ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ ಇವನ ಧಿಮಾಕು

ಕವಿತಾ ಹೆಗಡೆ
ಇತ್ತೀಚಿನ ಬರಹಗಳು: ಕವಿತಾ ಹೆಗಡೆ (ಎಲ್ಲವನ್ನು ಓದಿ)

ಅಡ್ಡ ಬಂದ ವಾಹನಕಿತ್ತ ಚುಂಬನ

ದಂತಮಾತ್ರವಲ್ಲ ಇಲ್ಲಿ ಕನಸೂ ಭಗ್ನ

ಅಲ್ಲಿ ಹಾರಿ ಹಿತ್ತಲಲಿ ಬಿದ್ದ ಬಟ್ಟೆ ನೆನೆವಂತೆ ಮಳೆಯಲಿ

ನೆಂದಿದೆ ಹರಿದ ಕಾಲು ನೆತ್ತರ ಧಾರೆಯಲಿ

ಕುಳಿತು ಮುರಿದ ಕನ್ನಡಿಯ ಮುಂದೆ

ಇವನ ಸಿಂಗಾರ

ಹರಿದ ಪ್ರೇಮಕೆ ದೊರೆತ ಕೊನೆಯ ಉಡುಗೊರೆ ಹಗ್ಗ

ಬರಿ ಕನಸು ಮಾತ್ರವಲ್ಲ ಇಲ್ಲಿ ಕಾಲವೂ ಸ್ತಬ್ಧ ಅಲ್ಲಿ ಹೆಕ್ಕುವವರಿಲ್ಲದೆ ಹರಡಿ ಬಿದ್ದ ನೇರಳೆಯ ಬಣ್ಣದಿ

ಇಲ್ಲಿ ನೇತಾಡಿದ ಕತ್ತ ಹಗ್ಗದ ಮೇಲೆ

ಇವನ ಇಹ ಪರದ ಜೋಕಾಲಿ

ಸೋತ ಪರೀಕ್ಷೆಗೆ ಉತ್ತರಿಸಿದ ಬಾವಿ

ಬರಿ ಕಾಲ ಮಾತ್ರವಲ್ಲ ಇಲ್ಲಿ ಬದುಕೂ ಬಲಿ

ಅಲ್ಲಿ ಕಟ್ಟಿಟ್ಟ ಮೂಟೆಯ ನೀರಿಗೆ ಎಸೆದಂತೆ

ಇಲ್ಲಿ ನಿಶ್ಚಲತೆಯ ಮೇಲೆ

ಇವನ ಅನವರತ ತೇಲಾಟ

ಈ ‘ಇವನ’ ಧಿಮಾಕಿಗೇನು ಹೇಳಲಿ

ವಿಶಿಷ್ಟ, ದ್ವೈತ, ಅದ್ವೈತಗಳಲಿ

ಸಾಕ್ಷಾತ್ಕಾರ, ತೃಪ್ತ, ಅತೃಪ್ತಗಳಲಿ ಅನುಸಂಧಾನಗಳ ಚರ್ಚೆಗಳಲಿ

ನನ್ನ ಮುಳುಗಿಸಿ ತಾ ನಿಸೂರಾದವನಿಗೇನ ಹೇಳಲಿ?