- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಏರಿ ಮೇಲೆ ಹೋಗುತ್ತಿದ್ದಂತೆ ವಿಮಾನ
ಗವಾಕ್ಷಿಯಿಂದ ಕಂಡವು ಸಾಲು ಸಾಲಾಗಿ
ಚಲಿಸುವ ವಾಹನಗಳು, ಜನರು
ಇರುವೆಯಂತೆ!
ಚಿಕ್ಕ ಪೊಟ್ಟಣಗಳಂತಿರುವ ಮನೆಗಳಲಿ
ಇದ್ದರೂ ಕಾಣಲಿಲ್ಲ ಇರುವೆಗಳು!
ಇನ್ನೂ ಮೇಲಕೇರಿದಂತೆ
ಮ್ಲಾನ ಗ್ಲಾನ ಎಲ್ಲ ಭಾನ ಮಾಯ
ಬಾನಲಿ ತೇಲುತಿರಲು ಕಂಡ ವಿಮಾನದ ಒಳಾಂಗಣವೇ ಲೋಕ!
ಎತ್ತರದಿ ಹಾರುವದು ಯಾರಿಗೆ ಬೇಡ?
ಆದರೆ ಹತ್ತಿರದಿ ನೋಡದೆ ಮೂಡೀತೆ ಒಲವು!
ಬಿತ್ತಬಹುದೇ ಬೀಜ ಅಂತರಿಕ್ಷದಲಿ?
ಮೆತ್ತದೇ ಮಣ್ಣು ಪಡೆಯದೆ ಸಾರ
ಒಡೆವುದೆ ಮೊಳಕೆ?
ಬೆಳೆದಂತೆ ಮರ! ಹೂವು ಕಾಯಿ ಟೊಂಗೆಗಳ ಭಾರ
ಹಗುರಾಗಿ ತೇಲಬೇಕೆಂದಿದ್ದೆ!
ತಿರುವಾಗ ಧರಾ ಗಿರಗಿರಾ ಬೇರೂರಿರುವ ನಾನೂ
ತಿರುಗಲೇಬೇಕು; ಭ್ರಮೆ ಅನಿಸಿದಿರೂ ಭ್ರಮಣ ತಪ್ಪಿದ್ದಲ್ಲ
ಎಲ್ಲ ಸೊಲ್ಲ ಬಲ್ಲವರು ಯಾರೂ ಇಲ್ಲ!
ಆಕಾಶಗಾಮಿಯಾಗಲು ರೆಕ್ಕೆಗಳಿಲ್ಲ
ಕಾಲ್ನಡಿಗೆಯಲೇ ಕ್ರಮಿಸಬೇಕು ದಾರಿಯೆಲ್ಲ
ಅಡಿಯಿಟ್ಟರೆ ಮೂಡುವದು ಕಾಲ್ದಾರಿ- ಹೆದ್ದಾರಿ
ಪಯಣವಿದು ಭಾರಿ ಪಯಣವಿದು ಭಾರಿ!
ಹಿಂದಿನ ಅಂಕಣದಲ್ಲಿ ‘ ಅಸ್ತಿತ್ವ, ವಾದದ ಕುರಿತು ಪ್ರಸ್ತಾಪ ಮಾಡುತ್ತ, ಈ ವಿಚಾರ ವಾಹಿನಿಯ ಮುಖ್ಯ ಚಿಂತಕರಾದ ಸಾರ್ತೃ ಅವರ ವಿಚಾರಧಾರೆಯನ್ನು ಡಾ. ಯು. ಆರ್. ಅನಂತಮೂರ್ತಿ ಅವರ ಲೇಖನದಿಂದ ಆಯ್ದು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೆ.
‘ ಇರು’ವಿಕೆಯಿಂದ ‘ ಆಗು’ವಿಕೆಗೆ ಜರುಗುವ ಪ್ರಕ್ರಿಯೆಯಲ್ಲಿ ಮಾನವನ ಎದುರಿನಲ್ಲಿ ಪ್ರತಿ ಹೆಜ್ಜೆಗೂ ಕವಲು ದಾರಿಗಳೊಡೆದು ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪ್ರಸಂಗ ಒದಗಿದಾಗ, ಮನುಷ್ಯ ತನ್ನ ಹಿತ ಹಾಗೂ ಸಮಾಜದ ಹಿತಗಳ ಸಮನ್ವಯ ಮಾಡಿಕೊಂಡು ನಿರ್ಧಾರ ಕೈಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುವ ಮಾತನ್ನು ಚರ್ಚೆಗೆ ಒಡ್ಡಲಾಗಿತ್ತು.
