- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಮೊನ್ನೆ ಟೊಮಾಟೋ ಕೆಚಪ್ ಬಾಟಲಿಯ ಮೇಲಿನ ಮುಚ್ಚಳವನ್ನು ಓಪನರ್ನಿಂದ ತೆಗೆದು ಅದರ ಮುಚ್ಚಳವನ್ನು ಕಸದ ಬುಟ್ಟಿಗೆ ಎಸೆಯುವಾಗ ಮನಸಿಗೆ ಪಿಚ್ಚೆನಿಸಿತು. ನಮ್ಮ ಬಾಲ್ಯದಲ್ಲಿ ಬಾಟಲಿಯ ಮುಚ್ಚಳಗಳನ್ನು ಢಕ್ಕನ್ ಎನ್ನುತ್ತಿದ್ದು ಇವು ನಮಗೆ ಬಹಳ ಅಮೂಲ್ಯವಾದ ವಸ್ತುಗಳಾಗಿದ್ದವು. ಇವುಗಳನ್ನು ಶೇಖರಿಸಲು ನಾವು ಬೀದಿ ಬೀದಿ ಅಲೆಯುತ್ತಿದ್ದ ದಿನಗಳು ನೆನಪಾದವು. ಅದೇ ರೀತಿ ಯಾರಾದರೂ ಸಿಗರೇಟ್ ಸೇದಿ ಅದರ ಪ್ಯಾಕೆಟ್ಗಳನ್ನು ಬೀದಿಗೆ ಎಸೆದರೆ , ಗಕ್ಕನೆ ಆ ಖಾಲಿಯಾದ ಪ್ಯಾಕೇಟ್ಗಳನ್ನು ಎತ್ತಿ ನಿಧಿ ಸಿಕ್ಕಷ್ಟು ಖುಷಿಯಾಗಿ ಅವುಗಳನ್ನು ಜೋಪಾನವಾಗಿ ತಂದು ಮನೆಯಲ್ಲಿ ಇಡುತ್ತಿದ್ದದ್ದನ್ನು ನೆನಪಿಸಿಕೊಂಡರೆ ಬಹಳ ಆಶ್ಚರ್ಯವೆನಿಸುತ್ತದೆ. ಕಡೆಗಣಿಸಿ ಎಸೆದ ಆ ವಸ್ತುಗಳಿಗೆ ಬಾಲಕರಾದ ನಾವು ಒಂದೊಂದು ಒಂದೊಂದು ಬ್ರಾಂಡ್ ನ ಮುಚ್ಚಳಕ್ಕೆ ಒಂದೊಂದು ಬೆಲೆ, ಅದೇ ರೀತಿ ಒಂದೊಂದು ರಿಕ್ತ ಸಿಗರೇಟ್ ಪ್ಯಾಕೇಟಿನ ಬೆಲೆ ( ಹೆಸರಾಂತ ಬ್ರಾಂಡ್ ಗಳಿಗೆ ಹೆಚ್ಚು ಬೆಲೆ) ಇಂತಿಷ್ಟು ಎಂದು ನಿಗದಿ ಮಾಡಿ ನಾವು ಹೊಸ ಮಕ್ಕಳಾಟಗಳನ್ನು ಸೃಷ್ಟಿ ಮಾಡಿ ಆಡುತ್ತಿದ್ದ ಬಾಲ್ಯದ ದಿನಗಳು ಮರುಕಳಿಸಿದವು.
