ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದು ಬರೀ ಬೆಳಗಲ್ಲವೇ ಬಂಗಾರೀ

ಪ್ರೇಮಶೇಖರ ಅವರ ಒಂದು ಕವಿತೆ.
ಪ್ರೇಮಶೇಖರ
ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)

ನಾನು
ಬೆಳಿಗ್ಗೆ ಎದ್ದು
ಕವನ ಬರೆಯಲು ಕೂತುಕೊಂಡೆ,
ಲಲಿತೆ
ಚಹಾ ಮಾಡಿ ತಂದಳು,
ನಾನು ಚಹಾ ಕುಡಿದು
ಮುಗಿಸುವವರೆಗೆ ಕಾದಳು,
ಆಮೇಲೆ ಕೇಳಿದಳು:
ನನಗೆ ಕೊರೋನಾ
ಬಂದರೇನು ಮಾಡ್ತೀರಿ?

ನಾನು
ಯೋಚಿಸತೊಡಗಿದೆ.

ತಕ್ಷಣ
ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕು,
ಡಾಕ್ಟರ್ ಹೇಳಿದ್ದೆಲ್ಲ ಮಾಡ್ಬೇಕು,
ಮೋದಿಯವರು ಹೇಳಿದ್ದೆಲ್ಲ ಕೇಳ್ಬೇಕು,
ಡಬ್ಲ್ಯೂಹೆಚ್‍ಓ ಹೇಳಿದ್ದೆಲ್ಲ ಪಾಲಿಸ್ಬೇಕು,
ಅರಿಶಿಣಹಾಲನ್ನೂ ಕುಡಿಸ್ಬೇಕು,
ಪ್ರಾಣಾಯಾಮವನ್ನೂ ಮಾಡಿಸ್ಬೇಕು
ಎಲ್ಲ ಕೇರ್ ತಗೋಬೇಕು,
ಹೇಗಾದ್ರೂ ಸರಿ
ಉಳಿಸ್ಕೋಬೇಕು.

ಇದನ್ನೆಲ್ಲ
ನನ್ನ ಬಂಗಾರಿಗೆ ಹೇಳಬೇಕು.

ಪಕ್ಕಕ್ಕೆ ತಿರುಗಿದೆ.
ಅವಳಿರಲಿಲ್ಲ.
ಹುಡುಕಿಕೊಂಡು ಹೋದೆ.
ಕಿಚನ್‍ನಲ್ಲಿ ಚಹಾ
ಕಪ್ಲು, ಬಸಿ, ಪಾತ್ರೆ ತೊಳೆಯುತ್ತಿದ್ದಳು,
ಗಸಗಸ, ಗಣಗಣ, ಜಳಜಳ…
ಹೇಳಿದೆ, ಕೇಳಿಸ್ತಿಲ್ಲ
ಸದ್ದು ಅಂದಳು.
ಇರ್ರೀ ಅಂತಲೂ ಸೇರಿಸಿದಳು.
ಸುಮ್ಮನಾದೆ.

ತಲೆ
ಸುಮ್ಮನಿರಲಿಲ್ಲ.

ಅವಳು
ತಿರುಗುವುದನ್ನೇ ಕಾದಿದ್ದು
ಕೇಳಿದೆ ನನಗೆ
ಕೊರೋನಾ ಬಂದರೇನು ಮಾಡುತ್ತೀ?
ಅಯ್, ಬಿಡ್ತು ಅನ್ನಿ
ಅಂದಳು ತಟಕ್ಕನೆ.
ಕವನ ಬರೆಯೋದು ಬಿಟ್ಟು
ಇದೇನು ಮಾತು ಅಂತ ಆಡ್ತೀರಿ
ಅಂತಲೂ ಸೇರಿಸಿದಳು ಮೆಲ್ಲನೆ.
ಲೋಟವೆತ್ತಿ ಗಟಗಟ
ನೀರು ಕುಡಿದಳು.

ಈ ಬೆಳಗು ಕವನವಾಗಿ
ಕವನ ಕೊರೋನಾ ಆಗಿ
ಕೊರೋನಾ ಕೇರ್ ಆಗಿ
ಕೇರ್ ಮಡದಿಯಾಗಿ
ಮಡದಿ ಕವನವಾಗಿ
ಒಂದು ಸುತ್ತು ತಿರುಗಿ ನಿಂತಿತು.

ನಾನು
ಇನ್ನೊಂದು ಕಪ್ ಚಹಾ ಚಿನ್ನೂ
ಅಂದೆ.