ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇರುವುದೆಲ್ಲವ ಬಿಟ್ಟು…

ಡಾ. ಪ್ರೀತಿ ಕೆ.ಎ.
ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)

ಸುಮಾಳಿಗೆ ಈಗ ಎಲ್ಲವೂ ಗೋಜಲಾಗಿ ಕಾಣುತ್ತಿದೆ. ತನಗೆ ನಿಜವಾಗಿಯೂ ಏನು ಬೇಕೆಂಬುವುದೇ ಗೊತ್ತಾಗುತ್ತಿಲ್ಲ. ಬಹುಶಃ ಮಧ್ಯವಯಸ್ಸು ದಾಟಿದ ಎಲ್ಲ ಹೆಂಗಸರಿಗೂ ಇಂತಹುದೇ ಸಮಸ್ಯೆ ಎದುರಾಗಿರಬಹುದೆಂದು ಇತ್ತೀಚೆಗೆ ಅನಿಸುತ್ತಿದೆ. ಇಷ್ಟು ವರ್ಷಗಳಲ್ಲಿ ಸುಮಾ ಒಮ್ಮೆಯೂ ಸುಮ್ಮನೇ ಕುಳಿತದ್ದೇ ಇಲ್ಲ. ಅಲಾರಾಂ ಇಲ್ಲದೇ ಬೆಳಗ್ಗೆ ಐದಕ್ಕೇಳುವುದು ರೂಢಿಯಾಗಿಬಿಟ್ಟಿತ್ತು. ಬೆಳಗಿನ ಕೆಲಸಗಳನ್ನೆಲ್ಲಾ ಮುಗಿಸಿ, ಗಂಡ ಮಕ್ಕಳನ್ನು ಎಬ್ಬಿಸಿ, ಕಾಲೇಜು ಆಫೀಸುಗಳಿಗೆ ಹೊರಡಿಸಿ ತಾನೂ ಬ್ಯಾಂಕಿಗೆ ಹೊರಡುವ ಧಾವಂತ. ಬೆಂಗಳೂರಿನಂಥ ನಗರಗಳಲ್ಲಿ ಎರಡೆರಡು ಬಸ್ಸು ಬದಲಿಸಿ ಸರಿಯಾದ ಸಮಯಕ್ಕೆ ತಲುಪಬೇಕೆಂದರೆ ಸಂಯಮ -ಅದೃಷ್ಟ ಎರಡೂ ಇರಬೇಕು. ಸ್ವತಃ ಕಾರೋ ಸ್ಕೂಟರೋ ಬಿಡುವ ಧೈರ್ಯ ಅವಳಿಗೆ ಯಾಕೋ ಬರಲೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಉಬರ್, ಓಲಾಗಳು ಬಂದಾಗ ದೇವರಿಗೆ ಕೈ ಎತ್ತಿ ಮುಗಿದಿದ್ದಳು. ಇದೀಗ ಮೊದಲಿನಂತೆ ತುಂಬು ಗರ್ಭಿಣಿಯಂತೆ ಓಡುವ ಬಸ್ಸಲ್ಲಿ ಓಡಾಡುವ ಪ್ರಮೇಯವಿಲ್ಲ. ಆರಾಮವಾಗಿ ಎ. ಸಿ ಕಾರಲ್ಲಿ ಕೂತು ಹೋಗುವ ಭಾಗ್ಯ ಒದಗಿತ್ತು. ಹಾಗಾಗಿಯೇ ಒಂದಷ್ಟು ಹೊತ್ತು ನಿರುಮ್ಮಳವಾಗಿ ಕೂತು ಯೋಚಿಸಲು ಪುರುಸೊತ್ತು ಸಿಕ್ಕಿತ್ತು. ಅಂತಹ ದಿನಗಳಲ್ಲೇ ಬಂದ ಒಂದು ಆಲೋಚನೆ ಇಂದಿನ ತನ್ನ ಈ ಸ್ಥಿತಿಗೆ ಕಾರಣವಾದದ್ದು ಮಾತ್ರ ಸುಳ್ಳಲ್ಲ ಎಂದು ಈಗೀಗ ಅವಳಿಗೆ ಅನ್ನಿಸುವುದುಂಟು.

