ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆರೋಗ್ಯವರ್ಧಕ ಸಂಕ್ರಾಂತಿ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಎಳ್ಳುಬೆಲ್ಲ ತಿಂದು ಆರೋಗ್ಯ ಪಡೆಯಿರಿ.

ಕೋವಿಡ್-19 ಪಿಡುಗಿನ ಮಧ್ಯೆಯೂ ಹಬ್ಬಗಳ ಆಚರಣೆ ಸಾಂಪ್ರದಾಯಿಕವಾಗಿಯೇ ನಡೆಯುತ್ತಿದೆ. ಕೊರೋನದಿಂದ ಹಬ್ಬಗಳನ್ನು ಸರಳವಾಗಿಯೇ ಆಚರಿಸುತ್ತಿದ್ದಾರೆ. ಕರೋನ ವೈರಸ್ ನಂತಹ ಸಾಂಕ್ರಾಮಿಕ ರೋಗ ಹರಡದಂತೆ, ಅದನ್ನು ತಡೆಗಟ್ಟಲು ಆರೋಗ್ಯಕರವಾದ ಸಂಕ್ರಾಂತಿ ಹಬ್ಬ ಬಂದಿದೆ‌ ಎಂದರೆ ನಂಬುತ್ತೀರಾ? ಈ ಹಬ್ಬದ ಮಹತ್ವ ಹಾಗೂ ಹಬ್ಬದಿಂದ ಮಾಡುವ ತಿಂಡಿ ಆರೋಗ್ಯಕ್ಕೆ ಎಷ್ಟು ಪೂರಕ ಎಂದು ತಿಳಿದುಕೊಳ್ಳೋಣ ಬನ್ನಿ.

ವರ್ಷದ ಹನ್ನೆರಡು ಸಂಕ್ರಮಣಗಳಲ್ಲಿ ಮೊದಲು ಸಿಗುವುದೇ ಮಕರಸಂಕ್ರಮಣ. ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುವನು.ಈ ಸಂದರ್ಭವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಇದನ್ನು ಭೋಗಿ ಹಬ್ಬ, ಸುಗ್ಗಿ ಹಬ್ಬ, ಪೊಂಗಲ್ ಹಬ್ಬ ಹಾಗೂ ಉತ್ತರಾಯಣ ಪುಣ್ಯಕಾಲ ಎಂದೆಲ್ಲಾ ಕರೆಯುತ್ತಾರೆ.ಈ ಹಬ್ಬದ ಸಂತೋಷಕ್ಕಾಗಿ ಪೊಂಗಲ್ ಅನ್ನು ಸೂರ್ಯನಿಗೆ ನೈವೇದ್ಯ ಮಾಡುತ್ತಾರೆ. ಹಾಗೆ ಈ ಹಬ್ಬದ ವಿಶೇಷ ಸಂಭ್ರಮವೆಂದರೆ ಎಳ್ಳು ಬೆಲ್ಲ ಬೀರುವುದು ಒಂದು ಪ್ರಮುಖ ಅಂಗ. ಎಳ್ಳು, ಕಡಲೇಬೀಜ,ಬೆಲ್ಲ, ಕೊಬ್ಬರಿ, ಹುರಿಗಡಲೆ ಇವುಗಳನ್ನು ಒಟ್ಟಿಗೆ ಸೇರಿಸುತ್ತಾರೆ. ಇದಕ್ಕೆ ಸಂಕ್ರಾಂತಿ ಎಳ್ಳು, ನಾಗವೆಳ್ಳು ಎಂದು ಕರೆಯುತ್ತಾರೆ. ಸಂಕ್ರಾಂತಿ ಹಬ್ಬದಂದು ದೇವರಿಗೆ ಅರ್ಪಿಸುವ ಈ ಸಂಕ್ರಾಂತಿಎಳ್ಳು ಕರ್ಮದ ಹೊರೆಯನ್ನು ಕಿರಿದಾಗಿಸಿ (ಎಳ್ಳು), ದೈವೀ ಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ), ಪ್ರಕೃತಿಗಾಗಿ ಹಿಂಬಾಲಿಸುತ್ತ(ಕಬ್ಬು), ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ಸಂದೇಶವನ್ನೇ ಬಿಂಬಿಸುತ್ತದೆ.