ಸಂತೋಷ ಸಂತೃಪ್ತಿ ಹೊಂದಲು ನಮಗೆ ಬೆಲೆ ಬಾಳುವ ಆಟಿಕೆಗಳ ಅವಶ್ಯಕತೆ ಇರಲಿಲ್ಲ. ನಮ್ಮ ಸಂತೃಪ್ತಿಯನ್ನು ನಾವೇ ಕಂಡುಕೊಳ್ಳುತ್ತಿದ್ದ ದಿನಗಳು. ಆಡಲು ವಿಶಾಲವಾದ ಮೈದಾನುಗಳು, ಮರ ಕೋತಿ ಆಡಲು ಹೆಮ್ಮರಗಳ ಕೊರತೆ ಇರಲಿಲ್ಲ. ಕಣ್ಣು ಮುಚ್ಚಾಲೆ ಆಟದಲ್ಲಿ ಬಚ್ಚಿಟ್ಟುಕೊಳ್ಳಲು ಗಿಡಗಳು, ಪೊದೆಗಳು … ಆಹಾ ಮಾತುಗಳಲ್ಲಿ ಹಿಡಿಯಲು ಸಾಧ್ಯವಿಲ್ಲ ಆ ವೈವಿಧ್ಯಮಯವಾದ ಆಟಗಳ ಆನಂದವನ್ನು! ನಮ್ಮ ಸುತ್ತಲಿನ ಪ್ರತಿಯೊಂದು ವಸ್ತಗಳನ್ನು ಪ್ರೀತಿಸುತ್ತಿದ್ದ ದಿನಗಳು ಅವು. ಪರಿಸರದ ಜೊತೆ ಹಾಸುಹೊಕ್ಕಾಗಿ ಮೈಮರೆತು ಆಡುತ್ತಿದ್ದ ‘ ಸ್ವರ್ಣ ಯುಗ’ ವದು.
ಚಿಕ್ಕಂದಿನಲ್ಲಿ ನಾವು ಇರುತ್ತಿದ್ದ ವಠಾರದಲ್ಲಿ ೧೨ ಮನೆಗಳಿದ್ದು, ಮನೆಗಳ ಮುಂದೆ ವಿಶಾಲವಾದ ಅಂಗಳವಿತ್ತು. ಅಂಗಳದಲ್ಲಿ ತರಹೇವಾರು ಹೂವಿನ ಗಿಡಗಳು, ಸಸಿಗಳು, ಹಣ್ಣಿನ ಮರಗಳಿಂದ ಕೂಡಿ ( ಪೇರಲೆ ಹಣ್ಣು, ನಿಂಬೆ ಹಣ್ಣು, ಬಳುವಲ ಕಾಯಿ ಇತ್ಯಾದಿ..) ಒಂದು ವನದ ಮಧ್ಯದಲ್ಲಿ ಇರುವಂತೆ ನಮಗೆ ಭಾಸವಾಗುತ್ತಿತ್ತು. ಎಲ್ಲ ಗಿಡ , ಮರ,ಸಸಿಗಳ ಸುತ್ತ ಬೇಲಿಯಂಥ ಬಳ್ಳಿಗಳಿದ್ದು ಆ ಬಳ್ಳಿಗಳಿಗೆ ತದ್ರೂಪ ಬಾತು ಕೋಳಿಯನ್ನು ಹೋಲುವಂಥ ಹೂವುಗಳು ಆಗುತ್ತಿದ್ದ ಸುಂದರ ದೃಶ್ಯ ಕಣ್ಣುಗಳ ಎದುರಿಗೆ ಬರುತ್ತದೆ.
ನಮ್ಮ ಮನೆಯ ಮುಂದೆ ಇರುವ ಒಂದು ಗುಲಾಬಿ ಗಿಡದಲ್ಲಿ ಬಹಳ ಸುಂದರವಾದ ಹೂವುಗಳು ಅರಳುತ್ತಿದ್ದವು. ನಸುಕಿನಲ್ಲಿ ಬೇಗನೆ ಎದ್ದು ಅವುಗಳನ್ನು ಕೀಳಲು ಎಲ್ಲ ಮನೆಯ ಹುಡುಗರಲ್ಲಿ ಪೈಪೋಟಿ ಜರಗುತ್ತಿತ್ತು. ಸ್ವಲ್ಪ ತಡವಾಗಿ ಎದ್ದು ಹೂವುಗಳು ಸಿಗದಾಗ ನಮಗೆ ಆಗುತ್ತಿದ್ದ ನಿರಾಸೆಯನ್ನು ನಾನು ಮಾತುಗಳಲ್ಲಿ ಹೇಳುವದು ಕಷ್ಟ. ಮನೆ ಅಷ್ಟೇ ಅಲ್ಲ, ಹೈದರಾಬಾದಿನ ರಸ್ತೆಗಳ ಇಕ್ಕೆಲದಲ್ಲಿ ದೊಡ್ಡ ದೊಡ್ಡ ಮರಗಳಿದ್ದು ಬೇಸಿಗೆಯ ಧಗೆ ನಮಗೆ ಗೊತ್ತಾಗುತ್ತಿರಲಿಲ್ಲ.
