- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಮೊದಲ ಸಲ ಅಮೇರಿಕಾದ ಪ್ರಯಾಣ. ನಮ್ಮ ದೇಶ ಬಿಟ್ಟು ೨೪ ಘಂಟೆಗಳ ನಂತರ ನಮ್ಮ ಗುರಿಯನ್ನು ತಲುಪುತ್ತಾ ಇದ್ದೇವೆ.
ಡಲ್ಲಾಸ್ ಫೋರ್ಟ್ ವರ್ಥ್ (Dallas Fort Worth) ದಲ್ಲಿ ವಿಮಾನ ಇನ್ನು ಕೆಲವು ನಿಮಿಷಗಳಲ್ಲಿ ಇಳಿಯುತ್ತಿದೆ, ಅಲ್ಲಿಯ ಹವಾಮಾನದ ಪರಿಚಯ ಕೊಡುತ್ತಾ ಇದ್ದಾರೆ ಗಗನ ಸಖಿಯರು.
ಗಗನದಿಂದ ಈ ಊರು ಹೇಗೆ ಕಾಣುತ್ತದೆ ಎಂದು ಕುತೂಹಲದಿಂದ ಗಾಜಿನ ಕಿಟಕಿಯ ಮೂಲಕ ಕೆಳಗಿನ ದೃಶ್ಯ ನೋಡಲು ಪ್ರಯತ್ನಿಸಿದಾಗ ಅಲ್ಲಿ ಕಂಡದ್ದು ನಮ್ಮ ಗುಡಿಸಿಲಿನಂತಹ ಮನೆಯ ಸಾಲುಗಳು. ಇದೇನು ನಮ್ಮ ಮುಂಬೈ ಯ ಧಾರಾವೀ ತರಹ ಕಾಣುತ್ತಿದೆಯಲ್ಲ! ಎಂದೆನಿಸಿತು. ಎಲ್ಲಾ ಮನೆಗಳಿಗೂ ಇಳಿಜಾರು ಚಪ್ಪರ!!
ಹಾಗೆಯೇ ದುಷ್ಯಂತನೂ ಕುತೂಹಲದಿಂದ ವಿಮಾನದಿಂದ ಕೆಳಗೆ ದೃಷ್ಟಿ ಹಾಯಿಸಿದಾಗ ಕಂಡದ್ದು ಸುಂದರ ಹೇಮಕೂಟ ದರ್ಶನ. ಹಿಮಾಲಯದ ಉತ್ತರದ ಉನ್ನತ ಶಿಖರ, ಕೈಲಾಸ ಪರ್ವತದ ರಮಣೀಯ ದೃಶ್ಯ. ಅದು ಕಿಂಪುರುಷರ ವಾಸಸ್ಥಾನ. ಕಿಂಪುರುಷರು ಅಂದರೆ ಶರೀರ ಮನುಷ್ಯರದು ಆದರೆ ಮುಖ ಕುದುರೆಯದು. ಇವರು ಕುಬೇರನ ಸೇವಕರು.
“ಸ್ವಾಯಂಭುವಾನ್ ಮರೀಚೇಯೆ:
ಪ್ರಬಭೂವ ಪ್ರಜಾಪತಿ:
ಸುರಾಸುರ ಗುರು: ಸ: ಅತ್ರ
ಸಪತ್ನೀಕ: ತಪಸ್ಯತಿ.“
ಕಶ್ಯಪ ಪ್ರಜಾಪತಿ ಮರೀಚಿ ಮುನಿಯ ಮಗನಾದ್ದರಿಂದ ಮಾರೀಚ ಎಂದೂ ಅವನನ್ನು ಕರೆಯುತ್ತಾರೆ. ಅದಿತಿ ಇವರ ಋಷಿಪತ್ನಿ. ಈ ಋಷಿದಂಪತಿಗಳು ಹೇಮಕೂಟದಲ್ಲಿ ತಪಸ್ಸಿದ್ದಿಗಾಗಿ ವಾಸವಾಗಿದ್ದಾರೆ ಎಂದು ಮಾತಲಿ ದುಷ್ಯಂತನಿಗೆ ಅರುಹಿದನು.