ಎಷ್ಟೋ ವರ್ಷಗಳಿಂದ ಮಾಡಿದ್ದನ್ನೇ ಮಾಡುತ್ತಿದ್ದ ಸುಮಾಳಿಗೆ ಅವತ್ಯಾಕೋ ಬೇರೇನನ್ನಾದರೂ ಮಾಡಬೇಕೆಂಬ ಆಸೆ ಚಿಗುರೊಡೆದಿತ್ತು. ಮನೆ, ಬ್ಯಾಂಕಿನ ಕೆಲಸಗಳನ್ನು ಎಷ್ಟೋ ಜನ್ಮಾಂತರಗಳಿಂದ ಮಾಡುತ್ತಿದ್ದೆನೇನೋ ಎಂದು ಅನ್ನಿಸಲು ಶುರುವಾಗಿತ್ತು. ಇಷ್ಟು ವರುಷಗಳನ್ನು ಇನ್ನೊಬ್ಬರಿಗಾಗಿ ದುಡಿಯಲೆಂದೇ ವ್ಯಯಿಸಿಬಿಟ್ಟೆನಾ ತನಗೆಂದು ಏನೂ ಮಾಡಲಿಲ್ಲವಾ ಎಂದು ತೀವ್ರವಾಗಿ ಯೋಚನೆಗಿಟ್ಟುಕೊಂಡಿತ್ತು. ಆ ಆಲೋಚನೆಯೇ ವಿಪರೀತವಾಗಿ ಅವಳನ್ನು ಖಿನ್ನಳಾಗಿಸಿತ್ತು. ಕೊನೆಕೊನೆಗೆ ಅದು ಸುಮಾಳ ವರ್ತನೆ, ಕೆಲಸಗಳಲ್ಲೂ ವ್ಯಕ್ತವಾಗಲು ಪ್ರಾರಂಭವಾದಾಗಲೇ ಅವಳ ಗಂಡ ಸುಧೀರನಿಗೆ ‘ಏಕೋ ಏನೋ ಸರಿಯಿಲ್ಲ ‘ ಎಂಬುದು ಗೊತ್ತಾದದ್ದು. ಒತ್ತಾಯಿಸಿ ಕೇಳಿದಾಗ ಸಮಸ್ಯೆಯೇನೆಂದು ಬಾಯಿ ಬಿಟ್ಟಿದ್ದಳು. ತಾನು ಬೇಕೆನಿಸಿದ್ದನ್ನು ಮಾಡಿಕೊಂಡು ಇದ್ದುಬಿಡಬೇಕೆನ್ನುವ ಅವಳ ಆಸೆಯನ್ನು ಪೂರೈಸಲು ಅವನು ಸೂಚಿಸಿದ್ದ ಉಪಾಯ ಸುಮಾಳಿಗೆ ಸರಿಯೆಂದು ಕಂಡಿತ್ತು.

ಸುಮಾ ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಂಡಾಗ ಸಹೋದ್ಯೋಗಿಗಳೆಲ್ಲ ಆಶ್ಚರ್ಯಗೊಂಡಿದ್ದರು. ಅವರು ಕಂಡಂತೆ ಕೆಲಸದಲ್ಲಿ ನಿಪುಣೆಯಾಗಿದ್ದ ಸುಮಾಳಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಇಬ್ಬರು ಮಕ್ಕಳಾಗಲೇ ಹರಯಕ್ಕೆ ಕಾಲಿಟ್ಟಿದ್ದರು. ಇನ್ನೂ ಕೆಲವು ವರ್ಷ ಕೈ ತುಂಬಾ ಸಂಬಳ ತೆಗೆದುಕೊಂಡು ಇದ್ದುಬಿಡಬಹುದಲ್ಲ ಎಂದೇ ಹಲವರ ಅಭಿಪ್ರಾಯವಾಗಿದ್ದರಲ್ಲಿ ಅಚ್ಚರಿಯಿಲ್ಲ.

