- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಕಳೆದ ವಾರ ಅಂಕಣದ ಮೊದಲನೆಯ ಭಾಗದಲ್ಲಿ, ಕಾಲಾನುಕ್ರಮದಲ್ಲಿ ಕ್ಷೀಣಿಸಿದ ನಮ್ಮ ಪರಿಸರದ ಬಗ್ಗೆ ನನ್ನ ಕಾಳಜಿಯನ್ನು ವ್ಯಕ್ತ ಪಡೆಸಿದ್ದೆ. ಪರಿಸರವನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಬಿಶ್ನೋಯಿ ಜನಾಂಗದವರ ಕುರಿತು ಉಲ್ಲೇಖಿಸುತ್ತಾ, ಪರಿಸರವನ್ನು ಕಾಪಾಡಲು ಅವರು ಹೆಣಗುತ್ತಿದ್ದು, ನಿಸರ್ಗದ ಸಂರಕ್ಷಣೆಯಲ್ಲಿ ಅವರು ಮಹತ್ತರವಾದ ಯೋಗದಾನ ಮಾಡುತ್ತಿರುವ ಬಗ್ಗೆ ಕೆಲವು ಮಾತುಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೆ.
ಬಿಶ್ನೋಯಿ ಜನರು ನಿತ್ಯ ಜೀವನದಲ್ಲಿ ಪರಿಸರದ ಸೂತ್ರಗಳನ್ನು ಅಳವಡಿಸಿಕೊಂಡ ವಿಷಯದ ಮೇಲೆ ಹಾಗೂ ಇದರಿಂದ ಪ್ರೇರಿತಗೊಂಡ ಸುಂದರಲಾಲ್ ಬಹುಗುಣ ಅವರ ‘ ಚಿಪ್ಕೋ’ ಆಂದೋಲನದ ಬಗ್ಗೆ, ಅಂಕಣದ ಈ ಭಾಗದಲ್ಲಿ ನಿಮ್ಮ ಮುಂದೆ ಪ್ರಸ್ತುತ ಪಡೆಸುತ್ತಿದ್ದೇನೆ.
ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ಮರಗಳನ್ನು ಸಂರಕ್ಷಿಸಲು ಸುಂದರಲಾಲ್ ಬಹುಗುಣ ಅವರು ಪ್ರಾರಂಭಿಸಿದ ‘ ಚಿಪ್ಕೋ’ ಆಂದೋಲನದಕ್ಕೆ ಮೂಲ ಪ್ರೇರಣೆ ಅಮೃತಾ ದೇವಿ ಬಿಶ್ನೋಯಿ ಎಂಬ ಬಿಶ್ನೋಯಿ ಜನಾಂಗದ ಮಹಿಳೆಯ ತ್ಯಾಗ ಬಲಿದಾನಗಳು.
ಕೆಲವು ದಶಕಗಳ ಹಿಂದೆ ರಾಜನ ಆದೇಶದಂತೆ ಅವನ ಭಟರು ಊರಲ್ಲಿ ಮರಗಳನ್ನು ಕಡಿಯಲು ಬಂದಾಗ ಅದನ್ನು ಪ್ರತಿಭಟಿಸಿದ ಅಮೃತಾ ದೇವಿ ಬಿಶ್ನೋಯಿ ಅವರ ಶಿರಚ್ಛೇದನ ಮಾಡಲಾಯಿತು. ತಮ್ಮ ತಾಯಿ ಮರವನ್ನು ಉಳಿಸುವಗೋಸುಗ ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವದನ್ನು ನೋಡಿದ ಅಮೃತಾ ದೇವಿಯವರ ಮಕ್ಕಳು ಸಹ ಮರಗಳನ್ನು ರಕ್ಷಿಸುತ್ತಾ ತಮ್ಮ ಅಸುಗಳನ್ನು ನೀಗಿದರು.
