ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://superrlife.com/12-sakkath-facts-namma-hubli-dharwad/

ಗ್ರೀಷ್ಮದಲ್ಲೊಂದು ಗಮ್ಮತ್ತಿನ ಪ್ರವಾಸ

ಕವಿತಾ ಹೆಗಡೆ
ಇತ್ತೀಚಿನ ಬರಹಗಳು: ಕವಿತಾ ಹೆಗಡೆ (ಎಲ್ಲವನ್ನು ಓದಿ)

ಈ ಗ್ರೀಷ್ಮದ ಉರಿ ಬಿಸಿಲು, ಸೆಕೆ ಹಾಗೂ ಧೂಳನ್ನು ಸದ್ದಿಲ್ಲದೆ ಅಡಗಿಸುವ ಮಳೆಹನಿಗಳಿಗಾಗಿ ಇಡೀ ಭಾರತ ಕಾಯುತ್ತಿದ್ದರೆ ನಮ್ಮ ಹುಬ್ಬಳ್ಳಿ ಯುಗಾದಿಯ ನಂತರ ಶುರುವಾದ ಮಳೆಯಲ್ಲಿ ಅದ್ದಿ ಹಚ್ಚ ಹಸಿರಾಗಿದೆ. ಹಗಲು ಬಿಸಿಲು -ಸೆಕೆ ಜೋರಾಯ್ತು ಜನ ಕೂಗಾಡುವಷ್ಟರಲ್ಲಿ ಸಂಜೆ ಸುರಿವ ಕಿರು ಮಳೆ, ಬಿರು ಮಳೆ, ತುಂತುರು ಮಳೆ, ಹುಚ್ಚು ಮಾರುತದೊಡನೆ ಸುರಿವ ರೌದ್ರ ಮಳೆ ಹೀಗೆ ಹಲವು ವಿಧದ ಮಳೆಯಲ್ಲಿ ಮಿಂದೆದ್ದಿದೆ. ಅಂತೂ ಒಂದು ಪ್ರಸನ್ನ ಹವಾಮಾನ ಮನಸ್ಸಿಗೆ ಮುದಕೊಡುವುದು ಖಂಡಿತ.

ಹುಬ್ಬಳ್ಳಿಯ ಬಗ್ಗೆ ಎಷ್ಟೋ ಮಂದಿ ಎಷ್ಟೋ ವಿಧವಾಗಿ ಬರೆದಿದ್ದಾರೆ. ಅಷ್ಟಿದ್ದರೂ ಮತ್ತೆ ಮತ್ತೆ ಬರೆಯುವುದಕ್ಕೆ ಹುಬ್ಬಳ್ಳಿಯ ಒಂದಲ್ಲ ಒಂದು ರಂಗ ತನ್ನನ್ನೇ ತಾನು ಸಜ್ಜು ಮಾಡಿಕೊಂಡುಬಿಡುತ್ತದೆ. ಅದರಲ್ಲೂ ಹೊರಗಿನಿಂದ ಬಂದವರಿಗೆ ಸಕಲ ಶ್ರೇಯೋಭಿವೃದ್ಧಿಯಾಗಲಿ ಎಂದು ಹರಸಿದ ಸಿದ್ಧಾರೂಢಜ್ಜನ ಅಭಯ ಹಸ್ತದೊಡನೆ ದೇಶದ ಬಹುತೇಕ ಎಲ್ಲ ಊರುಗಳ ವೈವಿಧ್ಯಮಯ ಸಂಸ್ಕೃತಿ – ಭಾಷೆಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಲೇ ತನ್ನದೇ ಆದ ಛಾಪನ್ನು ಒತ್ತುವುದರೊಂದಿಗೆ ಅನನ್ಯ ನಗರಿ ಎನಿಸಿಬಿಡುತ್ತದೆ.

ಪ್ರವಾಸೋದ್ಯಮಕ್ಕೆ ಹುಬ್ಬಳ್ಳಿಯಲ್ಲಿ ಸಾಕಷ್ಟು ಅವಕಾಶವಿದ್ದರೂ ಪ್ರವಾಸೀ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ತುರುಸಿನ ಸ್ಪರ್ಧೆಗೆ ಬಿದ್ದವರ ಹಾಗೆ ವ್ಯಾಪಾರಿಗಳು ಆಡುವುದು ಕಡಿಮೆ. ಒಂದು ಕಾಲದಲ್ಲಿ ಧೂಳೀಮಯವಾಗಿದ್ದ ನಗರ ಇತ್ತೀಚಿಗೆ ತನ್ನ ಜಾಡ್ಯತೆಯನ್ನು ಕೊಡವಿಕೊಂಡು ಅತಿವೇಗದಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿಯಾಗುತ್ತಿದ್ದರೂ ತನ್ನ ಅಪೂರ್ವ ಅಸ್ಮಿತೆಯನ್ನು ಉಳಿಸಿಕೊಂಡೇ ಮುಂದೆ ಸಾಗುವುದರಿಂದಲೇ ಅದೇಕೋ ಇವತ್ತಿಗೂ ಮತ್ತೆ ಮತ್ತೆ ಬರೆಸಿಕೊಳ್ಳುತ್ತದೆ ಮತ್ತು ಪ್ರೀತಿಸಲ್ಪಡುತ್ತದೆ.

