- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಏ ಗಂಗವ್ವಾ, ಗೌರವ್ವಾ, ಪಾರು, ಸುನೀಲ, ಸತೀಶ, ಈರಣ್ಣ, ನಿರ್ಮಲಾ, ಕಮಲವ್ವಕ್ಕ, ಈರವ್ವಕ್ಕ, ಪಕ್ಕ್ಯಾ, ಅಶೋಕ ಬರ್ಯೋ ಟೈಮಾಯ್ತು ಅಂತ ನಮ್ಮವ್ವ ತಮ್ಮ ಎಲ್ಲಾ ಕೆಲಸ ಮುಗಿಸಿ ಓಣ್ಯಾಗ ಇರು ಬರು ಮಂದೀನೆಲ್ಲ ಕರ್ದು ಬಂದು ಟಿ.ವಿ ಮುಂದ ಕುಂತು ಬಿಡ್ತಿದ್ಳು. ಮನ್ಯಾಗ ನಾನು, ನಮ್ಮಣ್ಣ, ನಮ್ಮಕ್ಕ ಮೊದಲೇ ಟಿ.ವಿ ಹಚ್ಚಿ ಡಿಡಿ೧(DD1) ಮುಗ್ದು ಡಿಡಿ ೯(DD9) ಶುರು ಆಗುದನ್ನ ನೋಡ್ಕೊಂಡು ಕುಂತಿರ್ತಿದ್ವಿ.
ಮಗ್ಗಲಕಿನ ಮನ್ಯಾನವ್ರು ಯಾವ್ದ್ಯಾವ್ದೋ ಕೆಲಸ ಮಾಡಿ ಮುಗಿಸು ಅವಸರದಾಗ ಇರ್ತಿದ್ರು, ಎಮ್ಮಿಗಿ ನೀರ ಕುಡ್ಸುವ ಗಂಗವ್ವ, ಭಾಂಡೆ ತಿಕ್ಕುವ ಗೌರವ್ವ, ಮೂರುಸಂಜೀಕ ಮನಿ ಕಸಾ ಹೊಡಿಯುವ ಪಾರು, ಹೊರಗ ಆಟ ಆಡಾಕ ಹೋದ ಸುನ್ಯಾ, ಸತ್ಯಾ ಮತ್ತ ಪಕ್ಕ್ಯಾ, ಮನಿ ಹೊರಗ ಹರಟಿ ಹೊಡ್ಕೊಂಡು ಕುಂತಿರೋ ಕಮಲವ್ವಕ್ಕ, ಈರವ್ವಕ್ಕ, ಯಾರ ಜೊತೆನೋ ಕಟ್ಟಿಮ್ಯಾಲ ಕುಂತು ಹೊಲ-ಮನಿ ಬಗ್ಗೆ ಮಾತಾಡೋ ಅಶೋಕ ಮತ್ತ ಈರಣ್ಣ, ಇನ್ನ್ಯಾರೋ ಬೋರಿನಿಂದ ನೀರ ತಗೊಂಡ್ ಬರ್ತಾ ಇರ್ತಿದ್ರು, ಹಿಂಗ ಒಬ್ಬೊಬ್ರು ಒಂದೊಂದ್ ಕೆಲಸದಾಗ ಮಗ್ನ ಆಗಿರ್ತಿದ್ರು. ಯಾಕಂದ್ರ ಅದು ಸಿನಿಮಾ ಶುರು ಆಗು ಸಮಯ ಆಗಿತ್ತು. ಅದು ತಪ್ಪಿದ್ರ ಮತ್ತ ಒಂದು ವಾರ ಯಾವ ಸಿನಿಮಾನೂ ನೋಡಾಕ ಸಿಗಲ್ಲ.
