- ಸುಳ್ಳು ಹೇಳುವ ಕನ್ನಡಿ - ಅಕ್ಟೋಬರ್ 5, 2021
- ಮುಖಾಮುಖಿ - ಮೇ 29, 2021
ಥತ್, ಹೆಮ್ಮೆ ಅಂತೆ ಹೆಮ್ಮೆ! ನೀನು ಬರೆದದ್ದನ್ನು ಓದಿ ಇದು ನೀನೇ ಅಂತ ನನ್ನ ಗಂಡ ಗಮಾರ ಕಾಡಿಸಿ ಕಾಡಿಸಿ ನನ್ನ ಬದುಕನ್ನೇ ಬರಬಾದ್ ಮಾಡಿಟ್ಟಿದ್ದಾನೆ, ಇವಳು ಹೆಮ್ಮೆ ಪಡು ಅಂತಾಳೆ!” ಉರಿದು ಬಿದ್ದಳು ದೇವಯಾನಿ.
ನೀತಾ ರಾವ್ ಅವರ ಈ ಕಥೆಯಿಂದ…..
ಯಾಕೋ ಈಗೊಂದು ತಿಂಗಳಿನಿಂದ ಏನನ್ನೂ ಬರೆಯಲಿಕ್ಕಾಗದೇ ಒದ್ದಾಡುತ್ತಿದ್ದೆ. ಛೇ ನನ್ನ ಭಂಡಾರದಲ್ಲಿದ್ದ ಹೊನ್ನುಗಳೆಲ್ಲ ಖಾಲಿಯಾಗಿ ಹೋದುವೇ? ಹೋಗಲಿ ಈಗಾಗಲೇ ಬೇರೆ ಬೇರೆ ಡೈರಿಗಳು, ನೋಟಬುಕ್ಕಿನಲ್ಲಿ ಬರೆದು ಇಟ್ಟಿರುವ ಕಥೆಗಳನ್ನೆಲ್ಲ ಒಟ್ಟು ಸೇರಿಸಿ ಟೈಪ್ ಮಾಡಿಟ್ಟುಕೊಂಡರೂ ಆದೀತು, ಒಂದು ಹದಿನೈದು-ಹದಿನಾರು ಕಥೆಗಳಾದಾವು. ಅವುಗಳಲ್ಲಿ ನಾಲ್ಕೈದು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದವುಗಳೇ. ಇನ್ನುಳಿದ ನಾಲ್ಕೈದನ್ನೂ ಆ ಈ ಪತ್ರಿಕೆಗೆ ಕಳಿಸಿದ್ದೂ ಆಗಿದೆ. ಆದರೆ ಹೂಂ, ಊಹೂಂ, ಎರಡೂ ಇಲ್ಲದೇ ಅವೆಲ್ಲ ಯಾವ ತ್ರಿಶಂಕು ಸ್ವರ್ಗದಲ್ಲಿ ಜೊತಾಡುತ್ತಿವೆಯೋ ತಿಳಿಯದು. ಎಲ್ಲ ಕಥೆಗಳನ್ನು ಒಂದುಗೂಡಿಸಿ ನೀಟಾಗಿ ಟೈಪಿಸಿ ಕೊಟ್ಟರೆ ಯಾವುದಾದರೂ ಪ್ರಕಾಶಕ ಮಹಾಶಯರು ಪ್ರಕಟಿಸುವ ಕೃಪೆ ಮತ್ತು ಧೈರ್ಯ ಮಾಡಬಹುದೋ ಏನೋ ಎಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಾದರೂ ಆದೀತು. ಟೇಬಲ್ ಮೇಲಿನ ದೀಪ ಬೆಳಗಿಸಿ ಎಲ್ಲ ಸಾಮಗ್ರಿಗಳನ್ನು ಅಣಿಗೊಳಿಸಿ ಕುರ್ಚಿಗೆ ಬೆನ್ನು ಅಂಟಿಸಿದೆ.
ಇದು ಯಾವ ಕಥೆ? ಓ ಇದು ನನ್ನ ಕಾಲೇಜಿನ ಪುರಾಣವಿದು. ಕಾಲೇಜಿನ ನೆನಪಿನಿಂದ ತುಟಿಯ ಮೇಲೊಂದು ಹೂನಗೆ ಅರಳಿತು. ಇನ್ನೊಮ್ಮೆ ಓದಿಯೇ ಬಿಡೋಣ ಅನಿಸಿತು. ಹೀಗೆ ನಾನು ಬರೆದ ಕಥೆಗಳನ್ನು ನಾನೇ ಮತ್ತೆ ಮತ್ತೆ ಓದಿ ಮೋಹಗೊಳ್ಳುವ ವಿಚಿತ್ರ ಪರಿ ನನ್ನಲ್ಲಿದೆ. ಓದಲು ತೊಡಗಿದಂತೆ ಕಾಲೇಜಿನ ಕಲ್ಲಿನ ಕಟ್ಟಡಗಳ ಕಾರಿಡಾರುಗಳು ಯೌವನದ ಕಲರವದಿಂದ ತುಂಬಿಹೋದವು. ಹುಡುಗರು ಒಂದು ಕಾಲನ್ನೆತ್ತಿ ಗೋಡೆಗೆ ಆನಿಸಿ ಇನ್ನೊಂದೇ ಕಾಲಿನ ಮೇಲೆ ಬಕಪಕ್ಷಿಯಂತೆ ನಿಂತು ಹುಡುಗಿಯರ ಆಗಮನಕ್ಕಾಗಿ ಕಾಯುತ್ತ ಧ್ಯಾನಮಗ್ನರಾಗಿದ್ದರು. ಅದೋ ಆಕಡೆಯಿಂದ ಈಗಷ್ಟೇ ಕ್ಯಾಂಟೀನಿನಲ್ಲಿ ಪುರಿ-ಭಾಜಿ ತಿಂದು ಇನ್ನೂ ಅದರ ರುಚಿಯನ್ನೇ ಮೆಲಕು ಹಾಕುತ್ತ ಕನ್ನಿಕೆಯರು ನಗುನಗುತ್ತ ನಡೆದು ಬರುತ್ತಿದ್ದರೆ ಇಲ್ಲಿ ಅವರ ಕ್ಲಾಸಿನ ಹೀರೋ “ಅಬ್” ಅಂತ ತೇಗಿ “ಏನು ರುಚಿಯಾಗಿತ್ತೋ ಪೂರಿ-ಭಾಜಿ!” ಎಂದು ಅವರನ್ನು ಛೇಡಿಸಿದ. ಹುಡುಗಿಯರು ಅದನ್ನು ಕಾಂಪ್ಲಿಮೆಂಟ್ ಎನ್ನುವಂತೆ ಸ್ವೀಕರಿಸಿ ಇನ್ನೊಮ್ಮೆ ನಕ್ಕು ಕ್ಲಾಸಿನ ಒಳಗೆ ತೇಲಿಹೋದರು. ಆಗ ಒಮ್ಮಿಲೇ ಟೇಬಲ್ಲಿನ ಮೇಲೆ ಧಡ್ ಅಂತ ಶಬ್ದವಾಗಿ ನಾನು ಬೆಚ್ಚಿ ಬಿದ್ದೆ.