ದೈವಕೃಪೆ ಒದಗಿ ಬಂದಿದೆ. ಈ ಅವಸರ ಕಳೆದುಕೊಳ್ಳಬಾರದು ಎಂದು ಆಲೋಚಿಸಿ, ದುಷ್ಯಂತ
ಮಹರ್ಷಿಗಳ ದರ್ಶನ ಮಾಡಿ ಸಾಧುಗಳಿಗೆ ಪ್ರದಕ್ಷಿಣೆ ಹಾಕಿಯೇ ಹೋಗೋಣ ಎಂದು ನಿಶ್ಚಯಿಸಿದನು.
ರಥ ಭೂಮಿ ಸ್ಪರ್ಶ ಮಾಡಿತು. ಆದರೆ ರಥದ ಗಾಲಿಗಳ ಘರ್ಷಣೆಯ ಕರ್ಕಶ ಶಬ್ದ ಬರಲಿಲ್ಲ. ಧೂಳು ಏಳಲಿಲ್ಲ. ಅಲ್ಲಿಯ ಪರಿಶುದ್ಧವಾದ ವಾತಾವರಣದ ಅರಿವು ಮೂಡುತ್ತದೆ.
ಅಥವಾ ಪರಿಣತ ಪೈಲಟ್ (Pilot) ಮಾತಲಿಯಿಂದ ಸ್ಮೂಥ್ ಲ್ಯಾಂಡಿಂಗ್ (Smooth Landing) ಮಾಡಲ್ಪಟ್ಟಿತು ಎನ್ನಬೇಕೇ !
“ವಲ್ಮೀಕಾರ್ಧ ನಿಮಗ್ನ ಮೂರ್ತಿ:
ಉರುಸಾ ಸಂದಷ್ಟ ಸರ್ಪ ತ್ವಚಾ
ಕಂಠೇ ಜೀರ್ಣ ಲತಾ ಪ್ರತಾನ ವಲಯೇನ
ಅತ್ಯರ್ಥಸಂಪೀಡಿತ:
ಅಸಂಖ್ಯಾಪಿ ಶಕುಂತ ನೀಡ ನಿಚಿತಂ
ವಿಭ್ರಜ್ಜಟಾಮಂಡಲಮ್
ಯತ್ರ ಸ್ಥಾಣು: ಇವ ಅಚಲ: ಮುನಿ:
ಅಸಾವಭ್ಯರ್ಕ ಬಿಂಬಂ ಸ್ಥಿತ :“.
“ಸೂರ್ಯಾಭಿಮುಖವಾಗಿ ತಪಸ್ಸಿಗೆ ನಿಂತ ಋಷಿಗಳ ಶರೀರ ವೃಕ್ಷದಂತೆ ಸ್ಥಿರವಾಗಿದೆ. ಅರ್ಧ ಶರೀರ ಹುತ್ತದಲ್ಲಿ ಹೂತಿದೆ. ಲತಾ ಬಳ್ಳಿಗಳು ಕುತ್ತಿಗೆಯನ್ನು ಹಾವಿನಂತೆ ಸುತ್ತಿವೆ. ಸರ್ಪಗಳು ಎದೆಯನ್ನು ಬಳಸಿವೆ. ಜಟೆಯಲ್ಲಿ ಪಕ್ಷಿಗಳು ಗೂಡು ಕಟ್ಟಿವೆ.”
ಅದೇನು ಕವಿಯ ವರ್ಣನಾ ಕುಶಲತೆ!!!
ಒಬ್ಬ ಯೋಗಿಯ ಸಂಪೂರ್ಣ ವ್ಯಕ್ತಿತ್ವವನ್ನು ಜೀವಂತವಾಗಿ ನಿಲ್ಲಿಸಿರುವನು ನಮ್ಮೆದುರು.
ಋಷಿಯ ಕಟಿಪ್ರದೇಶದ ವರೆಗೂ ಇರುವೆಗಳ ಹುತ್ತ ಬೆಳೆದರೂ ವಿಚಲಿತನಾಗಲಿಲ್ಲ. ಎದೆಯ ಮೇಲೆ ಸರ್ಪಗಳು ಹರಿದಾಡುತ್ತಿವೆ. ಜಟೆಯಲ್ಲಿ ಹಕ್ಕಿಗಳ ಗೂಡು !! ಯೋಗಿ ಸಮಾಧಿ ಸ್ಥಿತಿಯಲ್ಲಿರುವನು. ಎಷ್ಟೋ ವರುಷಗಳು ಉರುಳಿರಬೇಕು.
