡುಕಲಿ ಎನ್ನುತ್ತ ಏಳಲು ಕಷ್ಟ ಪಡುವಾಗ ಎಬ್ಬಿಸಲು ಕೈಚಾಚಿದವನ ಕೈಹಿಡಿದು ಎದ್ದು ನಿಂತೆ. ಯಾರೆಂದು ನೋಡಿದರೆ ಅವನೇ ಇವನು. ಕಣ್ಣು ತುಂಬಿ ಬಂದಿತು. ಥಾಂಕ್ಯೂ ಕಣ್ರಿ ಅಂದೆ.ಹಾಗೇನಿಲ್ಲ ನಮ್ಮ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದ. ಬನ್ನಿ ನಿಮ್ಮ ಮನೆಗೆ ಬಿಟ್ಟು ಬರುವೆ.ನಿಮಗೆ ನಡೆಯಲು ಆಗದು ಎಂದು ಸೊಂಟ ಬಳಸಿ ತೋಳ ಹೆಗಲಿಗೆರಿಸಿ ಹೆಜ್ಜೆಯಿಡುವಲ್ಲಿ ಮುಂದಾದ..ನನಗೋ ಅವನ ಸ್ಪರ್ಶದಲಿ ಹದವಾದ ನಡುಕಕೆ ಮೈ ಬೆವೆತು ಭಯವಾಗಿ ‘ನಿಮಗೇಕೆ ತೊಂದರೆ ಸ್ವಲ್ಪ ಹೊತ್ತು ಬಿಟ್ಟು ಹೋಗುವೆ ‘ಎಂದು ಬಿಡಿಸಿಕೊಳ್ಳಲು ಆಗದೆ ಕೊಂಚ ಮಿಸುಕಿದೆ.
ನೋಡಿ ನಿಮ್ಮಿಂದ ಆಗದು ಅಲೆಗಳ ಸೆಳೆತದೊತ್ತಡವು ಎಂಥವನಾದರೂ ಅವನ ಶಕ್ತಿಯ ಕುಂದಿಸುತ್ತೆ.ನೀವು ಹೆಣ್ಣು ಮಕ್ಕಳು ತುಂಬಾನೆ ಮೃದುಕೋಮಲ.ಇನ್ನು ಕೇಳಬೇಕೆ? ಅದು ಹಾಗಲ್ಲರೀ.. ನೀವು ಹಿಡಿದುಕೊಂಡ ರೀತಿಗೆ ಅನ್ನುತ್ತ ತಡವರಿಸಿದೆ.ಓ….ಹಾಗಾ…ಸಾರಿ ಏನ್ ಮಾಡಲಿ ಬಿಡೊಕೆ ಆಗತಿಲ್ಲ.. ಬಿಟ್ಟರೆ ನೀವು ಬೀಳತಿರಾ? ಅದಕ್ಕೆ… ಎನ್ನುತ್ತ ತೋಳಲಿ.. ಮಗುವಿನ ತರ ಎತ್ಕೊಂಡ. ನನಗೆ ಮುಜುಗರ..ಆದರೂ ನಾ ಬಯಸುವ ಅವನಾ ಇವನು ಗೊಂದಲ..ಆದರೂ ಕೇಳಿದೆ.