ಒಮ್ಮೆ ಬರಿಯ ಹುಬ್ಬಳ್ಳಿಯ ಪ್ರವಾಸಕ್ಕೆ ಅಂತಲೇ ನೀವ್ಯಾಕೆ ಬರಬಾರದು? ಹುಬ್ಬಳ್ಳಿಯ ಹಾಗೂ ಅದರ ಸುತ್ತಮುತ್ತಲಿನ ತಾಣಗಳ ನೋಟ ಯಾಕೆ ನಿಮ್ಮದಾಗಬಾರದು? ಬನ್ನಿ, ಈ ರಜೆಯಲ್ಲಿ ಕರ್ನಾಟಕದೊಳಗೇ ತಿರುಗಾಡಬೇಕೆಂದರೆ ಹುಬ್ಬಳ್ಳಿಗೇ ಬನ್ನಿ.

ನೀವು, ಬಸ್ಸು, ರೈಲು, ವಿಮಾನ, ನಿಮ್ಮದೇ ವಾಹನ ಹೀಗೆ ಹೇಗೆ ಬೇಕಾದರೂ ಬನ್ನಿ, ತನ್ನ ಸುತ್ತಲಿನ ಎಂಟು ದಿಕ್ಕಿನಲ್ಲೂ ಬೇಕು ಬೇಕಾದಂತಹ ಸುಗಮ ಸಂಚಾರ ವ್ಯವಸ್ಥೆ ಇರುವುದರಿಂದ ಚಿಂತೆಗೆ ಕಾರಣವೇ ಇಲ್ಲ.

ಚಿತ್ರ ಕೃಪೆ : https://www.destimap.com/index.php?act=attraction&a=Shri-Siddharoodha-Swamy-Math%2C-Hubli-Dharwad%2C-India

ಮೊದಲ ದಿನ ಸಿದ್ಧಾರೂಢ ಮಠ ಬಿಟ್ಟು ಹೋಗಬಹುದೇ ನೀವು? ನೀವು ಎಷ್ಟೋ ಪರಮಾದ್ಭುತ ಮಠಗಳಿಗೆ ಹೋಗಿದ್ದಿರಬಹುದು, ಆದರೆ ಇಂತಹ ವಿಶೇಷ ಮಠವೇ ಹುಬ್ಬಳ್ಳಿಯ ಜೀವ. ಸಿದ್ಧಾರೂಢಜ್ಜ ಕೊಡುವ ದಿವ್ಯಾನುಭವಕ್ಕೆ ಸಾಟಿಯಿಲ್ಲ.

ಸುಮಾರು ೧೭೫ ವರ್ಷಗಳ ನಂತರ ಅದ್ವೈತ ತತ್ವದ ಸಾಮ್ರಾಟ ಶ್ರೀ ಸಿದ್ಧಾರೂಢ ಸ್ವಾಮಿಗಳು ಲಕ್ಷಾಂತರ ಭಕ್ತರ ಹೃದಯದಲ್ಲಿ ಜ್ಞಾನ ಜ್ಯೋತಿ ಬೆಳಗಿದ ಮಹಾನ್ ಸಂತ. ಸರಳ ಜೀವನ ಹಾಗೂ ಶ್ರೇಷ್ಠ ಚಿಂತನೆಗೆ ಪರ್ಯಾಯ ಪದ ಈ ಸ್ವಾಮೀಜಿ. ಜಾತಿ ಮತ ಭೇದ ರಹಿತ ಸಮಾನತೆಯ ಬಾಳನ್ನು ಬೋಧಿಸಿದ ದಿವ್ಯಾವತಾರ ಎಂದೇ ಇವರು ಖ್ಯಾತ. ಆದರೆ ಭಕ್ತಾದಿಗಳಿಗೆ ಅಜ್ಜನೆಂದೇ ಪರಮ ಪ್ರಿಯ. ಇಂತಿಪ್ಪ ಮಠದ ಶರಣಿಗೆ ಒಮ್ಮೆ ಬಂದ ಜೀವ ಎಂದೆಂದೂ ಖಾಯಂ ಭಕ್ತನಾಗುವುದು ಖಂಡಿತ.