ಪೊಂಗಲ್

ಅಕ್ಕಿ ಹೆಸರು ಬೇಳೆಯಿಂದ ಮಾಡುವ ಈ ಪೊಂಗಲ್ ಶರೀರದ ಅನೇಕ ದೋಷಗಳನ್ನು ನಿವಾರಿಸುವ ಶಕ್ತಿ ಪಡೆದಿದೆ. ಅಕ್ಕಿಯಲ್ಲಿ ಶರ್ಕರಪಿಷ್ಟ ಅಂಶ ಹೆಚ್ಚಾಗಿರುತ್ತದೆ. ಹೆಸರುಬೇಳೆಯಲ್ಲಿ ಪೊಟ್ಯಾಶಿಯಂ, ವಿಟಮಿನ್ ಹಾಗೂ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ. ಹೊರಗಿನ ಶಾಖವನ್ನು ತಡೆದು, ಶಾಖವನ್ನು ಸಮನ್ನಾಗಿಡುವ ಶಕ್ತಿ ಶರ್ಕರಪಿಷ್ಟ, ಪ್ರೋಟೀನ್ ಗಳಿರುವುದರಿಂದ ಇವು ಶರೀರಕ್ಕೆ ಬೇಕು. ಹೆಸರುಬೇಳೆ ತಿನ್ನಲೂ ರುಚಿಯೂ, ಶಕ್ತಿದಾಯಕವೂ ಆಗಿದೆ. ತಂಪಿನ ಗುಣ ಹೊಂದಿದೆ. ಇವುಗಳ ‌ಸೇವನೆಯಿಂದ ಹೊಟ್ಟೆಯೊಳಗಿನ ಉರಿ ಶಾಂತವಾಗುವುದು. ಮಲವನ್ನು ಸಡಿಲಿಸುತ್ತದೆ. ಮೂತ್ರ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಮೆಣಸು ಉಷ್ಣ ತಗ್ಗಿಸಿ ಹುಣ್ಣುಗಳಾಗದಂತೆ, ಶೀತವೂ ಆಗದಂತೆ ಮಾಡುತ್ತದೆ. ಜೀರಿಗೆ ಪಿತ್ತಹರ,ಜೀರ್ಣ ಶಕ್ತಿಯನ್ನು ವೃದ್ದಿಸುವುದು. ತೈಲಯುಕ್ತ ಹಾಗೂ ಕೊಬ್ಬಿನಂಶವಾದ ತೆಂಗಿನತುರಿ ಸುವಾಸನೆಯು, ವಾಯುಹರವಾದ, ಮನಸ್ಸಿಗೆ ಮುದನೀಡುವ ಇಂಗು ಇವುಗಳೆಲ್ಲವನ್ನು ಅಕ್ಕಿಯೊಡನೆ ಸೇರಿಸಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡಿ ಬೆಳಿಗ್ಗೆಯೇ ತಿಂದರೆ ಶರೀರಕ್ಕೆ ಲವಲವಿಕೆ, ಆರೋಗ್ಯ,ಕೊಬ್ಬಿನ ಸೇರ್ಪಡೆ ಎಲ್ಲವೂ ಉಂಟಾಗುತ್ತದೆ.

