ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೈ ಹಿಡಿವ ಮಿನಿ ಕೈಪಿಡಿ

ದೀಪಕ್ ಜಿ.ಕೆ.
ಇತ್ತೀಚಿನ ಬರಹಗಳು: ದೀಪಕ್ ಜಿ.ಕೆ. (ಎಲ್ಲವನ್ನು ಓದಿ)

ಸುಮಾರು 38 ವರ್ಷಗಳ ಹಿಂದಿನ ಮಾತು. ಆಗತಾನೆ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆಯಾಗಿ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಂತಹ ಸಮಯ ಅದು. ಒಮ್ಮೆ ನನ್ನ ಸ್ನೇಹಿತನ ಎದುರು ಕುಳಿತು, ನೀನು ಯಾವುದೇ ವಿಷಯವನ್ನು ಕೊಟ್ಟರೂ ನಾನೊಂದು ಆಶುಕವಿತೆ ರಚಿಸುವೆ ಎಂದೆ.
ಹಾಗೆ ರಚಿಸಿದ್ದು ಇದು.
ಕಾಗೆ
ಜನ ಹೀಯಾಳಿಸುವುದು ಕಪ್ಪು ಕಾಗೆ
ಅವರವರು ಬಾಳರು ಅದರ ಹಾಗೆ
ಕಾಗೆಗೆ ಅನ್ನ ಸಿಕ್ಕೆ ಬಂಧುಗಳ ಕೂಗೆ
ಬಾಗಿಲ ಹಾಕಿವರು ಬಿಸ್ಕಟ್ ತಿನ್ನುವರು ಒಳಗೆ

ಇದು ಆಗಲೇ ರಚಿಸಿದ್ದಾದರೂ, ಹಿನ್ನೆಲೆಯಲ್ಲಿ ಬೀchiಯವರ “ಅಂದನಾ ತಿಂಮ” ಕೃತಿಯ ಒಂದು ಕಾಗೆ ಕುರಿತ ಭಾವ ಇದ್ದದ್ದಂತೂ ಸುಳ್ಳಲ್ಲ. ಆದರೆ ಪ್ರಾಸ ಕೂಡಿಸಿದ್ದು ಪದಗಳ ಜೋಡಣೆ ನನ್ನದೇ.

ಜನ್ಮದಿನದಂತಹ ವಿಶೇಷ ಸಂದರ್ಭಗಳಿಗೆ ಪ್ರಾಸಬದ್ಧವಾದ ಕೆಲವು ಕವಿತೆಗಳನ್ನು ನಾನು ಈ ಹಿಂದೆ ಹೊಸದಿದ್ದೆ. ನಂತರದ ದಿನಗಳಲ್ಲಿ ವಿದ್ಯಾಭ್ಯಾಸದ ಮತ್ತು ಕೆಲಸದ ಒತ್ತಡವೋ ಅಥವಾ ಸಾಮರ್ಥ್ಯದ ಕೊರತೆಯೋ ನಾನೊಬ್ಬ “ಕವಿ” ಆಗಲಿಲ್ಲ. ಸರಿಯಾದ ಮಾರ್ಗದರ್ಶನ ಆಗಲಿಲ್ಲವೇನೋ ಎಂಬ ಕೊರತೆ ಆಗಾಗ ಕಾಡುವುದಂತೂ ನಿಜ.

ಈಗಂತೂ ಗೋಡೆ ಗೋಡೆಗಳಲ್ಲಿ ( ಹಿಂದಿನ ‘ಗಲ್ಲಿ ಗಲ್ಲಿಗಳಿಗೆ’ ಸಮಾನಾಂತರ) ಕವಿಗಳು ಕಾಣಸಿಗುತ್ತಾರೆ.
ಕವಿತೆ ರಚಿಸುವ ಪರಿಯು ವೈವಿಧ್ಯಮಯವಾಗಿದೆ. ಕೆಲವರು ಲಭ್ಯ ಚಿತ್ರಕ್ಕಾಗಿ ಬರೆಯುತ್ತಾರೆ; ಸ್ಪರ್ಧೆಗಾಗಿ ಮತ್ತೆ ಕೆಲವರು; ಕವನಗಳ ಸರಪಳಿಯಂತೆ ಇನ್ನೊಂದಷ್ಟು ಮಂದಿ; ಹೀಗೆ ಹಲವಾರು ಕಾರಣಗಳಿಂದಾಗಿ ಬರೆಯುವವರು, ಓದುವವರಿಗಿಂತಲೂ ಹೆಚ್ಚಿರುವುದು ಸುಳ್ಳಲ್ಲ.
ಇನ್ನು ಸಾಮಾಜಿಕ ಮಾಧ್ಯಮಗಳ ” ಲೈಕ್/ಲವ್” ಗಳ ಪರಿ ಎಂದಿಗೂ ಕವಿತೆಗಳ ಗುಣ ಮಟ್ಟದ ಮಾನದಂಡವಾಗಲಿಕ್ಕೆ ಸಾಧ್ಯವೇ ಇಲ್ಲ. ಈ ಪ್ರತಿಕ್ರಿಯೆಗಳ ಹಿಂದೆ ಕವನದ ಮೌಲ್ಯಕ್ಕೆ ಹೊರತಾದ ಅನೇಕ ಕಾರಣಗಳಿರುವುದು ಕೂಡ ನಿಜ.

