ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಹನ್ಸ್

ಅಟ್ಲಾಸ್ ಪತಂಗ​

ಸುಬ್ರಹ್ಮಣ್ಯ ಹೆಗಡೆ
ಇತ್ತೀಚಿನ ಬರಹಗಳು: ಸುಬ್ರಹ್ಮಣ್ಯ ಹೆಗಡೆ (ಎಲ್ಲವನ್ನು ಓದಿ)

ಅಂದು ಜನವರಿ ೧೮ ೨೦೨೩. ಮಧ್ಯಾಹ್ನ ೪ರ ಹೊತ್ತಿಗೆ ಒಂದು ಲೋಟ ಕಡಕ್ ಚಹಾವನ್ನು ಹೀರಿದರೂ ಹೋಗದ ಆಲಸ್ಯದಿಂದ ‘ಹಾsss..’ ಎಂದು ಹೆಬ್ಬಾವಿನಂತೆ ಬಾಯಿ ಕಳೆದು ಆಕಳಿಸುತ್ತಿರುವಾಗಲೇ, ನಮ್ಮ ಅಮ್ಮ ಮನೆಯ ತೋಟದಲ್ಲಿರುವ ಅಮಟೆ ಮರದ ಬುಡದಲ್ಲಿ ನಿಂತು “ಸುಬ್ಬು! ಇಲ್ಲೊಂದು ದೊಡ್ಡ ಕಂಬಳಿಹುಳ ಇದ್ದು ನೋಡು ಬಾ!” ಎಂದಾಗ, ಅಬ್ಬಾ ಮಾಡಲಿಕ್ಕೆ ಅಂತೂ ಒಂದು ಕೆಲಸ ಸಿಕ್ಕಿತಲ್ಲ ಎಂದು ಎದ್ದು ಅಮಟೆ ಮರದತ್ತ ಹೊರಟೆ.

ನೋಡಲು ದಷ್ಟ ಪುಷ್ಟವಾಗಿ ಬೆಳೆದಿದ್ದ ಈ ಕಂಬಳಿಹುಳ (ಚಿತ್ರ ೧) ನಮ್ಮ ತೋಟಕ್ಕೂ ಹಾಗೂ ನನ್ನ ನೋಟಕ್ಕೂ ಹೊಸದು. ಇದನ್ನು ನೋಡಿ ಅದೆಷ್ಟು ಹಕ್ಕಿಗಳ ಬಾಯಲ್ಲಿ ನೀರೂರಿತ್ತೋ ಏನೋ! ಆ ಹೊತ್ತಿನಲ್ಲಿ ಗಮನಿಸಿದ ವಿಷಯವೇನೆಂದರೆ ಈ ಕಂಬಳಿಹುಳು ಮರದ ಎಲೆಗಳನ್ನು ತಿನ್ನದೇ, ಕೊಂಬೆಗಳ ಮೇಲೆಲ್ಲಾ ಓಡಾಡಿಕೊಂಡಿತ್ತು. ಅಲ್ಲಿಗೆ ಇದು ತನ್ನ ಮುಂದಿನ ಹಂತವಾದ ಚಿಟ್ಟೆಯೋ ಪತಂಗವೋ ಆಗಿ ಬದಲಾಗಲು ಪ್ರಶಸ್ತವಾದ ಜಾಗ ಹುಡುಕುತ್ತಿರುವುದು ಎಂದು ಖಾತ್ರಿಯಾಯಿತು. ನಂತರದ ಅರ್ಧದಿಂದ ಒಂದು ಗಂಟೆಯ ಸಮಯದಲ್ಲಿ ನಿಧಾನವಾಗಿ ಎಲೆಗಳನ್ನು ಮಡಚಿ ತಾನೂ ಗೂಡಿನೊಳಗೆ ಸೇರಿಕೊಳ್ಳುವ ಪ್ರಕ್ರಿಯೆ ಶುರುವಿಟ್ಟಿತು. ಸಂಜೆಯೊಳಗೆ ತನ್ನ ಬಾಯಿಂದ ರೇಷ್ಮೆಯಂತಹ ದಾರಗಳನ್ನು ಹೊಸೆದು ಗೂಡಿನೊಳಗೆ ಸೇರಿ ಮಾಯವಾಯಿತು!(ಚಿತ್ರ ೨).

