ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಲೆಯ ಮೇಲೊಂದು ಲಹರಿ

ಸುಬ್ರಹ್ಮಣ್ಯ ಹೆಗಡೆ
ಇತ್ತೀಚಿನ ಬರಹಗಳು: ಸುಬ್ರಹ್ಮಣ್ಯ ಹೆಗಡೆ (ಎಲ್ಲವನ್ನು ಓದಿ)

ಮೋಡ ಕವಿದ ಮುಸ್ಸಂಜೆಯ ಆಗಸ ಮೆಲ್ಲನೆ ರಂಗೇರುತ್ತಿತ್ತು. ರವಿಯು ಮೋಡದೊಳಗೆ ಅವಿತುಕೊಳ್ಳುತ್ತಾ, ಆಗಾಗ್ಗೆ ಇಣುಕಿ ನೋಡುತ್ತಾ, ಇಳೆಯ ಜೊತೆ ಕಣ್ಣಾ ಮುಚ್ಚಾಲೆಯಾಡುತಿದ್ದ. ಸ್ವಚ್ಛಂದವಾಗಿ ಹಾರುತ್ತಿದ್ದ ಹಕ್ಕಿಗಳ ರೆಕ್ಕೆಗಳಲ್ಲಿ ಗೂಡು ಸೇರುವ ತವಕ. ತನ್ನ ಅಲೆಗಳೆಂಬ ಕಬಂಧ ಬಾಹುಗಳಲ್ಲಿ ರೇತಿಯ ಕಣ ಕಣಗಳನ್ನೂ ಬಾಚಿ ತಂದು, ದಂಡೆಯತ್ತ ಗುಡ್ಡೆ ಹಾಕುವ, ಭೋರ್ಗರೆಯುವ ನೀಲಿ ಸಮುದ್ರ. ಕಣ್ಣರಳಿಸಿದಷ್ಟೂ ಮುಗಿಯದ ಕ್ಷಿತಿಜ. ಗೂಡನ್ನು ಸೇರಲು ಗಡಿಬಿಡಿಯಲ್ಲಿ ಓಡುವ ಏಡಿಯ ಹಿಂಡುಗಳ ಹಿಂದೆ ಓಡುತ್ತಿದ್ದ ಬೇಲೆಯ ಹಕ್ಕಿಗಳು ವಾತಾವರಣಕ್ಕೆ ಜೀವಂತಿಕೆಯ ಉಸಿರು ತುಂಬಿದ್ದವು.

ಚಿತ್ರ ಕೃಪೆ : ಸುಬ್ರಹ್ಮಣ್ಯ ಹೆಗಡೆ

ಥಟ್ಟನೆ ಅನತಿ ದೂರದಿಂದ, ಕುಯ್ ಕುಯ್ ರಾಗ ಬರುತ್ತಿದ್ದ ದಿಕ್ಕಿನತ್ತ ಕಣ್ಣುಗಳು ಹೊರಳಿದವು. ಚೋಟುದ್ದ ಬಾಲದ ಎರಡು ಮರಿಗಳು ಕಡಲ ಅಲೆಗಳ ಜೊತೆ ಮುಟ್ಟಾಟವಾಡುತ್ತಿದ್ದವು. ದಂಡೆಗೆ ರಪ್ಪನೆ ಬಡಿದು ವಾಪಸ್ಸಾಗುವ ಅಲೆಗಳನ್ನು ಹಿಡಿಯಲು ಮರಿಗಳು ಓಡುವುದು, ಈ ಬಾರಿ ಇವರನ್ನು ಹಿಡಿದೇ ತೀರುವೆ ಎನ್ನುತ್ತಾ, ಪ್ರತಿ ಬಾರಿಯೂ ಎದ್ದು ಬರುವ ಹುಚ್ಚು ಅಲೆಗಳು ಬಂದೊಡನೆ ಮತ್ತೆ ದಂಡೆಯತ್ತ ಓಡಿ ಬರುವುದು. ಮರಿಗಳ ಚೇಷ್ಟೆಯನ್ನು ನೋಡುತ್ತಾ ಅಲ್ಲೊಬ್ಬಳು ತಾಯಿ ನಿರ್ಲಿಪ್ತವಾಗಿ ಕೂತಿದ್ದಳು. ಪೀಚಲು ದೇಹದ ಮರಿಗಳ ಆಟವನ್ನು ನೋಡುತ್ತಾ ಮೈಮರೆತು ನಿಂತ ನನ್ನ ಕಾಲುಗಳು, ಅಲೆಗಳು ತಂದು ಸುರಿದ ಮರಳಿನಲ್ಲಿ ಹೂತು ಹೋದವು.