ಇದನ್ನು ನೋಡಿ ದಿಗ್ಭ್ರಾಂತರಾಗಿ ಆಕ್ರೋಶಗೊಂಡ ಸುತ್ತಲಿನ ಹಳ್ಳಿಯ ಜನರು ಮುಂದಾಗಿ ಮರಗಳನ್ನು ಸಂರಕ್ಷಿಸಲು ಅವುಗಳನ್ನು ತಬ್ಬಿಕೊಂಡರು. ಇದರಿಂದ ಕೋಪಗೊಂಡ ರಾಜ ಭಟರು ಸುಮಾರು 300 ಜನರನ್ನು ಮರಗಳ ಜತೆಗೇ ಕಡಿದು ಹತ್ಯೆ ಮಾಡಿದರು. ವೃಕ್ಷಗಳನ್ನು ರಕ್ಷಿಸುವಗೋಸುಗ ತಮ್ಮ ಪ್ರಾಣಗಳನ್ನೇ ತ್ಯಾಗ ಮಾಡಿದ ಹಳ್ಳಿಯ ಜನರ ವಿಷಯ ತಿಳಿದಾಗ ರಾಜನಿಗೆ ನಾಚಿಕೆ ಆಗಿ ಅವನು ಪಶ್ಚಾತಾಪ ವ್ಯಕ್ತ ಪಡಿಸಿ ಬಿಶ್ನೋಯಿ ಜನಾಂಗದವರಲ್ಲಿ ಕ್ಷಮೆ ಯಾಚಿಸಿದನು. ಮರಗಳನ್ನು ಕಡಿಯುವದು ಮತ್ತು ಬಿಶ್ನೋಯಿ ಪ್ರಾಂತದಲ್ಲಿ ಅರಣ್ಯ ಮೃಗಗಳ ಬೇಟೆ ಆಡುವದು ಅಪರಾಧವೆಂದು ನಿಶೇಧಾಜ್ಞೆಯನ್ನು ಜಾರಿ ಮಾಡಿದನು.
ಅಮೃತಾ ದೇವಿ ಅವರ ತ್ಯಾಗ ಬಲಿದಾನಗಳನ್ನು ಗುರ್ತಿಸಿ ಭಾರತ ಸರ್ಕಾರ
‘ ಅಮೃತಾ ದೇವಿ ಬಿಶ್ನೋಯಿ ಸ್ಮೃತಿ ಪರ್ಯಾವರಣ ಅವಾರ್ಡ್’
ಪ್ರಶಸ್ತಿ ಯನ್ನು ಸ್ಥಾಪಿಸಿತು. ಈ ಪ್ರಶಸ್ತಿಯನ್ನು ಭಾರತ ಸರ್ಕಾರ ಚಿಪ್ಕೋ ಆಂದೋಲನದ ರೂವಾರಿಗಳಾದ ಸುಂದರ್ ಲಾಲ್ ಬಹುಗುಣ ಅವರಿಗೆ, ಪರಿಸರದ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಮತ್ತು ಅದರ ಸಂರಕ್ಷಣೆಗಾಗಿ ಗೈದ ಅವರ ಸಾಧನೆಗಳನ್ನು ಗುರ್ತಿಸಿ ನೀಡಿ ಗೌರವಿಸಿತು.