ನಮ್ಮ ಮನೆಯ ಹತ್ತಿರ ವಿಶಾಲವಾದ ಆಲದ ವೃಕ್ಷವಿತ್ತು. ಜೋರಾಗಿ ಮಳೆ ಗಾಳಿ ಬೀಸಿದಾಗ ಅದರಿಂದ ಸುಯ್ಯನೆ ಹೊರಡುವ ಧ್ವನಿ ತರಂಗಗಳು ಆನಂದದಿಂದ ಎನೋ ವಿಷಯ ಹೇಳುತ್ತ ಗೀತೆಯೊಂದನ್ನು ಗುನುಗುನಿಸುತ್ತದೆ ಎಂದು ಅನಿಸುತ್ತಿತ್ತು. ಆಗಿದ್ದ ಎಷ್ಟೋ ಮರಗಳು ಈಗಿಲ್ಲ. ಆದರೆ ಈ ಮರವೊಂದು ಉಳಿದುಕೊಂಡಿದೆ. ಈಗಲೂ ನಾನು ಆ ಕಡೆಗೆ ಹೋದಾಗ ಅದರಿಂದ ಪರಿಚಿತವಾದ ಗಾಳಿ ಬೀಸುತ್ತದೆ ; ನನ್ನನ್ನು ಗುರುತು ಹಿಡಿದು ಮಾತನಾಡಿಸುತ್ತದೆ. ಅದರ ಹತ್ತಿರ ಸ್ವಲ್ಪ ಸಮಯ ನಿಂತು ಪರಸ್ಪರ ಸುಖ ದುಃಖಗಳನ್ನು ಹಂಚಿ ಕೊಳ್ಳುತ್ತೇವೆ. ನನ್ನ ನಿಶ್ವಾಸದ ಇಂಗಾಲದ ಡೈ ಆಕ್ಸೈಡ್ ಹೀರಿ ನನಗೆ ಶುದ್ಧ ಗಾಳಿಯಲ್ಲಿಯ ಆಮ್ಲ ಜನಕವನ್ನು ನೀಡಿ ಸಾಂತ್ವನ ಹೇಳುತ್ತದೆ. ಅದರ ಕಣ್ಣ ಮುಂದೆಯೇ ಅದರ ‘ ಜೊತೆಗಾರ’ ಮರಗಳೆಷ್ಟೋ ಕಡಿದು ಬಿದ್ದ ವಿಷಯವನ್ನು ಹೇಳಿ ಅವು ಕಾಣೆಯಾಗಿದ್ದಕ್ಕೆ ಮರಗುತ್ತದೆ. ನಾನು ಅಸಾಹಯಕನಾಗಿ ನಿರುತ್ತರನಾಗುತ್ತೇನೆ.
ಕಳೆದ ಕಾಲಾವಧಿಯಲ್ಲಿ ಬದಲಾದ ಶಹರಿನ ಚಿತ್ರಗಳು ನನ್ನ ಕಣ್ಣುಗಳ ಮುಂದೆ ಬರುತ್ತವೆ. ಎಲ್ಲಿ ಕೆರೆಗಳು, ಎಲ್ಲಿ ಮರಗಳು! ಎಲ್ಲಾ ಭಣ ಭಣ!
