- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
“ ಅಳಿಯಬೇಕೆಂಬ ಹಟ ನನ್ನದು, ನಿನ್ನ ಮೊಗದ ಮೇಲಿನ ನಗೆ ಉಳಿಸಲು”
ಹೆಚ್ಚು ಕಮ್ಮಿ ಇದೇ ಭಾವವನ್ನು ವ್ಯಕ್ತ ಪಡಿಸುವ ಕವಿ-ಗೀತಕಾರ ಶೈಲೇಂದ್ರ ಅವರ ಪ್ರಸಿದ್ಧ ಹಾಡಿನ ಸಾಲುಗಳನ್ನು ಹಿರಿಯ ಸದಸ್ಯರಾದ ಮಾನ್ವಿ ಅವರು, ನನ್ನ ಅಂಕಣಕ್ಕೆ ಸ್ಪಂದಿಸುತ್ತಾ ಬರೆದಿದ್ದರು. ಹೀಗಾಗಿ ಅಂಕಣ ಮತ್ತೆ ಗೀತೆಗಳ ಕಡೆ ವಾಲಿದೆ. ಆ ಹಿಂದಿ ಹಾಡಿನ ಸಾಲುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
“ ದುನಿಯಾ ನೆ ಕಿತನಾ ಸಮಝಾಯಾ/
ಕೌನ್ ಹೈ ಅಪನಾ ಕೌನ್ ಪರಾಯಾ/
ಫಿರ್ ಭಿ ದಿಲ್ ಕಿ ಚೋಟ್ ಛಿಪಾಕರ್
ಹಮನೆ ಆಪ್ ಕಾ ದಿಲ್ ಬೆಹಲಾಯಾ/
ಖುದ್ ಹಿ ಮರ್ ಮಿಟನೇ ಕಿ
ಯೆ ಜಿದ್ ಹೈ ಹಮಾರಿ”
“ ಯಾರು ತನ್ನವರು ಯಾರು ಪರರು/
ಎಂದು ತಿಳಿ ಹೇಳಿದರೂ ಜಗವೆಲ್ಲ/
ಮನದ ನೋವನು ಮುಚ್ಚಿ ನಿನ್ನ ರಂಜಿಸಿದೆ/
ಇರುವನ್ನೇ ಅಳಿಸುವ ಜಿದ್ದು ನನ್ನದು”
ತಮ್ಮ ಪ್ರಾಣವನ್ನು ಪಣವಾಗಿಟ್ಟು , ಇತರರ ರಕ್ಷಣೆ ಮಾಡಿದ ಮಹನೀಯರ ಕುರಿತು ಮೊದಲಿನ ಅಂಕಣಗಲ್ಲಿ ನಾನು ಪ್ರಸ್ತಾಪ ಮಾಡಿದ್ದೇನೆ. ಅದು ವ್ಯಕ್ತಿಗಳೇ ಆಗಿರಬಹುದು ಅಥವಾ ದೇಶಕ್ಕಾಗಿ ಮಡಿದ ಹುತಾತ್ಮರಾಗಿರಬಹುದು, ಎಲ್ಲರಲ್ಲಿ ಉರಿಯುತ್ತಿರುವದು ತ್ಯಾಗ ಬಲಿದಾನಗಳ ಜ್ವಾಲೆ ; ಇಂತಹ ಮಹನೀಯರು , ತಾನು ಉರಿದರೂ ಸುತ್ತಲೂ ಬೆಳಕು ಚೆಲ್ಲುವ ದೀಪದಂತೆ. ಇಂಥವರನ್ನು ನಾವು ದಿನನಿತ್ಯದ ಜೀವನದಲ್ಲಿ ನಮ್ಮ ನಡುವೆ ಕಾಣಬಹುದು. ಅವರು ಹೆಸರಿಗಾಗಿ ಸಹಾಯ ಮಾಡುವರಲ್ಲ; ಮತ್ತೊಬ್ಬರ ಬಗೆಗಿನ ಒಲವೇ ಅವರನ್ನು ಇತರರಿಗೆ ನೆರವಾಗುವಂತೆ ಪ್ರೇರಣೆ ನೀಡುತ್ತದೆ. ಒಲವೇ ಮುನ್ನಡೆಸುವ ಶಕ್ತಿಯಾಗುತ್ತದೆ.
