ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿಳಿಯ ಹಾಳೆ

ಕವಿತಾ ಹೆಗಡೆ
ಇತ್ತೀಚಿನ ಬರಹಗಳು: ಕವಿತಾ ಹೆಗಡೆ (ಎಲ್ಲವನ್ನು ಓದಿ)

ಅಚ್ಚ ಬಿಳಿಯ ಹಾಳೆಯೊಂದು ದೊರಕಿತ್ತು
ಗರಿ ಗರಿಯ ಹೊಸ ಹಾಳೆ
ಅಕ್ಕು ಮುಕ್ಕಿಲ್ಲದ ಚೊಕ್ಕ ಹಾಳೆ
ಕಕ್ಕುಲಾತಿಯಲಿ ಎದೆಗೊತ್ತಿಕೊಂಡೆ.

ಕಿವಿಯಲ್ಲಿ ಪಂಚವಾದ್ಯದ ಸಂಭ್ರಮ
ಕೆಂಪು ಗುಲಾಬಿಯ ಹಾಸಿದ ಅನುಭವ
ಪಾಲಿಗೆ ಬಂದ ಹಾಳೆ ಸುಂದರವಿತ್ತು
ಕೈತಾಗಿದರೆ ಮುದುರುವುದೋ ಎಂಬ ಭಯವಿತ್ತು.

ಯಾವುದೇ ಹಾಳೆ ಇಷ್ಟು ಬಿಳಿಯಾಗಿರಬಹುದೆ?
ಒಂದು ಕಲೆಯೂ ಇರದೆ ಶುಭ್ರವಾಗಿರಬಹುದೆ?
ಸಂಶೋಧನೆಯ ಭೂತ ಬಡಿದ ಮನಕೆ
ವಿವೇಚನೆಯ ಸಹನೆಯೇತಕೆ?

ತಿರುಗಿಸಿ ಮುರುಗಿಸಿ ಕಡೆಗೂ
ಕಂಡುಹಿಡಿದೇ ಬಿಟ್ಟೆ..ಹಾ…..
ಅದೋ ಅದೊಂದು ಮೂಲೆಯಲಿ
ಕಂಡೂ ಕಾಣದ ಚುಕ್ಕಿ!

ಹೌದಾ…ಹೇಳಿಲ್ಲವೆ ನಾನು?
ಬೀಗಿ ಕೂಗಿದೆ ನಾನು ಹೆಮ್ಮೆಯಲಿ ಹಿಗ್ಗಿ
ನನ್ನುಸಿರ ಗಾಳಿ ಹೆಚ್ಚಾಯಿತೆ..?
ಹಾರಿ ಹೋಯಿತು ಹಾಳೆ..

ಕೈಜಾರಿ ಹಾರಿ ಹೋದ ಹಾಳೆ
ಕಡಿದುಕೊಂಡಿತು ಸಕಲ ಬಂಧಗಳ
ಅಲಕ್ಷಿಸಿದ್ದರೆ ಪುಟ್ಟ ಚುಕ್ಕಿಯ ನಾನು,
ನನ್ನ ಭಾಗ್ಯಬರಹದಧಿಕಾರಿ ಆಗಬಹುದಿತ್ತು.
ನಾನು ಮತ್ತು ಇನ್ನು ಬರೀ ನಾನು,
ಹೇಳುವುದೇನು? ಎಲ್ಲಿ ಅವನು?