ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೀರಾ ಜೋಶಿ
ಇತ್ತೀಚಿನ ಬರಹಗಳು: ಮೀರಾ ಜೋಶಿ (ಎಲ್ಲವನ್ನು ಓದಿ)

ಎಂಟು ವರುಷಗಳ ತರುವಾಯ ಮತ್ತೆ ಕಾಲೇಜಿನ ಆವರಣದಲ್ಲಿ ಕಾಲಿಡುತ್ತಿದ್ದೆ.ಯಾವಾಗಲೂ ಜಾಣ ವಿದ್ಯಾರ್ಥಿಯೆನಿಸಿಕೊಂಡವಳಿಗೆ ಏನೋ ಅಳುಕು,ಏನೋ ಅನುಮಾನ, ಅಧೀರತೆ, ಕಳವಳ.ಒಟ್ಟಿನಲ್ಲಿ ಮನಸ್ಸು ಉಲ್ಲಸಿತವಾಗಿದ್ದರೂ ಗೊಂದಲಮಯವಾಗಿತ್ತು.ಈ ಎಂಟು ವರ್ಷಗಳಲ್ಲಿ ತನ್ನ ಜೀವನದಲ್ಲಿ ಎಷ್ಟೊಂದು ಬದಲಾವಣೆಯಾಗಿತ್ತು. ಮುಂದೆ ಓದುವ ಹಂಬಲ ಬೆಟ್ಟದಷ್ಟಿದ್ದರೂ ಒಳ್ಳೆಯ ವರ ಸಿಕ್ಕಿದಾಗ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡಬೇಕೆಂಬ ಅಜ್ಜಿ,ತಂದೆ ,ತಾಯಿಯರ ಖಚಿತ ಅಭಿಪ್ರಾಯದ ಮುಂದೆ ತನ್ನದೇನೂ ನಡೆಯುವಂತಿರಲಿಲ್ಲ.ಮದುವೆಯಾದ ಮೇಲೆ ಪ್ರಕಾಶನ ಪ್ರೇಮಾನುರಾಗಗಳಲ್ಲಿ ಪರಿತಪಿಸುವ ಸಂದರ್ಭ ಬಂದಿರಲಿಲ್ಲ.ರವಿ ,ರವಿ,ರಶ್ಮಿ ತನ್ನ ಬಾಳನ್ನು ಬೆಳಗಲು ಬಂದಾಗ,ಅವರ ಲಾಲನೆ ಪಾಲನೆಯಲ್ಲಿ ,ತಾನು ಮುಂದೆ ಓದಲಾಗಲಿಲ್ಲವೆನ್ನುವ ಕೊರಗಿದ್ದರೂ ಅದೇ ಮುಖ್ಯವಾಗಿ ಕಾಡುತ್ತಿರಲಿಲ್ಲ.

ಮದುವೆಯಾಗಿ ,ಎರಡು ಮಕ್ಕಳತಾಯಿ ,ಬೇರೆಯವರೊಡನೆ ಹೊಂದಿಕೆಯಾಗದೇ ಒಂಟಿಯಾಗಿ ಬಿಡುವೆನೇನೋ ಎಂಬ ಸೂಕ್ಷ್ಮ ಹೆದರಿಕೆ.ಆದರೂ ನನ್ನ ಕಲಿಕೆಯ ಒಲವನ್ನು ಅರಿತಿದ್ದ ಪ್ರಕಾಶ ,ಮಕ್ಕಳು ಈಗ ಸ್ಕೂಲಿಗೆ ಹೋಗತ್ತಿದ್ದಾರೆ ಏನೂ ಸಮಸ್ಯೆಯಾಗುವುದಿಲ್ಲವೆಂದು ಬೆಂಬಲ ನೀಡಿದ್ದಕ್ಕೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಬಂದಿದ್ದೆ.
ನನ್ನ ಗಲಿಬಿಲಿಯನ್ನು ತಿಳದವಳಂತೆ ಲವಲವಿಕೆಯಿಂದ ಕೂಡಿದ ಒಬ್ಬ ಹುಡುಗಿ ,ಇಲ್ಲಿ ಬಂದಿರುವದು ಮೊದಲನೆಯ ಬಾರಿ ಅಂತಾ ಕಾಣುತ್ತೆ ಯಾವ ಕ್ಲಾಸ್ ಗೆ ಹೋಗಬೇಕು ಎಂದು ಕೇಳಿದಾಗ ನನ್ನದೂ ಅವಳದೂ ಒಂದೇ ವಿಷಯವೆಂದು ತಿಳಿದು ತನ್ನೊಡನೆ ಕರೆದುಕೊಂಡು ಹೋದಳು. ತರಗತಿಯಲ್ಲಿದ್ದವರೆಡೆಗೆ ಹಂತ ಹಂತವಾಗಿ ಕಣ್ಣಾಡಿಸಿದೆ.ಯಾರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ ಎಂದು ಅನಿಸಲಿಲ್ಲವಾದ್ದರಿಂದ ಸ್ವಲ್ಪು ನಿರಾಳವೆನಿಸಿತು.ತರಗತಿ ಮುಗಿದಮೇಲೆ ನಾನೊಬ್ಬಳೇ ಮೆಲ್ಲಗೆ ಹಿಂದಿನಿಂದ ಬರುವಾಗ ಆ ಹುಡುಗಿಯೇ ತಿರುಗಿ ನೋಡಿ ಮುಗುಳ್ನಕ್ಕು ತನ್ನ ಗುಂಪಿನಲ್ಲಿ ಸೇರಿಸಿ ಕೊಂಡಳು.ನನ್ನ ಮುಜುಗರ ಸ್ವಲ್ಪು ಕಡಿಮೆಯಾಯ್ತು.
ಅವಳ ಮನೆ ನಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಇದ್ದುದರಿಂದ ಸಾಧಾರಣವಾಗಿ ನನಗೆ ರಸ್ತೆಯಲ್ಲಿಯೇ ಭೆಟ್ಟಿ ಯಾಗಿ ಇಬ್ಬರೂ ಕೂಡಿ ಹೋಗಿ ಬರುತ್ತಿದ್ದೆವು.ಅವಳಿಗೆ ಮಾತಿಗೆ ಇಂಥದೇ ವಿಷಯ ಬೇಕೆಂದಿರಲಿಲ್ಲ.ಅವಳ ಚುರುಕು ಮಾತು , ಚೇಷ್ಟೆಗಳ ಮಧ್ಯದಲ್ಲಿಯೂ ಅವಳ ಕಣ್ಣಿನ ಮೂಲೆಯೊಂದರಲ್ಲಿ ನೋವಿನ ಎಳೆಯೊಂದು ಇಣುಕುತ್ತಿರುವಂತೆ ನನಗನ್ನಿಸುತ್ತಿತ್ತು.ಏನಿರಬೇಕು? ಏಕಿರಬೇಕು ಎನ್ನಿಸಿದರೂ ಕೇಳುವಷ್ಟು ಸಲುಗೆಯನ್ನು ವಹಿಸಿರಲಿಲ್ಲ.


