ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ ಸಮಯ ಕಳೆದು ಹೋಗುತ್ತದೆ.

ಗೀತಾ ಡಿಸಿ

‘ಸುಖದಲ್ಲಿದ್ದವನಿಗೆ ದುಃಖವಾಗಬೇಕು. ದುಃಖದಲ್ಲಿದ್ದವನಿಗೆ ಸುಖವಾಗಬೇಕು. ಇವೆರಡಕ್ಕೂ ಅನ್ವಯವಾಗಿ ಉತ್ತರಿಸು’ ಎಂದು ಅರ್ಜುನ ಒಮ್ಮೆ ಕೃಷ್ಣನನ್ನು ಕೇಳಿದಾಗ, ಅವ ಕೊಡುವ ಉತ್ತರ: ‘ಈ ಸಮಯ ಕಳೆದು ಹೋಗುತ್ತದೆ.’
ಇದೇ ಶೀರ್ಷಿಕೆಯಲ್ಲಿ ಪ್ರವೀಣ್ ನಾಯಕ್ ಹಿಚಕಡ ಅವರು ತಮ್ಮ ೪೦ ಅಂಕಣ ಬರಹಗಳನ್ನು ಒಟ್ಟಾಗಿಸಿ ಪುಸ್ತಕವಾಗಿ ಪ್ರಕಟಿಸಿದ್ದಾರೆ. ಇಲ್ಲಿನ ಎಲ್ಲಾ ಬರಹಗಳಿಗೂ ಈ ಶೀರ್ಷಿಕೆ ಒಂದು ರೂಪಕದಂತಿದೆ.
ಉತ್ತರ ಕನ್ನಡ ಜಿಲ್ಲೆಯ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಗೊಂಡ ಈ ಅಂಕಣ ಬರಹಗಳು,

“ನರೆ ಕೆನ್ನೆಗೆ ತೆರೆ ಗಲ್ಲಕೆ
ಶರೀರ ಗೂಡುವೋಗದ ಮುನ್ನ
ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ
ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ”

ಎನ್ನುವ ಬಸವಣ್ಣನ ವಚನವನ್ನು ನೆನಪಿಸುತ್ತವೆ. ಇಲ್ಲಿನ ಆಶಯದ ಸಾರ್ಥಕತೆಯ ಭಾವ ಕೆಲವರನ್ನಾದರೂ ತಲುಪಿದ್ದರೆ ಲೇಖಕರ ಬರವಣಿಗೆ ಸಾರ್ಥಕಗೊಂಡಂತೆ.

ಇಲ್ಲಿನ ಕಥೆಯೊಂದು ಹೀಗಿದೆ:

ರಾಮ-ರಾವಣರ ಯುದ್ಧ ಇನ್ನೇನು ಆರಂಭಗೊಳ್ಳಬೇಕಾಗಿದೆ. ರಾಮ ಯುದ್ಧಕ್ಕೆ ಹೊರಡುವ ಮೊದಲು ತನ್ನ ಕೈಗೆ ಕಂಕಣ ಕಟ್ಟಿಸಿಕೊಳ್ಳಬೇಕಾಗಿದೆ. ಲಂಕೆಯಲ್ಲಿ ಆ ಸಮಯಕ್ಕೆ ಯಾವ ಪುರೋಹಿತರೂ ಸಿಗುವುದಿಲ್ಲ. ಕೊನೆಗೆ ಬ್ರಹ್ಮ ಗುರುವಾದ ರಾವಣನನ್ನೇ ಕರೆತರಲು ರಾಮ ಹನುಮಂತನಿಗೆ ಹೇಳುತ್ತಾನೆ. ಹನುಮಂತ ರಾವಣನಲ್ಲಿಗೆ ಹೋಗಿ ವಿಷಯ ಮುಟ್ಟಿಸಿದಾಗ, ರಾವಣನ ಮಗ ಇಂದ್ರಜಿತು ಶತ್ರುವಿಗೆ ಕಂಕಣ ಕಟ್ಟಬಾರದೆಂದು ತಡೆಯುತ್ತಾನೆ. ಅದಕ್ಕೆ ರಾವಣ, “ಶತ್ರುತ್ವವಿರುವುದು ಅಯೋಧ್ಯೆಯ ರಾಮನಿಗೆ ಮತ್ತು ಲಂಕೇಶ್ವರ ರಾವಣನಿಗೇ ಹೊರತು, ಆಚಾರ್ಯ ರಾವಣನಿಗೂ ರಾಮನಿಗೂ ಅಲ್ಲ. ಈಗ ನಾನು ಗುರು. ಆತ ಶಿಷ್ಯ. ಕುಲವೃತ್ತಿಯನ್ನು ನಡೆಸಲು ಹೋಗಬೇಕಾದದ್ದು ನನ್ನ ಕರ್ತವ್ಯ” ಎಂದು ಬ್ರಹ್ಮ ಗುರುವಾಗಿ ರಾಮನಿಗೆ ಕಂಕಣ ಕಟ್ಟಿ ಗುರುಕಾಣಿಕೆ ಪಡೆದು ಹೊರಡುತ್ತಾನೆ. ಅಪ್ರಾಮಾಣಿಕತೆಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ‘ಬೌದ್ಧಿಕ ಪ್ರಾಮಾಣಿಕತೆ’ಯ ಅವಶ್ಯಕತೆ ಇದೆ ಎನ್ನುವುದನ್ನು ಈ ಕಥೆಯ ಮೂಲಕ ಲೇಖಕರು ನೆನಪಿಸುತ್ತಾರೆ. ಇಲ್ಲಿನ ಪ್ರತಿ ಲೇಖನಕ್ಕೂಇಂಥ ಒಂದೊಂದು ಕಥೆಯಿರುವುದು ಈ ಪುಸ್ತಕದ ವಿಶೇಷ.