ಯಾವುದೇ ಮಠಕ್ಕೆ ಹೋಗಿ, ಹಾಗೆ ಮಾಡಿ, ಹೀಗೆ ಮಾಡಿ, ಇಲ್ಲಿ ಬನ್ನಿ, ಅಲ್ಲಿ ನಿಲ್ಲಿ ಎಂಬ ಸ್ವಯಂ ಘೋಷಿತ ದೊಣ್ಣೆ ನಾಯಕರ ಕಟ್ಟಪ್ಪಣೆ ಉಸಿರುಗಟ್ಟಿಸುವುದು, ಮತ್ತೆ ಅತ್ತ ಹೋಗಲು ಸೂಕ್ಷ್ಮ ಮನಸ್ಸಿಗೆ ಕಸಿವಿಸಿ ಉಂಟುಮಾಡುವುದು ವಿಷಾದವೇ ಸರಿ. ಆದರೆ ಇಲ್ಲಿ ಮಾತ್ರ ಭಕ್ತಾದಿಗಳು ಸರ್ವತಂತ್ರ ಸ್ವತಂತ್ರರು. ನಿಮ್ಮಿಚ್ಛೆಯಂತೆ ಮಠದ ವಿಸ್ತಾರ ಆವರಣದಲ್ಲಿ ಎಲ್ಲಿ ಎಷ್ಟು ಬೇಕಾದರೂ ಕುಳಿತು ಅಜ್ಜನ ಬದುಕಿನ ಸಾರ್ಥಕ್ಯವನ್ನು ನೋಡಿ-ಕೇಳಿ ಮೆಲುಕು ಹಾಕಬಹುದು. ಅಜ್ಜ ಎನ್ನಿ, ಸ್ವಾಮಿ ಎನ್ನಿ…ಸಿದ್ಧಾರೂಢರ ಮಹಿಮೆ ಅರ್ಥವಾಗಲು ಹೆಚ್ಚು ತಡವಾಗದು. ಮಠದ ತುಂಬ ಭಕ್ತ ಗಣ ತುಂಬಿದ್ದರೂ ಜನರ ಗದ್ದಲ ಸುತ್ತಲೂ ತುಂಬಿದ್ದರೂ ಎಲ್ಲೆಲ್ಲೂ ಸಿಗದ ದಿವ್ಯ ಶಾಂತಿ-ನೆಮ್ಮದಿ ನಮ್ಮೊಳಗಿನ ನಮ್ಮನ್ನೇ ಶುದ್ಧೀಕರಿಸಿಬಿಡುತ್ತದೆ. ಇನ್ನೆಂದೂ ಇಲ್ಲದಂತೆ ನಮ್ಮನ್ನೇ ಚಕಿತಗೊಳಿಸಿಬಿಡುತ್ತದೆ. ಸಂತೆಯಲ್ಲೂ ತುಂಬಿದ ಈ ಶಾಂತಿಗಾಗಿಯಾದರೂ ಇಲ್ಲಿ ಬರಲೇಬೇಕು. ಆದರೆ ಬಹುತೇಕ ತಿರುಪತಿ ಲಾಡುವಿನಂತಹ ಪರಮ ರುಚಿಕರ ಲಡ್ಡು ಪ್ರಸಾದ ಒಯ್ಯಲು-ತಿನ್ನಲು ಮಾತ್ರ ಮರೆಯಲೇಬೇಡಿ ಮತ್ತೆ. ಶ್ರೀಮಠದ ಶಿವರಾತ್ರಿ ಹಾಗೂ ಜಾತ್ರೆ ನೋಡುವ ಭಾಗ್ಯ ದೊರೆತರಂತೂ ಜೀವನ ಧನ್ಯ ಎಂದೇ ಭಾವಿಸಲಾಗಿದೆ. ಮಠದ ಶ್ರೇಷ್ಠ ಸಮಾಜ ಸೇವೆ ಕೂಡ ಅದ್ಭುತ. ಮಠದಲ್ಲಿ ಭಕ್ತರು ತನ್ಮಯತೆಯಿಂದ

“ಸಿದ್ಧಾರೂಢರ ಜೋಳಗಿ
ದೇಶಕ್ಕೆಲ್ಲಾ ಹೋಳಗಿ
ಸಿದ್ಧಾರೂಢರ ಪರಿವಾರ
ದೇಶಕ್ಕೆಲ್ಲ ಆಧಾರ”


ಎಂದು ಭಜಿಸುತ್ತಿರುವಾಗ ನೀವು ನಿಮ್ಮೊಳಗಿನ ಸಂತನ ಖೋಜಿನಲ್ಲಿ ಕಳೆದುಹೋಗುವುದು ಖಂಡಿತ.

ಅಲ್ಲಿಂದ ಮುಂದೆ ಹುಬ್ಬಳ್ಳಿಯ ಐತಿಹಾಸಿಕ ಶ್ರೀ ಜಗದ್ಗುರು ಮೂರು ಸಾವಿರ ಮಠದ ದರ್ಶನ ಕೂಡ ಮಾಡಿ ಮುಂದಿನ ತಾಣಕ್ಕೆ ಹೊರಡಬಹುದು.

ಚಿತ್ರ ಕೃಪೆ : ಗಣೇಶ್ ಶೆಣೈ
https://dynamic-media-cdn.tripadvisor.com/media/photo-o/12/14/0c/2e/indira-glass-house.jpg?w=1100&h=-1&s=1

ಇಂದಿರಾ ಗಾಜಿನ ಮನೆ ಒಂದು ಅತ್ಯುತ್ತಮ ಲ್ಯಾಂಡ್ ಸ್ಕೇಪ್ ಗಾರ್ಡನ್ನಿಗೆ ಉದಾಹರಣೆ. ಒಂದು ಅಪೂರ್ವ ಸೌಂದರ್ಯ ಹತ್ತಿರದಲ್ಲಿಯೇ ಲಭ್ಯವಾದದ್ದರಿಂದ ಅದೊಂದು ಚೆಂದದ ನೆನಪನ್ನೂ ತಪ್ಪದೆ ಕಟ್ಟಿಕೊಳ್ಳಿ.