ಗೀತಕಾರ ಶೈಲೇಂದ್ರ ಅವರು ಸರಳ ಹಾಗೂ ಸುಂದರವಾದ ತಮ್ಮ ಶೈಲಿಯಲ್ಲಿ ಘನವಾದ, ಮಹತ್ವವಾದ ವಿಷಯಗಳನ್ನು ಜನ ಮನಕ್ಕೆ ತಲುಪಿಸುತ್ತದ್ದ ರೀತಿ ಬಹಳ ಅನನ್ಯವಾಗಿತ್ತು. ಅವರು ನನ್ನ ನೆಚ್ಚಿನ ಕವಿಗಳು. ನಾನು ಹುಟ್ಟಿದ್ದು ಕರ್ನಾಟಕವಾದರೂ, ಬೆಳೆದದ್ದು ಮತ್ತು ವಿದ್ಯಾಭ್ಯಾಸ ಹೈದರಾಬಾದಿನಲ್ಲಿ ಆದ ಕಾರಣ, ಬಾಲ್ಯದಲ್ಲಿ ನಾನು ಹಿಂದಿ ಸಿನೆಮಾ ಗೀತೆಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ. ಆಗಿನ ಸಮಯದ ಹಾಡುಗಳಲ್ಲಿ ಕಾವ್ಯಾತ್ಮಕ ಅಂಶಗಳಿದ್ದು, ಮನಸಿಗೆ ಮುದ ನೀಡುತ್ತಿದ್ದುವಲ್ಲದೆ, ಕದಡಿದ ಮನಗಳಲ್ಲಿಯೂ ಹುಮ್ಮಸ್ಸು ನೀಡಿ, ಮನಸ್ಥಿತಿಯನ್ನು ಎತ್ತರಿಸಲು( ಮೂಡ್ ಲಿಫ್ಟ್) ಸಹಾಯಕವಾಗುತ್ತಿದ್ದವು. ಧನಾತ್ಮಕ ಚಿಂತನೆಗಳಿಂದ ಕೂಡಿದ ಅಂತಹ ಎಷ್ಟೋ ಹಾಡುಗಳನ್ನು ನೆನಪಿಸಿಕೊಂಡಾಗ ನನಗೆ ಅಚ್ಚರಿಯಾಗುತ್ತದೆ.
ಕವಿ ಒಂದು ಕವಿತೆ ರಚಿಸುವಾಗ, ತನ್ನ ಬಾವನೆಗಳನ್ನು ಅಭಿವ್ಯಕ್ತಗೊಳಿಸಲು ಅವನು ಸ್ವತಂತ್ರ. ಅವನ ಮನದಲ್ಲಿ ಮೂಡಿದ ಭಾವನೆಗಳಿಗೆ ಮೂರ್ತರೂಪಕೊಡಲು ಅವನು ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬೇಕಾಗಿಲ್ಲ, ಅವನ ಮೇಲೆ ನಿರ್ದಿಷ್ಟ ಸಮಯಾವಕಾಶದ ಅಥವಾ ಇನ್ನು ಯಾವುದೇ ರೀತಿಯ ಒತ್ತಡಗಳಿರುವದಿಲ್ಲ. ಆದರೆ ಸಿನೆಮಾಗಳಿಗೆ ಬರೆಯುವ ಕವಿಗಳ- ಗೀತಕಾರರ ಮಾತೇ ಬೇರೆ, ಅವರು ಸಿನೆಮಾದ ಸನ್ನಿವೇಶಕ್ಕೆ ತಕ್ಕಂತೆ ಮತ್ತು ಹಾಡು ಜನಪ್ರಿಯವಾಗುವಂತೆ, ಕೊಟ್ಟ ಸಮಯದಲ್ಲಿ ರಚಿಸಿ ಪೂರ್ಣಗೊಳಿಸಬೇಕು. ವಾಣಿಜ್ಯಕ್ಕೆ ಪೂರಕವಾದ ಹಾಡುಗಳನ್ನು ರಚಿಸಬೇಕಾದ ಇಂತಹ ವಾತಾವರಣದಲ್ಲೂ, ಕೆಲವು ಗೀತಕಾರರು ತಮ್ಮಲ್ಲಿಯ ಕವಿಯನ್ನು ಜಾಗೃತಗೊಳಿಸಿ, ಅದ್ಭುತವಾದ ಸಂವೇದನಾಶೀಲ ಹಾಡುಗಳನ್ನು ರಚಿಸಿ ನಮಗೆಲ್ಲಾ ಉಣಿಸಿ ತಣಿಸಿದ್ದು ವಿಶೇಷ ಹಾಗೂ ಗಮನಾರ್ಹವಾದ ಸಂಗತಿ. ಕವಿತೆ ಮತ್ತು ಕಾವ್ಯದ ಮೇಲಿರುವ ಅತೀವ ಒಲವಿನಿಂದಾಗಿ ಅಲ್ಲವೆ ಅವರು ಹಾಗೆ ಮಾಡಿದ್ದು.