ಸುಮಾ ತನ್ನಿಚ್ಛೆಯಂತಲೇ ಕೆಲಸ ಬಿಟ್ಟರೂ ಕೊನೆಯ ದಿನವೇಕೋ ಮಂಕಾಗಿದ್ದಳು. ಆದರೆ ಬ್ಯಾಂಕಿನಿಂದ ಹೊರಗೆ ಕಾಲಿಟ್ಟ ಕೂಡಲೇ ಇನ್ನು ದಿನವೂ ಧಾವಂತದಿಂದ ಓಡಬೇಕಿಲ್ಲ, ತನಗೆ ಬೇಕಿದ್ದ ಹಾಗೆ ಇದ್ದು ಬಿಡಬಹುದು ಎಂಬ ಆಲೋಚನೆ ಮಾತ್ರದಿಂದಲೇ ಅತ್ಯಂತ ಖುಷಿಗೊಂಡಿದ್ದಳು. ಮಾರನೇ ದಿನ ಬೆಳ್ಳಂಬೆಳಗ್ಗೆ ಏಳುವ ಅನಿವಾರ್ಯವಿಲ್ಲವಲ್ಲ ಎಂದುಕೊಂಡು ಒಂದು ಬಗೆಯ ನಿಶ್ಚಿಂತೆಯಿಂದ ನಿದ್ದೆಗೆ ಜಾರಿದ್ದಳು. ಆದರೂ ಸೂರ್ಯ ಮೂಡುವ ಮೊದಲೇ ಎಚ್ಚರಗೊಂಡವಳು ಮತ್ತೆ ನಿದ್ರೆ ಬರದಿದ್ದಾಗ ಕಸಿವಿಸಿಗೊಂಡಳು. ಮತ್ತೂ ಅರ್ಧ ಗಂಟೆ ಹಾಸಿಗೆಯಲ್ಲಿ ಹೊರಳಾಡಿ ಇನ್ನು ಸಾಧ್ಯವಿಲ್ಲವೆಂದೆನಿಸಿ ಎದ್ದು ಅಡುಗೆ ಮನೆಯತ್ತ ಇಣುಕಿ ನೋಡಿದಳು. ಇವತ್ಯಾಕೋ ಅಡುಗೆ ಮನೆಯೂ ಹೊಸತಾಗಿ ಕಂಡಿತ್ತು. ಗಂಡ, ಮಕ್ಕಳು ಮನೆ ಬಿಟ್ಟ ಮೇಲೆ ಒಬ್ಬಳೇ ಕೂತು ನಿಧಾನವಾಗಿ ತಿಂಡಿ ತಿನ್ನತೊಡಗಿದಳು. ಇಷ್ಟು ವರ್ಷಗಳಲ್ಲಿ ತಾನೆಂದೂ ಇಷ್ಟು ನಿಶ್ಚಿಂತೆಯಿಂದ ತಿಂಡಿ ತಿಂದಿರಲಿಲ್ಲವೆಂಬುದು ಅರಿವಾಗಿ ಫಕ್ಕನೇ ನಗು ಬಂದಿತ್ತು. ಇನ್ನು ಸಂಜೆಯ ತನಕವೂ ತನ್ನದೇ ಲೋಕ ವೆಂದು ನೆನಪಾಗಿ ಖುಷಿಯಿಂದ ಕುಣಿಯಬೇಕೆನಿಸಿತ್ತು.

ತಿಂಡಿ ತಿಂದ ಕೂಡಲೇ ಅಮ್ಮನಿಗೆ ಫೋನಾಯಿಸಿದ್ದಳು. ಸುಮಾಳ ಮಾತು ಕೇಳಿ ಅವಳಮ್ಮನಿಗೆ ಆಶ್ಚರ್ಯವಾಗಿತ್ತು. ಬುದ್ಧಿ ಬಂದಾಗಿನಿಂದಲೂ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕೆಂಬುದೊಂದೇ ಸುಮಾಳ ಕನಸಾಗಿತ್ತು ಎಂಬುವುದು ಅವಳಿಗೂ ಗೊತ್ತು. ಅವಳಿಗೆ ಕೆಲಸ ಸಿಕ್ಕಿದಾಗ ಅವಳಿಗಿಂತ ಖುಷಿಗೊಂಡವಳು ಅವಳಮ್ಮ ಸುಲೋಚನಾ. ಮಾತು ಮಾತಿಗೂ ಗಂಡನ ಹೀಯಾಳಿಕೆ ಕೇಳಿಕೊಂಡೇ ಸಂಸಾರ ನಡೆಸಿದ್ದ ಸುಲೋಚನಾಳಿಗೆ ತಾನೂ ಹೊರಗೆ ದುಡಿಯಬೇಕೆಂದು ಎಷ್ಟೋ ಸಲ ಅನ್ನಿಸಿತ್ತು.ತನ್ನ ಕನಸನ್ನು ಮಗಳಾದರೂ ಪೂರ್ತಿಗೊಳಿಸಿದಳಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಳು. ಅದೇ ಮಗಳು ಈಗ ಕೆಲಸ ಬಿಟ್ಟಾಗ ವಿಚಿತ್ರವೆನಿಸಿತ್ತು. ಅದಕ್ಕೆ ಕೊಟ್ಟ ಕಾರಣವಂತೂ ಅವಳಿಗೆ ಅರ್ಥವೇ ಆಗಿರಲಿಲ್ಲ. ಅಷ್ಟಕ್ಕೂ ‘ತನಗೋಸ್ಕರ ಬದುಕುವುದು ‘ ಎಂಬ ಸುಮಾಳ ಮಾತು ಅವಳ ಊಹೆಗೂ ನಿಲುಕದೆ ಸುಮ್ಮನಾಗಿದ್ದಳು.

