- ಜಾರ್ಜ್ ಫೆರ್ನಾಂಡಿಸ್ -ದಿ ರೆಬೆಲ್ ಫ್ರಮ್ ಮಂಗಳೂರು - ಆಗಸ್ಟ್ 7, 2021
ಕನ್ನಡ ಕರಾವಳಿಯ ಮಂಗಳೂರಿನ ಕ್ಯಾಥೋಲಿಕ್ ಪರಿವಾರದಲ್ಲಿ ಜಾರ್ಜ್ ಫೆರ್ನಾಂಡಿಸ್ ಜನಿಸಿದರು. ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಜನತೆ ಕೈಎತ್ತಿ ಮುಗಿಯುವಂತಹ ವ್ಯಕ್ತಿತ್ವ ಜಾರ್ಜ್ ಅವರದಾಗಿತ್ತು. ಅವರು ಅಪ್ಪಟ ದೇಶಭಕ್ತ, ಛಲಗಾರ, ಮಾನವತಾವಾದಿ, ವಾಕ್ಪಟು, ಜಾರ್ಜ್ ಫೆರ್ನಾಂಡಿಸ್ ಅವರು ಕಠಿಣ ಶ್ರಮದಿಂದ ಶೂನ್ಯದಿಂದ ನಭಕ್ಕೆ ಏರಿದಂತಹ ಛಲದ ವ್ಯಕ್ತಿ ಎಂದು ಹೇಳಬಹುದು.
ಡಾ. ಎನ್. ಎಸ್. ಭಟ್ ಹೇಳಿದ ಹಾಗೆ ಎರಡು ದಿನ ಬಾಳಿದರೂ ಗರುಡನಂತೆ ಬಾಳಬೇಕು. ಗಗನದ ಅಗಲಕ್ಕೆ ಹಾರಬೇಕು, ರೆಕ್ಕೆಬೀಸುತಾ… ಕಂಡ ಜನರು ಬೆರಗುಗೊಂಡು ಏನು ಚಂದ ಅನ್ನಬೇಕು. ಉಫ್..ಉಫ್.. ಎಂದು ಕೂಗಬೇಕು’ ಮೆಚ್ಚಿ ತೋರುತ್ತಾ ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಧೀಮಂತ ಜಾರ್ಜ್ ಅಧಿಕಾರಸ್ಥರಿಗೆ ಸದಾ ಸಿಂಹಸ್ವಪ್ನವಾಗಿ ಬಾಳಿದರು. ಅಧಿಕಾರ ಸಿಕ್ಕಾಗಲೂ ಹೊಸ ಕ್ರಾಂತಿಯ ಮುನ್ನುಡಿ ಬರೆದರು. ಅಂದು ಜನವರಿ 29.1.2019ರಂದು ಇಡೀ ವಿಶ್ವದ ಜನರು ಕಂಬನಿ ಮಿಡಿದರು. ಭಾರತದ ಕಟ್ಟಕಡೆಯ ಕ್ರಾಂತಿಕಾರಿ ಜಾರ್ಜ್ ಇನ್ನಿಲ್ಲವಾದರು. ವಂಶವಾದ ಹಾಗೂ ಭ್ರಷ್ಟಾಚಾರಗಳ ವಿರುದ್ಧದ ಐತಿಹಾಸಿಕ ಸಂಗ್ರಾಮದ ಅಂತಿಮ ಕೊಂಡಿ ಇದೀಗ ಕಳಚಿಕೊಂಡಿದೆ. ಫೈರ್ ಬ್ರಾಂಡ್, ಜೈಂಟ್ ಕಿಲ್ಲರ್, ಬಂದ್ ಸಾಮ್ರಾಟ್, ಕಿಂಗ್ ಮೇಕರ್, ಕ್ರಾಂತಿಕಾರಿ ಎಂದೆಲ್ಲ ಬಿರುದುಗಳ ಸಹೃದಯ ಕಾರ್ಮಿಕ ನೇತಾರ ಜಾರ್ಜ್ ಫೆರ್ನಾಂಡಿಸ್ ತೀರಿಕೊಂಡಾಗ ಸಮಾಜವಾದಿ ಹೋರಾಟದ ಒಂದು ಯುಗವೇ ಮುಗಿದಂತಾಯಿತು.