ಇಂಥ ನೀರವ ರಾತ್ರಿಯಲ್ಲಿ ಮನೆಯಲ್ಲಿ ಯಾರೆಂದರೆ ಯಾರೂ ಇರದ ಈ ಹೊತ್ತಿನಲ್ಲಿ ಇದೇನು ಶಬ್ದ? ಹೆದರಿಕೆಯಿಂದ ತಲೆ ಎತ್ತಿ ನೋಡಿದರೆ ಅಲ್ಲಿ ಟೇಬಲ್ ಮೇಲೆಯೇ ದೇವಯಾನಿ ಕುಳಿತಿದ್ದಾಳೆ. ಅವಳ ಕಣ್ಣಲ್ಲಿ ಕಾಳ್ಗಿಚ್ಚು, ಮೂಗಿನ ಚೂಪು ತುದಿಯಲ್ಲಿ ಕೋಪ ಧಗಧಗನೇ ಉರಿಯುತ್ತಿದೆ. “ಅರೇ ದೇವಯಾನಿ, ಇದೇನು ಈ ಅಪರಾತ್ರಿಯಲ್ಲಿ ನೀನಿಲ್ಲಿ? ಅಚಾನಕ್ಕಾಗಿ ನಮ್ಮ ಮನೆಗೆ?” ಎಂದೆ. ಸ್ವಲ್ಪ ಹೆದರಿಕೆಯಾದರೂ ತೋರಿಸಿಕೊಳ್ಳಬಾರದೆಂದು ಕ್ಯಾಷುವಲ್ಲಾಗಿ ಇರುವಂತೆ ನಕ್ಕೆ. “ಅಚಾನಕ್ಕಾಗಿ ಏನೂ ಅಲ್ಲ. ಬಹಳ ದಿನಗಳಿಂದ ಬರಬೇಕು ಅಂದ್ಕೊಂಡಿದ್ದೆ, ನನ್ನ ಮನೆಯ ಜಂಜಡಗಳಲ್ಲಿ ನನಗೇ ಆಗಿರಲಿಲ್ಲ ಅಷ್ಟೇ”, ಚೂಪುಚೂಪಾಗಿ ಮಾತನಾಡಿದಳು. “ಏನು ನಿನಗೇನೋ ಒಂದಿಷ್ಟು ಬರೆಯಲು ಬರುತ್ತದೆಂದು ನನ್ನದೇ ಕಥೆ ಮಾಡಿ ಹೆಣೆದುಬಿಟ್ಟೆಯಾ? ಇವಳೇನು ಈಗ ಬಂದು ಕೇಳುವುದು ಅಷ್ಟರಲ್ಲೇ ಇದೆ ಅಂತ” ನನಗೋ ತಬ್ಬಿಬ್ಬು.
“ಛೇ ಹಾಗೇನೂ ಇಲ್ಲಪ್ಪಾ. ನನ್ನ ಕಥೆಗಳಲ್ಲಿ ಬರುವ ಪಾತ್ರಗಳೆಲ್ಲ ಕಾಲ್ಪನಿಕವಾದವು. ಅವು ಜೀವಂತವಿರುವ ಯಾರೆಂದರೆ ಯಾರನ್ನೂ ಹೋಲುವುದಿಲ್ಲ”.