ಬಿಶ್ನೋಯಿ ಪಂಥವನ್ನು 1485 ರಲ್ಲಿ ಸಂತ ಗುರು ಜಂಭೇಶ್ವರ ಎಂಬವರು ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿ ಸ್ಥಾಪಿಸಿ ಚಾಲನೆ ನೀಡಿದರು. ಪರಿಸರದ ಬಗ್ಗೆ ಪ್ರೇಮ, ಅದರ ಕುರಿತಾಗಿ ಕಳಕಳಿ ಮತ್ತು ಅದನ್ನು ರಕ್ಷಿಸುವ ಧ್ಯೇಯ ಉಳ್ಳ ಬಹು ವಿರಳವಾದ ಧಾರ್ಮಿಕ ಪಂಥ ಇದು ಎಂದು ನಿಸ್ಸಂದೇಹವಾಗಿ ಹೇಳಬಹುದು. ದೂರದೃಷ್ಟಿಯಿಂದ ಕೂಡಿದ ಈ ಧರ್ಮ ಪಂಥದ ಗುರುಗಳಾದ ಜಂಭೇಶ್ವರ್ ಜಿ ಅವರು ಬಿಶ್ನೋಯಿ ಪಂಥಕ್ಕೆ 29 ನೀತಿಗಳ ಸಂಹಿತೆಯನ್ನು ಪಾಲಿಸಲು ಒಂದು ವೇದಿಕೆಯನ್ನು ಸ್ಥಾಪಿಸಿದರು. ಬಿಶ್ ಅಂದರೆ 20, ನೊಯಂದರೆ 9, ಎರಡೂ ಸೇರಿ ಒಟ್ಟು 29 ಧಾರ್ಮಿಕ ಆದೇಶಗಳನ್ನೊಳಗೊಂಡ ತತ್ವಗಳ ಪಾಲನೆಯನ್ನು ಬಿಶ್ನೋಯಿ ಜನಾಂಗಕ್ಕೆ ಉಪದೇಶ ಮಾಡಲಾಯಿತು. ಇವುಗಳಲ್ಲಿ 6 ತತ್ವಗಳು ಪ್ರಾಣಿ ದಯೆ ಮತ್ತು ನಿಸರ್ಗದ ಸಂರಕ್ಷಣೆಗೆ ಸಂಬಂಧ ಪಟ್ಟಂಥವು.
ಅದರಲ್ಲಿ ಎರಡು ಪ್ರಮುಖವಾದ ತತ್ವಗಳು ಈ ರೀತಿ ಸಾರುತ್ತವೆ:
1.ಜೀವ ದಯಾ ಪಾಲನಿ-
ಅಂದರೆ ಸಕಲ ಪ್ರಾಣಿಗಳಲ್ಲಿ ದಯಾ ಭಾವವನ್ನು ತೋರಿ
- ರುಂಖ್ ಲಿಲಾ ನಹಿ ಘವೆ-
ಹಸಿರು ಮರಗಳನ್ನು ಕಡೆಯ ಬೇಡಿ
ಈ ತತ್ವಗಳನ್ನು ಶತಮಾನಗಳ ಹಿಂದೆ ಸಾರಿದ್ದರೂ , ಈಗಲೂ ಬಿಶ್ನೋಯಿ ಜನಾಂಗ ಇದನ್ನು ಪಾಲಿಸುತ್ತಾ ಬಂದಿದೆ. ಅವರ ಜೀವನ ಶೈಲಿಯೂ ಈ ತತ್ವಗಳ ಆಧಾರದ ಮೇಲೆ ರೂಪುಗೊಂಡಿರುವದು ನಮಗೆ ಈಗಲೂ ಗೋಚರವಾಗುತ್ತದೆ.
ಅವರ ಜೀವನ ಶೈಲಿಯ ಕೆಲವು ಪ್ರಮುಖ ವಿಷಯಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಬಿಶ್ನೋಯಿ ಜನಾಂಗ ಮರಗಳನ್ನು ಕಡೆಯುವದಿಲ್ಲ. ಸಕಲ ಜೀವರಲ್ಲಿ ಪ್ರೀತಿ ಹಾಗೂ ದಯೆ ತೋರುವರು.
ಕಟ್ಟಿಗೆ ಬೇಕಾದರೆ ಮರ ಕೆಡವುದಿಲ್ಲ. ಮರಗಳು ತಾವಾಗಿಯೇ ಬೀಳುವ ತನಕ ಬಡಗಿಯೂ ತಾಳ್ಮೆಯಿಂದ ಕಾಯುವನು.
ಅಂಚಿನಳಿವಿನಲ್ಲಿರುವ ಎಷ್ಟೋ ವನ್ಯ ಮೃಗಗಳು ಇವರ ಪ್ರಾಂತದಲ್ಲಿ ನಿರ್ಭೀತಿಯೀಂದ ಓಡಾಡುತ್ತವೆ. ಇದಕ್ಕೆ ಅವರು ತೋರುತ್ತಿರುವ ಪ್ರಾಣಿ ಪ್ರೇಮವೇ ಕಾರಣ.