“ನೀವು ಆವಾಗ ಹೋಗಿಬಿಟ್ಟಿರಿ.ನೋಡಿ ಗುಂಪಿನಲ್ಲಿ ಹೊಗಳುವವರ ಕಂಡರೆ ನಾನಿರಲ್ಲ, ನನಗೆ ಇಷ್ಟವಿಲ್ಲ ಅದಕ್ಕೆ ಹೋದೆ. ಮತ್ಯ್ಯಾಕೆ ಬಂದೆ ಅಂದ್ರೆ ನೀವು ಇನ್ನು ಅಲ್ಲೆ ಇರೋದನ್ನು ನೋಡಿ ಬಂದೆ. ಏನಾದರೂ ತೊಂದರೆ ಆಯಿತಾ ಅಂತ. ಸಾರಿ ನನ್ನ ಕ್ಷಮಿಸಿ ಅಂದ. ಯಾಕ್ರಿ ನೀವೇನು ತಪ್ಪು ಮಾಡಿದಿರಿ ಕ್ಷಮಿಸೋದಕ್ಕೆ, ನಿಮ್ಮ ಕೈ ಕಾಲು ಉಜ್ಜಿದಿನಿ,ಎದೆಯ ಒತ್ತಿದಿನಿ, ಆದರೂ ನೀವು ಉಸಿರಾಡದೆ ಇದ್ದುದಕ್ಕೆ ಹೆದರಿ ನಿಮ್ಮ ಒಪ್ಪಿಗೆಯು ಪಡೆಯದೆ ಧೀರ್ಘಚುಂಬನದ ಮೂಲಕ ಉಸಿರ ನೀಡಿದ ಮೇಲೆ ಉಸಿರಾಡಿದಿರಿ ಅನ್ನುವಾಗ ಅಧರಗಳು ಕಂಪಿಸತೊಡಗಿದವು. ಕೈ ಕಾಲುಗಳಿಗೆ ಕಚಗುಳಿ ಇಟ್ಟಂತಾಗಿ ಮಾತೆ ಬರಲಿಲ್ಲ. ಅವನು ಸಾರಿ ಅನ್ನುತ್ತಿದ್ದ.ನನಗೇನು ಹೇಳಬೇಕು ಅಂತ ಗೊತ್ತಾಗಲಿಲ್ಲ.
ಅವನ ಮಾತು ಇಂಪಾದರೂ ನಾನು ಒಪ್ಪಿರುವೆನೆಂದು ಮತ್ತೇನಾದರೂ ಹೇಳುವನೆಂಬ ಭಯದಲಿ ಸುಸ್ತಾದರೂ ತೋಳ ಜೋಕಾಲಿಯಿಂದ ಇಳಿದು ಇಲ್ಲೆ ಹತ್ತಿರದಲ್ಲಿದೆ ನಮ್ಮ ಮನೆ.ಆಟೋ ಮಾಡಿ ಹೊರಡುವೆ ಎನ್ನುತ್ತ ಬರ ಬರ ಕುಂಟುತ್ತ ಹೊರಟೆ. ಹಲೋ….ಹಲೋ..ಎಂದು ಅವನು ಕರೆಯುತ್ತಿದ್ದ.ನಿಮ್ಮ ಹೆಸರು ಹೇಳಿ ಅಂದರು ತಿರುಗಿ ನೋಡದೇ ಹೆಜ್ಜೆ ಹಾಕುತ್ತಿದ್ದೆ.ನನ್ನ ಬದುಕಿಸಿದವನನ್ನು, ಇದುವರೆಗೂ ನಾ ಕಾಣದ,ಅನುಭವಿಸದ ಸ್ಪರ್ಶ, ಪಿಸು ಮಾತನ್ನು ನೆನೆದು ಎಲ್ಲಿ ಅವನ ನೋಡಿಬಿಟ್ಟರೆ ಪ್ರೀತಿ ಹುಟ್ಟುವುದೋ ಎಂಬ ಉನ್ಮಾದ, ಭಯ,ಆತಂಕ ಒಟ್ಟಿಗೆ ಶುರುವಾಗಿತ್ತು.ಸುಮ್ಮನೆ ಬರಬೇಕು ತಾನೆ? ಇದನ್ನೆಲ್ಲ ಹೇಳುವುದು ಬೇಕಿತ್ತಾ, ಕಡಲಿಗೆ ಇಳಿದಿದ್ದು ನನ್ನ ತಪ್ಪು. ಈಜು ಬಾರದು ಎಂದ ಮೇಲೆ ತಪ್ಪಗೆ ಹತ್ತಿರದ ನೀರಲ್ಲಿ ಮುಳುಗಿ ಎಳೋದು ಬಿಟ್ಟು ಆಳಕೆ ಹೋದರೆ ಎನಾದಿತು?
