ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುರೇಖಾ ಹರಿಪ್ರಸಾದ್ ಶೆಟ್ಟಿ
ಇತ್ತೀಚಿನ ಬರಹಗಳು: ಸುರೇಖಾ ಹರಿಪ್ರಸಾದ್ ಶೆಟ್ಟಿ (ಎಲ್ಲವನ್ನು ಓದಿ)

“ನಿನಗೆ ಅವನು ಇಷ್ಟವಾದನಾ ” ಅಂತ ಅಮ್ಮ ಬಾಯಿತೆರೆದು ಕೇಳುವಾಗ ಮಧುರಾ ಮೌನವಾಗಿದ್ದಳು.  ಶಾಸ್ತ್ರ, ಜಾತಕ, ವಿದ್ಯೆ, ಹಣ, ಅಂತಸ್ತು ಅಂತ ಎಲ್ಲವನ್ನೂ ತೂಗಿ ಅಳೆದು ಆ ಹುಡುಗನ ಜೊತೆ ತನ್ನ ಮದುವೆ ಮಾಡಿಸಲು ಅಮ್ಮ ಹಾತೊರೆಯುತ್ತಿದ್ದಾಳೆ ಎನ್ನುವುದು ಖಾತ್ರಿಯಾಗಿತ್ತು ಅವಳಿಗೆ. ತಾನು ಮದುವೆಯಾಗುವ ಹುಡುಗ ಹೀಗಿರಬೇಕು…. ಹಾಗಿರಬೇಕು… ಎಂಬ ನಿರೀಕ್ಷೆ,  ಕನಸುಗಳೆಲ್ಲವನ್ನೂ  ಗಂಟುಕಟ್ಟಿ ಮೂಲೆಗೆಸೆದ  ಮೇಲೆ ಇಷ್ಟ, ನಷ್ಟ, ಕಷ್ಟಗಳ ಬಗ್ಗೆ ಯಾಕೆ  ಯೋಚಿಸಬೇಕು ಎಂದೆನಿಸಿತವಳಿಗೆ. 

ಮಧುರಾಳನ್ನು ನೋಡಿ ಹೋದ ಗಂಡಿನ ಕಡೆಯವರು ಕೂಡಾ  ‘ಹುಡುಗಿ ತಮಗೆ ಇಷ್ಟವಾದಳು ‘ ಎಂಬ ಸಂದೇಶ ಕಳುಹಿಸಿದರು. ಮಧುರಾಳ   ಅಮ್ಮ ಶಾರದಾಳ ಸಂತೋಷಕ್ಕೆ ಪಾರವೇ ಇರಲಿಲ್ಲ.’  ಹೇಗಾದರೂ ಈ ಮದುವೆ ಅಂತ ಒಂದು ಆದರೆ ಸಾಕು ನನಗೆ… ಎಲ್ಲದರಲ್ಲೂ ಆ ಹುಡುಗ ನಿನಗೆ ಸರಿಯಾದ ಜೋಡಿ’  ಶಾರದಾ ಹೇಳುವಾಗ ಮಧುರಾಳ ಮನಸ್ಸು ಮೌನಕ್ಕೆ ಜಾರಿತು.   ಈ ಮನೆಯಲ್ಲಿ ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕು ಎನ್ನುವ ಜಿದ್ದಿಗೆ ಬಿದ್ದ ಅಮ್ಮನ ಮುಂದೆ ಅಪ್ಪನೇ ಮೌನದ ಮುಸುಕೆಳೆದುಕೊಂಡಿರುವಾಗ   ತನ್ನ  ಮಾತೇನು ನಡೆಯುದು ಎಂಬ ಸತ್ಯದ ಅರಿವಿತ್ತು ಮಧುರಾಳಿಗೆ.    