ಇಂಥ ಘೋರತಪಸ್ವಿಗೆ ದುಷ್ಯಂತ ಕರ ಜೋಡಿಸಿದನು. ರಥವನ್ನು ನಿಲ್ಲಿಸಿ, ಆಶ್ರಮ ಪದವನ್ನು ಪ್ರವೇಶಿಸಲು ಅವರು ಅಣಿಯಾದರು. ಆದಿತಿಯ ಪ್ರೇಮದ ಆರೈಕೆಯಲ್ಲಿ ಸುಂದರವಾದ ಮಂದಾರ ಗಿಡಗಳು ಕಂಡವು.
” ಸ್ವರ್ಗಾತ್ ಅಧಿಕತರಮ್ ನಿವೃತ್ತಿ ಸ್ಥಾನಮ್ .
ಅಮೃತ ಹೃದಮಿವ
ಅವಗಾಢೋಸ್ಮಿ.“
ಎಂದು ಉದ್ಗಾರ ಎತ್ತಿದನು ದುಷ್ಯಂತ.
” ಸ್ವರ್ಗಕ್ಕಿಂತಲೂ ಹೆಚ್ಚಿನ ಸೌಂದರ್ಯ ಇಲ್ಲಿ! ಅಮೃತದ ಸರೋವರದಲ್ಲಿ ಈಜುವಂತಿದೆ”.
ರಥಿಕ ಹಾಗೂ ಸಾರಥಿ ಇಬ್ಬರೂ ಕೆಳಗಿಳಿದು ಆಶ್ರಮದ ಅಮೋಘ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ಇಲ್ಲಿಯ ಶುದ್ಧ ಹವೆಯೇ ಕಲ್ಪವೃಕ್ಷದ ಹಾಗಿದೆ. ಸರೋವರದಲ್ಲಿ ಕಾಂಚನ ಕಮಲಗಳು ಅರಳಿವೆ. ಕುಸುಮಗಳ ಕೇಸರದ ಸುಗಂಧದಿಂದ ಬೆರೆತ ಜಲದಿಂದ ತರ್ಪಣ ನಡೆಯುತ್ತಿದೆ. ರತ್ನ ಖಚಿತ ಬಂಡೆಗಳ ಮೇಲೆ ಸಾಧುಗಳು ತಪೋ ನಿರತರಾಗಿದ್ದಾರೆ. ಸ್ವರ್ಗ ಸುಖ ನೀಡಬಲ್ಲ ಆಪ್ಸರೆಯರಂತಹ ಸುಂದರ ಆಕರ್ಷಕ ವಾತಾವರಣದಲ್ಲೂ ಋಷಿಗಳು ಧ್ಯಾನ ಮಗ್ನರಾಗಿದ್ದಾರೆ.
ಈ ಪ್ರಶಾಂತ ವಾತಾವರಣದಲ್ಲಿ ಆನಂದ ಪರವಶರಾಗಿದ್ದಾರೆ ದುಷ್ಯಂತ ಮತ್ತು ಮಾತಲಿ.
ಮಾರೀಚ ಮಹರ್ಷಿಗಳು ಆದಿತಿ ಹಾಗೂ ಇತರ ಋಷಿಪತ್ನಿಯರಿಗೆ ಪತಿವ್ರತೆಯ ಕರ್ತವ್ಯಗಳನ್ನು ಬೋಧಿಸುತ್ತಾ ಇದ್ದ ಸಮಾಚಾರ ಬಂದಿತು. ಪತಿವ್ರತಾ ಧರ್ಮದ ಉಪದೇಶ ಮುಗಿಯುವವರೆಗೆ ರಾಜನು ಋಷಿಗಳ ದರ್ಶನಕ್ಕಾಗಿ ಕಾಯಬೇಕು.
ಕವಿ ಇಲ್ಲಿ ಬೇಕು ಎಂದೇ “ಪತಿವ್ರತಾ ಧರ್ಮ” ವನ್ನು ಪ್ರಸ್ತಾಪಿಸಿ ಪ್ರೇಕ್ಷಕರನ್ನು ಮತ್ತು ದುಷ್ಯಂತನನ್ನು ಪತಿವ್ರತೆ ಶಕುಂತಲೆಯನ್ನು ದರ್ಶಿಸುವ ಪೀಠಿಕೆ ಹಾಕುತ್ತಾ ಇದ್ದಾನೆ ಅನಿಸುವದು!!!