ಅರಿವಿಗೆ ಬಂದರೂ ಯಾಕೋ ಕಾಲುಗಳನ್ನು ಹೊರ ತೆಗೆಯುವ ಮನಸ್ಸಾಗಲಿಲ್ಲ. ಮೆಲ್ಲನೆ ಅಪ್ಪಳಿಸುತ್ತಿದ್ದ ತರಂಗಗಳೊಂದಿಗೆ, ಮುನ್ನುವಿನೊಡನೆ ಒಡನಾಟದ ನೆನಪುಗಳು ಮನದ ಪರದೆಯ ಮೇಲೆ ಚಿತ್ತಾರ ಬರೆಯಲಾರಂಭಿಸಿದವು.

ನನ್ನ ಹಾಗು ಮುನ್ನುವಿನ ಒಡನಾಟ ಎರಡು ದಶಕಗಳಷ್ಟು ಹಳೆಯದು. ೨೦ ವರ್ಷಗಳ ಹಿಂದೆ ನಾವು ಭಟ್ಕಳದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾಗ, ಪಕ್ಕದ ಸುಶಾಂತಣ್ಣನ ಮನೆಯ ಸದಸ್ಯ ನಮ್ಮ ಮುನ್ನು! ಮರಿಯಾಗಿದ್ದಾಗಲೇ ಮನೆ ಸೇರಿಕೊಂಡಿದ್ದ ಮುನ್ನುವಿನದು ಕೆಂಚು ಬಣ್ಣ, ಸಾಧಾರಣ ಮೈಕಟ್ಟು, ಚೋಟುದ್ದ ಬಾಲ, ಬೈಸಿಕೊಳ್ಳಲು ಸಾಕಾಗುವಷ್ಟು ಚಪ್ಪಲಿ ಕಚ್ಚಿ ಹರಿಯುವ ಹವ್ಯಾಸ! ಮುನ್ನು ಜಾತಿ ನಾಯಿಯಲ್ಲ ಅವನದು ನಾಯಿ ಜಾತಿ ಅಷ್ಟೇ! ವಠಾರದಲ್ಲಿದ್ದ ಮೂರೂ ಮನೆಯವರ ಸ್ನೇಹ, ಪ್ರೀತಿ ಭರಪೂರವಾಗಿ ದೊರೆಯುತ್ತಿತ್ತು. ನಮ್ಮ ಮನೆಯ ದೋಸೆ ಹಾಗು ಒಡೆಯನ ಮನೆಯ ಬಂಗಡೆ ಮೀನೂಟದ ದೆಸೆಯಿಂದ ಕೆಲವೇ ದಿನಗಳಲ್ಲಿ ದಷ್ಟಪುಷ್ಟವಾಗಿ ಬೆಳೆಯಹತ್ತಿದ.