ಕಬ್ಬು

ಎಲ್ಲರೂ ಇಷ್ಟವಾಗಿ ತಿನ್ನುವ ಕಬ್ಬಿಗೆ ಈ ಹಬ್ಬದಲ್ಲಿ ವಿಶೇಷ ಪ್ರಾಮುಖ್ಯತೆ. ಇದು ಜೀವ ಕ್ರಿಯೆಗಳನ್ನು ದ್ವಿಗುಣಗೊಳಿಸಿ ಶೀಘ್ರವಾಗಿ ಶಕ್ತಿ ಬರುವಂತೆ ಮಾಡುತ್ತದೆ. ಕಬ್ಬಿನಿಂದ ಸಹಜ ಸಿದ್ಧವಾಗಿ ಲಭಿಸುವ ಸಕ್ಕರೆಯಂಶ ಇದೆ. ದೇಹಕ್ಕೆ ಶಕ್ತಿ ನೀಡುವ ಕಾರ್ಬೋಹೈಡ್ರೇಟ್ಸ್ ಇದರಲ್ಲಿ ಇರುತ್ತದೆ. ಹಲ್ಲುಗಳನ್ನು ಶುಚಿ ಹಾಗೂ ಬಲಪಡಿಸುತ್ತದೆ. ಕಬ್ಬಿನಲ್ಲಿ ಖನಿಜ, ವಿಟಮಿನ್ ಗಳು ಸಾಕಷ್ಟಿವೆ. ಇದು ದೇಹವನ್ನು ತಂಪಾಗಿಸುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ‘ಸಿ’, ಕಾರ್ಬೋಹೈಡ್ರೇಟ್ಸ್, ಖನಿಜಾಂಶ,ಕ್ಯಾಲ್ಸಿಯಂ ಇದೆ. ಕಿತ್ತಳೆ ಹಣ್ಣಿನ ಸೇವನೆಯಿಂದ ದೇಹದ ಕಾಂತಿ ಹೆಚ್ಚುತ್ತದೆ. ಅಲ್ಲದೆ ರಕ್ತ ಶುದ್ಧಿಯಾಗಿ ಹಸಿವು ವೃದ್ಧಿಯಾಗುತ್ತದೆ. ಹೃದಯ ದೌರ್ಬಲ್ಯ ನೀಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಆರೋಗ್ಯವರ್ಧಕ,ಸೌಂದರ್ಯವರ್ಧಕವೂ ಆಗಿದೆ.

ಬಾಳೆಹಣ್ಣು

ಎಲ್ಲಾ ಹಣ್ಣುಗಳಲ್ಲಿ ಬಾಳೆಹಣ್ಣು ಶ್ರೇಷ್ಠ ವೆಂಬ ಹೆಗ್ಗಳಿಕೆ ಇದೆ. ಬಾಳೆಹಣ್ಣಿನ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಶರೀರದ ಮಾಂಸ ಖಂಡಗಳು ಬಲವರ್ಧನೆ ಗೊಳ್ಳುವುವು.ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್, ಫ್ಲಾಟ್ಸ್,ಕ್ಯಾಲ್ಸಿಯಂ, ವಿಟಮಿನ್ ಸಿ, ಹೀಗೆ ಪೋಷಕಾಂಶಗಳು ಇವೆ. ಬಿಳಿ ಸೆರಗು, ಮೂಲವ್ಯಾಧಿ, ಕರಳಿನ ಹುಣ್ಣು, ಕೆಮ್ಮು, ಎದೆ ನೋವು ರೋಗಗಳ ಬಾಧೆ ಗುಣವಾಗುವುದು.

ಎಳ್ಳು

ಎಳ್ಳು ಒಂದು ತೈಲ ಧಾನ್ಯ. ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಎಳ್ಳಿನ ಬಳಕೆ ಚಾಲ್ತಿಯಲ್ಲಿದೆ. ಎಳ್ಳು ಬಹು ಪೌಷ್ಟಿಕ ಗುಣಗಳಿಂದಾಗಿ ದೈನಂದಿನ ಆಹಾರದ ಒಂದು ಭಾಗವಾಗಿದೆ.ಇದರಲ್ಲಿ ಶರ್ಕರ ಪಿಷ್ಟಗಳು ಇದ್ದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಇದರಲ್ಲಿ ಮೇದಸ್ಸು (ಫ್ಲಾಟ್ಸ್ ಗಳು),ವಿಟಮಿನ್ ಎ,ಈ, ಮತ್ತು ನಿಯಾಸಿರ್ (ನಿಕೋಟಿಕ್ ಆಮ್ಲ), ಕೋಲಿನ್,ಫ್ಲೋರಿಕ್ ಆಮ್ಲ ಇವೆಲ್ಲವೂ ಫ್ಯಾಂಟೋಥೇನಿಕ್ ಆಮ್ಲ ಎಳ್ಳಿನ ಅಂಶದಲ್ಲಿ ಹೆಚ್ಚಾಗಿ ಇದ್ದು, ಚರ್ಮಕ್ಕೆ ಮೃದುತ್ವವನ್ನು ಹಾಗೂ ಕೂದಲುಗಳಿಗೆ ಆರೋಗ್ಯವನ್ನು ತಂದು ಕೊಡುತ್ತದೆ.