ಒಂದರ್ಥದಲ್ಲಿ ಒಳ್ಳೆಯದೆ ಆದರೂ ಗುರುತು ಪರಿಚಯವಿಲ್ಲದಿದ್ದರೂ ಜನ್ಮಜನ್ಮದ ನಂಟು ಎಂಬಂತೆ ಬೆರೆತು ಮಾತಾಡುವವನು ನಿಜವಾಗಲೂ ನನಗಾಗಿ ಬಂದವನಾ? ಎಂಬ ಪ್ರೇಮಾನುಭೂತಿ.ಶಾವರ್ ಕೆಳಗೆ ನಿಂತರೂ ಕಡಲಲ್ಲೆ ನಿಂತ ಅನುಭವ.ಜೀವ ಉಳಿದಿದೆಯಲ್ಲ ಎಂಬ ಸಮಾಧಾನ.ಆ ಜೀವಕ್ಕೊಂದು,ಜೀವ ಕಡಲೊಳಗಿಂದ ಉಧ್ಬವಿಸಿತಾ ನನ್ನ ಭ್ರಮೆ.. ಎನ್ನುತ್ತ ಮುಸುಕೆಳೆದು ಮಲಗಿದರೂ ಅವನ ಕಾಳಜಿಯ ಪ್ರತಿಬಿಂಬ ನನ್ನ ಸುತ್ತವೇ ಸುತ್ತುತ್ತಿತ್ತು..ಅವನ ಪ್ರೇಮ ತುಂಬಿದ ಸ್ಪರ್ಶದಲಿ ಮೌನವಾಗಿ ಕಣ್ಣುಮುಚ್ಚಿದೆ.
ಮುಂಜಾವಿನ ರವಿ ಚುಡಾಯಿಸಿದಂತೆ ಕಿರಣಗಳು ನಸು ನಕ್ಕು ಕಣ್ಣರೆಪ್ಪೆಯ ಚುಂಬಿಸುತ್ತಿದ್ದವು.ಪ್ರೇಮದ ಅಮಲು ಹೀಗಿರುತ್ತಾ? ತೇವಗೊಂಡ ಕಂಗಳು ಮೈ ಬಿಸಿಯಾದಂತಾಗಿ ಚಳಿಯು ಬಂದಂತಾಗಿತ್ತು. ಮುಂಬಾಗಿಲ ತೆರೆದಾಗ ಗೇಟಿಗೆ ಹೂ ಗುಚ್ಛವಿದ್ದುದ ಕಂಡು ಆಶ್ಚರ್ಯ. ಸುತ್ತಲೂ ನೋಡಿದೆ ಯಾರ ಸುಳಿವಿಲ್ಲ.ಮುಟ್ಟಲೋ ಬೇಡವೋ ಅನುಮಾನ. ಆದರೂ ಧೈರ್ಯ ಮಾಡಿ ಎತ್ತಿಕೊಂಡೆ. ಹೃದಯದ ಚಿತ್ತಾರ ತುಂಬಿದ ಗುಚ್ಛ ಮನಸ್ಸನ್ನು ಸೂರೆಗೊಂಡಿತು.ಅದರಲ್ಲಿ ಪ್ರೇಮದ ಗುರುತಾಗಲಿ, ಹೆಸರಾಗಲಿ ಇರದೆ. ವಿಶಾಲವಾದ ಕಡಲಿನ ಪೋಟೋ ಇತ್ತು.
