ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪು.ಲ.ದೇಶ ಪಾಂಡೆಯವರ ಕುರಿತು

ಗೌರವಾನ್ವಿತ ಪು.ಲ.ದೇಶ ಪಾಂಡೆಯವರಂಥ ಬಹುಮುಖಿ ವ್ಯಕ್ತಿತ್ವದ ಕುರಿತು ಸ್ಪೂರ್ತಿಯುತವಾದ ಈ ಲೇಖನ ಬರೆದವರು ಅವಿನಾಶ್.
ಅವಿನಾಶ್

ಜಾತಿ, ಧರ್ಮ, ರಾಜಕೀಯ ನಿಲುವು, ವಯಸ್ಸುಗಳ ಯಃಕಶ್ಚಿತ್ ಮಿತಿಗಳನ್ನೆಲ್ಲ ಮೀರಿ ಇಡೀ ಮಹಾರಾಷ್ಟ್ರವು ಮನಸಾರೆ ಪ್ರೀತಿಸುವ ಎರಡು ಮೇರು ವ್ಯಕ್ತಿತ್ವಗಳೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಪು.ಲ ದೇಶಪಾಂಡೆಯವರು.
ಪುರುಷೋತ್ತಮ ಲಕ್ಷ್ಮಣ ದೇಶಪಾಂಡೆ ನಿಜಾರ್ಥದಲ್ಲಿ ಒಬ್ಬ ಸವ್ಯಸಾಚಿಗಳಾಗಿದ್ದವರು. ಆತ ಒಬ್ಬ ಕತೆಗಾರ, ಕವಿ, ನಾಟಕಕಾರ, ನಿರ್ದೇಶಕ, ಚಿತ್ರಕಥಾ ಲೇಖಕ, ನಟ, ಹಾಸ್ಯಗಾರ, ಸಂಗೀತ ನಿರ್ದೇಶಕ, ಹಾರ್ಮೋನಿಯಮ್ ವಾದಕ ಮತ್ತು ಗಾಯಕರೂ ಆಗಿದ್ದವರು. ಮತ್ತು ಈ ಎಲ್ಲ ಕ್ಷೇತ್ರಗಳಲ್ಲೂ ಸುಮ್ಮನೆ ಕೈಯಾಡಿಸಿದವರಲ್ಲ, ಎಲ್ಲದರಲ್ಲೂ ಪಾಂಡಿತ್ಯ ಸಾಧಿಸಿದವರು.
ಆದರೆ ಅವರ ನಿಜವಾದ ಸಾಧನೆ ಎಂಬುದು ಅವರು ಈ ಜಗತ್ತನ್ನು ಕಾಣುವ, ಬದುಕನ್ನು ಕಾಣುವ ದೃಷ್ಟಿಕೋನದಲ್ಲಿತ್ತು. ಜನರನ್ನು ಅಕಾರಣವಾಗಿ ಪ್ರೀತಿಸುವ ಅವರ ಮನಃಸ್ಥಿತಿಯಲ್ಲಿತ್ತು. ಮಹಾರಾಷ್ಟ್ರದ ಜನತೆ ತನ್ನ ಸಾಹಿತಿಗಳನ್ನು ಸಾಧಕರನ್ನು ಸದಾ ಗೌರವಿಸಿದೆ, ಅಭಿಮಾನದಿಂದ ನೋಡಿದೆ, ಆದರೆ ಪುಲ ದೇಶಪಾಂಡೆಯವರನ್ನು ಸದಾ ಪ್ರೀತಿಸಿದೆ. ಮರಾಠಿಗರ ಪಾಲಿಗೆ ಪುಲ ವೇದಿಕೆಯ ಮೇಲೆ ನಿಂತ, ದೂರದಿಂದಲೇ ಕೈ ಬೀಸಿ ಪುಳಕಗೊಳಿಸುವ ವ್ಯಕ್ತಿತ್ವವಲ್ಲ, ಅವರು ನಮ್ಮ ಮನೆಯ ಹಿರಿಯರು, ನಮ್ಮ ಮಕ್ಕಳಿಗೆ ಕದ್ದುಮುಚ್ಚಿ ಐವತ್ತು ಪೈಸೆಯ ಚಾಕಲೇಟ್ ನೀಡುವ ಪ್ರೀತಿಯ ಅಜ್ಜ. ಸದಾ ನಗಿಸುವ ನಲಿಸುವ ತಾತ.