ಸುಮಾ ಈಗ ಫೋನೆತ್ತಿಕೊಂಡು ತಾನು ಕೆಲವು ತಿಂಗಳಿಂದ ಬರೆದಿಟ್ಟುಕೊಂಡಿದ್ದ ಟು ಡೂ ಲಿಸ್ಟ್ ನೋಡತೊಡಗಿದಳು. ಅದರಲ್ಲಿ ತಾನು ಮಾಡಬೇಕೆಂದುಕೊಂಡಿದ್ದ, ಬದುಕಿನಲ್ಲಿ ಖುಷಿ ಕೊಡಬಹುದಾದ ಹತ್ತು ಹಲವು ಸಂಗತಿಗಳನ್ನು ಬರೆದಿಟ್ಟುಕೊಂಡಿದ್ದಳು. ಮೊದಲನೆಯದ್ದು ಕೆಲವೇ ಕೆಲವು ಆಪ್ತರ ಜೊತೆಗೆ ಮಾತು. ಮೊದಲು ಅವರಿಗೆಲ್ಲ ಫೋನು ಮಾಡಿ ಆಮೇಲೆ ಭೆಟ್ಟಿಯಾಗೋಣವೆಂದುಕೊಂಡು ತನ್ನ ಹಳೆಯ ಗೆಳೆಯ ಗೆಳತಿಯರ, ಬಂಧುಗಳ ನಂಬರುಗಳನ್ನು ಒಂದೊಂದಾಗಿ ಡಯಲ್ ಮಾಡಿ ಮಾತಾಡುವಾಗಲೇ ಅವಳಿಗೆ ಗೊತ್ತಾದದ್ದು ಅವರು ಅದಾಗಲೇ ತನಗೆ ಹಳಬರಾಗಿದ್ದರೆಂದು. ಸ್ವಲ್ಪ ಹೊತ್ತಲ್ಲೇ ಮಾತು ಬೋರು ಹೊಡೆಸತೊಡಗಿತ್ತು. ಅರೇ ಇಷ್ಟು ದಿನ ಮಾತಾಡಲೇಬೇಕೆಂದು ಅಂದುಕೊಂಡದ್ದು ಇವರ ಜೊತೆಗೇನಾ ಅನ್ನಿಸಿ ಪಿಚ್ಚೆನಿಸಿತು.

ಆಮೇಲೆ ತನ್ನ ಹಳೆಯ ಡೈರಿಗಳನ್ನೆಲ್ಲಾ ಹುಡುಕಿ ಒಂದೊಂದಾಗಿ ಹರವಿ ಓದತೊಡಗಿದಳು. ಹೆಚ್ಚೇನೂ ಬರೆಯದಿದ್ದರೂ ಅಲ್ಲೊಂದು ಇಲ್ಲೊಂದು ಕವಿತೆಗಳು ಸಿಕ್ಕವು. ಅವನ್ನು ಓದುತ್ತಿದ್ದಂತೆಲ್ಲಾ ಅರೇ ತಾನು ಅದೆಷ್ಟು ಚೆನ್ನಾಗಿ ಬರೆಯುತ್ತಿದ್ದೆನಲ್ಲಾ ಅನ್ನಿಸಿ ಮುದವೂ, ಬರೆಯುವುದನ್ನು ನಿಲ್ಲಿಸಿದ್ದರ ಬಗ್ಗೆ ಖೇದವೂ ಆಯಿತು. ಸಮಯ ಸಿಕ್ಕಿದ್ದರೆ ತಾನೇ ಬರೆಯುವುದಕ್ಕೆ, ಇನ್ನಾದರೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತನ್ನನ್ನೇ ತಾನು ಸಮಾಧಾನ ಪಡಿಸಿದಳು. ಮರು ಕ್ಷಣವೇ ಎಲ್ಲದಕ್ಕೂ ಮುಹೂರ್ತ ಹುಡುಕಿಕೊಂಡು ಕೂತರಾಗುವುದಿಲ್ಲ, ಇಂದು ಅಂದುಕೊಂಡದ್ದನ್ನು ಈಗಲೇ ಮಾಡಬೇಕೆನ್ನಿಸಿ ಪೆನ್ನೆತ್ತಿಕೊಂಡಳು, ಏನಿಲ್ಲವೆಂದರೂ ಸುಮ್ಮನೇ ನಾಲ್ಕಾರು ಸಾಲಾದರೂ ಗೀಚೋಣವೆಂದುಕೊಂಡು. ಲೇಖನಿ ಯಾಕೋ ತಾನು ಬರೆಯುವುದಿಲ್ಲವೆಂದು ಮುಷ್ಕರ ಹೂಡಿದಂತಿತ್ತು. ಅಷ್ಟಕ್ಕೂ ಕವಿತೆ ಎಂಬುವುದು ತಾನಾಗಿಯೇ ಹುಟ್ಟಬೇಕಲ್ಲ ಅನ್ನಿಸಿ ಸುಮ್ಮನಾದಳು.