ಇಷ್ಟು ಹೊತ್ತಿಗೆ ಹೊಟ್ಟೆ ಕೆಟ್ಟದಾಗಿ ಹಸಿದಿರುತ್ತೆ. ಎಲ್ಲಿ ಊಟ ಮಾಡ್ತೀರಿ? ಬಸವೇಶ್ವರ ಖಾನಾವಳಿ? ಹೌದ್ರೀ. ಹುಬ್ಬಳ್ಳಿಯ ಅತ್ಯುತ್ತಮ ರೊಟ್ಟಿ ಖಾನಾವಳಿಯಲ್ಲಿ ನಿಮ್ಮ ನರ ನಾಡಿಗಳನ್ನೂ ಪುನಶ್ಚೇತನಗೊಳಿಸುವ ಬಿಜಾಪುರ ಬಿಳಿ ಜೋಳದ ರೊಟ್ಟಿ, ಕಾಳ ಪಲ್ಲೆ, ಬದನೀಕಾಯಿ ಎಣಗಾಯಿ, ಮಡಕಿ ಕಾಳ ಪಲ್ಲೆ, ಝಣಕದ ವಡಾ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಪುಟಾಣಿ ಚಟ್ನಿ, ಕೋಸಂಬರಿ, ಸಿಹಿ-ಖಾರದ ಉಪ್ಪಿನಕಾಯಿಗಳು, ಬೇಕಾದರೆ ಶೇಂಗಾ ಹೋಳಿಗೆ, ಅನ್ನ, ಸಾರು, ಮೊಸರು… ಉಫ್ ಹೊಟ್ಟೆ ತುಂಬಿ ಉರುಳಾಡುವ ಹಾಗಾದರೂ ರೊಟ್ಟಿಯ ಮೇಲೆ ರೊಟ್ಟಿ ಬಾರಿಸುವ ಆಸೆ ನಿಮಗಾಗದೆ ಇದ್ದರೆ ಹೇಳಿ. ಪ್ರಪಂಚದ ಯಾವ ಮೂಲೆಯಲ್ಲೂ ಇಷ್ಟು ರುಚಿಕಟ್ಟಾದ ಊಟ ಸಿಗಲು ಸಾಧ್ಯವೇ ಇಲ್ಲ. ಅಯೋಧ್ಯಾ , ಮಂತ್ರ, ಸ್ವಾತಿ ಹೀಗೆ ಹತ್ತಾರು ಹೋಟೆಲ್ಗಳು ಇಲ್ಲಿಗೆ ಸಮೀಪವೇ ಇದ್ದು ಹುಬ್ಬಳ್ಳಿಯ ಊಟದ ರುಚಿಯ ಹುಚ್ಚನ್ನು ಜನರಿಗೆ ಹಿಡಿಸಿವೆ. ಮತ್ತೆ ಇದಲ್ಲದೆ ಹುಬ್ಬಳ್ಳಿಯ ಘನತೆ ಹೆಚ್ಚಿಸಿದ ಚನ್ನಮ್ಮ ವೃತ್ತ ಕೂಡ ವರ್ಥ್ ವಿಸಿಟಿಂಗ್.

ಹೊಟ್ಟೆ ತೀರಾ ತುಂಬಿ ಹೋಯ್ತು….ನಡೆದಾಡೋದು ಕೂಡ ಸಾಧ್ಯವಿಲ್ಲ ಅಂತೀರಾ? ನಿಧಾನವಾಗಿ ಭೈರಿದೇವರ ಕೊಪ್ಪದ ಉಣಕಲ್ ಕೆರೆಗೆ ಸಾಗಲಿ ಸವಾರಿ. ತುಂಬ ಚೆಂದದ ತಂಪು ಉದ್ಯಾನವನ, ಮನ ಸೆಳೆಯುವ ವಿಶಾಲ ಕೆರೆ, ಅರಾಮ ನೀಡುವ ಸೀಟುಗಳು, ಒಂದು ರೊಮ್ಯಾಂಟಿಕ್ ಬೋಟಿಂಗ್, ಕಿರುದ್ವೀಪದಲ್ಲಿ ಶೋಭಿಸುವ ವಿವೇಕಾನಂದರ ಪ್ರತಿಮೆಯ ಸುಂದರ ನೋಟ…ವಾವ್… ಇನ್ನೇನು ಬೇಕು? ಬಿಸಿಲು ತುಸು ತಂಪಾಗುವವರೆಗೆ ಅಲ್ಲೇ ವಿರಮಿಸಿ ಈಗ ಅಲ್ಲೇ ಸಮೀಪದ ಸಂರಕ್ಷಿತ ಸ್ಮಾರಕ ಬಾದಾಮಿ ಚಾಲುಕ್ಯರ ಕಾಲದ ಸುಂದರ ಚಂದ್ರಮೌಳೇಶ್ವರ ದೇವಾಲಯದ ದರ್ಶನ ಮುಗಿಸಿ ನೃಪತುಂಗ ಬೆಟ್ಟದ ಕಡೆ ಓಡಲಿ ನಿಮ್ಮ ಗಾಡಿ.

ಚಿತ್ರ ಕೃಪೆ : https://www.facebook.com/pg/%E0%B2%B9%E0%B3%81%E0%B2%AC%E0%B3%8D%E0%B2%AC%E0%B2%B3%E0%B3%8D%E0%B2%B3%E0%B2%BF-%E0%B2%B8%E0%B3%8D%E0%B2%AA%E0%B3%86%E0%B2%B7%E0%B2%B2%E0%B3%8D-%E0%B2%97%E0%B2%BF%E0%B2%B0%E0%B3%8D%E0%B2%AE%E0%B2%BF%E0%B2%9F%E0%B3%8D-%E0%B2%B8%E0%B3%86%E0%B2%82%E0%B2%9F%E0%B2%B0%E0%B3%8D-%E0%B2%B5%E0%B2%BF%E0%B2%9C%E0%B2%AF%E0%B2%AA%E0%B3%81%E0%B2%B0-586103-112083684453822/posts/