ನಾಲ್ಕು ಫೂಟು ಹತ್ತು ಇಂಚಿನ ವನಿತಾ ಲೆಕ್ಚರರ್, ಅಂಬಾಸಿಡರ ಕಾರು ಡ್ರೈವ್ ಮಾಡಿಕೊಂಡು ಬಂದಾಗ ಇವಳು ಆನೆಯಮೇಲೆ ಆಡನ್ನು ಕೂಡ್ರಿಸಿದಂತಿದೆಯೆಂದು ನಕ್ಕಿದ್ದೇ ನಕ್ಕಿದ್ದು.ನಾನು ಏನೇ ಅವರವರ ಗಾತ್ರಕ್ಕೆ ತಕ್ಕಂತೆ ಕಾರುಗಳನ್ನು ಕೊಂಡುಕೊಳ್ಳುತ್ತಾರೆಯೇ ,ಮನೆಯಲ್ಲಿ ಯಾವುದಿದೆಯೋ ಅದರಲ್ಲಿ ಬರುತ್ತಾರೆ ಅಂತಾ ಅಂದರೆ ,ನೀರಜಾ ನೀನಂತೂ ಯಾರಿಗೂ ಏನೂ ಅನ್ನಲೇಬಾರದು ಎನ್ನುತ್ತೀಯಾ.ನಾನೇನು ಅವರಿಗೆ ಹೋಗಿ ನೀವು ಹೀಗೆ ಕಾಣ್ತೀರಿ ಈ ಕಾರಿನಲ್ಲಿ , ಚಿಕ್ಕ ಮಾರುತಿಯಲ್ಲಿ ನಿಮ್ಮ ಪುಟ್ಟ ಮೂರುತಿಯೊಂದಿಗೆ ಬನ್ನಿ ಅಂತಾ ಹೇಳ್ತೀನಾ,?ನಾನ್ಹೇಳಿದ್ರೆ ಕೇಳ್ತಾರಾ?ನಿನ್ನದೆಷ್ಟು ಅಷ್ಟು ನೋಡಿಕೋ ಮಂಗ ಎನ್ನದೆ ಇರ್ತಾರಾ?
ನೋಡು ಯಾರನ್ನೂ ನೋಯಿಸುವದು ನಮ್ಮ ಉದ್ದೇಶವಲ್ಲ ,ಸುತ್ತಮುತ್ತಲಲ್ಲಿ ನಡೆಯುವ ಘಟನೆಗಳಿಂದ ಸಾಧ್ಯವಿದ್ದಷ್ಟೂ ನಗುವುದನ್ನು ಕಲಿಯಬೇಕು ಎಂದಳು. ಒಬ್ಬರನ್ನು ವ್ಯಂಗವಾಗಿ ನೋಡಿ ನಗುವುದೆಂಥಾ ಸಂಸ್ಕೃತಿ ಎಂದೊಡನೆ “ಓ ಸಾಧ್ವಿ ಮಣಿ ನನಗೂ ಎಲ್ಲ ಗೊತ್ತಾಗುತ್ತದಮ್ಮ. ನಾನೇನಾದ್ರು ಅವರ ವ್ಯಕ್ತಿತ್ವಕ್ಕೆ ಕುಂದು ಬರುವ ಹಾಗೆ ಮಾತಾಡಿದ್ನಾ? ಈಗ ನೋಡು ನಾನು ಜಡೆ ಹಾಕಿದಾಗ ನನ್ನ ತೆಳುವಾದ ಚೋಟು ಜಡೆ ನೋಡಿ ಇಲಿ ಬಾಲದ ಹಾಗಿದೆ ಅಂತಾರೆ ,ನಾನೂ ನನ್ನ ಅಗಲವಾದ ಬೆನ್ನ ಮೇಲೆ ಅದು ಹೇಗೆ ಕಾಣುತ್ತಿರಬೇಕೆಂದು ಊಹಿಸಿ ನಗುವವರ ಜೊತೆ ನಾನೂ ನಕ್ಕು ಬಿಡುತ್ತೇನೆ.ಈ ರೀತಿ ಇದ್ರೇನೆ ಮನುಷ್ಯ ಸ್ವಲ್ಪು ಹೊತ್ತಾದರೂ ತನ್ನ ದುಃಖವನ್ನು ಮರೀತಾನೆ ಎಂದಳವಳು ಇದೇ ಸಂದರ್ಭ ಅಂತಾ ” ಮರೆಯಲು ಯತ್ನಿಸುವಂಥ ದುಃಖ ನಿನಗೇನಿದೆಯಮ್ಮ” ಎಂದು ಕೇಳಿದೆ. ಅರೇ ಸುಲೋಚನ ಮೇಡಮ್ ಕ್ಲಾಸಿಗೆ ಹೊತ್ತಾಯ್ತೆಂದು ಎಲ್ಲರನ್ನೂ ಎಬ್ಬಿಸಿ ಮಾತು ಮರೆಸಿ ಬಿಟ್ಟಳು.
ಒಮ್ಮೊಮ್ಮೆ ತುಂಬಾ ನೀಟಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದಳು.ಕೆಲವೊಂದು ಸಲ ಬಟನ್ ಕಿತ್ತಿದ ಕಮೀಜಕ್ಕೆ ಹೇಗೋ ಒಂದು ಪಿನ್ನು ಹಾಕಿಕೊಂಡು ಮುದುಡಿದ ದುಪ್ಪಟ್ಟಾ ಹೊದ್ದುಕೊಂಡು ಬರುತ್ತಿದ್ದಳು.ಅಂದು ಕೂಡ ಹಾಗೇ ಬಂದಿದ್ದಳು .ತುಂಬಾ ಹಳೆಯ ಡ್ರೆಸ್. ಬಟನ್ ಪಟ್ಟಿ,ಕಾಜಾಪಟ್ಟಿ ಸೇರಿಸಿ ಪಿನ್ನು ಹಾಕಿದ್ದು ತುಂಬಾ ಏರು ಪೇರಾಗಿತ್ತು.ಹೇಳಿದಾಗ ಇರಲಿ ಬಿಡು ಎಂಬ ಔದಾಸೀನ್ಯದ ಉತ್ತರ ಬಂದಿತ್ತು. ಮತ್ತೊಂದು ದಿನ ನೀಟಾಗಿ ಸೀರೆ ಉಟ್ಟುಕೊಂಡು ಬಂದಿದ್ದಳು.ಸಿಲ್ಕ ಸೀರೆ ಚೆನ್ನಾಗಿದೆ ಎಂದೆ. ಸಿಲ್ಕಿನದಾ? ನನಗೆ ಬಟ್ಟೆಯಲ್ಲಿ ತಿಳಿಯುವದಿಲ್ಲ ನೋಡು ಎಂದಳು.ತಂದೆ ತಂದು ಕೊಟ್ಟಿದ್ದನ್ನು ಹಾಕಿಕೊಳ್ಳುವುದಷ್ಟೇ ಗೊತ್ತು ಎಂದಳು.ಆದರೆ ಈ ಶೀರೆ ನಾನು ಹೋದ ವರ್ಷ ಏಸಿಯಾಡ್ ಗೇಮ್ಸಗೆ ದಿಲ್ಲಿಗೆ ಸ್ವಯಂ ಸೇವಕಳಾಗಿ ಹೋದಾಗ ಕೊಟ್ಟಿದ್ದು‌ಇದರಲ್ಲಿ ಜಂತರ ಮಂತರ ಪ್ರಿಂಟ ಕೂಡಾ ಇದೆ ನೋಡು ಎಂದಳು.
ಅಷ್ಟರಲ್ಲಿ “ಪ್ರತಿಮಾ ” ಎಂದು ಕರೆದಳು ಪ್ರಭಾ.