ಮರುದಿನ ಗಂಡ, ಮಕ್ಕಳು ಮನೆ ಬಿಟ್ಟ ಮೇಲೆ ಹಾಗೇ ಕನ್ನಡಿಯೆದುರು ಅರೆ ಗಳಿಗೆ ನಿಂತಳು. ಅಲಂಕಾರವಿಲ್ಲದಿದ್ದರೆ ಅದಾಗಲೇ ತಾನು ಐವತ್ತು ದಾಟಿದವಳಂತೆ ಕಾಣುತ್ತಿದ್ದೇನಲ್ಲ ಅನ್ನಿಸಿ ಬೇಸರವಾಯಿತು. ಅಷ್ಟಕ್ಕೂ ತನಗೆ ನಿಖರವಾಗಿ ಪ್ರಾಯ ಎಷ್ಟಾಯಿತು? ಮೊನ್ನೆ ಮೊನ್ನೆ ಮೂವತ್ತರ ಹುಟ್ಟುಹಬ್ಬ ಆಚರಿಸಿದ್ದು ಅಂತ ಅನ್ನಿಸಿದರೂ ಆಗಲೇ ನಲವತ್ತೇಳು ಆಯ್ತಲ್ಲವೇ.. ಪದವಿ ಮುಗಿಸಿದ ಕೂಡಲೇ ಇಪ್ಪತ್ತೊಂದಕ್ಕೇ ಕೆಲಸ ಸಿಕ್ಕಿತ್ತು. ಇಪ್ಪತ್ಮೂರಕ್ಕೆ ಮದುವೆ, ಇಪ್ಪತ್ತಾರಕ್ಕೆ ಮಗ, ಮೂವತ್ತಕ್ಕೆ ಮಗಳು. ಚೋಟುದ್ದವಿದ್ದ ಮಗ ಈಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ಎಲ್ಲದಕ್ಕೂ ‘ಅಮ್ಮ ಅಮ್ಮ ‘ನೆಂದು ಹಿಂದೆ ಮುಂದೆ ಸುತ್ತುತ್ತಿದ್ದ ಮಗಳು ಪಿಯೂಸಿ. ಎಷ್ಟು ಬೇಗ ದೊಡ್ಡವರಾದರಲ್ಲ. ಸ್ವಲ್ಪ ನಿಧಾನವಾಗಿ ಓಡಬಾರದಿತ್ತಾ ಕಾಲ ಅನ್ನಿಸಿತು. ಮೊದಲೆಲ್ಲಾ ಮಕ್ಕಳು ಶಾಲೆಯಿಂದ ವಾಪಸ್ಸಾದಾಗ ಬಿಸಿ ಬಿಸಿ ಕಾಫಿ, ತಿಂಡಿಗಳನ್ನು ಮಾಡಿ ಉಪಚರಿಸಲು ತಾನಿರಲಿಲ್ಲವಲ್ಲ.. ಇನ್ನಾದರೂ ಅವರಿಗೆ ಬೇಕುಬೇಕಾದ್ದೆಲ್ಲವನ್ನೂ ಮಾಡಿಕೊಡಬೇಕು ಅನ್ನಿಸಿ ಕಾರ್ಯ ಪ್ರವೃತ್ತಳಾದಳು. ಮಕ್ಕಳು ತುಂಬ ಇಷ್ಟ ಪಡುವ ಆಲೂ ಬೋಂಡಾ ಕರಿದಿಟ್ಟು ಅವರ ದಾರಿ ಕಾಯುತ್ತಾ ಕೂತಳು. ಅವರಿಗೆಲ್ಲಿದೆ ಅಷ್ಟೆಲ್ಲಾ ಸಮಯ? ಮನೆಗೆ ಬಂದವರೇ ಒಂದು ತುಂಡು ಬಾಯಿಗಿಟ್ಟಂತೆ ಮಾಡಿ ದುಡುದುಡು ಕೋಚಿಂಗ್ ಕ್ಲಾಸುಗಳಿಗೆ ಓಡಿದರು. ಮಗನಂತೂ ‘ಅಷ್ಟೆಲ್ಲಾ ತೊಂದರೆ ಯಾಕಮ್ಮ ತಗೋಳ್ತಿ? ಸುಮ್ಮನೆ ನಿಂಗೆ ಮನ ಬಂದದ್ದು ಮಾಡಿಕೊಂಡು ಆರಾಮಾಗಿ ಇದ್ದುಬಿಡು’ ಎಂದು ಬಿಟ್ಟ. ಅವನ ಮಾತಿನಲ್ಲಿದ್ದದ್ದು ಕಾಳಜಿಯೋ ಅಲ್ಲ ವ್ಯಂಗ್ಯವೋ ಅನ್ನಿಸಿ ಮನಸ್ಸು ಗೊಂದಲದ ಗೂಡು. ಮರುಕ್ಷಣವೇ, ತನ್ನಲ್ಲಿ ವ್ಯಂಗ್ಯವಾಗಿ ಮಾತಾಡುವಷ್ಟು ಕೆಟ್ಟವನೇನಲ್ಲ ತನ್ನ ಮಗ ಅನ್ನುವ ಸುಳ್ಳೇ ಸಮಾಧಾನ.