ಮೊದಲ ನೋಟದಲ್ಲೇ ಈ ಕಂಬಳಿಹುಳು ಬಲು ಅಪರೂಪದ ಹಾಗೂ ಅಷ್ಟೇ ವರ್ಣರಂಜಿತವಾದ ಪತಂಗವಾಗಿ ಬದಲಾಗುವ ಸೂಚನೆಯಂತೂ ಕೊಟ್ಟಿತ್ತು. ಹಾಗಾದರೆ ಯಾವುದಿರಬಹುದು? ಎನ್ನುವ ಕುತೂಹಲವನ್ನು ಹುಟ್ಟಿಸಿಬಿಟ್ಟಿತ್ತು. ಎರಡು ಫೋಟೋ ಕ್ಲಿಕ್ಕಿಸಿ ಇದರ ಬಗ್ಗೆ ಹುಡುಕುತ್ತ ಕುಳಿತೆ. ಆಗಲೇ ಗೊತ್ತಾಗಿದ್ದು. ಇದು ಜಗತ್ತಿನ ಅತಿ ದೊಡ್ಡ ಪತಂಗಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಅಟ್ಲಾಸ್ ಮೊತ್ ಎಂಬ ಪತಂಗದ ಕಂಬಳಿಹುಳು ಎನ್ನುವುದು! ಮೊದಲನೆಯ ಸ್ಥಾನ ಹರ್ಕ್ಯುಲಿಸ್ ಮಾತ್ ಹಾಗು ಎರಡನೆಯ ಸ್ಥಾನ ವೈಟ್ ವಿಚ್ ಎಂಬ ಪತಂಗಕ್ಕೆ ಸೇರಿದೆ. ಗ್ರೀಕ್ ಪುರಾಣಗಳ ಪ್ರಕಾರ ಈ ಅಟ್ಲಾಸ್ ಎನ್ನುವ ಬೃಹತ್ ಮನುಷ್ಯ ಸ್ವರ್ಗವನ್ನು ಎತ್ತಿಹಿಡಿದಿರುವವನು ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಈ ಪತಂಗವನ್ನು ಆತನಿಗೆ ಹೋಲಿಸಿ ಅಟ್ಲಾಸ್ ಎಂಬ ಹೆಸರನ್ನಿಡಲಾಗಿದೆ.

ವಿಷಯ ಇಷ್ಟು ಗಂಭೀರವಾಗಿರುವಾಗ ಸುಮ್ಮನೆ ಕೂರಲಿಕ್ಕಾಗುತ್ತದೆಯೇ? ಮುಂದಿನ ಎರಡು ತಿಂಗಳುಗಳವರೆಗೆ ಅಮಟೆ ಮರದತ್ತ ಹಾದು ಹೋದಾಗಲೆಲ್ಲ ಗೂಡು ಇದೆಯೇ ಇಲ್ಲವೇ ಎಂದು ಕಣ್ಣು ಹಾಯಿಸುವುದೇ ಕೆಲಸವಾಯಿತು. ಆ ಗೂಡು ಆಧರಿಸಿದ್ದ ಕೊಂಬೆಯೂ ಒಣಗುತ್ತಾ ಬಂದದ್ದರಿಂದ ಒಂದು ದಿನ ನನ್ನ ಪತ್ನಿ ಪೂರ್ತಿ ಕೊಂಬೆಯನ್ನು ಮುರಿದು ಮನೆಗೆ ತಂದು ಇಟ್ಟಳು. ಫೆಬ್ರವರಿ ಕಳೆಯಿತು, ಮಾರ್ಚ್ ಕಳೆಯಿತು, ಏಪ್ರಿಲ್ ಕಳೆಯಿತು, ಮೇ ತಿಂಗಳ ಕೊನೆಯೂ ಬಂದಿತು, ಈ ಅಟ್ಲಾಸ್ ಮೊತ್ ಆಸಾಮಿಯ ಪತ್ತೆಯೇ ಇಲ್ಲ, ಅಮ್ಮನಿಗಂತೂ ರೇಜಿಗೆ ಹುಟ್ಟಿ ಎಸೆದು ಬಿಡುವ ಧಮಕಿಯನ್ನೂ ಹಾಕಿದರು. ನಮಗೂ ಒಳಗಿಂದೊಳಗೆ ಸತ್ತು ಹೋಗಿದೆಯೋ ಎಂಬ ಗುಮಾನಿ ಹುಟ್ಟಿ, ಅಂತೂ ಮೇ ತಿಂಗಳ ಅಂತ್ಯಕ್ಕೆ ಅಮಟೆ ಮರದ ಕೆಳಗಿನ ದರಕುಗಳ ನಡುವೆ ಹುದುಗಿಸಿಟ್ಟು ಬಂದೆವು!