ಹೌದು ಅವಳ ಹೆಸರು ಪ್ರತಿಮಾ.

ಪ್ರಭಾ ಪ್ರತಿಮಾಳ ಸಮೀಪದ ಗೆಳತಿ.ಪ್ರಭಾಳಿಗೆ ಓದಿನಲ್ಲಿ ಅಭಿರುಚಿ ಇರಲಿಲ್ಲ.ಓದಿ ಏನು ಮಾಡುವುದು? ಅಕ್ಷರಸ್ಥಳೆನ್ನುವುದಕ್ಕೆ ಒಂದು ಡಿಗ್ರೀ ಇದೆ.ಸಾಕಷ್ಟಾಯಿತು.ಹೆಣ್ಣುಮಕ್ಕಳು ಮನೆ ,ಗಂಡ ಮಕ್ಕಳನ್ನು ಚೆನ್ನಾಗಿ ನೋಡಿ ಕೊಂಡರೆ ಸಾಕು ಎಂಬುದು ಅವಳ ಅಭಿಪ್ರಾಯ.ನನಗೆ ಇಪ್ಪತ್ತು ವರ್ಷವಾಯಿತು ಮದುವೆ ಮಾಡಬೇಕೆಂದು ನನ್ನಮ್ಮನಿಗೆ ತಿಳಿಯಬಾರದಾ ಎಂದೆನ್ನುತ್ತಿದ್ದಳು. ಕ್ಲಾಸಿನಲ್ಲೂ ಧ್ಯಾನವಿರುತ್ತಿರಲಿಲ್ಲ.ಪ್ರಭಾಳಿಗೆ ಕ್ಲಾಸಿನಲ್ಲೂ ಲಕ್ಷ್ಯವಿರುತ್ತಿರಲಿಲ್ಲ.


ಪ್ರಭಾಳ ತಾಯಿ ಮೂವತ್ತು ವರ್ಷಕ್ಕೇ ಪತಿಯನ್ನು ಕಳೆದು ಕೊಂಡಿದ್ದರು.ಅಷ್ಟೇನೂ ಓದಿರದ ಅವರು ಪ್ರಭಾ ಮತ್ತು ಅವಳ ತಮ್ಮನನ್ನು ಕಷ್ಟಪಟ್ಟು ಬೆಳೆಸಿದ್ದರು.ಪ್ರಭಾಳ ತಂದೆ ತೀರಿ ಹೋದಾಗ ಪ್ರಭಾಗೆ ಎಂಟು ವರ್ಷ,ಅವಳ ತಮ್ಮನಿಗೆ ಐದು ವರ್ಷ. ಯಾವುದೇ ಹೆಣ್ಣು ಮದುವೆಯಾದರೂ ಪ್ರಸಂಗ ಬಂದಾಗ ತನ್ನ ಉಪಜೀವನವನ್ನು ತಾನು ಸಾಗಿಸಿಕೊಳ್ಳುವಂತಿರಬೇಕು ಇದು ಅವಳ ತಾಯಿಯ ಅಭಿಪ್ರಾಯ.ಮಕ್ಕಳಿಬ್ಬರನ್ನೂ ತುಂಬಾ ಓದಿಸಬೇಕೆನ್ನುವುದು ಅವರ ಆಸೆ.ಪ್ರಭಾಳ ಓದಿನ ಬಗೆಗಿನ ಔದಾಸೀನ್ಯ, ಅವಳ ತಾಯಿಯು ಅವಶ್ಯಕತೆಗಿಂತ ಹೆಚ್ಚಿನ ಒತ್ತಾಯವನ್ನು ಓದಿಗಾಗಿ ಹಾಕಿದ್ದರಿಂದಲೋ ಅಥವಾ ವಯಸ್ಸಿಗೆ ಸಹಜವಾದ ಕಾಮನೆಗಳನ್ನು ತಡೆಯಲಾರದಕ್ಕೋ ತಿಳಿಯಲಿಲ್ಲ ನನಗೆ. ಆದರೂ ತಾಯಿಯ ಪರಿಸ್ಥಿತಿಯನ್ನು ನೋಡಿದ ಮೇಲೂ ಪ್ರಭಾಳ ಈ ಸ್ವಭಾವ ನೋಡಿ ಮನಸ್ಸು ವಯಸ್ಸಿಗೆ ತಕ್ಕಂತೆ ಫ್ರೌಢತೆಯನ್ನು ಹೊಂದಿಲ್ಲವೆಂದೇ ನನಗನ್ನಿಸಿತು.ನಾನು ಮುಂದೆ ಓದುವ ಪ್ರಬಲ ಇಚ್ಛೆಯನ್ನು ವ್ಯಕ್ತಪಡಿಸಿ ಮದುವೆಯಾಗಲು ನಿರಾಕರಿಸಿದಾಗಲೂ ,ಒಳ್ಳೆಯ ಸಂಬಂಧ ಬಂದಾಗ ಮದುವೆ ಮಾಡಿಬಿಡಬೇಕೆಂಬ ತಂದೆ ತಾಯಿ ಅಜ್ಜಿಯ ಧೃಡ ಅಭಿಪ್ರಾಯಕ್ಕೆ ಮಣಿದು ಇಪ್ಪತ್ತಕ್ಕೇ ಮದುವೆಯಾದದ್ದು ನೆನಪಾಯಿತು.
ಇಲ್ಲಿಯವರೆಗೆ ಪ್ರಭಾಳನ್ನು ಬಿಟ್ಟು ಪ್ರತಿಮಾಳ ಮನೆಗೆ ಬೇರಾವ ಗೆಳತಿಯರು ಹೋಗಿದ್ದನ್ನು ನೋಡಿರಲಿಲ್ಲ.ನಾವಿಬ್ಬರೂ ಕೂಡಿಯೇ ಮನೆಗೆ ಹೋಗುತ್ತಿದ್ದರೂ ತನ್ನ ಮನೆ ಬಂದೊಡನೆ ನಾಳೆ ಭೆಟ್ಟಿಯಾಗೋಣ ,ಬಾಯ್ ,ಅಂತಾ ಹೇಳಿ ಹೋಗಿಬಿಡುತ್ತಿದ್ದಳು.ಒಮ್ಮೆಯಾದರೂ ಮನೆಯೊಳಗೆ ಬಾ ಎನ್ನುತ್ತಿರಲಿಲ್ಲ .ಸರಳ ಮನದ ಸ್ನೇಹಮಯಳಾದ ಪ್ರತಿಮಾ ಹೀಗೇಕೆ ಎಂದುಕೊಳ್ಳುತ್ತಿದ್ದೆ.ಆ ದಿನ ಫಾರ್ಮ ತುಂಬುತ್ತಿದ್ದಾಗ Husband’s name ಮುಂದೆ ಬರೆಯುತ್ತಿದ್ದಾಗ ಪ್ರತಿಮಾ ನನ್ನನ್ನು ತಿವಿದು ,ಎಲ್ಲಿದೆ ಲಕ್ಷ್ಯ ,ನಿನಗೂ ಪ್ರಭಾಳ ಹಾಗೆ ಮದುವೆಯ ಕನಸಾ? ಎಂದಳು .ಅಲ್ಲಮ್ಮ ಇದು ನನಸು ನನ್ನ ಮದುವೆಯಾಗಿ ಎಂಟು ವರ್ಷವಾಯ್ತು ಎಂದೆ. “ತಮಾಷೆ ಮಾಡ್ತೀಯಾ ಎಂದಳು” .ಕತ್ತಿನಲ್ಲಿಯ ಕರಿಮಣಿ ನೋಡಿ ಗೊತ್ತಾಗಲಿಲ್ವಾ ಎಂದೆ.ನಿನ್ನನ್ನು ನೋಡಿದರೆ ಹಾಗೆ ಅನಿಸೋದಿಲ್ಲ.ಕರೀಮಣಿ ಫ್ಯಾಷನ್ ಅಂತಾ ಎಷ್ಟೋ ಜನ ಹಾಕಿಕೊಳ್ತಾರೆ.ಸವಿತಾಗೆ ಮದುವೆಯಾಗಿಲ್ಲ ,ಇಷ್ಟ ಅಂತಾ ಹಾಕಿಕೊಳ್ಳೋದಿಲ್ವಾ ?ಎಂದಳು.ನಿನಗೆ ಇಬ್ಬರು ಮಕ್ಕಳೂ ಕೂಡಾ ಅಂದ್ರೆ ನಂಬಿಕೆಯೇ ಆಗೊಲ್ಲ ಎಂದಳು.
ಅಷ್ಟರಲ್ಲಿಯೇ ಪ್ರಭಾ “ನೀನಂತೂ ಯಾವಾಗಲೂ ಅಮ್ಮ ,ಅಂದ್ರೆ ;ಮಾ ; ನೋಡು .ಮದುವೆ ಮಕ್ಕಳು ಇರದಿದ್ರೂ ಪ್ರತಿ-ಮಾ ನೋಡು ಎಂದಳು.
ಪ್ರಭಾ ನನಗೆ “ಮಾ ” ಅನ್ನಬೇಡ ನೋಡು ಎಂದು ಅತಿ ತೀಕ್ಷ್ಣವಾಗಿ ಸಿಡುಕಿದಳು..ಏನಾಯ್ತೀಗ ಒಂದಿಲ್ಲೊಂದು ದಿನ ನೀನು ಕೂಡ ಮಾ ಆಗುವವಳೇ ತಾನೇ? ಎಂದು ಪ್ರಭಾ ಎನ್ನುವುದೇ ತಡ.”ಎಂದಿಗೂ ಇಲ್ಲ .ಇಂಥ ಚೇಷ್ಟೆ ನನ್ನೊಂದಿಗೆ ಮಾಡಬೇಡಾ ಅಂತಾ ಖಂಡಿತವಾದ ಧ್ವನಿಯಲ್ಲಿ ಜೋರಾಗಿ ಕಿರುಚಿದಳು.