ಕೆಲವೊಂದಷ್ಟು ದಿನ ಪುಸ್ತಕಗಳನ್ನು ಕೊಂಡು ಓದುವುದರಲ್ಲಿ ಮುಳುಗಿಬಿಟ್ಟಳು ಸುಮಾ. ಹಾಗಾದರೂ ತನ್ನೊಳಗಿನ ಬರಹಗಾರ ಹೊರಬರಬಹುದೇನೋ ಎಂಬ ಸಣ್ಣ ಆಸೆ. ಆದರೆ ಯಾಕೋ ಮೊದಲಿನಂತೆ ಏಕಾಗ್ರತೆಯಿಂದ ಓದುವುದು ಅವಳಿಗೆ ಸಾಧ್ಯವಾಗಲಿಲ್ಲ. ‘ಓದುವ ಸುಖ ‘ ಎಂಬುವುದು ಮರೀಚಿಕೆಯಾಯಿತು. ಎದೆಯೊಳಗೊಂದು ಕವಿತೆಯೂ ಹುಟ್ಟಲಿಲ್ಲ, ಕಥೆಗೆ ಹೊಳಹು ಸಿಗಲಿಲ್ಲ, ಲೇಖನ ಬರೆಯುವ ಆಸಕ್ತಿಯೂ ಮೂಡಲಿಲ್ಲ.

