ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕತ್ತಲಲ್ಲಿ ಪರಿಮಳ ಬೀರುವ ಮಲ್ಲಿಗೆ ಹೂ

ಡಾ. ಪಾರ್ವತಿ ಐತಾಳ್

ಪಾಲಿಯೇಟಿವ್ ಕೇರ್ ಸೆಂಟರ್ ಮೇಲಿನ ಅಂತಸ್ತಿನಲ್ಲಿದ್ದದ್ದು ಒಳ್ಳೆಯದಾಯಿತು. ಕೆಳಗಿನ ಒತ್ತಡ ಗಲಾಟೆಗಳೇನೂ ಇಲ್ಲಿಲ್ಲ. ಹೆರಿಗೆ ಕೋಣೆಯ ಮುಂದೆ ಕಾದು ನಿಂತವರ ಆತಂಕವೂ, ತೀವ್ರ ನಿಗಾ ಘಟಕದ ಮುಂದೆ ಉಸಿರು ಬಿಗಿಹಿಡಿದು ನಿಂತವರ ಎದೆ ಬಡಿತವೂ ಇಲ್ಲಿಗೆ ಬರಲಾರವು. ಇಲ್ಲಿ ಸುಮಾರಿಗೆ ಶಾಂತ ವಾತಾವರಣವಿದೆ. ಶರೀರದೊಳಗಿನ ಸುಡುವ ವೇದನೆಯ ತಾಪದಿಂದ ಬಿಡುಗಡೆ ಬಯಸಿ ಬರುವ ಮನಸ್ಸುಗಳಿಗೆ ಈ ಶಾಂತತೆ ತಂಪು ನೆರಳು ನೀಡುತ್ತದೆ.

ಇಲ್ಲಿ ನಿಂತು ಮೂಡುಬದಿಯ ಕಿಟಕಿಯಿಂದ ನೋಡಿದರೆ ಹೂದೋಟ ಮತ್ತು ಕಾಂಪೌಂಡುಗಳು ಕಾಣಿಸುತ್ತವೆ. ವಿಶಾಲವಾದ ಕಾಂಪೌಂಡಿನಾಚೆ, ದೂರದಲ್ಲಿ ಪರ್ವತ ಶ್ರೇಣಿಗಳು. ಒಂದರ ಮೇಲೆ ಒಂದಾಗಿ, ತಲೆಯೆತ್ತಿ ಅವು ಈ ಕಡೆಗೆ ಸದಾ ನೋಡುತ್ತಿರುತ್ತವೆ. ಏನೋ ಕೇಳುವ ಹಾಗೆ. ಪರ್ವತ ಸಾಲುಗಳ ಶಿಖರಗಳಲ್ಲೆಲ್ಲೋ ಆಕಾಶ ಮೈ ಚಾಚಿ ಮಲಗಿದೆ. ಪರ್ವತಗಳಿಗೂ ಆಕಾಶಕ್ಕೂ ನಡುವೆ ಎಲ್ಲಿಂದಲೋ ಸೂರ್ಯ ಉದಿಸಿ ಹಕ್ಕಿಗಳನ್ನೆಬ್ಬಿಸುತ್ತಾನೆ, ಹೂಗಳನ್ನು ಅರಳಿಸುತ್ತಾನೆ.

ಹೂದೋಟದಲ್ಲಿ ತುಂಬಾ ಗಿಡಗಳಿವೆ. ಕಾಂಪೌಂಡಿನ ಹೊಂಗಾರೆ ಮರದ ಕೆಂಪು ಹೂಗಳು ಬೆಂಕಿಯಂತೆ ಕಣ್ಣಿಗೆ ಹೊಡೆಯುತ್ತಿವೆ. ಮಲ್ಲಿಗೆ ಹೂಗಳು ಅರಳುವುದು ಮಾವಿನ ಕೊಂಬೆಗಳಲ್ಲಿ. ಗೌರಿಗೆ ಮಲ್ಲಿಗೆ ಹೂಗಳೆಂದರೆ ಇಷ್ಟ.

ಹೊಂಗಾರೆ ಹೂವಿನ ಅಗ್ನಿಜ್ವಾಲೆಗಳು ದೇಹದೊಳಗನ್ನೆಲ್ಲ ದಹಿಸುತ್ತ ಪೂರ್ತಿಯಾಗಿ ಆವರಿಸಿಕೊಳ್ಳುವ ಯಾತನೆಯಂತೆ ಎಂದು ಅವಳು ಒಮ್ಮೆ ಹೇಳಿದಳು. ಹೊಂಗಾರೆ ಮರದತ್ತ ನೋಡದೇ ಇರಲು ಅವಳು ಯಾವಾಗಲೂ ಎಚ್ಚರಿಕೆ ವಹಿಸುತ್ತಿದ್ದಳು.

ಆದರೆ ಮಾವಿನಮರದ ಮೇಲ್ಭಾಗದ ತನಕವೂ ಹಬ್ಬಿ ಚಪ್ಪರ ಹಾಕಿದ್ದ ಮಲ್ಲಿಗೆ ಬಳ್ಳಿಯಲ್ಲಿ ರಾತ್ರಿ ಹೊತ್ತು ಅರಳುವ ಹೂಗಳನ್ನು ಅವಳು ಬಹಳವಾಗಿ ಇಷ್ಟ ಪಡುತ್ತಿದ್ದಳು. ಚಿಕ್ಕಂದಿನಿಂದಲೇ ಮಲ್ಲಿಗೆ ಹೂಗಳೆಂದರೆ ಅವಳಿಗೆ ಪಂಚಪ್ರಾಣ. ಶಾಂತವೂ, ಶುಭ್ರವೂ ಆಗಿದ್ದು ತಂಪಗೆ ಸುವಾಸನೆ ಸೂಸುವ ಮಲ್ಲಿಗೆ ಹೂಗಳು. ಯಾವಾಗಲೂ ಅವುಗಳನ್ನು ಹೆಕ್ಕಿ ತಂದು ಮಾಲೆ ಕಟ್ಟುವುದೆಂದರೆ ಅವಳಿಗೆ ಎಲ್ಲಿಲ್ಲದ ಆಸಕ್ತಿ. ನಾನು ಅವಳಿಗೆ ಮಲ್ಲಿಗೆ ಹೂ ಹೆಕ್ಕಿ ಕೊಟ್ಟಿದ್ದೆನೆಂದು ಅವಳು ಹೇಳುತ್ತಾಳೆ. ಹೌದು. ಇಷ್ಟು ವರ್ಷಗಳು ಉರುಳಿ ಹೋದರೂ ನನಗೂ ಅದು ನೆನಪಿದೆ.

ಅವಳನ್ನು ನೋಡಲು ಬಂದಾಗಲೆಲ್ಲ ಹಾಸಿಗೆಯಲ್ಲಿ ದಿಂಬನ್ನು ತುಸು ಎತ್ತರಕ್ಕೆ ಒರಗಿಸಿಟ್ಟು ಕಿಟಕಿಯ ಮೂಲಕ ಅವಳು ಹೊರಗೆ ನೋಡುತ್ತ ಇರುತ್ತಿದ್ದಳು. ದೂರ, ಕ್ಷಿತಿಜದಲ್ಲಿ, ತಲೆಯೆತ್ತಿ ನಿಂತು ನೋಡುವ ಪರ್ವತ ಸಾಲುಗಳೊಂದಿಗೆ ಏನೋ ಮಾತಾಡುತ್ತಿರುವಂತೆ. ಬಹುಶಃ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಿರಬಹುದು.

ಕಳೆದ ದಿನ ಅವಳು ಇದ್ದಕ್ಕಿದ್ದಂತೆ ನನ್ನನ್ನು ಕೇಳಿದಳು: ‘ಗೋಪಿ, ಮಲ್ಲಿಗೆ ಯಾಕೆ ರಾತ್ರಿ ಹೂ ಬಿಡುತ್ತೆ?’

ರಾತ್ರಿ ಹೊತ್ತು ಅರಳುವ ಹೂಗಳು ಯಾಕೆ ಬಿಳಿಯ ಬಣ್ಣದ್ದಾಗಿರುತ್ತವೆ ಎಂದು ಬಾಟನಿ ಟೀಚರ್ ಕಲಿಸಿದ್ದು ನೆನಪಿದೆ. ನಾನು ಯೋಚಿಸುತ್ತ ನಿಂತಾಗ ಗೌರಿ ಹೇಳಿದಳು : “ಮಲ್ಲಿಗೆ ಹೂಗಳು ಎಂದೂ ಕಾಯಿಗಳಾಗುವುದಿಲ್ಲ. ಬೇರು ಹಿಡಿಸಿದ ಬಳ್ಳಿಗಳನ್ನೇ ನೆಡಲು ಉಪಯೋಗಿಸುತ್ತಾರೆ. ಹಾಗಾದರೆ ರಾತ್ರಿಯಲ್ಲಿ ಮತ್ತೆ ಯಾಕೆ ಬಿಳಿಯ ಹೂಗಳನ್ನು ಅರಳಿಸುವುದು? ಸುಮ್ಮನೆ ಕತ್ತಲಿಗೆ ಪರಿಮಳ ನೀಡುವ ಉದ್ದೇಶದಿಂದಲೆ?”

ರಾತ್ರಿಯಿಡೀ ಅರಳಿ ನಿಂತು ಪರಿಮಳ ಬೀರಿದ ನಂತರ ಮುಂಜಾವ ಮಂಜು ಹನಿಗಳ ಭಾರದಿಂದಾಗಿ ಉದುರಿ ಬೀಳುವ ಮಲ್ಲಿಗೆ ಹೂ ಬದುಕಿನ ಯಾವ ಭಾವವನ್ನು ಪ್ರಕಟಿಸುತ್ತದೆ? ನಾನು ನನ್ನನ್ನೇ ಪ್ರಶ್ನಿಸಿದೆ.

ಕೆಲವು ವರ್ಷಗಳಾದವು ಗೌರಿ ಗಲ್ಫ್‍ನಿಂದ ತಿರುಗಿ ಬಂದು ಅವಳ ಗಂಡ ಖರೀದಿಸಿದ ಬೃಹತ್ತಾದ ಹಳೆಯ ತೊಟ್ಟಿಮನೆಯನ್ನು ಒಡೆದು ಹಾಕಿ ಅಲ್ಲಿ ಒಂದು ಹೊಸ ಮನೆ ಕಟ್ಟಿಸಿಯಾಗಿದೆ. ಅವಳೀಗ ಅಲ್ಲಿ ವಾಸವಾಗಿದ್ದಾಳೆ. ಅಪರೂಪಕ್ಕೆ ಕುಟುಂಬದ ಮೂಲ ಮನೆಗೆ ಬಂದಾಗ ಅವಳು ನನ್ನ ಅಮ್ಮನನ್ನು ಭೇಟಿಯಾಗಲು ಬರುತ್ತಿದ್ದಳು. ಅಮ್ಮ ಒಮ್ಮೆ ಹೇಳಿದಳು. “ಗೌರಿಗೆ ಭಯಂಕರವಾದ ಒಂದು ಕಾಯಿಲೆ ಹಿಡ್ಕೊಂಡು ಬಿಟ್ಟಿದೆ. ಅವಳ ಗಂಡ ಹಣ ಏನೋ ಕಳುಹಿಸಿ ಕೊಡ್ತಾನೆ ಅಷ್ಟೇ! ಬರುವುದಾಗಲೀ ನೋಡಿಕೊಳ್ಳುವುದಾಗಲೀ ಇಲ್ಲ. ಗೌರಿ ಬಂದಾಗಲೆಲ್ಲ ನಿನ್ನನ್ನು ಕೇಳುತ್ತಿರುತ್ತಾಳೆ. ಕಳೆದ ವಾರವೂ ಬಂದಿದ್ದಳು”.