ವಯಸ್ಸು ಮೂವತ್ತೈದು  ಕಳೆದರೂ ಕಂಕಣಭಾಗ್ಯ ಕೂಡಿ ಬರಲಿಲ್ಲವೆಂಬ ಕೊರಗಿನಲ್ಲಿ ಕಾಲಕಳೆಯುತ್ತಿದ್ದ ಮಧುರಾಳ  ತಂದೆಗೆ ಮಗಳ ಮದುವೆ ಯಾವ ಕಾರಣಕ್ಕೆ ತಡವಾಗುತ್ತಿದೆ ಎಂಬುದು ಗೊತ್ತಿದ್ದರೂ ಅಸಹಾಯಕರಾಗಿದ್ದರು. ಇಷ್ಟಕ್ಕೂ ನೋಡಲು ಚೊಕ್ಕ ಸುಂದರಿಯಾಗಿದ್ದ ಮಧುರಾ  ಇಂಜಿನಿಯರ್ ಪದವೀಧರೆ. ಒಳ್ಳೆಯ ಸಂಬಳ,  ಸೌಕರ್ಯಗಳೆಲ್ಲ ಇರುವ ಖಾಸಗಿ ಕಂಪನಿಯೊಂದರ ಉದ್ಯೋಗಿ.  ಮಧುರಾಳಿಗೆ ಉದ್ಯೋಗ  ಸಿಕ್ಕಿದ ಕೂಡಲೇ ಶಾರದಾ ಮಾಡಿದ ಮೊದಲ ಕೆಲಸವೆಂದರೆ ಅವಳ ಹೆಸರಿನಲ್ಲಿ ಸಿಟಿಯಲ್ಲೊಂದು ಫ್ಲಾಟ್ ಕಂಡುಕೊಂಡಿದ್ದು.  ಆ ನಂತರ ಕುಟುಂಬವೆಲ್ಲ ಅಲ್ಲಿಗೆ ಶಿಫ್ಟ್ ಆಗಿ ಸಿಟಿಯ ಬದುಕಿನ ಘಾಟಿಗೆ ಒಗ್ಗಿಕೊಂಡದ್ದು.  ಇದು ಮಗಳ  ಬಗ್ಗೆ ಕನಸು ಕಟ್ಟಿಕೊಂಡಿದ್ದ ಶಾರದಾಳ  ಬದುಕಿನ  ಮೊದಲ  ಗೆಲುವಾಗಿತ್ತು.  ಸರೀಕರೆದುರು ಬೀಗಲು ಹೆಮ್ಮೆಯ ಅಸ್ತ್ರವೂ ಆಗಿತ್ತು. ಅದಕ್ಕೆ ಕಾರಣವೂ ಇತ್ತು.    

ಶಾರದಾಳ ಮನಸ್ಸಿನಲ್ಲಿ ಇದ್ದ ” ತನ್ನ ಮದುವೆ ಬದುಕು ತನ್ನಿಚ್ಚೆಗೆ ವಿರುದ್ಧವಾಗಿ ಕಳೆದು ಹೋಯಿತು ಎಂಬ ಕೊರಗು,  ಮಗಳನ್ನು ಚೆನ್ನಾಗಿ ಓದಿಸಿ ನೌಕರಿಗೆ ಸೇರಿಸಿ ಸಮಾಜದೆದುರು ಶ್ರೀಮಂತಳೆಂದು ಕರೆಸಿಕೊಳ್ಳಬೇಕೆಂಬ ಹಟಕ್ಕೆ ತಿರುಗಿಸಿತ್ತು.  ಬಡತನದ ಕಾರಣದಿಂದ ಹದಿನೆಂಟನೇ ವಯಸ್ಸಿಗೆ ಮೂವತ್ತೊಂದರ ಹುಡುಗನ ಜೊತೆಗೆ ಮದುವೆ ಮಾಡಿಸಿ ತನ್ನ ಬದುಕನ್ನೇ ಹಾಳು ಮಾಡಿದರೆಂದು ತವರಿನ ಕಡೆಯವರನ್ನು ಸದಾ ಜರಿಯುವ ಶಾರದಾಳ ಬಗ್ಗೆ ಕಟ್ಟಿಕೊಂಡ ಗಂಡನಿಗೇ ಕನಿಕರವೆನಿಸುತ್ತಿತ್ತು.
  ಅಷ್ಟೇನೂ ಶ್ರೀಮಂತನಲ್ಲ ದಿದ್ದರೂ ಶಾಂತ ಸ್ವಭಾವದ ಯಾವುದಕ್ಕೂ ಹೆಂಡತಿಯ ಮನ ನೋಯಿಸದ ಗಂಡನ ಬಗ್ಗೆಯೂ ಶಾರದಾಳಿಗೆ ಸದಭಿಪ್ರಾಯವಿರಲಿಲ್ಲ.  ಯಾವಾಗಲೂ ಅವನಿಗೆ” ನೀವೇಕೆ ನನ್ನನ್ನು ಮದುವೆಯಾಗಬೇಕಿತ್ತು. ನೀವು ಹೂಂ  ಅನ್ನದಿದ್ದರೆ ಬಹುಶಃ ಆ ವಯಸ್ಸಿನಲ್ಲಿ ನನ್ನ ಮದುವೆಯೇ ನಡೆಯುತ್ತಿರಲಿಲ್ಲ. ನನಗೂ ಓದಿ ವಿದ್ಯಾವಂತಳಾಗಿ, ಶ್ರೀಮಂತ ಹುಡುಗನೊಬ್ಬನ ಕೈಹಿಡಿಯಬೇಕು ಅಂತೆಲ್ಲ ಅದೆಷ್ಟು ಆಸೆಯಿತ್ತು. ಈ ಮದುವೆಯೆಂಬ ಬಂಧನಕ್ಕೆ ಸಿಲುಕಿ ನನ್ನ ಆಸೆಗಳೆಲ್ಲ ಮಣ್ಣುಪಾಲಾಯಿತು.” ಅಂತೆಲ್ಲಾ ಅವಕಾಶ ಸಿಕ್ಕಿದಾಗಅವನನ್ನು ಹೀಗಳೆಯುವುದುಅವಳ ನಿತ್ಯದ ಕಾಯಕವಾಗಿತ್ತು.