ಬೆಲ್ಲ

ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಉಪಯೋಗದಲ್ಲಿರುವ ಒಂದು ಸಿಹಿ ಪದಾರ್ಥ.ಕಬ್ಬಿನ ಹಾಲಿಗೆ ಯಾವುದೇ ರಾಸಾಯನಿಕ ಬೆರೆಸದೆ ಬೆಲ್ಲವನ್ನು ತಯಾರಿಸುವುದರಿಂದ ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ಬೆಲ್ಲ ಸೇವಿಸಿದರೆ ಬಾಯಿಯು ಸಿಹಿ! ಇತಮಿತ- ನಿಯಮಿತ ಬೆಲ್ಲದ ಸೇವನೆಯಿಂದ ಆರೋಗ್ಯಪೂರ್ಣ ದೇಹ, ಮನಸ್ಸುಗಳೊಂದಿಗೆ ಜೀವನವೂ ಸಿಹಿಯಾಗುತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಬೆಲ್ಲ ಒಳ್ಳೆಯದು. ಕೆಮ್ಮು, ಒಣಕೆಮ್ಮು,ಅಜೀರ್ಣ, ಮಲಬದ್ಧತೆ,ಮೈಗ್ರೇನ್ ಹಾಗೂ ಉಸಿರಾಟದ ತೊಂದರೆ ಇವೆಲ್ಲಕ್ಕೂ ಬೆಲ್ಲ ರಾಮಬಾಣ. ಬೆಲ್ಲದಲ್ಲಿ ‘ಆಂಟಿಆಕ್ಸಿಡೇಂಟ್’ಗಳು’ ಅಧಿಕವಾಗಿರುವುದರಿಂದ ದೇಹದಲ್ಲಿನ ವಿಷ ವಸ್ತುಗಳಿಂದ ರಕ್ಷಣೆ ಮಾಡುತ್ತದೆ. ದೇಹದ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದ ಎಳ್ಳು-ಬೆಲ್ಲ ಮಿಶ್ರಣವನ್ನು ಸೇವಿಸುವ ಸಂಪ್ರದಾಯ ಬಂದಿದೆ.

ನೆಲೆಗಡಲೆ (ಶೇಂಗಾ)