ಗೌರಿಯ ಕಾಯಿಲೆ ಗಂಭೀರ ಹಂತಕ್ಕೆ ಹೋಗಿ ಸುಮಾರು ಆರು ತಿಂಗಳುಗಳಾದವಂತೆ. ಅವಳು ಪಾಲಿಯೇಟಿವ್ ಕೇರ್ ಸೆಂಟರಿಗೆ ಸೇರಿ ಹೆಚ್ಚು ಕಡಿಮೆ ಒಂದು ತಿಂಗಳಾಯಿತೆಂದು ಅಮ್ಮ ಹೇಳಿದಳು: “ಗೋಪಿ, ನೀನೊಮ್ಮೆ ಹೋಗಿ ನೋಡು. ನಡು ನಡುವೆ ಹೋಗ್ತಾ ಇರು. ಪಾಪ, ಅವಳಿಗೆ ಯಾರೂ ಇಲ್ಲ. ರವಿ ತೀರಿಕೊಂಡ ನಂತರ ಮನೆಯವರ್ಯಾರೂ ಅವಳ ಬಗ್ಗೆ ಗಮನ ಕೊಡ್ತಾ ಇಲ್ಲ. ತಮ್ಮಂದಿರಿಂದಾಗಿ ಏನೇನೋ ಸಮಸ್ಯೆಗಳು. ಈಗ ಅವಳಿಗೆ ಸಹಾಯ ಮಾಡಲು ಕೆಲವರು ನೆರೆಹೊರೆಯವರು ಮತ್ತು ಕೆಲಸದವರು ಮಾತ್ರ ಇರುವುದು”.

ಹಾಗೆ ಗೌರಿಯನ್ನು ನೋಡಲು ಬಂದಾಗ ಅವಳಿಗೆ ಹಿಡಿಸಲಾರದ ಸಂತೋಷವಾಗಿತ್ತು. ಅವಳ ಕಾಯಿಲೆಯೇನು, ಅದರ ಚಿಕಿತ್ಸೆ ಯಾವ ರೀತಿಯದ್ದು ಎಂದೆಲ್ಲ ಗೊತ್ತಾಗಿದ್ದು ಆಗ. ತುಂಬ ಹೊತ್ತು ಕೇಳುತ್ತ ಕುಳಿತೆ.

ಹತ್ತು ವರ್ಷಗಳ ಹಿಂದೆಯಾಗಿತ್ತು ಮೊದಲ ಬಾರಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡದ್ದು. ಆಗ ಗಂಡನ ಜತೆಗೆ ಗಲ್ಫ್‍ನಲ್ಲಿದ್ದಳು. ದುಬಾೈಯಲ್ಲಿ ಚಿಕಿತ್ಸೆ ಮಾಡಿದ್ದು ಮುಂಬಯಿನಲ್ಲಿ ಆ ಸರ್ಜರಿ ನಡೆಯಿತು. ಚೇತರಿಸಿಕೊಂಡ ಕೂಡಲೇ ದುಬಾೈಗೆ ತಿರುಗಿ ಹೋದಳು. ಅಂದರೆ ಬಹಳ ಬೇಗವೇ ಆಗಿತ್ತು ತಿರುಗಿ ಹೋದದ್ದು. ಯಾಕೆಂದು ಗೌರಿ ಹೇಳಲಿಲ್ಲ. ಕೇಳಿದಾಗ ಅವಳು ಮಲ್ಲಿಗೆ ಬಳ್ಳಿಗಳ ಮೇಲಿನ ಪರ್ವತ ಸಾಲುಗಳತ್ತ ನೋಟ ಹಾಯಿಸಿ ಮೌನವಾದಳು.

ಒಂದು ದಿನ ನೋಡಲು ಹೋದಾಗ ಆಸ್ಪತ್ರೆಯ ಒಂದು ವಾರದ ಬಿಲ್ ಬಂತು. ದೊಡ್ಡ ಮೊತ್ತ. ಬಹಳ ದೊಡ್ಡದು! ಒಂದು ವಾರಕ್ಕೆ ಇಷ್ಟೊಂದಾ ಅಂತ ನಾನು ಅಚ್ಚರಿಪಟ್ಟೆ. ಆಗ ಗೌರಿ ಕೇಳಿದಳು: ‘ಗಲ್ಫ್ ಸಾಹುಕಾರರನ್ನು ಮದುವೆಯಾಗಿದ್ದು ಒಳ್ಳೇದಾಯ್ತು, ಅಲ್ವಾ ಗೋಪಿ?’

“ಆ್ಞಂ?” ನನಗೆ ಅರ್ಥವಾಗಲಿಲ್ಲ.

“ನನಗೆ ಬಂದ ಹಾಗಿರೋ ಕಾಯಿಲೆ ಬಂದರೆ ಚಿಕಿತ್ಸೆ ಮಾಡೋಕೆ ದುಡ್ಡು ಬೇಡವಾ? ರವಿಗೆ ಗಲ್ಫ್‍ನಲ್ಲಿ ಕೆಲಸ ಇಲ್ಲದಿರುತ್ತಿದ್ದರೆ ಜಸ್‍ಲಾಕ್‍ನಲ್ಲೂ ಲೇಕ್‍ಷೋರ್‍ನಲ್ಲೂ ಚಿಕಿತ್ಸೆ ಮಾಡಿಸೋದು ಸಾಧ್ಯವಿತ್ತಾ?”

“ಅದು ಹೌದು. ನೀನು ಹೇಳಿದ್ದರಲ್ಲಿ ಒಂದು ಅರ್ಥವಿದೆ.”

“ಅದರಲ್ಲೊಂದು ಅದೃಷ್ಟವೂ ಸೇರ್ಕೊಂಡಿದೆ” ಗೌರಿ ಸೇರಿಸಿದಳು.

“ಏನದು?”

“ನನ್ನನ್ನು ಹೆಣ್ಣು ನೋಡಲಿಕ್ಕೇಂತ ಆಗ ತುಂಬಾ ಮಂದಿ ಬರುತ್ತಿದ್ದರು. ಕೆಲವೊಮ್ಮೆ ಒಬ್ಬರೋ ಇಬ್ಬರೋ ಬರುವುದಿತ್ತು. ಕೆಲವರು ದಲ್ಲಾಳಿಗಳ ಜತೆಗೆ. ಇನ್ನು ಕೆಲವರು ತಮ್ಮ ಹಿರಿಯರ ಜತೆಗೆ. ಮತ್ತೆ ಕೆಲವರು ತಮ್ಮ ಸ್ನೇಹಿತರ ಜತೆಗೆ. ಕೆಲವರಿಗೆ ಹೆಣ್ಣು ಸಾಲದು, ಕೆಲವರಿಗೆ ಮಣ್ಣು ಸಾಲದು. ಇನ್ನು ಕೆಲವರಿಗೆ ಬಂಗಾರವೂ ಬೇಕು, ಹಣವೂ ಬೇಕು. ರವಿ ನನ್ನನ್ನು ನೋಡಲಿಕ್ಕೆ ಬಂದ ದಿವಸ ಇನ್ನೂ ಇಬ್ಬರು ಬಂದಿದ್ದರು. ನನಗೆ ಈಗಲೂ ನೆನಪಿದೆ. ಒಬ್ಬರು ವಕೀಲರು, ಇನ್ನೊಬ್ಬರು ಮೇಷ್ಟ್ರು” ಗೌರಿ ಒಮ್ಮೆ ನಿಲ್ಲಿಸಿದಳು.

“ಮತ್ತೆ ಯಾಕೆ ಅವರ್ಯಾರನ್ನೂ ನೀನು ಒಪ್ಪಿಕೊಳ್ಳಲಿಲ್ಲ? ನಿನಗೆ ಅವರನ್ನು ಇಷ್ಟ ಆಗಲಿಲ್ವಾ?” ನಾನು ಕೇಳಿದೆ.

“ಉ್ಞಂ.. ಯಾರಾಗಿದ್ದರು ನಾನು ಇಷ್ಟ ಪಟ್ಟೋರು?” ಗೌರಿ ತನ್ನಲ್ಲೇ ಎಂಬಂತೆ ಕೇಳಿದಳು. ನಂತರ ಸ್ವಲ್ಪ ಹೊತ್ತು ಕಿಟಕಿಯಿಂದ ಹೊರಗೆ ದೂರದತ್ತ ನೋಟ ಹಾಯಿಸಿದಳು. ಆಕಾಶವು ಅವಳ ಜತೆಗೇನೋ ಸಂಭಾಷಿಸಿದಂತೆ ಕಂಡಿತು.

“ಗಲ್ಫ್ ಸಾಹುಕಾರರಾದ ರವಿ ಅವರಿಗೆ ಡಿಮ್ಯಾಂಡುಗಳೇನೂ ಇರಲಿಲ್ಲ. ಕೈಯಲ್ಲಿ ಬೇಕಾದಷ್ಟು ಹಣವಿದೆ. ಹೆಣ್ಣು ನೋಡಲು ಚೆನ್ನಾಗಿರಬೇಕು, ಅಷ್ಟೇ ಆದ್ದರಿಂದ ಆದಷ್ಟು ಬೇಗ ಮದುವೆ ಮಾಡಿ ಕೊಡಬೇಕು. ರವಿಯವರ ಜತೆಗೆ ಬಂದವರು ಹೇಳಿದರು”.

ನಾನು ಕೇಳುತ್ತ ಕುಳಿತೆ: “ಹೆಣ್ಣಿಗೆ ಏನು ಕೊಡ್ತೀರಿ ಎಂದಾಗಿತ್ತು ವಕೀಲರದ್ದೂ ಮೇಷ್ಟ್ರದ್ದೂ ಪ್ರಶ್ನೆ. ಗಲ್ಫ್ ಸಾಹುಕಾರರು ಅವರನ್ನು ಹೊಡೆದೋಡಿಸಿ ಬಿಟ್ಟರು. ವರದಕ್ಷಿಣೆ ಕೇಳಿದ ವಕೀಲ ಮತ್ತು ಮೇಷ್ಟ್ರ ಮುಂದೆ ಏನೂ ಬೇಡವೆಂದು ಹೇಳಿದ ಗಲ್ಫ್ ಸಾಹುಕಾರರ ಘನತೆ ಹೆಚ್ಚಾಯಿತು”.

“ಅಮ್ಮನಿಗೆ ಗಲ್ಫ್ ಸಾಹುಕಾರರೇ ಬೇಕು ಅನ್ನಿಸಿತು. ಅಮ್ಮ ಅಂದು ಹೇಳಿದ್ದಳು: “ನೋಡಕ್ಕೆ ಸ್ವಲ್ಪ ಬಣ್ಣ ಕಡಿಮೆಯಾದರೇನಂತೆ? ವಾಕ್ಕದ ವಿಲಾಸಿನಿಯನ್ನು ಮದುವೆಯಾದವನನ್ನು ನೋಡಬೇಕು! ಒಬ್ಬ ಕರೀ ಠೊಣಪ! ಆದರೆ ಗಲ್ಫ್‍ನಲ್ಲಿರೋನು. ವಿಲಾಸಿನಿಗೀಗ ಯಾವ ತೊಂದರೇನೂ ಇಲ್ಲ. ಅವಳೇ ಈಗ ಆ ಮನೆಯ ಸರ್ವಾಧಿಕಾರಿಣಿ! ರಪ್ಪಾಯಿಯ ಮಗಳನ್ನೂ ಮದುವೆಯಾದೋನು ದುಬಾೈನಲ್ಲಿರುವವನೇ. ಎಸ್ತರ್‍ನ ಚಿಕ್ಕ ಹುಡುಗರನ್ನೆಲ್ಲ ಅವನು ಗಲ್ಫ್‍ಗೆ ಕರ್ಕೊಂಡು ಹೋಗಿದ್ದಾನೆ. ಹಾಗೆ ನನ್ನ ವಿಚಾರದಲ್ಲೂ ಲಾಟರಿ ಹೊಡೆದದ್ದು ಗಲ್ಫ್ ಸಾಹುಕಾರನಿಗೇ ಆಗಿತ್ತು. ಅವತ್ತು ಹಾಗೆ ಅನ್ನಿಸಿದ್ದು ಅದೃಷ್ಟ ಅಂತಲೇ ಹೇಳಬೇಕು. ಇಲ್ಲದಿದ್ದರೆ ಈ ಕಾಯಿಲೆಗೆ, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳೋದು ಹೇಗೆ ಸಾಧ್ಯವಿತ್ತು?” ಗೌರಿ ಕೇಳಿದಳು. ನಾನು ಏನೂ ಹೇಳಲಿಲ್ಲ.