ಈ ರೀತಿಯ ಸನ್ನಿವೇಶಗಳು ಮಹಾನ್ ಕಾದಂಬರಿಕಾರರಾದ ಫೈಯೊದೋರ್ ದೊಸ್ತೊವೆಸ್ಕಿ ಅವರ ಕೃತಿಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ಅವರ ಪಾತ್ರಗಳು ತಮ್ಮ ಆಯ್ಕೆಗಳಿಂದಾಗಿ , ಅವುಗಳ ಇತಿಮಿತಿಗಳ ಪರಿಣಾಮದಿಂದಾಗಿ ಸೋಲನ್ನು ಅನುಭವಿಸುವ ಪ್ರಸಂಗಗಳು ಎದ್ದು ಕಾಣುತ್ತವೆ. ತಮಗೆ ತಾವೇ ಅರ್ಥವಾಗದ ಒಗಟಾಗಿ ಕಂಡು ಪರಿಸ್ಥಿತಿಯ ಕೈಗೊಂಬೆಗಳಾಗಿ ಅಸಹಾಯಕ ಸ್ಥಿತಿಯಲ್ಲಿರುವ ಹಲವಾರು ಸನ್ನಿವೇಶಗಳನ್ನು ಹೆಣೆಯುತ್ತಾರೆ ದೊಸ್ತೊವೈಸ್ಕಿ.
ಅವರ ‘ ಕರಮಜೊವ್ ಬ್ರದರ್ಸ’ , ಈಡಿಯಟ್’ ಕಾದಂಬರಿಗಳು ಇದಕ್ಕೆ ನಿದರ್ಶನ. ಅವರ ಈ ಕೃತಿಗಳ ಬಗ್ಗೆ ಸುದೀರ್ಘವಾಗಿ ಇಲ್ಲಿ ಚರ್ಚಿಸಬಯಸುವದಿಲ್ಲ. ಆದರೂ ಸ್ಥೂಲವಾಗಿ ಇಲ್ಲಿ ಹೇಳಬಯಸುವದು- ಆಯ್ಕೆಗಳು ಸಂಬಂಧಗಳ ಮೇಲೆ ಆಧಾರಿತವಾಗಿ, ನಿರ್ಧಾರಗಳು ಇತರ ವಿಷಯಗಳ ಮೇಲೆ ನಿರ್ಭರವಾಗಿ, ಮಾನವನ ಹೋರಾಟ, ಸಾವು- ನೋವುಗಳ, ತನ್ನ ನಿರ್ಧಾರದಿಂದ ಸಂಭವಿಸಬಹುದಾದ ಅನಾಹುತಗಳ ಪಾಪಪ್ರಜ್ಞೆಯ ‘ ಶಿಪ್ರೆಕ್- ನೌಕಾಭಂಗ’ ದ ಸನ್ನಿವೇಶಗಳಿಗೆ ಮುಖಾಮುಖಿಯಾಗುವ ಪ್ರಸಂಗಗಳು ಅವರ ಕೃತಿಗಳಲ್ಲಿ ಕಂಡುಬರುತ್ತವೆ.
ಈ ರೀತಿಯಾಗಿ ಅವರ ಕೃತಿಗಳಲ್ಲಿ ಪಾತ್ರಗಳ ಉದಾತ್ತ ಹಾಗೂ ಅನಂತ ಆಶಯ ಮತ್ತು ಅವರ ಇತಿಮಿತಿಗಳ ನಡುವೆ ನಡೆಯುವ ಜಗ್ಗಾಟದ ಚಿತ್ರಣವನ್ನು ನೋಡಬಹುದು. ಎಷ್ಟೇ ಎಡರು ತೊಡರುಗಳು ಬಂದರೂ, ಪಾತ್ರಗಳು ಅವುಗಳನ್ನು ದಾಟಿ ಶಕ್ತಿ ಮೀರಿ ಸತ್ಯ- ಒಲವುಗಳ ಶೋಧನೆಯಲ್ಲಿ ತೊಡಗಿರುವದನ್ನು ನಾವು ಕಾಣುತ್ತೇವೆ.
ತರ್ಕರಹಿತವಾದ ಮತ್ತು ಕ್ರೌರ್ಯಗಳಿಂದ ಕೂಡಿದ ಈ ಬಾಳಿಗೆ ಅರ್ಥ ಒದಗಿಸಿ ಇದನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವದೇ ಮಾನವನ ಶ್ರೇಷ್ಠ -ಆದ್ಯ ಕಾರ್ಯ ಎಂದು ಗಾಢವಾಗಿ ನಂಬಿದ ಫ್ರೆಡ್ರಿಕ್ ನೀಟ್ಸೆ ( ೧೯ನೇ ಶತಮಾನದ ಜರ್ಮನ್ ದಾರ್ಶನಿಕ) ಅವರ ವಿಚಾರ ಸರಣಿಯ ಛಾಯೆ ನಾವು ಸ್ವಲ್ಪ ಮಟ್ಟದಲ್ಲಿ ದೊಸ್ತೋವೈಸ್ಕಿ ಅವರ ಕೃತಿಗಳಲ್ಲಿ ಕಾಣಬಹುದು.