ಪ್ರತಿಮಾಳ ಕೀಟಲೆ,ನಗು, ಉದಾಸೀನತೆ ನೋಡಿದ್ದೆ ಆದರೆ ಅವಳ ಸಿಟ್ಟನ್ನು ಮೊದಲ ಬಾರಿ ನೋಡಿದೆ. ಮರುಕ್ಷಣ ಪ್ರತಿಮಾಳಿಗೆ ತಾನು ಮಾತಾಡಿದ್ದು ತುಂಬಾ ಕಟುವೆನಿಸಿರಬೇಕು.ನಗುತ್ತಾ ಪ್ರಭಾಗೆ”ಪ್ರತಿಮಾ ಎಂದರೆ ಏನು ಗೊತ್ತಾ?” ಮೂರ್ತಿ”.ಎಂದಳು.ಈಗ ತನ್ನ ಸರದಿ ಎನ್ನುವಂತೆ ಪ್ರಭಾ,ಮೂರ್ತಿ ಎಂದರೆ ಪ್ರಮಾಣ ಬದ್ಧವಾಗಿರಬೇಕು ,ಲಕ್ಷಣವಾಗಿರಬೇಕು ಎಂದು ಕೊಂಕಿದಳು. “ನಾನು ವಿಕಾರ ಮೂರ್ತಿ ಆಯ್ತಾ” ಎನ್ನುತ್ತ ಮುಖವನ್ನು ವಕ್ರಮಾಡಿ ವಕ್ರ ಭಂಗಿಯಲ್ಲಿ ಪ್ರತಿಮಾ ನಿಂತಾಗ ಎಲ್ಲರೂ ಕಹಿ ಮರೆತು ನಗತೊಡಗಿದ್ದೆವು ಹಾಗಿತ್ತು ಪ್ರತಿಮಾ ನಿಂತ ಭಂಗಿ. ತಾನೇ ನಿರ್ಮಿಸಿದ ಮೋಡವನ್ನು ಕ್ಷಣಾರ್ಧದಲ್ಲಿ ತಾನೇ ಚದುರಿಸಿ ಎಲ್ಲರನ್ನೂ ತಿಳಿ ವಾತಾವರಣಕ್ಕೆ ಕೊಂಡೊಯ್ದಿದ್ದಳು ಪ್ರತಿಮಾ.