ಇದೇನು ಕಳಿಸೋದು ಕಳಿಸಿ,ಹೆಸರಿಲ್ಲದ್ದನ್ನು ಗುರುತಿಸುವುದು ಹೇಗೆ?ಎನ್ನುತ್ತಾ ಚಿಂತೆಗೆ ಬಿದ್ದೆ.ಆಗ ಥಟ್ಟನೆ ಹೊಳೆದಿದ್ದು ಹೋ ,ಅವನಾ? ಮನೆ ಹೇಗೆ ಸಿಕ್ಕಿತು?ಮನಸ್ಸು ಮಾತ್ರ ಅವನಾಡಿದ ಮಾತುಗಳನ್ನು ಮೆಲುಕು ಹಾಕುತ್ತಿತ್ತು. ತುಟಿಗಳು ಗರಿಗೆದರಿ ನಗುತ್ತಿದ್ದವು.ಅರಿವಿಲ್ಲದೆ ನೀಡಿದ ಚುಂಬ ನದ ಸುಖವ ಹೇಳಿದರೆ ಅನುಭವ ಆಗದೆ ಹಿತವೆಂದು, ರೋಮಾಂಚನವೆಂದು ನಂಬುವುದು ಹೇಗೆ?. ಯ್ಯಾಕೋ ಅವನ ನೋಡಬೇಕೆನ್ನಿಸಿತು.ಬೇಡಪ್ಪಾ ಅದೇ ತಪ್ಪಾಗಿ ಬಿಟ್ಟಿತು ಎಂದು ಸುಮ್ಮನಾದೆ.ಪ್ರೀತಿಸುವವ ಎದುರಿಗೆ ಬಂದರೂ ಗುರುತಿಸದ ಪೆದ್ದಿಯೆಂದು ಹೃದಯ ಅರಚುತ್ತಿತ್ತು.
ಸಂಜೆ ಕಡಲ ದಂಡೆಯ ಸುತ್ತ ನನ್ನ ಕಂಗಳು ಮಾತ್ರ ಅವನನ್ನೇ ಹುಡುಕುತ್ತಿತ್ತು.ಪಾಪ್ ಕಾರ್ನ್ ತಗೊಂಡು ತಿನ್ನುತ್ತಾ ಕೂತೆ.ನನ್ನ ಪಕ್ಕದಲ್ಲಿ ಯ್ಯಾರೋ ಬಂದು ಕುಳಿತಂತಾಗಿ ತಿರುಗಿದೆ.ಆಶ್ಚರ್ಯ,ಆನಂದ ಒಟ್ಟೊಟ್ಟಿಗೆ ಏನ್ರಿ ನೀವು ಹೆದರಿಸಿ ಬಿಟ್ಟಿರಿ. ಹುಸಿಗೋಪದಿಂದ ನುಡಿದೆ.ಮತ್ತೆ ಏನ್ರಿ ನೀವು ಅಷ್ಟು ತಲ್ಲೀನರಾಗಿ ಕುಳಿತಿದ್ದಕ್ಕೆ ಡಿಸ್ಟರ್ಬ್ ಮಾಡಬಾರದು ಅಂತ ಕುಳಿತೆ ಸಾರಿ ಕಣ್ರಿ ಎಂದು ಕಿವಿ ಹಿಡಿದಿದ್ದ ನ್ನು ನೋಡಿ ನಗು ಬಂತು. ನೀವೆನ್ರಿ ಮಕ್ಕಳ ತರಾ ಸಾರಿ ಕೇಳತಿರೀ?
ನನ್ನ ಜೀವ ಕಾಪಾಡಿದ್ದಕ್ಕೆ ಥಾಂಕ್ಯೂ ಅಂದೆ. ಇಟ್ಟುಕೊಳ್ಳೊಕೆ ಜಾಗ ಇಲ್ಲ ಕಣ್ರಿ.ಅಷ್ಟೊಂದು ಥಾಂಕ್ಯೂ ಹೇಳಬೇಕೆಂದರೆ ನಾನು ಹೇಳಿದ ಹಾಗೆ ಮಾಡರಿ. ನನಗೊಂದು ಮುತ್ತು ಕೊಡಿ ಸಾಕು ಈ ಬಡಜೀವಕೆ.ಅಯ್ಯೋ ದೇವರೆ ನೀವೆನ್ರಿ ಸಿದಾ ಮುತ್ತಿಗೆ ಬರತಿರಾ? ಅಲ್ಲ ಕಣ್ರಿ ನಿಮ್ಮ ಬದುಕಿಸಿದ್ದು ನನಗಾಗಿ ತಿಳಿತಾ? ನಾನು ಮಾತಾಡೋದು ನಿಮಗೆ ಇಷ್ಟ ಇಲ್ಲವಾ? ಹೇಳಿ ಬಿಡಿ ಇನ್ನೆಂದು ಮಾತಾಡಿಸಲ್ಲ ಬೈ ಎಂದು ಹೊರಟೆ ಬಿಟ್ಟ. ನನಗೆ ಆಶ್ಚ ರ್ಯ.ನಾನೇನು ಹೇಳಿಲ್ಲ, ಆದರೂ ಓಲೈಸಬೇಕಿತ್ತು ಸಮಯ ಕೊಡದೇ ಹೀಗೆ ನಡಕೊಂಡರೆ ನಾನೇನು ಮಾಡಲಿ? ಹುಡುಗರು ಹೀಗೂ ಇರತಾರಾ? ಆದರೆ ಅವನು ಹೋಗುತ್ತಿದ್ದರೂ ಒಮ್ಮೆಯು ತಿರುಗಿ ನೋಡದಿರುವುದು ವಿಶೇಷವೆನಿಸಿತ್ತು.