ಪರಿಸರವನ್ನು ಪ್ರೀತಿಸುತ್ತಾ ಹೊಂದಾಣಿಕೆಯಿಂದ ಬಾಳುತ್ತಿದ್ದ ನಮ್ಮ ಜೀವನ ಶೈಲಿಗೆ ಏನಾಯಿತು? ಎಲ್ಲ ವಸ್ತುಗಳಿಗೂ ಅದರದರ ಮೌಲ್ಯವಿತ್ತು. ಯೂಜ್ ಎಂಡ್ ಥ್ರೋ- ಬಳಸು ಎಸೆ ಸಂಸ್ಕೃತಿ ನಮ್ಮದಾಗಿರಲಿಲ್ಲ. ಯಾವ ಅಬ್ಬರವೂ ಇಲ್ಲದೆ ನಿಸರ್ಗಕ್ಕೆ, ಪರಿಸರಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದೆವು. ಗಾಜಿನ ಬಾಟಲ್ಲುಗಳಲ್ಲಿ ಹಾಲು ಬಂದರೆ, ಆ ಹಾಲನ್ನು ಪಾತ್ರೆಗೆ ಸುರಿದ ಬಳಿಕ ಖಾಲಿ ಬಾಟಲ್ಲುಗಳನ್ನು ತೊಳೆದು ಮರುದಿನ ಬಂದ ಹಾಲಿನ ಬಾಟಲುಗಳ ಜೊತೆ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಡಿಗೆಯ ಎಣ್ಣೆಗೆ ಮನೆಯಲ್ಲಿ ಕ್ಯಾನುಗಳನ್ನು ಬಳಸುತ್ತಿದ್ದ ದಿನಗಳವು.
ಪರಿಸರದ ಸಂಗಡ ಸಮನ್ವಯ ಸಹಜವಾದ ಗುಣವಾಗಿತ್ತು ; ಸ್ವಯಂಪ್ರೇರಿತ, ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅದು ಯಾವ ಘಳಿಗೆಯಲ್ಲಿ ಸ್ವಾರ್ಥ ಸೇರಿಕೊಂಡಿತೋ, ಎಲ್ಲ ಸರ್ವ ನಾಶವಾಯಿತು. ಪರಿಸರದ ಬಗ್ಗೆ ಒಲವು ಕ್ಷೀಣಿಸುತ್ತಾ ಹೋಯಿತು. ನಿಸರ್ಗದಿಂದ ದೂರವಾಗುತ್ತ ಹೋದ ಮಾನವನ ಮನಸು ತಾನು ವಾಸಿಸುತ್ತರುವ ಹಾಗೂ ಸುತ್ತಲೂ ಇರುವ ಕಾಂಕ್ರೀಟ್ ಭವನಗಳಂತೆ ಕಠಿಣವಾಗುತ್ತಾ ಹೋಗಿ ಎಲ್ಲಿಯೋ ತನ್ನ ಒಲವಿನ ಮಿದುತ್ವವನ್ನು ಕಳೆದುಕೊಂಡಿತು. ಕೆಲವು ಗಿಡ ಮರಗಳಲ್ಲ , ಕಾಲಕ್ರಮೇಣ ಅರಣ್ಯಗಳೇ ಮಾಯವಾದವು, ನದಿಗಳು ಕಲುಷಿತಗೊಂಡವು.