ಮಳೆ ನೀರನ್ನು ಉಳಿಸಿ ಶೇಖರಿಸಿ ಇಡುವ ‘ಮಳೆ ನೀರಿನ ಸುಗ್ಗಿ’ ( water harvesting) ಸುದ್ದಿ ಮಾಡುವ ಮೊದಲೇ,ಈ ಜನಾಂಗದವರು ಮಳೆನೀರನ್ನು ಹಿಡಿದಿಡಲು ಟ್ಯಾಂಕ್ ಗಳನ್ನು ಕಟ್ಟಿದ್ದರು.
ಇಂಧನಕೆ ಹಸಿರು ಮರಗಳ ಬಳಕೆ ಕಮ್ಮಿ ಮಾಡಲು ಆಕಳು ಸೆಗಣಿಯಿಂದ ತಟ್ಟಿದ ಕುರುಳನ್ನು ಉಪಯೋಗ ಮಾಡುವರು.
ವನ, ವನ್ಯ ಮೃಗಗಳು ಮತ್ತು ಮಾನವರು ಸೇರಿ ಸಮನ್ವಯದ ಬಾಳು ಬಾಳಲು ಸಾಧ್ಯ ಎಂದು ಬಿಶ್ನೋಯಿ ಜನಾಂಗ ಯಾವ ಸದ್ದು ಗದ್ದಲವಿಲ್ಲದೆ ನಿರೂಪಿಸಿ ನಮ್ಮ ಮುಂದೆ ಮಾದರಿಯಾಗಿ ನಿಂತಿದೆ. ಈ ತತ್ವಗಳನ್ನು ನಾವೆಲ್ಲರೂ ಭಾಗಶಃ ಪಾಲಿಸಿದರೂ ನಿಸರ್ಗದ ಸಂರಕ್ಷಣೆಯಲ್ಲಿ ನಮ್ಮ ಯೋಗದಾನ ಮಾಡಿದಂತಾಗುತ್ತದೆ.
ಬಿಶ್ನೋಯಿ ಪಂಥದ ಮತ್ತೊಂದು ಅತಿ ಮುಖ್ಯವಾದ ತತ್ವ ;
‘ಅಮರ್ ರಖಾವೆ ಥತ್ ‘ –
ಅಂದರೆ ‘ನಿರ್ಲಕ್ಷ್ಯ ಮಾಡಿ ಕೈಬಿಟ್ಟ ಪ್ರಾಣಿಗಳಿಗೆ ಆಶ್ರಯ ನೀಡಿ’. ಅದರಿಂದ ಅವು ತಮ್ಮ ಉಳಿದ ಜಿವನವನ್ನು ನೆಮ್ಮದಿಯಿಂದ ಬದುಕಬಹುದು.
ಈ ತತ್ವದಿಂದ ಪ್ರೇರಿತಗೊಂಡು ಸಮಾಜಮುಖಿಯಾಗಿ ಸಾಕಷ್ಟು ಸೇವೆಗೈದ ವ್ಯಕ್ತಿಯ ಕುರಿತು ಮತ್ತೊಂದು ಅಂಕಣದಲ್ಲಿ ವಿಶದವಾಗಿ ಪ್ರಸ್ತಾಪ ಮಾಡುವ ಪ್ರಯತ್ನ ಮಾಡುವೆ.
ಸುಂದರ್ ಲಾಲ್ ಬಹುಗುಣ ಅವರ ಚಿಪ್ಕೋ ಆಂದೋಲನ ಬಿಶ್ನೋಯಿ ಪಂಥದ ಅಮೃತಾ ದೇವಿ ಅವರ ತ್ಯಾಗದಿಂದ ಪ್ರೇರಿತಗೊಂಡದ್ದು ಎಂದು ಈಗಾಗಲೇ ಉಲ್ಲೇಖಿಸಿದ್ದೇನೆ. ಬಹುಗುಣ ಅವರು ‘ತೆಹ್ರಿ ಗರ್ ವಾಲ್ ‘ ಮೂಲದವರು. ಅವರ ಪತ್ನಿ ವಿಮಲಾ ಬಹುಗುಣ ಅವರೇ ಚಿಪ್ಕೋ ಆಂದೋಲನದ ಕಲ್ಪನೆಯ ಬೀಜವನ್ನು ಬಿತ್ತಿದ್ದು. ಅದಕ್ಕೆ ಸುಂದರ್ ಲಾಲ್ ಬಹುಗುಣ ಅವರು ರೂಪುರೇಷೆಗಳನ್ನಿತ್ತು ಸಾಕಾರಗೊಳಿಸಿದರು.