ಒಂದು ದಿನ ಸುಲೋಚನಾ ಮೇಡಂ ಕ್ಲಾಸಿನಲ್ಲಿ ಅವಳು ಮಾನಸಿಕವಾಗಿ ತುಂಬಾ ಯಾತನೆ ಅನುಭವಿಸುವಂತೆ ಕಂಡು ಬಂದಳು.ಕ್ಲಾಸ್ ಮುಗಿದೊಡನೆ ತಲೆನೋವೆಂದು ಹೇಳಿ ಎಲ್ಲರನ್ನೂ ಬಿಟ್ಟು ಮನೆಗೆ ಹೋಗಿ ಬಿಟ್ಟಳು. ಪಕ್ದದಲ್ಲೇ ಕುಳಿತಿದ್ದ ನನಗೂ ಏನೂ ಹೇಳಲಿಲ್ಲ. ಸುಲೋಚನಾ ಮೇಡಂ ಬುದ್ಧಿಮತ್ತತೆಯ ಪ್ರಮಾಣಕ್ಕನುಗುಣವಾಗಿ ಬುದ್ಧಿಮಂದತೆಯನ್ನು ನಾಲ್ಕು ಹಂತದಲ್ಲಿ ಹೇಗೆ ವಿಭಾಗಿಸಲಾಗುವದೆಂದು ವಿವರಿಸುತ್ತಿದ್ದರು.

ಮುಂದೆ ನಾಲ್ಕು ದಿನಗಳಾದರೂ ಪ್ರತಿಮಾ ಕ್ಲಾಸಿಗೆ ಬರದಿದ್ದಾಗ ಕಳವಳವಾಗತೊಡಗಿತು.ಅವಳು ಆಗಾಗ್ಗೆ ಒಂದೆರೆಡು ದಿನ ಕ್ಲಾಸಗೆ ಬರದಿರುವುದು ಸಾಮಾನ್ಯವಾಗಿತ್ತು.ಕೇಳಿದಾಗಲೆಲ್ಲ ’ಮಾ’ಗೆ ಮೈ ಸರಿಯಿರಲಿಲ್ಲವೆನ್ನುತ್ತಿದ್ದಳು.ಆದರೆ ಈ ಸಲ ತಲೆ ನೋವೆಂದು ಕ್ಲಾಸಿನಿಂದ ಎದ್ದು ಹೋದವಳು ನಾಲ್ಕು ದಿನವಾದರೂ ಬರದಿದ್ದಾಗ ಮನೆಗೆ ಹೋಗಿ ನೋಡಿಕೊಂಡು ಬರೋಣವೆನ್ನಿಸಿದರೂ ,ದಿನವೂ ಅವಳ ಮನೆಯ ಮುಂದೆಯೇ ಹೋಗುತ್ತಿದ್ದರೂ ಒಮ್ಮೆಯೂ ಬಾ ಎಂದು ಕರೆದಿಲ್ಲದಿದ್ದಾಗ ಹೇಗೆ ಹೋಗುವುದು ಎಂಬ ಅಭಿಮಾನ.ಮತ್ತೆರಡು ದಿನ ಹೀಗೆಯೇ ಕಳೆದಾಗ ಪ್ರಭಾಳನ್ನು ಕೇಳಿದಾಗ ಅವಳ ತಾಯಿಗೆ ಮೈ ಸರಿಯಿಲ್ಲ ಎಂದಳು.

ಆ ದಿನ ಮನೆಗೆ ಹೋಗುವಾಗ ಮನಸ್ಸು ತಡೆಯದೇ ಹಿಮ್ಮೆಟ್ಚುತ್ತಲೇ ಅವಳ ಮನೆಯ ಅಂಗಳದಲ್ಲಿ ಕಾಲಿಟ್ಚಿದ್ದೆ.ಅಂಗಳದಲ್ಲಿ ಹಳೆಯ ಅವಶೇಷವೆನ್ನುವಂತೆ ಸ್ಟ್ಯಾಂಡರ್ಡ್ ಕಾರಿನ ಗಾಲಿಗಳ ಅರ್ಧಭಾಗ ನೆಲದಲ್ಲಿ ಸಿಕ್ಕಿ ಹಾಕಿಕೊಂಡಂತೆ ನಿಂತಿತ್ತು. ಮನೆ ಹೊರಗೆ ಕೂಡ್ರುವ ಆವರಣದಲ್ಲಿ ಎರಡು ಕುರ್ಚಿ ಒಂದು ಬೆಂಚು ಹಾಕಲಾಗಿತ್ತು.ಒಂದೆಡೆ ಅಂಗಳದಲ್ಲಿ ತುಲಸಿ ಗಿಡ,ಅಲ್ಲಲ್ಲಿ ಬೇರೆ ಸಣ್ಣ ಸಣ್ಣ ಗಿಡಗಳಿದ್ದರೂ ಯಾವುದಕ್ಕೂ ಸರಿಯಾದ ಆರೈಕೆ ಇಲ್ಲದ್ದರಿಂದ ನಳನಳಿಸುವ ಬದಲು ಕಳಾಹೀನವಾಗಿ ನಿಂತಿದ್ದವು.ಒಟ್ಟಿನಲ್ಲಿ ವಾತಾವರಣವೆಲ್ಲ ಬಿಕೋ ಎನ್ನುತ್ತಿತ್ತು

ಅಷ್ಚರಲ್ಲಿ ಶುಭ್ರ ಶೀರೆಯುಟ್ಟ ಬಾಗಿದ ಬೆನ್ನಿನ ಅಜ್ಜಿಯೊಬ್ಬರು ಹೊರಗೆ ಬಂದರು .ಬಂದ ರೀತಿಯೇ ಹೇಳುತ್ತಿತ್ತು ಅವರಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿಲ್ಲವೆಂದು.ನನ್ನನ್ನು ನೋಡಲು ಪ್ರಯತ್ನಿಸುತ್ತಾ ಯಾರು ಎಂದರು ಕ್ಷೀಣ ಸ್ವರದಲ್ಲಿ. ನಾನು ನೀರಜಾ,ಪ್ರತಿಮಾಳ ಗೆಳತಿ ಎಂದೆ.ಅಷ್ಟರಲ್ಲಿ ಪ್ರತಿಮಾ ಹೊರಬಂದಳು.ಗೆಳತಿ ಬಂದಾಗಿನ ಸಂತೋಷವಾಗಲಿ ,ಆತ್ಮೀಯ ಸ್ವಾಗತವಾಗಲಿ ಕಾಣಲಿಲ್ಲ ಅವಳ ಚರ್ಯೆಯಲ್ಲಿ.ಮನಸ್ಸಿಗೆ ಹೇಗೋ ಎನಿಸಿತು. ಅವಳ ನಿಸ್ತೇಜ ಮುಖ ನೋಡಿ ತಾಯಿಯ ಆರೋಗ್ಯದ ಬಗ್ಗೆ ತುಂಬಾ ಹಚ್ಚಿಕೊಂಡಿದ್ದಾಳೆ ಎನಿಸಿತು.ನನ್ನುನ್ನು ಕರೆದುಕೊಂಡು ಹೋಗಿ ಅಂಗಳದಲ್ಲಿ ತೆರೆದುಕೊಳ್ಳುವ ಆದರೆ ಹಜಾರದ ಮಗ್ಗುಲಲ್ಲಿರುವ ರೂಮಿನಲ್ಲಿ ಕೂಡ್ರಿಸಿದಳು.