“ಛೀ ಸುಳ್ಳಿ, ಕತೆಗಾರರೆಂದ್ರೆ ಮಹಾಸುಳ್ಳರು, ಮಹಾಕಳ್ಳರು! ನೀನೂ ಈಗ ಅವರ ಜಾತಿಗೇ ಸೇರಿಬಿಟ್ಟಿದ್ದೀಯಾ. ಈಗಷ್ಟೇ ನೀನು ಓದುತ್ತಿದ್ದ ಕಥೆಯಲ್ಲಿನ ಪಾತ್ರವನ್ನು ನನ್ನನ್ನು ನೋಡಿಯೇ ಸೃಷ್ಟಿಸಿದ್ದಲ್ಲವೇ? ಹೇಳು ನಿನಗ್ಯಾರು ಹಕ್ಕು ಕೊಟ್ಟವರು ನಿನ್ನ ಕಥೆಗಳಿಗೆ ನನ್ನನ್ನು ಒಯ್ದು ಪಾತ್ರವಾಗಿಸಲು?”, ಅವಳು ಪಟ್ಟು ಬಿಡುವ ಹಾಗೆ ಕಾಣಲಿಲ್ಲ. ” ನೋಡು ದೇವಿ ಎಂದೋ ಜರುಗಿದ, ಇನ್ನೆಂದೋ ನೋಡಿದ ಘಟನೆಗಳು ಮನಸ್ಸಿನ ಮೇಲ್ಪದರದಲ್ಲಿ ಮರೆತುಹೋದಂತಿರುತ್ತವೆ, ಆದರೆ ಸೂಪ್ತ ಮನದೊಳಗೆ ಸುಳಿಯುತ್ತಿರುತ್ತವೇನೋ! ಇನ್ನೆಂದೋ ಏನೋ ಬರೆಯುವಾಗ ಥಟ್ಟನೇ ಬೇರೆನೇ ಮೇಕ-ಅಪ್ ಹಾಕ್ಕೋಂಡು, ಹೊಸ ಕಾಸ್ಟ್ಯೂಮ್ ಧರಿಸಿ ಕ್ಯಾಟ್-ವಾಕ್ ಮಾಡಲು ಪ್ರಾರಂಭಿಸಿಬಿಡುತ್ತವೆ. ಯಾವ ಘಟನೆಗಳು, ಯಾವ ಮನುಷ್ಯರು ವಿನ್ ಆಗ್ತಾರೋ ಅವರು ಕತೆಗಳಲ್ಲಿ ಸೇರಿಹೋಗ್ತಾರೆ ಅಷ್ಟೇ. ಅದೆಲ್ಲಾ ಪ್ರಜ್ಞಾಪೂರ್ವಕವಾಗಿ ಮಾಡುವುದಲ್ಲ. ದೇವಿ ಇಷ್ಟಕ್ಕೂ ನನ್ನ ಕತೆಯೊಂದರ ಪಾತ್ರವಾಗುವಷ್ಟು ಗಟ್ಟಿಯಾದ ವ್ಯಕ್ತಿತ್ವ ನಿನ್ನದು ಎನ್ನುವುದಕ್ಕೇ ನೀನು ಹೆಮ್ಮೆ ಪಡಬೇಕು”, ಸ್ವಲ್ಪ ಲೇಖಕಿಯ ಗತ್ತು, ಗೆಳತಿಯ ಸಲಿಗೆ ಎರಡನ್ನೂ ಬೆರಿಸಿ ಹೇಳಿದೆ.
“ಥತ್, ಹೆಮ್ಮೆ ಅಂತೆ ಹೆಮ್ಮೆ! ನೀನು ಬರೆದದ್ದನ್ನು ಓದಿ ಇದು ನೀನೇ ಅಂತ ನನ್ನ ಗಂಡ ಗಮಾರ ಕಾಡಿಸಿ ಕಾಡಿಸಿ ನನ್ನ ಬದುಕನ್ನೇ ಬರಬಾದ್ ಮಾಡಿಟ್ಟಿದ್ದಾನೆ, ಇವಳು ಹೆಮ್ಮೆ ಪಡು ಅಂತಾಳೆ!” ಉರಿದು ಬಿದ್ದಳು ದೇವಯಾನಿ. ಬರೆದ ಕಥೆ ಈಗಾಗಲೇ ಪ್ರಕಟವಾಗಿ ಹೋಗಿದೆ, ಸಾವಿರಾರು ಜನ ಓದಿರುತ್ತಾರೆ, ನಾನೀಗ ಏನೂ ಮಾಡಲಾರದವಳಾಗಿದ್ದೆ. ಸುಮ್ಮನೆ ಅವಳೆಡೆಗೆ ನೋಡಿದೆ.
“ನನ್ನ ಗಂಡನೆಂಬೋ ಪ್ರಾಣಿ ಇನ್ನು ಅದನ್ನು ಮರೆಯೋತನಕ ನನ್ನ ನರಕಯಾತನೆ ಯಾರಿಗೂ ಬೇಡ ಹಾಗಾಗಿದೆ. ಇನ್ನೊಬ್ಬರ ಜೀವನದ ಭೂತಕಾಲವನ್ನು ಅಗೆದು ತೆಗೆಯಲು ನೀನೇನು ಪ್ರಾಚ್ಯವಸ್ತು ಇಲಾಖೆಯ ಅಧಿಕೃತ ಅಧಿಕಾರಿಯೇ? ಅಥವಾ ನಾನೇನು ಉತ್ಖನನಗೊಳ್ಳಲೆಂದು ಹೂತುಹೋಗಿರುವ ಪ್ರಾಚೀನ ಪರಂಪರೆಯೋ?” “ಅವನು ನನ್ನ ಗತಜೀವನವನ್ನು ನನ್ನ ಮೊಬೈಲಿನಲ್ಲಿ ಹುಡುಕುತ್ತಿದ್ದಾನೆ ಬಡ್ಡೀಮಗ! ನಾನೇನು ಲಾಕ್ ಮಾಡದೇ ಇವನ ಮುಂದೆ ಮೊಬೈಲ್ ಒಗೆಯುವಷ್ಟು ಮೂರ್ಖಳೇ? ಎಂದೆಂದೂ ಬರದಿದ್ದವನು ಈ ಸಲದ ದೀಪಾವಳಿಗೆ ನಮ್ಮ ಊರಿಗೆ ಬಂದ, ನನಗೆ ಗೊತ್ತಿಲ್ಲದಂತೆ ನನ್ನ ರೂಮಿನ ಕಪಾಟುಗಳನ್ನೆಲ್ಲ ಕಿತ್ತಿಹಾಕಿದ.
ಎಲ್ಲಾದರೂ ಹಳೆಯ ಲವ್ ಲೆಟರು, ಗ್ರೀಟಿಂಗ್ ಕಾರ್ಡು ಸಿಗಬಹುದೇನೋ ಅಂತ, ದುರಾಸೆಯ ರಾಕ್ಷಸ! ನಿನ್ನ ಊರಲ್ಲಿ ಹಳೆಯ ಫ್ರೆಂಡ್ ಯಾರೂ ಇಲ್ಲವೇ ಎಂದು ಕೇಳುತ್ತಿದ್ದ.”