ಒಬ್ಬ ಸಾಹಿತಿಯ ಜೀವನವನ್ನಾಧರಿಸಿದ ಒಂದು ಚಲನಚಿತ್ರದ ನಿರ್ಮಾಣವಾಗುವುದು, ಅದನ್ನು ನೋಡಲು ಜನರು ನೂಕುನುಗ್ಗಲು ಮಾಡುವುದು, ಇಂಥ ವಿಸ್ಮಯಗಳು ಸಾಧ್ಯವಾಗುವುದು ಬಹುಶಃ ಆ ಸಾಹಿತಿ ಪುಲ ದೇಶಪಾಂಡೆಯಂಥ ಅಜಾತಶತ್ರುವಾಗಿದ್ದರೆ ಮಾತ್ರ ಸಾಧ್ಯ. ಅದೂ ಮಹಾರಾಷ್ಟ್ರದಲ್ಲಷ್ಟೇ ಸಾಧ್ಯ.

ಇಡೀ ಮಹಾರಾಷ್ಟ್ರವು ಬಾಳಾಸಾಹೇಬ್ ಠಾಕರೆಯಂಥ ಪ್ರಖರ ರಾಜಕಾರಣಿಯ ವರ್ಚಸ್ಸಿಗೆ ನತಮಸ್ತಕವಾದಾಗ, ಅಂಥ ಬಾಳಾಸಾಹೇಬರ ಎದುರು ನಿಂತು ‘ಬಾಳಾ ನೀನು ಮಾಡ್ತಾ ಇರೋದರಲ್ಲಿ ಇದು ಸರಿ, ಅದು ತಪ್ಪು’ ಎಂದು ಹೇಳುವಂಥ ಛಾತಿ ಇದ್ದದ್ದು ಕೇವಲ ಪುಲ ದೇಶಪಾಂಡೆಯವರಿಗೆ ಮಾತ್ರ. ಬಾಳಾಸಾಹೇಬರೂ ಕೂಡ ಅಂಥ ಮಾತುಗಳನ್ನು ಅತ್ಯಂತ ಸ್ಪೋರ್ಟಿವ್ ಆಗಿಯೇ ತೆಗೆದುಕೊಳ್ಳುತ್ತಿದ್ದದ್ದೂ ಅಷ್ಟೇ ನಿಜ. ಇಬ್ಬರ ಯೋಚನೆಗಳಲ್ಲಿ ವ್ಯತ್ಯಾಸಗಳಿದ್ದರೂ, ವೈಮನಸ್ಸು ಇರಲಿಲ್ಲ. ಬದುಕಿರುವವರೆಗೂ ಬಾಳಾಸಾಹೇಬರು ಪುಲರನ್ನು ಪ್ರೀತಿಸಿದ್ದವರು.

ಕೆಲವು ಕಾಲ ಬೆಳಗಾಂವಿಯ ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪುಲ, ಕರ್ನಾಟಕ ಮತ್ತು ಕನ್ನಡವನ್ನೂ ಅಪಾರವಾಗಿ ಪ್ರೀತಿಸುತ್ತಿದ್ದರು.

ಇಂದಿಗೆ ಅವರು ತೀರಿಕೊಂಡು ಇಪ್ಪತ್ತು ವರ್ಷಗಳೇ ಆದವು. ಆದರೂ ಪ್ರತಿಯೊಂದು ಮರಾಠಿ ಮನೆಯಲ್ಲಿ ಇಂದಿಗೂ ಬದುಕಿರುವ ವಿಶಿಷ್ಟ ವ್ಯಕ್ತಿತ್ವ!!