ಜಾರ್ಜ್ ರಾಷ್ಟ್ರನಾಯಕರಾಗಿ ಬೆಳೆದ ಪರಿಯೂ ಅಚ್ಚರಿ ಮೂಡಿಸುವಂತಹದು. ಮಾನವ ಹಕ್ಕುಗಳು, ಬಡವರ ಉನ್ನತಿಗಾಗಿ, ರೈತರ ಹಾಗೂ ಕಾರ್ಮಿಕರ ಏಳ್ಗೆಗಾಗಿ ಶ್ರಮಿಸುತ್ತಿದ್ದ ಜಾರ್ಜ್ ಬಹುದೊಡ್ಡ ಮಾಸ್ ಲೀಡರ್ ಆಗಿ ಹೊರಹೊಮ್ಮಿದರು. ಅವರನ್ನು ಹಲವು ರಾಷ್ಟ್ರಗಳ ರಾಯಭಾರಿಗಳು ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಜಾರ್ಜ್ ಫೆರ್ನಾಂಡಿಸ್ ರವರ ಬಾಲ್ಯದ ದಿನಗಳು ಹೇಗಿತ್ತೆಂದರೆ ಅವರು ಮೂಲತಃ ಮಂಗಳೂರಿನವರು. ಇವರ ತಂದೆ ಜಾನ್ ಫೆರ್ನಾಂಡಿಸ್, ತಾಯಿ ಅಲಿಸ್ ಫೆರ್ನಾಂಡಿಸ್. ಜಾರ್ಜ್ ಅವರು 3.6.1930ರಂದು ಮಂಗಳೂರಿನ ಬಿಜೈಯಲ್ಲಿ ಜನಿಸಿದರು. ಬಿಜೈಯಲ್ಲಿ ಜಾನ್ ಫೆರ್ನಾಂಡಿಸ್ ಕುಟುಂಬ ಸಹಿತ ವಾಸವಾಗಿದ್ದು ಸಣ್ಣಪುಟ್ಟ ವ್ಯವಹಾರ ಹಾಗೂ ವಿವಿಧ ಏಜೆನ್ಸಿಗಳನ್ನು ಪಡೆದು ಬಂದ ಪ್ರಾಪ್ತಿಯಿಂದ ದೊಡ್ಡದೇ ಎನ್ನಬಹುದಾದ ತಮ್ಮ ಸಂಸಾರವನ್ನು ನಿಯತ್ತಿನಿಂದ ನಡೆಸುತ್ತಿದ್ದರು. ಮಡದಿ, ಮಕ್ಕಳು, ತಮ್ಮ ಮನೆಯ ದೊಡ್ಡ ಆವರಣzಲ್ಲಿ ತರಕಾರಿ ಮತ್ತು ಮಲ್ಲಿಗೆ ಗಿಡ ಬೆಳೆಸಿ ಅವುಗಳನ್ನು ಮಾರಿಬಂದ ಹಣದಿಂದ ಕುಟುಂಬ ನಿರ್ವಹಣಗೆ ಪೂರಕ ಬೆಂಬಲ ನೀಡುತ್ತಿದ್ದರು. ಮಕ್ಕಳು ತಮ್ಮ ಓದಿನ ಜೊತೆಗೆ ಶ್ರಮ ಸಂಸ್ಕøತಿಯನ್ನು ತಮ್ಮ ಜೀವನಶೈಲಿಯನ್ನಾಗಿ ಮಾಡಿಕೊಂಡಿದ್ದರು. ಜಾರ್ಜ್ ಫೆರ್ನಾಂಡಿಸ್ ತನ್ನ ಶಿಕ್ಷಣವನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎಸ್. ಎಸ್. ಎಲ್. ಸಿ.ವರೆಗೆ ಮಾಡಿದರು. ಇವರ ತಂದೆ ಜಾನ್ ಅವರು ತನ್ನ ಮಗನನ್ನು ಒಬ್ಬ ಪಾದ್ರಿಯನ್ನಾಗಿ ಮಾಡಿ ಧರ್ಮದ ಸೇವೆಗೆ ಮೀಸಲಾಗಿಡಬೇಕೆಂದು ಬಯಸಿದರು. 1946ರಲ್ಲಿ ಬೆಂಗಳೂರಿಗೆ ಕಳುಹಿಸಿ ಸೆಮಿನರಿಯೊಂದರಲ್ಲಿ ಸೇರಿಸಿದರು. ಜಾರ್ಜ್ ಅವರು ಧರ್ಮದೀಕ್ಷೆ ಹೊಂದಲು ಸೆಮಿನರಿಯಲ್ಲಿ ಇದ್ದರೂ, ಕೂಡ ಅವರ ಮನೋವೃತ್ತಿಗೆ ಒಗ್ಗದಾಯಿತು. 1948ರಲ್ಲಿ ಬೆಂಗಳೂರು ಬಿಟ್ಟು ಮಂಗಳೂರಿಗೆ ಮರಳಿದರು. ಜಾನ್‍ರವರು ಮಗನ ಮೇಲೆ ಕುಪಿತಗೊಂಡು ಮಗನು ಧರ್ಮದ್ರೋಹ ಬಗೆದನೆಂದು ಮನೆಗೆ ಸೇರಿಸಿಕೊಳ್ಳಲಿಲ್ಲ. ತಾನಿನ್ನು ಏನು ಮಾಡಲಿ ಎಂದು ತಿಳಿಯದಾದ ಈ ಹದಿನೆಂಟರ ತರುಣ ಮಂಗಳೂರು ಪೇಟೆಯಲ್ಲಿ ಒಬ್ಬ ಅನಾಥನಂತೆ ಅಲೆದಾಡುವ ಪರಿಸ್ಥಿತಿ ಉಂಟಾಯಿತು. ರಾತ್ರಿ ಕಳೆಯಲು ಆಶ್ರಯವಿಲ್ಲ. ಹಸಿದ ಹೊಟ್ಟೆಯಲ್ಲಿ ಸೆಂಟ್ರಲ್ ಮೈದಾನದ ರೇಡಿಯೋ ಸಜ್ಜಿತ ಉದ್ಯಾನವನದಲ್ಲಿನ ಒಂದು ಸಿಮೆಂಟ್ ಬೆಂಚಿನ ಮೇಲೆ ನಿದ್ದೆಗೆ ಶರಣಾದರು.