ನಾವು ಚಿಕ್ಕವರಿದ್ದಾಗ ನಮ್ಮ ಶಾಲೆಯ ಕಡೆಯಿಂದ ವಿಕಾರಾಬಾದಿನ ಹತ್ತಿರದಲ್ಲಿರುವ ಅನಂತಗಿರಿ ಅರಣ್ಯಧಾಮಕ್ಕೆ ಎಕ್ಸಕರ್ಶನ್ ( ಪ್ರವಾಸ) ಹೋಗಿದ್ದೆವು . ಆಗ ನಾವು ಕೆಲವು ಹುಡುಗರು ಅಲ್ಲಿರುವ ಬಾರಿ ಗಿಡಗಳಿಂದ ಉದುರಿದ ಹಣ್ಣುಗಳನ್ನು ಆರಿಸುತ್ತ ನಮಗೆ ಗೊತ್ತಾಗದಂತೆ ಕಾಡಿನ ಒಳಗೆ ಹೊಕ್ಕೆವು; ಕಾಡು ನಿಬಿಡವಾಗುತ್ತಾ ಹೋಗಿ ಕತ್ತಲು ಆವರಿಸಿ ದಾರಿತಪ್ಪಿಸಿಕೊಂಡು ಗಲಿಬಿಲಿಗೊಂಡು ಗಾಬರಿಯಾದಾಗ , ನಮ್ಮ ಮೇಷ್ಟರುಗಳು ನಮ್ಮನ್ನು ಹುಡುಕಿ ಕಾಡಿನಿಂದ ಹೊರ ತರಲು ಹರಸಾಹಸ ಮಾಡಬೇಕಾಯಿತು. ಆ ಘಟನೆಯನ್ನು ನೆನೆಸಿಕೊಂಡರೆ ಈಗಲೂ ಮೈಮೇಲೆ ಮುಳ್ಳು ಏಳುತ್ತವೆ. ಆಮೇಲೆ ಎಷ್ಟೋ ವರ್ಷಗಳ ಬಳಿಕ ನಾನು ನನ್ನ ಉದ್ಯೋಗ ನಿಮಿತ್ತ ವಿಕಾರಾಬಾದಿನ ಹತ್ತಿರದ ತಾಂಡೂರಿನಲ್ಲಿ ಕೆಲಸ ಮಾಡುವಾಗ ನಾನು ನನ್ನ ಬಾಲ್ಯದ ಅನಂತಗಿರಿ ಕಾಡನ್ನು ಎಷ್ಟು ಅರಸಿದರೂ ಸಿಗಲಿಲ್ಲ, ಎಲ್ಲಾ ಬೋಳು ಬೋಳಾಗಿತ್ತು. ೨೦ ವರ್ಷಗಳ ಅವಧಿಯಲ್ಲಿ ಆ ಕಾಡಿನ ಅವಶೇಷವೂ ಉಳಿದಿರಲಿಲ್ಲ. ಎಂಥ ವಿಷಾದಕರವಾದ ವಿಷಯ!
ವಾತಾವರಣವನ್ನು ತಂಪಾಗಿಸುವಲ್ಲಿ ಸಹಾಯ ಮಾಡುವ ಮರಗಳು, ಭೂಮಿಯನ್ನು ಸವೆತದಿಂದ ಕಾಪಾಡುವ ಮರಗಳು,ಗಾಳಿಯಲ್ಲಿನ ಧೂಳನ್ನು ಮತ್ತು ಅದರ ಕಣಗಳನ್ನು ತಮ್ಮಲ್ಲಿ ಸೇರಿಸಿಕೊಂಡು ಮಲಿನವನ್ನು ದೂರ ಮಾಡುವ ಮರಗಳು, ನೀರಿನ ಪ್ರದೂಷಣೆಯನ್ನು ದೂರ ಮಾಡುವ ಮರಗಳು, ಶಬ್ದ ಮಾಲಿನ್ಯವನ್ನು ದೂರ ಮಾಡುವ ಮರಗಳು ; ಎಲ್ಲಕ್ಕಿಂತ ಮಿಗಿಲಾಗಿ ಕಾರ್ಬನ್ ಡೈಆಕ್ಸೈಡ್ ನ್ನು ತಾವು ಸೇವನೆ ಮಾಡಿ ಸರಾಸರಿ ಒಂದೊಂದು ಮರ ನಾಲ್ಕು ಜನರಿಗೆ ಬೇಕಾಗುವಷ್ಟು ಆಮ್ಲಜನಕ (ಆಕ್ಸೀಜನ್) ನೀಡುವ ಮರಗಳಿಲ್ಲದ ಪರಿಸ್ಥಿತಿಯನ್ನು ಊಹಿಸುವದೂ ಅಸಾಧ್ಯವಾದದ್ದು.
ನಿಸರ್ಗದಿಂದ ಹಸಿರು ಮಾಸಿ ಹೋಗುತ್ತಿದ್ದಂತೆ ಬಾಳಿನಲ್ಲಿ ಒಲವೂ ಮಾಸುತ್ತ ಹೋಗುವದು ಖಚಿತ!