ಹೌದು ಅವಾಗೆಲ್ಲ ಹಂಗೇ…. ಒಂದೇ ಚಾನಲ್ಲ ದೂರದರ್ಶನ, ಮುಂಜಾನೆ ಮತ್ತು ಸಂಜೀಕ ಸ್ವಲ್ಪ ಹೊತ್ತ ಸ್ಥಳೀಯ ಭಾಷೆದಾಗ ಪ್ರಸಾರ ಆದ್ರ ಉಳಿದ ಸಮಯ ಎಲ್ಲಾ ಹಿಂದಿನೇ. ನಮ್ಗೆಲ್ಲ ಡಿಡಿ ೧/DD1 ಅಂದ್ರ ಹಿಂದಿ, ಡಿಡಿ ೯/DD9 (ಚಂದನ) ಅಂದ್ರ ಕನ್ನಡ.
ವಾರಕ್ಕೊಂದೆ ಕನ್ನಡ ಸಿನಿಮಾ, ರವಿವಾರ ಸಂಜೀಕ ನಾಲ್ಕ ಗಂಟೆಗೆ. “ಸಮಯ ಸರಿಯಾಗಿ ನಾಲ್ಕು ಗಂಟೆ ಇದೀಗ ಚಲನಚಿತ್ರ ಪ್ರಸಾರವಾಗಲಿದೆ.” ಅಂತ ಬಂದಾಗ ನಾವೆಲ್ಲ ಬಿಟ್ಟ ಕಣ್ಣ ಬಿಟ್ಟಂಗೆ ಟಿ.ವಿ ನೋಡ್ಕೊಂಡು ಕೂಡ್ತಿದ್ವಿ.
ಸರಿಸುಮಾರು ೩೦ ವರ್ಷಗಳ ಹಿಂದ ಎಲ್ಲಾರ ಮನ್ಯಾಗೂ ಟಿ.ವಿ ಇರ್ತಿರ್ಲಿಲ್ಲ. ಓಣ್ಯಾಗ ಯಾರ್ದೋ ಒಬ್ಬರ ಮನ್ಯಾಗ ಅಥವಾ ಇಬ್ಬರ ಮನ್ಯಾಗ ಅಷ್ಟೇ ಟಿ.ವಿ ಕಾಣಸಿಗ್ತಿತ್ತು, ಹಂಗಾಗಿ ಏನೇ ನೋಡೂದಿದ್ರು ಓಣ್ಯಾಗಿನ ಮಂದಿಯೆಲ್ಲ ಅವರ ಮನ್ಯಾಗೇ ಜಮಾವಣೆ ಆಗ್ತಿದ್ರು. ಶನಿವಾರ ರವಿವಾರ ಬಂದ್ರ ಸಾಕು ಅವಾಗೆಲ್ಲ ರಾಮಾಯಣ, ಮಹಾಭಾರತ ಮತ್ತ ಸಿನಿಮಾ ಹಬ್ಬ.
ನಮ್ಮ ಅವ್ವಾ ಯಾವಾಗ್ಲೋ ಹೇಳಿದ್ ನೆನಪ ( ಯಾಕಂದ್ರ ನಾವೆಲ್ಲ ಅವಾಗ ನಾಲ್ಕೈದು ವರ್ಷದವ್ರಿದ್ವಿ) – ಶನಿವಾರ ರವಿವಾರ ಬಂದ್ರ ಸಾಕು ಧಾರಾವಾಹಿ ನೋಡಾಕ ಅಂತ ಓಣ್ಯಾಗಿನ ಮಂದಿಯೆಲ್ಲ ನಮ್ ಮನ್ಯಾಗ ಬಂದ್ ಕೂಡ್ತಿದ್ರು, ಏನಿಲ್ಲ ಅಂದ್ರು ೩೦ ರಿಂದ ೪೦ ಮಂದಿ ಸೇರ್ತಿದ್ರು ಅಂತ ಟಿ.ವಿ ನೋಡಾಕ. ಅವತ್ತೆಲ್ಲ ನಮ್ಮ ಮನ್ಯಾಗ ಅಡುಗಿ ಮನಿ ಸೂಟಿ, ಅವತ್ತೆಲ್ಲ ಎಲ್ಲಾರೂ ಕೂಡಿ ಟಿ.ವಿ ನೋಡೂದು, ಹರಟಿ ಹೊಡ್ಯೂದೇ ಕೆಲಸ. ಮನಿ ಎಲ್ಲ ಮಂದಿಯಿಂದ ಕಣ ಕಣ, ಓಣ್ಯಾಗಿನ ರಸ್ತೆಗಳೆಲ್ಲ ಬಣ ಬಣ.