ಫೆಲಿಕ್ಸ್ ಪೈ ಬಜಾರಿನ ಮಾಳಿಗೆಯಲ್ಲಿದ್ದ ಸಮಾಜವಾದಿ ಪಕ್ಷದ ಕಾರ್ಯಾಲಯದಲ್ಲಿ ತಮ್ಮ ನಿತ್ಯದ ಕೆಲಸ ಮುಗಿಸಿ ಅಮ್ಮೆಂಬಳ ಬಾಳಪ್ಪ ಆ ರಾತ್ರಿ ಸೆಂಟ್ರಲ್ ಮೈದಾನದಿಂದ ಹಾದುಹೋಗುವಾಗ ಸಿಮೆಂಟ್ ಬೆಂಚ್‍ನಲ್ಲಿ ಮಲಗಿದ್ದ ತರುಣನತ್ತ ನೋಡುತ್ತಾರೆ. ಅವರು ಅವನನ್ನು ಎಬ್ಬಿಸುತ್ತಾರೆ. ಹುಡುಗ ಜಾರ್ಜ್ ಫೆರ್ನಾಂಡಿಸ್ ಎಂದು ಗೊತ್ತಾದೊಡನೆ ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ. ಬಾಳಪ್ಪರವರಿಗೆ ಜಾರ್ಜ್ ತಂದೆ ಜಾನ್ ಅವರ ಪರಿಚಯವಿತ್ತು. ಮರುದಿನ ಬೆಳಿಗ್ಗೆ ಬಾಳಪ್ಪ, ಜಾರ್ಜ್ ಅವರನ್ನು ಬಿಜೈಗೆ ಕರೆದುಕೊಂಡು ಹೋಗಿ ತಂದೆ ಮತ್ತು ಮಗನ ಮಧ್ಯೆ ಹೊಂದಾಣಿಕೆ ಮಾಡಲು ಪ್ರಯತ್ನಿಸಿದರು. ಅವರ ತಂದೆ ಒಪ್ಪಲಿಲ್ಲ. ಅಮ್ಮೆಂಬಳ ಬಾಳಪ್ಪನವರು ಜಾರ್ಜ್ ಅವರನ್ನು ಸೀದಾ ಡಾ. ನಾಗಪ್ಪ ಆಳ್ವರ ದವಾಖಾನೆಗೆ ಕರೆದುಕೊಂಡು ಹೋದರು. ಅಂದಿನ ದಿನಗಳಲ್ಲಿ ನಾಗಪ್ಪ ಆಳ್ವರ ಡಿಸ್ಪೆನ್ಸರಿ ಎಂದರೆ ರಾಜಕೀಯ ಕಾರ್ಯಕರ್ತರು ಉಭಯ ಕುಶಲೋಪಹರಿಗಾಗಿ ಒಂದೆಡೆ ಸೇರುವ ತಾಣವಾಗಿತ್ತು. ಬಾಳಪ್ಪ ಜಾರ್ಜ್‍ರ ಜೊತೆಗೆ ಆಳ್ವ ಅವರ ಬಿಡುವಿನಲ್ಲಿ ಭೇಟಿಯಾದರು ಮತ್ತು ತಮ್ಮ ಸಂಗಡ ಇರುವ ಜಾರ್ಜ್ ಫೆರ್ನಾಂಡಿಸ್ ಅವರ ಬಗ್ಗೆ ಎಲ್ಲ ವಿವರ ಕೊಟ್ಟರು. ತಾಳ್ಮೆಯಿಂದ ಕೇಳಿದ ಡಾ. ಆಳ್ವ ಜಾರ್ಜ್ ಏನೂ ಹೆದರಬೇಡ, ನಾವಿದ್ದೇವೆ’ ಎಂದರು.
ಸಮಾಜವಾದಿ ಧುರೀಣ ಅಮ್ಮೆಂಬಳ ಬಾಳಪ್ಪ ಅವರ ಸಹವಾಸ ಜಾರ್ಜ್ ಅವರಿಗೆ ನಿರಾಯಾಸವಾಗಿ ದೊರಕಿತು. ಫೆಲಿಕ್ಸ್ ಪೈ ಬಜಾರಿನಲ್ಲಿದ್ದ ವಿವಿಧ ಕಾರ್ಮಿಕ ಸಂಘಗಳಲ್ಲಿ ಜಾರ್ಜ್ ಕೂಡ ತೊಡಗಿಸಿಕೊಂಡರು. ಪಕ್ಷದ ಕಾರ್ಯ ಚಟುವಟಿಕೆಗೆ ಪ್ರಚಾರವೂ ಬೇಕು ಎಂದು ತಾನೇ ಒಂದು ಇಂಗ್ಲಿಷ್ ಸಾಪ್ತಾಹಿಕವನ್ನೂ ಹುಟ್ಟುಹಾಕಿದರು. ಬಾಳಪ್ಪರ ನೇತೃತ್ವದಲ್ಲಿದ್ದ ಹೊಟೇಲ್ ಕಾರ್ಮಿಕರ ಸಂಘವು ದೊಡ್ಡ ಹೊಟೇಲುಗಳ ಮುಂದೆ ಕೆಲಸಗಾರರ ಬೇಡಿಕೆ ಈಡೇರುವ ಸಲುವಾಗಿ ಧರಣಿ ಕುಳಿತುಕೊಳ್ಳುವ ಘಟನೆಗಳು ಆಗಾಗ ಸಂಭವಿಸುತ್ತಿದ್ದವು. ಇವುಗಳಲ್ಲಿ ಬಾಳಪ್ಪ ಅವರ ಜೊತೆಗೆ ಜಾರ್ಜ್ ಸೇರುವುದೂ ಇತ್ತು. 