ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://journeybacktothesource.com/

ಝೆನ್

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ಝೆನ್ : ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದಲೂ ವಿಶ್ವದ ವಿವಿಧ ಭಾಗಗಳಲ್ಲಿನ ಮುಕ್ತ ಚಿಂತಕರ ವಿಶೇಷ ಗಮನ ಸೆಳೆದ ಹಾಗೂ ಪ್ರಮುಖ ಬೌದ್ಧ ಪಂಥ.

ಝೆನ್ ಎಂದರೇನು?
ಪದಶಃ ಅರ್ಥ ಮಾಡಿದರೆ ಧ್ಯಾನ ಎಂದಾಗುತ್ತದೆ. ಅಂದರೆ ಝೆನ್ ನ ಮೂಲ ನಮ್ಮ ಸಂಸ್ಕೃತದ ಧ್ಯಾನ. ಧ್ಯಾನ, ಪಾಳಿ ಭಾಷೆಯಲ್ಲಿ “ಝನ” ಎಂದು ಅಪಭ್ರಂಶವಾಯಿತು. ಅನಂತರ ಚೀನಿ ಭಾಷೆಯಲ್ಲಿ “ಚಾನ್”, “ಚನ್ನಾ” ಎಂದಾಯಿತು. ಅದೇ ಜಪಾನಿನಲ್ಲಿ “ಚೆನ್ನಾ” ಎಂಬುದು “ಜೇಂಜೋ” ಆಗಿ, ಕೊನೆಗೆ ಝೆನ್ ಆಯಿತು.

ಚಿತ್ರ ಕೃಪೆ : https://www2.kenyon.edu/

ಬೋಧಿಧರ್ಮ ಕ್ರಿ.ಶ. ೫೨೦ ರಲ್ಲಿ ಚೀನಾ ದೇಶವನ್ನು ಪ್ರವೇಶಿಸಿದ ದಿನದಿಂದ ಝೆನ್ ಚರಿತ್ರೆ ಶುರುವಾಯಿತು ಎನ್ನಲಾಗಿದೆ.

ಝೆನ್: ಇದರ ಗತಿ-ಗುರಿ-ಗಮ್ಯತೆಗಳು ಒಂದೇ. ಆದರೆ ಪ್ರಯೋಗ ಹಲವಾರು. ಸ್ವಪ್ರಜ್ಞೆಯ ಅಭಿವ್ಯಕ್ತಿ, ಆತ್ಮಜ್ಞಾನ, ಸ್ವಪ್ರವೃತ್ತಿ, ಪ್ರಕೃತಿಗಳ ಅರಿವು ಮತ್ತು ಜಾಗೃತಿ, ಆತ್ಮಸಾಕ್ಷಾತ್ಕಾರ…. ಹೀಗೆ ಹಲವಾರು ಪ್ರಯೋಗಗಳಿದ್ದರೂ ಜ್ಞಾನೋದ​ಯವೊಂದೇ ಗುರಿ. ಜ್ಞಾನೋದಯದ ವ್ಯಾಪ್ತಿ, ಎಷ್ಟು ಅಳ-ವಿಸ್ತಾರಗಳನ್ನುಳ್ಳದ್ದು ಎಂದರೆ, ಒಂದು ಮುಷ್ಠಿ ಅರ್ಥದಲ್ಲಿ ಅದನ್ನು ಹಿಡಿದಿರಿಸಲಾಗದು. ಅದನ್ನು ಮುಚ್ಚಿಡ​ಲೂ ಆಗದು. ಹುಯ್ತಾಂಗ್ ಹೇಳುವಂತೆ ಅದು ಹೂವಿನ ಪರಿಮಳದಂತೆ.