ಅಶೋಕ ವೃಕ್ಷದ ಕೆಳಗೆ ವಿಶ್ರಾಂತಿ ಪಡೆಯಲು ಸೂಚಿಸಿ, ಮಾತಲಿ ತಾನು ಆಶ್ರಮದೊಳಗೆ ಹೋಗಿ ಮಹಾರಾಜರ ಆಗಮನದ ಸಮಾಚಾರ ತಿಳಿಸುವೆ ಆದಿತಿಗೆ ಎಂದು ಹೊರಡುವನು.
“ಮನೋರಥಾಯ ನಾಶಂಸೆ ಕಿಂ ಬಾಹೋ ಸ್ಪಂದಸೆ ವೃಥಾ.
ಪೂರ್ವಾವಧೀರಿತಂ ಶ್ರಯೋ
ದು:ಖಮ್ ಹಿ ಪರಿವರ್ತತೆ.”
ವಿಶ್ರಾಂತಿಗಾಗಿ ಕುಳಿತ ರಾಜನ ಬಲಭುಜ ಹಾರಿದಾಗ ಹೀಗೆ ಉದ್ಗರಿಸುವನು.
” ನಾನು ಯಾವ ಆಶೆಯನ್ನೂ ಮಾಡುತ್ತಿಲ್ಲ. ಕಾರಣ ನನ್ನ ಮನೋರಥ ಈಡೇರುವುದಿಲ್ಲ ಎಂಬುದನ್ನು ನಾನು ಬಲ್ಲೆ!
ಹೇ,ಬಲಭುಜವೇ, ನೀನು ಹಾರುತ್ತಿರುವದು ಮನೋರಥ ಪೂರೈಕೆ ಆಗುವ ಲಕ್ಷಣ ಇದ್ದರೂ ಅದು ಈಗ ನನಗೆ ವ್ಯರ್ಥ ಎನಿಸುತ್ತಿದೆ. ಕಾರಣ ಯಾವುದೇ ಶುಭ ಸೂಚಕವೂ ನನಗೆ ದು:ಖವನ್ನೇ ತಂದಿತಲ್ಲ” !
ಶಕುಂತಲೆಯ ವಿಯೋಗದಿಂದ ದುಷ್ಯಂತ ಪೂರ್ಣ ನಿರಾಶಾ ಭಾವ ತಳೆದಿರುವಂತಿದೆ.
ಮೊದಲನೇ ಅಂಕದಲ್ಲಿ , ಆಶ್ರಮದೊಳಗೆ ಹೋಗುವಾಗ ಹೀಗೆಯೇ ವಾಮೇತರ ಭುಜ ಸ್ಪಂದನೆ ಆದಾಗ ಋಷಿಗಳ ಆಶ್ರಮದಲ್ಲಿ ತನಗೇನು ಶುಭ ಆಗಲು ಸಾಧ್ಯ ಎಂದು ವಿಸ್ಮಯ ಪಟ್ಟ ದುಷ್ಯಂತನಿಗೆ ಆಪ್ಸರೆ ಶಕುಂತಲೆ ಸಿಕ್ಕು ಸಂತೋಷಿಸಿದರೂ ಪರಿಣಾಮ ದು:ಖಕರವೇ ಆಯಿತಲ್ಲ ಎಂಬುದು ಅವನ ಈಗಿನ ವಿಷಾದಕ್ಕೆ ಕಾರಣ.
ದುಷ್ಯಂತ ಹೀಗೆ ಚಿಂತಿಸುತ್ತಾ ಇರುವಾಗ, ನೇಪಥ್ಯದಲ್ಲಿ ಧ್ವನಿ ಕೇಳಿ ಬರಲು ಅತ್ತಕಡೆ ಸಾಗುವನು.
ಚಿಕ್ಕ ಬಾಲಕನೊಬ್ಬ ಹಾಲು ಕುಡಿಯುತ್ತಿರುವ ಸಿಂಹದ ಮರಿಯೊಂದನ್ನು ತಾಯಿ ಸಿಂಹದಿಂದ ಒತ್ತಾಯದಿಂದ ಎಳೆಯುತ್ತಾ, ತನ್ನ ಜೊತೆಗೆ ಆಡಲು ಕರೆಯುತ್ತಿದ್ದಾನೆ.