1949- 50ರಲ್ಲಿ ಜಾರ್ಜ್ ಅವರು ಕೆಲಸ ಹುಡುಕಿಕೊಂಡು ಕರಾವಳಿ ಪ್ರದೇಶದ ಮಂಗಳೂರಿನಿಂದ ವಾಣಿಜ್ಯ ಪ್ರದೇಶ ಮುಂಬಯಿಗೆ ಬಂದು ಇಳಿದಾಗ ಅವರ ಬಳಿ ಏನೂ ಇರಲಿಲ್ಲ. ಅವರ ಬುದ್ಧಿವಂತಿಕೆಯನ್ನು ಬಿಟ್ಟು ಕೆಟ್ಟ ಧೈರ್ಯದಿಂದ ಮುಂಬಯಿಗೆ ಬಂದಾಗ ಅವರಿಗೆ ಮುಂಬಯಿಯಲ್ಲಿ ಯಾರ ಪರಿಚಯವೂ ಇಲ್ಲ. ಉಳಿದುಕೊಳ್ಳಲು ಜಾಗವೂ ಇರಲಿಲ್ಲ. ಹಾಗಾಗಿ ರಾತ್ರಿ ಮುಂಬಯಿ ಬೀದಿಯಲ್ಲಿ ಮಲಗಬೇಕಾಯಿತು. ಬಹಳ ಕಾಲದವರೆಗೆ ಫುಟ್‍ಪಾತ್‍ಗಳೇ ಅವರ ಸೂರು ಆಗಿತ್ತು. ದಿನವೆಲ್ಲಾ ಕೆಲಸಕ್ಕಾಗಿ ಅಲೆದರು. ಫೆರ್ನಾಂಡಿಸ್ ಅವರ ಪ್ಲಸ್ ಪಾಯಿಂಟ್ ಏನೆಂದರೆ ಅವರು ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಆ ಭಾಷಾ ಪ್ರಾವೀಣ್ಯತೆಯಿಂದಲೇ ಅವರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪತ್ರಿಕೆಯೊಂದರಲ್ಲಿ ಪ್ರೂಫ್‍ರೀಡರ್ ಆಗಿ ಕೆಲಸಕ್ಕೆ ಸೇರಿಕೊಂಡರು.
ಜಾರ್ಜ್ ಫೆರ್ನಾಂಡಿಸ್ ಅವರಲ್ಲಿದ್ದ ಹೋರಾಟದ ಮನೋಭಾವ ತೀವ್ರಗೊಳ್ಳುವುದಕ್ಕೆ ಮುಖ್ಯವಾಗಿ ಇಬ್ಬರು ವ್ಯಕ್ತಿಗಳು ಕಾರಣರಾಗುತ್ತಾರೆ. ಒಬ್ಬರು ಯೂನಿಯನ್ ಲೀಡರ್ ಆಗಿರುವಂತಹ ಪ್ರಸಿದ್ಧ ಡಿಮೆಲ್ಲೋ ಮತ್ತು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ. ಜಾರ್ಜ್ ಫೆರ್ನಾಂಡಿಸ್ ಅವರ ಬದುಕಿಗೆ ಬಹುದೊಡ್ಡ ತಿರುವು ಸಿಕ್ಕಿದ್ದು ಆ ನಾಯಕರಿಂದಲೇ. 1950ರ ದಶಕದಲ್ಲಿ ಕಾರ್ಮಿಕರ ಹಕ್ಕುಗಳಿಗೆ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದ ಹೋರಾಟ ತುಂಬಾನೇ ಹೆಸರನ್ನು ತಂದುಕೊಟ್ಟಿತು. ಜಾರ್ಜ್ ಅವರು ಒಂದೆಡೆ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡರು. ಇನ್ನೊಂದೆಡೆ ರಾಜಕೀಯವಾಗಿ ತಮಗೆ ಗೊತ್ತಿಲ್ಲದಂತೆ ವರ್ಚಸ್ಸನ್ನು ಬೆಳೆಸಿಕೊಂಡರು.
1967ರ ಚುನಾವಣೆಯಲ್ಲಿ ರಾಜಕೀಯಕ್ಕೆ ಇಳಿದ ಜಾರ್ಜ್ ಮುಂಬಯಿಯ ಬೋಂಬೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದರು. ಜಾರ್ಜ್ ಅವರು ರಾಜಕೀಯದ ಮೊದಲು ಮೆಟ್ಟಿಲು ಹತ್ತಿದ್ದು 1949ರಲ್ಲಿ. ಬೋಂಬೆ ಮುನ್ಸಿಪಲ್ ಮೆಂಬರ್ ಆಗಿ 1961ರಿಂದ 1968ರ ವರೆಗೂ ಸಕ್ರಿಯರಾಗಿದ್ದರು. ಅಷ್ಟೇ ಬೇಗ ಜನಪ್ರಿಯರಾದರು. ಹೀಗಿರುವಾಗಲೇ 1967ರಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗುತ್ತದೆ. ಆಗ ಬೋಂಬೆ ಸೌತ್ ಕ್ಷೇತ್ರದಿಂದ ಕಾಂಗ್ರೆಸ್‍ನ ಎಸ್. ಕೆ. ಪಾಟೀಲ್‍ರವರನ್ನು ಸೋಲಿಸಿ ಗೆಲುವು ಸಾಧಿಸುತ್ತಾರೆ.