ನಮ್ಮ್ ಅಪ್ಪಾಜಿ ಸರ್ಕಾರಿ ನೌಕರಿ ಮಾಡ್ತಿದ್ರು, ಮನ್ಯಾಗ ಸ್ವಲ್ಪ ಅನುಕೂಲ ಇತ್ತು ಅಂತ ನಮ್ಮ ಮನ್ಯಾಗ ಟಿ.ವಿ. ಟೇಪ ಕಮ್ ರೇಡಿಯೋ ಎಲ್ಲಾ ಇದ್ವು, ನಾವ್ ಇರು ಓಣ್ಯಾಗ ನಮ್ ಮನ್ಯಾಗ ಅಷ್ಟೇ ಟಿ. ವಿ ಇದ್ದಿದ್ರಿಂದ ಎಲ್ಲಾರೂ ಅಲ್ಲಿಗೇ ಬರ್ತಿದ್ರು, ಬಾಡಿಗೆ ಮನಿ ಇತ್ತು ಆದ್ರೂ ದೊಡ್ಡದಿತ್ತು, ಮನಿಯೊಳಗ ಒಂದು ಮೇಲೆಂಟ (ಅಟ್ಟ) ಇತ್ತು. ನನ್ನ ಜೀವನದ ಮೊದಲ ಸಹೃದಯರ ವೃಂದವನ್ನ ನಾ ಅಲ್ಲೇ ನೋಡಿದ್ದು ನೆನಪ.
ಅಲ್ಲಿ ನಮ್ಮಂಥ ಪುಟಾಣಿಗಳು, ತರುಣರು, ಮಧ್ಯವಯಸ್ಸಿನವ್ರು, ಭಾಳ ವಯಸ್ಸಾದವ್ರು ಎಲ್ಲಾ ಥರ ವಯೋಮಾನದವರು ಸೇರಿರ್ತಿದ್ರು. ಒಂದಿಷ್ಟು ಮಂದಿ ಕಾಟಾದ (ಮಂಚದ) ಮ್ಯಾಲ ಕುಂತ್ರ, ಒಂದಿಷ್ಟು ಮಂದಿ ಕುರ್ಚಿಮ್ಯಾಲ, ಒಂದಿಷ್ಟು ಮಂದಿ ಕೆಳಗ ಚಾಪಿ ಮ್ಯಾಲ, ಕೆಲವು ಚಿಕ್ಕ ಹುಡುಗ್ರು ಮೇಲೆಂಟ ಒಂದಿಷ್ಟು ಮಂದಿ ಕಿಟಕ್ಯಾಗ, ಒಂದಿಷ್ಟು ಮಂದಿ ಮಗ್ಗಲಕಿನ ಕೋಣ್ಯಾಗ, ಉಳಿದವ್ರು ಹೊರಗ ತಲಬಾಗಿಲ ಹತ್ರ ಒತ್ತೊತ್ತಿ ಕೂತು ಸಿನಿಮಾ ಶುರು ಆಗುದ್ರಾಗ ಎಲ್ಲೆಲ್ಲಿ ಜಾಗ ಸಿಗ್ತದ ಅಲ್ಲಲ್ಲಿ ತಮ್ತಮ್ಮ ಆಸನ ಖಚಿತ ಮಾಡ್ಕೊಂಡು ಕೂಡ್ತಿದ್ರು. ಓಣ್ಯಾನವ್ರೆಲ್ಲ ಒಂದೇ ಮನ್ಯಾಗ ಜಮಾ ಆಗಿದ್ರ, ಓಣ್ಯಾಗಿನ ಸಾಕು ಪ್ರಾಣಿಗಳು ಬೆಕ್ಕ, ನಾಯಿ, ಆಕಳ, ಎಮ್ಮಿ ಎಲ್ಲಾ ರವಿವಾರ ಬಂದ್ಕೂಡ್ಲೇ ಈ ಮನಷ್ಯಾರು ಎಲ್ಲಿ ಮಾಯ ಆಗ್ತಾರ ಅಂತ ಯೋಚಿಸ್ತಿದ್ದಿರ್ಬಹುದು. ಪೋಲಿಸರು ಕರ್ಫ್ಯೂ ಘೋಷಣೆ ಮಾಡಿದ ಥರ ಅನುಭವ ಆಗ್ತಿತ್ತು ರಸ್ತೆಗಳೆಲ್ಲ, ಹೊರಗ ಯಾರೊಬ್ರೂ ಇರ್ತಿರ್ಲಿಲ್ಲ.