“ಅವನಿಗೂ ನಿನ್ನಂತೆಯೇ ಈಗ ಸ್ವಂತ ಸಂಸಾರದ ಉತ್ಖನನ ನಡೆಸಿ ಸತ್ತ ಶವಗಳ ತಲೆಬುರುಡೆ, ಮೂಳೆಗಳನ್ನು ಹೆಕ್ಕಿ ತೆಗೆಯುವ ಹುಕಿ ಬಂದಿದೆ. ಹಳೆಯ ಪ್ರೇಮಸೌಧಗಳ ಮುರಿದ ಗೋಡೆಗಳಿಗೆ ನನ್ನ ಭವಿಷ್ಯವನ್ನು ನೇತುಹಾಕಿ ಮೊಳೆ ಹೊಡೆಯುವ ಕ್ರೂರ ತಂತ್ರ.”
“ನಾನು ಹಾಗೆಲ್ಲ ಹಳೆಯ ಇಮಾರತುಗಳನ್ನು ಅರ್ಧರ್ಧ ಮುರಿದು ಉಳಿಸಿಬಿಡುವವಳಲ್ಲ ಅಂತ ಗೊತ್ತಿಲ್ಲ ಅವನಿಗೆ. ಬುನಾದಿಯ ವರೆಗೆ ಕೈಹಾಕಿ ಎಲ್ಲವನ್ನೂ ಕೆಡವಿದವಳು ನಾನು. ನೆಲಸಮ ಅಂದ್ರೆ ನೆಲಸಮ”, ದೇವಯಾನಿ ದೀರ್ಘವಾಗಿ ಮಾತನಾಡಿ ಗಹಗಹಿಸಿ ನಕ್ಕಳು. ಅವಳ ಶಬ್ದಕ್ಕೆ, ಕುಳಿತಿದ್ದ ಕೋಣೆಯ ಗೋಡೆಗಳು ಗಡಗಡಿಸಿದಂತಾಗಿ, ಅಡಿಯ ನೆಲವೆಲ್ಲ ಅದುರಿದಂತಾಗಿ ನಾನು ಕಂಗೆಟ್ಟೆ. “ಇಷ್ಟು ವಯಸ್ಸಾದ ನಂತರವೂ ಮುಂಚಿನಂತೆಯೇ ಹೆದರಿ ಸಾಯಬೇಡ, ಧೈರ್ಯದಿಂದ ಬದುಕಿ ತೋರಿಸು, ಬರಿ ಬರೆದುಬಿಟ್ಟರೆ ಆಯ್ತೇ?” ಮತ್ತಷ್ಟು ಜೋರು ಮಾಡಿ ದೇವಯಾನಿ ತೆರೆದ ಕಿಟಕಿಯ ಮೂಲಕ ತೂರಿಹೋಗಿಬಿಟ್ಟಳು. ರಾಜಾ ವಿಕ್ರಮನ ಹೆಗಲಿಂದ ಸುಯ್ಯಂತ ಜಾರಿ ಭೇತಾಳವು ಮತ್ತೆ ಸ್ಮಶಾನದ ಕಡೆಗೆ ಹಾರಿಹೋದಂತನಿಸಿ ನೋಡುತ್ತಲೇ ಉಳಿದುಬಿಟ್ಟೆ.
ಆಗ ಒಳಬಂದ ಕುಂಟುತ್ತ ಕುಂಟುತ್ತ ರಂಗಣ್ಣ. ಅಯ್ಯೋ ಅವಳು ಹೋದಳೆಂದರೆ ಇವನೇಕೆ ಬಂದ ಈ ಕಾಳರಾತ್ರಿಯಲಿ ಎಂದುಕೊಳ್ಳುವಷ್ಟರಲ್ಲೇ ಎದುರಿಗಿದ್ದ ಕುರ್ಚಿಯನ್ನು ಶಬ್ದ ಮಾಡುತ್ತ ಎಳೆದು ಕುಳಿತುಕೊಂಡು ಕಾಲು ನೀವಿಕೊಳ್ಳತೊಡಗಿದ. “ರಂಗಣ್ಣಾ ಇದೇನು ಇಷ್ಟೊತ್ತಿನಲ್ಲಿ?” ಎಂದು ಪ್ರಶ್ನಾರ್ಥಕವಾದೆ. “ಅಯ್ಯ ತಂಗಿ ಬರಬೇಕಾತು, ಇಲ್ಲಾಂದ್ರ ನೀ ಇನ್ನೊಂದು ಕಥಿ ಬರ್ದು ಅದನ್ನ ಓದಾವ್ರೆಲ್ಲಾ ಓದಿ, ಅದನ್ನ ಖರೆ ಅಂತ ನಂಬಿ…….” ಎಂದು ನನ್ನ ಕಡೆಗೆ ಸಿಟ್ಟಿನಿಂದ ನೋಡಿದ. ಏನು ಹೇಳಲಿ ನಾನು, “…………”
“ಅಲ್ಲಾ ಇಂಥಾ ದೊಡ್ಡ ದೇಶದಾಗ ಕಥಿ ಬರೀಲಿಕ್ಕೆ ಮತ್ಯಾರ ಸಿಗಲಿಲ್ಲೇನವಾ ನಿನಗ? ನನಗಿರೋ ಸಣ್ಣ ಪಗಾರದಾಗ ಮೂರು ಹೆಣ್ಣಮಕ್ಕಳ ವಿದ್ಯಾಭ್ಯಾಸ, ಮದವಿ ಅಂತ ಸೋತು ಸುಣ್ಣಾಗೇನಿ. ನನ್ನ ಹೆಂಡ್ತಿ ಬ್ಯಾರೆ ನಿತ್ಯರೋಗಿ. ಅಕಿ ಔಷಧ-ಪಾಣಿ ಅಂತ ತಿಂಗಳಾ ಒಂದು ಸಾವಿರ ತಗದಿಡಬೇಕು. ಅಂಥಾದ್ದರಾಗ ನಮ್ಮಣ್ಣ ಬಂದು ಅಮ್ಮನ್ನೂ ನೀನs ನೋಡಕೋ, ನಮಗ ಮಗಳ ಬಾಳಂತನಕ್ಕ ಅಮೇರಿಕಾಕ್ಕ ಹೋಗಬೇಕಾಗೇದ ಅಂತ ಒಮ್ಮೆ ತಂದ ಬಿಟ್ಟಹೋದಾಂವ ಮೂರು ವರ್ಷಾದ್ರೂ ಈಗ ಕರಕೊಂಡಹೋಗಲಿಕ್ಕೆ ಆಗಂಗಿಲ್ಲಾ, ಆಗ ಆಗಂಗಿಲ್ಲಾ ಅಂತ ಹೇಳ್ಲಿಕತ್ತಾನ, ಪ್ರತೀಸಲಾ ಒಂದಿಲ್ಲಾ ಒಂದು ನೆವಾ ಇರ್‍ತದ ಅವಂಗ. ಈಕಡೆ ದಿನಾಲೂ ಒಂದಿಲ್ಲಾ ಒಂದು ಕಾರಣಕ್ಕ ಜಗಳಾ ತಗದು ಅತ್ತು ರಂಪಾಟ ಮಾಡೋ ಅಮ್ಮನ್ನ ಸಂಭಾಳಸೋದು ಎಷ್ಟ ಕಷ್ಟದ ಅಂತ ನಿಂಗೇನು ಗೊತ್ತು? ವಯಸ್ಸಾದವ್ರ ಕಥಿ ಬರದ್ರ ಲಗೂನ ಪ್ರಕಟ ಆಗ್ತಾವ, ಜನಪ್ರೀಯನೂ ಅಗ್ತಾವ ಅಂತ ಹೇಳಿ ಬರದಬಿಡ್ತೀರಿ. ಮಂದಿ ಅನುಕಂಪನೂ ವಯಸ್ಸಾದವ್ರ ಕಡೆನs ಹರಿತದ ಹೊರತು ಇಟಗೊಂಡು ಸೇವಾ ಮಾಡೋ ಮಕ್ಕಳು, ಸೊಸಿ ಮ್ಯಾಲೆ ಉಕ್ಕಂಗಿಲ್ಲ. ಅದೆಲ್ಲಾ ನಿನ್ನಂಥಾ ಕಥಿ ಬರಿಯಾವ್ರಿಗೆ ಛೊಲೋ ಗೊತ್ತಿರ್ತದ. ಅದಕ್ಕ ಹಿರೇರ್ನ ಅಸಹಾಯಕಂತ ತೋರಿಸಿ ಅವರ ಮಕ್ಕಳನ್ನ ಖಳನಾಯಕರನ್ನಾಗಿ ಮಾಡಿ ಒಳ್ಳೆ ಫ್ಯಾಮಿಲಿ ಡ್ರಾಮಾ ಬರದು ಫೇಮಸ್ ಆಗಬೇಕಂತ ಹೋಗ್ತೀರಿ. ಹದ್ದುಗಳು ಸತ್ತ ಪ್ರಾಣಿಗಳನ್ನ ಹುಡುಕೋಹಂಗ ನಿನ್ನ ಮನಸ್ಸು ಸದಾ ಜನ್ರ ನಡುವ ನಿನ್ನ ಕಥಿಗೆ ಪಾತ್ರಗಳನ್ನ ಹುಡಕತಿರ್ತದ. ಎಕ್ಷರೇ ಕಿರಣಗಳು ಮಂದಿ ದೇಹದೊಳಗ ಹೊಕ್ಕು ಮೂಳೆ-ಮಜ್ಜನದ ಚಿತ್ರಾ ತೆಗಿಯೋಹಂಗ ನೀನು ಮಂದಿ ಮನಸ್ಸಿನೊಳಗ ನುಸುಳಿ ಅವರ ವಿಚಾರ ತಿಳಕೊಂಡು ನಿನಗೇನರೆ ಅಲ್ಲೊಂದು ಕಥಿ ಸಿಗತದೇನಂತ ಯಾವಾಗ್ಲೂ ಪ್ರಯತ್ನ ಮಾಡತಿರ್ತಿ ಅನ್ನೋದು ನನಗ ಗೊತ್ತದ. ಆದರ ನನ್ನೊಳಗ ಹೊಕ್ಕು ಒಂದು ಕಥಿ ಹೆಕ್ಕಿತಗೀತಿ ಅಂತ ಅಂದಕೊಂಡಿರಲಿಲ್ಲ”, ರಂಗಣ್ಣನ ದೂರು ಬಹಳ ದೊಡ್ಡದಾಗಿತ್ತು.
ರಂಗಣ್ಣನೆಂಬೋ ಈ ದೂರದ ಸಂಬಂಧಿ ಹೀಗೆ ಒಮ್ಮಿಲೇ ನನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆಗೆ ಗುರಿ ಮಾಡಬಹುದೆಂಬ ಸಣ್ಣ ಸುಳಿವೂ ಇಲ್ಲದ ನಾನು ಏನೇನೂ ತಯಾರಿಯಿಲ್ಲದೇ ಅವನ ಮುಂದೆ ನಿಂತಿದ್ದೇನೆ. ಆದರೂ ಫಕ್ಕನೇ ಹೊಳೆದ, ಈಗಷ್ಟೇ ದೇವಯಾನಿಗೂ ಕೊಟ್ಟ ಕೆಲ ಸಮಝಾಯಿಶಿಗಳನ್ನು ನೆನಪು ಮಾಡಿಕೊಳ್ಳುತ್ತ ಹೇಳಿದೆ..” ರಂಗಣ್ಣಾ, ನಾನೇನೂ ನಿನ್ನ ಕಥೆ ಅಂತ ಯಾವುದೂ ಬರೆದಿಲ್ಲ, ಎಲ್ಲೋ ಯಾವುದೋ ಪಾತ್ರದಲ್ಲಿ ನಿನಗ ನಿನ್ನ ಹೋಲಿಕೆ ಕಂಡಿರಬೇಕು ಅಷ್ಟೇ. ನಾವು ಯಾವಾಗಲೋ ನೋಡಿರುವ, ಕೇಳಿರುವ ಸಂಗತಿಗಳ ನೆಗೆಟಿವಗಳು ಮನದೊಳಗ ಉಳಿದುಹೋಗಿರ್ತಾವೇನೋ, ಇಲ್ಲಂತ ಅಲ್ಲ. ಮುಂದೆಂದೋ ಕಥೀ ಬರೀಲಿಕ್ಕೆ ಕೂತಾಗ ಅವಕ್ಕ ಜೀವ ಬಂದಬಿಡ್ತದ. ಒಂದು ವಾಸ್ತವಕ್ಕ ಹತ್ತು ಕಲ್ಪನೆಗಳು ಗರಿಕಟ್ಟತಾವ. ಹಾಗಾಗಿ ಮೂಲಪ್ರೇರಣೆಗಿಂತ ಪಾತ್ರವು ಸಾಕಷ್ಟು ಭಿನ್ನವಾಗಿಯೇ ಮೂಡಿಬರ್ತದ. ಎಷ್ಟೆಂದರೆ ಅದು ನೀನು ಅಂತ ಗುರುತಿಸಲಾರದಷ್ಟು” ಎಂದೆ.