‘ಸತ್ಯದ ಅನ್ವೇಷಣೆ ಬಾಹ್ಯದ್ದಲ್ಲ, ನಮ್ಮ ಅಂತರಂಗದಲ್ಲಿಯೇ ಅದು ಮನೆಮಾಡಿದೆ; ಮೂಲತಃ ಬದಲಾವಣೆ ನಿಮ್ಮ ಸ್ವಭಾವವೆಂದು ಅರಿತರೆ ಅದಕ್ಕಾಗಿ ಪ್ರಯತ್ನಿಸಿ, ಬರುವ ಎಡರು ತೊಡರುಗಳನ್ನು ಮೀರಿ ನಿಲ್ಲುವ ಸಾಹಸ ಮಾಡಿ ಎಂದು ಹೇಳಿದ ೪-೫ನೇ ಶತಮಾನದ ಧರ್ಮಗುರುಗಳಾದ ಸಂತ ಆಗಸ್ಟೀನ್ ಅವರ ವಾಣಿಯನ್ನು ಈ ಹಿನ್ನೆಲೆಯಲ್ಲಿ ಉಲ್ಲೇಖಿಸುವದು ಉಚಿತವೆನಿಸುತ್ತದೆ.
ಕಲೆಗೆ ತನ್ನದೇ ಆದ ನೈಜತೆಯ ಪರಿಧಿಯಿದೆ. ಅದರಲ್ಲಿ ಜೀವಸತ್ವ ಅಂತರ್ಗತವಾಗಿದ್ದು ಉಲ್ಲಂಘಿಸಲು ಸಾಧ್ಯವಾಗದಂಥ ನಿಯಮಗಳು ಅದರಲ್ಲಿ ಅಡಕವಾಗಿದೆ ಎಂದು ೧೮೬೦ರಲ್ಲಿ ದೋಸ್ತೋವೈಸ್ಕಿ ಅವರು ಪ್ರತಿಪಾದನೆ ಮಾಡಿದ್ದರು. ಯಾವುದೋ ಒಂದು ಗುರಿಯ ಸಾಧನೆಗಾಗಿ ಕಲೆಯ ಮೇಲೆ ನಿರ್ಬಂಧಗಳನ್ನು ಹೇರಿ ಅದರ ಸಹಜ ದಾರಿಯನ್ನು ತಪ್ಪಿಸಬಾರದು ಎಂಬುದು ಅವರ ಅಭಿಮತವಾಗಿತ್ತು. ಅದರ ಸರಿದಾಟ- ಗತಿಗಳಿಗೆ ಅವಕಾಶ ಕೊಟ್ಟಷ್ಟು ಅದು ಸಮಾಜದ ಹಿತಸಾಧನೆಗೆ ವಿಕಸಿತವಾಗುವದು ಎಂಬುದು ಅವರ ವಿಶ್ವಾಸವಾಗಿತ್ತು.
ಹಾಗೆಂದು ‘ ಕಲೆಗಾಗಿ ಕಲೆ’ ಸಿದ್ಧಾಂತದ ಆರಾಧಕರಾಗಿರಲಿಲ್ಲ ಅವರು. ಸಮಾಜದ ಒಳಿತೇ ಕಲೆಯ ಮುಖ್ಯ ಉದ್ದೇಶವೆಂಬ ಧೃಡವಾದ ನಿಲುವು ಅವರದಾಗಿತ್ತು. ದೀನರಲ್ಲಿ, ಬಡವರಲ್ಲಿ, ತುಳಿತಕ್ಕೆ ಒಳಗಾದ ಕೆಳ ವರ್ಗದ ಜನರಲ್ಲಿ ಅವರು ಮಾನವೀಯತೆಯ ಬೆಳಕನ್ನು ಕಾಣುತ್ತಿದ್ದರು. ಈ ನಿಟ್ಟಿನಲ್ಲಿ ಅವರು ನಿರ್ಮಿಸಿದ ಪಾತ್ರಗಳು ತಮ್ಮ ಶಕ್ತಿ ಮೀರಿ ಪರಾರ್ಥಕ್ಕಾಗಿ, ಪರಹಿತ ಚಿಂತನೆಗಾಗಿ ತುಡಿಯುತ್ತವೆ; ಸಮಾಜದ ಒಳಿತನ್ನು ಸಾಧಿಸಲು ಹೆಣಗುತ್ತವೆ. ಮಾನವ ಜನಾಂಗದ ಮೇಲೆ ಇದರ ಧನಾತ್ಮಕ ಪ್ರಭಾವ ಬೀರಲೆಂದೇ ದೋಸ್ತೋವಯಸ್ಕಿ ಅವರು ಈ ರೀತಿಯ ಯತ್ನದಲ್ಲಿ ತೊಡಗಿಸಿಕೊಂಡು ತಮ್ಮ ಕೃತಿಗಳನ್ನು ರೂಪಿಸಿದ್ದು. ಅವರ ಉದಾತ್ತ ವಿಚಾರಗಳು ಹಾಗೂ ಅವರ ರಚನೆಗಳು ಸಾಕಷ್ಟು ಕಲಾವಿದರನ್ನು ಪ್ರಭಾವಿಸಿತು.