” ನಿಮ್ಮ ತಾಯಿಗೆ ಸರಿಯಿಲ್ಲವೆಂದು ಕೇಳಿದೆ ,ನೋಡಿಕೊಂಡು ಹೋಗೋಣವೆಂದು ಬಂದೆ”ಎಂದೆ.ಯಾವುದೇ ಪ್ರತಿಕ್ರಿಯೆ ಬರಲಿಲ್ಲ ,ತಾಯಿಯಿದ್ದಲ್ಲಿ ಕರೆದುಕೊಂಡು ಹೋಗುವ ಲಕ್ಷಣವೂ ತೋರಲಿಲ್ಲ.ಅಷ್ಟರಲ್ಲಿ ೬-೭ವರ್ಷದ ಹುಡುಗನೊಬ್ಬ ಮನೆಯ ಒಳಗಿನಿಂದ ನಾವು ಕುಳಿತ ರೂಮಿನ ಬಾಗಿಲಲ್ಲಿ ಬಂದು ನಿಂತು ರೂಮಿನೊಳಗೆ ಬರಲು ಕಾಲಿಟ್ಟ.ಬಾಯಿಯಿಂದ ಸಣ್ಣದಾಗಿ ಜೊಲ್ಲು ಸೋರುತ್ತಿತ್ತು.ಏನೋ ಮಾತಾಡಲು ನಾಲಿಗೆ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ದ.ಕೈ ಸ್ವಲ್ಪು ಸೊಟ್ಟಗಿತ್ತು.ನೋಡಿದೊಡನೆ ಬುದ್ಧಿಮಾಂದ್ಯತೆ(mentally handicapped) ಅಂತಾ ಹೇಳಬಹುದಿತ್ತು‌.ಪ್ರತಿಮಾ ತಟ್ಟನೆ ಎದ್ದು “ಚಲೋ ಅಂದರ್ “ಅಂತಾ ಜೋರಾಗಿ ಗದರಿ ,ಅವನನ್ನು ದಬ್ಬಿ ಒಳಕ್ಕೆ ನೂಕಿದಳು.ಹುಡುಗ ’ಮ್..ಮ್..ಮಾ’ಅಂತಾ ಅಳುತ್ತಾ ಒಳಗೆ ಹೋದ. ನಿಮ್ಮ ಮಾತೃಭಾಷೆ ಹಿಂದಿನಾ ಎಂದಿದ್ದಕ್ಕೆ ಹೌದು ಎಂದಳು ಮೊಟಕಾಗಿ.ಮತ್ತೆ ಮಾತನಾಡುವ ಇಚ್ಛೆ ತೋರಿಸಲಿಲ್ಲ. ನಾನೇ ಎದ್ದು ನಿಂತು ಬರುತ್ತೇನೆ ಎಂದೆ.ಟೀ ತೆಗೆದು ಕೊಂಡು ಹೋಗು ಎಂದಳು ಯಾಂತ್ರಿಕವಾಗಿ.ಈಗ ಬೇಡ ಹೊತ್ತಾಗಿದೆ ಎಂದದ್ದಕ್ಕೆ ’ಸರಿ’ಎಂದಳು.ಯಾವಾಗಲೂ ನಗುತ್ತಾ ನಗಿಸುತ್ತಾ ಇರುವ ಪ್ರತಿಮಾಳ ಮನೆಯ ವಾತಾವರಣ ಸಹಜವೆನಿಸಲಿಲ್ಲ.

ಮನೆಗೆ ಬಂದ ಮೇಲೂ ಮನಸ್ಸಿನ ಶಾಂತಿ ಕದಡಿತ್ತು. ಮಕ್ಕಳು ಬಂದಮೇಲೆ ಅವರ ಬಗ್ಗೆ ಎಂದಿಗಿಂತ ಹೆಚ್ಚಿನ ಅಂತಃಕರಣ ಉಕ್ಕಿ ಬಂದಿತ್ತು‌.ಪ್ರತಿಮಾ ತಮ್ಮನನ್ನು ಬೇಡದ ಪ್ರಾಣಿಯನ್ನು ಅಟ್ಟಿದಂತೆ ಅಟ್ಟಿದ ದೃಶ್ಯ ಕಣ್ಣಿನಿಂದ ಕದಲಲೊಲ್ಲದಾಗಿತ್ತು.ಇಂಥ ಮಕ್ಕಳ ಬಗ್ಗೆ ಕರುಣೆಯಲ್ಲ ಅನುಭೂತಿ ಇರಬೇಕಾದ್ದು ಮಾನವ ಧರ್ಮ.ಆದರೆ ಕರುಣೆ ಕೂಡ ಇಲ್ಲದಂತೆ ವರ್ತಿಸಿದ ಪ್ರತಿಮಾಳ ಬಗ್ಗೆ ಕೋಪಕ್ಕಿಂತ ಜಿಗುಪ್ಸೆಯೆನಿಸಲು ಪ್ರಾರಂಭವಾಗಿತ್ತು.ಪ್ರೀತಿ,ಸ್ನೇಹ,ವಿಶ್ವಾಸ, ಸಹನೆಯಿಂದ ಇಂಥ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಸಾಧ್ಯ.ರಾತ್ರಿಯೆಲ್ಲ ಪ್ರತಿಮಾಳ ತಮ್ಮನ ಚಿತ್ರವೇ ಕಣ್ಣಮುಂದೆ.