ದೂರದರ್ಶನದ ಆ ಮಾಂಟೇಜ್ ಬರಾಗ ಅಂತು ಎಲ್ಲಾರೂ ಒಂದೇ ಸಲ ದ್ವನಿಗೂಡ್ಸಿ ಆ ಮ್ಯೂಜಿಕ್ ಕೂಡ ಹಾಡ್ತಿದ್ರು. ಸಿನಿಮಾ ನೋಡೂದು, ನೋಡೋರು ಒಂದ್ ಕಡೆ ಆದ್ರ ನಮ್ಮಂಥವ್ರು ಸಿನಿಮಾ ಟೈಟಲ್ ಕಾರ್ಡ, ಕ್ರೆಡಿಟ್ಸ್ ಎಲ್ಲಾ ಬಾಯಿಪಾಠ ಮಾಡೋರು ಇನ್ನೊಂದ್ ಕಡೆ. ನಾಯಕ, ನಾಯಕಿ, ಸಹಕಲಾವಿದರನ್ನ ಬಿಟ್ಟು ಹಿನ್ನೆಲೆ ಸಂಗೀತ, ಹಿನ್ನೆಲೆ ಗಾಯನ, ಸಾಹಸ, ಸಾಹಿತ್ಯ, ವಸ್ತ್ರವಿನ್ಯಾಸ, ನಿರ್ದೇಶಕ, ನಿರ್ಮಾಪಕ ಹಿಂಗೆಲ್ಲ ಬಾಯಿಪಾಠ ಮಾಡಿ ಇಟ್ಕೊಂಡಿರ್ತಿದ್ವಿ. ನಾನು ಹಾಗೂ ನಮ್ಮಣ್ಣ ವಿಶೇಷವಾಗಿ ಸಾಹಸ (stunts) ಯಾರ್ ಮಾಡ್ಯಾರ ಅನ್ನೂದರ ಕಡೆ ಆಸಕ್ತಿ ವಹಿಸ್ತಿದ್ವಿ. ಅವಾಗ ನಮ್ಮಿಬ್ಬರ ನೆಚ್ಚಿನ ಸಾಹಸ ನಿರ್ದೇಶಕ ವೈ.ಶಿವಯ್ಯ ಅಂತ. ವೈ. ಶಿವಯ್ಯ ಸಾಹಸ ನಿರ್ದೇಶಕ ಇದ್ರ ಅದ್ರಾಗ ಫೈಟ್ ಮಸ್ತ್ ಇರ್ತಿದ್ದು ಅಂತ ಅರ್ಥ.