ಆಗಿನ ಸಮಯದ ಪ್ರಮುಖ ಗೀತಕಾರರಲ್ಲಿ ಒಬ್ಬರಾದ ಶೈಲೇಂದ್ರ ಅವರ ಹಾಡುಗಳಲ್ಲಿ ಬಾಳಿನ ವಿವಿಧ ರೂಪಗಳನ್ನು ಪ್ರೀತಿಯಿಂದ ತೋರುವ ಹಂಬಲವಿದೆ. ಅದಕ್ಕೇ, ಮತ್ತೆ ಗೀತೆಗಳ ಕಡೆ ಪಯಣ ಬೆಳೆಸಿ ಅವರ ಕೆಲವು ಚಿರಸ್ಮರಣೀಯ ಹಾಡುಗಳನ್ನು ಅಂಕಣದ ಮೂಲಕ ನಿಮಗೆ ತಲುಪಿಸುವ ತವಕ.
ಇತ್ತೀಚೆಗೆ ವರುಣನ ಆರ್ಭಟ ಅತಿರೇಕವಾಗಿ, ಮಳೆಯಿಂದಾದ ಪ್ರವಾಹದಿಂದ ಎಲ್ಲ ಕಡೆ ನೀರು ನುಗ್ಗಿ ಪ್ರದೇಶಗಳು ಜಲಾವೃತಗೊಂಡು, ಜಲ ಪ್ರಳಯದಂಥ ಪರಿಸ್ಥಿತಿಯ ಬಗ್ಗೆ ತಲ್ಲಣಗೊಳಿಸುವ ವರದಿಗಳನ್ನು ನಾವು ಟಿವಿ ಯಲ್ಲಿ ನೋಡಿದ್ದೇವೆ. ಛತ್ತೀಸಗಡ್ ದಲ್ಲಿ ನಡೆದ ಇಂತಹ ಒಂದು ಘಟನೆ ನನ್ನ ಮನಸನ್ನು ಬಹಳ ವಿಚಲಿತಗೊಳಿಸಿತು.
ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಒಬ್ಬ ವ್ಯಕ್ತಿ, ಸುತ್ತಲೂ ಎನೂ ನೆಲೆಯಿಲ್ಲದೆ ಒದ್ದಾಡುತ್ತ ಒಂದು ಮರದ ಟೊಂಗೆಗೆ ಜೋತು ಬಿದ್ದ ದೃಶ್ಯವನ್ನು ನೋಡಿದಾಗ ಅವನು ಬದುಕಿ ಉಳಿಯುವದು ತಿರಾ ಅಸಂಭವ ಎಂದು ಅನಿಸಿತ್ತು. ದಂಡೆಯ ಮೇಲೆ ನೆರೆದ ಊರಿನ ಜನರಿಗೆ ಈ ವ್ಯಕ್ತಿಯ ಬಗ್ಗೆ ಕಳವಳ. ಅವರೆಲ್ಲರ ಮನದಲ್ಲಿ ಇವನನ್ನು ಹೇಗಾದರೂ ಮಾಡಿ ಕಾಪಾಡಬೇಕೆಂಬುವ ಛಲ. ಅವನ ಬಗೆಗಿನ ಒಲವಿನಿಂದ ಅಲ್ಲವೇ ಈ ಛಲ ಅವರಲ್ಲಿ ಜನ್ಮ ತಾಳಿದ್ದು!