ಮುನ್ನುವಿನ ಪಾಲಿಗೆ ಕಣ್ಣಾಡಿಸಿದಲ್ಲೆಲ್ಲ ಹೊಸತನವೇ ತೆರೆದುಕೊಳ್ಳುತ್ತಿತ್ತು. ಮಳೆ, ಗುಡುಗು, ಮಿಂಚು, ಮಾರುತಿ ಗುಡಿಯ ಗಂಟೆಯ ನಿನಾದ, ಅಮಟೆ ಮರದ ಮೇಲೆ ಅಮಟೆ ಕಾಯಿಯನ್ನು ಕದಿಯಲು ಬರುತಿದ್ದ, ಕರಿ ಮುಸುಡಿನ, ಗಡವ ಮಂಗಗಳು, ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದ ಕಬ್ಬೆಕ್ಕು ಹೀಗೆ ಎಲ್ಲವೂ ಹೊಸತು. ಅವನಿಗೆ ಆಡಲು ಸಿಗುತ್ತಿದ್ದ, ಕೈಗೆಟಕುವ ಪ್ರಾಣಿಯೆಂದರೆ ಕಪ್ಪೆ ಮಾತ್ರ! “ಮುನ್ನೂ… ಥೈ ಪೊಳೆ ಬೆಬ್ಬೊ (ಮುನ್ನು ಅಲ್ಲಿ ನೋಡು ಕಪ್ಪೆ!)” ಎಂದರೆ ಸಾಕು ಕಿವಿಗಳೆರಡನ್ನೂ ನಿಮಿರಿಸಿ ಹಿಂದೆ ಮುಂದೆ ಯೋಚಿಸದೆ ಗಟಾರವಾದರೂ ಸರಿ ಕಪ್ಪೆಯನ್ನು ಹಿಡಿಯಲು ಸರ್ವಕಾಲಕ್ಕೂ ಸಿದ್ಧ.

ಕೆಲವೊಮ್ಮೆ ಗೇಟು ದಾಟಿ ಶಾಲೆಗೆ ಹೋಗುವ ಮಕ್ಕಳ ಹಿಂದೆ ಅವರಿಗೆ ಗೊತ್ತಿಲ್ಲದಂತೆ ಹೋಗುತ್ತಿರವಾಗ, ಹರೀಶಣ್ಣನ ಅಂಗಡಿ ದಾಟುತ್ತಿದ್ದ ಹಾಗೆ ಮಕ್ಕಳು ಮುನ್ನವನ್ನು ಗಮನಿಸಿ “ಏಯ್.. ಚು ಚು.. ಹೆತ್” ಎಂದು ಕಲ್ಲು ಹೊಡೆದು ಓಡಿಸುತ್ತಿದ್ದುದರ ಕಾರಣ ಮಾತ್ರ ಮುನ್ನುವಿಗೆ ಅರ್ಥವಾಗಲೇ ಇಲ್ಲ. ಕಾಲ ಸರಿಯಿತು. ಮುನ್ನು ಅವನ ಎದುರಿಗೆ ನಿಂತವರ ಎದೆಗೆ ಕಾಲು ಕೊಟ್ಟು ನಿಲ್ಲುವಷ್ಟು ಬೆಳೆದಿದ್ದ! ರಾತ್ರಿ ಹೊತ್ತು ವಠಾರದ ಪಹರೆ ಕಾಯುವ ಜವಾಬ್ದಾರಿಯೂ ಈತನ ಜೋಲು ಕಿವಿಗಳ ಮೇಲೇರಿ ಕುಳಿತಿತ್ತು! ವಠಾರದ ರಸ್ತೆಯ ಮೇಲೆ ಓಡಾಡುವವರನ್ನು ನೋಡಿ ಬೊಗಳುವುದೊಂದೇ ಕೆಲಸ! ಕಳ್ಳರಂತೆ ವಠಾರಕ್ಕೆ ಬರುವ ಹಾವು ಬೆಕ್ಕುಗಳನ್ನೂ, ಬೇನಾಮಿ ನಾಯಿಗಳನ್ನೂ ಅಟ್ಟಾಡಿಸಿಕೊಂಡು ಹೋಗುತ್ತಿದ್ದ.