ಶೇಂಗಾ ದ್ವಿದಳ ಧಾನ್ಯಗಳಾಗಿದ್ದು, ಬಡವರ ಬಾದಾಮಿ ಎಂದೇ ಕರೆಸಿಕೊಳ್ಳುವ ನೆಲೆಗಡಲೆ ಮತ್ತೊಂದು ತೈಲ ಧಾನ್ಯ. ಶೇಂಗಾ ಎಣ್ಣೆ ತುಂಬಾ ಸ್ವಾದಿಷ್ಟವಾಗಿರುವುದು. ಶೇಂಗಾ ಎಳ್ಳು ಗಳನ್ನು ಹುರಿದಾಗ ಅದರಲ್ಲಿರುವ ಹಾನಿಕಾರಕ ವಸ್ತುಗಳು ನಾಶವಾಗಿ ಮಧುರ ಸುವಾಸನೆ ಹೊರಹೊಮ್ಮುತ್ತದೆ. ಆಹಾರ ಜೀರ್ಣ ಕ್ರಿಯೆಗೆ ಇದು ತುಂಬಾ ಸಹಕಾರಿಯಾಗಿದೆ. ನೆಲೆಗಡಲೆಯಲ್ಲಿ ಪ್ರೊಟೀನ್,ಕಾರ್ಬೋಹೈಡ್ರೇಟ್ ಹೆಚ್ಚಾಗಿದೆ. ಇದರ ಸೇವನೆಯಿಂದ ಮೀನಖಂಡಗಳ ನೋವುಗಳ ಸೆಳೆತ ಹೋಗುತ್ತದೆ.ಶೇಂಗಾಬೀಜ ದಲ್ಲಿ ಮ್ಯಾಗ್ನಿಷಿಯಂ ಹೆಚ್ಚಾಗಿದ್ದು ರಕ್ತಪರಿಚಲನಾ ಕ್ರಮವನ್ನು ಪ್ರಚೋದಿಸುತ್ತದೆ.ಇದರಲ್ಲಿ ಕೊಲಾಸ್ಟ್ರಾಲ್ ಕಡಿಮೆ ಇರುವುದರಿಂದ ಮಧುಮೇಹದವರಿಗೆ ಉತ್ತಮ. ಆಂಟಿ ಆಕ್ಸಿಡೆಂಟ್ ಗಳನ್ನು ದೂರ ಮಾಡುವ ಗುಣವಿದೆ.
ಎಳ್ಳು-ಬೆಲ್ಲ, ಹುರಿಗಡಲೆ,ಕಡಲೆಬೀಜ, ಇವೆಲ್ಲವನ್ನು ತೈಲ ತುಂಬಿರುವ ಕೊಬ್ಬರಿಯೊಡನೆ ಹದವಾಗಿ ಬೆರೆಸಿ ತಿಂದರೆ ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು.ಈವೈಜ್ಞಾನಿಕ ಪರಿಣಾಮಗಳನ್ನು ನಮ್ಮ ಹಿರಿಯರು ಅರ್ಥಮಾಡಿಕೊಂಡು ವಸ್ತುಗಳನ್ನು ಬಳಸುವಂತೆ ಪ್ರಕೃತಿಯ.ವಿದ್ಯಮಾನಕ್ಕೆ ಅನುಗುಣವಾಗಿ ಆಹಾರವನ್ನು ಬಳಸುವಂತೆ ಮಾಡಿದ್ದಾರೆ.
ಕರೋನದಂತಹ ಕಾಯಿಲೆಗಳು ಬರದಂತೆ ಇಂತಹ ಪೌಷ್ಟಿಕಾಂಶಗಳ ಆಹಾರ ಸೇವಿಸಿ, ನಾವು ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಒಟ್ಟಿನಲ್ಲಿ ಸಂಕ್ರಾಂತಿ ಹಬ್ಬ ಆರೋಗ್ಯ ಪೂರ್ಣವನ್ನು ಮತ್ತು ಪ್ರೀತಿ,ವಿಶ್ವಾಸಗಳನ್ನು ಬೆಳೆಸುವ ಒಂದು ಪವಿತ್ರ ಹಬ್ಬವಾಗಿದೆ. ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸಲು, ದುಡಿಮೆಯ ಶ್ರಮವನ್ನು ಬಾಳಿನ ಬೇಸರವನ್ನು ಪರಿಹರಿಸಿ ಮನುಷ್ಯನ ಮನಸ್ಸಿಗೆ ಮುದವನ್ನು ನೀಡುವ ಈ ಹಬ್ಬ,ಕತ್ತಲನ್ನು ಓಡಿಸಿ ಜ್ಞಾನದ ಜ್ಯೋತಿಯಾಗಿ ಹೊಸ ಬದುಕನ್ನು ಹಸನು ಮಾಡಿಕೊಳ್ಳುವ ದಿವ್ಯ ಸಂದೇಶವನ್ನು ನೀಡುವ ಈ “ಮಕರ ಸಂಕ್ರಾಂತಿ”ಹಬ್ಬವನ್ನು ಸ್ವಾಗತಿಸಿ, ಸಂತೋಷದಿಂದ ಆಚರಿಸೋಣ.

ಲೇಖಕರು: ಶ್ರೀಮತಿ ರಾಜೇಶ್ವರಿ ವಿಶ್ವನಾಥ್