” ಜೃಂಭಸ್ವ ಸಿಂಹ ದಂತಾಸ್ತೆ ಗಣಯಿಷ್ಯೇ”
” ಹೇ ಸಿಂಹವೇ ಬಾಯಿ ತೆರೆ. ನಿನ್ನ ಬಾಯಲ್ಲಿ ಹಲ್ಲುಗಳು ಎಷ್ಟು ಎಂದು ಎಣಿಸಬೇಕು ನಾನು!”
ಅವನ ಹಿಂದೆ ಇದ್ದಾರೆ ಇಬ್ಬರು ತಪಸ್ವಿನಿಯರು.
” ಹಾಗೆ ಸಿಂಹದ ಮರಿಯೊಂದಿಗೆ ತುಂಟತನ ಮಾಡಬಾರದು, ಮಗೂ. ಅವೂ ನಮ್ಮ ಮಕ್ಕಳೇ. ದಿನದಿನಕ್ಕೂ ನಿನ್ನ ತುಂಟತನ ಹೆಚ್ಚಾಗುತ್ತಿದೆ. ಋಷಿಗಳು ನಿನಗೆ ಇಟ್ಟ ‘ ಸರ್ವದಮನ’ ಎಂಬ ಹೆಸರು ಸಾರ್ಥಕವಾಯಿತು” ಎಂದು ತಾಪಸಿ ಮಗುವಿಗೆ ತಿಳಿ ಹೇಳುತ್ತಾಳೆ.
ಈ ದೃಶ್ಯವನ್ನು ನೋಡುತ್ತಾ ಇದ್ದ ದುಷ್ಯಂತನ ಮನ ವಿಚಲಿತಗೊಂಡಿದೆ.
” ಕಿಂ ನು ಖಲು ಬಾಲ: ಅಸ್ಮಿನ್ ಔರಸ ಇವ ಪುತ್ರೇ ಸ್ನಿಹ್ಯತಿ ಮೆ ಮನ:“
” ಈ ಬಾಲಕನನ್ನು ಕಂಡು ಪುತ್ರ ವಾತ್ಸಲ್ಯ ಉಂಟಾಗುತ್ತಿದೆಯಲ್ಲ ನನ್ನಲ್ಲಿ !! “
ಎಂದು ತನ್ನಲ್ಲಿ ಉಂಟಾದ ಸ್ನೇಹ ಭಾವಕ್ಕೆ ಆಶ್ಚರ್ಯ ಚಕಿತರಾಗುತ್ತಾನೆ. ಔರಸ ಅಂದರೆ ಉರಸ: ಜಾತ: ತನಗೇ ಹುಟ್ಟಿದವನು ಎಂಬರ್ಥ. ಮಗನ ವಾತ್ಸಲ್ಯ ಸ್ನೇಹದ ಸ್ಪಂದನ ದುಷ್ಯಂತನ ಹೃದಯದೊಳಗೆ ತರಂಗಿಸುತ್ತಿದೆ. ಯಾಕೆ ಹೀಗೆ ಎಂಬ ವಿಸ್ಮಯ ಅವನದ್ದು.
“ ಮಹತ: ತೇಜಸ: ಬೀಜಂ ಬಾಲ:
ಅಯಂ ಪ್ರತಿಭಾತಿ ಮೇ.
ಸ್ಫುಲಿಗಾವಸ್ಥಯಾ
ವಹ್ನಿರೇಧಾಪೇಕ್ಷ ಇವ ಸ್ಥಿತ: ” .
” ಅಪೂರ್ವ ತೇಜಸ್ಸಿನ ಕಿಡಿ ಈ ಬಾಲಕನಲ್ಲಿ ಕಂಡು ಬರುತ್ತದೆ. ಕಿಡಿ ಅಗ್ನಿಯಾಗಿ ಉರಿಯಲು ಕಾಯುತ್ತಿದೆ”
ಎಂದೆನಿಸಿತು ದುಷ್ಯಂತನಿಗೆ.
” ಮಗೂ, ಆ ಸಿಂಹದ ಮರಿಯನ್ನು ಪೀಡಿಸಬೇಡ. ನಿನಗೆ ಬೇರೆ ಆಟಿಕೆ ತಂದು ಕೊಡುವೆ.”