ದಿನಗಳೆದಂತೆ ಮುನ್ನುವಿನ ಮೇಲೆ ದೂರುಗಳು ಬರಲಾರಂಭಿಸಿದವು. “ರಾತ್ರಿ ರಸ್ತೆಯಲ್ಲಿ ಯಾರಿಗೂ ಓಡಾಡಲು ಬಿಡುವುದಿಲ್ಲ..”, “ನಮ್ಮ ಮನೆಯ ಕೋಳಿಗಳು ಕಾಣಿಸುತ್ತಿಲ್ಲ…”, “ನಿಮ್ಮ ಮನೆಯ ನಾಯಿ ನಮ್ಮ ಮಗುವನ್ನು ಅಟ್ಟಿಸಿಕೊಂಡು ಬಂದಿತಂತೆ…”, “ನಿಮ್ಮ ಹಲ್ಕಟ್ ನಾಯಿನ ಕಟ್ಟಿ ಹಾಕ್ಕೊಳ್ರಿ…” ಎಂಬಂತಹ ದೂರುಗಳು ಹೆಚ್ಚಾಗತೊಡಗಿದವು. ಮುನ್ನುವಿನ ಮನೆಯವರಿಗೆ ಚಿಂತೆ ಹತ್ತಿತು. ಈಗ ಹಗಲಿನಲ್ಲಷ್ಟೇ ಅಲ್ಲದೆ, ಕತ್ತಲೆಯಲ್ಲೂ ಮುನ್ನು ಸರಪಳಿಯಲ್ಲಿ ಬಂಧಿಯಾದ. ಮುನ್ನುವನ್ನು ಬೇರೆ ಯಾರಿಗಾದರೂ ಹಸ್ತಾಂತರಿಸುವ ನಿರ್ಧಾರಕ್ಕೆ ಬಂದರು. ಯಾರಾದರೂ ಮುನ್ನುವನ್ನು ಕೊಂಡೊಯ್ಯಬಹುದೆಂದು ಕಾದರು. ಯಾರೂ ಮುಂದೆ ಬರಲಿಲ್ಲ! ಮುನ್ನುವನ್ನು ಮನೆಯಿಂದ ದೂರ ಒಯ್ದು ಬಿಡುವ ನಿರ್ಧಾರವಾಯಿತು. ಒಂದು ದಿನ ರಾತ್ರಿ ಮುನ್ನುವನ್ನು ದೂರದ ಕಾಡಿನಲ್ಲಿ ಬಿಡಲಾಯಿತು. ತನ್ನ ಜೀವನದಲ್ಲಿ ಮುನ್ನು ಮತ್ತೊಮ್ಮೆ ಬೀದಿಪಾಲಾಗಿದ್ದ!

ಮಾಸ ತುಂಬಿತು. ವಠಾರದ ಆವರಣದಲ್ಲಿ ಮುನ್ನುವಿನ ನೆನಪು ಹೀಗೆ ಸುಳಿದು ಹಾಗೆ ಮಾಯವಾಗುತ್ತಿತ್ತು. ಒಂದು ದಿನ ಕೇರಿಯಲ್ಲಿ ಕುತ್ತಿಗೆಗೆ ಬೆಲ್ಟ್ ಇಲ್ಲದ ನಾಯಿಗಳನ್ನು ಮುನ್ಸಿಪಾಲಿಟಿ ಲಾರಿಯಲ್ಲಿ ದರದರನೆ ಎಳೆದು ತುಂಬಿಕೊಂಡು ಹೋದರು. ನಮ್ಮ ಮುನ್ನುವಿಗೂ ಇದೆ ಪರಿಸ್ಥಿತಿ ಬಂದಿರಬಹುದಲ್ಲವೇ? ಎಂದು ವಠಾರದ ಎಲ್ಲರೂ ಮಾತಾಡಿಕೊಂಡರು. ‘ಛೇ ಪಾಪ!’ ಎಂಬ ಅನುಕಂಪದ ಉದ್ಘಾರ ಎಲ್ಲರ ಬಾಯಲ್ಲೂ ಹೊರಟಿತು. ಸಕಲ ಜೀವ ಜಂತುಗಳಲ್ಲಿ ಚೈತನ್ಯ ಮೂಡಿಸುವ ಮಳೆಗಾಲದ ಆರಂಭವಾಯಿತು.