ಈ ವಿಷಯವನ್ನು ಮನಗಂಡು ಕಾಡನ್ನು ಮತ್ತು ಮರಗಳನ್ನು ರಕ್ಷಿಸುವ ತೀವ್ರವಾದ ಸಂವೇದನೆಯನ್ನು ತಾಳಿ ಅದರ ರಕ್ಷಣೆಗಾಗಿ ತಮ್ಮ ಪ್ರಾಣಗಳನ್ನೇ ತೆತ್ತರು ‘ ಬಿಶ್ನೋಯಿ’ ಜನಾಂಗ. ಇವರನ್ನು ಮೂಲ ಪರಿಸರಾವಾದಿಗಳೆಂದು ಪರಿಭಾವಿಸಲಾಗುತ್ತದೆ. ಸದ್ದು ಗದ್ದಲ, ಅಬ್ಬರ ಮತ್ತು ಯಾವುದೇ ರೀತಿಯ ಪ್ರಚಾರವಿಲ್ಲದೆ ತಲೆತಲಾಂತರಗಳಿಂದ ಪರಿಸರವನ್ನು ರಕ್ಷಿಸುವ ಕಾರ್ಯವನ್ನು ಬಹಳ ಪ್ರೀತಿ- ಶ್ರದ್ಧೆಗಳಿಂದ ಮಾಡುತ್ತಾ ಬಂದಿದ್ದಾರೆ. ಪ್ರಕೃತಿಯ ಪ್ರತಿ ಅವರ ಒಲವು ಹಾಗೂ ಗೌರವ ದೈವದತ್ತವಾದದ್ದು, ಹುಟ್ಟಿನಿಂದಲೇ ಬಂದುದು ; ಬಹಳ ಸಹಜವಾಗಿ ಅವರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಎಲ್ಲ ಪ್ರಕಾರದ ಜೀವಿಗಳ ಪ್ರತಿ ಪ್ರೇಮವನ್ನು ತೋರುವ ಈ ಜನಾಂಗ ಅಳಿವಿನಂಚಿನಲ್ಲಿರುವ ಕೃಷ್ಣ ಮೃಗವನ್ನು ಮತ್ತು ಹರಿಣಗಳನ್ನು ಬೇಟೆಯಾಡಿದ ಬಾಲಿವುಡ್ ತಾರೆಯರ ಮೇಲೆ ಸಿಡಿದೆದ್ದು ಅವರ ವಿರುದ್ಧ ಕಾನೂನು ಮೊಕದ್ದಮೆ ಹೂಡಿ ಅವರಿಗೆ ಶಿಕ್ಷೆ ಸಿಗುವಂತೆ ಮಾಡಿದ ವಿಷಯ ದೇಶದಾದ್ಯಂತ ಕೆಲವು ವರ್ಷಗಳ ಹಿಂದೆ ಸುದ್ದಿ ಮಾಡಿತ್ತು.
ಪರಿಸರದ ಸಂರಕ್ಷಣೆಯೇ ಅವರ ಧ್ಯೇಯವಾಗಿದ್ದು ಆ ನಂಬಿಕೆಯನ್ನು ತಮ್ಮ ಧರ್ಮ-ಶ್ರದ್ಧೆಗಳ ಜೊತೆ ಬೆಸೆದದ್ದು ಈ ಜನಾಂಗದ ವಿಶೇಷ. ಬಿಶ್ನೋಯಿ ಮಹಿಳೆಯೊಬ್ಬಳು ಒಂದು ಕಡೆ ತನ್ನ ಮಗುವಿಗೆ ಹಾಲೂಡಿಸುತ್ತ ಇನ್ನೊಂದು ಕಡೆ ಮೊಲೆಯಿಂದ ಚಿಗರೆಯ ಮರಿಗೆ ಹಾಲೂಡಿಸುವ ಚಿತ್ರವನ್ನು ನೋಡಿ ನಾನು ಬೆರಗುಗೊಂಡೆ. ಆ ಮಾತೃ ಮಮತೆಗೆ ನನ್ನ ಸಹಸ್ರಾರು ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಇದು ಸಹಜೀವಿಯ ಬಗ್ಗೆ ತೋರುವ ಪ್ರೀತಿಯ ಪರಾಕಾಷ್ಠೆ.