ನೆರೆದಿದ್ದ ಊರ ಜನ ಅವನ ಪ್ರಾಣವನ್ನು ಉಳಿಸಲು ಹೆಣಗಾಡಿ, ಜಿಲ್ಲಾ ಆಡಳಿತ ವರ್ಗಕ್ಕೆ ಇದರ ಬಗ್ಗೆ ಮಾಹಿತಿ ನೀಡಿ ಮರುದಿನ ಭಾರತದ ವಾಯು ಪಡೆಯ ಹೆಲಿಕಾಪ್ಟರ್ ಬಂದು ಅವನನ್ನು ಕಾಪಾಡಿದ ರೀತಿ ಬಹಳ ರೋಚಕವಾಗಿತ್ತು. ಅದರ ಹಿಂದಿನ ರಾತ್ರಿ ಅವನ ಜೀವನದ ಅತ್ಯಂತ ಕರಾಳ ರಾತ್ರಿ ಯಾಗಿತ್ತು ಎನ್ನುವದರಲ್ಲಿ ಸಂದೇಹವಿಲ್ಲ. ಅದನ್ನು ವೀಕ್ಷಿಸಿದಾಗ ನನಗೆ ಥಟ್ಟನೆ ಹೊಳೆದದ್ದು ಕವಿ ಶೈಲೇಂದ್ರ ಅವರ ‘ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ” ಚಿತ್ರದ ಹಾಡಿನ ಈ ಸಾಲುಗಳು:
“ ಏ ಪೂರಬ್ ಹೈ ಪೂರಬ್ ವಾಲೇ ಹರ್ ಜಾನ್ ಕಿ ಕೀಮತ್ ಜಾನತೆ ಹೈಂ/
ಹಮ್ ಉಸ್ ದೇಶ್ ಕೆ ವಾಸಿ ಹೈ ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ
“ ಇದು ಪೌರಾತ್ಯ ದೇಶ, ಇಲ್ಲಿಯ ಜನರು ಪ್ರತಿ ಜೀವದ ಬೆಲೆ ಬಲ್ಲರು/
ಪವಿತ್ರ ಗಂಗೆ ಹರಿಯುವ ದೇಶದ ವಾಸಿಗಳು ನಾವು”
ಮೇಲೆ ಉಲ್ಲೇಖಿಸಿದ ಘಟನೆಯನ್ನು ಈ ಸಾಲುಗಳಿಗೆ ತಾಳೆ ಹಾಕಿ ನೋಡಿದಾಗ, ಅವರ ಹಾಡಿನ ಸಾಲುಗಳು ಅಕ್ಷರಶಃ ನಿಜವೆನಿಸದೆ ಇರಲಿಲ್ಲ. ನಮ್ಮ ಕರ್ನಾಟಕದಲ್ಲೂ ತುಂಗಾ ಭದ್ರ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಮಂಗಗಳನ್ನು ಕಾಪಾಡಿದ ದೃಶ್ಯವನ್ನು ಕಣ್ಣಾರೆ ಕಂಡಾಗ, ಈ ಸಾಲುಗಳು ನನಗೆ ಇನ್ನೂ ಸತ್ವಯುತವಾಗಿ ಕಂಡವು. ಮನುಷ್ಯನೇ ಆಗಲಿ ಪ್ರಾಣಿಯೇ ಆಗಲಿ, ಪ್ರತಿ ಜೀವವನ್ನು ಪ್ರೀತಿಸಿ ಅದರ ರಕ್ಷಣೆ ಮಾಡುತ್ತಿರುವ ಜನರ ಬಗ್ಗೆ ಹೆಮ್ಮೆ ಅನಿಸಿತು.
