- ಉಪನಿಷತ್ತಿನ ಒಂದು ಕಥೆ – ಆಟಿಕಿ - ಏಪ್ರಿಲ್ 11, 2020
ಪ್ರಾಚೀನ ಕುರುದೇಶದಲ್ಲಿ ಉಷಿಸ್ತಿ ಚಾಕ್ರಾಯಣ ಎನ್ನುವವನೊಬ್ಬನಿದ್ದ. ಆತನ ಮಡದಿ ಆಟಿಕಿ ಎನ್ನುವವಳು. ಈತ ದರಿದ್ರನಾಗಿದ್ದ. ಒಂದು ಹೊತ್ತಿನ ಊಟಕ್ಕೂ ಪರದಾಡುವಷ್ಟು ಬಡವನಾಗಿದ್ದ. ಈತನಿದ್ದ ಪ್ರದೇಶದಲ್ಲಿ ಒಮ್ಮೆ ಚಂಡಮಾರುತದಂತಹ ಬಿರುಗಾಳಿ ಎದ್ದು ಮನೆ ಮತ್ತು ಅಲ್ಲಿದ್ದ ಎಲ್ಲಾ ಸರಂಜಾಮುಗಳನ್ನೂ ಕಳೆದು ಕೊಳ್ಳುತ್ತಾನೆ. ಆಗ ಅಕ್ಷರಶಃ ನಿರ್ಗತಿಕನಾಗುತ್ತಾನೆ. ಊಟಮಾಡದೇ ಕಂಗೆಟ್ಟು ಆ ಊರಿನ ಧನಿಕನೊಬ್ಬನ ಮನೆಯ ಎದುರು ಬಂದು ತಿನ್ನಲಿಕ್ಕೆ ಏನಾದರೂ ಕೊಡು ಎಂದು ಬೇಡಿಕೊಳ್ಳುತ್ತಾನೆ. ಆ ಧನಿಕ ಆ ಸಮಯದಲ್ಲಿ “ಖುಲ್ಮಾಷ” ಅಲಸಂದೆ(ಬೀನ್ಸ್) ತಿನ್ನುತ್ತಿರುತ್ತಾನೆ. ಆತ ತನ್ನಲ್ಲಿ ಈ ಅಲಸಂದೆ ಬಿಟ್ಟರೆ ಬೇರೆನೂ ಉಳಿದಿಲ್ಲ. ಸ್ವಲ್ಪ ಮಾತ್ರವೇ ಉಳಿದಿದೆ ಅದನ್ನೇ ತಿನ್ನುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ಚಾಕ್ರಾಯಣನು ಅದರಲ್ಲೇ ಸ್ವಲ್ಪ ಕೊಡು ಎಂದು ಬೇಡುತ್ತಾನೆ. ಧನಿಕ ಅದರಲ್ಲಿ ಪಾಲುಮಾಡಿ ಸ್ವಲ್ಪ ಕೊಡುತ್ತಾನೆ. ಹಾಗೆಯೇ ಪಕ್ಕದಲ್ಲೇ ನೀರು ಇದೆ ಅದನ್ನು ಕುಡಿಯಬಹುದು ಎಂದಾಗ, ಅದು ನೀನು ಕುಡಿದು ಮಿಕ್ಕಿ ಉಳಿದಿರುವುದು ಅದು, ಎಂಜಲು ಎನ್ನುತ್ತಾನೆ. ಈಗ ಆ ಧನಿಕನಿಗೆ ಆಶ್ಚರ್ಯ ಮತ್ತು ಉದ್ವಿಗ್ನ ಎರಡೂ ಉಂಟಾಗುತ್ತದೆ. ನಾನು ತಿನ್ನುತ್ತಿದ್ದುದರಲ್ಲೇ ಒಂದು ಪಾಲು ನಿನಗೆ ತಿನ್ನಲು ಕೊಟ್ಟೆ ಆದರೆ ಅದು ಎಂಜಲಾಗಲಿಲ್ಲವೇ ? ಅದು ಶಿಷ್ಟವಲ್ಲವೇ ಎನ್ನುತ್ತಾನೆ. ಅದಕ್ಕೆ ಚಾಕ್ರಾಯಣನು “ಅತ್ಯಗತ್ಯ ಇದ್ದುದರಿಂದ ಜೀವನಾಧಾರಕ್ಕಾಗಿ ಮಾತ್ರ ಶಿಷ್ಟವಾದರೂ ಬಾಧಕವಿಲ್ಲ” ಎಂದು ತಾನು ಧಾನ್ಯವನ್ನು ತೆಗೆದುಕೊಂಡೆ ಆದರೆ ಅದೇ ನ್ಯಾಯ ನೀರಿಗೆ ಅನ್ವಯಿಸುವುದಿಲ್ಲ ಎನ್ನುತ್ತಾ ತಾನು ತಿನ್ನುತ್ತಿದ್ದ ಧಾನ್ಯದಲ್ಲೆ ಸ್ವಲ್ಪ ತನ್ನ ಮಡದಿಗೂ ಕೊಡುತ್ತಾನೆ. ಆದರೆ ಅಷ್ಟರಲ್ಲಿಯೇ ಆಕೆ ತನಗೆ ಬೇಕಾದ ಆಹಾರ ತೆಗೆದುಕೊಂಡದ್ದರಿಂದ ಬೇಡ ಎನ್ನುತ್ತಾಳೆ. ಚಾಕ್ರಾಯಣನಿಗೆ ಧಾನ್ಯವನ್ನು ಕೊಟ್ಟ ಆ ಧನಿಕನು ಈ ಊರಿನ ರಾಜ ನಾಳೆ ಯಜ್ಞವೊಂದನ್ನು ಆರಂಭಿಸುತ್ತಾನೆ. ಅಲ್ಲಿಯೂ ತಾವು ಪಾಲ್ಗೊಳ್ಳಿ ಎನ್ನುತ್ತಾನೆ. ಚಾಕ್ರಾಯಣನಿಗೆ ತುಂಬಾ ಸಂತೋಷವಾಗುತ್ತದೆ. ಅಲ್ಲಿ ತನಗೆ ಪೌರೋಹಿತ್ಯ ದೊರೆಯುತ್ತದೆ ಎಂದು ಅಲ್ಲಿಗೆ ಮಾರನೇ ದಿನ ಧಾವಿಸುತ್ತಾನೆ.
ಯಜ್ಞ ಮಂಟಪದ ಅಲ್ಲಾ ಕಡೆ ಶೃಂಗಾರ. ದೊಡ್ದ ಯಾಗ ಶಾಲೆ. ಯಾಗ ಶಾಲೆಗೆ ತಕ್ಕುದಾದ ದೊಡ್ದ ಹೋಮಕುಂಡ. ಎಲ್ಲವೂ ಸಿದ್ಧವಾಗಿದೆ ಅಲ್ಲಲ್ಲಿ ಸಮಿತ್ತುಗಳು, ಆಜ್ಯ ಚರುಗಳು ಸಿದ್ಧಗೊಂಡಿವೆ, ಚಾಕ್ರಾಯಣ ಯಜ್ಞ ಶಾಲೆಯ ಸಮೀಪಕ್ಕೆ ಬರುತ್ತಾನೆ ಅಲ್ಲಿ ಉದ್ಗಾತೃಗಳ ಸ್ವರ ವ್ಯತ್ಯಾಸವನ್ನು ಗಮನಿಸಿ ನೇರವಾಗಿ ಉದ್ಗಾತೃವಿನ ಸಮೀಪಕ್ಕೆ ಹೋಗಿ “ಯಾವ ದೇವತೆಯನ್ನು ಉದ್ದೇಶಿಸಿ ಪ್ರಸ್ತಾವ ರೂಪವಾದ ಸ್ತೋತ್ರವನ್ನು ಪಠಿಸಬೇಕೋ ಆ ದೇವತೆಯ ಪೂರ್ಣಸ್ವರೂಪವನ್ನು ತಿಳಿಯದೇ ಪಠಿಸಿದರೆ ನಿನ್ನ ತಲೆ ಸಿಡಿದು ಬೀಳುವುದು” ಎನ್ನುತ್ತಾನೆ. ಹೀಗೆಯೇ ಪ್ರಸ್ತೋತೃವಿಗೂ ದೇವತಾ ಸ್ವರೂಪವನ್ನು ಅರಿಯದೇ ಉದ್ಗೀತ ಮತ್ತು ಪ್ರಸ್ತಾವಗಳನ್ನು ಪಠಿಸಿದರೆ ತಲೆ ಸಿಡಿದು ಬೀಳುವುದು