“ಅವತ್ತು ಅಮ್ಮ ಹೇಳಿದ ಹಾಗೆ ನಡ್ಕೊಂಡಿದ್ದರಿಂದ ಎಷ್ಟು ಒಳ್ಳೇದಾಯ್ತು” ಗೌರಿ ತನ್ನನ್ನು ಸಮರ್ಥಿಸಿಕೊಂಡಳು; “ಎಷ್ಟು ಲಕ್ಷ ಖರ್ಚಾಯಿತು? ನನ್ನನ್ನು ಮದುವೆಯಾಗಲು ಸಾಧ್ಯವಾಗದ್ದರಿಂದ ಒಬ್ರು ವಕೀಲರೂ ಮೇಷ್ಟ್ರೂ ಬಚಾವಾಗಿ ಬಿಟ್ಟರು! ಅಲ್ಲದಿದ್ದರೆ ನನಗೆ ಚಿಕಿತ್ಸೆ ಮಾಡಿ ಇಷ್ಟು ಹೊತ್ತಿಗೆ ಅವರು ತಟ್ಟೆ ಹಿಡ್ಕೊಂಡು ಹೋಗಬೇಕಿತ್ತು!” ಅವಳು ನಕ್ಕಳು.

ನಾನೇನೂ ಮಾತನಾಡಲಿಲ್ಲ. ಒಮ್ಮೆ ನಿಲ್ಲಿಸಿ, ನನ್ನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ನೋಡಿ, ನನ್ನನ್ನುದ್ದೇಶಿಸಿ ಎಂಬಂತೆ ಅವಳು ಹೇಳಿದಳು: “ಅವರಲ್ಲ, ಬೇರೆ ಯಾರೇ ಆದರೂ ಭಿಕ್ಷೆ ಬೇಡೋಕೆ ಹೊರಡಬೇಕಾಗಿತ್ತು!”

ಆಗ ಮುಖ ತಿರುಗಿಸಿ ಕಿಟಕಿಯಿಂದ ದೂರ ದೃಷ್ಟಿ ಹಾಯಿಸುವ ಸರದಿ ನನ್ನದಾಗಿತ್ತು.

ದೂರ, ಕಾಲವಿನ್ನೂ ಎಳೆಯದಾಗಿದ್ದ ಕಾಲದಲ್ಲಿ, ಗೌರಿಯೆಂಬ ಹುಡುಗಿಯನ್ನು ನಾನು ನನ್ನೊಂದಿಗೆ ಕಂಡೆ. ಒಂದೇ ಮನೆಯಲ್ಲಿ, ಅಪ್ಪನ ತಂಗಿಯ ಮಗಳಾಗಿ ತುಂಬಾ ಮಂದಿ ಇದ್ದ ಮನೆಯಲ್ಲಿ, ಅವಳು ಮಾತ್ರ ಭಿನ್ನಳಾಗಿದ್ದಂತೆ ನನಗನ್ನಿಸಿತು. ಸದಾ ನನ್ನ ಜತೆಗೆ ಬರುವಳು. ಏನೇನೋ ಪ್ರಶ್ನೆ ಕೇಳುವಳು. ಕಥೆ ಪುಸ್ತಕಗಳನ್ನು ಓದುವಳು. ದಿನಾಲೂ ನನ್ನಲ್ಲಿ ಕಾಲೇಜಿನ ಸುದ್ದಿಗಳನ್ನು ಕೇಳಿ ತಿಳಿದುಕೊಳ್ಳುವಳು. ನಾನೂ ಲೈಬ್ರರಿಯಿಂದ ಅವಳಿಗೆ ಪುಸ್ತಕಗಳನ್ನು ಕೊಂಡು ಹೋಗಿಕೊಡುತ್ತಿದ್ದೆ. ಒಂದು ದಿನ ಹಾಗೆ ಬಶೀರ್‍ನ ಕಾದಂಬರಿ ‘ಪ್ರೇಮಪತ್ರ’ ಕೊಟ್ಟಿದ್ದೆ. ಅದನ್ನು ಓದಿದ ನಂತರ ಅವಳು ಕೇಳಿದ್ದಳು: “ಏಯ್ ಗೋಪೀ, ನೀನು ಯಾವ ಸಾರಾಮ್ಮನ ಮುಂದೆ ತಲೆ ಕೆಳಗಾಗಿ ನಿಲ್ಲೋಕೆ ಹೊರಟ್ಟಿದ್ದೀ ಮಾರಾಯಾ?” ನಾನು ಸುಮ್ಮನೆ ಅವಳ ಮುಖವನ್ನೇ ದಿಟ್ಟಿಸಿ ನೋಡಿದೆ.

ನನ್ನ ಹತ್ತಿರ ಹರಟುವುದೆಂದರೆ ಗೌರಿಗೆ ಎಲ್ಲಿಲ್ಲದ ಉತ್ಸಾಹ. ಕೆಲವೊಮ್ಮೆ ಮುಷ್ಕರದಿಂದಾಗಿ ತರಗತಿಗಳಿಲ್ಲದೆ ಮನೆಗೆ ಬೇಗ ಬಂದರೆ ಮುಷ್ಕರದ ಕಾರ್ಯ ಕಾರಣಗಳನ್ನೆಲ್ಲ ಕೇಳಿ ತಿಳಿದುಕೊಳ್ಳುತ್ತಿದ್ದಳು. ನಾನೂ ಎಲ್ಲವನ್ನೂ ವಿಶದವಾಗಿ ವಿವರಿಸಿ ಹೇಳುತ್ತಿದ್ದೆ. ಒಂದು ದಿನ ಅವಳು ಕೇಳಿದಳು.

“ಏನು ಗೋಪಿ, ನೀನು ದೊಡ್ಡ ರಾಜಕಾರಣಿಯೊ?”

“ರಾಜಕೀಯದಲ್ಲಿ ಇಲ್ಲದಿರುವವರು ಯಾರು?” ನಾನು ತಿರುಗಿ ಕೇಳಿದೆ. “ರಾಜಕೀಯ ಅನ್ನೋದು ಪ್ರತಿಯೊಬ್ಬರಲ್ಲೂ ಇದೆ. ನನ್ನಲ್ಲೂ, ನಿನ್ನಲ್ಲೂ ಕೂಡಾ. ಆದರೆ ಕೆಲವರು ಮಾತ್ರ ಅದನ್ನು ಗುರುತಿಸ್ತಾರೆ. ಅದಕ್ಕಾಗಿ ಕೆಲಸ ಮಾಡ್ತಾರೆ ಅಷ್ಟೆ” ಅವಳಿಗೆ ಅರ್ಥವಾದಂತೆ ಕಾಣಲಿಲ್ಲ.

ಲಾ ಕಾಲೇಜಿಗೆ ಸೇರಿ ನಾನು ತಿರುವನಂತಪುರಕ್ಕೆ ಹೋದ ಕಾಲದಲ್ಲಿ ಮನೆಯೊಳಗಿನ ಪರಸ್ಪರ ಸಂಬಂಧಗಳಲ್ಲಿ ತುಂಬಾ ಬದಲಾವಣೆಗಳುಂಟಾದವು. ಕುಟುಂಬ ಒಡೆಯಿತು. ನಾವು ನಮ್ಮ ವಾಸಸ್ಥಳವನ್ನು ಬದಲಾಯಿಸಿದೆವು. ಗೌರಿಯನ್ನು ಈಗ ದಿನಾಲೂ ಕಾಣುವುದು ಸಾಧ್ಯವಿಲ್ಲ. ಪರಸ್ಪರ ಹೋಗುವುದೂ ಬರುವುದೂ ಕಡಿಮೆಯಾಯಿತು. ಲಾ ಕಾಲೇಜಿನ ಜೀವನವು ನನ್ನನ್ನು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಮುಳುಗಿಸಿತು. ವಿದ್ಯಾರ್ಥಿ ಸಂಘಟನೆ, ಕಾರ್ಯಕಲಾಪಗಳು, ಅಧ್ಯಯನ, ಭಾಷಣ, ಮುಷ್ಕರ, ಜಾಥಾ ಹೀಗೆ ಮುಂದುವರಿಯಿತು.

ನನ್ನ ಯೋಚನಾ ಲಹರಿಯ ಜಾಡು ಹಿಡಿದವಳಂತೆ ಗೌರಿ ಕೇಳಿದಳು: ನೀನೀಗ ಎಲ್ಲಿದ್ದೀ ಗೋಪೀ? ನಾನು ನನ್ನ ಮಾನಸಿಕ ಯಾತ್ರೆಯಿಂದ ಹಿಂದಿರುಗಿ ಗೌರಿಯ ಮುಖದಲ್ಲಿ ದೃಷ್ಟಿ ನೆಟ್ಟೆ.

“ನಾನು ನನ್ನ ಒಂದು ಆಸೆಯನ್ನು ಹೇಳಿದರೆ ಅದನ್ನು ನೆರವೇರಿಸಿ ಕೊಡ್ತೀಯಾ ಗೋಪಿ?”

“ಹೇಳಮ್ಮ, ಏನದು? ಹಣದ ವಿಷಯವಾದರೆ ನನ್ನಿಂದ ಸಾಧ್ಯವಿಲ್ಲ ಅನ್ನೋದು ನಿನಗೆ ಗೊತ್ತಲ್ಲ? ಅಲ್ಲದೆ ನಿನಗೆ ಹಣದ ಅಗತ್ಯವೂ ಇಲ್ಲವಲ್ಲ? ಮತ್ತೇನು”

“ನಿನ್ನಿಂದ ಆಗತ್ತೆ ಗೋಪಿ. ಇಲ್ಲಿ ಒಂದು ದಿನ ನನಗೆ ಜತೆಯಾಗಿ ನಿಲ್ಲಬೇಕು. ಹೇಗಿದ್ದರೂ ನಿನಗೆ ಮನೆಯಲ್ಲಿ ಹೆಂಡತಿ ಮಕ್ಕಳ್ಯಾರೂ ಇಲ್ಲವಲ್ಲ? ಅತ್ತೆ ಮಾತ್ರ ತಾನೇ ಇರೋದು? ಅತ್ತೆ ಹತ್ತಿರ ಹೇಳಿದರೆ ಸಾಕು. ಅವರಿಗೆ ನಾನಂದ್ರೆ ತುಂಬ ಇಷ್ಟ. ಆದರೆ ಆ ಪ್ರೀತಿಯನ್ನು ಅನುಭವಿಸೋ ಅವಕಾಶ ಮಾತ್ರ ನನಗೆ ಸಿಗಲಿಲ್ಲ ಅಷ್ಟೆ.”

ನಾನೇನೂ ಹೇಳಲಿಲ್ಲ. ಗೌರಿ ಮುಂದುವರಿಸಿದಳು: “ದಿನಾ ರವಿ ಅವರ ಮನೆಯೋರು ಬಂದು ನೋಡಿ ಹೋಗ್ತಾರೆ. ಮತ್ತೆ ಹೋಂ ನರ್ಸ್ ಇದ್ದಾಳೆ. ಒಂದು ತಿಂಗಳಾಯ್ತು ಆ ಹುಡುಗಿ ತನ್ನ ಮನೆಗೆ ಹೋಗಿ. ನೀನು ಬಂದರೆ ಅವಳಿಗೊಂದು ದಿನ ರಜೆ ಕೊಡಬಹುದು. ನನಗೂ ತೃಪ್ತಿಯಾಗುವಷ್ಟು ಮಾತನಾಡಬಹುದು. ಇನ್ನು ಎಷ್ಟು ಕಾಲ ಮಾತನಾಡಲಿಕ್ಕಾಗುತ್ತೋ ಗೊತ್ತಿಲ್ಲ”

“ನೀನು ಹಾಗೆಲ್ಲ ಮಾತನಾಡಬೇಡ”, ನಾನೆಂದೆ. “ಹಾಗೇನೂ ಆಗಲ್ಲ, ಬಿಡು.” ಎಲ್ಲ ತನಗೆ ಗೊತ್ತಿದೆಯೆಂಬ ಭಾವದಲ್ಲಿ ಗೌರಿಯ ಮುಖದಲ್ಲಿ ಒಂದು ಕಿರುನಗು ಮೂಡಿತು.