ಫುಲ್ ಚಾರ್ಜ್ ಆಗಿರಲೇಬೇಕು ಈಗ ನೀವು. ಪ್ರವೇಶದ್ವಾರದಿಂದ ಬೆಟ್ಟದ ಬುಡಕ್ಕೆ ಸುಮಾರು ದೂರ ನಡೆಯುವ ಚೈತನ್ಯ ಇದೆ ತಾನೇ? ಹಾಗಿದ್ದರೆ ಟಿಕೇಟು ಕೊಳ್ಳಿ, ಬಲಕ್ಕೆ ಬೆಟ್ಟದ ರಮಣೀಯ ದೃಶ್ಯ, ಎಡಕ್ಕೆ ಕಣಿವೆಯಂಥ ಪ್ರದೇಶದಲ್ಲಿ ಹುಬ್ಬಳ್ಳಿಯ ವಿಹಂಗಮ ನೋಟ! ತಡೀರಿ… ಬೇಗ ಬೆಟ್ಟ ಸೇರಿಕೊಳ್ಳಿ. ಅಲ್ಲಿನ ಪುಟ್ಟ ಹೋಟೆಲ್ನಲ್ಲಿ ಟೀ / ಕಾಫಿ ಕುಡಿಯುವ ಆನಂದ ಮಿಸ್ಸಾಗಲೇಬಾರದು ಮತ್ತೆ. ಜೊತೆಗೆ ಹುಬ್ಬಳ್ಳಿಯ ಸ್ಪೆಷಲ್ ಗಿರಮಿಟ್, ಮಿರ್ಚಿ ಭಜಿ ತಗೊಳ್ಳಿ ಅಥವಾ ನ್ಯೂಡಲ್ಸ್, ಗೋಬಿ ಏನೇ ಇರಲಿ….ಬೆಟ್ಟದ ಸುಂದರ ವಾತಾವರಣದಲ್ಲಿ ಮಾಡಿದ ಪೇಟ್ ಪೂಜಾ ಮಾತ್ರ ತುಂಬಾ ಅವಿಸ್ಮರಣೀಯವಾಗಿರುತ್ತದೆ. ಸ್ವಲ್ಪ ಹೊಟ್ಟೆಗೆ ಹಾಕಿಕೊಂಡೇ ವಿಶಾಲ ಮನಮೋಹಕ ಉದ್ಯಾನವನದಲ್ಲಿ ತಿರುಗಾಡಿ. ಪಿರಮಿಡ್ ಧ್ಯಾನಮಂದಿರದಲ್ಲಿ ಧ್ಯಾನಸ್ಥರಾಗಿ. ಪಕ್ಕದಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಭೇಟಿ ಕೂಡ ಮಾಡಿ. ಇಷ್ಟಾಗುವ ಹೊತ್ತಿಗೆ ಎಂತೆಂಥವರೂ ಹಣ್ಣಾಗಿಬಿಡುತ್ತೀರಿ ಮತ್ತೆ. ಈಗ ನೃಪತುಂಗ ಬೆಟ್ಟದ ಬುಡಕ್ಕೆ ಬನ್ನಿ, ಸೂರ್ಯ ಇನ್ನೇನು ಮುಳುಗುವ ಸಮಯ, ಪ್ರಪಂಚದ ಎಲ್ಲ ರಂಗಿನ ಹೋಳಿ ಆಗಸದಲ್ಲಿ! ಕೆಳಗೆ ಇಡೀ ಹುಬ್ಬಳ್ಳಿಯ ಚಕ ಚಕ ದೀಪದ ಮಿಂಚು! ಬೀಸುವ ಅದ್ಭುತ ತಂಪು ಗಾಳಿ ನಿಮ್ಮ ತನು ಮನದ ಪೂರ್ವಜನ್ಮದ ದಣಿವನ್ನೂ ಮಾಯವಾಗಿಸುವ ಸದ್ಗುಣಿ. ಈ ಅನುಭಾವ ಸಾಧ್ಯವಾಗಬೇಕು ಅಷ್ಟೇ. ನಿಧಾನವಾಗಿ ಬೆಟ್ಟದ ಕೆಳಗೆ ಬಂದು ನವನಗರದ ಇಸ್ಕಾನ್ ನಿಮ್ಮ ಮುಂದಿನ ಗುರಿಯಾಗಲಿ. ಇದು ಹುಬ್ಬಳ್ಳಿಯ ಪ್ರಮುಖ ಆಕರ್ಷಣೆ. ಪಕ್ಕದಲ್ಲೇ ಇರುವ ಕಟ್ಟಡದಲ್ಲಿ ಲಕ್ಷಾಂತರ ಮಕ್ಕಳಿಗೆ ಶುಚಿ ರುಚಿಯಾದ ಬಿಸಿಯೂಟ ತಯಾರಿಸುವ ಅತ್ಯಾಧುನಿಕ ಯಾಂತ್ರೀಕೃತ​ ಅಡುಗೆಮನೆಯಿದ್ದು ಇದನ್ನು ಹಗಲಿನಲ್ಲಿ ಮಾತ್ರ ನೋಡಲು ಒಳಗೆ ಬಿಡುತ್ತಾರೆ.