ವಯೋಮಾನದ ಹಂಗಿಲ್ಲದೆ ತನ್ನ ತಾನರಿಯುವ ಅಥವಾ ಆತ್ಮಾವಲೋಕನ ಮಾಡಿಕೊಳ್ಳುವ, ತನ್ನೊಳಗಿನ ನಕಾರಾತ್ಮಕ ವಿಚಾರಗಳನ್ನು ಬದಿಗಿಟ್ಟು ಸಕಾರಾತ್ಮಕವಾದ ಚಿಂತನೆಗೆ ಅನುವು ಮಾಡಿಕೊಡುವ ವೈಚಾರಿಕ ನಿಲುವುಗಳು ಇಲ್ಲಿರುವುದರಿಂದ, ಇಲ್ಲಿನ ಬರಹಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ಅವಕಾಶವಿದೆ.

ಕಾಲ ಯಾವುದೇ ಇರಲಿ, ಮನುಷ್ಯರ ವರ್ತನೆಗಳು ಮಾತ್ರ ಅಷ್ಟು ಸುಲಭಕ್ಕೆ ಬದಲಾಗದು! ಎಲ್ಲಾ ಕಾಲದಲ್ಲೂ ಎಲ್ಲ ರೀತಿಯ ಜನರಿರುತ್ತಾರೆ. ಒಳಿತು-ಕೆಡುಕಿನ ಸಂಘರ್ಷಗಳು ಇರುತ್ತವೆ. ಅತ್ಯಾಧುನಿಕ ಕಾಲವೆಂದು ಕರೆದುಕೊಳ್ಳುವ, ಬೆರಳತುದಿಯಲ್ಲೇ ಜಗತ್ತನ್ನು ಸುತ್ತಬಹುದಾದ ಈ ತಂತ್ರಜ್ಞಾನದ ಕಾಲವೂ ಇದರಿಂದ ಹೊರತಾಗಿಲ್ಲ. ಹಿಂದೆಂದಿಗಿಂತಲೂ ಇಂದು ಶಿಕ್ಷಣ ಕ್ಷೇತ್ರದಲ್ಲಿ ಪದವೀಧರರು ಹೆಚ್ಚಾಗುತ್ತಿದ್ದಾರೆ. ಒಂದು ಕಾಲಕ್ಕಿದ್ದ ಬಡತನ ಈಗಿರದೆ, ಹಣದ ಹರಿವೂ ಜೋರಾಗಿಯೇ ಇದೆ. ದೇಹಕ್ಕೆ ಆಯಾಸವಾಗದಂತೆ ಯಂತ್ರನಾಗರೀಕತೆಯಿಂದಾಗಿ ಕಾಲಬುಡಕ್ಕೆ ಸುಖಸುರಿದುಕೊಳ್ಳುವಷ್ಟು ಅನುಕೂಲಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಆದರೆ, ವ್ಯಕ್ತಿತ್ವದಲ್ಲಿ ಉನ್ನತ ಮಟ್ಟಕ್ಕೇರಿದ್ದೇವೆಯೇ? ಎಂಬ ಪ್ರಶ್ನೆ ಹಾಗೇ ಉಳಿದುಬಿಟ್ಟಿದೆ. ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕವಾಗಿ ಆಲೋಚಿಸುವ ಬದಲಾವಣೆ ಕಾಣದಿದ್ದರೆ ಎಷ್ಟೇ ಎತ್ತರಕ್ಕೇರಿರಲಿ, ಎಷ್ಟೇ ಓದಿರಲಿ, ಎಷ್ಟೇ ಸಂಪಾದಿಸಿರಲಿ ಏನೂ ಪ್ರಯೋಜನವಿಲ್ಲ ಎನ್ನುವ ಕಡೆ ಗಮನ ಸೆಳೆದಿರುವುದಲ್ಲದೆ, ಇಂದು ಇಡೀ ಜಗತ್ತನ್ನೇ ಒಂದು ಹಳ್ಳಿ ಎಂದು ಪರಿಭಾವಿಸುತ್ತಿರುವ ನಾವು ಹತ್ತಿರದ, ಜೊತೆಗಿರುವ ಸಂಬಂಧಗಳನ್ನೇ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿರುವ ಇಂದಿನ ಬದುಕಿಗೆ ಕನ್ನಡಿ ಹಿಡಿದಂತಿವೆ ಇಲ್ಲಿನ ಬರಹಗಳು.