ಎನ್ನುತ್ತಾನೆ. ಪ್ರಸ್ತಾವವೇ ಮೊದಲ್ಕಾದ ಮಂತ್ರಗಳ ಜ್ಞಾನಕ್ಕೂ ಮತ್ತು ದೇವತೆಗಳ ನಡುವಿನ ಸಂಬಂಧವನ್ನು ತಿಳಿಸಿಕೊಡುತ್ತಾನೆ. ಇವನ ಈ ಕಥೆಯಲ್ಲಿ ಕರ್ಮಕ್ಕೂ ಮತ್ತು ಆಧ್ಯಾತ್ಮಿಕ ಜ್ಞಾನಕ್ಕೂ ಇರುವ ಅನ್ಯೋನ್ಯವಾದ ಅವಿನಾಭಾವ ಸಂಬಂಧವನ್ನು ತಿಳಿಸಿಕೊಡುತ್ತಾನೆ. ಇವುಗಳಲ್ಲದೇ ರಾಜಸಭೆಯಲ್ಲಿ ಇರಬೇಕಾದ ತಾತ್ವಿಕರ ಸಂವಾದದಲ್ಲಿ ಸಾಮದ ವಿಷಯವು ವಿಶದವಾಗಿ ವಿವರಿಸುತ್ತಾನೆ. ಇವೆಲ್ಲವೂ ಚಾಂದೋಗ್ಯ ಉಪನಿಷತ್ತಿನಲ್ಲಿ ವಿವರಿಸಲ್ಪಟ್ಟಿದೆ. ರಾಜ ಧರ್ಮ, ಭೌತಿಕ ತತ್ವಗಳಿಗೂ ಆಧ್ಯಾತ್ಮಿಕ ತತ್ವಗಳಿಗೂ ಸಾಮಾವಯವಗಳಿಗೂ ಇರುವ ಪರಸ್ಪರ ತಾದಾತ್ಮ್ಯವನ್ನು ವಿವರಿಸಲಾಗಿದೆ. ಇಲ್ಲಿ ಪ್ರಸ್ತಾವ ಎಂದರೆ ಸೂರ್ಯೋದಯವಾದ ನಂತರ ಪಠಿಸತಕ್ಕ ಮಂತ್ರಗಳು ಎನ್ನುವುದು ತಿಳಿದಿರಬೇಕಾಗುತ್ತದೆ. ಮನುಷ್ಯರಿಗೂ ಈ ಪ್ರಸ್ತಾವ ಮಂತ್ರಗಳಿಗೂ ಬಹಳ ನಿಕಟವಾದ ಸಂಬಂಧವಿದೆ. ಮನುಷ್ಯರನ್ನು ಪ್ರಸ್ತುತಿಕಾಮರೆಂದು ಕರೆಯಲಾಗುವುದೂ ಇದೇ ಕಾರಣಕ್ಕೆ. ಈ ಕಥೆಯನ್ನು ಗಮನಿಸಿದರೆ ಎಂತಹ ಉತ್ತಮ ಮೌಲ್ಯವನ್ನೂ ನಮಗೆ ಕೊಡುತ್ತದೆ. ತನಗೆ ಹಸಿವಾದಾಗ ಶಿಷ್ಟವನ್ನು ತಿನ್ನುವುದು ಪಾಪವಲ್ಲ ಅದು ಎಂಜಲಲ್ಲ ಆದರೆ ಅವಶ್ಯವಾಗಿರದುದು ತಿನ್ನ ಬಾರದು. ಆದರೆ ಮನುಷ್ಯರಲ್ಲಿ ಇದಕ್ಕೆ ವಿರುದ್ಧವೇ ಗೋಚರವಾಗುತ್ತದೆ. ಅವಶ್ಯವಾಗಿರದಿದ್ದರೂ ಅನಾಯಾಸವಾಗಿ ಉಚಿತವಾಗಿ ಸಿಕ್ಕಿದರೆ ಯಥೇಚ್ಚ ತಿನ್ನುವುದು ಕಾಣಸಿಗುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಅವಳು ಬಂದಿದ್ದಳು
ಬಿ.ಆರ್.ಲಕ್ಷ್ಮಣರಾವ್
ನವೋನ್ಮೇಷ ಪುಸ್ತಕ ಲೋಕಾರ್ಪಣೆ