ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದಲಿತ ಬಂಡಾಯದ ಗಟ್ಟಿ ಧ್ವನಿ ಡಾ. ಸಿದ್ಧಲಿಂಗಯ್ಯ

ಸಿ.ಎಸ್. ಭೀಮರಾಯ
ಇತ್ತೀಚಿನ ಬರಹಗಳು: ಸಿ.ಎಸ್. ಭೀಮರಾಯ (ಎಲ್ಲವನ್ನು ಓದಿ)

ನಾಡಿನ ಖ್ಯಾತ ದಲಿತ ಬಂಡಾಯ ಕವಿ-ಲೇಖಕ ಡಾ. ಸಿದ್ಧಲಿಂಗಯ್ಯ (67) ಅವರು 11-06-2021ರಂದು ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಕಳೆದ ಒಂದು ತಿಂಗಳ ಕಾಲ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಅವರ ನಿಧನ ಕನ್ನಡ ಸಾಹಿತ್ಯ-ಸಾಂಸ್ಕøತಿಕ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟ. ಸಿದ್ಧಲಿಂಗಯ್ಯವರನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಬಲ್ಲೆ. ಅವರ ಪ್ರೀತಿ, ಸ್ನೇಹ, ವಿಶ್ವಾಸಗಳಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿತ್ತು. ನಾನು ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗೆ ಸಾಹಿತ್ಯದ ಕುರಿತು ನಾನು ಚರ್ಚಿಸುತ್ತಿದ್ದೆ. ನನ್ನ ಬರವಣಿಗೆಯ ಬಗ್ಗೆ ಅವರಿಗೆ ತುಂಬಾ ಪ್ರೀತಿಯಿತ್ತು. ನಾನು ಅವರ ಅನೇಕ ಕೃತಿಗಳನ್ನು ವಿಮರ್ಶಿಸಿದ್ದೇನೆ. ಆದರೆ ಇತ್ತೀಚೆಗೆ ನಮ್ಮಿಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಅವೆಲ್ಲ ಈಗ ಬರಿಯ ನೆನಪು. ಎಪ್ಪತ್ತರ ದಶಕದಿಂದ 2010ರವರೆಗೆ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿ, ಅನಂತರ ತೀವ್ರ ಟೀಕೆಗೆ ಗುರಿಯಾದ ಕವಿ ಸಿದ್ಧಲಿಂಗಯ್ಯ.


‘ಹೊಲೆ ಮಾದಿಗರ ಹಾಡು’ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ‘ದಲಿತ ಕವಿ’ ಡಾ. ಸಿದ್ಧಲಿಂಗಯ್ಯ. ಇದು ಕನ್ನಡ ಕಾವ್ಯ ಕ್ಷೇತ್ರಕ್ಕೆ ಶಾಕ್ ನೀಡಿದಂತಹ ಕವನಸಂಕಲನ. ಅವರು ಈ ಕವನಸಂಕಲನದ ಮೂಲಕ ಸಾಹಿತ್ಯಿಕ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಆಲೋಚನೆ ಹಾಗೂ ಅಭಿವ್ಯಕ್ತಿಯನ್ನು ನೀಡಿದರು. ಸಿದ್ಧಲಿಂಗಯ್ಯನವರು ನೊಂದವರನ್ನು ಕಾವ್ಯದ ವಸ್ತುವಾಗಿಸುವ ಜನಪರ ಆಶಯದಿಂದ ಜನಪದ ಛಂದಸ್ಸಿನಲ್ಲಿ ಕಾವ್ಯ ಕಟ್ಟಿದ್ದು ಗಮನಾರ್ಹ. ಅವರು ದಲಿತ ಹೋರಾಟ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ಸಮಾನತೆಗಾಗಿ ಎತ್ತರದ ದನಿಯಲ್ಲಿ ಕಾವ್ಯವನ್ನು ಹಾಡನ್ನಾಗಿ ಮಾರ್ಪಡಿಸಿದರು. 1975ರಿಂದ ಈಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯದ ಎರಕದಲ್ಲಿ ರೂಪುಗೊಂಡರು. ದಲಿತರ ಮೆರವಣಿಗೆ ಬೀದರ್‍ನಿಂದ ಕೋಲಾರದವರೆಗೆ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಸಹಜವಾಗಿ ಇಂದಿಗೂ ಕೇಳಿಬರುತ್ತವೆ. ಇದು ಸಿದ್ಧಲಿಂಗಯ್ಯನವರ ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು.
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ 03-02-1954ರಂದು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಟಮ್ಮ. ಬಡತನದ ಕುಟುಂಬದಲ್ಲಿ ಜನಿಸಿದ ಸಿದ್ಧಲಿಂಗಯ್ಯ ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆ ರಚನೆ, ಭಾಷಣ ಮಾಡುವುದು ಅವರ ಹವ್ಯಾಸವಾಗಿತ್ತು. ಅವರು ಮಂಚನಬೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪ್ರೌಢಶಾಲಾ ಶಿಕ್ಷಣ, ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡ ಉಪನ್ಯಾಸಕರಾಗಿ ನೇಮಕವಾದರು. ಸಿದ್ಧಲಿಂಗಯ್ಯನವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ಪಿಎಚ್. ಡಿ. ಪದವಿ ಪಡೆದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 1984ರಲ್ಲಿ ಅಂತರ್‍ಜಾತಿ ವಿವಾಹವಾಗಿರುವ ಸಿದ್ಧಲಿಂಗಯ್ಯನವರ ಪತ್ನಿ ಸಿ. ರಮಾಕುಮಾರಿ, ಮಗಳು ಡಾ. ಮಾನಸ, ಮಗ ಗೌತಮ್.

ಡಾ. ಸಿದ್ಧಲಿಂಗಯ್ಯನವರು ಬುದ್ಧ, ಅಂಬೇಡ್ಕರ್, ಬಸವಣ್ಣ, ಪೆರಿಯಾರ್, ಕಾರ್ಲ್‍ಮಾಕ್ರ್ಸ್, ಲೋಹಿಯಾ, ಕುವೆಂಪು, ಶಿವರುದ್ರಪ್ಪ ಮುಂತಾದ ದಾರ್ಶನಿಕರೆಲ್ಲರ ತತ್ವ-ಚಿಂತನೆಗಳಿಂದ ಆಕರ್ಷಿತರಾಗಿದ್ದರು. ಅವರು ಕರ್ನಾಟಕದ ಎಲ್ಲ ಪ್ರಗತಿಪರ ಚಳವಳಿಗಳೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದರು. ತಮ್ಮ ಬದುಕು,ಬರಹ, ಆಲೋಚನೆ ಮತ್ತು ಗ್ರಹಿಕೆಗಳಲ್ಲಿ ಅನನ್ಯತೆಯನ್ನು ಪಡೆದಿದ್ದರು. ಸ್ವಾತಂತ್ಯ, ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಸತ್ತಾತ್ಮಕ ನೀತಿಯನ್ನು ಆಧರಿಸಿದ ಹೊಚ್ಚ ಹೊಸ ಸಾಮಾಜಿಕ-ಸಾಂಸ್ಕøತಿಕ ಬದುಕಿನ ಹಂಬಲವು ಅವರ ಪ್ರಧಾನ ಕಾಳಜಿಯಾಗಿತ್ತು. ದಲಿತ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕರಲ್ಲಿ ಪ್ರೊ. ಸಿದ್ಧಲಿಂಗಯ್ಯ ಅವರು ಒಬ್ಬರು. 1974ರಲ್ಲಿ ಪ್ರೊ. ಬಿ. ಕೃಷ್ಣಪ್ಪ, ದೇವನೂರು ಮಹಾದೇವ ಮತ್ತು ಕೆ. ಬಿ. ಸಿದ್ದಯ್ಯ ಅವರೊಂದಿಗೆ ದಲಿತ ಸಂಘರ್ಷ ಸಮಿತಿಯ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು ಕಳೆದ ನಾಲ್ಕು ದಶಕಗಳಿಂದಲೂ ಅಧಿಕ ಕ್ರಿಯಾಶೀಲರಾಗಿದ್ದರು. ಅಪಾರ ಅಂತಃಕರಣದ ಕವಿಯಾಗಿ, ಜೀವನಪ್ರೀತಿಯ ನಾಟಕಕಾರರಾಗಿ, ಅನನ್ಯ ಸಾಮಾಜಿಕ ಕಾಳಜಿಯ ವಿಮರ್ಶಕ ಮತ್ತು ಜಾನಪದ ತಜ್ಞರಾಗಿ ಸೃಜನಶೀಲತೆಯ ಬಹುಮುಖೀ ಆಯಾಮಗಳಲ್ಲಿ ತೊಡಗಿಸಿಕೊಂಡು ಬಂದಿದ್ದರು. ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಕವಿ-ಲೇಖಕರಲ್ಲಿ ಒಬ್ಬರಾದ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ.

ಕಾವ್ಯ: ‘ಹೊಲೆ ಮಾದಿಗರ ಹಾಡು’ (1975), ‘ಸಾವಿರಾರು ನದಿಗಳು’ (1979), ‘ಕಪ್ಪು ಕಾಡಿನ ಕಾಡು’ (1983), ‘ಆಯ್ದ ಕವಿತೆಗಳು’ (1997), ‘ಮೆರವಣಿಗೆ’ (2000), ‘ಅಲ್ಲೆ ಕುಂತವರೆ’ (2003), ‘ನನ್ನ ಜನಗಳು ಮತ್ತು ಇತರ ಕವಿತೆಗಳು’ (2005) ಸಿದ್ಧಲಿಂಗಯ್ಯನವರ ಕವನಸಂಕಲನಗಳು. ಅವರ ಈ ಕೃತಿಗಳು ನವ್ಯ ಸಾಹಿತ್ಯದ ಕೊನೆಯಲ್ಲಿ ಹೊಸ ತಿರುವಿನ ಸೂಚನೆಗಳಾಗಿ ಕಂಡುಬಂದವು. ದಲಿತ-ಬಂಡಾಯ ಕಾವ್ಯ ಚಿಗುರೊಡೆಯುವ ಸಂದರ್ಭದಲ್ಲಿ ಹೊರಬಂದ ಸಿದ್ಧಲಿಂಗಯ್ಯನವರ ಕವನಸಂಕಲನಗಳು ದಲಿತ ಬಂಡಾಯ ಕಾವ್ಯದ ಲಕ್ಷಣಗಳನ್ನು ಪಡೆದುಕೊಂಡೇ ಸ್ಫೋಟವಾಗಿರುವುದು ಕಂಡುಬರುತ್ತದೆ. ಅವರ ಕಾವ್ಯದಲ್ಲಿ ಸಿಟ್ಟು, ವ್ಯಂಗ್ಯ, ದಿಕ್ಕಾರ, ನಿಟ್ಟುಸಿರು, ವಿಡಂಬನೆ,ಆರ್ಭಟ ಮತ್ತು ಆಕ್ರೋಶಗಳಿವೆ. ‘ಹೊಲೆ ಮಾದಿಗರ ಹಾಡು’ (1975) ಸಂಕಲನದಿಂದ ‘ಮೆರವಣಿಗೆ’ (2000) ಕವನಸಂಕಲನಕ್ಕೆ ಬರುವಷ್ಟರಲ್ಲೆ ಸಿದ್ಧಲಿಂಗಯ್ಯನವರಲ್ಲಿ ಹಲವು ಬದಲಾವಣೆಗಳಾಗಿವೆ.
ಪಿಎಚ್.ಡಿ. ಸಂಶೋಧನಾ ಪ್ರಬಂಧ: ‘ಗ್ರಾಮ ದೇವತೆಗಳು’ (1997).

ನಾಟಕ: ‘ಪಂಚಮ’ (1980), ‘ನೆಲಸಮ’ (1980), ‘ಏಕಲವ್ಯ’ (1986) ಎಂಬ ನಾಟಕಗಳನ್ನು ಸಿದ್ಧಲಿಂಗಯ್ಯ ರಚಿಸಿದ್ದಾರೆ. ಇವು ಎಡಪಂಥೀಯ ಧೋರಣೆಯಿಂದ ಕೂಡಿವೆ. ಪರಂಪರೆಯನ್ನು ಪ್ರಶ್ನಿಸುವ, ತಪ್ಪುಗಳನ್ನು, ಅವಮಾನವನ್ನು ಎತ್ತಿ ಹೇಳುತ್ತವೆ.
ವಿಮರ್ಶೆ: ‘ಹಕ್ಕಿನೋಟ’ (1990), ‘ರಸಗಳಿಗೆಗಳು’ (1996), ‘ಎಡಬಲ’(2000), ‘ಉರಿಕಂಡಾಯ’(2009).
ಪ್ರಬಂಧ: ‘ಅವತಾರಗಳು’ (1991), ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ-1’ (1996), ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ-2’ (2004), ‘ಜನಸಂಸ್ಕøತಿ’ (2007) ಕೃತಿಗಳಲ್ಲಿ ತಮ್ಮ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಬದುಕಿನ ಅನುಭವಗಳನ್ನು ಹೇಳಿಕೊಂಡಿದ್ದಾರೆ.

