ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಬ್ಳಿ ಹೆಗಡೆಯವರ ಹನಿಗವಿತೆಗಳು – ೩

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಆಟ

ಬಾಲ್ಯದ ಆಟ-
‘ಕಣ್ಣೇ ಕಟ್ಟೆ-
ಕಾಡೇ,ಗೂಡೇ,,’
ನಡೆದಿದೆ ವೃದ್ಧಾಪ್ಯ​
ದಂಚಿನ ವರೆಗೂ.
ಕಾಡು ಗೂಡಾಗಿ,
ಗೂಡು ಕಾಡಾಗಿ,
ಒಂದೊಂದು ಸಲ
ಎರಡೂ ಒಂದೇ ಆಗಿ
ವಿಪರೀತ ಕಾಡಿದಾಗ,,,
ಕಣ್ಣಕಟ್ಟಿದ ಕಪ್ಪುಪಟ್ಟಿ
ಕಳೆಯಲು ಕೊಸರಾಟ,
ಹೋರಾಟ,,,,!
ಇದೂ ಒಂಥರಾ-
ಖುಷಿಯ ಅನುಭವ,
‘ಅನುಭಾವ.’
ಆಟ ವೆಂದುಕೊಂಡಾಗ..

*****

ಹಾ…..ತೊರೆ

ನನ್ನೊಳಗ ಬೇಸಿಗೆಗೆ
ಎದೆ ತೊರೆಯು ಒಣಗೆ
ಹಾತೊರೆದು ಮಳೆಗಾಗಿ
ಕಾದಿರುವೆ ಒಳಗೆ

*****

ಬದುಕು ಬಣ್ಣ

ಖಾಲಿ ಬಿಳಿ ಹಾಳೆಯಲಿ
ಬಣ್ಣಗಳ ಲೀಲೆ.
ಬಣ್ಣವಿಲ್ಲದ ಬದುಕು
ಬರಿಯ ಬಿಳಿ ‘ಹಾಳೆ’..!

*****

ಸಿಟಿ ಬಸ್ಸು

ಕಾಲವೆಂಬುದು ರೋಡು
ಬದುಕು ಸಿಟಿಬಸ್ಸು.
ಕೊನೆಯ ನಿಲುಗಡೆ ಸೇರೆ
ಬರದು ವಾಪಸ್ಸು.

*****

ಸಂಜೆ ನೆನಪು

ಮುಂಜಾವಲರಳಿರುವ
ಕಾಡು ಹೂ ನೋಡಿ.
ಸಂಜೆ ನರಳಿದ ತಾತ
ಹಳೆ ನೆನಪು ಕಾಡಿ.

*****