ಮುಚ್ಚಿಡ​ಲೂ ಆಗದ, ಬಿಚ್ಚಿಡ​ಲೂ ಆಗದ ಝೆನ್ ನ ಮುಖ್ಯ ಪ್ರಕ್ರಿಯೆ ಎಂದರೆ, ಲೌಕಿಕ ದಾಸ್ಯಗಳಿಂದ ನಮ್ಮ ಪ್ರಜ್ಞೆ, ಬುದ್ದಿ, ಭಾವಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಡೆಯುವ ಆತ್ಮಶೋಧ. ಈ ಮೂಲಕ ಬದುಕಿನ ಹೊಸ ದರ್ಶನ, ದೃಷ್ಟಿಕೋನಗಳನ್ನು ಪಡೆಯುವುದೇ ಝೆನ್ ನ ತಿರುಳು ಹಾಗೂ ಸಾರಸರ್ವಸ್ವ. ಇದಕ್ಕೆ ಪೂರ್ವಭಾವಿಯಾಗಿ ನಾವು ನಮ್ಮ ದಿನನಿತ್ಯದ ಜೀವನವನ್ನು ನಿಯಂತ್ರಿಸುವ ಮಾಮೂಲಿನ ಧೋರಣೆ, ಆಲೋಚನೆ, ಚಿಂತನ ಕ್ರಮಗಳನ್ನು ತ್ಯಜಿಸಬೇಕಾಗುತ್ತದೆ. ಬೇರೆ ಮಾರ್ಗಗಳಿಗಾಗಿ, ಬೇರೆ ಬೇರೆ ಮಾನದಂಡಗಳಿಗಾಗಿ ಅನ್ವೇಷಿಸಬೇಕಾಗುತ್ತದೆ. ಈ ತೆರನಾದ ಸಾಧನೆಯನ್ನು ಜಪಾನಿ ಝೆನ್ ಸತೋರಿ ಎಂದು ಕರೆಯಲಾಗುತ್ತದೆ; ಅರ್ಥಾತ್ ಜ್ಞಾನೋದಯ. ನಮ್ಮಲ್ಲಿರುವ ಸ್ವ-ಪ್ರಜ್ಞೆ ತಟ್ಟನೆ ಸಮಗ್ರವಾಗಿ ಅಭಿವ್ಯಕ್ತಿಗೊಳ್ಳುವುದೇ ಜ್ಞಾನೋದಯ.

ಚಿತ್ರ ಕೃಪೆ : https://ideapod.com/

ಝೆನ್ ಶುರುವಾಗುವುದೇ ಜ್ಞಾನದ ಬಾಗಿಲು ತೆರೆದುಕೊಳ್ಳುವುದರ ಮೂಲಕ. ನಮ್ಮ ಸುತ್ತಲ ಪ್ರಪಂಚವನ್ನು, ವಸ್ತುಸ್ಥಿತಿಯನ್ನು ಅಂತಃಸ್ಪುರಣೆ, ಅಂತರ್ದೃಷ್ಟಿಗಳಿಂದ ವಿಶ್ಲೇಷಿಸುವ ಒಂದು ಸ್ಥಿತಿ ಅಥವಾ ಅನುಭವವೇ ಸತೋರಿ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಹೇಳುವುದಾದರೆ, ಇದುವರೆಗೆ ದ್ವೈತ ದೃಷ್ಟಿಕೋನದ ದ್ವಂದ್ವ ಅಥವಾ ಗೊಂದಲದ ಗೂಡಾದ​ ಮನಸ್ಸಿಗೆ, ಇದುವರೆಗೆ ಗ್ರಹಿಸದ ಹೊಸ ಲೋಕವೊಂದನ್ನು ತೆರೆದು ತೋರಿಸುತ್ತದೆ. ಅಥವಾ ಸರಳವಾಗಿ ಹೇಳುವುದಾದರೆ, ನಮ್ಮ ಸುತ್ತಲ ಪ್ರಪಂಚವನ್ನು ಹೊಸ ಕಾಣ್ಕೆಯ ಆತ್ಮಜ್ಞಾನದ ಮೂಲಕ ಗ್ರಹಿಸುವುದು.

ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ಬದುಕು ಅಥವಾ ಬದುಕಿನ ಸತ್ಯ, ಸೀಮಿತವಾದ ನಮ್ಮ ಮನಸ್ಸಿನ ಗ್ರಹಿಕೆಗೆ, ಬುದ್ಧಿಯ ತರ್ಕ-ಚಿಂತನೆಗಳಿಗೆ ಸಿಕ್ಕಿಕೊಳ್ಳುವಂಥವಲ್ಲ. ಸಾಧಕನಾದವನು ಮೊದಲು ತನ್ನ ಬುದ್ದಿ-ಮನಸ್ಸು- ತರ್ಕ-ಚಿಂತನೆಗಳ ಜಾಲದಿಂದ ಹೊರಬರಬೇಕು. ಕವಿದುಕೊಂಡಿರುವ ಕಲ್ಪಿತ ಆವರಣ ತಟ್ಟನೆ ಸ್ಪೋಟಗೊಂಡು ನಗ್ನಪ್ರಜ್ಞೆಯಲ್ಲಿ ಬದುಕಿನ ಸತ್ಯಕ್ಕೆ ಮುಖಾಮುಖಿಯಾಗಿ ನಿಲ್ಲುವಂತಾಗಬೇಕು. ಸತೋರಿ ಯಾವತ್ತಿಗೂ ಇಂದ್ರಿಯಾತೀತವಾದದ್ದು.

