ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿಯೊಬ್ಬ..

ಡಾ. ಕೆ.ಪಿ. ನಟರಾಜ
ಇತ್ತೀಚಿನ ಬರಹಗಳು: ಡಾ. ಕೆ.ಪಿ. ನಟರಾಜ (ಎಲ್ಲವನ್ನು ಓದಿ)


ಕವಿಯೊಬ್ಬ ಮಳ್ಳ .
ತನಗನಿಸಿದ್ದನ್ನು
ಅನ್ನಿಸಿದಾಕ್ಷಣವೆ ಹೇಳಿ ಅಲ್ಲಿ ಟಳಾಯಿಸುವ ಉರಿ‌ಮುಕದ
‘ಸಜ್ಜನ’ರ ಭಯಕ್ಕೆ ಹೆದರಿ ಅಲ್ಲಿಂದ ಆ ಕ್ಷಣವೇ ಜಾಗ ಖಾಲಿ ಮಾಡುತ್ತಾನೆ ..
ಹೇಳಿದ್ದು ದಾಖಲಾಗಿ ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ ಬಿದ್ದು
ಕವಿ ದಾರಿಗಾಣದೆ ತಪ್ಪಿಸಿಕೊಳ್ಳುತ್ತಿರುತ್ತಾನೆ

ಕವಿಯೊಬ್ಬ ಕಳ್ಳ .
ತನ್ನ ಕಣ್ಣಿಗೆ ಸುಂದರವಾಗಿ ಕಂಡಿದ್ದನ್ನು
ಯಾರೂ ನೋಡುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡು
ಕದ್ದು ತನ್ನ ಕವಿತೆಯಲ್ಲಿ ಬಚ್ಚಿಡುತ್ತಾನೆ ..ಬಚ್ಚಿಟ್ಟು ಯಾರಾದರೂ ನೋಡಿಬಿಟ್ಟರಾ ?!..
ಎಂದು ಎದೆಬಡಿಯುತ್ತ ಬೆದರುಗಣ್ಣಲ್ಲಿ ತನ್ನ ಮಾಲಿನ ಹತ್ತಿರ ಕಾಯುತ್ತ ನಿಲ್ಲುತ್ತಾನೆ

ಕವಿಯೊಬ್ಬ ಸಂತ
ಮಳ್ಳನೂ ಕಳ್ಳನೂ ಅವನ ಒಳಕೋಣೆಯಲ್ಲಿ ಅವಿತು
ಅವರನ್ನು ಬಚ್ಚಿಡಲು ಕಾವಿ ಗಡ್ಡ ಏಕಾಂತವಾಸ. ..
ದ್ಯಾನಗಳ ಮುಚ್ಚುಮರೆಯಲ್ಲಿ ತನ್ನನ್ನು ತಲೆಮರೆಸಿಟ್ಟುಕೊಳ್ಳುತ್ತಾನೆ ..
ಅವನ ಮೊಗದ ಶೋಭೆಯೂ ಕಳ್ಳ‌ಮಳ್ಳರ ಕೊಳ್ಳೆಯ ಸೊಬಗಿನ ಮೊಗವೇ ಆಗಿ

ಕವಿಯೊಬ್ಬ ಮಗು ..
ಸುತ್ತ ಮುತ್ತಲೆಲ್ಲ ಗಡ್ಡಕ್ಕೆ ನರೆಬಂದು ನಿವೃತ್ತಿಯ ಆಕಳಿಕೆಗಳು ಕೇಳುತ್ತಿರುವಾಗ ..
ಎಳೆಯ ಮನ ಜೀವವಿವನು ಎಳೆಯ ಸೂರ್ಯನ ಹಿಂದೆ ಎಳೆಯ ಚಂದಿರ ಬಲಿತು
ಪೂರ್ಣನಾಗುವ ಹಿಂದೆ
ಎಳೆಯ ಎಲೆಗಳು ಮರಗಳೊಡಲ ಬಿರಿದು ನುಗ್ಗುವ ಹಿಂದೆ ಅಡ್ಡಾಡುತ್ತಿರುತ್ತಾನೆ ..