ನಡುವ ಒಮ್ಮೊಮ್ಮೆ ಮಳೆ ಗಾಳಿಯಿಂದ ನೆಟ್ವರ್ಕ ಸರ್ಯಾಗಿ ಬರ್ಲಾರ್ದಾಗ ಟಿ.ವಿ ಯ ಆ ‘ಕೊಸ್ಸ್ಸ್ಸ್ಸ್’ ಅನ್ನು ಕಿವಿಗಡಚಿಕ್ಕುವ ಶಬ್ದ, ಕರೆಂಟ್ ಹೋದಾಗ ‘ಅಯ್ಯ್ಯ್ಯ್ಯ್’ ಅನ್ನು ಎಲ್ಲಾರ ಶಾಪವಾಚಕ ಶಬ್ದ, ಒಮ್ಮೊಮ್ಮೆ ತಾಂತ್ರಿಕ ದೋಷಗಳಿಂದ ‘ಅಡಚಣೆಗಾಗಿ ವಿಷಾದಿಸುತ್ತೇವೆ’ ಅನ್ನು ಪ್ರಕಟಣೆ ಒಂಚೂರು ಕಿರಿಕಿಯಾದ್ರೂ, ಎಲ್ಲಾರು ಏನರೆ ತಿನ್ಕೊಂಡು, ಸಿನಿಮಾ ನೋಡೂದರ ಜೊತೆ ಚಂದಗೆ ಜೀವನಾನುಭವದ ಬಗ್ಗೆ ಮಾತ್ಯಾಡ್ಕೊಂಡು, ನಕ್ಕೊಂಡು, ಹರಟಿ ಹೊಡ್ಕೊಂಡು ಆರಾಮ ಇರ್ತಿದ್ವಿ.
ಅವಾಗ ಎಲ್ಲಾರ್ಗೂ ಒಂದೇ ಟಿ.ವಿ, ಒಂದೇ ಚಾನಲ್. ಈಗ ಎಲ್ಲಾರ್ಗೂ ಒಂದೊಂದ್ ಚಾನಲ್, ಎಲ್ಲಾರ ಕೈಯ್ಯಾಗ ಒಂದೊಂದು ಮೊಬೈಲ್. ಗುಂಪು ಗುಂಪಾಗಿ ಕುಂತು ಮಾತ್ಯಾಡವ್ರು ಇಲ್ಲ, ಟಿ.ವಿ ದಾಗ ಒಂದ್ ನೆಟ್ಟಗ ಏನು ಬರೂದು ಇಲ್ಲ. ನಿಜ ಹೇಳ್ಬೇಕಂದ್ರ ನಾ ಟಿ.ವಿ ನೋಡುದು ಬಿಟ್ಟು ೧೫ ವರ್ಷ ಮ್ಯಾಲ ಆಯ್ತು. ಸಮಯ ಮತ್ತ ಅವಕಾಶ ಸಿಕ್ಕಾಗ ಥಟ್ ಅಂತ ಹೇಳಿ ಒಂದನ್ನ ನೋಡೂದು ಮರೆಯಲ್ಲ.
ಮೊನ್ನೆ ಅಮ್ಮನ ಜೊತೆ ಮಾತಾಡೋವಾಗ ಇವೆಲ್ಲವನ್ನ ಮತ್ತೆ ಮೆಲುಕು ಹಾಕಿದ್ವಿ. ಆ ನೆನಪುಗಳನ್ನ ಆಡುಭಾಷೆಯಲ್ಲೇ ಬರೆದು ಇಡ್ಬೇಕು ಅನ್ನಿಸಿತು, ಬರೆದೆ. ಇಲ್ಲಿವರೆಗು ಓದಿದ್ರೆ, ಓದಿ ಮುಗಿಸಿದಾಗ ನಿಮ್ಮದೂ ಯಾವ್ದೋ ಒಂದು ಚಿಕ್ಕಂದಿನ ಹಳೆಯ ಅನುಭವದ ಮರುಸ್ಮೃತಿಯಾದರೆ….
********
(ವಿ.ಸೂ: ಉತ್ತರಕರ್ನಾಟಕದ ವಿಜಯಪುರದ ಸುತ್ತ ಆಡುವ ಭಾಷೆಯ ರೂಢಿಯಲ್ಲೇ ಈ ಲೇಖನವನ್ನು ಬರೆಯಲಾಗಿದೆ.)
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