  ಇದನ್ನೆಲ್ಲಾ ಚಿಕ್ಕಂದಿನಿಂದಲೇ ಕೇಳಿ ಬೆಳೆದ ಮಧುರಾಳ ಮನಸ್ಸಿನಲ್ಲಿಯೂ ಮದುವೆ, ಜೀವನ ಸಾಂಗತ್ಯದ ಬಗ್ಗೆ ಯಾವ ಅನುಭೂತಿಯೂ ಬೆಳೆಯಲಿಲ್ಲ. ವಾಸ್ತವದ ನೆಲೆಯಲ್ಲಿ ಜೀವನ ನಿರ್ವಹಣೆಗೇನೂ  ತತ್ವಾರವಿರಲಿಲ್ಲ.  ತನ್ನ ಕೆಲಸ,ಗೆಳತಿಯರು, ಇನ್ನಿತರ ಒಳ್ಳೆಯ ಹವ್ಯಾಸಗಳು, ಇವುಗಳೆಲ್ಲಾ  ಮದುವೆಯ ಬಂಧನದ ಬಗ್ಗೆ ಯೋಚನೆ ಮಾಡುವುದನ್ನೇ ಮರೆಸುವಂತೆ ಮಾಡಿತ್ತು ಅವಳಿಗೆ.
 ಮಗಳು ಇಪ್ಪತ್ತೆಂಟರ ಹತ್ತಿರ ಬರುತ್ತಿದ್ದಂತೆಯೇ ಅವಳಿಗೆ ಗಂಡು ಹುಡುಕಲು ಪ್ರಾರಂಭಿಸಿದ್ದಳು ಶಾರದಾ. ಗಂಡು ಕೂಡಾ  ವಿದ್ಯೆ, ಸಂಬಳದಲ್ಲಿ ನನ್ನ ಮಗಳಿಗೆ ಸರಿ ಸಮಾನವಾಗಿರಬೇಕು. ಜಾತಕ ಹೊಂದಿಕೆಯಾಗಬೇಕು, ಜೊತೆಗೆ ಶ್ರೀಮಂತನಾಗಿರಬೇಕು, ಎಂಬ ಬೇಡಿಕೆಯಲ್ಲಿ ಯಾವುದೊಂದು ಕಡಿಮೆಯಾದರೂ ಶಾರದಾ ಒಪ್ಪುತ್ತಿರಲಿಲ್ಲ. ಬರಬರುತ್ತಾ ಈ ಕಾರಣಗಳೇ ಸಂಬಂಧ ಸಾಧ್ಯತೆಗೆ ವಿಘ್ನಗಳಾಗಿ ಕಾಡತೊಡಗಿದ್ದವು.
  ಅದೊಂದು ಸಂಜೆ ಮಧುರ ಆಫೀಸು ಬಿಟ್ಟ ಮೇಲೆ ಬಸ್ ಹಿಡಿಯಲು ನಿಂತಿದ್ದಾಗ ಮಳೆ ‘ಧೋ’ ಎಂದು ಜಿನುಗತೊಡಗಿತು.  ರಸ್ತೆಯಲ್ಲಿ ದ್ದವರೆಲ್ಲಾ ಕೈಯಲ್ಲಿರುವ ವಸ್ತುಗಳನ್ನೇ ತಲೆ ಮೇಲೆ ಅಡ್ಡ ಹಿಡಿದುಕೊಂಡು ತರಾತುರಿಯಿಂದ ಹೆಜ್ಜೆ ಹಾಕತೊಡಗಿದರು. ಮಧುರಾ ಕೂಡಾ ಹೆಗಲ ಮೇಲಿನ ದುಪಟ್ಟಾ ತೆಗೆದು ತಲೆಗೆ ಸುತ್ತಿಕೊಂಡಳು. ಮೈಮೇಲೆಲ್ಲಾ ಮಳೆ ಹನಿಗಳು ಬಿದ್ದು ‘ ಹಾಯ್’ಎನಿಸಿ ಮನಸ್ಸಿಗೂ ಒಂಥರಾ ಖುಷಿ ಎನಿಸಿತವಳಿಗೆ. ಕಾದ ನೆಲದ ಮೇಲೆ ಅಕಾಲಿಕವಾಗಿ ಬಿದ್ದ ಮಳೆ ಮದರಂಗಿ ಬೊಟ್ಟಿನಂತೆ ಚಿತ್ತಾರ ಮೂಡಿಸಿ, ಜೊತೆಗೊಂದಿಷ್ಟು ಕಂಪನ್ನು ಹೊತ್ತು ತಂದಿತ್ತು. ಆಗಲೇ… ಹೆಲ್ಮೆಟ್ ಧರಿಸಿದ ಯುವಕನೊಬ್ಬ ಅವಳ ಮುಂದೆಯೇ ಬೈಕ್ ನಿಲ್ಲಿಸಿ  “ಹಾಯ್ ” ಎಂದ.