ಬಾಳಿನ ಸಾರವನ್ನೇ ಸಾರುವ ಒಂದು ಹಾಡಿನಲ್ಲಿ ಕವಿ ಶೈಲೇಂದ್ರ ಅವರು ಹೀಗೆ ಹೇಳುತ್ತಾರೆ:
“ ಕಿಸಿ ಕೆ ಮುಸ್ಕುರಾಹಟೋಂ ಪೆ ಹೋ ನಿಸಾರ್ /
ಕಿಸಿ ಕಾ ದರ್ದ್ ಮಿಲ್ ಸಕೇ ತೊ ಲೇ ಉಧಾರ್/
ಕಿಸಿ ಕೆ ವಾಸತೆ ಹೊ ತೆರೆ ದಿಲ್ ಮೆ ಪ್ಯಾರ್ /
ಜೀನಾ ಇಸೀ ಕಾ ನಾಮ್ ಹೈ”-
ಕನ್ನಡದಲ್ಲಿ ಸ್ಥೂಲವಾಗಿ
“ ಪರರ ನಗುವಿಗಾಗಿ ಮೀಸಲಾದ ಬಾಳು/
ಪರರ ನೋವನುಂಡು ನಲಿವ ಬಾಳು/
ಪರರಿಗಾಗಿ ಒಲವು ಕೂಡಿದ ಬಾಳು/
ಇದುವೇ ಜೀವಿಸುವ ಪರಿ”
ಎಂದು ವ್ಯಕ್ತ ಪಡಿಸಿದ್ದಾರೆ.
ಬಡತನದಲಿ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮನುಷ್ಯನ ಪಾಡನ್ನು ತನ್ನವರ ಜೊತೆ ಮುಕ್ತವಾಗಿ ಹಂಚಿಕೊಳ್ಳುವ ಒಂದು ಗೀತೆಯಲ್ಲಿ, ಶೈಲೇಂದ್ರ ಅವರು ಹಾಸ್ಯ ಹಾಗೂ ವ್ಯಂಗ್ಯವನ್ನು ಬೆರೆಸಿದ್ದಾರೆ. ಶ್ರೀ ೪೨೦ ಚಿತ್ರದ ಪ್ರಸಿದ್ಧ ಹಾಡಿನ ಕೆಲವು ಸಾಲುಗಳ ಭಾವಾನುವಾದವನ್ನು ಸ್ಥೂಲವಾಗಿ ನಿಮ್ಮ ಮುಂದೆ ಇಡುವೆ.
“ ಸಣ್ಣ ಮನೆಯ ಬಡವರ ಮಗ ನಾನು/
ಆದರೆ ತಾಯಿಯ ಮಮತೆಯಿಂದ ವಂಚಿತನಲ್ಲ/
ನೋವು ದುಗುಡಗಳೇ ನನ್ನ ಬಾಲ್ಯದ ಸಂಗಾತಿಗಳು/ ಬಿರುಗಾಳಿಯಲಿ ಉರಿಯಿತು ಬಾಳಿನ ಕುಡಿ/
ಹಸಿವು ಪಾಲನೆ ಮಾಡಿತು ಬಲು ಪ್ರೀತಿಯಿಂದ”
ಇಲ್ಲಿ ನೋವಿನ ನಡುವೆಯೂ ಒಲವನ್ನು ಕಾಣುವ ತುಡಿತವಿದೆ. ತನ್ನಂತೇ ಬಾಳಿನಲ್ಲಿ ಬಳಲುವರ ಜೊತೆ, ಪಡುತ್ತಿರುವ ಪಾಡುಗಳನ್ನು ಹಾಡಾಗಿಸಿ ಎಲ್ಲರನ್ನೂ ಹಗುರವಾಗಿಸುವ ಉದ್ದೇಶವಿದೆ. ಮುಂದೆ ಬರುವ ಸಾಲುಗಳಲ್ಲಿ , ಯಾವಾಗಲೂ ಪೋಲೀಸರ ದೃಷ್ಟಿಯಲ್ಲಿ ಬಡವನೇ ಹೇಗೆ ಅಪರಾಧಿಯಂತೆ ಕಂಡು ಅವರ ಕೆಂಗಣ್ಣಿಗೆ ತುತ್ತಾಗುತ್ತಾನೆ, ಮುಂದೆ ಬಿಡುಗಡೆಯಾಗುವ ಬಗೆಯನ್ನು ಕವಿ ಶೈಲೇಂದ್ರ ಅವರು ಬಹಳ ಹಾಸ್ಯ-ವ್ಯಂಗ ರೀತಿಯಲ್ಲಿ ವ್ಯಕ್ತ ಮಾಡಿದ್ದಾರೆ.