“ಗೋಪೀ… ನನಗೆ ಗೊತ್ತು ನನ್ನ ಕಾಯಿಲೆ ಏನು ಅಂತ! ಈಗ ಸೆಕಂಡರೀಸ್‍ನಲ್ಲಿದ್ದೀನಿ. ಶರೀರದಾದ್ಯಂತ ಇದು ಹರಡಿಕೊಳ್ಳುತ್ತಿದೆ. ನಾನೀಗ ಸಾಯುತ್ತಿದ್ದೇನೆ. ಯಾವುದೇ ಔಷಧಿಗೂ, ಯಾವುದೇ ಮಂತ್ರವಾದಕ್ಕೂ, ಯಾವುದೇ ದೈವಕ್ಕೂ ನನ್ನನ್ನು ಸಾವಿನಿಂದ ರಕ್ಷಿಸಲು ಸಾಧ್ಯವಿಲ್ಲ”.

ನಾನು ಗೌರಿಯ ಮುಖವನ್ನೇ ಒಂದೇ ಸಮನೆ ನೋಡಿದೆ. ಅಲ್ಲಿ ಏನೋ ಒಂದು ವಿಚಿತ್ರ ಧೈರ್ಯ ತುಂಬಿಕೊಂಡಿತ್ತು. ಅವಳು ಮುಂದುವರಿಸಿದಳು: “ಹಿಂದೆ ನಾನು ಯಾವಾಗಲೂ ದೇವಸ್ಥಾನಕ್ಕೆ ಹೋಗುತ್ತಿದ್ದೆನಲ್ಲ. ಕಾಯಿಲೆ ಅಂಟಿಕೊಂಡ ನಂತರ ದೇವಸ್ಥಾನ ಮಾತ್ರವಲ್ಲ ಚರ್ಚುಗಳಿಗೂ ಭೇಟಿ ನೀಡಿದೆ. ಹರಕೆ ಸಲ್ಲಿಸಿದೆ. ಪ್ರಾರ್ಥನೆ ನಡೆಸಿದೆ. ಉಪವಾಸ-ಭಜನೆಗಳನ್ನು ಮಾಡಿದೆ. ಸಾಯಬಾರದೆಂದು ಆಸೆ ಪಟ್ಟೆ. ನನ್ನ ಮಗನಿಗಾಗಿಯಾದರೂ ನನ್ನನ್ನು ಬದುಕಿಸೆಂದು ದೇವರನ್ನು ಬೇಡಿಕೊಂಡೆ. ಅವನಿಗೆ ನನ್ನನ್ನು ಬಿಟ್ಟರೆ ಯಾರೂ ಇಲ್ಲವಲ್ಲ! ಈಗ ನಾನು ಸಾಯುತ್ತೇನೆಂಬುದು ನನಗೆ ಖಚಿತವಾಗಿದೆ. ಯಾವಾಗ ಅಂತ ಗೊತ್ತಿಲ್ಲ ಅಷ್ಟೆ” ಒಂದು ಕ್ಷಣ ನಿಲ್ಲಿಸಿ ಅವಳೆಂದಳು. “ನಾನೀಗ ನಿನ್ನ ಜತೆಗಿದ್ದೇನೆ ಗೋಪಿ”, ಅವಳು ಮತ್ತೆ ವಿವರಿಸಿದಳು: “ನಾನೀಗ ದೇವಸ್ಥಾನಗಳಿಗೂ ಚರ್ಚುಗಳಿಗೂ ಹೋಗುವುದಿಲ್ಲ. ನನಗೀಗ ಸಾವಿನ ಭಯವಿಲ್ಲ. ನಾನು ದೇವರುಗಳನ್ನು ಬಿಟ್ಟು ಬಿಟ್ಟೆ”.

ಹಾಗೆ ನಾನು ನಿನ್ನೆ ಸಂಜೆಯಾದ ಕೂಡಲೇ ಗೌರಿಯ ಕೋಣೆ ತಲುಪಿದೆ. ಅವಳಿಗೆ ಜತೆಯಾಗಿರಲು; ಅವಳಿಗೆ ಹೇಳಲಿಕ್ಕಿರುವುದನ್ನು ಕೇಳಲು. ಬಹಳ ಹಿಂದಿನ ದಿನಗಳಲ್ಲಿದ್ದಂತೆ, ಅವಳೂ ಚಿಕ್ಕ ಹುಡುಗಿಯಾಗಿದ್ದಾಗ ಹೇಗಿದ್ದಳೋ ಹಾಗೆ, ಬಿಚ್ಚು ಮನಸ್ಸಿನಿಂದ ನಿಸ್ಸಂಕೋಚವಾಗಿ ನನ್ನ ಹತ್ತಿರ ಮಾತನಾಡುವುದನ್ನೆಣಿಸಿದಾಗ ನನಗೂ ತುಂಬ ಸಂತೋಷವೆನ್ನಿಸಿತು.

ಇಲ್ಲಿ ಕುಳಿತರೆ ಕಿಟಕಿಯಿಂದ ಆಕಾಶದಲ್ಲಿ ನಕ್ಷತ್ರಗಳು ಅರಳಿಕೊಳ್ಳುವುದನ್ನು ನೋಡಬಹುದು.

ರಾತ್ರಿ ಹೊತ್ತಿನ ಔಷಧಿ ಇತ್ಯಾದಿಗಳನ್ನು ಕೊಟ್ಟು ಮುಗಿಸಿ ಸಿಸ್ಟರ್‍ಗಳು ಹೋದ ನಂತರ ಗೌರಿ ಹೇಳಿದಳು: “ಗೋಪಿ, ನಾನೊಮ್ಮೆ ಒರಗಿ ಕುಳಿತುಕೊಳ್ಳಬೇಕು”.

ನಾನು ದಿಂಬುಗಳನ್ನು ಒರಗಿಸಿಟ್ಟು ಗೌರಿಯನ್ನು ಆಧರಿಸಿ ಹಿಡಿದು ಕುಳಿತುಕೊಳ್ಳಿಸಿದೆ ಅವಳೀಗ ಒಂದು ಹೂವಿನಷ್ಟು ಹಗುರವಾಗಿದ್ದಳು. ಶರೀರ ತೀರಾ ಒಣಗಿ ಹೋಗಿತ್ತು. ಕೈ ಕಾಲುಗಳು ಕ್ಷೀಣವಾಗಿದ್ದವು. ನಾನು ಆಧರಿಸಿ ಹಿಡಿದಾಗ ಅವಳು ತನ್ನ ಬಲಗೈಯಿಂದ ನನ್ನನ್ನು ಹಿಡಿದುಕೊಂಡಳು. ಅವಳು ಬೆರಳ ತುದಿಗಳು ಶೀತಲವಾಗಿದ್ದವು. ಮಲ್ಲಿಗೆ ಹೂವಿನ ಮೇಲಿನ ಮಂಜು ಹನಿಗಳನ್ನು ಸ್ಪರ್ಶಿಸಿದಾಗ ಅನುಭವವಾಗುವ ಶೀತಲತೆ.

“ಹಾ! ಹೀಗೆ ಮಲಗಿದರೆ ಆಕಾಶ ಚೆನ್ನಾಗಿ ಕಾಣುತ್ತದೆ. ಇವತ್ತು ಎಷ್ಟೊಂದು ನಕ್ಷತ್ರಗಳು!”

ನಾನು ಕುರ್ಚಿಯನ್ನೆಳೆದು ಅವಳ ಮಂಚದ ಬಳಿ ಇಟ್ಟು ಕುಳಿತೆ.

ಅವಳು ಬಲಗೈಯನ್ನು ನನ್ನತ್ತ ಚಾಚಿದಳು. ನಾನು ಅವಳ ಬೆರಳುಗಳನ್ನು ಹಿಡಿದೆ. ಸವೆದು ಹೋದ ಬೆರಳುಗಳು. ಅವಳು ನನ್ನ ಬೆರಳುಗಳನ್ನು ಹಿಡಿಯಲು ಪ್ರಯತ್ನಿಸಿದಳು. ಗೌರಿ ದುರ್ಬಲಳಾಗಿದ್ದಳು. ನಾನು ಮೃದುವಾಗಿ ಅವಳ ಬೆರಳುಗಳನ್ನೂ ಹಸ್ತವನ್ನೂ ನೇವರಿಸಿದೆ. ಅವಳ ಕೈಯ ಹಿಂಬದಿಯ ನರಗಳು ಕಪ್ಪಾಗಿ ಸುಟ್ಟು ಹೋಗಿದ್ದವು. ನಾನು ಅವುಗಳ ಮೇಲೆ ಬೆರಳಾಡಿಸಿದೆ. ಗೌರಿ ಹೇಳಿದಳು: “ಕೀಮೋ ಥೆರಪಿಯಿಂದಾಗಿ ಹೀಗೆ!”

ಸ್ವಲ್ಪ ಹೊತ್ತು ನಾವೇನೂ ಮಾತನಾಡಲಿಲ್ಲ. ನಾನು ಅವಳ ಮುಖವನ್ನೇ ನೋಡಿದೆ. ಅವಳ ಕಣ್ಣುಗಳು ತುಂಬಿ ಹರಿಯುತ್ತಿವೆ.

“ಗೌರಾ…” ನಾನು ಕರೆದೆ.

“ಹ್ಞೂಂ…!” ಅವಳು ಓಗೊಟ್ಟಳು.

“ಅಳಬೇಡಮ್ಮಾ..” ನಾನು ಅವಳ ಕಣ್ಣೊರಸಿದೆ. ತುಸು ಹೊತ್ತಿನ ನಂತರ ಗೌರಿ ಕೇಳಿದಳು:

“ಗೋಪಿ… ನಿನಗೆ ನೆನಪಿದೆಯೆ?”

“ಏನು?”

“ನನಗೆ ಓದಲೆಂದು ಒಮ್ಮೆ ನೀನು ಕೊಟ್ಟ ಪುಸ್ತಕ?”

“ಯಾವುದು?”

“ಬಶೀರ್‍ನ ಪ್ರೇಮಪತ್ರ”

“ಹ್ಞೂಂ.. ನೆನಪಿದೆ”

“ಅದನ್ನು ನೀನು ನನಗೆ ಯಾಕೆ ಕೊಟ್ಟೆ?”

“ಓದಲಿಕ್ಕೆ”

“ಓದಲಿಕ್ಕೆ..? ಅದು ನಿನ್ನ ಪ್ರೇಮ ಪತ್ರವಾಗಿತ್ತಲ್ಲವೇ?”

ನಾನು ಏನೂ ಹೇಳಲಿಲ್ಲ.

“ನಾನೆಂಥ ನಿರ್ಭಾಗ್ಯೆ! ಅವತ್ತು ನನಗೆ ಒಂದೂ ಗೊತ್ತಾಗಲಿಲ್ಲ ನನ್ನ ಮದುವೆಗೆ ನೀನು ಬರಲಿಲ್ಲ. ಅತ್ತೆ ಬಂದಾಗ ನೀನು ಯಾಕೆ ಬರಲಿಲ್ಲಾಂತ ಕೇಳಿದೆ. ಆಗಲೇ ನನಗೆ ಗೊತ್ತಾಗಿದ್ದು”.

ಅಮ್ಮ ಏನು ಹೇಳಿದಳು?

“ಅತ್ತೆ ನನ್ನನ್ನು ಕೇಳಿದರು, ‘ನಿನ್ನನ್ನು ಬೇರೆ ಯಾರೋ ಮದುವೆಯಾಗಿ ಕರೆದುಕೊಂಡು ಹೋಗುವುದನ್ನು ನೋಡಲು ಅವನು ಬರ್ತಾನಾ? ಅಲ್ಲದೆ ಅವನಿಗೂ ಇಲ್ಲೇನು ನಡೀತಿದೆ ಅಂತ ನೋಡದೆ ಭಾಷಣ-ಸಂಘಟನೆ ಅಂತ ಊರೂರು ತಿರುಗಿಕೊಂಡಿದ್ದರೆ ಸಾಕಲ್ಲ?’ ಅಂತ ನಿನ್ನನ್ನೇ ದೂಷಿಸಿದರು”.