–*–*–*–

ನನ್ನ ಹಿರಿಯ ಅಕ್ಕ ಚೇತನಾ ಅದಾಗಲೇ ಡಿಗ್ರಿ ಓದುತ್ತಿದ್ದಳು. ಒಂದು ದಿನ ಕಾಲೇಜು ಮುಗಿಸಿ ಪೇಟೆಯಲ್ಲಿರುವ ಬಸ್ ಸ್ಟ್ಯಾಂಡಿನ ಹತ್ತಿರ ನಡೆದು ಬರುತ್ತಿದ್ದಾಗ, ಕೆಸರಿನಿಂದ ಮೈಯ್ಯೆಲ್ಲ ಆವರಿಸಿಕೊಂಡ ನರಪೇತಲ ನಾಯಿಯೊಂದು ಅವಳ ಮೈಮೇಲೆ ಹತ್ತಿ ನಿಂತಿತು. ಚೇತನಾ ಹಠಾತ್ತಾಗಿ ಕಿರುಚಿಕೊಂಡು, ಕೈಯಲ್ಲಿದ್ದ ಛತ್ರಿಯಿಂದ ರಪ್ ಎಂದು ಬಡಿದಳು. ನಾಯಿ ಕುಂಯ್ ಎಂದಿತು. ಸುತ್ತಮುತ್ತಲಿದ್ದ ಜನರೆಲ್ಲ ಯಾವುದೋ ಹುಚ್ಚು ನಾಯಿಯೆಂದು ಭಾವಿಸಿ ಕಲ್ಲೆಸೆದರು. ಬೆಚ್ಚಿ ಓಡಿದ ನಾಯಿ ಹತ್ತಿರದ ಚರಂಡಿಯಲ್ಲಿ ಅವಿತುಕೊಂಡಿತು. ಬೆದರಿದ ಚೇತನಾ ಹತ್ತಿರವಿದ್ದ ಆಟೋ ಒಂದನ್ನು ಹತ್ತಿ ಮನೆಗೆ ಬಂದಳು. ವಠಾರದ ಗೇಟಿನೆದುರಿಗೆ ಆಟೋದಿಂದ ಇಳಿದು ನೋಡಿದಳು. ಹಿಂದುಗಡೆ ಅದೇ ನಾಯಿ ಬಾಲ ಅಲ್ಲಾಡಿಸುತ್ತ ಕುಂಯ್ ಗುಡುತ್ತ ನಿಂತಿದೆ. ಚೇತನಾ ಇರುವ ಆಟೋ ಬೆನ್ನ ಹತ್ತಿ ಅದರ ಹಿಂದೆಯೇ ಅಂದಾಜು ಎರಡು ಕಿ.ಮೀ. ದೂರ ಓಡಿಬಂದ ನಾಯಿ ಮತ್ತ್ಯಾವುದೂ ಅಲ್ಲ, ಅವನೇ ನಮ್ಮ ಮುನ್ನು.

ಯಾರಿಗೂ ಗುರುತು ಸಿಗದ ರೀತಿಯಲ್ಲಿ ಸೊರಗಿ ಪೇತಲನಾಗಿದ್ದ ನಮ್ಮ ಮುನ್ನು. “ನಂಬಿಕೆ ದ್ರೋಹವೆಸಗಿದ ಮನುಷ್ಯರಲ್ಲವೇ ಇವರು?” ಎಂಬ ಕಿಂಚಿತ್ ಭಾವನೆಯೂ ಇಲ್ಲದೆ ಎಲ್ಲರ ಬಳಿ ಸಾರಿ ಸುತ್ತ ಒಂದು ಸುತ್ತು ಹೊಡೆದು ಕುಂಯ್ ಕುಂಯ್ ರಾಗ ಎಳೆಯುತ್ತಾ, ಸುಳ್ಳೇ ಬೊಗಳುತ್ತಾ, ಇನ್ನೇನು ಬಾಲ ಕಳಚಿ ನೆಲಕ್ಕೆ ಬಿದ್ದೇ ಹೋಗುತ್ತದೆಯೇನೋ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಬಾಲವನ್ನಾಡಿಸುತ್ತ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇದ್ದ.

