- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ಅನಂತ ಗುಲಾಬಿ
(Spanish; English trans. Alastair Reid)
ಹಿಜಿರ ಶಕ ಐನೂರು ಸಂವತ್ಸರಗಳು ಕಳೆದು
ಪರ್ಶಿಯಾ ಅವಲೋಕಿಸಿತು ಮಿನಾರಗಳ ಮೇಲಿಂದ
ಭರ್ಚಿಮೊನೆಗಳು ಧಾಳಿಯಿಟ್ಟ ಮರುಭೂಮಿಯ, ಮತ್ತು
ನಿಶಾಪುರದ ಅತ್ತರ್ ಒಂದು ಗುಲಾಬಿಯ ನೋಡಿ
ನುಡಿದನು ಸದ್ದಿರದ ಶಬ್ದಗಳಲಿ ಆತ್ಮಗತಿಯಲಿ–
“ನಿನ್ನ ದುರ್ಬಲ ಗೋಲವುಂಟು ನನ್ನ ಹಸ್ತದಲಿ;
ಕಾಲ ನಮ್ಮಿಬ್ಬರನೂ ಬಗ್ಗಿಸುತಿದೆ, ನಮಗೆ ತಿಳಿಯದೆಯೆ,
ಈ ಸಂಜೆಯ ವೇಳೆ, ಈ ಮರೆತ ತೋಟದಲಿ.
ಮುಟ್ಟಿದರೆ ಮುರಿವ ನಿನ್ನೊಡಲು ಗಾಳಿಯ ತೇವಕೆ
ಮಿದುವಾಗಿದೆ. ನಿನ್ನ ಸುವಾಸದ ನಿರಂತರ ತರಂಗ
ಎದ್ದು ಬರುತ್ತಿದೆ ನನ್ನ ಮುದಿ ಮುಖದ ಕಡೆಗೆ.
ಆದರೆ ನಾ ನಿನ್ನ ಬಲ್ಲೆ ಬಹು ಕಾಲದಿಂದ–ಸ್ವಪ್ನದ
ಪದರಗಳಲಿ ಅಥವ ಇಲ್ಲಿ ತೋಟದಲಿ ಒಂದಾನೊಂದು
ಮುಂಜಾನೆ ನಿನ್ನ ಕಂಡ ಕಂದನಿಗಿಂತಲು ಹೆಚ್ಚು.
ನಿನ್ನದಿರಬಹುದು ಸೂರ್ಯನ ಶ್ವೇತಪ್ರಕಾಶ ಅಥವ
ಚಂದ್ರನ ಸ್ವರ್ಣಕಾಂತಿ, ಅಥವ ಯುದ್ಧದಲಿ ಜಯ
ಗಳಿಸಿ ಬಂದ ಅಸಿಧಾರೆಯ ಕಡು ಕೆಂಪು.
ಅಂಧ ನಾನು, ನಾನೇನು ಬಲ್ಲೆ? ಇಷ್ಟೆ:
ನಿರ್ಗಮಿಸಲು ಒಂದಕ್ಕಿಂತ ಹೆಚ್ಚು ದಾರಿಗಳಿವೆ ಎಂದು;
ಪ್ರತಿಯೊಂದೂ ಅನಂತವೆಂದು. ನೀನೋ,
ನೀನು ಸಂಗೀತ, ನದಿಗಳು, ನಭಗಳು, ಅರಮನೆಗಳು,
ಸಕಲ ದೇವದೂತರುಗಳು ನೀನು, ಓ ಅನಂತ ಗುಲಾಬಿಯೆ,
ಆತ್ಮೀಯವೆ, ಅನನ್ಯವೆ, ಕೊನೆಯಿಲ್ಲದುದೆ, ದೇವರು ಅಂತೂ
ನಿನ್ನ ತೋರದಿರುವನೆ, ನನ್ನ ನಿರ್ಜೀವ ಚಕ್ಷುಗಳಿಗೆ?
[ಟಿಪ್ಪಣಿ:
ಫರೀದುದ್ದೀನ್ ಮತ್ತು ಅತ್ತರ್ ಎಂಬ ಕಾವ್ಯ ನಾಮಗಳಿಂದ ಪ್ರಸಿದ್ಧನಾದ ಕವಿ, ವೈದ್ಯ, ಸೂಫಿ ಸಂತ ಪರ್ಶಿಯಾ ದೇಶದ ನಿಶಾಪುರದಲ್ಲಿ ಜನಿಸಿದ. ಕಾಲ 12ನೆ ಶತಮಾನ. ಮೂಲ ಹೆಸರು ಅಬು ಹಮೀದ್ ಬಿನ್ ಅಬು ಬಕರ್ ಇಬ್ರಾಹಿಂ (ಛಿ. 1145 – ಛಿ. 1221), ಆದರೆ ಅತ್ತರ್ ಎಂದೇ ಪ್ರಸಿದ್ಧ. ಪರ್ಶಿಯನ್‍ನಲ್ಲಿ ಅತ್ತರ್ ಪದಕ್ಕೆ ಬೇರೆ ಬೇರೆ ಅರ್ಥಗಳಿವೆ, ಪನ್ನೀರು (ಗುಲಾಬಿ), ಔಷಧಿ ತಯಾರಕ, ವೈದ್ಯ ಇತ್ಯಾದಿ.]
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ನೈನವೆ
ನಿಜಾ಼ರ್ ಖಬ್ಬಾನಿ ಕವಿತೆಗಳು