ಅವನಿಗೆ ನನ್ನ ಮೇಲೆ ಪ್ರೀತಿ ಆಗಿದ್ದರೆ ಹೀಗೆ ಮಾಡತಿದ್ದನಾ ? ಸುಮ್ಮನೆ ನಾನೇ ನೂರೆಂಟು ಕನಸು ಕಂಡೆ. ಸಧ್ಯ ಅದು ಸುಳ್ಳಾಯಿತಲ್ಲ ನಿಟ್ಟುಸಿರು ಬಿಟ್ಟೆ.ಅವ ಹಾಗೆ ಹೋಗಬಾರದಿತ್ತು.ನನಗೆ ಆತುರ ಜಾಸ್ತಿ ಅನ್ನಿಸಿತು.ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನನ್ನ ನೋಡಬೇಕಿತ್ತು ವಿರಹದ ವೇದನೆ ಅರ್ಥ ಆಗತಿತ್ತು.ನಿಜವಾದ ಪ್ರೀತಿ ಸಿಗಲು ಅದೃಷ್ಟ ಬೇಕು.ನಾನು ನತದೃಷ್ಟೇ ಎಂದು ಅಸಮಾಧಾನದಿಂದ ಹೊರಡಲು ಅನುವಾದೆ..ಕಂಗಳಲಿ ಜಲಧಾರೆ ಜಿನುಗುತ್ತಿತ್ತು…
ಮೂಕ ವೇದನೆ ಮೌನವಾಗಿ ಆವರಿಸಿದಂತೆ ಅವನತ್ತ ವಾಲಿದೆ.ಅವನ ಮುಖದಲ್ಲಿ ಲವಲವಿಕೆ ಕಾಣುತ್ತಿತ್ತು. ನೀವೇನ್ರಿ ಹೋದ್ರಿ ಅನ್ನೊತನಕ ಪ್ರತ್ಯೇಕ ಆಗಿಬಿಡತಿರಿ. ನನಗೆ ಎನೋ ಆಗತಿದೆ ಕಣ್ರಿ… ಅಲ್ಲರೀ ನಾನು ಹೋದರು ನೀವು ಕರಿಲೇ ಇಲ್ಲ.ನಿಮಗ ಎನು ಅನ್ನಿಸಲಿಲ್ಲವಾ? ನನಗೆ ನಿಮ್ಮ ಜೊತೆ ಇರಬೇಕು, ಮಾತಾಡಬೇಕು,ಅನ್ನೊ ಆಸೆ ಇದೆ.ಹೇಗೆ ಹೇಳಲಿ? ನಿಮ್ಮ ತೋಳಲಿ ಬಂಧಿಸಿದಾಗ ನನಗಾದ ವೇದನೆ ನಿಮಗೂ ಆಗಿದೆಯಂತ ಭಾವಿಸಿದ್ದೆ.ಹುಡುಗರು ಹೇಳಬಿಟ್ಟರೆ ನಾಳೆ ಅದನ್ನೇ ಟಾರಗೇಟ್ ಮಾಡಿ ಎನಾದರೂ ಸಮಸ್ಯೆ ಆದಿತು ಎಂಬ ಭಯ ಕಣ್ರೀ. ನಿಮ್ಮನ್ನು ನೋಡತಾನೆ ಇರಬೇಕು ಅನ್ನಿಸಿದೆ ನಿದ್ದೆ,ಕನಸು ಎಲ್ಲವನ್ನು ಕದ್ದಿರುವ ನಿನ್ನ ಬಿಡಲ್ಯಾಂಗ ಹೇಳ್ರೀ…