ಪ್ರಕೃತಿಯ ಪವಾಡಗಳು ಹೇಗಿರುತ್ತವೆಂದರೆ ಇನ್ನೇನು ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಒಂದು ವೈಚಿತ್ರ್ಯ ಜರುಗಿಬಿಡುತ್ತದೆ. ಇಲ್ಲಿ ನಡೆದದ್ದೂ ಹಾಗೆಯೇ. ಕಷ್ಟಪಟ್ಟು ಗೂಡು ಕಟ್ಟಿದ ಜೀವಿ ಹೊರಗೆ ಬರದೇ ಹೋಯಿತಲ್ಲ ಎಂಬ ಬೇಸರದಲ್ಲಿರುವಾಗ ಜೂನ್ ೨೪,೨೦೨೩ ರಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಅಟ್ಲಾಸ್ ಮೊತ್ ದಾಸವಾಳ ಗಿಡದ ಮೇಲೆ ಕುಳಿತಿದ್ದ ಕಂಡೆ. ಅದೂ ಒಂದಲ್ಲ ಎರಡು! ನನ್ನ ಪತ್ನಿಗೆ ಹಾಗೂ ಅಮ್ಮನಿಗೆ ಕರೆದು ತೋರಿಸಿದಾಗ ಹೊರಟಿದ್ದು “ಅಯ್ಯಪ್ಪಾ…!” ಎಂಬ ಉದ್ಘಾರವಷ್ಟೇ! ಚಿತ್ರದಲ್ಲಿ ಒಂದೇ ಪತಂಗದಂತೆ ಕಂಡರೂ ಕಣ್ಣರಳಿಸಿ ಅವಲೋಕಿಸಿದರೆ ಎರಡು ಪತಂಗಗಳ ಇರುವಿಕೆಯನ್ನು ಗಮನಿಸಬಹುದು. ಒಂದು ಗಂಡು ಇನ್ನೊಂದು ಹೆಣ್ಣು ಇವೆರಡೂ ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಅನುಭವಿಸುತ್ತಿವೆ.