ಸಮಕಾಲೀನ ಶ್ರೇಷ್ಠ ಕಾದಂಬರಿಕಾರರಾದ ಮಿಲನ್ ಕುಂದೇರಾ ಅವರ ಕುರಿತಾಗಿ ಅಂಕಣದಲ್ಲಿ ಒಂದೆರಡು ಮಾತುಗಳನ್ನು ಪ್ರಸ್ತಾಪಿಸಬಯಸುತ್ತೇನೆ. ತೂಕವೇ ಇಲ್ಲದೆ ಹಗುರವಾಗಿ ತೇಲುವ ವಿಷಯವನ್ನು ಅಂಕಣದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ್ದೇನೆ. ಕುಂದೇರಾ ಅವರ ಒಂದು ಕಾದಂಬರಿಯ ಶೀರ್ಷಿಕೆ ‘ ದ್ ಅನ್ಬೇರೆಬಲ್ ಲೈಟ ನೆಸ್ ಆಫ್ ಬೀಯಿಂಗ್’ – ಸಹಿಸಲಸಾಧ್ಯವಾದ, ತಾಳಲಾಗದ ‘ಇರು’ ವಿಕೆಯ ಲಘುತ್ವ, ಹಗುರುತನ. ಬಹಳ ಸ್ವಾರಸ್ಯಕರವಾಗಿದೆ ಕಾದಂಬರಿಯ ಹಣೆಪಟ್ಟಿ. ಅಂಕಣಕ್ಕೆ ಪ್ರತಿಕ್ರಿಯಿಸುತ್ತ ಹಿರಿಯರಾದ ರಾಘು ಮಾನ್ವಿ ಯವರು ಈ ಕಾದಂಬರಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು.
೧೯೬೮ರ ಜಕೋಸ್ಲೋವಾಕಿಯಾ ದ ಇತಿಹಾಸದ ತುಮುಲವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ಇಬ್ಬರು ಗಂಡಸರು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಂದು ನಾಯಿಯ ಬಾಳುಗಳ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಇದರಲ್ಲಿ ಬರುವ ವಿದ್ಯಮಾನಗಳು ಪ್ರೇಗ್ ನ ವಸಂತ ಋತುವಿನಲ್ಲಿ ಜರಗುತ್ತವೆ. ಇತಿಹಾಸದ ಪರಿಸ್ಥಿತಿಗಳಿಂದ ಆಘಾತಗೊಂಡ ಪಾತ್ರಗಳು ಬೇರು ಕಿತ್ತ ಮರಗಳಂತಾಗಿ, ನೆಲೆಯಿಲ್ಲದೆ ತೊಳಲಾಡುತ್ತವೆ. ಇದರಲ್ಲಿಯೂ ಒಂದು ರೀತಿಯ ‘ ಇರು’ವಿಕೆಯಿಂದ ‘ ಆಗು’ವಿಕೆಯ ಪರಿವರ್ತನೆಯನ್ನು ಕಾಣಬಹುದು.
ಎಲ್ಲ ಸಂಬಂಧಗಳ ಹಂಗುಗಳನ್ನು ಕಳಚಿಕೊಂಡು , ತೂಕವೇ ಇಲ್ಲದ ಅಸಹನೀಯವಾದ ಲಘುತ್ವವನ್ನು ಪಡೆದ ಜೀವಿಗಳ ವೇದನೆಯೇ ಇದರ ಕಥಾವಸ್ತು. ತೂಕ, ಭಾರ, ಇವು ಬರುವದು ಗುರುತ್ವಾಕರ್ಷಣೆಯಿಂದ. ಗುರುತ್ವಾಕರ್ಷಣೆಯಿಲ್ಲದ ಅಂತರಿಕ್ಷದಲ್ಲಿ ಮನುಷ್ಯ ಹಗುರವಾಗಿ ತೇಲುತ್ತಾನೆ. ಎಲ್ಲ ವಸ್ತುಗಳು ತೇಲುತ್ತವೆ. ಯಾವುದೂ ಹಿಡಿತಕ್ಕೆ ಒಗ್ಗಲಾರದಂಥ ಪರಿಸ್ಥಿತಿ. ಇದು ಮಾನವನ ಸಹಜ ಸ್ಥಿತಿ ಅಲ್ಲ.