ರಂಗಣ್ಣ ಅಸಮ್ಮತಿಯಿಂದ ತಲೆಯನ್ನು ಅಡ್ಡಡ್ಡ ತಿರುಗಿಸುತ್ತ, “ಇರಭೌದು, ಇರಭೌದು. ಆದ್ರ ನಾ ಹೇಳೊ ಕಥಿಯೊಳಗ ನೀ ಹೆಚ್ಚೂ ಕಡಮಿ ನನ್ನಂಥಾ ಪಾತ್ರನ ಸೃಷ್ಟಿ ಮಾಡಿ, ಅದನ್ನ ಒಪ್ಪಿಕೋ. ಆದ್ರ ನೀ ಬರದೀಯಲ್ಲ, ಅಷ್ಟ ಕೆಟ್ಟ ರೀತಿಯಿಂದ ನಾಯೇನು ನಮ್ಮಮ್ಮನ್ನ ನೋಡಿಕೋಂಡಿರಲಿಲ್ಲ. ಅಕಿನ್ನ ಯಾವತ್ತೂ ಗೋಳುಹೊಯ್ದಕೊಂಡಿಲ್ಲ, ತಿಳಕೋ. ಆದ್ರ ನಿನ್ನ ಕಥಿ ಓದಿ ನಮ್ಮಮ್ಮ ಅಂದ್ರ ನಿನ್ನ ಹಿರೇ ಅಜ್ಜಿ, ಎಷ್ಟ ಛಂದ ಬರದಾಳ ನೋಡು, ನಮ್ಮ ನೋವೆಲ್ಲಾ ತಾನ ಅನುಭವಿಸಿಧಂಗ, ಅಂತ ಇಡೀ ದಿನ ಅದನ್ನs ಮಾತಾಡಿದ್ಲು. ವಯಸ್ಸಾದವ್ರ ಕಷ್ಟ ಮಕ್ಕಳಿಗೆಲ್ಲೆ ಗೊತ್ತಾಗ್ತದ ಅಂತ ಬ್ಯಾರೆ ನಮಗ ಟಾಂಟ್ ಒಕ್ಕೋತ ಕೂತ್ಲು”. “ಅಲ್ಲಾ, ಅವಳು ಅಷ್ಟು ಧಡಧಡೀತ ಜೀವಂತ ಇರುವಾಗ್ಲೇ ಅನುಭವಿಸಿ ಅನುಭವಿಸಿ ಕೊನೆ ಉಸಿರೆಳೆದಳು ಅಂತ ಬರದೀಯಲ್ಲಾ, ಹಂಗೆಲ್ಲಾ ಸುಳ್ಳು, ಸುಡಗಾಡು ಬರಿಯೂವಾಗ ಸ್ವಲ್ಪನೂ ಬ್ಯಾಸರ ಅನಸಲಿಲ್ಲಾ ನಿನಗ?” “ಅದು ಕಥೆ ರಂಗಣ್ಣಾ, ನಿಜವಾಗಿ ನಡೆದ ಘಟನೆಯ ವರದಿಯಲ್ಲ, ಸ್ವಲ್ಪ ಅರ್ಥ ಮಾಡ್ಕೋ”, ನಾನು ಅಂಗಲಾಚಿದೆ. “ಆತು ರಂಗಣ್ಣಾ, ತಿಳಿದೆನೇ ನನ್ನಿಂದ ತಪ್ಪಾಯ್ತು ಅಂದುಕೋ. ಇನ್ಮೇಲೆ ನಾನು ವೃದ್ಧರ ಕಥೆಗಳನ್ನ ಬರೆಯೋದ ಇಲ್ಲ ಆತೂ?” ಎಂದು ಮುಗಿಸಲು ನೋಡಿದೆ. ನನಗೂ ಸಾಕಾಗಿತ್ತು. ರಂಗಣ್ಣ ಸ್ವಲ್ಪ ಅನುಮಾನದಿಂದಲೇ ನೋಡುತ್ತ ಕಣ್ಣಲ್ಲೇ ಒಂದು ಎಚ್ಚರಿಕೆಯನ್ನೂ ಕೊಟ್ಟು ಹಾರಿಹೋದ, ದೇವಯಾನಿ ಹೊರಟ ಕಿಟಕಿಯಿಂದಲೇ.