ಗೃಹಣ ಹಿಡಿದಂತಿರುವ ಪ್ರತಿಮಾಳ ಮನೆಯ ವಾತಾವರಣದ ಬಗ್ಗೆ ಪ್ರಭಾಳೆದುರು ನನ್ನ ಅನಿಸಿಕೆಗಳನ್ನು ಹೇಳಿದಾಗ ಅವಳು ಒಂದೊಂದೇ ಎಳೆಗಳನ್ನು ಬಿಡಿಸುತ್ತಾ ಹೋದಳು.ಪ್ರತಿಮಾಳ ತಾಯಿ ಎಂಟು ವರುಷಗಳಿಂದ ಹಾಸಿಗೆಯ ಮೇಲೆಯೇ ಇದ್ದಾರೆ.ಎಲ್ಲರಿಗಿಂತ ದೊಡ್ಡವಳೇ ಪ್ರತಿಮಾ.ಅವಳ ನಂತರ ಇಬ್ಬರು ತಂಗಿಯರು.ವಂಶೋದ್ಧಾರಕ್ಕೆ ಮಗ ಬೇಕೆಂದು ಹಂಬಲಿಸಿ ನಾಲ್ಕನೆಯ ಬಾರಿ ಮಗನನ್ನು ಹೆತ್ತಾಗ ಮನೆಯವರೆಲ್ಲರ ಆನಂದ ಹೇಳತೀರದು. ಒಂದೊಂದು ಹೆರಿಗೆಯಲ್ಲೂ ಒಂದೊಂದು ರೀತಿಯ ರೋಗ ಗಂಟು ಬಿದ್ದಿತ್ತು ಪ್ರತಿಮಾಳ ತಾಯಿಗೆ.ಕೊನೆಗೆ ವಂಶೋದ್ಧಾರಕನನ್ನು ಹೆರುವ ವೇಳೆಗೆ ತೀವ್ರವಾದ ನರಗಳ ಬೇನೆಯಿಂದ ಪೂರ್ತಿಯಾಗಿ ನೀರ್ವೀಣ್ಯರಾಗಿದ್ದರು.ಹುಟ್ಟಿದ ವಂಶೋದ್ಧಾರಕನಿಗೆ ಬುದ್ಧಿ ಮಾಂದ್ಯತೆಯೆಂದು ತಿಳಿದ ಮೇಲಂತೂ ದೈಹಿಕ ಬೇನೆಯೊಂದಿಗೆ ಮಾನಸಿಕ ಬೇನೆಯೂ ಸೇರಿ ಅವರನ್ನು ಮೇಲೇಳದಂತೆ ಮಾಡಿತ್ತು.ಆದರೂ ಮಗನ ಮೇಲೆ ಅಮಿತ ಪ್ರೀತಿ. ಕುಳಿತಲ್ಲಿಂದಲೇ ಅವನ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳುತ್ತಿದ್ದರು. ಅವನೂ ’ಮ್ ಮಾ ’ಅಂತಾ ಅವರ ಮಂಚದ ಸುತ್ತಲೂ ತಿರುಗುತ್ತಿರುತ್ತಿದ್ದ. ಈ ಎಂಟು ವರುಷಗಳಲ್ಲಿ ಮನೆಯ ವಾತಾವರಣ ಜೀವಂತಿಕೆಯನ್ನು ಕಳೆದುಕೊಂಡಿತ್ತು. ಪ್ರತಿಮಾಳ ತಂದೆ ಮೊದಲೆಲ್ಲ ತುಂಬಾ ಉತ್ಸಾಹಿ. ವಾರಾಂತ್ಯದಲ್ಲಿ ಹೆಂಡತಿ ಮಕ್ಕಳನ್ನು ಹೊರಗಡೆ ಸುತ್ತಾಡಿಸದಿದ್ದರೆ ಸಮಾಧಾನವಿರುತ್ತಿರಲಿಲ್ಲ.ಹೆಂಡತಿ ಮಗನ ಅವಸ್ಥೆ ಕಂಡು ಕಂಗಾಲಾಗಿ ಅವರ ಔಷಧಿ ಉಪಚಾರ ಗಳಲ್ಲಿ ಕೈ ಬರಿದಾಗಿ ತಿಂಗಳ ಹದಿನೈದನೇ ತಾರೀಖಿಗೇ ಒದ್ದಾಡುವಂತಾದಾಗ ಅವರೂ ಮೌನಿಯಾಗತೊಡಗಿದ್ದರು

ತನ್ನ ತಾಯಿಯ ಇಂದಿನ ಸ್ಥಿತಿಗೆ ಅವಳ ವರುಷದಂತರದಲ್ಲಿ ಒಂದಾದರೊಂದಂತಾದ ಹೆರಿಗೆಗಳೇ ಕಾರಣ ಅಂತಾ ಪ್ರತಿಮಾಗೆ ಗೊತ್ತು. ತಾಯಿ ಮಲಗಿದಲ್ಲಿಂದಲೇ ತಮ್ಮೆಲ್ಲರಿಗಾಗಿ ಎಷ್ಟೊಂದು ಒದ್ಗಾಡುತ್ತಿದ್ದಾರೆಂಬುದನ್ನು ಮನಗಂಡಿದ್ದಳು.ಅವಳಿಗೆ ತಾಯ್ತನವೆಂದರೇ ಜಿಗುಪ್ಸೆ ತಂದಿತ್ತು.ನಾಲವತ್ತು ವರುಷಕ್ಕೇ ಎಂಭತ್ತು ವರ್ಷದಂತವಳಾದ ತನ್ನ ತಾಯಿ, ಬುದ್ಧಿ ಮಾಂದ್ಯದ ತಮ್ಮನನ್ನು ನೋಡಿ ಜನರು ಮರುಕ ತೋರುವದು ಸಹಿಸಲಾಗುತ್ತಿರಲಿಲ್ಲ.

ಕೇಳಿ ಪ್ರತಿಮಾಳ ಬಗ್ಗೆ ಕನಿಕರವೆನಿಸಿತು.ಆ ದಿನ ಪ್ರಭಾ ಅವಳನ್ನು ’ಮಾ’ಎಂದಾಗ ತಾಯಿಯ ದೀನ ಮೂರ್ತಿ ಕಣ್ಣೆದುರು ಬಂದಿರಲು ಸಾಕು.ಅವಳ ಈ ಮನಸ್ಥಿತಿಯಿಂದ ಅವಳನ್ನು ದೂರ ಮಾಡಲು ಸಾವಕಾಶವಾಗಿ ಪ್ರಯತ್ನ ಮಾಡಬೇಕೆಂದುಕೊಂಡೆ. ಇಲ್ಲದಿದ್ದರೆ ಅವಳ ಭವಿಷ್ಯ ?ಆದರೆ ಆ ದಿನ ಅವಳು ನಾ ನೋಡಿದರೆ ಎಲ್ಲಿ ಅಪಮಾನವಾಗುತ್ತದೆ ಎಂದು ತಮ್ಮನನ್ನು ಒಳ ದಬ್ಬಿದ್ದು ಮಾತ್ರ ನನಗೆ ಒಪ್ಪಿತವಾಗಲಿಲ್ಲ.ಇದರ ಬಗ್ಗೆಯೂ ಅವಳಿಗೆ ತಿಳಿಸಿ ಹೇಳ ಬೇಕೆಂದುಕೊಂಡೆ.ಮುಂದೆರಡು ದಿನಕ್ಕೆ ಪ್ರತಿಮಾಳ ತಾಯಿ ತೀರಿ ಹೋದ ಸುದ್ದಿ ತಿಳಿಯಿತು.ನಾವು ನಾಲ್ಕೈದು ಗೆಳತಿಯರು ಸೇರಿ ಸಂತಾಪ ಸೂಚಿಸಲು ಹೋದೆವು.ನಾನು ಹೋದಸಲ ಅವಳ ಮನೆಗೆ ಹೋದಾಗ ಅವಳು ವರ್ತಿಸಿದ ರೀತಿಯ ಬಗೆಗಿನ ಅಸಮಾಧಾನ ಎಂದೋ ಹೊರಟು ಹೋಗಿತ್ತು ಅವಳ ಬಗ್ಗೆ ಪೂರ್ತಿ ತಿಳಿದ ಬಳಿಕ .ಅತ್ತು ಕಣ್ಣು ಕೆಂಪಡರಿದ ಪ್ರತಿಮಾ ಹೊರಬಂದಳು.ಹಜಾರದಲ್ಲಿ ಗೋಡೆಯೊಂದಕ್ಕೆ ಹೊಂದಿ ಹಾಕಿದ ಚಾಪೆಯ ಮೇಲೆ ಕುಳಿತಳು.ತಾಯಿಯವರು ಎಂದು ಹೋಗಿದ್ದು ಎಂದು ಕೇಳಿದಾಗ ತುಟಿ ಕಚ್ಚಿ ಕಣ್ಣೀರನ್ನು ತಡೆಯುತ್ತಾ ಮೊನ್ನೆ ಎಂದಳು.ಅವಳು ಬದುಕಿದ್ದು ಯಾವಾಗ ,ತಮ್ಮನ್ನು ಒಬ್ಬೊಬ್ಬರನ್ನೂ ಹೆತ್ತಾಗ ಹಂತ ಹಂತವಾಗಿ ಸಾವಿನ ಕಡೆ ಸಾಗಿದ್ದಳು ಎನಿಸಿರಬೇಕು ಪ್ರತಿಮಾಳಿಗೆ.ತಮಗಾಗಿಯೇ ಚಿಂತಿಸುವ, ಒದ್ದಾಡುವ,ತಮ್ಮ ಏಳ್ಗೆಯಲ್ಲಿ ಸುಖವನ್ನು ಅರಸಲೆತ್ನಿಸಿ ನೋವಿನಲ್ಲೂ ನಗಲೆತ್ನಿಸುತ್ತಿದ್ದ ತಾಯಿಯ ಅಂತ್ಯ ಪ್ರತಿಮಾಳಿಗೆ ಆಳವಾದ ಗಾಯವನ್ನುಂಟು ಮಾಡಿದಂತಿತ್ತು.