ಮಾನವನಿಗೆ ಬಿತ್ತಲು ಭೂಮಿ ಬೇಕು; ಬರೀ ಆಹಾರವನ್ನು ಅಷ್ಟೇ ಅಲ್ಲ, ಪ್ರೀತಿಯನ್ನೂ ಬಿತ್ತುವ ಅವಶ್ಯಕತೆಯನ್ನು ಮನಗಂಡ ಮನುಷ್ಯನಿಗೆ ಒಂದು ನೆಲೆ ಬೇಕು. ಈ ಗುರುತ್ವಾಕರ್ಷಣೆಯ ಜಗ್ಗಾಟಕ್ಕೆ ಅವನು ಅಧೋಮುಖಿಯಾಗಿ ಇಳಿದು ನೆಲಕೆ ಹೊಂದಿಕೊಂಡು ಇದ್ದು, ಅದರ ತತ್ಪರಿಣಾಮವಾಗಿ ಭಾರವನ್ನು ಅನುಭವಿಸಿದರೂ ಅದು ಸಹ್ಯವಾಗುತ್ತದೆ. ಆದರೆ, ಎಲ್ಲ ಕೊಂಡಿಗಳನ್ನು ಕಳಚಿಕೊಂಡು ನೆಲೆಯಿಲ್ಲದ ಹಗುರವಾದ ಬದುಕು ಅಸಹನೀಯವಾಗುತ್ತದೆ. ಇಂತಹ ಏಕಾಕಿ-ಅನಾಥ ಪ್ರಜ್ಞೆ ಯಿಂದ ಹೊರಬರಲು ಹವಣಿಸುವ ಜೀವಿಗಳ ಚಿತ್ರಣ ನಾವು ಕುಂದೇರಾ ಅವರ ಕಾದಂಬರಿಗಳಲ್ಲಿ ಕಾಣಬಹುದು.
ಯೂರೋಪಿನಲ್ಲಾದ ಜಾಗತಿಕ ಸಮರಗಳು, ಮೇಲಿಂದ ಮೇಲೆ ನಡೆದ ಸಾಂಸ್ಕೃತಿಕ ದಾಳಿ, ರಾಜಕೀಯ ಪಲ್ಲಟಗಳು ಇದಕ್ಕೆ ಮುಖ್ಯ ಕಾರಣ. ಮಾನವನ ಅಸ್ತಿತ್ವದ ಕುರಿತಾಗಿ ಶೋಧನೆ ಹುಟ್ಟಿದ್ದು ಈ ಪರಿಸ್ಥಿತಿಗಳಿಂದಲೇ.
ರಾಜಕೀಯ ನೆಪ ಒಡ್ಡಿ, ಜೆಕೋಸ್ಲೋವಾಕಿಯಾದಲ್ಲಿ ಒಬ್ಬ ಇಂಜಿನಿಯರ್ ನ ಖಾಸಗಿ ಜೀವನದ ಮೇಲೆ ನಡೆದ ದಾಳಿಯ ಸಂಗತಿಯನ್ನು ಉಲ್ಲೇಖಿಸುತ್ತಾರೆ ಮಿಲನ್ ಕುಂದೇರಾ. ಅವನ ವಿಷಯವಾಗಿ ವೃತ್ತ ಪತ್ರಿಕೆಯಲ್ಲಿ ಬಂದ ಸುಳ್ಳು ಸುದ್ದಿಯನ್ನು ಬೆಂಬತ್ತಿ ಹೋಗಿ, ಕೊನೆಗೂ ಅದರ ಜಾಡು- ಮೂಲಗಳು ದೊರೆಯದೆ ಹತಾಶನಾಗಿ, ಪರಿಸ್ಥಿತಿಯ ಕೈಗೊಂಬೆಯಾಗಿ,’ ನಡೆಯದ ವಿಷಯ ‘ಕೊನೆಗೂ ಅವನ ಜೀವನದಲ್ಲಿ ಘಟಿಸುವ ವಿಷಾದವನ್ನು ಮನ ಕಲಕುವಂತೆ ಹೇಳುತ್ತಾರೆ ಕುಂದೇರಾ, ಅವರ ‘ ಆರ್ಟ್ ಆಫ ನಾವೆಲ್’ ನಲ್ಲಿ ಬರೆದ ಒಂದು ಲೇಖನದಲ್ಲಿ.
ಇಡೀ ಜಗತ್ತನ್ನು ತನ್ನ ಕೃತಿಗಳಿಂದ, ವಿಚಾರಗಳಿಂದ ತಲ್ಲಣಗೊಳಿಸಿದ ಪ್ರಸಿದ್ಧ ಲೇಖಕ ಕಾಫ್ಕಾನ ಕಾದಂಬರಿಗಳಲ್ಲಿ ಬರುವ ಪಾತ್ರಗಳಿಗೆ ಸಮಾನತೆ- ಹೋಲಿಕೆಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ ಕುಂದೇರಾ. ಕಾಫ್ಕಾ ಅವರ ‘ ದ ಟ್ರೈಯಲ್’ ನಲ್ಲಿ , ‘ಕ್ಯಾಜಲ್’ ನಲ್ಲಿ ಇದೇ ರೀತಿಯ ಶೋಧನೆಯಿದೆ. ತಾನು ಎಸಗಿದ ಅಪರಾಧವೇನೆಂದು ಅರಸುತ್ತ ಹೊರಟ ಪಾತ್ರಗಳು, ತಮ್ಮ ಅಳವಿಗೆ, ಅರಿವಿಗೆ ಮೀರಿದ ನಿಗೂಢವಾದ ಶಕ್ತಿಗೆ ತುತ್ತಾಗಿ ದಂಡನೆಯ ಆದೇಶವನ್ನು ಪಡೆದು ಅದರ ವ್ಯೂಹದಲ್ಲಿ ಸಿಲುಕಿಕೊಂಡ ಅವರ ಅಸಹಾಯಕತೆಯನ್ನು ಓದುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ.