ಸಾಕು ಇವತ್ತಿಗೆ, ಇಡೀ ದಿನದ ಸವಿಯನ್ನು ಮೆಲುಕು ಹಾಕುತ್ತ ಬಂದರೆ ರಾತ್ರಿಯೂಟ ನಿಮ್ಮಿಚ್ಛೆ. ಜಂಗಲ್ ಥೀಮಿನ ಅಪರೂಪದ ಪ್ರೆಸಿಡೆಂಟ್ ಹೋಟೆಲ್, ಓಶಿಯನ್ ಪರ್ಲ್, ಗುರುದತ್ತ ಭವನ ಮುಂತಾದವು ಶಾಖಾಹಾರಿಗಳಿಗಾದರೆ ನಿಯಾಜ್, ಸಾವಜಿ ಮತ್ತಿತರ ಹೋಟೆಲ್ಗಳು ಮಾಂಸಾಹಾರಿಗಳಿಗೆ ಸನಿಹದಲ್ಲೇ ಇವೆ. ತುಸು ದೂರ ಶಿರೂರ್ ಪಾರ್ಕಿನಲ್ಲಿ ಇಡೀ ಜಗತ್ತಿನ ಎಲ್ಲ ತರಹದ ಆಧುನಿಕ ತಿಂಡಿ ತೀರ್ಥ ಲಭ್ಯ. ಏನು ಬೇಕೋ ಮನಸಾರೆ ತಿಂದು ವಿಶ್ರಮಿಸಿ, ಸುಸ್ತಾದರೆ ಇವತ್ತಿಗೆ ಸಾಕು.

ಚಿತ್ರ ಕೃಪೆ : https://www.deccanherald.com/state/karnataka-districts/sculptor-who-infused-life-into-rock-garden-no-more-917624.html

ಮತ್ತೆ ಎರಡನೆಯ ದಿನ ಎಕ್ಸಯಿಟಿಂಗ್ ಆಗಿರಬೇಕೆಂದರೆ ಶಿಗ್ಗಾವಿಯ ಬಳಿಯ ಗೊಟ್ಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ಕಡೆಗೆ ನಡೆಯಿರಿ. ಉತ್ತರ ಕರ್ನಾಟಕದ ಸಮಗ್ರ ಗ್ರಾಮೀಣ ಬದುಕು, ಉತ್ಸವ, ಸಂಭ್ರಮ ಹೀಗೆ ಎಲ್ಲವನ್ನೂ ಕಾಂಕ್ರೀಟು ಮೂರ್ತಿಗಳಿಂದ ಪ್ರಕೃತಿಯ ನಡುವೆ ಸೃಷ್ಟಿಸಲಾಗಿದ್ದು ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಚಕಿತಗೊಳಿಸುವ ಈ ತಾಣಕ್ಕೆ ಇಡೀ ದಿನವೇ ಬೇಕು. ಗಾಢ ಗ್ರಾಮೀಣ ಅನುಭವ, ತಿನ್ನಲು ಅತ್ಯಂತ ಸುಂದರ ಹೋಟೆಲ್, ರೈನ್ ಡಾನ್ಸ್, ತಿರುಗಲು, ಆಡಲು, ನಲಿಯಲು ಸಾಕಷ್ಟಿರುವ ಈ ಸ್ಥಳ ನಿಮ್ಮ ಜೀವನದ ಅತಿ ವಿಶಿಷ್ಟ ಭೇಟಿಯಾಗುವುದರಲ್ಲಿ ಸಂಶಯವೇ ಇಲ್ಲ.

ಅದೇ ರಸ್ತೆಯಲ್ಲಿದೆ, ಅಗಡಿ ತೋಟ. ಹುಬ್ಬಳ್ಳಿಯ ಗ್ರಾಮೀಣ ಜೀವನದ, ಸಾವಯವ ಕೃಷಿ, ರುಚಿಕರ ಆಹಾರ, ಗ್ರಾಮೀಣ ಪರಿಸರದ ನೈಜ ಅನುಭವ, ಸಾಹಸ ಕ್ರೀಡೆಗಳನ್ನು ಅನುಭವಿಸಿ ಬಾಲ್ಯದ ಸವಿಯನ್ನು ನೆನಪು ಮಾಡಿಕೊಳ್ಳುವ ಅಪೂರ್ವ ಅವಕಾಶ. ಕೃಷಿ ಜೀವನವನ್ನು ನೀವು ಅಥವಾ ನಿಮ್ಮ ಪರಿವಾರ ಮಿಸ್ ಮಾಡಿಕೊಳ್ಳುತ್ತಿದ್ದರೆ ನಿಮಗೂ ನಿಮ್ಮ ಮಕ್ಕಳಿಗೂ ಒಂದು ವಿಶೇಷ ಅನುಭವ ಒದಗಿಸುವ ಅಗಡಿ ತೋಟ ನೋಡದೆ ಇದ್ದರೆ ತುಂಬಾ ದೊಡ್ಡದೇನೋ ಮಿಸ್ ಆದ ಹಾಗೆ. ಉತ್ಸವ ರಾಕ್ ಗಾರ್ಡನ್ ಅಥವಾ ಅಗಡಿ ತೋಟ ಎರಡನ್ನೂ ಒಂದೇ ದಿನ ಕವರ್ ಮಾಡುವುದು ತುಸು ಕಷ್ಟ ಆದರೆ ಸಾಧ್ಯ.