ಮನುಷ್ಯ ಹಾಗೂ ಪ್ರಕೃತಿ ಸಂಬಂಧ ಕುರಿತು ಝೆನ್ ಸ್ಥೂಲ ವಿವರಣೆ ಹೀಗಿದೆ:

….. Nature produces Man out of itself; Man cannot be outside of Nature, he still has his being rooted in Nature. Therefore there cannot be any hostility between them. On the Contrary, there must always be a friendly understanding between Man & Nature. Man came from Nature in order to see Nature in himself; That is, Nature came to itself in order to see itself in Man”

ಝೆನ್ ನ ಒಂದು ಪ್ರಬಲ ಆಕರ್ಷಣೆ ಎಂದರೆ ಅದರ ಮುಕ್ತತೆ. ಝೆನ್ ಗೆ ಯಾವುದೇ ತತ್ವಸಿದ್ಧಾಂತಗಳಿಲ್ಲ, ಆಧಾರಗ್ರಂಥಗಳಿಲ್ಲ, ಕಟ್ಟುಪಾಡುಗಳಿಲ್ಲ, ಕಂದಾಚಾರಗಳಿಲ್ಲ.

ಝೆನ್ ಎಂದರೆ ಒಟ್ಟಾರೆ ಜೀವನ. ಜೀವನದ ಸರ್ವಸ್ವವೂ ಝೆನ್ ನಲ್ಲಿದೆ. ಕಾವ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ ಹೀಗೆ ಸಕಲವನ್ನೂ ಝೆನ್ ಒಳಗೊಂಡಿದೆ. ಝೆನ್ ನಲ್ಲಿ ಮುಚ್ಚುಮರೆ ಇಲ್ಲ.

ಝೆನ್ ಯಾವುದೇ ಒಂದು ನಿರ್ದಿಷ್ಟ ಇಸಂ ಅಲ್ಲ, ಅಥವಾ ಯಾವುದೇ ಇಸಂ ನೊಂದಿಗೆ ಅದನ್ನು ಗುರುತಿಸಲಾಗದು. ಝೆನ್ ಯಾವುದೇ ಬಗೆಯ ಭಾವರೂಪಕ್ಕಾಗಲಿ, ಚಿಂತನಾರೂಪಕ್ಕಾಗಲಿ ಸಿಗುವುದಿಲ್ಲ. ಅದನ್ನು ಅನುಭವದ ಮೂಲಕ ಕಂಡುಕೊಳ್ಳಬೇಕಿದೆ. ಅನುಭವಿಸಿಯೇ ಗ್ರಹಿಸಬೇಕಿದೆ. ಆದರೆ ಮನುಷ್ಯ ಮೂಕನಲ್ಲ. ಅವನಿಗೆ ಹಲವಾರು ಅಭಿವ್ಯಕ್ತಿ ಮಾರ್ಗಗಳಿವೆ, ಸಂವಹನ ಮಾರ್ಗಗಳಿವೆ. ಇದಿಲ್ಲದೆ ಅನುಭವವೂ ಅಸಾಧ್ಯ . ಆದರೆ ಮೌನವೂ ಒಂದು ಬಗೆಯ ಸಂವಹನವೇ! ಮಾತಿಗೆ ಮೀರಿದ್ದನ್ನು ಮೌನ ಹೇಳುತ್ತದೆ. ಝೆನ್ ಗುರುಗಳು ಎಷ್ಟೋ ವೇಳೆ ಈ ಮೌನ ಮಾರ್ಗ ಹಿಡಿಯುವುದುಂಟು. ಇದೇ ಒಂಟಿ ಕೈ ಚಪ್ಪಾಳೆಯ ಮಹತ್ವ. ದ್ವಿವಿಧತೆಯನ್ನು ಮೀರಿ ಮಹಾಶೂನ್ಯದತ್ತ ಚಾಚಿಕೊಳ್ಳುವಿಕೆ.