ಮಾನವ ಹಾಗೂ ಅವನ ಆಯ್ಕೆ ಎಷ್ಟರ ಮಟ್ಟಿಗೆ ಸ್ವತಂತ್ರ ಎಂಬ ಮೂಲಭೂತವಾದ ಪ್ರಶ್ನೆಯ ಅಲೆಯನ್ನು ಎಬ್ಬಿಸುತ್ತದೆ.
ಎಂತಹ ಆಶಾವಾದಿಗಳ ಹೊಟ್ಟೆಯಲ್ಲೂ ತಣ್ಣೀರೆರಚುವಂಥ ಕಾಫ್ಕಾ ಅವರ ಮತ್ತೊಂದು ಕೃತಿ
‘ ಮೆಟಮಾರ್ಫಸಿಸ್’ . ಈ ಕೃತಿಯಲ್ಲಿ ಸಮಾಜದ ಹಾಗೂ ಪರಿಸರದ ಒತ್ತಡಕ್ಕೆ ಗುರಿಯಾದ ಮಾನವನ ದೈನ್ಯ ಸ್ಥಿತಿಯ ಚಿತ್ರಣ ಬಹಳ ಹೃದಯವಿದ್ರಾವಕವಾಗಿದೆ. ಈ ಕತೆಯಲ್ಲಿ ಬರುವ ಮುಖ್ಯ ಪಾತ್ರ ಗ್ರೆಗರಿ ಸಂಸಾ ಒಂದು ದಿನ ಇದ್ದಕ್ಕದ್ದಂತೆ ಒಂದು ಕ್ರಿಮಿ-ಕೀಟವಾಗಿ ರೂಪಾಂತರಗೊಳ್ಳುವ ಪ್ರಸಂಗ ಎಂಥವರ ಮನಸ್ಸನ್ನೂ ಕದಡುತ್ತದೆ. ಮಾನವನಂತೆ ಎದ್ದು ಹೊರಬಾರಲಾರದಂಥ ಪರಿಸ್ಥಿತಿ ಏರ್ಪಟ್ಟಾಗ ಮೊದಲು ಮರುಕ ಅನುಕಂಪ ತೋರುವ ಅವನ ಮನೆಯವರೇ ದೂರವಾಗುತ್ತ ಹೋಗುತ್ತಾರೆ. ಈ ಕೃತಿ ಇಡೀ ವಿಶ್ವದಲ್ಲಿ ಒಂದು ದೊಡ್ಡ ಅಲೆಯನ್ನೇ ಎಬ್ಬಿಸಿ ಸಂಚಲನವನ್ನು ಹುಟ್ಟುಹಾಕಿತ್ತು. ಯೂರೋಪ್ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಆದ ಕೈಗಾರಿಕಾ ಕ್ರಾಂತಿ ಹಾಗೂ ಇತರ ಸಾಮಾಜಿಕ ಬದಲಾವಣೆಗಳಿಂದ ಉತ್ಪನ್ನವಾದ ಮಾನವ ಸಂಬಂಧಗಳ ಹೊಸ ಪರಿಭಾಷೆ ಇಂತಹ ಪ್ರಕ್ಷುಬ್ದ ವಾತಾವರಣಕ್ಕೆ ಕಾರಣವಾಗಿ ಮಾನವನ ಅಸ್ತಿತ್ವದ ಸಾರ್ಥಕತೆಯನ್ನು ಶೋಧಿಸುತ್ತ ಹೊರಟಾಗ ಇಂತಹ ಸವಾಲುಗಳನ್ನು ಗ್ರಾಸವನ್ನಾಗಿಟ್ಟುಕೊಂಡು ಅನೇಕ ಲೇಖಕರು ತಮ್ಮ ಕೃತಿಗಳನ್ನು ರಚಿಸಿದರು.