ಗೌರಿ ಮುಂದುವರಿಸಿದಳು: “ಗೋಪಿ, ನನ್ನೊಳಗೆ ಅಂದು ಶುರುವಾದ ಬಿಕ್ಕಳಿಕೆ ಇನ್ನೂ ನಿಂತಿಲ್ಲ. ಒಳಗೆ, ಒಳಗೊಳಗೆ ಆಳದಲ್ಲಿ, ನನ್ನನ್ನು ಪ್ರೀತಿಸುವ ಒಬ್ಬ ಇದ್ದಾನೆಂಬ ಅರಿವು, ಹೇಳಲಾಗದ ಒಂದು ಅವ್ಯಕ್ತಭಾವವಾಗಿ ಮನಸ್ಸಿನ ತುಂಬಾ ತುಂಬಿಕೊಂಡಿದೆ. ನೀನು ಮದುವೆಯಾಗದೇ ಉಳಿದದ್ದಕ್ಕೆ ಕಾರಣ ನಾನೆಂಬ ಸತ್ಯ ಬಹುಶಃ ಗೊತ್ತಿರುವುದು ನನಗೂ ಅತ್ತೆಗೂ ಮಾತ್ರ”.

ನಾನೇನೂ ಹೇಳಿಲ್ಲ.

“ಗೋಪೀ..” ಗೌರಿ ಕರೆದಳು.

“ಹ್ಞೂಂ..” ನಾನು ಓಗೊಟ್ಟೆ.

“ಯಾಕೆ ಗೋಪಿ.. ನಮ್ಮ ಜೀವನ ಹೀಗಾಗಿ ಹೋಯ್ತು?”

“ನನಗೆ ಗೊತ್ತಿಲ್ಲ..” ನಾನು ಪ್ರಾಮಾಣಿಕನಾಗಿ ಹೇಳಿದೆ.

“ಗೋಪೀ..” ನನ್ನ ಬೆರಳುಗಳನ್ನು ಹಿಡಿದುಕೊಂಡು ಗೌರಿ ಹೇಳಿದಳು: “ಇದು ನಮ್ಮ ಫಸ್ಟ್ ನೈಟ್ ಅಲ್ವ?”

ನಾನು ಗೌರಿಯ ಹಣೆಯನ್ನು ಮೆಲ್ಲನೆ ಚುಂಬಿಸಿದೆ. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗಿದ ನಂತರ ಅವಳು ಕೇಳಿದಳು: “ಗೋಪೀ.. ನಿನಗೆ ಗೊತ್ತಿದೆಯೇ ನನ್ನ ಫಸ್ಟ್ ನೈಟ್ ಹೇಗಿತ್ತು ಅಂತ?”

ನಾನೇನೂ ಮಾತನಾಡಲಿಲ್ಲ.

ನಾನು ಅವಳ ಮುಖ ನೋಡಿದೆ. ನನ್ನತ್ತ ಮುಖ ತಿರುಗಿಸಿ ಅವಳು ಮಲಗಿದ್ದಾಳೆ. ಕೆನ್ನೆಗಳು ಒಳಗೆ ಅಂಟಿಕೊಂಡು ಕಣ್ಣುಗಳು ಗುಳಿಗೆ ಬಿದ್ದಿವೆ. ಆದರೂ ಕಣ್ಣುಗಳಲ್ಲಿ ಹೊಳಪು ತುಟಿಗಳು ಕ್ಷೀಣವಾಗಿದ್ದರೂ ಅಲ್ಲಿ ಹಳೆಯ ನಗುವಿನ ಹೊಳಪು ಮತ್ತು ಮಿಂಚು.

“ಹೆಚ್ಚು ಮಾತಾಡಿ ಆಯಾಸ ಮಾಡ್ಕೊಳ್ಳಬೇಡ” ನಾನು ವಿರೋಧಿಸಿದೆ. “ನಿನಗೆ ಕಷ್ಟವಾಗುತ್ತೆ”

“ಪರವಾಗಿಲ್ಲ ಗೋಪಿ.. ನಾನು ನಿನ್ನ ಹತ್ತಿರ ಹೇಳಬೇಕು. ಇವತ್ತು ಹೇಳದಿದ್ದರೆ ಇನ್ನು ಇಂಥ ಅವಕಾಶ ಸಿಗದೇ ಇದ್ದರೆ? ಈಗ ಎಷ್ಟು ಗಂಟೆಯಾಯ್ತು?”

ನಾನು ವಾಚು ನೋಡಿದೆ.

“ಹತ್ತಾಯ್ತು. ನೀನಿನ್ನು ನಿದ್ದೆ ಮಾಡು” ನಾನೆಂದೆ.

“ನನಗೆ ನಿದ್ದೆ ಬರ್ತಾ ಇಲ್ಲ. ಅಷ್ಟೇ ಅಲ್ಲ. ನಿನ್ನ ಜತೆಗೆ ನಾನು ಕಳೆಯುತ್ತಿರೋ ಫಸ್ಟ್ ನೈಟ್ ಅಲ್ವ ಗೋಪಿ? ನನಗೆ ಈಗಲೇ ನಿದ್ರೆ ಬರಲ್ಲ”

ನಾನು ಆ ನಂತರ ಏನೂ ಹೇಳಲಿಲ್ಲ. ಗೌರಿ ತನ್ನ ಕಥೆ ಹೇಳತೊಡಗಿದಳು.

“ಓದಿದ ರಮ್ಯ ಕಥೆಗಳಲ್ಲೂ ನೋಡಿದ ಪ್ರೇಂ ನಸೀರ್ ಸಿನಿಮಾಗಳಲ್ಲೂ ಇದ್ದ ಮಲ್ಲಿಗೆ ಹೂವಿನ ಪರಿಮಳವನ್ನೂ ಕೋಮಲ ಸ್ಪರ್ಶವನ್ನೂ ನಿರೀಕ್ಷಿಸಿಯಾಗಿತ್ತು ನಾನು ರವಿಯವರ ಕೋಣೆಗೆ ಹೋಗಿದ್ದು. ಮದುವೆಯ ದಿನ ಬಂದ ಅತಿಥಿಗಳೆಲ್ಲರೂ ಹಿಂದಿರುಗಿ ಹೋದ ನಂತರ ರವಿಯವರ ಅಮ್ಮ ನನಗೆ ಅವರ ಕೋಣೆಯನ್ನು ತೋರಿಸಿಕೊಟ್ಟರು. ‘ಓ ಅಲ್ಲಿದೆ ನೋಡು ಅವನ ಕೋಣೆ. ನೀನು ಅಲ್ಲಿಗೆ ಹೋಗು”

ಬಹಳ ವಿಶಾಲವಾದ ಕೋಣೆ. ಗಲ್ಫ್ ಸಾಹುಕಾರರ ಐಶ್ವರ್ಯ ಆಡಂಬರ ಎಲ್ಲವೂ ಇದೆ. ಬೇಕಾದಷ್ಟು ಇಲೆಕ್ಟ್ರಾನಿಕ್ ಸಾಧನಗಳು ಎ.ಸಿ, ಟಿ.ವಿ, ಸ್ಟೀರಿಯೋ, ಮ್ಯೂಸಿಕ್‍ಸಿಸ್ಟಮ್, ಹೋಂ ಥಿಯೇಟರ್, ಫ್ರಿಜ್, ವಾರ್ಡ್‍ರೋಬ್, ಕಬರ್ಡ್, ನಿಲುವುಗನ್ನಡಿ, ಡಬಲ್‍ಕಾಟ್, ಬೆಲೆಬಾಳುವ ಬೆಡ್ ಷೀಟುಗಳು, ಉರುಟು ದಿಂಬುಗಳು, ನೆಲದ ಮೇಲೆ ನಯವಾದ ಕಾರ್ಪೆಟ್, ಬಾತ್‍ರೂಂನಲ್ಲಿ ಬಾತ್‍ಟಬ್, ಗೀಸರ್.

ಫಾರಿನ್ ಸೆಂಟಿನ ತೀಕ್ಷ್ಣವಾದ ಪರಿಮಳ.

ಆದರೆ ಕೋಣೆಯ ಒಟ್ಟು ವಾತಾವರಣಕ್ಕೆ ಹೊಂದಿಕೆಯಾಗದ ಏನೋ ಒಂದು ವಸ್ತು ಅಲ್ಲಿತ್ತು. ಕೋಣೆಯೊಳಗೆ ಬರುವ ಬಾಗಿಲಿನ ನೇರ ಎದುರಿಗಿದ್ದ ಒಂದು ರವಿವರ್ಮ ಕಲಾಕೃತಿ. ಕಾಲಲ್ಲಿ ದರ್ಭೆ ಮುಳ್ಳು ಚುಚ್ಚಿದಾಗ ತಿರುಗಿ ನೋಡುವ ಶಾಕುಂತಳೆ.

ರವಿಯವರು ಕೋಣೆಯೊಳಗಿರಲಿಲ್ಲ, ಎಲ್ಲಿರಬಹುದು? ನಾನು ಕಾದು ಕುಳಿತೆ ತುಂಬಾ ಹೊತ್ತು ಭಾರವಾದ ಹೆಜ್ಜೆಗಳಿಂದ ನಿದ್ರೆ ನನ್ನ ಕಣ್ಣುಗಳನ್ನು ಪ್ರವೇಶಿಸುತ್ತಿದ್ದಾಗಲೇ ರವಿಯವರು ಕೋಣೆಯೊಳಗೆ ಕಾಲಿಟ್ಟರು.

“ನೀನು ಬಂದಿದ್ದೀಯಾ?” ರವಿ ಹೇಳಿದರು. “ಗಲ್ಫ್‍ನಿಂದ ಬಂದ ಗೆಳೆಯರು ಜತೆಗಿದ್ದರು. ಅವರನ್ನು ಕಳುಹಿಸಿಕೊಡುವಾಗ ತಡವಾಯ್ತು”.

ರವಿಯವರ ಧ್ವನಿಯ ಜತೆಗೆ ತೀಕ್ಷ್ಣವಾದ ಇನ್ನೊಂದು ವಾಸನೆ ರೂಮಿನ ತುಂಬಾ ವ್ಯಾಪಿಸಿಕೊಂಡಿತು. ನನಗೆ ಗೊತ್ತಾಯಿತು. ಅದು ಮದ್ಯದ ನಾತ! ಅವರು ಮದ್ಯ ಸೇವಿಸಿ ಬಂದಿದ್ದರು. ಆ ಮೇಲೆ ಅವರು ಹೇಳಿದ್ದೇನೂ ನನ್ನ ತಲೆಯೊಳಗೆ ಹೋಗಲಿಲ್ಲ. ಆದರೂ ಅವರು ಹೇಳಿದ್ದೆಲ್ಲವನ್ನೂ ನಾನು ವಿಧೇಯಳಾಗಿ ಅನುಸರಿಸಿದೆ.

“ನೀನ್ಯಾಕೆ ಹೀಗೆ ಬಾಳೆ ಗಿಡದ ಹಾಗೆ ನಿಂತದ್ದು? ಸರ, ಬಳೆ ಎಲ್ಲವನ್ನು ತೆಗೆದಿಡು. ಅಲ್ಲಿ ನೋಡು, ಅಲ್ಲಿದೆ ಸೇಫ್. ನೀನು ಎಲ್ಲವನ್ನೂ ಬಿಚ್ಚಿಟ್ಟು ಅದರಲ್ಲಿಡಬಹುದು”. ರವಿ ಹೇಳಿದರು. ನಾನು ಒಂದೊಂದನ್ನೇ ಬಿಚ್ಚಿಟ್ಟೆ.

“ನನಗೆ ನಿನ್ನ ಒಡವೆ ಹಣ ಯಾವುದೂ ಬೇಡ ಅಂತ ಹೇಳಿದ್ದೆನಲ್ಲ? ಮತ್ತೆ ಯಾಕೆ ಇದೆಲ್ಲ? ನನ್ನ ಹತ್ತಿರ ಬೇಕಾದಷ್ಟು ಹಣವಿದೆ. ಬಂಗಾರವೂ ಇದೆ. ನಿನಗೆ ಗೊತ್ತಾ ಯಾವ ಯಾವ ಕಂಪೆನಿಗಳಲ್ಲಿ ನನ್ನ ಹಣ ಇದೆ ಅಂತ?”