ಮತ್ತದೇ ಭಣಗುಟ್ಟುವ ದಿನಚರಿ. ಆರಡಿ ಅಂಗುಲದ ಮೂರು ರೂಮು, ಪುಟ್ಟದೊಂದು ಅಡುಗೆ ಕೋಣೆ ಮತ್ತೊಂದು ಕಿರಿದಾದ ಹಾಲ್ ಅನ್ನು ಎಷ್ಟೆಂದು ಕ್ಲೀನು ಮಾಡುವುದು? ಮಧ್ಯಾಹ್ನ ತನಗೊಬ್ಬಳಿಗೆ ಏನಂಥಾ ಅಡುಗೆ? ಹೊತ್ತು ಕಳೆಯಲು ಒಂದಷ್ಟು ಸಿನಿಮಾಗಳನ್ನು ನೋಡಿಯಾಯಿತು. ಇಷ್ಟವಾದ ಹಾಡುಗಳನ್ನೇ ಪದೇ ಪದೇ ಕೇಳಿದ್ದಾಯಿತು. ಹಳೆಯ ಆಲ್ಬಮ್ ಗಳನ್ನೆಲ್ಲಾ ಒಂದೊಂದಾಗಿ ಮಗುಚಿ ಆಯಿತು. ಮನೆಯವರೆಲ್ಲರೂ ಒಟ್ಟಿಗೆ ಸೇರುವುದು ರಾತ್ರಿಯಾದ ಮೇಲೆಯೇ. ಆಮೇಲೆಯೂ ಎಲ್ಲರಿಗೂ ಅವರವರದ್ದೇ ಲೋಕ. ತನ್ನ ಮತ್ತು ಗಂಡ, ಮಕ್ಕಳ ಬದುಕು ಬೇರೆ ಬೇರೆಯಾದದ್ದು ಯಾವಾಗ? ತಾನು ಅದಾಗಲೇ ಚೌಕಟ್ಟಿನ ಹೊರಗಿನ ಚಿತ್ರವಾಗಿ ಬಿಟ್ಟೆನೇ?

ಒಬ್ಬಳೇ ಕೂತಿದ್ದಾಗ ಅವಳಿಗೆ ತನ್ನ ಹೈಸ್ಕೂಲಿನ ದಿನಗಳು ನೆನಪಿಗೆ ಬಂದವು. ನೃತ್ಯ, ಸಂಗೀತ, ಸಾಹಿತ್ಯ, ಕಸೂತಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಮ್ಮನ್ನೆಲ್ಲಾ ಬಲವಂತ ಮಾಡುತ್ತಿದ್ದ ಶಾರದಾ ಟೀಚರ್ರೂ, ತಾನು ಆ ಕ್ಲಾಸುಗಳನ್ನು ಏನೇನೋ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದದ್ದೂ ಯಾಕೋ ಬೇಡವೆಂದರೂ ನೆನಪಾಯಿತು. ಕಾಲೇಜಿನಲ್ಲಿರುವಾಗ ಅಲ್ಪ ಸ್ವಲ್ಪ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದವಳು ಆಮೇಲೆ ಪೂರ್ತಿಯಾಗಿ ನಿಲ್ಲಿಸಿದಾಗ ಅಮ್ಮ ಅದೆಷ್ಟು ಸಲ ಅಂದಿದ್ದಳು ವೃತ್ತಿಯೊಂದಿಗೆ ಓದು, ಬರವಣಿಗೆಯನ್ನೂ ಮುಂದುವರಿಸೆಂದು. ಆಗ ಉದ್ಯೋಗದ ಬೆನ್ನೊಂದನ್ನೇ ಹತ್ತಿದ್ದ ತಾನು ಉಳಿದೆಲ್ಲವನ್ನೂ ಕಡೆಗಣಿಸಿ ಬಿಟ್ಟೆನಾ? ಅದಕ್ಕೇ ಈಗ ಅದು ತಾನು ಕರೆದರೂ ಒಲ್ಲೆನೆಂದು ದೂರ ಹೋಗುತ್ತಿದೆಯಾ?

ಆ ನಂತರದ ಹಲವು ರಾತ್ರಿಗಳು ಅವಳಿಗೆ ಪದೇ ಪದೇ ಒಂದೇ ಕನಸು ಬೀಳತೊಡಗಿತ್ತು. ಅವಳು ಏನನ್ನೋ ಬೆನ್ನಟ್ಟಿ ಹೋಗುವಂತೆ, ಅದು ಅವಳಿಂದ ತಪ್ಪಿಸಿಕೊಂಡು ಮತ್ತೆಲ್ಲೋ ಓಡುವಂತೆ, ಇನ್ನೇನೋ ತನ್ನನ್ನು ಹಿಂಬಾಲಿಸಿಕೊಂಡು ಬಂದಂತೆ….

ಅದೊಂದು ದಿನ ಸುಧೀರ ಮನೆಗೆ ಬಂದೊಡನೆಯೇ ಕೇಳಲೋ ಬೇಡವೋ ಎಂಬಂತೆ ಅಂದಳು-, ‘ನಾನು ಯಾವುದಾದರೂ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಳ್ಳಲಾ? ‘. ಸುಧೀರ ದಿಗ್ಮೂಢನಾಗಿ ನಿಂತಿದ್ದ!