ಗೈಡ್ ಚಿತ್ರದ
“ ಆಜ್ ಫಿರ ಜೀನೇ ಕಿ ತಮನ್ನಾ ಹೈ/
ಆಜ್ ಫಿರ ಮರನೆ ಕಾ ಇರಾದಾ ಹೈ
ಎಂಬ ಗೀತೆಯಲ್ಲಿ, ಕವಿ ಶೈಲೇಂದ್ರ ಅವರು ೬೦ ರ ದಶಕದಲ್ಲಿಯೇ ಸ್ತ್ರೀವಾದವನ್ನು ಎತ್ತಿ ಹಿಡಿದಿದ್ದಾರೆ.
“ ಮುಳ್ಳಿನಿಂದ ಬಿಡಿಸಿಕೊಂಡು ಸೆರಗನ್ನು/
ಬಂಧನ ಮುಕ್ತಳಾಗಿ ಕಟ್ಟಿ ಗೆಜ್ಜೆ/
ಹಾರಿ ಬಿಟ್ಟಿಹೆ ಮನವ ತಡೆಯದಿರಿ ಯಾರೂ/
ವಿಹಂಗಮಿಸುತಿದೆ ಮನ/
ಮತ್ತೆ ಬಾಳುವ ಆಸೆ ಚಿಗುರಿದೆ/
ಸಾಯುವ ಮನಸಾಗಿದೆ”
ಎಂಬ ಸಾಲುಗಳಲ್ಲಿ ಬಂಧನದಿಂದ ಮುಕ್ತನಾದ ವ್ಯಕ್ತಿಯೊಬ್ಬ/ಳು ಹಳೆಯ ಜೀವನವನ್ನು ಹುಗಿದು ಹೊಸ ಬಾಳಿಗೆ ಉನ್ಮುಖವಾದ ಮನಸ್ಥಿತಿಯನ್ನು ಸುಂದರವಾಗಿ ಚಿತ್ರಿಸುತ್ತದೆ. ಇದೇ ಚಿತ್ರದ ಮತ್ತೊಂದು ಹಾಡನಲ್ಲಿ ಕವಿ ಶೈಲೇಂದ್ರ ಅವರು ಅಧ್ಯಾತ್ಮ ಚಿಂತನೆಯ ಕಡೆ ವಾಲಿದ್ದಾರೆ.
“ವಹಾಂ ಕೌನ್ ಹೈ ತೇರಾ ಮುಸಾಫಿರ್ ಜಾಯೆಗಾ ಕಹಾಂ” ಎನ್ನುವ ಹಾಡಿನಲ್ಲಿ,
“ ಓ ಪಯಣ ಗ ಯಾರಿಹರು ಅಲ್ಲಿ ನಿನ್ನವರು,
ಹೋಗುವದಾದರೂ ಎಲ್ಲಿಗೆ ನೀ/
ಒಂದು ಕ್ಷಣವಾದರೂ ಉಸಿರಾಡು ನಿರಾತಂಕ/
ಈ ನೆರಳು ಸಿಗುವದೆ ಮತ್ತೆ”
ಎಂದು ಹೇಳಿ ಜೀವನದ ವೈರಾಗ್ಯದ ಮುಖವನ್ನು ತೋರುತ್ತಾರೆ. ಒಲವಿನ ಸತ್ವದಲ್ಲಿ ಅವರಿಗಿರುವ ಅಪಾರ ನಂಬಿಕೆಯನ್ನು ಕವಿ ಶೈಲೇಂದ್ರ ಅವರು ಬಹಳ ಸುಂದರವಾಗಿ ಮತ್ತು ಪರಿಣಾಮಕಾರಿಯಾಗಿ, ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ” ಚಿತ್ರದ ಈ ಗೀತೆಯಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಡಕಾಯಿತರ ಹಾಗೂ ರಾಜೂ ಎಂಬ ಸರಳ ಸಾಮಾನ್ಯ ವ್ಯಕ್ತಿಯನ್ನು ಮುಖಾಮುಖಿಯಾಗಿಸುವ ಸನ್ನಿವೇಶ ಮತ್ತು ಅದನ್ನು ರಾಜ್ ಕಪೂರ್ ಅವರು ಚಿತ್ರೀಕರಣ ಮಾಡಿದ ರೀತಿ ಅವಿಸ್ಮರಣೀಯ!