ಒಮ್ಮಿಲೇ ಹೊರಗಿನಿಂದ ತಂಗಾಳಿಯು ಬೀಸಿ ಬಂದು ಘಮ್ಮೆಂದ ಘಮದಲ್ಲಿ ಮೈಮರೆತು ಕಣ್ಮುಚ್ಚಿದೆ. ಓಹ್! ಎಂಥ ಮಧುರ ಸುವಾಸನೆ ಕೋಣೆಯ ತುಂಬೆಲ್ಲ ಹರಡುತ್ತಿದೆ. ಚಂದ್ರನ ಶೀತಲ ಕಿರಣಗಳು ಇಡೀ ಕೋಣೆಯ ಒಳಗೆ ಮುತ್ತಿನ ಹೊಳಪನ್ನು ತುಂಬುತ್ತಿವೆ. ಅವನು ಬಂದನೇ? ಇಂದ್ರೀಯಗಳೆಲ್ಲವೂ ಉದ್ದೀಪನಗೊಂಡು ಮುಚ್ಚಿದ ಕಂಗಳನ್ನು ತೆರೆಯಲಿಚ್ಛಿಸದೇ ಕುಳಿತವಳ ಕಣ್ಣೊಳಗಿಂದ ಹೂವ ಏಣಿಯ ಹಾಕಿ ಒಂದೊಂದೇ ಮೆಟ್ಟಿಲನ್ನು ಇಳಿದ ಅವನು. ನೋಡಿ ನಸುನಕ್ಕು ’ಬಂದೆಯಾ, ಮುಂದೇನು?’ ಎನ್ನುವಂತೆ ಹುಬ್ಬೇರಿಸಿ ನಕ್ಕೆ ನಾನು.
“ನಿನ್ನ ಆ ಕಥೆಯಲ್ಲಿ ಬಂದ ಅವನು ಎಂದರೆ ನಾನೇ ಅಲ್ಲವೇ?” ಎಂದ. “ಊಹೂಂ ಇಲ್ಲಪ್ಪ, ಅವನೇ ಬೇರೆ, ನೀನೇ ಬೇರೆ” ನಾನೂ ಸ್ವಲ್ಪ ವಯ್ಯಾರ ಮಾಡಿದೆ. “ಬೇರೆ ಎಂದು ನೀನು ಹೇಳಿಬಿಟ್ಟರೆ? ನನಗೆ ತಿಳಿಯುವುದಿಲ್ಲವೇ ಅವನು ನಾನೇ ಎಂದು? ಹೋಗಲಿ ನಿನಗೆ ನನ್ನ ಮೇಲೆ ಅಷ್ಟೆಲ್ಲ ಪ್ರೀತಿ ಇತ್ತೆಂದು ಮೊದಲೇ ಹೇಳಬಾರದಿತ್ತೇ?” ಅವನೂ ರೋಪು ಹಾಕಿದ. ನನಗೂ ಅವನನ್ನು ನೋಡಿ ಸರಸದ ಮೂಡು ಬಂದುಬಿಟ್ಟಿತ್ತು. “ಓ, ಹೇಳಿಬಿಟ್ಟಿದ್ರೆ ಸಾಹೇಬ್ರು ಸ್ವಯಂವರದಲ್ಲಿ ನನ್ನ ಗೆದ್ದು ಕನ್ಯಾಸೆರೆ ಬಿಡಿಸಿ ನಾಲ್ಕಾರು ಮಕ್ಕಳನ್ನು ಮಡಿಲಿಗೆ ಹಾಕಿಬಿಡ್ತಿದ್ರೇನೋ!” ಎಂದೆ. “ಅಯ್ಯೋ ದೇವ್ರೇ, ನೀನು ಇಷ್ಟೆಲ್ಲಾ ಮಾತಾಡ್ತಿ ಅಂತ್ಲೂ ಗೊತ್ತಿರಲಿಲ್ಲ ನನಗೆ!”
“ಅಯ್ಯೋ ಪಾಪ! ಗೊತ್ತಾಗಿದ್ದಿದ್ರೆ ಜೀವನ ಪೂರ್ತಿ ಮಾತಾಡಕೊಂಡ ಇದ್ದಬಿಡಬಹುದು ಅಂತಾದ್ರೂ ಕಟ್ಕೊತಿದ್ರೇನೋ!” ಅವನು ಅಲೆಅಲೆಯಾಗಿ ನಕ್ಕ. ನಾನು ಧುಮ್ಮಿಕ್ಕಿ ಹರಿದೆ. ಅವನು ದೋಣಿಯಾಗಿ ತೇಲಿದ. ನಾನು ಹುಟ್ಟು ಹಾಕಿದೆ. ದೂರದಲ್ಲಿ ರಾಜಕಪೂರ್, ನರ್ಗಿಸ್ ’ಏ ರಾತ ಭೀಗಿ ಭೀಗಿ ಏ ಮಸ್ತ ಫಿಜಾಯೆಂ’ ಹಾಡು ಹಾಡಿದರು. ಅವನು ಹೊಯ್ದಾಡಿದ. ನಾನು ಆಚೀಚೆ ಕುಲುಕಾಡಿದೆ.
ಒಮ್ಮಿಲೇ ಬಾಗಿಲು ಬಡಿದ ಸದ್ದು. ಹೆದರಿ ಕಣ್ಬಿಟ್ಟೆ. ಹೋಗು ಹೋಗು ಎಂದು ಬೆದರಿದ ಕಣ್ಣಿಂದಲೇ ಅವನಿಗೆ ಸನ್ನೆ ಮಾಡಿದೆ. ಮತ್ತೆ ಅದೇ ಹೂವಿನ ಏಣಿಯಿಂದ ಏರಿ ಕಣ್ಣೊಳಗಿಂದ ಹೊರಬಂದು ಕಿಟಕಿಯ ಮೂಲಕ ಹಾರಿಹೋದ.