ಅವರು ತಮ್ಮ ಚಿಪ್ಕೋ ಆಂದೋಳನದಿಂದ ಹಳ್ಳಿಯ ಜನರಲ್ಲಿ ಪರಿಸರದ ಬಗ್ಗೆ ಪ್ರಜ್ಞೆಯನ್ನು ಮೂಡಿಸಿದರು. ಹಿಮಾಲಯ ಪರ್ವತಗಳನ್ನು ಕಾಪಾಡಲು, ನಿಸರ್ಗದ ವಿನಾಶವನ್ನು ತಡೆಯಲು ಬಹಳ ಶ್ರಮಿಸಿದ್ದಾರೆ. ಪರಿಸರ ಕಾರ್ಯಕರ್ತರಾದ ಬಹುಗುಣ ಅವರು ಗಾಂಧೀಜಿ ಅವರ ಅಹಿಂಸಾ ಮಾರ್ಗದಿಂದ ಪ್ರೇರಿತರಾಗಿದ್ದು ಪರಿಸರಕ್ಕಾಗಿ ತಮ್ಮ ಚಳುವಳಿಗಳನ್ನು ಅಹಿಂಸೆಯ ಹಾದಿಯಲ್ಲಿಯೇ ಸಾಗಿಸಿದರು.
1956 ರಲ್ಲಿ ಮದುವೆಯಾದ ನಂತರ ಅವರು ತಮ್ಮ ರಾಜಕೀಯ ಕ್ಷೇತ್ರವನ್ನು ತೊರೆದು ತಮ್ಮ ಊರಿಗೆ ಬಂದು ನೆಲೆಸಿ, ಜನರನ್ನು ಒಗ್ಗೂಡಿಸಿ ಹಳ್ಳಿಯ ಜನರನ್ನು ಬಾಧಿಸುತ್ತಿದ್ದ ಕುಡಿತದ ಚಟದ ಸಮಸ್ಯೆಯ ಪರಿಹಾರಕ್ಕಾಗಿ ಶಾಂತಿಯುತವಾದ ಸಮರವನ್ನು ಸಾರಿದರು. ಅದರ ಯಶಸ್ವಿ ನಿರ್ಮೂಲನೆಯಾದ ಮೇಲೆ, ಸುತ್ತಲೂ ನಡೆಯುತ್ತಿದ್ದ ಪ್ರಕೃತಿಯ ವಿನಾಶವನ್ನು ಅವರು ನೋಡಲಾಗದೆ, ತಮ್ಮ ಹಾಗೂ ತಮ್ಮ ಸಂಗಡಿಗರ ಚೈತನ್ಯವನ್ನು ಅದನ್ನು ತಡೆಯುವ ದಿಸೆಯಲ್ಲಿ ಹರಿಯ ಬಿಟ್ಟರು.
ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಇರುವ ಮರಗಳ ನಾಶ ಬ್ರಿಟಿಷರ ಕಾಲದಿಂದಲೂ ನಡೆಯುತ್ತ ಬಂದಿದ್ದು ಮುಂದೆಯೂ ಈ ಕೃತ್ಯ ಸಾಗುವದನ್ನು ಗಮನಿಸಿದ ಬಹುಗುಣ ಅವರು ಚಿಪ್ಕೋ ಆಂದೋಲನಕ್ಕೆ ಚಾಲನೆ ಕೊಟ್ಟು ಇದಕ್ಕೆ ತಡೆ ಹಾಕಿದ್ದು ಗಮನಾರ್ಹ. ಚಿಪ್ಕೋ ಎಂದರೆ ತಬ್ಬು ಅಥವಾ ಅಪ್ಪಿಕೋ. ಮರವನ್ನು ಕಾಪಾಡಲು ಚಿಪ್ಕೋ ಚಳುವಳಿಯ ಸ್ವಯಂ ಸೇವಕರು ಮರಗಳನ್ನು ಅಪ್ಪಿಕೊಂಡು ಅವುಗಳು ನಾಶವಾಗದಂತೆ ಅಡ್ಡ ನಿಲ್ಲುತ್ತಿದ್ದರು. 1970 ರಲ್ಲಿ ನಡೆದ ಈ ಪರಿಸರ ಪ್ರಜ್ಞೆ ಈಗಲೂ ಪ್ರಸ್ತುತವೆನಿಸುತ್ತದೆ.
ಮೇಲೆ ಉಲ್ಲೇಖಿಸಿದ ಬಿಶ್ನೋಯಿ ಜನಾಂಗದ ಮಂತ್ರ ಹಾಗೂ ಅದಕ್ಕೆ ತ್ಯಾಗ ಬಲಿದಾನಗಳನ್ನು ನೀಡಿದ ಮಹನೀಯರು ನಮಗೆ ಆದರ್ಶವಾಗಬೇಕು. ಅವರು ಹಾಕಿಕೊಟ್ಟವನ್ನು ನಾವು ಅಲ್ಪ-ಸ್ವಲ್ಪವಾದರೂ ಅನುಸರಿಸಿದರೆ ಪರಿಸರದ ರಕ್ಷಣೆಗೆ ನಮ್ಮ ಅಳಿಲು ಸೇವೆ ಸಲ್ಲಿಸಿದಂತೆ. ಪರಿಸರದ ಬಗ್ಗೆ ನಮ್ಮ ಕಾಳಜಿ ಬರೀ ಬಾಯ್ಮಾತು ಆಗಬಾರದು. ಅದರ ಬಗ್ಗೆ ದೈತ್ಯಾಕಾರದ ಹೋರ್ಡಿಂಗಗಳು, ಜಾಹೀರಾತುಗಳು, ಸೆಮಿನಾರುಗಳು, ಭಾಷಣಗಳು, ನಿಬಂಧ ಸ್ಪರ್ಧೆ ಗಳು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವದರಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆಯಾದರೂ, ಬರೀ ಇವುಗಳಲ್ಲಿಯೇ ನಮ್ಮ ನಿಸರ್ಗದ ಕಾಳಜಿ ಮುಗಿಯಬಾರದು. ಅವುಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ನಮ್ಮ ಶುಭ್ರ ವಾತಾವರಣದ ಹಾಗೂ ಪರಿಸರದ ಕನಸು ಸಾಕಾರಗೊಳ್ಳುವದು. ಇಲ್ಲದಿದ್ದರೆ, ‘ ಮಂತ್ರಕ್ಕಿಂತ ಉಗುಳೇ ಹೆಚ್ಚು’ ಎಂಬ ನಾಣ್ನುಡಿಯಂತೆ ಆಗುವದು ನಮ್ಮ ಪರಿಸರದ ಕಾಳಜಿ. ಹಾಗಾಗಲು ಬಿಡುವುದಿಲ್ಲ ಎಂದು ಇಂದೇ ಸಂಕಲ್ಪ ಮಾಡೋಣ. ನಮ್ಮ ಸುತ್ತಲಿನ ಮರ ಗಿಡಗಳನ್ನು, ಪ್ರಾಣಿ ಪಕ್ಷಿಗಳನ್ನು, ನಮ್ಮ ಸಹ- ಮಾನವರನ್ನು ಪ್ರೀತಿಸಲು ಕಲಿಯೋಣ; ಆಗ ಎಲ್ಲ ಕಡೆ ಹಸಿರು ಮೂಡುವದು ; ಮೂಡಿ ಕಂಗಳಿಗೆ ಮುದ ನೀಡುವದು, ಎಲ್ಲರ ಬಾಳು ಹಸನಾಗುವದು.