“ ಹಂಭಿ ಹೈ ತುಂಭಿ ಹೋ ದೋನೊ ಹೈ ಆಮ್ನೆ ಸಾಮ್ನೆ”
ಹಾಡಿನ ಭಾವವನ್ನು ಬಿಂಬಿಸುವ ಕೆಲವು ಸಾಲುಗಳು ಕನ್ನಡದಲ್ಲಿ:
ಡಕಾಯತರ ದೈತ್ಯ ಶಕ್ತಿಯ ಸವಾಲು:
“ ನಮ್ಮ ಎದೆಗಳಲ್ಲಿ ಇರುವದು ಜ್ವಾಲೆ/
ಬೆಂಕಿಯ ಜೊತೆ ಒಡನಾಟ ನಮ್ಮದು/
ನಮಗೆ ಸವಾಲು ಎಸಗಿದವನು
ಆಗುವನು ಮಣ್ಣು ಪಾಲು
ಅದಕ್ಕೆ ಒಲವನ್ನು ಪ್ರತಿನಿಧಿಸುವ ರಾಜುವಿನ ಉತ್ತರ:
ನಿಮಗಿಂತ ನಗುತ ಉರಿದು ಬೂದಿಯಾಗುವ ಪತಂಗ ಕೀಟ ಉತ್ತಮ/
ಪ್ರೀತಿಗಾಗಿ ಮಡಿದು, ಹೆಸರು ಚಿರಾಯು ಮಾಡುತ್ತದೆ.”
ಇನ್ನೂ ಮುಂಬರುವ ಸಾಲುಗಳಲ್ಲಿ, ತಾನು ಭೋರ್ಗರೆಯುವ ಸಾಗರವೆಂದು ಶಕ್ತಿ ಹೇಳಿಕೊಂಡಾಗ, ಅದಕೆ ಪ್ರೀತಿ ನೀಡುವ ಉತ್ತರ
“ ಸಾಗರದ ಉಪ್ಪಿನ ನೀರನು ಕುಡಿಯಲುಂಟೆ/
ಸಿಂಪೆ ತನ್ನದಾಗಿಸಿದ ಒಂದು ನೀರಿನ ಹನಿಯೇ ಒಲವು/
ಪ್ರೀತಿಯೇ ಹರಳುಗಟ್ಟಿದ ಮುತ್ತಾಗಿ ಪರಿಣಮಿಸಿ
ಎಲ್ಲರಿಗೂ ನೀಡಿದೆ ಮುದ”
ಎನ್ನುವ ಸಾಲಿನಲ್ಲಿ ಒಲವಿನ ಮೇಲುಗೈಯನ್ನು ಸಾರಿದ್ದಾರೆ.
ಬಾಳೇ ಪ್ರೀತಿ, ಪ್ರೀತಿಯೇ ಬಾಳು ಎಂಬ ಭಾವವನ್ನು, ಶೈಲೇಂದ್ರ ಅವರು ‘ಸಂಗಂ’ ಚಿತ್ರದ ಈ ಹಾಡಿನಲ್ಲಿ ಬಹಳ ಮಾರ್ಮಿಕವಾಗಿ ವ್ಯಕ್ತ ಪಡಿಸಿದ್ದಾರೆ.