ಲತಾ, ನಿಮ್ಮ ತಾಯಿಯವರಿಗೆ ಏನಾಗಿತ್ತು ಎಂದು ಕೇಳಿದಾಗ ನನಗೆ ಆತಂಕದಿಂದ ಉಸಿರು ಕಟ್ಚಿದಂತಾಯ್ತು.ಅಷ್ಟರಲ್ಲಿ ಅವಳ ತಮ್ಮ ಸ್ಪಷ್ಟವಿರದ ಉಚ್ಛಾರದಲ್ಲಿ ಮ್ ಮ್ ಎಂದು ಅಳುವುದು ಕೇಳಿಬಂತು. ನನಗೆ ಹೇಳತೀರದ ಸಂಕಟವೆನಿಸಿತು.ತಾಯಿಯಿರುವಾಗಲೇ ಅವನಿಂದ ತನಗೆ ಅವಮಾನವೆಂದು ವರ್ತಿಸುತ್ತಿದ್ದ ಪ್ರತಿಮಾ ಅವನಿಗೆ ಯಾವರೀತಿಯ ಆಧಾರವಾದಾಳು?ನಾನು ಅವಳ ತಮ್ಮನನ್ನು ಹೋಗಿ ಸಮಾಧಾನ ಮಾಡಿ ಕರೆದುಕೊಂಡು ಕೂಡಿಸಿಕೊಳ್ಳಬೇಕೇನೋ ಎಂದು ಯೋಚಿಸುತ್ತಿದ್ದೆ. ಪ್ರತಿಮಾ ಧಡಕ್ಕನೆದ್ದು ಒಳಹೋದಾಗ ಏನು ಮಾಡುವಳೋ ಎಂದು ಭಯಪಡುತ್ತಿದ್ದಂತೆ ಇನ್ನೂ ಅಳುತ್ತಲೇ ಇದ್ದ ತಮ್ಮನನ್ನು ಎತ್ತಿಕೊಂಡು ಹೊರಬಂದು ಚಾಪೆಯ ಮೇಲೆ ಕುಳ್ಳರಿಸಿಕೊಳ್ಳುತ್ತಾ ತನ್ನ ದುಪ್ಪಟ್ಟಾದಿಂದ ಕಣ್ಣೊರಸುತ್ತಾ ಕೆನ್ನೆಗೊಂದು ಮುದ್ದು ಕೊಟ್ಟು ,ನೋಡು ನಾನಿಲ್ಲವೇ,ನಾನೇ ’ಮಾ’ಎಂದು ಹಿಂದಿಯಲ್ಲಿ ಹೇಳುತ್ತಾ ಎದೆಗೊತ್ತಿಕೊಂಡಾಗ ಬಿಗಿ ಹಿಡಿದಿದ್ದ ಉಸಿರು ಸಡಿಲಾದಂತಾಯಿತು.ಹತಾಶೆಯ ಭಾರದಡಿಯಲ್ಲಿ ಹುಗಿದು ಹೋಗಿದ್ದ ಸ್ತ್ರೀತ್ವ,ಮಾತೃತ್ವದ ಭಾವನೆಗಳು ಜಾಗೃತ ಗೊಂಡಿದ್ದನ್ನು ನೋಡಿ ನನಗರಿವಿಲ್ಲದಂತೆ ನನ್ನ ಕಂಗಳಲ್ಲಿ ಅಶೃಗಳು ಹರಿಯತೊಡಗಿದ್ದವು.ಒರೆಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

ನನ್ನ ಕಣ್ಣೀರು ಇಂಥ ಚಿಕ್ಕ ವಯಸ್ಸಿನಲ್ಲಿ ಪ್ರತಿಮಾಳ ಮನಸ್ಸಿನ ಮೇಲೆ ಒಂದಾದರೊಂದಂತೆ ಆಗುತ್ತಿದ್ದ ಗಾಯಗಳನ್ನು ನೋಡಿಯೋ ಅಥವಾ ಅವಳಲ್ಲಿ ಜಾಗೃತವಾದ ಮಾತೃತ್ವದ ಭಾವನೆಗಳನ್ನು ಕಂಡ ಆನಂದಕ್ಕೋ ನನಗೇ ಅರ್ಥವಾಗಲಿಲ್ಲ.ದೇವಕಿಯ ಮಡಲಿನಿಂದ ಯಶೋದೆಯ ಮಡಲಿಗೆ ಬಂದು ಬಿದ್ದ ಕೃಷ್ಣ ಅದೇಕೋ ನೆನಪಾದ. ಮನಸ್ಸು ಹಗುರವಾಗಿತ್ತು. ದಾರಿ ಎಂಬದನ್ನೂ ಮರೆತು “ಬಾರೇ ಗೋಪೆಮ್ಮ ನಿನ್ನ ಬಾಲಯ್ಯ ಅಳುತಾನೆ ಬಾರೇ ಗೋಪೆಮ್ಮ.ಯಾರೂ ತೂಗಿದರೂ ಮಲಗನು ಮುರವೈರಿ ಬಾರೇ ಗೋಪೆಮ್ಮ ಎಂದು ಮೆಲ್ಲಗೆ ಗುಣ ಗುಣಿಸುತ್ತ ಮನೆ ಸೇರಿದೆ.

ಮೀರಾ ಜೋಶಿ.