ಅವಳು ತಬ್ಬಿಬ್ಬಾಗಿ, ನಿಂತ ಜಾಗದಿಂದ ಸ್ವಲ್ಪ ಹಿಂದಕ್ಕೆ ಸರಿದು, ಮುಜುಗರದಿಂದಲೇ” ಪರಿಚಯವಾಗಲಿಲ್ಲ” ಎಂದಳು.
ಅವನು ತಲೆಯಿಂದ ಹೆಲ್ಮೆಟ್ ತೆಗೆದು ದಿಟ್ಟ ನಗು ನಕ್ಕಾಗ ಸಾವರಿಸಿಕೊಳ್ಳುತ್ತಾ  ” ನೀನು ಇಲ್ಲಿ ” ಎಂದಾಗ ” ಹೌದು ತಿಂಗಳ ಹಿಂದೆ ಇದೇ ಊರಿಗೆ ಟ್ರಾನ್ಸ್ಫರ್ ಆಯ್ತು. ಕಳೆದ ಶುಕ್ರವಾರ ಇದೇ ಬಸ್ ಸ್ಟ್ಯಾಂಡ್ ನಲ್ಲಿ ನಿನ್ನನ್ನು ನೋಡಿದ್ದೆ. ಆದರೆ ಮಾತನಾಡಿಸಬೇಕೆನ್ನುವಷ್ಟರಲ್ಲಿ ನೀನು ಬಸ್ ಹತ್ತಿ ಹೋಗಿ ಆಯ್ತು. ” ಎಂದ.
” ನಿನಗೆ ಅಭ್ಯಂತರವಿಲ್ಲದಿದ್ದರೆ ಅಲ್ಲಿರುವ ಕೆಫೆಟೇರಿಯಾದಲ್ಲಿಒಂದರ್ಧ ಗಂಟೆ ಕುಳಿತು ಮಾತನಾಡೋಣವೇ…. ಹೇಗೂ ಮಳೆಯಾಗುತ್ತಿದೆ.” ಅವನೆಂದಾಗ ಇಲ್ಲವೆನ್ನಲಾಗಲಿಲ್ಲ ಅವಳಿಗೆ.
  ಎಷ್ಟೋ ವರ್ಷಗಳ ನಂತರ ಅವರಿಬ್ಬರೂ ಸಿಕ್ಕಿ ಎದುರೆದುರು ಕುಳಿತಿದ್ದರೂ  ಶಬ್ದಗಳನ್ನು ಅಲ್ಲೊಂದು ಇಲ್ಲೊಂದು ಹೆಕ್ಕಿ ಕಷ್ಟಪಟ್ಟು ಮಾತನಾಡಲಾರಂಭಿಸಿದರು.
” ಕಾಲೇಜಿನಲ್ಲಿ ನಾವು ಕಳೆದ ಹರುಷದ ದಿನಗಳು ಅದೆಷ್ಟು ಚಂದವಿದ್ದವು ಅಲ್ವಾ. ಬದುಕಿನಲ್ಲಿ ಮತ್ತೆಂದೂ ಆ ಖುಷಿಯ ದಿನಗಳು ಮರಳಿ ಬಾರವು ಎಂಬ ಸತ್ಯದ ಅರಿವಾಗುವುದು ನಾವಲ್ಲಿಂದ ಹೊರ ನಡೆದಾಗಲೇ ಅಲ್ಲವೇ… ಕೈಯಲ್ಲೊಂದು ಡಿಗ್ರಿ ಹಿಡಿದ ಮಾತ್ರಕ್ಕೆ ಹೊರಪ್ರಪಂಚಕ್ಕೆ ಕಾಲಿಟ್ಟೊಡನೆ ಉದ್ಯೋಗ ನಮ್ಮನ್ನು ಹಿಂಬಾಲಿಸುತ್ತದೆ ಅನ್ನುವ ಭ್ರಮೆಯ ತೆರೆ ಸರಿದುಬಿಡುತ್ತದೆ. ಆಮೇಲೆಬದುಕಿನ ಜಂಜಡಗಳ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ನಾವದೆಷ್ಟು ಕಂಗೆಟ್ಟು ಬಿಡುತ್ತೇವೆ ಅಲ್ವಾ. ” ಅವನೆಂದಾಗ
” ಹೂಂ, ನೀನು ಹೇಳುವುದು ನಿಜವೇ… ಸಾಗಿಬಂದ ದಾರಿಯಿಂದ ಒಂದಷ್ಟು ದೂರ ಸರಿದು, ಹಿಂದಣ ಹೆಜ್ಜೆಗಳನ್ನು ಗುರುತಿಸುವಾಗ ಹಾಗನ್ನಿಸುವುದು ಸತ್ಯವೇ..”ಅವಳೊಳಗಿನ ಖಾಲಿತನ ತುಟಿಗಳ ಮೂಲಕ ಅಂತರಾಳದ ಮಾತನ್ನು ಹೊರಹಾಕಿತ್ತು.