ಸನಿಹದಲಿ ಕೂತು ಪಿಸುಗುಟ್ಟುವ ಅವನ ಮಾತು ಹಿತವೆ ನಿಸಿತು.ಒಮ್ಮೊಮ್ಮೆ ಹುಡುಗರು ಇಷ್ಟು ಸಾಚತನ ತೋರಿಸುವರಾ?ನಂಬೋದು ಕಷ್ಟ.ಇರಲಿ ಎಲ್ಲರೂ ಕೆಟ್ಟವರಾದರೆ ಜಗತ್ತು ನಡಿ ಬೇಕಲ್ಲ.ಅವನ ತಳಮಳ ಅರಿವಾದರು ನಕ್ಕು ಬೇಕಂತಲೇ ಬೈ ಎಂದೆ.ಮನಸ್ಸು ಕೂಗಿ ಹೇಳುತ್ತಿತ್ತು ಒಮ್ಮೆ ‘ಅಪ್ಪಿ ಮುತ್ತಿಡುವ ಆಸೆಯಾಗಿದೆ ಕಣೋ’…ಎಂದು ಹೇಳಬೇಕೆನ್ನಿಸಿದರೂ ತುಟಿಕಚ್ಚಿ ಹಿಡಿದೆ..ಎದೆಬಡಿತದ ಸದ್ದು ಆತಂಕ ಸೃಷ್ಟಿಸಿ,ಮೈ ಬೆವರುತ್ತಿತ್ತು ಮಾತು ಬಾರದೆ ನಿಂತವಳಿಗೆ
“ನೀನು ಕೋತಿತರಾ ಇದ್ದಿಯಾ,ಮತ್ತು ಕೋತಿ ಹಾಗೆ ಆಡತಿಯಾ? “ಅಂದ. ಹೌದು ನಾ ಕೋತಿನೇ ಎನ್ರೀ ಈಗ.ನನ್ನ ಮಾತಿಗೆ ಅವನ ತಾಳ್ಮೆ ಮೀರಿತ್ತು. ತವಕದ ಅಲೆಗಳು ಕಡಲದಂಡೆಯ ಅಬ್ಬರಿಸಿದಂತೆ ಬಡಿದೆಚ್ಚರಿಸುತ್ತಿತ್ತು.ಇನ್ನೂ ಆಗಲ್ಲ ಎಂಬಂತೆ ಮಂಡಿಯೂರಿ ಗುಲಾಬಿ ನೀಡು ತ್ತಾ ಐ ಲವ್ಯೂ ಅನ್ನುವ ಅವನ ಮುದ್ದು ಮುಖ ಪ್ರೇಮದ ಹೊರತು ಏನನ್ನು ಹೇಳುತ್ತಿರಲಿಲ್ಲ.ವಿರಹದ ತಾಪಕೆ ದೇಹ ಮೆತ್ತ ಗಾದಂತೆ ಕಾಣುತ್ತಿತ್ತು. ಒಲ್ಲೆಯೆನ್ನಲಾಗದೇ…ಗುಲಾಬಿ ಸ್ವೀಕರಿಸಿದೆ. ಅಷ್ಟೇ…ಮೇಣದಂತೆ ಅವನ ತೋಳಿನಲ್ಲಿ ಕರಗಿದ್ದು ಗೊತ್ತಾಗಲಿಲ್ಲ.ಮುತ್ತಿನ ಮಳೆಯೇ ಆರ್ಭಟದ ನಡುವಯೇ….
ಕಡಲಿಗೊಮ್ಮೆ ಚುಂಬಿಸಿ…ಥಾಂಕ್ಸ್ಯ ಕಡಲೇ,ನಿನ್ನೊಡಲು ಉಪ್ಪಾದರೂ,ಈ ಪ್ರೀತಿಯ ಮುತ್ತ ನನಗಾಗಿ ನೀಡಿದೆ.ನಿಜ ಕಣೇ ನೀನು ಎಲ್ಲಿ ತಿರಸ್ಕರಿಸಿ ಬಿಡುವಿಯೆಂಬ ಭಯ ಕಾಡುತ್ತಿತ್ತು.ನಿನ್ನ ಸ್ಪರ್ಶ ಮಾಡಿದಾಗಿಂದ ನನಗೆ ನಿನ್ನ ಬಿಟ್ಟು ಬೇರಾರು ಬೇಡ ಅನ್ನಿಸಿದೆ.ಲವ್ ಆಗಿದೆ ಅಂತ ಹೇಗೆ ಹೇ ಳುವುದು? ನೀನು ತಪ್ಪು ತಿಳಿದರೆ? ನಿಜ ಹೇಳು ನನ್ನ ಪ್ರೀತಿ ಒಪ್ಪಿರುವಿಯಾ? ಎಂದು ಕಂಗಳಲ್ಲಿ ತನ್ನ ಪ್ರತಿಬಿಂಬ ಮೂಡಿಸುತ್ತ “ನನ್ನ ಹೃದಯದ ಪ್ರತಿಬಿಂಬ ನೀನು” ಎನ್ನು ತ ಮೆಲ್ಲುಸಿರ ನೀಡಿದವನ ಬಿಡಲಾದಿತೇ, ಕೋಟಿಗೊಬ್ಬ ಇಂಥವ. ಧೈರ್ಯ ಮಾಡಿ ಅವನ ಒರಟಾದ ಗಲ್ಲಗಳಿಗೆ ಮುತ್ತನಿಟ್ಟು ಐ ಲವ್ಯೂ ಟೂ ಎಂದೆ.ಹೆಸರಿಲ್ಲದವರ ಮುಂದೆ ಕಡಲು ಹರ್ಷದಿಂದ ಗರ್ಜಿಸುತ್ತಿತ್ತು.ಆಕಸ್ಮಿಕವೋ ನಾನರಿಯೇ ಪ್ರೇಮದ ಗಾಳಿಪಟ ಬಾನೆತ್ತರಕ್ಕೆ ಹಾರುತ್ತಿತ್ತು.
ಬಯಸದೇ ಬಂದ ಭಾಗ್ಯ.
ತೋಳನು ದೋಣಿಯಂತಾಗಿಸಿ ಅದರಲಿ ನನ್ನ ಕುಳ್ಳಿರಿಸಿ ಕೊಂಡು.ನನ್ನರಸಿ ನೀನು.ನಿನಗೆ ಈಜು ಕಲಿಸುವೆ ಬಂಗಾರಿ ಎಂದು ಎದೆಗಪ್ಪಿಕೊಂಡಾಗ ಕಡಲ ಪ್ರೇಮ ನನ್ನೊಳಗೆ ಅವಿತಂತಾಗಿತ್ತು.ಕಡಲಿನ ಅಲೆಗಳತ್ತ ಹೆಜ್ಜೆ ಹಾಕಬೇಕೆನ್ನು ತ್ತಿರುವಾಗ, ಒಂದು ಕ್ಷಣ ಭೂಕಂಪವಾದಂತೆ ಧಡಲ್ ಎಂದು ಮೈ ಮೇಲೆ ಬೆಕ್ಕು ಬಿದ್ದ ಸದ್ದಿಗೆ ಗಲಿಬಿಲಿಗೊಂಡು ಎಚ್ಚರವಾದೆ. ಕನವರಿಕೆಯ ಸೊಂಪಾದ ಮಂಪರಿನಲ್ಲಿ ಪ್ರೇಮಿಯ ಪಡೆದ ಧನ್ಯತಾ ಭಾವ…ಕನಸು ನನಸಾಗಿದ್ದರೆ ಎಷ್ಟು ಚೆನ್ನ ಅನ್ನಿಸದಿರಲಿಲ್ಲ……..
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