ಮಾರನೆಯ ದಿನ ವರೂರಿನ ನವಗ್ರಹ ತೀರ್ಥ, ನೀರಾಟ ಪ್ರಿಯರಿಗೆ ಕಂಟ್ರಿ ಕ್ಲಬ್ ವಾಟರ್ ವರ್ಲ್ಡ್ ಕೂಡ ಸೊಗಸಾದ ಸ್ಥಳಗಳಾಗಿವೆ. ಹುಬ್ಬಳ್ಳಿ ಹಲವು ಚರ್ಚು, ಮಸೀದಿಗಳ ಆಗರ ಕೂಡ ಹೌದು. ಹುಬ್ಬಳ್ಳಿಯಲ್ಲಿ ಶಾಪಿಂಗ್ ಮಾಡದೇ ಇದ್ದರೆ ಅದೆಂಥಾ ಪ್ರವಾಸ ಮಾಡಿದ ಹಾಗಾಯ್ತು ನೀವು? ಅರ್ಬನ್ ಓಯಸಿಸ್, ಬಿಗ್ ಬಜಾರ್, ಮ್ಯಾಕ್ಸ್, ಯು ಮಾಲ್ ಹೀಗೆ ಹತ್ತಾರು ಪ್ರಮುಖ ಶಾಪಿಂಗ್ ಮಾಲುಗಳಲ್ಲಿ ಸುತ್ತಾಡಬಹುದು. ಫ್ಯಾಷನೆಬಲ್ ಪೀಪಲ್ ಸಲುವಾಗಿ ಹುಬ್ಬಳ್ಳಿಯಲ್ಲಿ ಭೂಲೋಕದ ಸಕಲವೂ ದೊರೆಯುವ ಬೃಹತ್ ಶಾಪಿಂಗ್ ಮಾಲುಗಳು ಸಾಕಷ್ಟು ಇವೆ. ಆದರೆ ಅವುಗಳಲ್ಲಿ ಹುಬ್ಬಳ್ಳಿಯ ಗಂಧವಿರದ ಕಾರಣ ಅವು ನಿಮ್ಮಿಷ್ಟ ಅಂದುಬಿಡುತ್ತೇನೆ ಅಷ್ಟೇ. ಯಾಕೆಂದರೆ ಅವು ಬಹುತೇಕ ಎಲ್ಲ ಬೃಹತ್ ಪಟ್ಟಣಗಳ​ಲ್ಲಿ ಸಿಗಬಹುದು. ಮಾರ್ಕೆಟ್ ಏರಿಯಾ ಮಾತ್ರವಲ್ಲದೆ ಗೋಕುಲ ರಸ್ತೆಯ ಅಕ್ಷಯ್ ಪಾರ್ಕ್ ಹಾಗೂ ವಿದ್ಯಾನಗರ ಏರಿಯಾದಲ್ಲಿ ಇದೀಗ ಅತ್ಯಂತ ನವ ನವೀನ ಮಾಲುಗಳಿವೆ.

ಪುಸ್ತಕ ಪ್ರಿಯರಿಗಂತೂ ಸ್ವರ್ಗಸದೃಶ ಸ್ವಪ್ನಾ ಬುಕ್ ಹೌಸ್, ಸಮಾಜ ಪುಸ್ತಕಾಲಯ, ವಿಜಯ್ ಬುಕ್ ಹೌಸ್….ಮೈ ಗಾಡ್ ಅನ್ನುತ್ತೀರಿ ಅಷ್ಟೇ.

ಇನ್ನು ಹುಬ್ಬಳ್ಳಿಗರ ಜೀವವಾದ ಮಾರ್ಕೆಟ್ ಏರಿಯಾದ ಕೊಪ್ಪಿಕರ್ ರಸ್ತೆ, ಬ್ರಾಡ್ ವೇ,
ದಾಜಿಬಾನ್ ಪೇಟೆ ಮುಂತಾದ ರಸ್ತೆಗಳ ಖ್ಯಾತ ಬಟ್ಟೆ ಅಂಗಡಿಗಳಲ್ಲಿ ಇಳಕಲ್ ಸೀರೆ, ಚಂದ್ರಕಾಳಿ ಸೀರೆ ಅಥವಾ ಗುಳೇದಗುಡ್ಡ ಖಣ ಕೊಳ್ಳುವುದು ಮರೆಯಬೇಡಿ. ಇವೆಲ್ಲ ಸಾಂಪ್ರದಾಯಿಕ ಮಹತ್ವ ಇರುವ ಹಾಗೂ ಹೈಲೀ ಫ್ಯಾಷನ್ ಸೆನ್ಸ್ ಉಳ್ಳವರ ಉಡುಗೆ ಎಂದೇ ವಿಶ್ವ ವಿಖ್ಯಾತ.