” ಕಾಲೇಜು ದಿನಗಳಲ್ಲಿ ನಾನು ನಿನ್ನನ್ನು ಇಷ್ಟ ಪಟ್ಟಿದ್ದು, ನೀನು ತಿರಸ್ಕರಿಸಿದ್ದು, ಆಮೇಲೆ ನೀನೇ ಗೆಳತಿಯ ಮೂಲಕ ” ಪ್ರೀತಿ ಗೀತಿ ಅಂತ ಏನು ಬೇಡ ಒಳ್ಳೆ ಫ್ರೆಂಡ್ಸ್ ಆಗಿರೋಣ.” ಅಂತ ಹೇಳಿ ಕಳುಹಿಸಿದ್ದು, ಎಲ್ಲಾ ಮೊನ್ನೆಮೊನ್ನೆ ನಡೆದ ಘಟನೆಗಳೇನೋ ಅಂತನ್ನಿಸ್ತಿದೆ.” ಅವನೆಂದ.
” ನಾನು ನಿನ್ನ ಜೀವನ ಸಂಗಾತಿಯಾಗಬೇಕೆನ್ನುವ ನಿರೀಕ್ಷೆಯಲ್ಲಿದ್ದ ನಿನಗೆ,  ನಾನು ಬರೀ ಸ್ನೇಹದ ಹಸ್ತ ಚಾಚಿದಾಗ ನಿರಾಸೆಯಾದದ್ದು ನಿಜವಲ್ಲವೇ.ಪ್ರೀತಿ ಮಾಡುವಾಗ ಇಬ್ಬರ ಒಪ್ಪಿಗೆ ಬೇಕು ನಿಜ. ಆದರೆ ಸ್ನೇಹಕ್ಕೆ ಬೇಕಾಗಿರುವುದು ಸಹಸ್ಪಂದನ. ಆಮೇಲೆ ನಾವಿಬ್ಬರೂ ಅದೆಷ್ಟೋ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದೆವು ಅಲ್ವಾ.ಆ ದಿನಗಳೆಲ್ಲಾ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ” ಅವಳೆಂದಳು.
” ಅದೂ ಹೌದು ಅನ್ನು. ಕಿತ್ತುತಿನ್ನುವ ಬಡತನದಲ್ಲಿದ್ದ ನನಗೆ ತಂದೆ ತಾಯಿ, ಬೆನ್ನ ಹಿಂದಿದ್ದ ಇಬ್ಬರು ತಂಗಿಯರ ಜವಾಬ್ದಾರಿ ಇದ್ದದ್ದು ನಿಜ.ನೌಕರಿ ದೊರಕಿದ ಮೇಲೆ ನಾನು ಇಬ್ಬರು ತಂಗಿಯರಿಗೂ ಮದುವೆ ಮಾಡಿಸಿ ಅಪ್ಪ-ಅಮ್ಮನಿಗೆ ಹಳ್ಳಿಯಲ್ಲೊಂದು ಪುಟ್ಟ ಮನೆ ಕಟ್ಟಿಸಿ ಕೊಟ್ಟಿದ್ದೇನೆ. ಇನ್ನು ನಿನ್ನ ಬಗ್ಗೆ ಹೇಳು.”  ಅವನೆಂದಾಗ ದೂರದಲ್ಲೆಲ್ಲೋ ದೃಷ್ಟಿ ನೆಟ್ಟಿದ್ದ ಅವಳು ” ಮಳೆ ಕಮ್ಮಿ ಆಯಿತು ಇನ್ನು ಹೊರಡೋಣವೇ… ಅದನ್ನೆಲ್ಲ ಇನ್ನೊಮ್ಮೆ ಮಾತಾಡೋಣ.” ಎಂದಷ್ಟೇ ಹೇಳಿ ಅವನ ಕೈಗೆ ತನ್ನ ವಿಸಿಟಿಂಗ್ ಕಾರ್ಡೊಂದನ್ನು ತುರುಕಿ ಹೊರನಡೆದಳು.
  ಇದಾಗಿ ಎರಡು ದಿನಗಳ ನಂತರ ಅವಳ ವಾಟ್ಸಾಪ್ ಇನ್ಬಾಕ್ಸ್ನಲ್ಲಿ ಅವನ ಮೆಸೇಜ್ ಬಂತು. ” ಹಾಯ್ ಹೇಗಿದ್ದೀಯಾ.. ಏನ್ಮಾಡ್ತಿದ್ದೀಯಾ…. ಇತ್ಯಾದಿ.. ಇತ್ಯಾದಿ.. ಮೆಸೇಜ್ ಗಳು… ನಂತರದ ದಿನಗಳಲ್ಲಿ ಇಂತಹುದೇ ಮೆಸೇಜುಗಳು ಇತ್ತಿಂದತ್ತ… ಅತ್ತಿಂದಿತ್ತ.. ಹರಿದಾಡತೊಡಗಿದವು.
 ಇದಕ್ಕಿಂತ ಹೆಚ್ಚಿನದೇನನ್ನೋ ನಿರೀಕ್ಷಿಸುತ್ತಿದ್ದ ಅವಳ ಹೃದಯದಲ್ಲೇಕೋ ನಿರಾಸೆಯ ಭಾವವೆದ್ದು ಮನಸ್ಸು ತಲ್ಲಣಗೊಂಡಿತ್ತು. ತಾನಿನ್ನೂ ಬಾಳಸಂಗಾತಿಯ ಹುಡುಕಾಟದಲ್ಲಿದ್ದೇನೆ. ಆದರೆ ಅವನಿಗೆ ಮದುವೆಯಾಗಿದೆಯೋ ಇಲ್ಲವೋ ಒಂದೂ ಗೊತ್ತಿಲ್ಲ. ಹಾಗಂತ ಅವನು ಈ ಬಗ್ಗೆ ಹೇಳಿರಲಿಲ್ಲ. ಇವಳೂ ಏನೂ ಕೇಳಿರಲಿಲ್ಲ. 
 ಇತ್ತ ಗಂಡಿನ ಕಡೆಯವರು ಮಧುರಾಳನ್ನು ಒಪ್ಪಿದೊಡನೆ ಶಾರದಾ ಶಾಸ್ತ್ರಿಗಳ ಬಳಿ ಹೋಗಿ ಮದುವೆಯ ದಿನ ಫಿಕ್ಸ್ ಮಾಡಿ ಬಂದಿದ್ದೂ ಆಯಿತು. ಮದುವೆಯ ತಯಾರಿ ಶುರು ಹಚ್ಚಿಕೊಂಡದ್ದೂ ಆಯಿತು.  ಅದಾಗಲೇ ಇನ್ವಿಟೇಶನ್ ಕಾರ್ಡ್ ಹಂಚುವ ಕೆಲಸವೂ ಶುರುವಾಗಿತ್ತು. ಹಂಚಿಕೊಳ್ಳುವುದು ಮಧುರಳ ಪಾಲಿಗೆ ಅಸಹನೀಯವೆನಿಸಿತ್ತು. ಆದರೆ ಅನಿವಾರ್ಯತೆಯೊಂದು ಅವಳ ಬಾಯಿಯನ್ನು ಕಟ್ಟಿಹಾಕಿತ್ತು. 
 ಅಂದು ಭಾನುವಾರ. ಮಧುರಾ ಮದುವೆಯ ಕಾರ್ಡ್ಸ್ ಕೊಡಲೆಂದು ಅದೇ ಕೆಫೆಟೇರಿಯಾಕ್ಕೆ ಅವನನ್ನು ಮೆಸೇಜ್ ಮೂಲಕ ಬರಲು ಹೇಳಿದ್ದಳು. ಅವನೂ ಓ.ಕೆ. ಎಂದಿದ್ದ.