ಪುಸ್ತಕದ ಶೀರ್ಷಿಕೆಯೇ ಇಲ್ಲಿನ ಒಟ್ಟು ಬರಹಗಳಿಗೆ ಒಂದು ರೂಪಕದಂತಿದೆ. ನಮಗೆ ಸಿಕ್ಕಿರುವ ‘ಸಮಯ ಕಳೆದುಹೋಗುವ’ ಮುನ್ನ ನಾವು ಒಂದಿಷ್ಟು ಒಳಿತಿಗಾಗಿ ಜೀವಿಸೋಣ ಎನ್ನುವ ಸಂದೇಶವಿದೆ. ಇರುವುದೊಂದೇ ಜೀವ, ಬದುಕು. ನಮ್ಮ ಜೀವಿತಾವಧಿಯಲ್ಲಿ ನಮಗೆ ಸಿಕ್ಕ ಸಮಯದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಬದುಕಿಬಿಡಬೇಕೆಂಬ ಹಂಬಲ, ಚಿಂತನೆ, ಕಾಳಜಿಗಳು ಇಲ್ಲಿವೆ. ಜೊತೆಗೆ ಹಾಗೆ ಸಕಾರಾತ್ಮಕವಾಗಿ ಚಿಂತಿಸಲು ಪರಸ್ಪರ ಸಹಕಾರ ಅತ್ಯಗತ್ಯ. ಇದು ಇಲ್ಲಿ ಜೀವಿಸುವ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಅದನ್ನು ಎಚ್ಚರಿಕೆಯಿಂದ ನಿಭಾಯಿಸಿದರೆ, ವ್ಯಕ್ತಿ, ಕುಟುಂಬ, ಸಮಾಜ, ಬಂಧು ಬಳಗ ಎಲ್ಲರ ಬಾಂಧವ್ಯಗಳು ಚೆನ್ನಾಗಿರುತ್ತದೆನ್ನುವ ಸಕಾರಾತ್ಮಕ ಆಶಯ ಇಲ್ಲಿನ ಲೇಖನಗಳದ್ದು.

ಸರಳವಾಗಿ, ನೇರವಾಗಿ ಯಾವುದೇ ಗೊಂದಲಗಳಿಲ್ಲದೆ ಸ್ಪಷ್ಟವಾಗಿದ್ದು, ಸಹಜವಾಗಿ ಸಂತೋಷದಿಂದ ಬದುಕುವ ಸಾಧ್ಯತೆಗಳಿದ್ದಾಗಲೂ ನಮ್ಮಲ್ಲಿರುವ ಕುರುಡು ನಂಬಿಕೆಗಳಿಂದಾಗಿ, ಕುರುಡು ಅನುಕರಣೆಗಳಿಂದಾಗಿ, ಅಹಂಕಾರದಿಂದಾಗಿ, ಸ್ವಾರ್ಥ, ಹೊಟ್ಟೆಕಿಚ್ಚು, ಸಹವಾಸ ದೋಷಗಳಿಂದಾಗಿ… ಹೀಗೆ ನಮ್ಮ ಬದುಕಿನಲ್ಲಿ ಅನಗತ್ಯ ಗೊಂದಲವನ್ನು, ನೋವನ್ನು ನಾವೇ ಆಹ್ವಾನಿಸಿ ಸಂಕಟಗಳನ್ನು, ಸಂಕಷ್ಟಗಳನ್ನು ಎದುರುಗೊಳ್ಳುತ್ತೇವೆ ಎನ್ನುವ ವಿಚಾರಗಳಿವೆ. ಮಕ್ಕಳನ್ನು ಬೆಳೆಸುವ ವಿಧಾನದಿಂದ ಮೊದಲುಗೊಂಡು ಹಿರಿಯರಿಗಿರಬೇಕಾದ ಜವಾಬ್ದಾರಿಯನ್ನು ಕುರಿತು ಓದುಗರ ಗಮನಕ್ಕೆ ತರುತ್ತಾರೆ.

ಆಧುನಿಕತೆಯ ಹೆಸರಿನಲ್ಲಿ ಯುವ ಜನತೆ ದಿಕ್ಕು ತಪ್ಪುತ್ತಿದೆ ಎಂದು ಸಾಮಾನ್ಯವಾಗಿ ನಾವು ದೂರುತ್ತಿರುತ್ತೇವೆ. (ಇದು ಎಲ್ಲ ಕಾಲದ ದೂರೂ ಹೌದು!) ಆದರೆ ಯುವಜನತೆಯ ಕಣ್ಣಿಗೆ ಬೀಳುವುದೇ ತಮ್ಮ ಹಿರಿಯರ ನಡಾವಳಿಗಳು. ತಾಯ್ತಂದೆಗಳು, ಶಿಕ್ಷಕರು, ಮಾಧ್ಯಮಗಳು(ಸಿನೆಮಾ, ಟಿವಿ, ಮೊಬೈಲ್…), ಆಡಳಿತದ ಚುಕ್ಕಾಣಿ ಹಿಡಿದವರು, ಮಠಾಧೀಶರು… ಇವರೆಲ್ಲರೂ ಎಷ್ಟು ಜವಾಬ್ದಾರಿಯುತವಾಗಿ, ಆದರ್ಶಪ್ರಾಯವಾಗಿ ಇರುತ್ತಾರೋ ಯುವಜನತೆಯೂ ಅಷ್ಟೇ ಜವಾಬ್ದಾರಿಯಿಂದ ವರ್ತಿಸುತ್ತದೆ. ಯಥಾ ರಾಜ ತಥಾ ಪ್ರಜಾ. ಆದ್ದರಿಂದ ಕೇವಲ ಯುವಜನತೆಯನ್ನು ದೂರಿ ಪ್ರಯೋಜನವಿಲ್ಲ. ಅವರನ್ನು ಮುನ್ನಡೆಸುವಾಗ ಹಿರಿಯರು ಎಚ್ಚರಿಕೆಯಿಂದ ಇರಬೇಕಾಗುತ್ತದೆನ್ನುವುದು ‘ಆಧುನಿಕತೆಯಲ್ಲಿ ಬದಲಾಗುತ್ತಿರುವ ಮೌಲ್ಯಗಳು’
ಲೇಖನದಲ್ಲಿದೆ. ಇಲ್ಲಿ ಲೇಖಕರಿಗೆ ಯುವಜನತೆಯ ಬಗೆಗೆ ಕಾಳಜಿಯಿದೆ ಹಾಗೂ ಹಿರಿಯರೆನಿಸಿಕೊಂಡವರ ಬೇಜವಾಬ್ದಾರಿತನಕ್ಕೆ ಸಾಣೆಹಿಡಿದಿರುವುದೂ ಇದೆ.