ಚಿತ್ರ ಕೃಪೆ : ಸುಬ್ರಹ್ಮಣ್ಯ ಹೆಗಡೆ

೨೦೦೩ ರಲ್ಲಿ ಕೆಲಸದ ನಿಮಿತ್ತ ನಮ್ಮ ತಂದೆಗೆ ಬೇರೆಡೆ ವರ್ಗಾವಣೆ ಆದ ಕಾರಣದಿಂದ ಆ ವಠಾರ ತೊರೆಯಬೇಕಾಯಿತು. ಮನೆಯ ಸಾಮಾನುಗಳನ್ನು ತುಂಬಿಕೊಂಡು ಕುಮಟೆಯತ್ತ ಹೊರಟ ಲಾರಿಯ ಹಿಂದುಗಡೆ ಕುಳಿತ ನಾನು ಹಾಗು ವಠಾರದ ಗೇಟಿನ ಕಟ್ಟೆಯನ್ನೇರಿ ಕುಳಿತು, ಲಾರಿಯತ್ತಲೇ ದಿಟ್ಟಿಸುತ್ತಿದ್ದ ಮುನ್ನುವಿನ ನಡುವೆ ಅದ್ಯಾವುದೋ ಅವ್ಯಕ್ತ ಭಾವ ಬೆಸೆಯಿತು. ಯಾವ ಕ್ಷಣದಲ್ಲಿ ಲಾರಿಯ ಚಕ್ರಗಳು ರಘುನಾಥ ರಸ್ತೆಯ ತಿರುವನ್ನು ಪಡೆಯಿತೋ, ಆ ಕ್ಷಣದಲ್ಲಿ ನನ್ನ ನೆನಪಿನ ಬುತ್ತಿಯಲ್ಲಿಯೂ ಮುನ್ನು ಅಂತರ್ಧಾನನಾದ.

–*–*–*–

ಒಂದೆರಡು ವರುಷಗಳ ನಂತರ ಭಟ್ಕಳದತ್ತ ಪ್ರಯಾಣ ಬೆಳೆಸಿದಾಗ, ನಾವು ಬಾಡಿಗೆಗಿದ್ದ ಮನೆಯತ್ತವೂ ಭೇಟಿಯಿತ್ತೆ. ಗೇಟು ತೆಗೆದಾಗ ಬಂದ ‘ಠಣ್ ಠಣ್’ ಸದ್ದಿಗೂ ಬೊಗಳದ ಮುನ್ನುವನ್ನು ನೆನೆದು ‘ಅರೇ ಇವನೆಲ್ಲಿ ಬೊಗಳಲೇ ಇಲ್ಲವಲ್ಲ’ ಎಂದುಕೊಂಡೆ.

ಸುಶಾಂತಣ್ಣನ ಜೊತೆ ಕುಶಲೋಪರಿಯ ನಡುವೆ “ ಮುನ್ನು ಎಲ್ಲಿ ಕಾಣಿಸುತ್ತಿಲ್ಲವಲ್ಲ” ಎಂದೆ. ಆಗಲೇ ಗೊತ್ತಾಗಿದ್ದು ಮುನ್ನು ಈ ಲೋಕದಿಂದ ಹೊರಟು ತಿಂಗಳುಗಳೇ ಸಂದಿದ್ದ ವಿಷಯ. ನನ್ನ “ ಏನಾಯಿತು ಅವನಿಗೆ? ” ಎಂಬ ಪ್ರಶ್ನೆಗೆ ಬಂದ ಉತ್ತರದಿಂದ, ನನ್ನ ಬಾಯಿಂದ ಹೊರಟದ್ದು “ ಅಯ್ಯೋ ದೇವ್ರೇ ಪಾಪ!” ಎಂಬ ಬೇಗುದಿ ತುಂಬಿದ ಉದ್ಗಾರವಷ್ಟೆ. ಮುನ್ನುವಿನ ಅಂತ್ಯ ಹೀಗಾಯಿತೇ? ಎಂದು ಊಹಿಸುವುದೂ ಕಷ್ಟವಿತ್ತು.