ಒಂದು ಬೌದ್ಧ ಪಂಥವಾಗಿ ಬೆಳೆದಿರುವ ಝೆನ್, ಜ್ಞಾನೋದಯ ಅನುಭವದ ಅಡಿಪಾಯದ ಮೇಲೆ ನಿಂತಿದೆ. ಈ ಅನುಭವವನ್ನು ಶೂನ್ಯತಾ ಸಿದ್ಧಾಂತದಲ್ಲಿ ವಿವರಿಸಲಾಗಿದೆ. ಶೂನ್ಯ ಎಂದರೆ ಬರಿದಾದ್ದು, ಖಾಲಿಯಾದ್ದು ಎಂದು ಸಾಮಾನ್ಯ ಅರ್ಥ. ಝೆನ್ ನ ಪ್ರಕಾರ, ಶೂನ್ಯ ಎಂದರೆ ಒಂದು ಪದಾರ್ಥವನ್ನು ವಿವರಿಸಬಹುದಾದ ನಾಲ್ಕು ಕಲ್ಪನೆ(ದ್ರವ್ಯ, ಗುಣ, ಜಾತಿ, ಕ್ರಿಯೆ)ಗಳಿಗೆ ಗೋಚರಿಸದಿರುವುದು. ಮನಸ್ಸಿನ ನಿರ್ವಿಷಯಿಕರಣ ಕೂಡ ಶೂನ್ಯಸ್ಥಿತಿ.

ಇಲ್ಲಿ ಶೂನ್ಯ ಎಂದರೆ ನಕಾರಾತ್ಮಕವಾದುದಲ್ಲ, ಅದು ಸಕಾರಾತ್ಮಕವಾದ ಕಲ್ಪನೆ. ಶೂನ್ಯತೆ ಸಹ ಒಂದು ಅನುಭವ. ಈ ವೊಂದು ಅನುಭವವೇ ಜ್ಞಾನದ ಪಡಿಯಚ್ಚಾಗಿ ಕಾವ್ಯವಾಗಿಸಬೇಕು.

ಸ್ವರಚಿತ ಝೆನ್ ಕವಿತೆಗಳು:

(೧)
#ನೆರಳಿಗಾಗಿ
ತೂಗುತ್ತಿದೆ ಜೋಕಾಲಿ
ಅಲ್ಲ ಗಾಳಿ
ಪಟಪತಿಸುತ್ತಿದೆ ಚಿಟ್ಟೆಯ ರೆಕ್ಕೆ
ನಿನ್ನ ಮನದ ಚಂಚಲತೆಗೆ ಸಾಕ್ಷಿ
ಹ್ಞೂo! ಹೊರಡು
ಮಣ್ಣ ಸಡಿಲಿಸಿ ಬೀಜ ಬಿತ್ತು
ನಾಳೆಯ ನೆರಳಿಗಾಗಿ

(೨)
#ಹಗಲುಮತ್ತುಇರುಳು
ಒಂದು ಅಮೂರ್ತ
ಮತ್ತೊಂದು ಮೂರ್ತ
ಇದೆ ಎಂದರೆ ಇದೆ
ಸತ್ಯವಲ್ಲ, ಮಿಥ್ಯವಲ್ಲ
ಇಲ್ಲವೆಂದರೆ ಇಲ್ಲ
ಕತ್ತಲು ಬೆಳಕಿನ ಮಾಯೆ
ತುಂಬಿದೆ ಲೋಕವೆಲ್ಲ
ರೆಪ್ಪೆ ಮುಚ್ಚಿ ತೆರೆದ ಹಾಗೆ!

(೩)
#ತುಂಬಿದ_ಶೂನ್ಯ
ಖಾಲಿ ಬೊಗಸೆಯಲ್ಲಿ
ಎನಿಲ್ಲವೆಂದು ಚಿಂತಿಸದಿರು
ಇಕೋ ನೋಡಿಲ್ಲಿ
ತುಂಬಿದೆ ಶೂನ್ಯ
ಅದೆ ಎಲ್ಲಾ… ಎಲ್ಲಾ….

(೪)
#ಮೋಡಿಯ_ಹಾಡು
ಸುಮ್ಮನೆ ನಿಂತು ನೋಡದಿರು
ಕಣ್ಣ ಮುಂದಿದೆ ದಾರಿ
ನೀ ನಡೆಯದೆ
ನೆರಳು ಸಹ ನಿನ್ನ ಹಿಂಬಾಲಿಸದು
ನೆನಪಿಡು;
ಗಮ್ಯ ಕಂಡಿಲ್ಲ ನೀನು
ಕಾಣಬೇಕಿನ್ನು
ಮನಸು ಮಾಯೆಯ ಪಂಜರ
ಚಿಂತನೆಯ ಹಕ್ಕಿಗೆ
ಜ್ಞಾನದ ಆಗಸ ಬೇಕು
ಧ್ಯಾನದ ರೆಕ್ಕೆ ಬಳಸಿ ಹಾರು
ಲೋಕವೆ ನಿನ್ನ ಕಾಣುವುದು
ಎಂಥಾ ಮೋಡಿ!