1974ರಲ್ಲಿ ರೈಲ್ವೆ ಕಾರ್ಮಿಕರ ಪ್ರತಿಭಟನೆ ಜಾರ್ಜ್ ಅವರಿಗೆ ದೇಶದಾದ್ಯಂತ ದೊಡ್ಡ ಹೆಸರನ್ನು ತಂದುಕೊಟ್ಟಿತು. ಭಾರತೀಯ ಹೋರಾಟದ ಇತಿಹಾಸ ಕಂಡ ಮಹಾ ಪ್ರತಿಭಟನೆ ಆಗಿ ಅದು ಇಂದಿಗೂ ಉಳಿದಿದೆ. ಆ ಹೋರಾಟದಿಂದಾಗಿ ಅವರು ರಾಜಕೀಯವಾಗಿ ಮತ್ತೊಂದು ಮೆಟ್ಟಲನ್ನು ಹತ್ತುವಂತೆ ಆಯಿತು. ಎಲ್ಲಾ ಪತ್ರಿಕೆಗಳು ಅವರಿಗೆ ಜೈಂಟ್ ಕಿಲ್ಲರ್ ಬಿರುದನ್ನು ಕೊಟ್ಟರು.
ಮುಂಬಯಿಯಲ್ಲಿ ಜಾರ್ಜ್ ಫೆರ್ನಾಂಡಿಸ್‍ರವರು ಸ್ಥಾಪಿಸಿ ಬೆಳೆಸಿದ ದೊಡ್ಡ ದೊಡ್ಡ ಸಂಘಟನೆಗಳು ಹಲವಾರು ಇವೆ. ಅವುಗಳಲ್ಲಿ ಮುನ್ಸಿಪಲ್ ಮಜ್ದೂರ್ ಯೂನಿಯನ್, ಬೆಸ್ಟ್ ವರ್ಕರ್ಸ್ ಯೂನಿಯನ್, ಬೊಂಬೆ ಲೇಬರ್ ಯೂನಿಯನ್, ಬೊಂಬೆ ಟ್ಯಾಕ್ಸಿಮೆನ್ಸ್ ಯೂನಿಯನ್, ಬೊಂಬೆ ಗುಮಾಸ್ತ ಯೂನಿಯನ್, ಬೊಂಬೆ ಹಾಕರ್ಸ್ ಯೂನಿಯನ್, ಬಾಂಬೆ ಅಟೋರಿಕ್ಷಾ ಮೆನ್ಸ್ ಯೂನಿಯನ್, ಬಾಂಬೆ ಲೇಬರ್ಸ್ ಕೋ. ಆಪರೇಟಿವ್ ಬ್ಯಾಂಕ್, ಟ್ಯಾಕ್ಸಿಮೆನ್ಸ್ ಸರ್ವಿಸ್ ಲಿಮಿಟೆಡ್, ನ್ಯಾಶನಲ್ ರೈಲ್ವೆ ಮಜ್ದೂರ್ ಯೂನಿಯನ್, ಆಲ್ ಇಂಡಿಯಾ ರೈಲ್ವೆಮೆನ್ಸ್ ಫೆಡರೇಶನ್ ಕೊಂಕಣ ರೈಲ್ವೆ ಮಜ್ದೂರ್ ಯೂನಿಯನ್, ಡಾ. ರಾಮ್ ಮನೋಹರ್ ಲೋಹಿಯಾ ಸಮಾಜವಾದಿ ವಿದ್ಯಾಪೀಠ.
1975ರ ಸಮಯದಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಇವರ ನೇತೃತ್ವದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‍ನ ಆಡಳಿತವಿತ್ತು. ಅಧಿಕಾರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಶ್ರೀಮತಿ ಇಂದಿರಾಗಾಂಧಿಯವರು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದರು. ಎಲ್ಲಾ ವಿರೋಧ ಪಕ್ಷದ ಶಾಸಕರು, ರಾಜಕೀಯ ಮುಖಂಡರನ್ನು ಬಂಧಿಸಿ ಚಿಲಕ ಹಾಕಿದರು. ಜಾಜ್ ಫೆರ್ನಾಂಡಿಸ್ ಅವರನ್ನು ಬಂಧಿಸಲಾಗಲಿಲ್ಲ. ತುರ್ತು ಪರಿಸ್ಥಿತಿ ಜಾಹೀರು ಮಾಡಿದ್ದರಿಂದಾಗಿ ಜಾರ್ಜ್ ಅವರು ಭೂಗತರಾಗಿ ಇಂದಿರಾಗಾಂಧಿ ಸರ್ಕಾರದ ವಿರುದ್ಧ ಆಂದೋಲನ ಮಾಡಲು ನಿಶ್ಚಯಿಸಿದರು. ಅವರು ಸಿಖ್ ವೇóಷಧಾರಿಯಾಗಿ ಭೂಗತ ಆಂದೋಲನ ಪ್ರಾರಂಭಿಸಿದರು.