ಮತ್ತೊಂದು ಕಥೆ ಹೀಗಿದೆ:

ಕುದುರೆಗಳ ಬಗೆಗೆ ಅಪಾರ ಹುಚ್ಚಿರುವ ರಾಜನೊಬ್ಬನಿಗೆ ತನ್ನ ಪ್ರೀತಿಯ ಕುದುರೆಯೊಂದಕ್ಕೆ ವಿಶೇಷ ತರಬೇತಿಯನ್ನು ನೀಡಲು ತರಬೇತುದಾರನೊಬ್ಬನನ್ನು ನೇಮಿಸುತ್ತಾನೆ. ತರಬೇತಿ ಪಡೆದ ಕುದುರೆ ಇದ್ದಕ್ಕಿದ್ದಂತೆ ಕುಂಟಲಾರಂಭಿಸುತ್ತದೆ. ಯಾವೆಲ್ಲಾ ವೈದ್ಯರು ಬಂದು ಪರೀಕ್ಷಿಸಿದರೂ ದೈಹಿಕವಾಗಿ ಏನೂ ತೊಂದರೆಯಿಲ್ಲವೆಂದು ತಿಳಿಸುತ್ತಾರೆ. ರಾಜ ಇದೇ ಚಿಂತೆಯಲ್ಲಿರುವಾಗ, ಅಲ್ಲಿಗೆ ಬಂದ ವಿಶಿಷ್ಟ ಜ್ಞಾನಿಯೊಬ್ಬರು ವಿಷಯ ತಿಳಿದು, ಒಂದೆರಡು ದಿನ ಕಾಲಾವಕಾಶ ಕೇಳಿ, ‘ಕುದುರೆಯಲ್ಲಿ ಯಾವ ದೋಷವೂ ಇಲ್ಲ. ಆದರೆ ಮೊದಲು ತರಬೇತುದಾರನನ್ನು ಬದಲಿಸಿ’ ಎನ್ನುತ್ತಾನೆ. ಕಾರಣ ತರಬೇತುದಾರ ಕುಂಟ. ಅವನನ್ನು ಅನುಕರಿಸುತ್ತಿದ್ದ ಕುದುರೆ ತಾನೂ ಕುಂಟುತ್ತಿರುತ್ತದೆ! ತರಬೇತುದಾರನನ್ನು ಬದಲಿಸಿದ ಮೇಲೆ ಅದು ಕುಂಟುವುದನ್ನು ನಿಲ್ಲಿಸುತ್ತದೆ. ಕೇವಲ ಹಿರಿಯರೆಂದೋ, ಗುರುವೆಂದೋ, ಉನ್ನತ ವ್ಯಕ್ತಿ ಎಂದೋ ಯಾರನ್ನೂ ಕುರುಡಾಗಿ ಅನುಕರಿಸಬಾರದು. ವಿವೇಕವಿಲ್ಲದ, ವಿವೇಚನೆಯಿಲ್ಲದ ಅನುಕರಣೆಯಿಂದ ಅಪಾಯಗಳೇ ಹೆಚ್ಚು, ಮನೆಯಲ್ಲಿ ತಂದೆ ತಾಯಿ, ಶಾಲೆಯಲ್ಲಿ ಗುರುಗಳು, ಸಮಾಜದಲ್ಲಿ ಧಾರ್ಮಿಕ ಗುರುಗಳು, ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಇವರೆಲ್ಲ ಸರಿಯಾದ ಮಾರ್ಗದಲ್ಲಿರಬೇಕು. ಇಂಥವರೇ ಕುಂಟಿದರೆ ಇಡೀ ಸಮಾಜವೇ ಕುಂಟುವಂತಾಗುತ್ತದೆ ಎನ್ನುವುದನ್ನು, ‘ರಾಜನ ಕುಂಟು ಕುದುರೆ ಕಥೆ’ ಮೂಲಕ ಮಾರ್ಮಿಕವಾಗಿ ನಿರೂಪಿಸುತ್ತಾರೆ.