ರವಿಯವರ ಮಾತುಗಳ ಮೇಲೆ ನನ್ನ ಗಮನವಿರಲಿಲ್ಲ. ನಾನು ಸರಗಳನ್ನು ಬಿಚ್ಚಿಡುತ್ತಿದ್ದೆ. ಒಂದೊಂದೇ ತೆಗೆದು ಹಾಸಿಗೆಯಲ್ಲಿಟ್ಟೆ. ಬಳೆಗಳನ್ನು ಕಳಚಿದೆ. ನಂಬರ್ ಲಾಕ್ ಇರುವ ಸೇಫ್ ತೆರೆದು ರವಿ ಆಭರಣಗಳನ್ನು ಅದರೊಳಗಿಟ್ಟರು.

“ನಿನ್ನನ್ನು ನೋಡಿದ ಕೂಡಲೇ ನಿನ್ನನ್ನು ನನ್ನವಳನ್ನಾಗಿ ಮಾಡ್ಕೊಳ್ಳಬೇಕು ಅಂತ ನನಗೆ ಅನ್ನಿಸಿತ್ತು. ವರದಕ್ಷಿಣೆ ಬೇಡ ಅಂತ ಹೇಳಿದ್ದು ನನ್ನ ಹತ್ತಿರ ಬೇಕಾದಷ್ಟು ಹಣ ಇದೆ ಅನ್ನೋ ಕಾರಣದಿಂದ”.

ನನಗೆ ಕೂಡಲೇ ಅರ್ಥವಾಯಿತು. ವರದಕ್ಷಿಣೆ ಇಲ್ಲದೆ ನನ್ನನ್ನು ಮದುವೆಯಾಗಿದ್ದು ಅಂದರೆ ಇನ್ನೊಂದು ರೀತಿಯಿಂದ ನನ್ನನ್ನು ಅವರು ಬೆಲೆ ಕೊಟ್ಟು ಖರೀದಿಸಿದ್ದರು. ಔದಾರ್ಯದ ನಾಟಕವಾಡಿ ರವಿ ನನ್ನನ್ನು ತನ್ನ ವಶಮಾಡಿಕೊಂಡಿದ್ದರು. ಈ ಕೋಣೆಯ, ಈ ಮನೆಯ ಹಲವು ಪ್ರದರ್ಶನ ವಸ್ತುಗಳಲ್ಲಿ ನಾನೂ ಒಬ್ಬಳಾಗಿದ್ದೆ.

ಆಭರಣಗಳನ್ನು ಸೇಫ್‍ನಲ್ಲಿಟ್ಟು ಬೀಗ ಹಾಕಿದ ನಂತರ ರವಿ ಸ್ಟೀರಿಯೋ ಆನ್ ಮಾಡಿ ನಂತರ ನನ್ನ ಬಳಿ ಬಂದರು. ಅವರ ಉಸಿರಿನಲ್ಲಿದ್ದ ಮದ್ಯದ ತೀಕ್ಷ್ಣವಾದ ದುರ್ಗಂಧವು ನನ್ನ ಮೂಗಿಗೆ ಬಡಿಯಿತು. ಅವರು ನನ್ನ ಬಟ್ಟೆಗಳನ್ನು ಅಸ್ತವ್ಯಸ್ತಗೊಳಿಸತೊಡಗಿದರು. ನನಗೇನಾಗುತ್ತಿದೆಯೆಂದು ತಿಳಿಯುವುದಕ್ಕೆ ಮೊದಲೇ ಅವರು ನನ್ನನ್ನು ಹಾಸಿಗೆಗೆ ದೂಡಿಯಾಗಿತ್ತು. ಅವರು ನನ್ನ ಮೇಲೆ ತನ್ನ ಪೌರುಷ ತೋರಿಸತೊಡಗಿದರು. ನಾನು ಕಿರಿಸಿಕೊಂಡೆನೆ? ಗೊತ್ತಿಲ್ಲ. ಅವರ ಮೂಗಿನಿಂದಲೂ ಬಾಯಿಂದಲೂ ಮದ್ಯದ ದುರ್ಗಂಧ ನನ್ನ ಮುಖದ ಮೇಲೆ ಹರಿದು ಬಂತು. ನನಗೆ ನೋವಾಯಿತು. ಶರೀರವಿಡೀ ಹರಿದು ಹೋಳಾಗುತ್ತಿದೆಯೇನೋ ಎನ್ನುವಂಥ ಯಮಯಾತನೆ. ನನ್ನ ಮೇಲೆ ವಿಜಯ ಪತಾಕೆ ಹಾರಿಸುವುದೇ ಅವರ ಆಕ್ರಮಣದ ಉದ್ದೇಶವಾಗಿತ್ತೆ? ನಾನೇನೂ ಅವರ ವೈರಿಯಲ್ಲವಲ್ಲ? ಆದರೂ ಯಾಕೆ ಹೀಗೆ? ನಾನು ಮಲಗಿ ಚಡಪಡಿಸಿದೆ. ಕೈಕಾಲು ಬಡಿದೆ, ಚೀರಿದೆ. ಆದರೆ ಸ್ವರ ಏಳಲೇ ಇಲ್ಲ. ಆತ ನನ್ನ ಸ್ವರವನ್ನು, ಚೀರಾಟವನ್ನು ನುಂಗಿಬಿಟ್ಟರು.

ಮೊದಲ ರಾತ್ರಿ ಮೊದಲ ಬಲಾತ್ಕಾರವು ಶರವೇಗದಲ್ಲಿ ಕೊನೆಯಾದಾಗ ಬಿಚ್ಚಿ ನೇತಾಡುತ್ತಿದ್ದ ರೇಶಿಮೆ ಸೀರೆಯನ್ನು ಲಗುಬಗನೆ ಮುದ್ದೆ ಮಾಡಿ ತೆಗೆದು ಎದೆಗೊತ್ತಿಕೊಂಡು ನಾನು ಬಾತ್‍ರೂಮಿಗೆ ಓಡಿದೆ. ನನಗೆ ವಾಂತಿ ಬರುವಂತಾಯಿತು. ವಾಕರಿಕೆ ಬಂತು. ತುಂಬಾ ಹೊತ್ತು ಕಳೆದ ನಂತರ ನಾನು ತಿರುಗಿ ಬಂದಾಗ ಅವರು ಕವುಚಿ ಮಲಗಿ ನಿದ್ರೆ ಹೋಗಿದ್ದರು.

ಗೌರಿ ಸ್ವಲ್ಪ ಹೊತ್ತು ಮಾತನಾಡದೆ ಮಲಗಿದಳು. ನಾನು ಅವಳ ಕೂದಲಿನ ಮೇಲೆ ಮೃದುವಾಗಿ ಬೆರಳಾಡಿಸಿದೆ. ಅವಳು ಕಣ್ಣು ಮುಚ್ಚಿ ಮಲಗಿದಳು. ಮುಚ್ಚಿದ ಕಣ್ಣು ರೆಪ್ಪೆಗಳೊಳಗಿಂದ ಕಣ್ಣೀರು ಒಸರುತ್ತಿದ್ದುದನ್ನು ನಾನು ಕಂಡೆ.

ರಾತ್ರಿಗೆ ವಯಸ್ಸು ಹೆಚ್ಚಾಗುತ್ತಿತ್ತು. ಮೌನವಾಗಿಯೇ ತುಂಬ ಹೊತ್ತು ಕಳೆಯಿತು.

ತುಸು ಹೊತ್ತು ಕಳೆದು ಗೌರಿ ಪುನಃ ಹೇಳತೊಡಗಿದಳು: “ನನ್ನ ಮಗನಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗಿದ್ದಾಗ ನನಗೆ ಈ ಕಾಯಿಲೆ ಶುರುವಾಯ್ತು. ದುಬಾೈನ ಡಾಕ್ಟರುಗಳು ಊರಿಗೆ ಕಳುಹಿಸಿ ಚಿಕಿತ್ಸೆ ಮಾಡಿಸುವುದು ಒಳ್ಳೆಯದು ಅಂದರು. ರವಿ ಅಲ್ಲಿದ್ದುಕೊಂಡೇ ಎಲ್ಲ ವ್ಯವಸ್ಥೆ ಮಾಡಿದರು. ಮುಂಬಯಿನಲ್ಲಿದ್ದ ಭಾವಮೈದುನನಿಗೆ ಫೋನ್ ಮಾಡಿ ಜಸ್‍ಲಾಕ್‍ನಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಿದರು. ಡಾಕ್ಟರಿಗೆ ನೇರವಾಗಿ ಫೋನ್ ಮಾಡಿ ಮಾತನಾಡಿದರು. ಮಗನನ್ನು ಊರಲ್ಲಿ ರವಿಯವರ ಅಮ್ಮನ ಹತ್ತಿರ ಬಿಟ್ಟೆವು. ಆದರೆ ರವಿಯವರಿಗೆ ಬರಲಾಗಲಿಲ್ಲ. ಕಂಪೆನಿಯ ಅಗತ್ಯಗಳಿಗಾಗಿ ಮತ್ತೆ ಮತ್ತೆ ಟೂರ್ ಹೋಗಬೇಕಾಗಿತ್ತು. ಕೆಲವೊಮ್ಮೆ ಕಂಪೆನಿಯ ಮಾಲೀಕನಾದ ಒಬ್ಬ ಅರಬಿಯ ಜತೆಗೆ ಹೋಗುತ್ತಿದ್ದರು. ಅವರಿಗೆ ಬೇಕಾದ ಎಲ್ಲ ಕೆಲಸಗಳನ್ನೂ ಮಾಡಿಕೊಡುವುದು ರವಿಯೇ. ಅಮೇರಿಕಾಗೂ, ಯುರೋಪಿಗೂ ಹೋಗುತ್ತಾರೆ. ಮದ್ಯ ಮತ್ತು ಬಿಳಿಯ ಹೆಂಗಸರಿಗಾಗಿ ಟೂರ್ ಹೋಗುವುದು. ರವಿಯ ಮೇಲೆ ವಿಪರೀತ ಪ್ರಭಾವ ಬೀರಿದವರಾಗಿದ್ದರು ಆ ಅರಬಿ. ಅವರ ಕುರಿತು ರವಿ ಹೇಳುತ್ತಿದ್ದರು: “ಆತ ಒಬ್ಬ ಜೀವಂತ ಬಂಗಾರದ ಹದ್ದು. ಬೇಕಾದಷ್ಟು ಆಸ್ತಿ ಇದೆ. ಎಲ್ಲವನ್ನೂ ಬಾಚಿ ತೆಗೆದುಕೊಳ್ಳುತ್ತಾರೆ. ಒಳ್ಳೆಯದೆಲ್ಲವೂ ಅವರಿಗೇ ಬೇಕು ಎಲ್ಲವನ್ನೂ ಸ್ವಂತ ಮಾಡಿಕೊಳ್ಳಬೇಕು”. ಒಮ್ಮೆ ರವಿ ಹೇಳಿದರು. “ನಿನ್ನನ್ನು ನಾನು ಎಂದೂ ಅರಬಿಯ ಮುಂದೆ ಕರೆದುಕೊಂಡು ಹೋಗುವುದಿಲ್ಲ. ನಿನ್ನನ್ನು ನೋಡಿದರೆ, ನಿನ್ನ ನಗು ನೋಡಿದರೆ ಆತ ನಿನ್ನನ್ನು ಬಾಚಿ ಎತ್ಕೋಂಡೋಗಿ ಬಿಡ್ತಾನೆ!”

ಸರ್ಜರಿ ಮುಗಿಸಿ ಆರು ತಿಂಗಳು ಕಳೆದ ನಂತರ ನಾನು ಗಲ್ಫ್‍ಗೆ ಹಿಂದಿರುಗಿದೆ. ಕೂದಲು ಸೊಂಪಾಗಿ ಬೆಳೆದಿತ್ತು. ನೋಡಿದರೆ ಕಾಯಿಲೆಯವಳಂತೆ ಕಾಣುತ್ತಿರಲಿಲ್ಲ.