(೫)
#ಋತ
ಅಪರಿಚಿತ ಗಾಳಿ ಮಾತಿಗೆ
ಶಿಖರದ ಒಂಟಿ ಬಾವುಟ
ಬಡಿದುಕೊಳ್ಳುತ್ತಿದೆ
‘ಅಲ್ಲ, ಅದು ನಿನ್ನ ಮನಸ್ಸು’
‘ಹೌದು! ಋತ’

(೬)
#ಸೇತುವೆ_ಹರಿಯುತ್ತಿದೆ
ಬೆಟ್ಟದ ತುಟ್ಟತುದಿಯಿಂದ
ಅಲೆ ಅಲೆ ಇಳಿಯುತ್ತಿದೆ
ದೇವದಾರಿನ ಎಲೆ
ಬೀಸೋ ಉತ್ತರದ ಗಾಳಿಯ ಕೃಪೆ
ನೋಡಲ್ಲಿ
ಝರಿ ಹರಿಯುತ್ತಿದೆ ಕೆಳಗೆ
ಸೇತುವೆಯ ಜೊತೆಗೆ

(೭)
#ಬಾಗಿಲು_ತೆರೆದು
ಬೆಳಕು ಹರಿದು
ಜ್ಞಾನ ನರ್ತಿಸುತ್ತಿದೆ
ಕತ್ತಲ ಕರಿ ಚಿಟ್ಟೆ
ಧ್ಯಾನಿಸುತ್ತಲಿ
ಅದೆಲ್ಲಿಗೊ ಹಾರಿದೆ

(೮)
#ಕುರುಡನಲ್ಲ!
ಅಲ್ಲಿ ಏನೂ ಕಾಣುತ್ತಿಲ್ಲವಲ್ಲ
ಅದೇ ಕತ್ತಲು!
ಕಾಣುತ್ತಿದೆಯಾದರೆ
ನೀ ಕುರುಡನಲ್ಲ
ಇನ್ನು ಹೊರಡು…

(೯)
#ಜ್ಞಾನ
ಕತ್ತರಿಸಿದ ಮರದ ಕೊಂಬೆಯನ್ನು
ಭೂಮಿಯ ಹೃದಯದಲ್ಲಿ ನಾಟುವುದು
ಆಗ
ಕತ್ತರಿಸಿದ ಹಾಗೂ ನಾಟಿದ
ಕೊಂಬೆಗಳೆರಡರಲ್ಲೂ
ಚಿಗುರಾoಕುರವಾಗುವುದು
ಅದೇ ಜ್ಞಾನ!

(೧೦)
#ಧ್ಯಾನ
ಕ್ಷೌರದಂಗಡಿಯಲ್ಲಿ ಕೂತು
ರೆಪ್ಪೆ ಮುಚ್ಚಿ
ಒಳಗಣ್ಣು ತೆರೆದು
ನಿದಿರೆಗೆ ಜಾರುವುದು!

(೧೧)
#ತೀರ್ಪು
ತಿಂದ
ಹಣ್ಣಿನ ಬೀಜವನ್ನು
ವೇಗದಿಂದ
ನೆಲಕ್ಕೆ
ಉಗಿಯುವುದು!

(೧೨)
#ಸತ್ಯಕ್ಕೆ_ಸಾವಿಲ್ಲ
ಹೂ ಬಾಡುತ್ತಿದೆ ನೋಡು –
ಬದುಕಿನ ಸಾರ್ಥಕತೆ
ಗಾಳಿ ಬೀಸುತ್ತಿದೆ ನೋಡು –
ಅದುವೇ ನಿರಂತರತೆ
ಸುಳ್ಳು ಹುಟ್ಟುತ್ತಿದೆ ಕಾಣು –
ಸತ್ಯಕ್ಕೆ ಸಾವಿಲ್ಲ ಮನಗಾಣು

(೧೩)
#ಅರಿವಿನ_ಪದರ
ಬೇಡದ ವಸ್ತು ಕಾಣುತ್ತಿದೆ
ಬೇಕಾದದ್ದು ನಿನ್ನೊಳಗಿದೆ
ಹುಡುಕುವುದು ಅದು ಯಾರು ಹೊರಗಡೆ?
ಕತ್ತಲು ಬೆಳಕು ಕಣ್ಣೊಳಗಿದೆ
ಅರಿವಿನ ಪದರ ಸಡಿಲಿಸು!

(೧೪)
#ತೂತುಬಿದ್ದ_ಮಡಿಕೆ
ಜ್ಞಾನ ತೂತುಬಿದ್ದ ನೀರು ತುಂಬಿದ ಮಡಿಕೆ
ಸಾಲದು –
ಮತ್ತೆ ತುಂಬಿಸು!