ಕೆಲವರಿಗೆ ಯಾವಾಗಲೂ ನಕಾರಾತ್ಮಕವಾಗಿಯೇ ಎಲ್ಲವನ್ನು ನೋಡುವ ಅಭ್ಯಾಸ. ಇನ್ನೊಬ್ಬರ ಏಳಿಗೆಯನ್ನು ನೋಡಿ ಸಹಿಸುವುದಿಲ್ಲ. ಸದಾ ಟೀಕಿಸುತ್ತಾ ಇನ್ನೊಬ್ಬರ ಮನ ನೋಯಿಸುವ ಕೆಲಸವನ್ನು ಮಾಡದಿದ್ದರೆ, ಉಂಡಿದ್ದು ಅರಗುವುದಿಲ್ಲ. ಜೊತೆಗೇ ಇದ್ದು ಮಾನಸಿಕ ಹಿಂಸೆ ಕೊಡುತ್ತಿರುತ್ತಾರೆ. ಇಂಥವರ ಮಾತಿಗೆ ಕಿವಿಗೊಡದೆ ನಮ್ಮ ಕೆಲಸಗಳ ಕಡೆ ಗಮನಹರಿಸಬೇಕೆನ್ನುವುದು ಬಸವಣ್ಣನ ‘ಎನ್ನ ಕಿವುಡನ ಮಾಡಯ್ಯ ತಂದೆ’ ವಚನವನ್ನು ನೆನಪಿಸುತ್ತದೆ.

ಇದು ಸ್ಪರ್ಧಾ ಯುಗ. ಮಕ್ಕಳು ಯಾವಾಗಲೂ ನಂಬರ್ ಒನ್ ಆಗಿರಬೇಕೆಂಬ ಅತೀ ಮಹತ್ವಾಕಾಂಕ್ಷೆ ಬಹುತೇಕ ತಂದೆ ತಾಯಂದಿರದ್ದು. ತಮ್ಮ ಮಕ್ಕಳು ಸೋಲನ್ನೇ ಕಾಣಬಾರದು ಎಂಬ ಮೋಹ ಬೇರೆ! ಇಂಥವರ ಬಗ್ಗೆ ಓದುಗರ ಗಮನ ಸೆಳೆದು ಮಕ್ಕಳಿಗೆ ಸೋಲಿನ ರುಚಿಯು ಗೊತ್ತಿರಬೇಕೆಂಬುದನ್ನು ಅಬ್ರಹಾಂ ಲಿಂಕನ್ ತನ್ನ ಮಗನಿಗೆ ಸೋಲಿನ ಅನುಭವ ಗೊತ್ತಿರುವಂತೆ ಗಮನಿಸಿಕೊಳ್ಳಿ ಎಂದು ಮಗನ ಶಿಕ್ಷಕಿಗೆ ಪತ್ರ ಬರೆದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮಕ್ಕಳಿಗೆ ಅನಗತ್ಯವಾಗಿ ವಿಪರೀತ ಒತ್ತಡ ಹಾಕುವುದನ್ನು ತಪ್ಪಿಸಬೇಕೆನ್ನುವ ‘ಸೋಲೆಂಬ ಅನುಭವ’ ಲೇಖನ ನಾವೊಮ್ಮೆ ಸಮಾಧಾನದಿಂದ ಯೋಚಿಸುವಂತೆ ಮಾಡುತ್ತದೆ.

ನಾನು, ನಾನು ಎಂಬ ಅಹಂಕಾರದಿಂದ ವರ್ತಿಸುವ, ಕೃತಘ್ನತಾ ಮನೋಭಾವವುಳ್ಳವರಿಂದ ದೂರವಿರುವಂತೆ ಸೂಚಿಸುವ, ಅವಿವೇಕಿಗಳಿಂದಾಗುವ ದುರಂತಗಳನ್ನು ಕಾಣಿಸುವ, ಸ್ವಾತಂತ್ರ್ಯವೆಂದರೆ ಸ್ವೇಚ್ಛೆ ಅಲ್ಲ ಅದೊಂದು ಜವಾಬ್ದಾರಿ ಎಂದು ಎಚ್ಚರಿಸುವ, ಸಹವಾಸ ದೋಷದಿಂದ ಎಂಥಾ ಘನವಾದ ವ್ಯಕ್ತಿತ್ವವೂ ಹೇಗೆ ವಿನಾಶದಂಚಿಗೆ ತಲುಪುತ್ತದೆನ್ನುವ, ವ್ಯಕ್ತಿತ್ವ ವಿಕಸನಗೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೇಗೆ ಕುಸಿಯುತ್ತದೆ ಎಂಬುದನ್ನು ಅವಲೋಕಿಸುವ, ಮಾನವೀಯತೆಯೇ ದೇವರಾಗಬೇಕೇ ವಿನಃ ದೇವಸ್ಥಾನಗಳಿಗೆ ಎಡತಾಕುವುದಲ್ಲ ಎನ್ನುವುದನ್ನು ಕಾಣಿಸುವ, ಧಾರ್ಮಿಕವಾಗಿ ಸುತ್ತಲಿರುವವರ ಕಷ್ಟಗಳಿಗೆ ನಾವು ಸ್ಪಂದಿಸುವಂತಹ ಮನೋಭಾವವಿರಬೇಕೆನ್ನುವ… ಹೀಗೆ ಲೇಖಕರ ಯಾವೆಲ್ಲಾ ಚಿಂತನೆಗಳು ಮನನೀಯವಾದದ್ದು. ಮನುಷ್ಯರಾದ ನಾವು ಬೆಳೆಯುತ್ತಾ ಪಡೆವ ಶಿಕ್ಷಣದಿಂದ, ಬದುಕಿನ ಅನುಭವಗಳಿಂದ, ನಮ್ಮ ಓದಿನ ತಿಳುವಳಿಕೆಗಳಿಂದ ಪಕ್ವಗೊಳ್ಳಬೇಕು. ಬರೀ ಪದವಿ ಇದ್ದರೆ ಸಾಲದು. ವ್ಯಕ್ತಿತ್ವ ವಿಕಸನಗೊಂಡಾಗ ಮಾತ್ರ ಸಂಪೂರ್ಣ ವ್ಯಕ್ತಿಗಳೆನಿಸಿಕೊಳ್ಳಲು ಸಾಧ್ಯ. ಇವುಗಳನ್ನು ಯಾರೂ ಹೇಳಿಕೊಟ್ಟು ಕಲಿಸುವುದಲ್ಲ ನೋಡಿ, ಗಮನಿಸಿ, ಅರಿತುಕೊಂಡು ಪ್ರಬುದ್ಧರಾಗಬೇಕೆಂದು, ವ್ಯಕ್ತಿಯ ಪಕ್ವತೆಯಿಂದಾಗಿ ಸಮಾಜವೂ ಪಕ್ವಗೊಳ್ಳುವ ಹಾಗೆ ನಮ್ಮ ನಡಾವಳಿಗಳಿರಬೇಕೆಂಬುದನ್ನು ಅನೇಕ ಪುರಾಣದ ಕಥೆಗಳ ಮೂಲಕವೇ ಸೂಚಿಸುತ್ತಾರೆ. ಹೀಗೆ ಪ್ರತಿ ವ್ಯಕ್ತಿ ಅರಳಬಹುದಾದ ಅನೇಕ ಆಲೋಚನೆಗಳುಳ್ಳ ಬರಹಗಳು ಇಲ್ಲಿ ಸೇರಿಕೊಂಡಿವೆ.