ನಾನೂ ಮಗನೂ ಏರ್‍ಪೋರ್ಟಿನಲ್ಲಿ ಇಳಿಯುವಾಗ ರವಿ ಡ್ರೈವರ್ ಜತೆಗೆ ಬಂದಿದ್ದರು. ನಮ್ಮನ್ನು ಫ್ಲಾಟಿನಲ್ಲಿ ಬಿಟ್ಟು ಅವರು ಹೋದರು.

ಫ್ಲಾಟು ಪೂರ್ತಿ ಅಸ್ತವ್ಯಸ್ತವಾಗಿತ್ತು. ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು. ನಾನು ಎಲ್ಲವನ್ನೂ ಎತ್ತಿಟ್ಟೆ. ಗುಡಿಸಿ ಸ್ವಚ್ಛ ಮಾಡಿದೆ. ಮುದ್ದೆಯಾಗಿ ಹೋದ ಹಾಸಿಗೆ ಬಟ್ಟೆಗಳನ್ನು ಬದಲಾಯಿಸಿದೆ. ದಿಂಬುಗಳಿಗೆ ನೀಳವಾದ ಕೂದಲೆಳೆಗಳು ಅಂಟಿಕೊಂಡಿದ್ದವು.

ನಾನು ಅಡುಗೆ ಮಾಡಿಟ್ಟೆ. ರಾತ್ರಿ ತಡವಾಗಿ ಅಪ್ಪ ಬರುತ್ತಾರೆಂದು ಕಾದು ಕುಳಿತಿದ್ದ ಮಗ ನಿದ್ದೆ ಹೋದ. ನಾನು ಮಗನನ್ನೆತ್ತಿ ಪಕ್ಕದ ಕೋಣೆಗೆ ಕೊಂಡು ಹೋಗಿ ಮಲಗಿಸಿದೆ. ನನ್ನ ಕಣ್ಣುಗಳೂ ನೋಯುತ್ತಿದ್ದವು. ಸುಮಾರು ಹನ್ನೊಂದು ಗಂಟೆಯಾದಾಗ ಕರೆಗಂಟೆಯ ಸದ್ದಾಯಿತು.

ಬಾಗಿಲು ತೆರೆದು ನೋಡಿದರೆ ರವಿ ನಿಂತಿದ್ದರು. ಗಾಳಿಯೊಂದಿಗೆ ಮದ್ಯದ ಗಬ್ಬುನಾತ ರೂಮಿನೊಳಗೆ ಬಡಿಯಿತು. ನಾನು ಹಿಂದೆ ಸರಿದೆ. “ಊಟ ಮಾಡುವುದಿಲ್ಲವೆ?” ನಾನು ಕೇಳಿದೆ. “ಬೇಡ ನಾನು ಊಟ ಮಾಡಿಯಾಯ್ತು, ನೀನು ಮಾಡು”. ರವಿ ಬಟ್ಟೆ ಬದಲಾಯಿಸಿ ಮಂಚದ ಮೇಲೆ ಹೋಗಿ ಬಿದ್ದುಕೊಂಡರು. ನಾನು ಒಲ್ಲದ ಮನಸ್ಸಿನಿಂದ ಒಂದು ತುತ್ತು ಊಟದ ಶಾಸ್ತ್ರ ಮಾಡಿದೆ. ಮಂಚದಲ್ಲಿ ಹೋಗಿ ಕುಳಿತೆ. ರವಿ ನಿದ್ದೆ ಮಾಡಿದರೆ? ಎಷ್ಟು ಕಾಲದ ನಂತರವಾಗಿತ್ತು ನಾನು ಅವರನ್ನೂ ಅವರು ನನ್ನನ್ನೂ ನೋಡುತ್ತಿರುವುದು. ಸಾವಿನ ದವಡೆಯಿಂದ ಪಾರಾಗಿ ನಾನು ಬಂದಿದ್ದೇನೆ. ಎಷ್ಟೆಲ್ಲ ನೋವು ಅನುಭವಿಸಿದೆ ನಾನು! ರವಿ ಕಣ್ಣು ತೆರೆಯುತ್ತಾರೆಂದೂ ನನ್ನ ಹತ್ತಿರ ಏನಾದರೂ ಮಾತನಾಡುತ್ತಾರೆಂದೂ ನಾನೆಣಿಸಿದೆ. ಆದರೆ ಹಾಗಾಗಲೇ ಇಲ್ಲ. ಏನಿಲ್ಲದಿದ್ದರೂ ಕಾಯಿಲೆಗೆ ಮಾಡಿದ ಚಿಕಿತ್ಸೆಗೆ ತಗುಲಿದ ಹಣದ ಕುರಿತಾದರೂ ಹೇಳುತ್ತಾರೆಂದೆಣಿಸಿದೆ. ಅದೂ ಇಲ್ಲ.

ನಾನು ರವಿಗೆ ಒತ್ತಿಕೊಂಡು ಮಲಗಿದೆ. ನನ್ನ ಶರೀರ ಸ್ಪರ್ಶವು ಅವರನ್ನು ಎಬ್ಬಿಸಿತು. ಅವರು ನನ್ನತ್ತ ಮುಖ ತಿರುಗಿಸಿದರು. ಮದ್ಯದ ದುರ್ಗಂಧವು ನನ್ನ ಮುಖ-ಬಾಯಿಗಳಿಗೆ ಶ್ವಾಸ ಗತಿಯನ್ನನುಸರಿಸಿ ಹರಿದು ಬಂತು. ಒಂದು ಮಾತಿಲ್ಲ. ಪ್ರೀತಿಯ ಸ್ಪರ್ಶವಿಲ್ಲ. ಪುನಃ ಒಂದು ಪೌರುಷದ ಹೂಂಕಾರ ಮಾತ್ರ ಕೇಳಿಸಿತು. ಒಂದು ಅತ್ಯಾಚಾರವನ್ನು ನನ್ನ ಮುಂದೆ ಕಂಡು ನಾನು ಭಯಪಟ್ಟೆ. ಅವರು ನನ್ನ ಬಟ್ಟೆಗಳನ್ನು ಎಳೆದೊಗೆಯಲು ಅವಸರಪಡಿಸಿದರು. ಆದರೆ ನನ್ನ ಎದೆಯ ಹತ್ತಿರಕ್ಕೆ ಮುಖವನ್ನು ತಂದೊಡನೆಯೇ ಫಕ್ಕನೆ ಅವರು ಹಿಂದೆ ಸರಿದರು. ದುರುಗುಟ್ಟಿ ನೋಡಿದರು. ಕಣ್ಣುಗಳಲ್ಲಿ ತಾತ್ಸಾರ, ತಿರಸ್ಕಾರಗಳು ತುಂಬಿಕೊಳ್ಳುತ್ತಿರುವುದನ್ನು ನಾನು ಕಂಡೆ. ಅವರು ನನ್ನ ಮೈಮೇಲಿಂದ ತಕ್ಷಣ ಕೆಳಗಿಳಿದರು. ನನ್ನ ಕಣ್ಣುಗಳಲ್ಲಿ ಇರಿಯುವಂತೆ ನೋಡುತ್ತ ಹೇಳಿದರು: “ಹ್ಞಂ! ಒತ್ತೆ ಮೊಲೆಯೋಳು!”

ನಾನು ಆಚೆ ಕೋಣೆಗೆ, ಮಗ ಮಲಗಿದ್ದೆಡೆಗೆ ಓಡಿ ಹೋದೆ.

ಅವರು ನನ್ನ ಹಿಂದೆ ಬರಲಿಲ್ಲ. ರಾತ್ರಿ ನಾನು ನಿದ್ರೆ ಮಾಡಲಿಲ್ಲ. ಫ್ಲಾಟಿನಿಂದ ಕೆಳಗೆ ಹಾರಬೇಕೆನ್ನಿಸಿತ್ತು. ಆದರೆ ನಿದ್ದೆಯ ನಡುವೆ ಬೆಚ್ಚಿ ಬಿದ್ದು ಎದ್ದ ಮಗುವಿನ ಅಳು ನನ್ನನ್ನು ಹಿಮ್ಮೆಟ್ಟಿಸಿತು. ನಾನು ಅವನನ್ನು ತಬ್ಬಿ ಹಿಡಿದುಕೊಂಡು ಅತ್ತೆ.

ಮಾರನೇ ದಿನವೇ ನಾನೂ ಮಗನೂ ಊರಿಗೆ ಬಂದೆವು. ಆ ಮೇಲೆ ನಡೆದದ್ದೆಲ್ಲವೂ ಅನಿರೀಕ್ಷಿತವಾಗಿತ್ತು. ರವಿ ಹೆಚ್ಚು ಹೆಚ್ಚು ಮದ್ಯಪಾನ ಮಾಡುತ್ತಾರೆಂದೂ, ಅರಬಿಯ ಜತೆಗೆ ಟೂರ್ ಹೋಗುತ್ತಾರೆಂದೂ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಮಲಯಾಳಿಗಳು ತಿಳಿಸಿದರು. ಒಂದು ದಿನ ಅವರೇ ಫೋನ್ ಮಾಡಿ ಹೇಳಿದರು ರವಿಗೆ ಜಾಂಡೀಸ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಅಂತ!

ಮತ್ತೊಂದು ದಿವಸ ರವಿಯ ಮೃತ ದೇಹವನ್ನಿಟ್ಟ ಪೆಟ್ಟಿಗೆ ನೆಡುಂಬಾಶ್ಶೇರಿಗೆ ಬಂದು ತಲುಪಿತು.

ನಾನು ಅಳಲಿಲ್ಲ.

ನನಗೆ ಅಳು ಬರಲಿಲ್ಲ. ಯಾರ್ಯಾರೋ ನನ್ನನ್ನು ನೋಡಿ ಹೇಳಿದರು: “ಎಲ್ಲವನ್ನು ಒಳಗೆ ಒತ್ತಿ ಇಟ್ಕೊಂಡಿದಾಳೆ” ನಾನು ಒಳಗೊಳಗೇ ನಕ್ಕೆ. “ಏನದು ಒತ್ತಿ ಇಟ್ಟುಕೊಳ್ಳುವುದು ಅಂದರೆ? ಗಂಡನ ಹತ್ತಿರ ಇರುವ ಪ್ರೀತಿಯೇ? ಅಥವಾ ಅವರ ಸಾವಿನ ಬಗ್ಗೆ ದುಃಖವನ್ನೇ? ನನ್ನನ್ನು ಬಲಾತ್ಕರಿಸಿ ಸುಖ ಪಡುವ, ನನಗೆ ಕಾಯಿಲೆಯಾದಾಗ ಹತ್ತಿರ ಕುಳಿತುಕೊಳ್ಳಲು ಸಮಯವಿಲ್ಲದ, ಕಾಯಿಲೆ ತಂದಿಟ್ಟ ವಿರೂಪದ ಹೆಸರಿನಲ್ಲಿ ನನ್ನನ್ನು ಅಪಮಾನಿಸಿ ನೋಯಿಸುವ ವ್ಯಕ್ತಿಯನ್ನು ನಾನು ಹೇಗೆ ತಾನೇ ಪ್ರೀತಿಸಲಿ? ನೀನೇ ಹೇಳು ಗೋಪಿ…”

ಹೇಳುವುದನ್ನು ನಿಲ್ಲಿಸಿ ಗೌರಿ ನನ್ನತ್ತ ನೋಡಿದಳು. ನಂತರ ಹೇಳಿದಳು: “ಗೋಪೀ.. ಬಶೀರ್‍ನ ಪ್ರೇಮಪತ್ರ ನಿನ್ನ ಪ್ರೇಮಪತ್ರÀವೆಂದು ನಾನು ಅರ್ಥ ಮಾಡಿಕೊಳ್ಳಲಿಲ್ಲ. ನಿನ್ನ ಮನಸ್ಸನ್ನು ಓದುವುದು ನನ್ನಿಂದ ಸಾಧ್ಯವಾಗದೇ ಹೋಯಿತು. ಅತ್ತೆ ಹೇಳಿದಾಗಲೇ ನನಗೆ ಗೊತ್ತಾಗಿದ್ದು ನೀನು ನನ್ನನ್ನು ಇಷ್ಟಪಟ್ಟಿದ್ದೆ ಎಂದು. ಅದು ಗೊತ್ತಾದಾಗ ತುಂಬ ತಡವಾಗಿತ್ತು. ಗೊತ್ತಾಗಿದ್ದರೂ ಪ್ರಯೋಜನವಾಗುತ್ತಿತ್ತೆಂದು ನನಗನ್ನಿಸುವುದಿಲ್ಲ. ರಾಜಕೀಯ, ಭಾಷಣ ಅಂತ ಕಳೆಯುವ ನಿನ್ನ ಜತೆ ನನ್ನ ಅಪ್ಪ ಅಮ್ಮ ನನ್ನನ್ನು ಕಳುಹಿಸಿಕೊಡುತ್ತಿದ್ದರೆಂದು ನನಗನ್ನಿಸುವುದಿಲ್ಲ. ಅಲ್ಲದೆ ಕೈಯಲ್ಲಿ ದುಡ್ಡಿಲ್ಲದ ನಿನ್ನ ಜತೆ ಬದುಕಬೇಕಾಗಿ ಬಂದಿದ್ದರೆ ಇಂಥ ಒಂದು ಕಾಯಿಲೆ ಬಂದಾಗ ಏನಾಗುತ್ತಿತ್ತು? ನನಗೆ ತಿಳಿಯದು. ಅಥವಾ ನಿನ್ನ ಜತೆಗಿದ್ದರೆ ಬಹುಶಃ ಈ ಕಾಯಿಲೆ ಬರುತ್ತಿರಲಿಲ್ಲವೋ ಏನೋ?”