ಜಗುಲಿಯ ಮೇಲೆ ಕುಳಿತ ಜಾಗದಿಂದ ಎದ್ದು ಮನೆಯ ಹಿಂದುಗಡೆಯತ್ತ ಹೆಜ್ಜೆ ಹಾಕಿದೆ. ಅಲ್ಲಿ ಮುನ್ನು ಇರಲಿಲ್ಲ. ಉಳಿದಿದ್ದು ಕೇವಲ ಅವನನ್ನು ನೆನಪಿಸುವ ಗೋಡೆಯ ಮೇಲೆ ಅವನ ಮಣ್ಣು ಕಾಲಿನಿಂದ ಮೂಡಿದ ಹೆಜ್ಜೆಯ ಗುರುತುಗಳು, ಅವನ ಉಗುರುಗಳಿಂದ ಗೋಡೆಯ ಮೇಲೆ ಉಂಟಾದ ಗೀರುಗಳು, ತೂತು ಬಿದ್ದ ಅನ್ನದ ಪಾತ್ರೆ ಹಾಗು ಅವನ ಕೊರಳ ಸುತ್ತ ಬಿಗಿದಿರುತ್ತಿದ್ದ, ಗೋಡೆಗೆ ನೇತುಹಾಕಿದ್ದ ಕಬ್ಬಿಣದ ಸರಪಳಿ ಮಾತ್ರ!

–*–*–*–

ಚಿತ್ರ ಕೃಪೆ : ಸುಬ್ರಹ್ಮಣ್ಯ ಹೆಗಡೆ

ದಿಗಂತದಲ್ಲಿ ಕೆಂಪೇರಿ ಕರಗುತ್ತಿದ್ದ ದಿನಮಣಿ, ಧೊಪ್ಪೆಂದು ಬಡಿದು ಕೆಳಗೆ ತಳ್ಳಿದ, ಸೊಂಟದೆತ್ತರದ ಅಲೆಗಳು, ಒಂದು ಕಡೆಯ ವಾರ್ತೆಯನ್ನು ಇನ್ನೊಂದೆಡೆ ಒಯ್ಯುತ್ತಿದ್ದ ತಣ್ಣನೆಯ ಗಾಳಿ ನನ್ನನ್ನು ಮರಳಿ ವಾಸ್ತವದೆಡೆಗೆ ಕರೆತಂದವು. ಕವಿದ ನಸುಗತ್ತಲಿನಲ್ಲಿ ಕಾಲಿಗೆ ಅಂಟಿಕೊಂಡ ಮರಳನ್ನು ಕೊಡವುತ್ತಾ ಮನೆಯತ್ತ ಹೊರಟೆ. ಬೆಸ್ತನೊಬ್ಬ ಬಲೆಯನ್ನು ಮಡಚಿ ಇಡುವುದರಲ್ಲಿ ಮಗ್ನನಾಗಿದ್ದ. “ಇನ್ನೂ ಸ್ವಲ್ಪ ಹೈಸಾಸ್ಸ್ಸ್….” ಎನ್ನುತ್ತಾಉಳಿದ ನಾಲ್ವರು ದೋಣಿಯನ್ನು ದಂಡೆಯತ್ತ ಎಳೆಯುತ್ತಿದ್ದರು. ದಂಡೆಯ ಮೇಲೆ ತೆಂಗಿನ ಗರಿಗಳನ್ನು ಒಣಗಿಸಿ ಕಟ್ಟಿದ ಗುಡಿಸಲಿನೊಳಗಿನ ಒಲೆಯಲ್ಲಿ ಮೆಲ್ಲನೆ ಉರಿಯುತ್ತಿದ್ದ ಬೆಂಕಿ, ಒಲೆಯ ಎದುರಿಗೆ ಕಂಡ ಎರಡು ಪುಟ್ಟ ಕೈಗಳನ್ನು ಬೆಚ್ಚಗೆ ಮಾಡುವುದರಲ್ಲಿ ತನ್ನ ಖುಷಿಯ ಕಾಣುತ್ತಿತ್ತು.

–*–*–*–