ಈ ಕಡೆ ಮತ್ತೆ ಧಡಧಡ ಬಾಗಿಲು ಬಡಿದ ಸದ್ದು. ತೆರೆದೆ, ತಡರಾತ್ರಿ ಒಳನುಗ್ಗಿದ ಇವನು, “ಏನು ಬಾಗಿಲು ತೆರೆಯಲು ಎಷ್ಟೊತ್ತು ಬೇಕು?” ಎಂದು ರೇಗಿದ. ಕಣ್ಣುಗಳು ಚಕಚಕನೇ ಇಡೀ ಕೋಣೆಯ ನಿರ್ವಾತವನ್ನೆಲ್ಲ ಕತ್ತರಿಸಿ ಕೊನೆಗೆ ನನ್ನ ಮೇಲೆ ನಿಂತವು. “ಕಥೆ ಬರೀತಾ ಕೂತಿದ್ಯಾ? ಬರಿ ಬರಿ, ನನ್ನ ಗಂಡ ಕೆಟ್ಟವ, ಹಾಗೆ ಹೀಗೆ ಎಲ್ಲಾ ಬರದು ಜನರ ಅನುಕಂಪ ಗಿಟ್ಟಿಸಿಕೋ. ಎಲ್ಲರಿಗೂ ಗೊತ್ತಾಗ್ಲಿ, ನನ್ನ ಮಾನ ಹೋಗ್ಲಿ. ನಾನೂ ಸುಮ್ಮನಿರೊಲ್ಲ. ಕಥೆ ಬರದು ನಿನ್ನೆಲ್ಲ ಕಲ್ಯಾಣಗುಣಗಳನ್ನ ಜಗತ್ತಿನ ಮುಂದೆ ತೋರಿಸಿ ಇಂಚಿಂಚಾಗಿ ಕತ್ತರಿಸಿ ಹಾಕ್ತೀನಿ ನಿನ್ನಾ, ತಿಳಕೋ”, ಸಿಟ್ಟಿನಿಂದ ಥರಥರಗುಟ್ಟಿದ.
“ಅಯ್ಯೋ ದೇವ್ರೇ, ಅದು ಕಥೆ. ಎಲ್ಲಾ ಕಥೆನೂ ನಂದು ಮತ್ತು ನಿಂದು ಇರುತ್ತಾ? ಹಾಗೆ ನಮ್ಮದೇ ಕಥೆ ಬರೀತಾ ಹೋದ್ರೆ ಎಷ್ಟ ಬರೀಬಹುದು? ಒಂದೋ ಎರಡೋ, ಆಮೇಲೆ?” ಅವನಿಗೆ ಸಮಾಧಾನವಿಲ್ಲ, “ಇದೆಲ್ಲಾ ಬೊಗಳೆ ನನ್ನ ಹತ್ರ ಬಿಡ್ಬೇಡಾ. ನಾನೇನು ಬೆರಳು ಚೀಪೋ ಮಗು ಅನ್ಕೊಂಡ್ಯಾ? ನನ್ನ ಗಂಡನಿಗೆ ಒಳ್ಳೆ ಅಭಿರುಚಿ ಇಲ್ಲ, ಇಂಟರೆಸ್ಟ್ ಇಲ್ಲ. ನನ್ನ ನೋಡಿ ಉರ್‍ಕೋತಾನೆ ಎಂತೆಲ್ಲಾ ಬರ್‍ಕೊಂಡೀಯಲ್ಲಾ. ಅದೆಲ್ಲಾ ನಂದೇ ಅಂತ ನನಗೆ ಅರ್ಥ ಆಗೊಲ್ಲಾ ಅನ್ಕೊಂಡಿದ್ದೀಯಾ?”
“ಅಷ್ಟೊಂದ ನಿನಗೇ ಖಾತ್ರಿ ಇದ್ದಮೇಲೆ ನೀನು ಇರೋದೇ ಹಾಗೆ ಅಂತ ನೀನೇ ಒಪ್ಪಿಕೊಂಡ ಹಾಗಾಯ್ತಲ್ಲಾ! ಇಷ್ಟು ದಿನ ನಾನು ಹೇಳಿದ್ರೆ ಸುಳ್ಳು ಅಂತಿದ್ದೆ”, ನಾನೂ ಮೂಗು ಮುರಿದು ಮುಖ ತಿರುವಿದೆ. “ಇನ್ನು ಸುಮ್ಮನೇ ಮಲಗಿ ನಿದ್ದೆ ಮಾಡು, ನನಗಿನ್ನೂ ಟೈಪ್ ಮಾಡೋದಿದೆ” ಅಂದೆ.
ಯಾರು ಈ ಸರೀರಾತ್ರಿಯಲ್ಲಿ ಜಗಳ ಹೊಡೀತಾ ಕೂರುವವರು? “ರಾತ್ರಿ ಎರಡು ಗಂಟೆ ಆತು, ಇನ್ನೂ ಏನು ಟೈಪ್ ಮಾಡಿ ಉದ್ಧಾರ ಆಗ್ತೀ? ಮಲಕ್ಕೋ” ಅಂತ ಆವಾಜ್ ಹಾಕಿ ರೂಮಿನ ಬಾಗಿಲು ಧಡ್ ಅಂತ ಹಾಕಿ ಹಾಸಿಗೆಯ ಮೇಲೆ ಬಿದ್ದವನನ್ನು ನೋಡುತ್ತ ನಾನೂ ಮಂಚದ ಈ ತುದಿಗೆ ಬಿದ್ದುಕೊಂಡು ಮುಖಪೂರ್ತಿ ಮುಚ್ಚುವಂತೆ ಮುಸುಕು ಹೊದೆದೆ. ಒಳಗಣ್ಣೊಂದು ಆ ಕತ್ತಲಲ್ಲೇ ತೆರೆದುಕೊಂಡು, “ಐಡಿಯಾ, ಈ ಎಲ್ಲ ಪಾತ್ರಗಳನ್ನೇ ಮತ್ತೊಮ್ಮೆ ತುರುಕಿ ಒಂದೊಳ್ಳೆ ಖಿಚಡಿ ಕಥೆ ಬರೆದರಾಯ್ತು” ಎಂದು ಮನಸ್ಸಿಗೆ ಹೊಳೆದದ್ದೇ ಒಳಗೆಲ್ಲ ಝಗ್ ಅಂತ ಬೆಳಕಾಗಿ ಎದ್ದುಕೂತೆ.
ನೀತಾ. ರಾವ್
ಬೆಳಗಾವಿ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