ಇದೇ ಶ್ರೇಣಿಯಲ್ಲಿ ಬಂದ ಮತ್ತೊಂದು ಗಮನಾರ್ಹವಾದ ಕೃತಿ ಸ್ಯಾಮುಯೆಲ್ ಬೆಕೆಟ್ ಅವರ ‘ವೇಟಿಂಗ್ ಫಾರ್ ಗೊದೋ’ ನಾಟಕ. ಮರದ ಕೆಳಗೆ ನಿಂತ ಈರ್ವರು – ಲಾದಿಮೀರ್ ಹಾಗೂ ಎಸ್ತ್ರಗನ್ ವಿವಿಧ ವಿಷಯಗಳನ್ನು ಚರ್ಚಿಸುತ್ತಾ ‘ ಗೊದೋ’ ಎಂಬ ವ್ಯಕ್ತಿಗಾಗಿ ಕಾಯುತ್ತ ನಿಂತಿದ್ದಾರೆ. ಏತನ್ಮಧ್ಯೆ ಪೋಜೊ ಎಂಬ ವ್ಯಕ್ತಿ ತನ್ನ ಲಕಿ ಎನ್ನುವ ಗುಲಾಮನ ಜೊತೆ ಬರುತ್ತಾನೆ. ಗುಲಾಮನ ಹೆಸರು ಲಕಿ ಇರುವದು ವೆಂಗ್ಯವನ್ನು ಸೂಚಿಸಲು ಉದ್ದೇಶಪೂರ್ಣವಾಗಿ ಇದ್ದರೂ ಇದ್ದೀತು. ಲಕಿ ನೃತ್ಯ ಮಾಡಿ, ಕೆಲವು ಆಲೋಚನೆಗಳನ್ನು ಲಾದಮೀರ್ ಮತ್ತು ಎಸ್ಟ್ರಗನ್ ಅವರ ಮುಂದೆ ಇಟ್ಟು ಅವರನ್ನು ರಂಜಿಸುತ್ತಾನೆ. ಲಕಿ ಹಾಗೂ ಪೋಜೋ ಅವರ ನಿಷ್ಕ್ರಮಣವಾದ ಮೇಲೆ ಒಬ್ಬ ಹುಡುಗ ಬಂದು
’ ಗೋದೋ ಇಂದು ಬರುವದಿಲ್ಲಾ, ಮರುದಿನ ಬರುವ’ ನೆಂದು ಲಾದಿಮೀರ್ ಹಾಗೂ ಎಸ್ಟ್ರಗನ್ ಅವರಿಗೆ ಸಂದೇಶ ನೀಡುತ್ತಾನೆ. ಆದರೆ ಇವರಿಬ್ಬರ ಗೋದೋ’ ಗಾಗಿ ಕಾಯುವದು ಮುಂದುವರೆಯುತ್ತದೆ. ಅದರ ಜೊತೆ ಅವರ ಬೇಸರ,ಅದನ್ನು ಹೊಡೆದು ಹಾಕಲು ವ್ಯರ್ಥ ಹರಟೆ ಇತ್ಯಾದಿ ನಿರೂಪಣೆಗೊಳ್ಳುತ್ತಾ ಹೋದಂತೆ, ಇಡೀ ಕೃತಿ ‘ ನಿರರ್ಥಕ’ ಬಾಳಿಗೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ.
ಇಂತಹ ಭ್ರಮ ನಿರಸನ, ಪ್ರಕ್ಷುಬ್ದತೆ ನಮ್ಮ ಸಮಾಜದ ಸಂದರ್ಭಕ್ಕೆ ಹೊಸತು ಅನಿಸುತ್ತಿದ್ದು, ನಮ್ಮ ಸಮಾಜದಲ್ಲಿ, ಮಾನವೀಯ ಸಂಬಂಧಗಳಲ್ಲಿ, ಮೌಲ್ಯಗಳಲ್ಲಿ ಆದ ಎಷ್ಟೋ ಬದಲಾವಣೆಗಳಿಂದಾಗಿ ಇಂತಹ ವಿಷಯಗಳಿಂದ ನಾವೂ ಹೊರತಲ್ಲ ಎಂಬ ಭಾವನೆ ಮೂಡುತ್ತಿದೆ. ಆದರೂ ನಮ್ಮ ಸಾಂಸ್ಕ್ರತಿಕ ಮೌಲ್ಯಗಳ, ವಿಚಾರಧಾರೆಗಳ ನೆರವಿನಿಂದ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ದಾಟಬೇಕಿದೆ. ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸಬೇಕಾಗಿದೆ. ಅದಕ್ಕೆ ಒಲವೇ ತಳಹದಿಯಾಗಬೇಕು. ‘ಇರು’ವಿಕೆಯಿಂದ ‘ಆಗು’ವಿಕೆಯ ಪಯಣದಲ್ಲಿ ನಾವು ಸರಿಯಾದ, ಸಮಾಜಕ್ಕೆ ಹಿತಪರವಾದ ದಾರಿಯನ್ನು ಆಯ್ಕೆ ಮಾಡಿಕೊಳುವದು ಮುಖ್ಯ.
ಪ್ರಸಕ್ತ ಸಮಯ ಬಹಳ ಗಂಭೀರವಾಗಿದೆ. ಎಂದೂ ಕಂಡರಿಯದ ಸಂಕಷ್ಟದಲ್ಲಿ ಇಂದು ಮಾನವ ಜನಾಂಗ ಸಿಲುಕಿಕೊಂಡಿದೆ. ಕೊರೋನಾ ಮಹಾಮಾರಿ ಕರಾಳ ರೂಪ ತಾಳಿ ಮತ್ತೆ ಹೆಡೆಯೆತ್ತಿದೆ. ಈ ಹಂತದಲ್ಲಿ ವೈರಾಣು ತನ್ನ ‘ಇರು’ವಿಕೆಯಿಂದ ‘ಆಗು’ವಿಕೆಯ ಪಯಣ ಬೆಳೆಸುತ್ತಲೇ ಇದ್ದು ಇಡೀ ವಿಶ್ವದ ಮಾನವ ಜನಾಂಗದ ಅಸ್ತಿತ್ವಕ್ಕೆ ಸವಾಲನ್ನು ಎಸೆದು ಎಲ್ಲರನ್ನು ಅಲ್ಲಾಡಿಸಿದೆ.