1975ರಿಂದ ಜೂನ್ 1976ರ ಕಾಲಾವಧಿಯಲ್ಲಿ ಡೈನಮೈಟ್ ಸ್ಫೋಟ ಮಾಡಿ ತುರ್ತು ಪರಿಸ್ಥಿತಿಯ ವಿರೋಧವಾಗಿ ತೀವ್ರ ಆಂದೋಲನ ನಡೆಯುತ್ತಿದೆ ಎಂದು ತೋರಿಸಿಕೊಟ್ಟರು. ಬರೋಡಾ ಡೈನಮೈಟ್ ಪ್ರಕರಣ ಬೇರೆ ಬೇರೆ ರಾಜ್ಯಗಳಲ್ಲಿ ದಾಖಲು ಮಾಡಿದ್ದರಿಂದಾಗಿ ಕೇಂದ್ರ ಸರ್ಕಾರವು ಸಿಬಿಐ ಮೂಲಕ ಎಲ್ಲಾ ಮೊಕದ್ದಮೆಗಳನ್ನು ಒಂದುಗೂಡಿಸಿ ದಿಲ್ಲಿಯಲ್ಲಿ ನಡೆಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಜಾರ್ಜ್ ಮತ್ತು ಇತರ ಇಪ್ಪತ್ತನಾಲ್ಕು ಜನರ ವಿರುದ್ಧ ದಿಲ್ಲಿಯ ತೀಸ್ ಹಜಾರಿ ಕೋರ್ಟ್‍ನಲ್ಲಿ ಮೊಕದ್ದಮೆ ನಡೆಸಲಾಯಿತು. ಎಲ್ಲರ ಮೇಲೆ ಚಾರ್ಜ್‍ಶೀಟ್ ಹಾಕಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಆಗಬಾರದೆಂದು ಮೀಸಾ ಕೆಳಗೆ ಬಂಧಿಸಲಾಯಿತು. ಮೇಲಿನ ಆರೋಪ ಸಿದ್ಧವಾಗುತ್ತಿದ್ದರೆ ಅಥವಾ ಸರಕಾರ ಬದಲು ಆಗದಿರುತ್ತಿದ್ದರೆ ಎರಡು ವರ್ಷಗಳಲ್ಲಿ ಗಲ್ಲುಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಆಗುವ ಸಂಭವವಿತ್ತು.
ಜನವರಿ 1977ರಲ್ಲಿ ಇಂದಿರಾಗಾಂಧಿ ಸರ್ಕಾರ ಮಾರ್ಚ್ 1977ರಲ್ಲಿ ಲೋಕಸಭೆಯ ಚುನಾವಣೆಯನ್ನು ಘೋಷಿಸಿತು. ಜನವರಿ ಕೊನೆಗೆ ಇಡೀ ದೇಶದ ಜೈಲಿನಲ್ಲಿ ಇರುವ ಎಲ್ಲಾ ರಾಜಕೀಯ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ಬರೋಡ ಡೈನಮೈಟ್ ಪ್ರಕರಣದ 22 ಆರೋಪಿಗಳನ್ನು ಕಡೆಯ ತನಕ ಬಿಡುಗಡೆ ಮಾಡಲಿಲ್ಲ. ಹಳೆಯ ಕಾಂಗ್ರೆಸ್, ಭಾರತೀಯ ಜನಸಂಘ, ಸಮಾಜವಾದಿ ಪಕ್ಷ ಮತ್ತು ಸ್ವತಂತ್ರ ಪಕ್ಷಗಳು ಲೋಕನಾಯಕ ಜಯಪ್ರಕಾಶ್ ನಾರಾಯಣರ ಮಾರ್ಗದರ್ಶನದಲ್ಲಿ ವಿಲೀನಗೊಂಡು ಜನತಾ ಪಕ್ಷ ಸ್ಥಾಪನೆ ಮಾಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಆ ಸಮಯದಲ್ಲಿ ಜಾರ್ಜ್ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದರು. ಆದರೂ ಜೈಲಿನಲ್ಲಿ ಇದ್ದರು. ಜಾರ್ಜ್ ಚುನಾವಣೆಯಲ್ಲಿ ನಿಲ್ಲಲು ಉತ್ಸುಕರಾಗಲಿಲ್ಲ. ಆದರೆ ಜಯಪ್ರಕಾಶ್ ನಾರಾಯಣರ ಆಗ್ರಹದಿಂದ ಜಾರ್ಜ್ ಬಿಹಾರದ ಮುಜಾಫರ್ ಪುರದಿಂದ ಲೋಕಸಭೆ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದರು. ಜಾರ್ಜ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪೋಲಿಸರು ಸರಪಳಿಯಿಂದ ಕಟ್ಟಿದ ಅವರ ಚಿತ್ರವನ್ನು ಹಾಕಿದರು. ಅದರಲ್ಲಿ ಜನತೆಗೆ ಜಾರ್ಜ್‍ರ ಸವಾಲು ಹೀಗಿತ್ತು ಆಪ್ ಇಸ್ ಜಂಜೀರ್ ಕೋ ತೋಡ್ ಸಕ್ತೆ ಹೈ’ (ನೀವು ಈ ಸರಪಳಿಯನ್ನು ತುಂಡು ಮಾಡಬಹುದು). ಮಾರ್ಚ್ 1977 ರ ಮೂರನೇ ವಾರದಲ್ಲಿ ದೇಶದಲ್ಲೆಲ್ಲಾ ಪ್ರಚಂಡ ಪ್ರಚಾರದ ನಂತರ ಚುನಾವಣೆ ನಡೆಯಿತು. ಅದರಲ್ಲಿ ಇಂದಿರಾಗಾಂಧಿ, ಸಂಜಯಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಬಲಾಢ್ಯ ನೇತಾರರು ಹೆಚ್ಚು ಮತಗಳಿಂದ ಸೋತರು. ಜನತಾ ಬಹುಮತದ ಪಕ್ಷವಾಗಿ ಗೆದ್ದಿತು. ಜಾರ್ಜ್ ಅವರು ಮುಜಾಫರ್‍ಪುರ ಮತದಾರರಿಂದ ಆ ಸಮಯದಲ್ಲಿ ಕಾಂಗ್ರೆಸ್‍ನ ಬಲಾಢ್ಯ ನೇತಾರರಾದ ದಿಗ್ವಿಜಯ ನಾರಾಯಣ ಸಿಂಗ್‍ರನ್ನು ಲೋಕಸಭೆಯ ಚುನಾವಣೆಯಲ್ಲಿ ಮೂರು ಲಕ್ಷ ಮೂವತ್ತಾರು ಸಾವಿರ ಮತಗಳಿಂದ ಸೋಲಿಸಿ ಜಾಗತಿಕ ವಿಕ್ರಮ ಮಾಡಿದರು. ಮರುದಿನ 23.3.1977ರಂದು ಜಾರ್ಜ್ ಹಾಗೂ ಇತರರನ್ನು ಬೇಡಿ ಮತ್ತು ಸರಪಳಿಯಲ್ಲಿ ತೀಸ್ ಹಜಾರಿ ಕೋರ್ಟ್‍ಗೆ ಕರೆದುಕೊಂಡು ಹೋಗುವಾಗ ಅಲ್ಲಿ ಸಾವಿರಾರು ಜನರು ಸೇರಿದ್ದರು ಮತ್ತು ಅಕ್ಷರಶಃ ಕೋರ್ಟ್‍ನ ಆವರಣದಲ್ಲಿ ಪೋಲಿಸರ ಉಪಸ್ಥಿತಿಯಲ್ಲಿ ಜಾರ್ಜ್ ಬೇಡಿ ಮತ್ತು ಸರಪಳಿಯನ್ನು ತುಂಡು ಮಾಡಿದರು.
ಶ್ರೀ ಮೊರಾರ್ಜಿ ಅವರನ್ನು ಅನಂತರ ಜನತಾ ಪಕ್ಷದ ಸಂಸದೀಯ ದಳವು ಪ್ರಧಾನಮಂತ್ರಿಯಾಗಿ ಆರಿಸಿತು. 22.3.1977ರಂದು ಜಾರ್ಜ್ ಮತ್ತು ಇತರ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಹಾಗೂ 26.3.1977ರಂದು ಡೈನಮೈಟ್ ಪ್ರಕರಣ ಹಿಂತೆಗೆಯಲಾಯಿತು. ಜಾರ್ಜ್ ಕೋರ್ಟಿನಿಂದ ನೇರವಾಗಿ ರಾಷ್ಟ್ರಪತಿ ಭವನಕ್ಕೆ ಹೋಗಿ ಕೇಂದ್ರ ಕಮ್ಯುನಿಕೇಶನ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕೈಗಾರಿಕಾ ಮಂತ್ರಿಗಳಾದ ಜಾರ್ಜ್ ಫೆರ್ನಾಂಡಿಸ್ ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸಮರ ಸಾರಿದರು. 1989ರ ಚುನಾವಣೆಯಲ್ಲಿ ಮರಳಿ ಮುಜಾಫರ್ ಪುರದಿಂದ ಸಂಸತಿಗೆ ಆಯ್ಕೆಯಾದ ಜಾರ್ಜ್ ರೈಲ್ವೆ ಮಂತ್ರಿಯಾದಾಗ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಂಕಣ ರೈಲ್ವೆಗೆ ಆಸ್ತಿಭಾರ ಹಾಕಿದರು. 300 ಕೋಟಿಗಳಿಗಿಂತ ಹೆಚ್ಚಿಲ್ಲದೆ ರೈಲ್ವೆ ಕಾಮಗಾರಿಯ ಸಮಯದಲ್ಲಿ 1600 ಕೋಟಿ ವೆಚ್ಚದ ಕೊಂಕಣ ರೈಲ್ವೆ ಯೋಜನೆ ಜಗತ್ತಿನಲ್ಲಿಯೇ ಅತಿ ಮಹತ್ವಾಕಾಂಕ್ಷಿಯಾದುದಾಗಿತ್ತು.
ರೈಲ್ವೆ ಮಂಡಳಿಯ ಸದಸ್ಯರಾಗಿದ್ದ ಶ್ರೀಧರನ್‍ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರ್ಜ್ ಏಳು ವರ್ಷಗಳಲ್ಲಿಯೇ ಕೊಂಕಣ ರೈಲ್ವೆ ಪೂರ್ತಿಗೊಳಿಸಿದರು. ಕೊಂಕಣ ರೈಲು ಯೋಜನೆಯಿಂದ ಮುಂಬೈ, ಮಂಗಳೂರು ಮತ್ತು ಕಾರವಾರ ಬಂದರುಗಳು ನೇರ ಸಂಪರ್ಕಕ್ಕೆ ಬಂದು ವಾಣಿಜ್ಯ ವಹಿವಾಟು ಸುಗಮವಾಗಿ ಭಾರತದ ಅರ್ಥವ್ಯವಸ್ಥೆಗೆ ಸುಗಮವಾಗಿದೆ. 1998ರ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾದಾಗ ಅಣ್ವಸ್ತ್ರ ಸಿಡಿಸಿದ ಭಾರತದ ಅಣುನೀತಿಗೆ ಬಲನೀಡಿದರು. ಕಾರ್ಗಿಲ್ ಯುದ್ಧದ ಹೋರಾಟ 1999ರಲ್ಲಿ ಏರ್ಪಟ್ಟಿತು. ಭಾರತೀಯ ಸೇನೆ ಕಾರ್ಗಿಲ್ ಯುದ್ಧವೆಂದು ಖ್ಯಾತವಾದ ಹೋರಾಟದಲ್ಲಿ ಪಾಕಿಸ್ತಾನವನ್ನು ಮಣಿಸಿತು.