ನಾವು ಯಾವಾಗಲೂ ದೊಡ್ಡ ದೊಡ್ಡದರ ಕಡೆ ಗಮನಹರಿಸಿ ಸಣ್ಣ ಪುಟ್ಟ ವಿಚಾರಗಳನ್ನು ಅಸಡ್ಡೆ ಮಾಡಿ ಬದಿಗೆ ಸರಿಸಿಬಿಡುತ್ತಿರುತ್ತೇವೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ. ಆದರೆ ಇಲ್ಲಿನ ಬರಹಗಳು ವಿಶೇಷವಾಗುವುದೇ ಸಣ್ಣಪುಟ್ಟ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಓದುಗರಿಗೆ ತಲುಪಿಸುವ ಕ್ರಮದಿಂದಾಗಿ. ಇದಕ್ಕೆ ಲೇಖಕರು ಆಯ್ಕೆ ಮಾಡಿಕೊಂಡ ವಿಧಾನವೆಂದರೆ ಸದ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವೆಂದರೆ, ಪುರಾಣದ ಕಥೆಗಳ, ದೇಶ ವಿದೇಶಗಳ ಅನೇಕ ಚಿಂತಕರ ಚಿಂತನೆಗಳ, ಅನುಭವಗಳ, ಜನಪದ ಕಥೆಗಳ ಮೊರೆಹೋಗುವುದು. ಹೀಗೆ ಹೇಳುವ ವಿಚಾರಗಳಲ್ಲಿ ಅನೇಕ ಸಲ ದಾಸರ, ಶರಣರ, ಬುದ್ಧನ ತತ್ವಗಳೆಲ್ಲಾ ನೆನಪಾಗುತ್ತಾ, ನಮ್ಮ ಅನುಭವಕ್ಕೆ ನೇರವಾಗಿ ತಲುಪುವಂತೆ ಮಾಡುತ್ತಾರೆ. ಅಧ್ಯಾಪಕರೂ ಆಗಿರುವ ಪ್ರವೀಣ್ ನಾಯಕರು ಬಹುಶಃ ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ತಲುಪಿಸುವ ವಿಷಯವನ್ನು ಬಹು ಚೆನ್ನಾಗಿ, ಕಥೆಗಳ ಮೂಲಕ ಪರಿಣಾಮಕಾರಿಯಾಗಿ ತಲುಪಿಸುವಂತೆ ಇಲ್ಲಿನ ಲೇಖನಗಳೂ ಇವೆ ಎಂದೆನಿಸುತ್ತದೆ. ಈಗಾಗಲೇ ನಮಗೆ ಗೊತ್ತಿರುವ ರಾಮ, ಸೀತೆ ಹನುಮ, ವಿಭೀಷಣ, ರಾವಣ, ಧರ್ಮರಾಯ, ಕರ್ಣ, ದುರ್ಯೋಧನ… ಹೀಗೆ ರಾಮಾಯಣ, ಮಹಾಭಾರತ ಕಾವ್ಯಗಳ ಪಾತ್ರಗಳನ್ನು ತಮ್ಮದೇ ಆದ ದೃಷ್ಟಿಕೋನದ ಮೂಲಕ ಒರೆಗೆ ಹಚ್ಚಿ, ಪ್ರತಿ ವ್ಯಕ್ತಿಯಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳಿರುತ್ತವೆ. ನಾವು ನಕಾರಾತ್ಮಕ ಗುಣಗಳನ್ನು ಕೈಬಿಟ್ಟು ಸಕಾರಾತ್ಮಕ ಚಿಂತನೆಗಳನ್ನು ಮಾತ್ರ ಅಳವಡಿಸಿಕೊಂಡಾಗ ನಮ್ಮ ವ್ಯಕ್ತಿತ್ವ ಹಾಗೂ ಅದರೊಂದಿಗೆ ಬದುಕೂ ಹಸನಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