ಇದನ್ನು ಸಾಧಿಸಲು ನಾವು ಹೆಚ್ಚೇನೂ ಮಾಡಬೇಕಾಗಿಲ್ಲ. ನಾನು ಅಂಕಣದ ಕಳೆದ ಭಾಗದಲ್ಲಿ ಉಲ್ಲೇಖಿಸಿದ ಬಾಲ್ಯದ ಜೀವನದ ಕೆಲವು ಅಂಶಗಳನ್ನಾದರೂ ಪಾಲಿಸಬೇಕು. ಮುಖ್ಯವಾಗಿ ಯಾವುದೂ ಅಮುಖ್ಯವಲ್ಲ; ಪರಿಸರದಲ್ಲಿರುವ ಎಲ್ಲ ವಸ್ತುಗಳು ಅಮೂಲ್ಯವಾದದ್ದು ಎಂಬುದನ್ನು ಮನಗಾಣಬೇಕು. ತೊಂದರೆ ಆದರೂ ಯೂಜ್ ಎಂಡ್ ಥ್ರೋ – ಬಳಿಸಿದ ಮೇಲೆ ಎಸೆದು ಬಿಡು ಎಂಬ ಧೋರಣೆಯನ್ನು ಬಿಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಮ್ಮಿ ಮಾಡುತ್ತಾ ಕ್ರಮೇಣ ಅದನ್ನು ಪೂರ್ತಿಯಾಗಿ ಕೊನೆಗೊಳಿಸುವ ಯತ್ನ ಮಾಡಬೇಕು. ನಮ್ಮ ಶಹರು ಮತ್ತೆ ಹಸಿರಾಗಿ ಕಂಗೊಳಿಸಲು ಸಸಿಗಳನ್ನು ನೆಡಬೇಕು.
ಈ ಕೆಲವು ಸಣ್ಣ ಸಣ್ಣ ಹೆಜ್ಜೆಗಳನಿಟ್ಟು ಸಾಗಬೇಕಾದ ಅವಶ್ಯಕತೆ ಬಹಳ ತೀವ್ರವಾಗಿದೆ. ವಿಳಂಬ ಮಾಡದೆ ನಾವು ಈ ಉದ್ದೇಶಗಳನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ನಮಗೆ ಬಳುವಳಿಯಾಗಿ ಬಂದ ನಿಸರ್ಗದ ಸಂಪತ್ತನ್ನು ಮುಂದಿನ ಪೀಳಿಗೆಯವರಿಗೆ ರವಾನಿಸಲು ಸಾಧ್ಯ. ಇಲ್ಲದಿದ್ದರೆ ಅವರು ನಿಸರ್ಗದ ವೈಭವವನ್ನು ಬರೀ ಚಿತ್ರಗಳಲ್ಲಿ ನೋಡಬೇಕಾದ ದುರ್ಗತಿ ಬರಬಹುದು. ಹಾಗಾಗದಂತೆ ನೋಡಿಕೊಳ್ಳುವ ಗುರುತರವಾದ ಹೊಣೆ ನಮ್ಮೆಲ್ಲರ ಮೇಲಿದೆ.
ಸರ ಸರ ಸರ ಓಡಿಸದಿರು
ಕರಗಸವ ಮರದ ಎದೆಯ ಮೇಲೆ
ಮರ ಮರ ಮರುಗು ಕೇಳದೆ ನಿನಗೆ
ಮರಗಟ್ಟಿದೆಯಾ ನಿನ್ನ ಮನ
ಮರುಭೂಮಿ ಮಾಡುವೆಯಾ ಈ ವನ?
ಕಲ್ಲಾದರೂ ಕರಗೀತು ಅದರ ಮಿಡಿತಕೆ
ಸಾಕು ನಿಲ್ಲಿಸು ಕೆಡಹುವ ಕಾಯಕ
ಉಸಿರಾಡಲು ಬೇಡವೆ ನಿನಗೆ ಆಮ್ಲ ಜನಕ!