ಲಾಲೂ ಪ್ರಸಾದ್ ಯಾದವ್ ಭ್ರಷ್ಟತೆ ಆರೋಪವಾದಿ ಎಂದು ಮೇವು ಹಗರಣದಲ್ಲಿ ಸಿಲುಕಿಕೊಂಡಿದ್ದು ಮತ್ತು ಬಿಹಾರದಲ್ಲಿ ಜನತಾದಳದ ಹಲವು ಬಣಗಳು ಭಿನ್ನಮತದಲ್ಲಿ ತೊಡಗಿಕೊಂಡಾಗ ಜಾರ್ಜ್ ಕೋಪಗೊಂಡು ನಿತಿಶ್ ಕುಮಾರ್ ಹಾಗೂ ಶರದ್ ಯಾದವ್ ರೊಡನೆ ಸೇರಿ ಸಮತಾ ಪಕ್ಷವನ್ನು ಪ್ರಾರಂಭಿಸಿದರು. ಜಾರ್ಜ್ ಫೆರ್ನಾಂಡಿಸ್ ಅವರು ಏಳು ಬಾರಿ ಲೋಕಸಭೆಗೆ ಚುನಾಯಿತರಾದರು. ಎನ್.ಡಿಎ ಸೋಲಿನ ಬಳಿಕ ಅವರ ಸಹವರ್ತಿಗಳಾದ ನಿತಿಶ್ ಕುಮಾರ್ ಮತ್ತು ಶರದ್ ಯಾದವ್ ಜಾರ್ಜ್ ಫೆರ್ನಾಂಡಿಸ್ ಅವರನ್ನು ಮೂಲೆಗುಂಪು ಮಾಡಿದರು. ಇಳಿವಯಸ್ಸಿನಲ್ಲಿ ಮತ್ತೆ ಸಮತಾ ಪಾರ್ಟಿಯನ್ನು ಪುನಜ್ಜೀವನಗೊಳಿಸಿ ಲೋಕಸಭೆಗೆ ಸ್ಪರ್ಧಿಸಿ ಸೋತರು. ಆ ವೇಳೆಗಾಗಲೇ ಸಾಕಷ್ಟು ವಯಸ್ಸು ಆಗಿತ್ತು. ಆರೋಗ್ಯವೂ ಕೈಕೊಟ್ಟಿತು. ಸಕ್ರಿಯ ರಾಜಕೀಯದಿಂದ ನೇಪಥ್ಯಕ್ಕೆ ಸರಿದರು. ಬೆಂಕಿ ಚೆಂಡಿನಂತೆ ಮಾತನಾಡುವ ಜಾರ್ಜ್ ಅವರ ಕೊನೆಯ ದಿನಗಳಲ್ಲಿ ಮಾತೇ ಇರಲಿಲ್ಲ. ಅವರನ್ನು ನೋಡುವುದು ಎಲ್ಲರಿಗೂ ಸಾಧ್ಯವಿರಲಿಲ್ಲ. 2010ರಲ್ಲಿ ಪಾರ್ಕಿನ್‍ಸನ್ ಮತ್ತು ಅಲ್ಜಮೈರ್ ಕಾಯಿಲೆಗಳಿಗೆ ತುತ್ತಾದರು. ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಜಾರ್ಜ್ ತಮ್ಮ 88ನೇ ವಯಸ್ಸಿನಲ್ಲಿ 29.01.2019ರಂದು ನವದೆಹಲಿಯಲ್ಲಿ ಇಹಲೋಕ ತ್ಯಜಿಸಿದರು. ಜಾರ್ಜ್ ಅವರು ರಾಜಕಾರಣಿಯಾಗಿ, ವಾಗ್ಮಿಯಾಗಿ, ಸಮಾಜ ಸೇವಕರಾಗಿ, ಹೋರಾಟಗಾರರಾಗಿ ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿ ತಮ್ಮ ಜೀವನದುದ್ದಕ್ಕೂ ಮೂಡಿಸಿದ ಹೆಜ್ಜೆ ಗುರುತುಗಳು ಎಂದೆಂದಿಗೂ ಮುಂದಿನ ಪೀಳಿಗೆಯ ಜನರಿಗೆ ಮಾರ್ಗದರ್ಶನವಾಗಲಿದೆ. ಅವರಂತಹ ಸಚ್ಚಾರಿತ್ರ್ಯದ ಸಜ್ಜನ ರಾಜಕಾರಣಿಗಳು ನಮ್ಮ ದೇಶದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುವಂತಾಗಲಿ. 2020ರ ದೇಶದ 71ನೇ ಗಣರಾಜ್ಯ ದಿನಾಚರಣೆಯ ಅಂಗವಾಗಿ ದೇಶದ ನಾಗರಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿ, ಜಾರ್ಜ್ ಫೆರ್ನಾಂಡಿಸ್ ಅವರಿಗೆಮರಣೋತ್ತರ ಪದ್ಮವಿಭೂಷಣ’ ಪ್ರಶಸ್ತಿ ನೀಡಲಾಯಿತು.
ಹೆಚ್ಚಿನ ಬರಹಗಳಿಗಾಗಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ
ಕಣಗಿಲೆಯ ಫಿರ್ಯಾದು