ಇವುಗಳಲ್ಲಿ ಒಂದು ಪ್ರಶಂಸಾರ್ಹ ಸಂಗತಿಯೆಂದರೆ – ಈ ಮೂಲಕ ಕನ್ನಡದ ಬಳಕೆ ಹೆಚ್ಚಾಗುತ್ತಿರುವುದು.

ಹಾಗೆಯೇ ಇಂದಿನ ಅನೇಕ ಕವಿಗಳು ಕವಿತೆ ಬರೆಯಲು ಪ್ರಾರಂಭ ಮಾಡುತ್ತಿರುವುದು ಕೂಡ ‘ಪುಟ್ಟ ಕವಿತೆ’ ಗಳಿಂದ ಅಥವಾ ‘ಹನಿಗವನ’ಗಳಿಂದ.ವಸ್ತುಸ್ಥಿತಿ ಹೀಗಿರುವಾಗ ಈ ಪ್ರಾರಂಭಿಕ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಅನೇಕ “ಪ್ರತಿಭಾಶಾಲಿ”ಗಳಿಗೆ ಒಳ್ಳೆಯ ಕವಿತೆ ಬರೆಯುವ ಸಾಮರ್ಥ್ಯ ಖಂಡಿತಾ ಬರುವುದು.

ಓದಿ ತಿಳಿ ನೋಡಿ ಕಲಿ” ನಾಣ್ಣುಡಿ ಗೊತ್ತೇ ಇದೆ. ಅದಕ್ಕೆ ಪೂರಕವಾಗಿ, ನಮಗೆ ಮಾರ್ಗದರ್ಶನ ಮಾಡಲು ಇತ್ತೀಚಿಗೆ ಕನ್ನಡದ ಪ್ರಖ್ಯಾತ ಕವಿಗಳಾದ ಶ್ರೀ ಎಚ್ ಡುಂಡಿರಾಜ್ ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ.

ಶ್ರೀ ಎಚ್ ಡುಂಡಿರಾಜ್

ಈ ಪುಸ್ತಕ “ಹನಿಗವನಗಳಿಗಗೊಂದು ಮಿನಿ ಕೈಪಿಡಿ” ಆದರೂ, ಇಲ್ಲಿ ಉಲ್ಲೇಖಿಸಿರುವ ಅನೇಕ ಕವಿಗಳು, ಸಾಹಿತಿಗಳು ಆಗಲೇ ಬರೆದಿರುವ ಮಿನಿಗವನಗಳ ಮಾದರಿ ನಮಗೆ ಅಚ್ಚರಿ ಮೂಡಿಸುವುದಷ್ಟೇ ಅಲ್ಲದೆ, ಅವುಗಳನ್ನು ಸರಿಯಾಗಿ ಗ್ರಹಿಸಲು ಪೂರಕವಾಗಿವೆ. ಇವು, ಆಸಕ್ತರಿಗೆ ಒಂದೇ ಕಡ ಸಿಗುವ ನಿಧಿಯೆನ್ನುವುದರಲ್ಲಿ ಸಂಶಯವಿಲ್ಲ.

ಅಷ್ಟೇ ಅಲ್ಲದೆ, ಈ ಪುಸ್ತಕದಲ್ಲಿ ಅನೇಕ ಮಾಹಿತಿಗಳನ್ನು ಕವಿ ನೀಡುತ್ತಾರೆ. ವಿಷಯ ಸಂಗ್ರಹಣೆ; ಛಂದಸ್ಸು ಮತ್ತು ಸೂತ್ರದ ಅಗತ್ಯತೆ; ಕವನದ ಸಾಲುಗಳ ಮಹತ್ವ; ಆಯಾ ಕಾಲಕ್ಕನುಗುಣವಾಗಿ  ಸ್ಫುರಿಸುವ ವಸ್ತು ವೈವಿಧ್ಯ; ಒಳ್ಳೆಯ ಕವಿತೆ ಮತ್ತು ಕೆಟ್ಟ ಕವಿತೆಗಳ ವ್ಯತ್ಯಾಸ;  ಹೀಗೆ ಅನೇಕ ಆಯಾಮಗಳನ್ನು ತೆರೆದಿಡುತ್ತಾ ಕವಿ ಡುಂಡಿರಾಜರು, ಒಳ್ಳೆ ಹನಿಗವನ ವನ್ನು ರಚಿಸುವುದು ಹೇಗೆ ಎನ್ನುತ್ತಲೇ ಆ ಹನಿಗವನಗಳನ್ನು ಓದಿ ಆಸ್ವಾದಿಸಲು ಬೇಕಾದ ಮಾನಸಿಕ ಸಿದ್ಧತೆಯನ್ನು ಕೂಡ ಓದುಗರಿಗೆ ಮಾಡುತ್ತಾರೆ. ಹಾಗಾಗಿ ಈ ಕೃತಿ “ಯುವಕವಿ” ಗಳಿಗೆ ಎಷ್ಟು ಮುಖ್ಯವೋ “ಯುವ ಓದುಗ” ರಿಗೂ ಅಷ್ಟೇ ಮುಖ್ಯವಾಗಿ ತೋರುತ್ತದೆ. ಈ ಹಿಂದೆಯೇ ಬರೆದ, ಅವರದ್ದೊಂದು ಕವಿತೆ ಹೀಗಿದೆ.