ದುರಹಂಕಾರದ ನಿನ್ನ ಈ ಪರಿ ಎಲ್ಲಿಯ ತನಕ?
ಸಾಕು ಮಾಡು ನಿನ್ನ ಸೊಕ್ಕು
ಮಿತಿ ಬೇಡವೆ ಎಲ್ಲದಕ್ಕು
ಇಲ್ಲದಿರೆ ಹಸಿರು
ಬರಡಾಗುವದು ಭೂತಾಯಿಯ ಬಸಿರು
ನದಿಗಳನು ಅಂದೆ ಮಾತೆ
ಅದು ಬರಿ ಮಾತೇ?
ಹರಿದು ಬಿಟ್ಟು ಗರಳದ ಝರಿಯ
ತಾಯಿಯ ಒಡಲಿಗೆ
ಕಡಲುಗಳನೂ ಮಾಡಿದೆ ವಿಷಪೂರಿತ!
ಜೀವ ಜಾಲಕೆ ತಂದೆ ಸಂಚು
ಕಾಲ ಮಿಂಚುವ ಮೊದಲೇ
ನಿಲ್ಲಿಸು ನಿನ್ನ ಹೊಂಚು
ಹಸಿರ ಸೆರಗನು ಹೊದಿಸಿ
ಮಮತೆಯ ಹೊನಲು ಹರಿಸಿ
ಕಾಯ್ದ ಮಾತೆಯ ಸೆರಗು
ಆಗದಿರಲಿ ಮಲಿನ!
ಜೋಕೆ! ಅವಳು ಕನಲ್ದರೆ
ಕಂಬನಿಯ ಒಂದು ಹನಿ ಬಿದ್ದರೂ ಇಳೆಗೆ
ಸಂಭವಿಸುವುದು ಪ್ರಳಯ!
ತಡೆ ಅವಳ ಕಂಬನಿಯ
ಬಿದ್ದರೂ ಹಸಿರ ಎಲೆಗಳ ಬೊಗಸೆಯಲಿ ಆಗಲಿ ಇಬ್ಬನಿ!
ವೃಕ್ಷದ ವಕ್ಷಸ್ಥಲವನೆರೆಯಲಿ ವರುಣ
ಎಲೆಗಳ ರೆಪ್ಪೆಗಳ ಅಂಚಿನಲಿ
ಬಂದು ನಿಲ್ಲಲಿ ಮೇಘವರ್ಷದ ಭಾಷ್ಪ!
ನೆಲ ಕಾಯ್ದು ಜಲ ಬತ್ತಿ ಹೋಗದೆ ಇರಲಿ
ಹೊಳೆಯದೆ ನಿನಗೆ ಈ ಮಾತು?
ಈ ನಲ್ಲವಾತು ಹೊಳೆಯಾಗಿ
ಹರಿಯಲಿ ನಿನ್ನ ಅಂತರಂಗಕೆ!
ತುಂಬಲಿ ನಿನ್ನೆದೆಯಲಿ ಪರಿಸರದ ಒಲವು
ಮೂಡಲಿ ಅದರಲಿ ಹಸಿರು
ಬಿತ್ತುತ್ತ ನಡೆ ಅದರ ಬೀಜಗಳ ಸುತ್ತಲೂ
ಮತ್ತೆ ಸಸ್ಯ ಶ್ಯಾಮಲವಾಗಲಿ ಈ ಜಗ
ನಂದನದ ಕನಸನ್ನು ಕಂಡವರ ಜೊತೆ ಸೇರು
ನನಸಾಗಿಸಲು ಅದನು ಮನಸು ಮಾಡು!
ಊರು ಭವನಗಳಿದ್ದರೆ ಇರಲಿ ;
ಬೇಡ ಕಾಡು ಇಲ್ಲದ ನಾಡು
ಬೇಡ ಕಾಡು ಇಲ್ಲದ ನಾಡು!
ಈ ಆಶಯದೊಂದಿಗೆ…
ವಂದನೆಗಳು
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