ಎಷ್ಟೋ ವಿಚಾರಗಳನ್ನು ಲೇಖಕರು ಕುರುಡಾಗಿ ಒಪ್ಪದೆ, ವಿಶ್ಲೇಷಿಸುವ ರೀತಿ ಗಮನಾರ್ಹ. ಉದಾಹರಣೆಗೆ, ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎನ್ನುವ ದಾಸರ ಪದವನ್ನು ನೋಡುವುದು ಹೀಗೆ: “ನಾಲಿಗೆಗೇನು ಒಳ್ಳೆಯದನ್ನು ಕೊಟ್ಟರೂ ತಿನ್ನುತ್ತದೆ. ಕೆಟ್ಟದ್ದನ್ನು ಕೊಟ್ಟರೂ ತಿನ್ನುತ್ತದೆ. ಆದರೆ ಯಾವುದನ್ನು ತಿನ್ನಬೇಕೆನ್ನುವ ವಿವೇಕ, ಎಚ್ಚರ, ಪ್ರಜ್ಞೆ ನಮಗಿರಬೇಕಾಗುತ್ತದೆ” ಎನ್ನುತ್ತಾರೆ. ಇಂಥವರ ಸಹವಾಸ ಮಾಡಿ, ಮಗ ಕೆಟ್ಟ, ಮಗಳು ಕೆಟ್ಟಳು, ಅವ ಕೆಟ್ಟ, ಇವ ಕೆಟ್ಟ, ಸಂಗದಿಂದ ಸನ್ಯಾಸಿ ಕೆಟ್ಟ… ಎಂದೆಲ್ಲಾ ದೂರುತ್ತಿರುತ್ತೇವೆ. ಆದರೆ ಕೆಡುವುದು, ಹಾಳಾಗುವುದು ಎರಡೂ ನಮ್ಮ ಕೈಯ್ಯಲ್ಲೇ ಇರುತ್ತದೆ ನಾವು ಎಂಥವರ ಸಹವಾಸ ಮಾಡಬೇಕೆನ್ನುವ ಯೋಚನೆಗೆ ಹಚ್ಚುತ್ತದೆ. ಎಲ್ಲಕ್ಕೂ ನಮ್ಮ ಮನಸ್ಥಿತಿಯೇ ಕಾರಣ ಎಂಬುದನ್ನು ಮನಗಾಣಿಸುತ್ತಾರೆ.

ಪ್ರವೀಣ್ ನಾಯಕ್ ಹಿಚಕಡ

‘ಪತ್ನಿಯನ್ನು ಪ್ರೀತಿಸಿ’ ಎನ್ನುವ ಲೇಖನದ ಮೂಲಕ ಗಂಡನಾದವನಿಗೆ ಕಿವಿ ಮಾತು ಹೇಳಿರುವುದೂ ಇದೆ. ಇಡೀ ಕುಟುಂಬವನ್ನು ನಿರ್ವಹಿಸುವ, ಮಕ್ಕಳನ್ನು ಹೊತ್ತು, ಹೆತ್ತು ಲಾಲನೆ ಪಾಲನೆ ಮಾಡಿ, ಹೊರಗೂ ದುಡಿದು ಬರುವ ಅವಳನ್ನು ಸ್ವಲ್ಪ ತಾಳ್ಮೆಯಿಂದ ಗಮನಿಸಿ, ಅವಳೊಂದಿಗೆ ಸಹಕರಿಸಿ ಗೌರವಿಸಿದರೆ ಸುಖೀ ಕುಟುಂಬವಾಗುತ್ತದೆನ್ನುತ್ತಾರೆ. ಇಲ್ಲಿ ಗಂಡನಾದವ ಪತ್ನಿಯ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ ಕಾಳಜಿಯಿದೆ. ಜಗತ್ತಿನ ಗಂಡಂದಿರುಗಳೆಲ್ಲಾ ತಮ್ಮ ತಮ್ಮ ಪತ್ನಿಯರ ಬಗೆಗೆ ಗೌರವ, ಕಾಳಜಿಯಿಂದಿದ್ದರೆ ಎಷ್ಟೋ ಸಮಸ್ಯೆಗಳೇ ನಮ್ಮ ನಡುವೆ ಇರುತ್ತಿರಲಿಲ್ಲವೆಂಬುದು ಓದುಗರ ಮನದಲ್ಲಿ ಹಾದುಹೋಗುತ್ತದೆ. ಹೆಂಡತಿಯ ಮೇಲಿನ ಪ್ರೀತಿಯಿಂದ ಅವಳ ದಡ್ಡತನವನ್ನೆಲ್ಲಾ ಸಹಿಸಿ ಬ್ಯಾಂಡೇಡ್ ಕಂಡು ಹಿಡಿಯಲು ಕಾರಣನಾದ ಜಗತ್ತಿನ ಪ್ರತಿಷ್ಠಿತ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಾಮಾನ್ಯ ಕೆಲಸಗಾರ ಜಾನ್ ಡಿಕ್ಸನ್‌ನ ಕಥೆಯನ್ನು ಹೇಳುತ್ತಾರೆ.