 ಕೆಫೆಟೇರಿಯಾದ ಮೂಲೆಯೊಂದರ ಚೇರ್ ಮೇಲೆ ಅವಳು ಕುಳಿತಿದ್ದಳು. ಅವಳಿಗೆದುರಾಗಿ ಅವನೂ ಬಂದು ಕುಳಿತ.  ಅವಳು ನಿಧಾನವಾಗಿ ವ್ಯಾನಿಟಿ ಬ್ಯಾಗಿನೊಳಗಿಂದ ಇನ್ವಿಟೇಶನ್ ತೆಗೆದು ಅವನ ಕೈಗಿತ್ತಳು. ಅದನ್ನು ಓದುತ್ತಿದ್ದಂತೆಯೇ ಅವನ ಮುಖಭಾವವೇ ಬದಲಾಯಿತು. ಅವಳು ಕೂಡಾ ಅವನ ಈ ಮುಖಭಾವ ಕಂಡದ್ದು ಇದೇ ಮೊದಲು. ಅಲ್ಲಿ ಕಂಡದ್ದು ನೋವೋ ,ಒಲವೋ, ಸ್ನೇಹವೋ, ವಿಷಾದವೋ, ಅನುಭೂತಿಯೋ, ಅಂತ ವಿಶ್ಲೇಷಿಸುವ ಸಾಮರ್ಥ್ಯವೂ ಅವಳಿಗಿರಲಿಲ್ಲ.
  ಅವನ ಕಣ್ಣಂಚಿನಲ್ಲಿ ಕಟ್ಟಿದ್ದ ಕಂಬನಿಗಳು ಜಾರಿ ನೆಲದಲ್ಲಿ ಅಸ್ತಿತ್ವ ಹುಡುಕಿಕೊಂಡವು.” ತನ್ನ ಮದುವೆ ಇನ್ವಿಟೇಶನ್ ನಿಂದ ಇವನಿಗಿಷ್ಟೊಂದು  ನೋವುಂಟಾಗಲು ಅದು ಹೇಗೆ ಸಾಧ್ಯ..” ಅವಳಿಗೆ ಆಶ್ಚರ್ಯವಾಯಿತು.
ಅವನ ಕಣ್ಣುಗಳು ಹೇಳ ಹೊರಟಿರುವುದನ್ನು ತುಟಿಗಳು ಹೇಳಲು ದಾಕ್ಷಿಣ್ಯ ಪಡುತ್ತಿರಬಹುದೇ..? ಅವಳ ಮನಸ್ಸಿನ ತುಂಬಾ ಪ್ರಶ್ನೆಗಳು ಗುದ್ದಾಡತೊಡಗಿದವು.
ಅದಕ್ಕುತ್ತರವೆಂಬಂತೆ ಅವನು” ನೀನಿಚ್ಛಿಸುವುದಾದರೆ ಇದೇ ಬೀದಿಯ ತುದಿಯಲ್ಲಿರುವ ನನ್ನ ಮನೆಗೆ ಬರಬಹುದೇ..? ” ಅವಳೊಂದು ಕ್ಷಣ ಯೋಚಿಸಿ ‘ಹೂಂ’ ಅಂದಳು.
 ಅವನ ಮನೆ ಹೊಕ್ಕ ಕ್ಷಣಗಳಲ್ಲೇ ಮಧುರಾಳ ಕಣ್ಣುಗಳು ಗೋಡೆಯ ಮೇಲೆ ತೂಗು ಹಾಕಿದ್ದ ಆ ಫೋಟೋದತ್ತ ಹೊರಳಿದವು.ಅವಳ ಭಾವನೆಗಳನ್ನು ಅರ್ಥಮಾಡಿಕೊಂಡ ಅವನೇ ಮುಂದುವರಿದು ” ಈಕೆ  ನನ್ನ ಬಾಳ ಸಂಗಾತಿಯಾಗಬೇಕಿದ್ದವಳು.ಆದರೀಗ ಗೋಡೆಯ ಮೇಲಿನ ಚಿತ್ರವಾಗಿದ್ದಾಳೆ. ನನ್ನ ಮದುವೆಯ ಬಗ್ಗೆ ಕನಸು ಹೊತ್ತ ಅಪ್ಪ, ಅಮ್ಮ ನನಗಾಗಿ ಹುಡುಕಿದ ಹುಡುಗಿ ಅವಳು. ಹಳ್ಳಿಯ ಹುಡುಗಿಯಾಗಿದ್ದರೂ ಉತ್ತಮ ಚಿತ್ರ ಕಲಾವಿದೆ. ನಾನು ಒಲ್ಲದ ಮನಸ್ಸಿನಿಂದಲೇ ಆ ಹುಡುಗಿಯನ್ನು ಒಪ್ಪಿದ್ದರೂ ನಮ್ಮಿಬ್ಬರ ಎಂಗೇಜ್ಮೆಂಟ್ ಆದ ಕೆಲ ದಿನಗಳಲ್ಲೇ  ನಾನು ಬಣ್ಣಗಳ ಒಡನಾಟದಲ್ಲಿ ಬಿಜಿಯಾಗಿದ್ದರೂ , ಕನ್ನಡ ಬರಹದ ನನ್ನ ಬದುಕಿನೊಳಗೆ ಭಾವಗಳನ್ನು ಬಿತ್ತಿ, ನನ್ನ ಕನಸುಗಳಿಗೆ ಜೀವ ತುಂಬ ತೊಡಗಿದಳು. ಮದುವೆಗಿನ್ನೇನುಒಂದು ವಾರವಿದೆಯೆನ್ನುವಾಗ ಹಳ್ಳಿಯಲ್ಲಿರುವ ಒಂದಿಷ್ಟು ಫಾಲ್ಸ್ ಗಳನ್ನು ನೋಡಿಕೊಂಡು ಬರೋಣವೆಂದು ನನ್ನನ್ನು ಬಲವಂತಪಡಿಸಿದಳು. ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ, ಪ್ರಕೃತಿ ವೀಕ್ಷಣೆಯ ಸಮಯದಲ್ಲಿ, ಅದು ಹೇಗೆ ಕಾಲು ಜಾರಿದಳೋ… ಕ್ಷಣಾರ್ಧದಲ್ಲಿ ನೀರಿನೊಂದಿಗೆ ಕೊಚ್ಚಿ ಹೋದವಳು ಸಿಕ್ಕಿದ್ದು ಹೆಣವಾಗಿ. “
ಅವನ ಕಣ್ಣುಗಳು ತೇವಗೊಂಡವು.