ಇನ್ನೊಂದು ತಪ್ಪಿಸಲೇಬಾರದ ಫುಡ್ ಹಬ್ ಎಂದರೆ ಚೆನ್ನಮ್ಮ ಸರ್ಕಲ್ಲಿನ ಮಿಶ್ರಾ ಪೇಡಾ ಹಾಗೂ ಇತರ ಚಾಟ್ ಸೆಂಟರ್ಗಳು. ಅಯ್ಯೋ… ಒಂದೊಂದು ತಿನಿಸೂ ಅದೆಷ್ಟು ಪರ್ಫೆಕ್ಟ್ ರುಚಿ! ಅದರಲ್ಲೂ ಗಿರಮಿಟ್ ಹಾಗೂ ಮಿರ್ಚಿ ಭಜಿಗಳೆನ್ನುವ ಎರಡು ತಿನಿಸುಗಳು ನಿಮ್ಮನ್ನು ಮೋಹಿನಿಯ ಹಾಗೆ ಕಾಡದೇ ಇದ್ದರೆ ಹೇಳಿ. ಎಲ್ಲ ಕಡೆ ಒಂದೇ ರೀತಿಯ ಕಡಲೆ ಹಿಟ್ಟು, ಎಣ್ಣೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ವಿಶೇಷ ಮಸಾಲೆಯ ರುಚಿಯ ಗಿರಮಿಟ್ ಮತ್ತೆ ತಿಂದು ನೋಡಿ. ಹಲ್ಲಿಯಂತಹ ಸಪೂರ ಮಿರ್ಚಿ ಭಜಿ ಬೇರೆಡೆ ಸಿಕ್ಕರೆ ಹುಬ್ಬಳ್ಳಿಯಲ್ಲಿ ಮಾತ್ರ ಬರೀ ಡುಮ್ಮ ಡುಮ್ಮ ಟ್ರಿಪಲ್ ಎಕ್ಸೆಲ್ ಸೈಜಿನ ವಿಶಿಷ್ಟ ಮಿರ್ಚಿ ಭಜಿ ಲಭ್ಯ. ನೋಡಿಯೇ ಬಾಯಲ್ಲಿ ನೀರು ಬರುತ್ತದೆ. ಅಷ್ಟಲ್ಲದೇ ಇಡೀ ಭಾರತದ, ದೇಶ ವಿದೇಶಗಳ ಎಲ್ಲ ಚಾಟುಗಳೂ ಇಲ್ಲಿವೆ. ಪ್ಯೂರ್ ಹುಬ್ಬಳ್ಳಿಯ ಪಾಪಡಿ ಚಾಟ್ ನಿಮ್ಮ ಲಿಸ್ಟಿನ ಮೊದಲ ಸಾಲಲ್ಲೇ ಇರಲಿ. ಆಮೇಲೆ ನಿಮಗೆ ಬೇಕಾದದ್ದು ಸವಿಯಿರಿ. ಲೋಕಲ್ನಿಂದ ಗ್ಲೋಬಲ್ ಆಗುವ ಸಮಯವಿದು.

ಚಿತ್ರ ಕೃಪೆ :
https://mishrapedhaonline.com/products/products/sweets/dharwad-pedha/

ಮತ್ತೆ ವಾಪಸ್ಸು ಹೋದ ಮೇಲೂ ಮನೆಯಲ್ಲಿ ತಿನ್ನಲೆಂದು ಶೇಂಗಾ ಹೋಳಿಗೆ, ವಿವಿಧ ಚಟ್ನಿ ಪುಡಿಗಳು, ತುಪ್ಪದ ಮಂಡಿಗೆ, ಕರದಂಟು, ಲಡಗೀ ಲಾಡು, ಧಾರವಾಡ ಪೇಡಾ, ಡ್ರೈ ಗಿರಮಿಟ್ ಕೊಳ್ಳುವ ಹುಮ್ಮಸ್ಸು ಕೂಡ ನಿಮ್ಮಲ್ಲಿರಲಿ. ನಿಮ್ಮ ಕಂಫರ್ಟ್ ಲೆವಲ್ಲಿಗೆ, ಪರ್ಸಿಗೆ ತಕ್ಕದಾದ ಡೆನಿಸನ್ಸ್ ನಂತಹ ಫೈವ್ ಸ್ಟಾರ್ ಹೋಟೆಲ್ಗಳೂ, ನವೀನ್, ಓಕ್ಸ್, ಲೀಲಾವತಿ ಪ್ಯಾಲೇಸ್, ಫರ್ನ್, ಅನಂತ್ ಹೀಗೆ ಬೇಕಾದ ಲೆವಲ್ಲಿನ ಹೋಟೆಲ್ ಹಾಗೂ ಲಾಡ್ಜ್ ಲಭ್ಯ.

ಹುಬ್ಬಳ್ಳಿ ನೆನಪಿರುವುದು ಇಷ್ಟಕ್ಕೆ ಮಾತ್ರವಲ್ಲ, ಅಪಾರ ಪ್ರೀತಿ ತೋರುವ, ಕೌಟುಂಬಿಕ ಪ್ರೇಮಕ್ಕೆ ಮೊದಲ ಆದ್ಯತೆ ನೀಡುವ, ಅತಿಥಿಗಳನ್ನು ಮುಗ್ಧ ಮನದಿಂದ ಭರಪೂರ ಸತ್ಕರಿಸುವ ಶರಣಗುಣದ ಸಹೃದಯಿಗಳಿಗಾಗಿ ಕೂಡ. ನಿಮಗೇನಾದರೂ ಹುಬ್ಬಳ್ಳಿಯಲ್ಲಿ ಬಂಧು ಮಿತ್ರರ ಮನೆಯಿದ್ದಲ್ಲಿ ಖಂಡಿತ ಅವರ ಮನೆಯ ಪ್ರೀತಿಯನ್ನು ಒಲ್ಲೆ ಎನ್ನದಿರಿ. ಬಸವಾದಿ ಶರಣರ ಪಥದಲ್ಲಿ ಅಚಲ ವಿಶ್ವಾಸವಿಟ್ಟ ಈ ಮೂಲ ನಿವಾಸಿಗಳು ಇಂದಿಗೂ ತಮ್ಮತನವನ್ನು ಬಿಡದೇ ಸಲಹುವ ಗುಣದಿಂದಲೇ ನೆನಪಿನಲ್ಲಿರುತ್ತಾರೆ. ಕೂಡು ಕುಟುಂಬ ವ್ಯವಸ್ಥೆ, ಏನೇ ಆದರೂ ಹೊಂದಿಕೊಂಡು ಹೋಗುವ ