- ನಿವೃತ್ತಿಯ ವೃತ್ತಿ - ಅಕ್ಟೋಬರ್ 23, 2022
ರಾತ್ರಿಯಾಗಿತ್ತು
ಹೊರಗೆ ಅಂಗಾತ ಮಲಗಿದವನಿಗೆ ನಕ್ಷತ್ರದಷ್ಟು ಯೋಚನೆಗಳು
ನಿವೃತ್ತನಾಗಿ ಇಪ್ಪತ್ತು ದಿನಗಳಾದವು
ಬೆಳಗಿನಿಂದ ಸಂಜೆತನಕ ಕೆಲಸವಿಲ್ಲದ ತಿರುಗು
ಹೊತ್ತು ಹೋಗುತ್ತಿಲ್ಲ ಮನೆಯಲ್ಲಿ ಕಿರಿಕಿರಿ
ಇಷ್ಟರಲ್ಲೇ ಕ್ವಾರ್ಟರ್ಸ್ ಖಾಲಿಮಾಡಬೇಕು
ಇಷ್ಟು ದಿನವಿದ್ದ ಒಂದಿಷ್ಟು ಬೇನಾಮಿ ದುಡಿತವಿಲ್ಲ
ಕೊನೆಯ ಮಗ ವಿಕಲಚೇತನ
ಈ ಮಧ್ಯೆ ಮಗಳು ಎದೆಯುಬ್ಬಿಸಿ ನಡೆಯುತ್ತಾಳೆ
ಮೈ ಮೇಲೆ ಖಾಕಿಯಿಲ್ಲದೆ ಇವಳ ಮದುವೆಯ ಕನಸಿದೆ
ಮೊದಲಿನ ಪೊಲೀಸ್ ಮರ್ಯಾದೆ ಈಗಿಲ್ಲ
ಕ್ಯಾಬಾ ಪೀರಸಾಬ್ ಎನ್ನುತ್ತಾರೆ
ಸೊಪ್ಪಿನ ಹುಸೇನೀ ಕೂಗಿದರೂ ಕ್ಯಾರೇ ಎನ್ನುವುದಿಲ್ಲ
ಜನ ಅಲ್ಲಲ್ಲಿ ಪಿಸಿಪಿಸಿ ನಗುತ್ತಾರೆ
ಎಲ್ಲರಿಗೂ ಬೆತ್ತದಿಂದ ಬಾರಿಸುವಾಸೆ
ಅದೆಲ್ಲಾ ಒತ್ತಟ್ಟಿಗಿರಲಿ
ಬಸ್ ಸ್ಟ್ಯಾಂಟಿನ ಸೂಳೆಯರು ಸಹ ಹೆದರುವುದಿಲ್ಲ
ರಿಟೈರಾದ ಸುದ್ದಿ ಗೊತ್ತಾದ ಮೇಲೆ
ಎಲ್ಲರೂ ಅಣಕಿಸುವ ರೀತಿಯಲ್ಲಿ ಕೈ ಆಡಿಸುತ್ತಾರೆ
ಗೂಡಂಗಡಿಯವನು ಸಹ ಸಿಗರೇಟನ್ನು ಉದ್ರಿ ನೀಡುತ್ತಿಲ್ಲ
ಹಳೇ ಓಣಿಗಳಿಗೂ ಕಾಲಿಡುವ ಹಾಗಿಲ್ಲ
ಸದರದ ಮಾತಾಡಿ ಓಸಿ ಆಡಲು ಕರೆದು
“ಕ್ಯಾ ಹುವಾ ತೇರಾ ವಾದ ” ಎನ್ನುತ್ತಾರೆ
ಇನ್ನೆರಡು ದಿನ ಕಳೆದರೇ ಅಕ್ಕಿ ಖಾಲಿ
ಪೆನ್ಶನ್ ಗಾಗಿ ತಾರೀಖು ಕಾಯುವ ಪರದಾಟ
ಈಗೀಗ
ಹೆಂಡತಿಯ ಬೆಚ್ಚನೆಯ ಉಸಿರು ಬಡಿದಾಗ
ಅವಳ ಬಲಗಿವಿಯಲ್ಲಿ ದುಡ್ಡಿನ ಬೆಲೆ ಅರಿವಾಗಲಿಲ್ಲ ಕ್ಷಮಿಸೆಂದು ಕೇಳಿಕೊಳ್ಳಬೇಕಿನಿಸಿದರೂ ಪೊಲೀಸ್ ದರ್ಪ ಒಪ್ಪುತ್ತಿಲ್ಲ
ಅಮಾಯಕರ ಬೆದರಿಸಿದ್ದ ಲಾಟಿ ಮನೆಯ ದೂಳು ಕೊಡುವುತ್ತಿದೆ
ಬೂಟಿನ ಗತ್ತು ನೆಲ್ಕತ್ತಿ ತಳ ಹರಿದಿವೆ
ಬೆಲ್ಟಿನ ಚರ್ಮ ಹಾವಿನ ಪೊರೆಯಂತೆ ಸುಲಿದು ಬಿದ್ದಿದೆ
ಮುಂದ್ಹೇಗೆ ?
ಸಾವಿರ ಚುಕ್ಕಿಗಳಿಂದ ಮೂಡಿದ ಆಕಾಶ ನೋಡುತ್ತಾ ಮಲಗಿದ್ದವ ತಟ್ಟನೇ ಎದ್ದು ತಲೆಕೊಡವಿದ
ಹುಚ್ಚು ನಿರ್ಧಾರಕ್ಕೆ ಬಂದು
ಅಟ್ಟದ ಮೇಲೆ ದೂಳಿಡಿದಿದ್ದ ಖಾಕಿ ಕೊಡವಿ
ಭಯದಿಂದ ಧರಿಸಿ ರಾತ್ರಿ ರಸ್ತೆಗಿಳಿದ
ಸುಮಾರು ರಾತ್ರಿ ಒಂದುಗಂಟೆ ಎದುರಿಗೆ ಬಂದ
ಪೋಲಿಸ್ ವ್ಯಾನ್ ನೋಡಿ ಗಾಬರಿಯಾಗಿ
ಕಳ್ಳನಂತೆ ಬಚ್ಚಿಟ್ಟುಕೊಂಡ
ಛೇ… ಛೇ… ಎಂದು ನಾಚಿಕೆಯಾಗಿ
ಪುನಃ ರಸ್ತೆಗೆ ಬಂದು ನಿಂತ
ಮುಂದಿನ ಪೊದೆಯಲ್ಲಿ ಆಗತಾನೆ
ಮೈಮಾರಿಕೊಂಡ ಹಳೇ ವೇಶ್ಯೆಯೊಬ್ಬಳು
ಬಾಡಿದ ಮುಖದ ಪೀರಸಾಬ್ ನೋಡಿ
ಎರಡು ನೂರರ ನೋಟನ್ನು ಅವನ ಕೈಗಿತ್ತು
ಸೆರಗು ಸರಿಮಾಡಿಕೊಳ್ಳುತ್ತಲೇ ಮರೆಯಾದಳು
ಆ ನೋಟಲ್ಲಿ ನಗುತ್ತಿದ್ದ ಗಾಂಧಿಯನ್ನು
ನೋಡಿದ ಫೀರಸಾಬ್
ಈ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ?
ನನಗಾ ಅವಳಿಗಾ? ಎಂದುಕೊಳ್ಳುವಾಗ
ಒಮ್ಮೆಲೆ ಒತ್ತರಿಸಿದ ದುಃಖದಿಂದ
ಬಲಗಣ್ಣಿನ ಹನಿ ಆ ನೋಟಿನ ಮೇಲೆ ಬಿತ್ತು
ಆ ನೋಟಿನ ಗಾಂಧಿ ಮತ್ತಷ್ಟು ಜೋರಾಗಿ ನಗತೊಡಗಿದ
ಸಹಿಕೊಳ್ಳಲಾಗದೆ ನೋಟು ಮುದುರಿ ಜೇಬಿಗಿಳಿಸಿದ
ಬೈಕಿನಲ್ಲಿ ಹೊರಟಿದ್ದ ಹಳೇಕುಡುಕ ತಲೆಮೇಲಿದ್ದ ಟೋಪಿಗೆ ಹೊಡೆದು ನಗುತ್ತಾ ನಡೆದ
ಅಸಹಾಯಕತೆಯ ಉನ್ಮಾದ ನೆತ್ತಿಗೇರಿ ಪಿತ್ತವಾಗಿ
ಎದೆಯ ಮೇಲಿದ್ದ ಜೇಬನ್ನು ಹರಿದೆಸೆದು
ನಿಂತಲ್ಲೇ ಕುಳಿತು ಅಳತೊಡಗಿದ
ವ್ಯಕ್ತಿತ್ವ ಹೋದರೆ ವ್ಯಕ್ತಿ ಬದುಕಿದ್ದು ಸತ್ತಂತೆ ಎಂದುಕೊಳ್ಳುವ
ಆ ವೇಳೆಗಾಗಲೇ ಮಸೀದಿಯಲ್ಲಿ ಆಜಾನ್ ಕೇಳಿಸುತ್ತಿತ್ತು
ಇತ್ತ ನಮಾಜ್ ಮಾಡಲಾಗದೆ
ನಿಲ್ಲಲು ಆಗದೆ ನಡೆಯತೊಡಗಿದ
ಮುಂದೆ ರಸ್ತೆ ಅಪಘಾತದಲ್ಲಿ ಅದೇ ವೇಶ್ಯೆ ಸತ್ತುಬಿದ್ದಿದ್ದಳು
ಹೆಣದ ಕಣ್ಣು ಇನ್ನೂ ನೋಡುತ್ತಿದ್ದವು
ಹಣೆಯ ಮೇಲೆ ಕೈ ಇರಿಸಿದ
ಹೆಣದ ಕಣ್ಣು ಮುಚ್ಚಿಕೊಂಡವು
ಅಲ್ಲಿ ನಿಲ್ಲಲಾಗಲಿಲ್ಲ
“ಬೇಚಾಹುವಾ ಶರೀರ್ ಮಿಟ್ಟಿಮೆ ಮಿಲ್ಗಯಾ
ಮಧುರ ಮನ್ ಝಿಂದಾ ಹೈ ” ಎನ್ನುತ್ತಲೇ…
ರಸ್ತೆಯ ಮದ್ಯೆ ಬಂದವನೇ ಹುಚ್ಚು ನಾಯಿಯಂತೆ ಓಡಿದ
ಅಲ್ಲಲ್ಲಿ ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ
ಮೈ ಮೇಲಿದ್ದ ಬಟ್ಟೆ ಕಿತ್ತೊಗೆದು
ವೇಗವಾಗಿ ಓಡುತ್ತ
ಪೊಲೀಸ್ ಠಾಣೆಯ ಮುಂದೆ ಬಂದವನೇ
ಕತ್ತರಿಸಿದ ಆಲದ ಮರದಂತೆ ನೆಲಕ್ಕೆ ಬಿದ್ದ
ಹಣೆಗೆ ಪೆಟ್ಟು ಬಿದ್ದು ದೇಹದಿಂದಲೇ ನಿವೃತ್ತಿಯಾಗಿದ್ದ
ಫೀರಸಾಬ್ ಮತ್ತೇ ಮೇಲೇಳಲೇ ಇಲ್ಲ
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..