ಎಂದು ತಾಪಸಿ ಮಗುವಿನ ಮನಸ್ಸನ್ನು ಬೇರೆ ಕಡೆಗೆ ಹೊರಳಿಸಲು ಪ್ರಯತ್ನಿಸಿದಳು.
ಹೊಸ ಆಟಿಕೆ ಬಯಸಿ ಮಗು ಬೊಗಸೆಯೊಡ್ಡಿ ಚಾಚಲು ಅವನ ಕೂಡಿದ ಅಂಗೈ ಬೆರಳುಗಳು ಆಗಷ್ಟೇ ಅರಳುತ್ತಿರುವ ಕಮಲದಂತೆ ಕಂಡವು. ಅರುಣೋದಯದಿ ಅದೇ ಅರಳುವ ಕಮಲದ ದಳಗಳ ಮೇಲ್ಭಾಗ ಮಾತ್ರ ಅರಳಿದಂತೆ ಮಗುವಿನ ಸುಂದರ ಬೆರಳುಗಳು ಅವನ ಸ್ಥೈರ್ಯದ ಸಂಕೇತ ಎನಿಸಿದವು ದುಷ್ಯಂತನಿಗೆ.
ಉಪಮಾ ಕಾಲಿದಾಸಸ್ಯ ಎಂಬುದು ಹೆಜ್ಜೆ ಹೆಜ್ಜೆಗೂ ಅನುಭವಕ್ಕೆ ಬರುವದಲ್ಲವೇ!
ಈ ಬಾಲಕನಿಂದ ಮಹಾರಾಜ ಪೂರ್ಣವಾಗಿ ಆಕರ್ಷಿತಗೊಂಡಿದ್ದಾನೆ.
” ಆಲಕ್ಷ್ಯ ದಂತ ಮುಕುಲಾನನಿಮಿತ್ತ ಹಾಸೈ:,
ಅವ್ಯಕ್ತ ವರ್ಣರಮಣೀಯ
ವಚ: ಪ್ರವೃತ್ತೀನ್.
ಅಂಕಾಶ್ರಯಪ್ರಣಯಿನ:
ತನಯಾನ್ ವಹಂತ:
ಧನ್ಯಾ: ತದಂಗ ರಜಸಾ
ಮಲಿನೀ ಭವಂತಿ“.
ಆ ಬಾಲಕನಲ್ಲಿ ದುಷ್ಯಂತನಿಗೆ ಪ್ರೀತಿ ಉಕ್ಕುತ್ತದೆ.
” ಇಂಥ ಪುಟ್ಟ ಮಕ್ಕಳನ್ನು ತೊಡೆಯ ಮೇಲೆ ಏರಿಸಿ ಕುಳ್ಳಿರಿಸಿಕೊಂಡು ಆನಂದ ಪಡುವ ತಂದೆ ತಾಯಿಗಳೇ ಧನ್ಯರು. ಮಗು, ಮುಗ್ಧ ನಗೆ ನಕ್ಕಾಗ, ಎಳೆಯ ಮೊಗ್ಗುಗಳಂತೆ ಹಲ್ಲುಗಳು ಹೊಳೆಯುತ್ತಿವೆ.
ಮಗುವಿನ ಮೈಗೆ ಅಂಟಿದ ಧೂಳು ತಂದೆಯ ಮೈಯನ್ನು ಮಲಿನಗೊಳಿಸಿದರೂ ಅದೊಂದು ಸೌಭಾಗ್ಯವೇ. ಈ ತಂದೆ ಧನ್ಯನು”
ಎಂದು ಸುಖದಲ್ಲಿ ವಿಹರಿಸುತ್ತಾ ಇರುವನು ದುಷ್ಯಂತನು.
ಎಷ್ಷು ಸುಂದರ ಕಲ್ಪನೆ !
ಮಗುವಿನ ಪ್ರೀತಿಗಾಗಿ ಪರಿತಪಿಸುತ್ತಿದೆ, ಹಾತೊರೆಯುತ್ತಿದೆ ತಂದೆಯ ಹೃದಯ.
ಈ ಪ್ರಭಾವೀ ಬಾಲಕ ಯಾರು ಎನ್ನುವ ಕುತೂಹಲ ದುಷ್ಯಂತನಿಗೂ, ನಮಗೂ !
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