ಈ ಆ ಯುವಕವಿ

ಈ ಯುವಕವಿ
ಸರ ಸರ ಸರ
ಬರೆಯುವ ಕವಿ

ಆ ಯುವ ಕವಿ
ಪರ ಪರ ಪರ
ಹರಿಯುವ ಕವಿ

….
….
….

ಈ ಯುವ ಕವಿ
ಎಡಬಿಡದೆ ಕವಿತೆ
ಈಯುವ ಕವಿ

ಆ ಯುವಕವಿ
ಶ್ರೇಷ್ಠ ಕಾವ್ಯವೇ ಬೇಕೆಂದು
ಆಯುವ ಕವಿ
….

ಈ ಯುವ ಕವಿ
ಈಯುವುದರಲ್ಲೇ
ಕಳೆಯುತ್ತಾನೆ ಕಾಲ
ಆಯುವುದಿಲ್ಲ

ಆ ಯುವ ಕವಿ
ಆಯುತ್ತಾ ಆಯುತ್ತಾ
ಸವೆಸುತ್ತಾನೆ ಆಯುಷ್ಯ
ಈಯುವುದೇ ಇಲ್ಲ.

ಹೀಗೆ ಬರೆದು ಸುಮ್ಮನಾಗದೆ ಡುಂಡಿರಾಜರು, ಈಯುವವರಿಗೆ ಆಯುವ ಮಾರ್ಗವನ್ನೂ, ಆಯುವವರಿಗೆ ಈಯುವ ದಾರಿಯನ್ನೂ,  ವಾಚಕರಿಗೆ ಮಾಪನದ ಸುಳಿವನ್ನೂ ನೀಡಿದ್ದಾರೆ, ತಮ್ಮ  “ಹನಿಗವನ -ಏನು? ಏಕೆ? ಹೇಗೆ? ” ಎಂಬ ಕೃತಿಯ ಮೂಲಕ. ಇದರಲ್ಲಿರುವ ವಿಷಯ ವೈವಿಧ್ಯತೆ ಕೇವಲ ಹನಿಗವನಕ್ಕೆ ಸೀಮಿತವಾಗದೇ ‘ ದೊಡ್ಡ ಕವಿತೆಗಳಿಗೂ’ ವಿಸ್ತಾರವಾಗಬಲ್ಲ ಸಾಧ್ಯತೆ ಹೊಂದಿರುವುದು ಈ ಪುಸ್ತಕದ ಹೆಚ್ಚುಗಾರಿಕೆ.

ಹಾಗಾಗಿಯೆ ಈ ಮಿನಿ ‘ಕೈಪಿಡಿ’,  ಕವಿಗಳಾಗಬೇಕೆಂದು ತಹತಹಿಸುತ್ತಿರುವ, ಆ ಪ್ರೇರಣೆಯಿಂದ ಸಾಲುಗಳನ್ನು ಹೊಸೆಯುತ್ತಿರುವ ಎಲ್ಲರನ್ನೂ ‘ಕೈಹಿಡಿ’ಯುವುದರಲ್ಲಿ ಸಂಶಯವೇನಿಲ್ಲ.

ಈ ಪುಸ್ತಕದ ಸಾರ್ಥಕತೆ, ಎಲ್ಲರೂ ಕೊಂಡು, ಓದಿ ತಮ್ಮ ಸಾಮರ್ಥ್ಯವನ್ನು ಇನ್ನೂ ಹಿಗ್ಗಿಸಿಕೊಂಡು ಉತ್ತಮವಾದ ಕೃತಿ ರಚನೆಗಳು ಆದಾಗ. ತನ್ಮೂಲಕ ಓದುಗರಿಂದ ಮೌಲ್ಯಭರಿತ ಲೈಕುಗಳ ಪಡೆದಾಗ. ಹಾಗಾಗಲೆಂಬುದೇ ಈ ಬರಹದ ಆಶಯ.

ಕೃತಿ: ಹನಿಗವನ- ಏನು? ಏಕೆ? ಹೇಗೆ?
ಲೇಖಕರು: ಎಚ್. ಡುಂಡಿರಾಜ್
ಪುಟಗಳು: 160
ಪ್ರಕಾಶಕರು: ಅಂಕಿತ ಪುಸ್ತಕ, 53 ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು 560004
ಮುಖಬೆಲೆ: ₹175 ಮಾತ್ರ