ಹೀಗೆ ಒಂದು ಮುಖ್ಯ ವಿಷಯವನ್ನು ತಲುಪಿಸಲು ಅನೇಕ ಕಥೆಗಳನ್ನು ಬಳಸಿಕೊಳ್ಳುವ ವಿಧಾನ ಇಲ್ಲಿನ ಬರಹಗಳಲ್ಲಿವೆ. ಈ ಬರಹಗಳು ಕೇವಲ ಬುದ್ಧಿಯಿಂದ ಬರೆದ ಬರಹಗಳೆನಿಸದೆ, ಒಂದೊಳ್ಳೆಯ, ಸಹಜವಾದ ಸಕಾರಾತ್ಮಕ ಭಾವದಿಂದ, ಬದುಕಿನ ಬಗೆಗಿನ ಪ್ರೀತಿ ಮತ್ತು ಕಾಳಜಿಯಿಂದ ಬರೆದ ಬರಹಗಳೆನಿಸುತ್ತವೆ. ನೀವು ಹೀಗಿರಿ, ಹೀಗೆ ಮಾಡಿ ಎಂದೆನ್ನುವ ಧೋರಣೆಗಿಂತ, ತನ್ನನ್ನೂ ಒಳಗೊಂಡಂತೆ ಈ ಸಮಯ ಕಳೆದು ಹೋಗುತ್ತದಾದ್ದರಿಂದ, ನಾವು ನಮ್ಮ ಕುಟುಂಬ, ಸಮಾಜ, ವ್ಯಕ್ತಿಯ ವ್ಯಕ್ತಿತ್ವ ಹೀಗಿದ್ದರೆ ಅದೆಷ್ಟು ಚೆನ್ನ ಎನ್ನುವ ಹಂಬಲದಿಂದ, ಆಶಯವನ್ನಿಟ್ಟುಕೊಂಡು, ಮನದಾಳದಿಂದ ಕಾಳಜಿಯಿಂದ ಬರೆದವುಗಳಾಗಿವೆ.
ಈ ಬರಹಗಳ ಹಿಂದೆ ಅಪಾರ ಓದಿನ ಹಿನ್ನೆಲೆ ಇರುವುದು ಸಹಜವಾಗಿಯೇ ಓದುಗರ ಗಮನಕ್ಕೆ ಬರುತ್ತದೆ.

ಮೇಲ್ನೋಟಕ್ಕೆ ಇವು ಬಹು ಸರಳ ಎನಿಸಬಹುದು. ಆದರೆ, ಇಂತಹ ಬರವಣಿಗೆಯ ಅಗತ್ಯವನ್ನು ಮನಗಾಣುವ ಮನಸ್ಸುಗಳು ಹೆಚ್ಚಾಗಬೇಕಾಗಿದೆ.

ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ, ವೈಚಾರಿಕ ರಾಜಕೀಯ, ಕ್ರೀಡೆ, ಪರಿಸರ, ಮನರಂಜನೆ, ವ್ಯವಹಾರ, ಅನುಭವ… ಹೀಗೆ ಹಲವು ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಅಂಕಣ ಬರಹಗಳು ಪ್ರಚಲಿತದಲ್ಲಿವೆ. ಇಂದಿನ ವಿದ್ಯುನ್ಮಾನ ಮಾಧ್ಯಮಗಳ ಅಬ್ಬರದಲ್ಲಿ, ಮನರಂಜನೆಯೇ ಬದುಕೆಂಬ ನಂಬಿಕೆಯಲ್ಲಿ ಹುಸಿ ‘ರೀಲ್’ಗಳನ್ನು ಸುತ್ತೀ ಸುತ್ತಿ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಯುವ ಪೀಳಿಗೆ ಇಂಥದನ್ನು ನಿಜಕ್ಕೂ ಗಮನಿಸೀತೇ? ಎನ್ನುವುದೂ ಕ್ಷಣ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಈ ಇಂಥ ಸಮಯವೂ ಕಳೆದುಹೋಗಿ, ತಮ್ಮ ಮನೆಗಳಲ್ಲಿ ಹಿರಿಯರು ಟಿವಿ, ಮೊಬೈಲಿಗೆ ಅಂಟಿಕೊಳ್ಳದೆ ಇಂಥಹ ಪುಸಕಗಳನ್ನು ಕೊಂಡು ಸುಮ್ಮನೆ ಕೈಲಿ ಹಿಡಿದು ಕೂತರೂ ಸಾಕು. ಮಕ್ಕಳೂ ಪುಸ್ತಕ ಹಿಡಿಯುವಂತಾಗುತ್ತದೆ. ಅಥವಾ ದೊಡ್ಡವರು ಓದಿ, ಮಕ್ಕಳಿಗೆ ಕಥೆ ಹೇಳುವ ಪರಿಪಾಠ ರೂಢಿಸಿಕೊಂಡರೂ ಸಾಕು. ಇಂತಹ ಬರಹಗಳು ಸಾರ್ಥಕತೆಯನ್ನು ಕಾಣುತ್ತವೆ; ಕಾಣುವಂತಾಗಲಿ.