ತಾಯೆ! ಹಾಲೂಡಿಸುತಿರುವೆಯಾ
ವಾತ್ಸಲ್ಯದ ಹೊನಲು ಹರಿಸುತಿರುವೆಯಾ
ಮಮತೆಯ ಕಡಲು ಹೊತ್ತಿರುವೆಯಾ
ಮಡಿಲಲಿ
ಸಮುದ್ರ ಮಥನದಲಿ ಹೊರ ಬಂದ ಅಮೃತವ ಭಾಂಡದಲಿ
ಕಾಪಿಟ್ಟು ಇಟ್ಟರೆ ನಿನ್ನ ಎದೆಯಲಿ ಸುರರು
ಪಸರಿಸಿತೆ ನಿನ್ನ ಅಂತಃಕರಣದ ಘಮಲು
ಕಾಡಿನಲಿ
ಜಾಡು ಹಿಡಿದು ಬಂದಿತೆ ಜಿಗಿಯುತ ಜಿಂಕೆ ಮರಿ ನಿನ್ನ ಮಡಿಲಿಗೆ
ಬೆಚ್ಚನೆಯ ನಿನ್ನ ಸಾಮೀಪ್ಯದಲಿ
ದೊರಕಿತೆ ಅದಕೆ ಭದ್ರತೆ
ವಿಧಿ ಆಟವನು ಮೀರಿ ನೀನೆರವ ತಾಯ್ತನದ
ಸುಖವನು ಸವಿಯುತ್ತ
ಪೀಯೂಷವನು ಹೀರುತ್ತಾ
ಮೈ ಮರೆತಿದೆ
ಮೃಗ – ಮಾನವ ಬಾಂಧವ್ಯದ ಅವಿನಾಭಾವ ತೋರುತಿದೆ
ಪಳಗಿಸಬಹುದು ಮೃಗೀಯತೆಯ
ಪ್ರೀತಿ ಕರುಣೆಗಳಿಂದ
ಎಂದು ಸಾರಿ ಹೇಳುತಿದೆ
ತಾಯ್ತನವೇ ಮೂರ್ತಿವೆತ್ತ ನಿನ್ನ ಚಿತ್ರ
ಗಾತ್ರದೊಳಗೆ ಬಂದಿ ಅಲ್ಲ ಮನುಜ ಮಾತ್ರ
ಹಿರಿದು ಮಾಡಿದರೆ ಮನದ ಪಾತ್ರ
ಹುಟ್ಟಿಸಬಹುದು ಬೇರೊಂದು ಸುಂದರ ಲೋಕ
ಸೃಷ್ಟಿಯ ಗುಟ್ಟನು ಅರುಹಿದ ತಾಯೆ!
ನಿನಗೆ ನಮನ ಕೋಟಿ ನಮನ
ಜಿಂಕೆ ಮರಿಯೆ ತನ್ನ ಮಗುವೆಂದು ಬಗೆದು, ನಿರ್ವಂಚನೆಯಿಂದ ತನ್ನ ಹಸುಗೂಸಿನ ಜೊತೆ ಹಾಲೂಡಿಸುವ ಮಹಾತಾಯಿ ಈ ಬಿಶ್ನೋಯಿ ಮಹಿಳೆಯ ಚಿತ್ರವನ್ನು ನೋಡಿ ನನ್ನ ಚಿತ್ತದಲ್ಲಿ ಸ್ಫುರಿಸಿದ ಆರ್ದ್ರ ಭಾವದ ಕೆಲವು ಸಾಲುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಎಷ್ಟು ಹೊತ್ತಿಗೆಗಳು ಬರೆದರೂ ಈ ಚಿತ್ರ ನಮ್ಮ ಅಂತರಂಗದಲ್ಲಿ ಹುಟ್ಟಿಸುವ ಅನುಭೂತಿಗೆ ಸಾಟಿಯಾಗಲಾರದು (This picture speaks volumes)
ಈ ಜನಾಂಗದ ಇನ್ನಿತರ ವಿಷಯಗಳನ್ನು ಮತ್ತು ಅದರ ಜೊತೆ ಒಲವಿನ ಬಗ್ಗೆ ಅನೇಕ ಮನದಾಳದ ಮಾತುಗಳನ್ನು ಮುಂದಿನ ಅಂಕಣದಲ್ಲಿ ಹಂಚಿಕೊಳ್ಳುವೆ.
ವಂದನೆಗಳು
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