ಆತ್ಮಕಥೆ: ‘ಊರು ಕೇರಿ -ಭಾಗ-1’ (1997), ‘ಊರು ಕೇರಿ-ಭಾಗ-2’(2006), ‘ಊರು ಕೇರಿ ಭಾಗ-3’ (2014). ಅವರು ಈ ಮೂರು ಆತ್ಮಕಥೆಗಳಲ್ಲಿ ತಮ್ಮ ವಿಶಿಷ್ಟ ಅನುಭವಗಳನ್ನು ದಾಖಲಿಸಿದ್ದಾರೆ. ಈ ಕೃತಿಗಳು ಸಿಟ್ಟು, ಹಾಸ್ಯ ಮತ್ತು ವ್ಯಂಗ್ಯದ ಬಳಕೆಗಾಗಿ ದೇಶದ ದಲಿತ ಆತ್ಮಚರಿತ್ರೆಗಳ ನಿಯಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಅವರು ತಮ್ಮ ಬದುಕಿನ ನೋವು-ನಲಿವುಗಳನ್ನು ಪ್ರಾಮಾಣಿಕವಾಗಿ ಮತ್ತು ಕಲಾತ್ಮಕವಾಗಿ ಕಟ್ಟಿಕೊಟ್ಟು ಕನ್ನಡದಲ್ಲಿ ದಲಿತ ಸಾಹಿತ್ಯದ ಆತ್ಮಚರಿತ್ರೆ ಪ್ರಕಾರವನ್ನು ಬೆಳೆಸಿದ್ದಾರೆ.
ಸಿದ್ಧಲಿಂಗಯ್ಯನವರ ಕಾವ್ಯವನ್ನು ಹೆಚ್ಚು ಇಷ್ಪಪಡುವ ನಾನು ಅವರ ಕೆಲವು ಕವಿತೆಗಳ ಸಾಲುಗಳನ್ನು ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಗುಡಿಸಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯೂ ಮೊಳಗುತ್ತಿದೆ ನವಕ್ರಾಂತಿಯ ಗಾನ

(ಕ್ರಾಂತಿಪದ)

ಕಾಳ ನೀಲ ಬೆಳ್ಳಿ ಗುರುವ ಚೆನಿಯ
ಚೋಮನ ಮಕ್ಕಳು ನಾವುಗಳು

(ಚೋಮನ ಮಕ್ಕಳ ಹಾಡು)

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೆ ಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸಾತಂತ್ರ್ಯ

(ನಲವತ್ತೇಳರ ಸ್ವಾತಂತ್ರ್ಯ)

ಎಲ್ಲಿದ್ರೋ ಅವರು ಯಂಗಿದ್ದರೊ ಅವರು
ಎಚ್ಚೆತ್ತ ಸಿಂಹಗಳು ನನ್ನ ಜನರು

(ಕೆಂಪು ಸೂರ್ಯ)

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂಡು ವರಗಿದೋರು ನನ್ನ ಜನಗಳು

(ನನ್ನ ಜನಗಳು)
ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಕರ್ನಾಟಕದ ದಲಿತ ಚಳವಳಿಯ ಗೀತೆಗಳಾಗಿವೆ. ಅವರದು ವಿಶಿಷ್ಟವಾದ ವ್ಯಕ್ತಿತ್ವ. ವ್ಯವಸ್ಥೆಯ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಪ್ರಶ್ನೆಗಳು ಸಿದ್ಧಲಿಂಗಯ್ಯನವರ ಬರವಣಿಗೆಯ ಆದ್ಯತೆಗಳಾಗಿವೆ.

ಡಾ. ಸಿದ್ಧಲಿಂಗಯ್ಯನವರ ಸಾಹಿತ್ಯಿಕ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರಕಾರ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಶ್ರವಣಬೆಳಗೋಳದಲ್ಲಿ ಜರುಗಿದ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷತೆ, ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯತ್ವ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ –ಮೊದಲಾದ ಪ್ರಶಸ್ತಿ, ಸನ್ಮಾನ ಮತ್ತು ಗೌರವಗಳು ಸಂದಿವೆ. ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ಹುಡುಕಿಹೋದವರಲ್ಲ. ಆದರೆ ಅವು ಅವರನ್ನು ಹುಡುಕಿ ಬಂದಿವೆ.