ಇಂದಿನ ಸಂದರ್ಭದಲ್ಲಿ ನಿತ್ಯ ಹೋರಾಟ ಮಾಡುತ್ತ ಆರೋಗ್ಯ, ನೆಮ್ಮದಿಗಳಿಂದ ಇರುವ ‘ಅಸ್ತಿತ್ವ’ ದ ತುರ್ತು ಅವಶ್ಯಕತೆಯಾಗಿದೆ. ಇದಕ್ಕೆ ಪೂರಕವಾಗಿ ವರ್ತಿಸುವುದೇ ನಮ್ಮೆಲ್ಲರ ಇಂದಿನ ಆದ್ಯ ಕರ್ತವ್ಯ.
ತಾಂತ್ರಿಕ ಕ್ರಾಂತಿಯಿಂದ ವಿಶ್ವವೇ ಒಂದು ಹಳ್ಳಿಯಾಗಿರುವುದೇನೋ ನಿಜ( ಗ್ಲೋಬಲ್ ವಿಲೇಜ್). ಆದರೆ, ರಸ್ತೆ ದಾಟಿ ನಮಗೆ ಪರಿಚಯವಿರುವ, ನಮ್ಮ ಬಂಧು ಬಳಗದವರ ಮನೆಗಳೂ ದೂರವೆನಿಸುತ್ತಿವೆ. ಅವರ ಹತ್ತಿರ ಹೋಗಿ ಅವರ ದುಃಖ ದುಮ್ಮಾನಗಳಲ್ಲಿ ಪಾಲ್ಗೊಂಡು ಸಾಂತ್ವನ ನೀಡಲೂ ಎಷ್ಟೋ ಅಡೆ ತಡೆಗಳು ಬಂದು ಮನಗಳು ದೂರವಾಗುವ ದುರ್ಗಮ ವಾತಾವರಣ ಸೃಷ್ಟಿಯಾಗುತ್ತಿದೆ. ಕೊರೋನಾ ಮಹಾಮಾರಿಯ ಈ ಹುನ್ನಾರದಲ್ಲಿ ಅದನ್ನು ಪರಾಜಯಗೊಳಿಸಿ ಮತ್ತೆ ಸಮಾಜದಲ್ಲಿ ಮಾನವ ಸಂಪರ್ಕ ಹಾಗೂ ಪ್ರೀತಿಗಳನ್ನು ಸ್ಥಾಪಿಸಬೇಕಿದೆ.
ನನ್ನ ಮನದ ಅಂತರಾಳದ ಒಳಮಾತುಗಳನ್ನು, ಕಳಕಳಿಯನ್ನು ಹಂಚಿಕೊಂಡಿರುವೆ.
ಬೆಳಕು ಮೂಡುವವರೆಗೆ ನಮ್ಮ ಹೃದಯದಲ್ಲಿ ಪ್ರೀತಿಯ ಹಣತೆಗಳನ್ನು ಉರಿಸಿ ಬೆಳಕು ಮಾಡೋಣ.
ವಂದನೆಗಳು..
( ಅಡಿ ಟಿಪ್ಪಣಿ: ಅಂಕಣಕ್ಕೆ ಪೂರಕವಾದ ಕೆಲವು ಲೇಖಕರ, ಚಿಂತಕರ, ದಾರ್ಶನಿಕರ ವಿಚಾರಧಾರೆಯನ್ನು ಉಲ್ಲೇಖ ಮಾಡಿದ್ದೇನೆ. ಅವರ ಕೃತಿಗಳನ್ನು ವಿಶದವಾಗಿ ಚರ್ಚಿಸುವದು ಈ ಅಂಕಣದ ವ್ಯಾಪ್ತಿಯಲ್ಲಿ ಬರುವದಿಲ್ಲ ಎಂದು ನನ್ನ ನಂಬಿಕೆ. ವಿಷಯವನ್ನು ಕೆಲವು ಪ್ರಾತಿನಿಧಿಕ ಕೃತಿಗಳ ಸಹಾಯದಿಂದ ಸ್ಥೂಲವಾಗಿ ಚರ್ಚಿಸಿದ್ದೇನೆ. ಹಾಗೆ ಮಾಡುವದರಲ್ಲಿ ವಿಷಯ ಸರಳೀಕೃತಗೊಂಡಿತೋ ಎನೋ ಎಂಬ ಅಳುಕು ಇದೆ. ಆದರೂ ನಿಮ್ಮ ಮುಂದೆ ಇಡುವ ಸಾಹಸ ಮಾಡಿದ್ದೇನೆ.)
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