ಚಿತ್ರ ಕೃಪೆ : ಸುಬ್ರಹ್ಮಣ್ಯ ಹೆಗಡೆ

ಏಷ್ಯಾ ಖಂಡದ ಹಲವು ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುವ ಈ ಬೃಹತ್ ಪತಂಗಗಳ ಅಗಲವೇ ಸರಿಸುಮಾರು ೧೦ ಇಂಚುಗಳು. ಮೊಟ್ಟೆಯೊಡೆದು ಹೊರ ಬಂದ ಚಿಕ್ಕ ಕಂಬಳಿಹುಳುಗಳು ಮಾಡುವ ಮೊದಲ ಕೆಲಸವೇ ತನ್ನ ಮೊಟ್ಟೆಯ ಕವಚವನ್ನು ತಿನ್ನುವುದು. ಈ ಕಂಬಳಿಹುಳುಗಳು ಹಲವು ಹಂತದ ಬದಲಾವಣೆಯನ್ನು ಹೊಂದುತ್ತವೆ. ಮೊದಲ ಹಂತದಲ್ಲಿ ಕಪ್ಪು ಹಳದಿ ಮಿಶ್ರಿತ ಮುಳ್ಳು ಭರಿತ ಕಂಬಳಿಹುಳುವಾಗಿರುತ್ತವೆ. ನಂತರದ ಹಂತದಲ್ಲಿ ಬಿಳಿಯ ಬಣ್ಣಕ್ಕೆ ತಿರುಗುತ್ತವೆ. ನಂತರದ ಹಂತದಲ್ಲಿ ತಿಳಿಹಸುರು ಬಣ್ಣಕ್ಕೆ ತಿರುಗುತ್ತವೆ. ಹೀಗೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ತಿರುಗುವಾಗ ತನ್ನ ಹಿಂದಿನ ಹಂತದ ಪೊರೆಯನ್ನು ಕಳಚುತ್ತವೆ. ಪೊರೆ ಕಳಚಿ ಹೊಸದಾಗಿ ಹೊರಬಿದ್ದಾಗ ಆ ಪೊರೆಯನ್ನು ಮೊದಲು ತಿಂದು ಬಿಡುತ್ತವೆ. ಹೀಗೆ ಬೆಳೆಯುತ್ತ ಹೋದಂತೆ ಅವುಗಳ ಮುಳ್ಳುಗಳ ಬಣ್ಣವು ಬದಲಾಗುತ್ತ ನೀಲಿ ಬಣ್ಣವನ್ನು ಪಡೆಯುತ್ತವೆ. ಬೆಳೆಯುತ್ತ ಹೋದಂತೆ ಕಂಬಳಿಹುಳುಗಳ ಹಿಂಭಾಗದ ತುದಿಯಲ್ಲಿ ಕೇಸರಿ ವರ್ಣದ ವರ್ತುಲಾಕಾರದ ರಚನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮಾವು, ಪೇರಲೆ, ಸೀತಾಫಲ, ಚಕ್ಕೆ ಮುಂತಾದ ಗಿಡಗಳ ಎಲೆಗಳನ್ನು ಭಕ್ಷಿಸುತ್ತ ಸುಮಾರು ಒಂದೂವರೆ-ಎರಡು ತಿಂಗಳ ಬಳಿಕ ಗಾತ್ರದಲ್ಲಿ ೧೧-೧೨ ಸೆಂಟಿಮೀಟರಿನಷ್ಟು ಬೆಳೆದು ಪ್ಯೂಪ ಹಂತಕ್ಕೆ ಸಜ್ಜಾಗುತ್ತವೆ.

ಪ್ಯೂಪ ಹಂತಕ್ಕೆ ಹೋಗುವಾಗ ಎಲೆಗಳ ನಡುವೆ ತನ್ನ ರೇಷ್ಮೆಯಂಥ ನೂಲನ್ನು ಬಳಸಿ ತನ್ನನ್ನೇ ತಾನು ಸುತ್ತಿಕೊಳ್ಳಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆ ಹಲವು ಗಂಟೆಗಳವರೆಗೂ ನಡೆಯುತ್ತದೆ. ಪ್ಯೂಪ ಕೋಶದಲ್ಲಿ ಎರಡರಿಂದ-ಮೂರು ತಿಂಗಳುಗಳ ಕಾಲ (ಕೆಲವೊಮ್ಮೆ ೪ ತಿಂಗಳು) ಕಳೆದು ಪತಂಗವಾಗಿ ಬದಲಾಗುತ್ತವೆ. ಪತಂಗವಾಗಿ ಹೊರ ಬಂದ ನಂತರ ೮-೧೦ ಗಂಟೆಗಳ ಕಾಲ ರೆಕ್ಕೆಯನ್ನು ಅಗಲಿಸಿ, ಗಟ್ಟಿಗೊಳಿಸಿಕೊಳ್ಳುವುದರಲ್ಲೇ ಕಳೆಯುತ್ತವೆ. ಈ ಪತಂಗಗಳ ಮೇಲಿನ ಎರಡು ಬೃಹತ್ ರೆಕ್ಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಎರಡೂ ರೆಕ್ಕೆಗಳ ತುದಿಯಲ್ಲಿ ಇರುವ ಕಪ್ಪು ಚಿಹ್ನೆಗಳು ಅಕಸ್ಮಾತ್ ಆಗಿ ಕಂಡಾಗ ಹಾವಿನ ತಲೆಯಂತೆ ಭಾಸವಾಗುತ್ತದೆ. ಈ ಲಕ್ಷಣ ಇವುಗಳ ಪಾಲಿಗೆ ನೈಸರ್ಗಿಕವಾಗಿ ದೊರೆತ ವರ. ಈ ಹಾವಿನ ತಲೆಯನ್ನು ಕಂಡಾಗ ಶತ್ರುಗಳು ಒಮ್ಮೆ ದಿಗಿಲು ಬೀಳುತ್ತವೆ! ಇವುಗಳ ವರ್ಣ ರಂಜಿತ ರೆಕ್ಕೆಗಳು ಸಹ ಭಯವನ್ನುಂಟು ಮಾಡುವಂತೆಯೇ ಇವೆ.