“ನೀನು ಸುಮ್ಮನೆ ಇಲ್ಲಸಲ್ಲದ ಮಾತಾಡಬೇಡ. ಆರಾಮವಾಗಿ ಮಲ್ಕೋ” ನಾನು ಎದ್ದು ಕುಳಿತು ಗೌರಿಯ ಕೂದಲನ್ನು ನೇವರಿಸಿದೆ. ಅವಳು ನನ್ನ ಕೈಹಿಡಿದು ಮುಖಕ್ಕೆ ಒತ್ತಿಕೊಂಡಳು.

“ತುಂಬಾ ಹೊತ್ತಾಯಿತು ಅನ್ಸುತ್ತೆ. ನೀನು ಮಲಗು ಗೋಪಿ. ಅಲ್ಲಿ ಮಲಗಬಹುದು”. ಬೈಸ್ಟಾಂಡರ್ಸ್‍ಗೆಂದು ಇಟ್ಟಿರುವ ಬೆಡ್ ತೋರಿಸಿ ಗೌರಿ ಹೇಳಿದಳು. “ನನಗೂ ನಿದ್ದೆ ಬರುತ್ತಿದೆ. ಆದರೂ ನೀನು ಜತೆಗಿರುವಾಗ ನಿದ್ದೆ ಮಾಡದೆ ಎಚ್ಚರವಾಗಿರಬೇಕು ಅಂತ ನನ್ನ ಆಸೆ” ಗೌರಿ ನನ್ನ ಬೆರಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು.

“ಗೋಪೂ..” ಅವಳು ಕರೆದಳು

“ಏನು ಗೌರಾ.. ಹೇಳು..”

ಮಂಚದ ಮೇಲೆ ಅವಳ ಜತೆಗೆ ಕುಳಿತುಕೊಂಡು ನಾನು ಗೌರಿಯನ್ನು ನನ್ನ ತೋಳುಗಳಿಂದ ಬಂಧಿಸಿದೆ. ನಮ್ಮಿಬ್ಬರ ನಡುವೆ ಎಷ್ಟೋ ಕಾಲದ ಆತ್ಮೀಯ ಬಂಧವಿದೆಯೇಯೋ ಅನ್ನುವ ಹಾಗೆ ಅವಳು ನನಗೊತ್ತಿ ಕುಳಿತಳು.

“ಗೋಪೂ..” ಗೌರಿ ಕರೆದಳು.

“ಹ್ಞೂಂ..” ನಾನು ಓಗೊಟ್ಟೆ.

“ನನಗೆ ತುಂಬ ಸಂತೋಷವಾಗುತ್ತಿದೆ. ನೋವೆಲ್ಲ ಕಡಿಮೆಯಾದಂತೆ”

“ಒಳ್ಳೆದಾಯ್ತು!” ನಾನೆಂದೆ.

“ಗೋಪೂ..” ಗೌರಿ ಮತ್ತೆ ಕರೆದಳು.

“ಹ್ಞೂಂ..” ನಾನು ಓಗೊಟ್ಟೆ.

“ನಾವು ಚಿಕ್ಕವರಾಗಿದ್ದಾಗ ಸ್ನೇಹಿತರಾಗಿದ್ದೆವು ಅಲ್ವ?”

“ಹೌದು”

“ಮತ್ಯಾಕೆ ನಾವು ದೂರಾಗಿಬಿಟ್ಟದ್ದು?”

ನಾನೇನೂ ಹೇಳಲಿಲ್ಲ. ನನಗೆ ತಿಳಿದಿರುವ ರಾಜಕೀಯ ಸಿದ್ಧಾಂತಗಳನ್ನು ಹೇಳುವ ಸಂದರ್ಭ ಇದು ಅಲ್ಲವಲ್ಲ?

“ಗೋಪೂ.. ನಾನು ಕೂಡಲೇ ಸಾಯುತ್ತೇನೆ” ಗೌರಿ ಸಾವನ್ನು ಮುಂದಾಗಿ ಕಾಣುತ್ತಿದ್ದಾಳೋ ಎಂಬ ಭಾವದಲ್ಲಿ ಹೇಳಿದಳು.

ಒಂದು ಕ್ಷಣ ನಾನು ಮಾತನಾಡಲಿಲ್ಲ. ನಂತರ ಹೇಳಿದೆ: “ನೀನು ಸುಮ್ಮನೆ ಏನೇನೋ ಮಾತನಾಡಬೇಡ”.

ನಾನು ಅವಳನ್ನು ಇನ್ನಷ್ಟು ಗಟ್ಟಿಯಾಗಿ ಎದೆಗೊತ್ತಿಕೊಂಡೆ.

“ಗೋಪೂ..”

“ಹ್ಞೂಂ…”

ಗೌರಿ ಹೇಳಿದಳು : “ನಾನು ಸತ್ತರೆ ನನ್ನ ತುಟಿಗಳನ್ನು ಚುಂಬಿಸಕೂಡದು. ನನಗೆ ನಾಚಿಕೆಯಾದೀತು. ನಾನು ಸಾಯುವಾಗ ನನ್ನ ಬೆರಳುಗಳನ್ನು ಹಿಡಿದುಕೊಳ್ಳಬೇಕು. ಸುಮ್ಮನೇ ಒಂದು ಧೈರ್ಯಕ್ಕೆ. ಹಿಂದೆಯೂ ನಾನು ನಿನ್ನ ಬೆರಳುಗಳನ್ನು ಹಿಡಿದುಕೊಂಡು ಕತ್ತಲಲ್ಲಿ ನಡೆಯುತ್ತಿದ್ದೆನಲ್ಲ?”

“ಹ್ಞೂಂ..”

ಗೌರಿ ನಂತರ ಏನೂ ಮಾತನಾಡಲಿಲ್ಲ. ಅವಳ ಉಸಿರಾಟ ಭಾರವಾಗುತ್ತ ಬಂತು. ನಾನು ಅವಳನ್ನು ಮೆಲ್ಲನೆ ಹಾಸಿಗೆಯಲ್ಲಿ ಮಲಗಿಸಿದೆ. ಬೆಲ್ ಮಾಡಿದೆ. ಸಿಸ್ಟರ್ ಓಡಿ ಬಂದರು. ಒಮ್ಮೆ ನೋಡಿ, ಅವರು ಓಡಿ ಹೋಗಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದು ಆಕ್ಸಿಜನ್ ಕೊಡಲಾರಂಭಿಸಿದರು.

ನಾನು ಗೌರಿಯ ಮುಖವನ್ನು ನೋಡಿದೆ. ಅವಳ ಕಣ್ಣುಗಳು ನನ್ನನ್ನೇ ನೋಡುತ್ತಿದ್ದವು. ಬೆರಳುಗಳು ನನ್ನ ಬಲಗೈ ಬೆರಳುಗಳನ್ನು ಹಿಡಿದುಕೊಂಡಿದ್ದವು. ಅವಳ ಮುಖದಲ್ಲಿ ಒಳ್ಳೆಯ ಕಳೆಯಿತ್ತು. ನನ್ನ ಕಣ್ಣೀರ ಹನಿಗಳು ಉದುರಿ ಅವಳ ಬೊಗಸೆಗಳ ಮೇಲೆ ಬಿದ್ದವು. ಅವಳು ತಲೆಯಲ್ಲಾಡಿಸಿದಳು. ಅಳಬಾರದೆಂದು ನನ್ನ ಹತ್ತಿರ ಹೇಳುವಂತೆಯೋ ‘ಸರಿ, ಹೋಗುತ್ತೇನೆ’ ಎಂದು ಬೀಳ್ಕೊಡುವಂತೆಯೋ ಆಗಿತ್ತು ಅವಳು ತಲೆಯಲ್ಲಾಡಿಸಿದ ರೀತಿ.

ನಾನು ಗೌರಿಯ ಮುಖದತ್ತ ನೋಡುತ್ತಲೇ ಕುಳಿತೆ. ಈಗ ಶ್ವಾಸಗತಿ ನಿಧಾನವಾಗುತ್ತಿದೆ. ಅವಳ ಬೆರಳುಗಳು ನನ್ನ ಬೆರಳುಗಳನ್ನು ಒಮ್ಮೆ ಅಮುಕಿದವು. ಮತ್ತೆ ಸಡಿಲಗೊಂಡವು. ನಾನು ನೋಡಿದೆ. ಗೌರಿ ಈಗ ಉಸಿರಾಡುತ್ತಿಲ್ಲ!

ನಾನು ಮೂಡಣ ದಿಕ್ಕಿನತ್ತ ನೋಡಿದೆ. ಆಗಸದತ್ತ! ನಕ್ಷತ್ರಗಳೆಲ್ಲ ಬಿದ್ದು ಹೋಗಿವೆ! ಮಾವಿನ ಮರದ ತುದಿಯಲ್ಲಿದ್ದ ಮಲ್ಲಿಗೆ ಹೂಗಳೂ! ಪರ್ವತಗಳು ಮತ್ತು ಆಕಾಶದ ನಡುವಿನಿಂದ ಮೇಲೇರಿ ಸೂರ್ಯ ಕಿಟಕಿಯೊಳಗೆ ನೇರವಾಗಿ ನೋಡುತ್ತಿದ್ದ; ನಮ್ಮನ್ನು – ಗೌರಿಯನ್ನೂ, ಗೋಪಿಯನ್ನೂ.

ಗೌರಿಯ ಬೆರಳುಗಳು ಈಗಲೂ ನನ್ನ ಕೈಯೊಳಗಿವೆ. ಮಲ್ಲಿಗೆ ಹೂಗಳ ಮೇಲಿನ ಮಂಜು ಹನಿಗಳ ತಂಪು ಅವಳ ಬೆರಳುಗಳಿಗಿದೆ. ಎಷ್ಟೊ ಹೊತ್ತಿನಿಂದ ನಾನು ಹೀಗೆಯೇ ಕುಳಿತಿದ್ದೇನೆ. ಅವಳ ತುಟಿಗಳಲ್ಲಿ ಈಗಲೂ ಜೀವಂತಿಕೆಯ ಕೆಂಪು ಮತ್ತು ನಗುವೂ ಇದೆ. ನನಗೆ ಅವಳ ತುಟಿಗಳನ್ನು ಚುಂಬಿಸಬೇಕೆಂದು ಅನ್ನಿಸುತ್ತಿದೆ. ಮಲ್ಲಿಗೆ ಹೂಗಳನ್ನು ಮುದ್ದಿಸಿದ ಹಾಗೆ. ಆದರೆ, ಅವಳಿಗೆ ನಾಚಿಕೆಯಾದರೆ!

—————– * * * * ——————