ಮಧುರಾಳ ಮನಸ್ಸಿನಲ್ಲಿ ವಿಷಾದದ ಜೊತೆಗೆ ಏನೋ ನೋವು ಕೊರೆದಂತಹ ಭಾವ.ಅವನೆದುರು ಕುಳಿತಿದ್ದರೂ ಏನೂ ಹೇಳಲೊಲ್ಲದ ಹಾಗೆ ಮನಸ್ಸಿನಲ್ಲಿ ಬಿಗಿತ.
ಅವಳೇ ಮೌನ ಮುರಿದು ಮುಂದುವರಿದು ” ಪ್ರೀತಿಯ ನಿಜವಾದ ಬೆಲೆ ಗೊತ್ತಾಗುವುದು ಅದನ್ನು ಕಳಕೊಂಡ ಬಳಿಕವಷ್ಟೇ!! ಈಗ ನಾವಿಬ್ಬರೂ ಒಂದೇ ದೋಣಿಯ ಪಯಣಿಗರು. ಕಳಕೊಂಡಿದ್ದನ್ನು ಪಡೆದುಕೊಳ್ಳಲು ತವಕಿಸುತ್ತಿರುವವರು.! ಕಳೆದುಹೋದ ಯೌವ್ವನದ ದಿನಗಳಿಗಿಂತ ಕಣ್ಣಮುಂದಿರುವ ಇನ್ನುಳಿದ ವಸಂತಗಳನ್ನಾದರೂ ಜೊತೆಯಾಗಿ ಕಳೆಯೋಣವೇ..”ಎಂದಳು.
 ಅವನ ಮೊದಲ ಪ್ರೀತಿ ಭಗ್ನವಾಗಿ ಸ್ನೇಹವಷ್ಟೇ ಉಳಿದ ಯಾತನೆ ಕೊನೆಯಾಗಿ ಆ ಪ್ರೀತಿ ಪುನಃ ದಕ್ಕಬಹುದೆಂಬ ಸಣ್ಣ ಕಲ್ಪನೆಯೂ ಅವನಿಗಿರಲಿಲ್ಲ!!ಅವನೊಳಗಿನ ಅಸಹನೀಯ ಮೌನವೊಂದು ಹೂವಿನಂತೆ ಬಿರಿದು ತುಟಿಗಳೆರಡರಲ್ಲಿ ನಲಿಯಿತು.  ಅವನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಂಡ ಅವಳು ಗಟ್ಟಿ ನಿಲುವಿನೊಂದಿಗೆ ಅಲ್ಲಿಂದ ಹೊರಡಲನುವಾದಳು.
 ಅವನ ರೂಮಿನಿಂದ ಹೊರಬಂದು ಒಮ್ಮೆ ಹಿಂತಿರುಗಿ ಅವನತ್ತ ಕೈ ಬೀಸುವಾಗ,  ಅವಳಿಗೆ ಕಣ್ಣಳತೆಯಲ್ಲಿದ್ದ ಬೇರೆಲ್ಲವೂ ಅದೃಶ್ಯವಾಗಿ  ಅವನಿಗೆ ತನ್ನ ಮೇಲಿರುವ ಪ್ರೀತಿಯ ಭಾವವೊಂದೇ ಅವಳನ್ನುಆವರಿಸಿದಂತಾಯಿತು.