ಒಮ್ಮೆ ಪತಂಗವಾಗಿ ಬದಲಾದ ನಂತರ ಅವುಗಳಿಗೆ ಬಾಯಿ ಎಂಬುದು ಇರುವುದಿಲ್ಲ. ಕಂಬಳಿಹುಳುವಾಗಿದ್ದಾಗ ತಿಂದ ಆಹಾರದ ಬಲದಿಂದಲೇ ತಮ್ಮ ಮುಂದಿನ ದಿನಗಳನ್ನು ಬದುಕಬೇಕಾಗುತ್ತದೆ. ಹಾಗಾಗಿಯೇ ಈ ಪತಂಗಗಳು ತುಂಬಾ ದೂರದವರೆಗೆ ಹಾರುವುದಿಲ್ಲ. ಶಕ್ತಿ ವ್ಯಯವಾಗಬಾರದಲ್ಲ..!

ಈ ಅಟ್ಲಾಸ್ ಪತಂಗಗಳಲ್ಲಿ ಹೆಣ್ಣು ಪತಂಗ ಗಂಡಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಪತಂಗಗಳಾಗಿ ಬದಲಾದ ನಂತರ ಇವುಗಳ ಉದ್ದೇಶ ಸಂತಾನೋತ್ಪತ್ತಿ ಮಾತ್ರ. ಹೆಣ್ಣು ಪತಂಗಗಳು ಫೆರೊಮೋನ್ ಎಂಬ ರಾಸಾಯನಿಕವನ್ನು ಸ್ರವಿಸುತ್ತವೆ. ಗಂಡು ಪತಂಗಗಳು ತಮ್ಮ ವಿಶಿಷ್ಟವಾದ ಆಂಟೆನಾದ ಸಹಾಯದಿಂದ ಈ ರಾಸಾಯನಿಕವನ್ನು ಗ್ರಹಿಸುತ್ತಾ ಹೆಣ್ಣಿನ ಹತ್ತಿರ ಧಾವಿಸುತ್ತವೆ. ನಂತರ ಶುರುವಾಗುವುದೇ ಸಂತಾನೋತ್ಪತ್ತಿಯ ಪ್ರಕ್ರಿಯೆ. ಈ ಕ್ರಿಯೆ ಸುಮಾರು ೨೪ ಗಂಟೆಗಳ ತನಕವೂ ಜರುಗಬಲ್ಲದು. ಒಮ್ಮೆ ಈ ಪ್ರಕ್ರಿಯೆ ಮುಗಿಯಿತು ಎಂದರೆ ಈ ಪತಂಗಗಳ ಕೊನೆಯು ಸನ್ನಿಹಿತವಾಯ್ತೆಂದು ಅರ್ಥ! ನಂತರದ ಒಂದೆರಡು ದಿನಗಳಲ್ಲಿ ಹೆಣ್ಣು ಸೂಕ್ತವಾದ ಜಾಗವನ್ನು ಹುಡುಕಿ ಮೊಟ್ಟೆಗಳನ್ನಿಟ್ಟು ಸಾಯುತ್ತವೆ. ಗಂಡು ಸಹ ಸದ್ದಿಲ್ಲದೇ ಭೂಲೋಕವನ್ನು ತ್ಯಜಿಸುತ್ತದೆ. ಪ್ರಕೃತಿಯ ಹುಟ್ಟು ಸಾವಿನ ಚಕ್ರ ಹೀಗೆಯೇ ಸಾಗುತ್ತದೆ.

ಚಿತ್ರ ಕೃಪೆ : ಸುಬ್ರಹ್ಮಣ್ಯ ಹೆಗಡೆ

ಈ ಪತಂಗಗಳು ಕೇವಲ ರಾತ್ರಿಯ ಸಮಯದಲ್ಲಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತವೆ. ಹಗಲಿನಲ್ಲಿ ವಿರಮಿಸುತ್ತವೆ. ಹಾಗಾಗಿ ಈ ಪತಂಗಗಳನ್ನು ನೋಡಬೇಕೆಂದರೆ ಕತ್ತಲಲ್ಲಿ ಕಾಲಿಡಬೇಕು ಹಾಗೆ ಭರಪೂರ ಅದೃಷ್ಟವೂ ಬೇಕು!