‘ ದೋಸ್ತ್ ದೋಸ್ತ್ ನಾ ರಹಾ,
ಪ್ಯಾರ್ ಪ್ಯಾರ್ ನಾ ರಹಾ/
ಜಿಂದಗಿ ಹಮೆ ತೆರಾ
ಏತಬಾರ್ ನಾರಹಾ” .
ಪ್ರಿಯತಮೆಯ ಒಲುಮೆಯನ್ನು ಶಂಕಿಸುವ ವ್ಯಕ್ತಿಯ ನಿರಾಶದಿಂದ ಹೊರಟ ಉದ್ಗಾರವಿದೆ-
“ ಉಳಿಯಲಿಲ್ಲ ಗೆಳಯ ಗೆಳೆಯನಾಗಿ/
ಇರಲಿಲ್ಲ ಪ್ರೀತಿ ಪ್ರೀತಿಯಾಗಿ/
ಹೇ ಜೀವನವೆ, ನಿನ್ನ ಮೇಲಿನ
ನಂಬಿಕೆಯೇ ಉಳಿಯಲಿಲ್ಲ”
ಎನ್ನುವ ಸಾಲುಗಳಲ್ಲಿ, ಒಲವೇ ಬಾಳಿನ ಸಾರ ಮತ್ತು ಒಲವೇ ಸಮಸ್ತ ಎನ್ನುವ ಭಾವವಿದೆ.
ಬಿಮಲ್ ರಾಯ್ ಅವರ ‘ ದೊ ಬೀಘಾ ಜಮೀನ್’ ಚಿತ್ರಕ್ಕಾಗಿ ಬರೆದ ಕವಿ ಶೈಲೇಂದ್ರ ಅವರ ಎಂದಿಗೂ ಮರೆಯಲಾಗದ ಹಾಡಿನ ಕುರಿತು ಪ್ರಸ್ತಾಪಿಸಿದೆ ಇದ್ದರೆ ಅಂಕಣ ಅಪೂರ್ಣವಿದ್ದಂತೆ.
“ ಧರ್ತಿ ಕಹೆ ಪುಕಾರ ಕೆ
ಬೀಜ್ ಬಿಛಾಲೆ ಪ್ಯಾರ್ ಕೆ/
ಮೌಸಮ್ ಬೀತಾ ಜಾಯ್”
“ ಋತು ಕಳೆದು ಹೋಗುವ ಮುನ್ನ,
ಒಲವಿನ ಬೀಜ ಬಿತ್ತಿಕೋ
ಎಂದು ಸಾರಿ ಹೇಳುತಿದೆ ಭೂಮಿ/
ನಿನ್ನ ಕುರುಹು ಏನಾದರೂ ಬಿಟ್ಟು ಹೋಗು/
ಯಾರು ಅರಿತಿಹರು, ಮತ್ತೆ ಈ ದಡಕೆ
ಬರುವದ ಬಿಡುವದ”
ಎಂಬ ಸಾಲುಗಳಲ್ಲಿ, ಶೈಲೇಂದ್ರ ಅವರು ‘ ಒಲವಿನ’ ಬೀಜ ಬಿತ್ತಿ ಜಗವೆಲ್ಲಾ ಪ್ರೀತಿಯ ಬೆಳೆಯಿಂದ ಹಸಿರಾಗಲಿ ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ. ಇಂತಹ ಉದಾತ್ತ, ಧನಾತ್ಮಕ ಚಿಂತನೆಗಳಿಂದ ಕೂಡಿದ ಹಾಡುಗಳು ಹಳೆಯದಾದರೂ, ಈಗಲೂ ಮನದಲ್ಲಿ ರಿಂಗಣಿಸಿ, ಮಾರ್ದವ ಭಾವವನ್ನು ಹುಟ್ಟಿಸುತ್ತವೆ. ಇಲ್ಲಿಗೆ ಅಂಕಣ ಮುಗಿಸುವೆ; ಮುಂದಿನ ವಾರದ ತನಕ ಉಲ್ಲೇಖಿಸಿದ ಯಾವುದಾದರೊಂದು ಹಾಡನ್ನು ಗುನಗುನಾಯಿಸೋಣ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..