ಕವಿಯೊಬ್ಬ ಅಲೆ ಮಾರಿ
ಲೋಕದ ದಾರಿ ತಪ್ಪಿದ ಅಕಳಂಕ ಅನಾಮಿಕ ಅಮಾಯಕ ಜೀವ ಅವನು ಕಾಲದಿಂದ ತಪ್ಪಿಸಿಕೊಂಡು ಅಲೆವ ,
ತಳಾದಿಯೂ ತಪ್ಪಿದ ಕಾರಣ ಅಲೆವ , ಹೆತ್ತವರು ತಪ್ಪಿದ ಬಳಿಕ ಇವ ಬಯಲಿಗೆ ಇಳಿದ ..
ಅಲೆವ ಒಲವಾಗಿ ಅಲೆವ .. ಬಯಲೂ ಇವನದೆ ಆಕಾಶವೂ

ಕವಿಯೊಬ್ಬ ಕಾಲವ ನೆಚ್ಚಿ ನಡೆದವ
ಕಾಲವು ಕಯ್ ಕೊಟ್ಟ ಬಳಿಕ ಸ್ತಳವ ನೆಚ್ಚಿ ನೆಲೆಸಿದ ನೆಚ್ಚಿದ ನೆಲವ ಬಿಟ್ಟು ಹೊರಡಬೇಕಾಗಿ ಬಂತು
ಕಾಮವನೆ ಅವಲಂಬಿಸಿ ನಡೆದ ಮೈನವಿರೇಳುವ ಹಾದಿಯ ತುಳಿದ ಕಾಮವೂ ಕೈಬಿಟ್ಟು ಕೊಸರಿಕೊಂಡಿತು
ಸಿಗುವೆ ಮುಂದಲ‌ಜನ್ಮದಲ್ಲಿ ಎಂದು

ಕವಿಯೊಬ್ಬ ಮುಖೇಡಿ , ಕವಿ ಮುನಿ
ಮೌನವನು ನೆಚ್ಚಿ ಬಿಟ್ಟಿರುವವನು ಕವಿ ಲೌಕಿಕವನ್ನು ಬಿಟ್ಟು ಹೊರಡಲೊಲ್ಲ..
ಕೇಡಿಗರ ಸುಳುವುಗಳ ಕಂಡ ಕವಿ ಅವಿರತವಾಗಿ ಶಬ್ದಗಳಲಿ ಕೂಗಾಡಿದ್ದಾನೆ ರೋಷಗೊಂಡಿದ್ದಾನೆ ಮುನಿದಿದ್ದಾನೆ ,
ರೂಪಕಗಳ ಮರೆಯಲ್ಲಿ ಅವಿತುಕೊಂಡು ಅವರ ಮೇಲೆ ಕಲ್ಲು ತೂರಿದ್ದಾನೆ
ಕವಿ ತನ್ನ ಮುಕೇಡಿತನದ ವಿರುದ್ದ ಬಂಡಾಯವೆದ್ದಿದ್ದಾನೆ ..

ಕವಿ , ಪಾಪ ನಿವೃತ್ತ. . ..
ಅವನು ‌ಲೋಕ ಸುತ್ತುವವರ ಜೊತೆಗಿಲ್ಲ ಲೋಕ ಸಂಗ್ರಹಿಗಳ ಜೊತೆಗೂ ಇಲ್ಲ‌
ಅವರ ಹುರುಪೂ ಅವರ ಕುತೂಹಲವೂ ಇಲ್ಲ ಎಲ್ಲ ಲೋಕವೂ ತನ್ನೊಳಗೇ ತನ್ನ ಸುತ್ತಲೇ ಎಂಬ ಅರಿವು ಅವನದು
ಎಲ್ಲಿಯೂ ಇರುವುವು ಈ ಬೂಮಿ ಈ ಮಣ್ಣು ಆ ಆಕಾಶ ಇದೇ ನೀರು ..
ತನ್ನೊಳಗೇ ಎಲ್ಲವೂ ಎನ್ನುವವ ಅವ

ಕವಿಯೊಬ್ಬ….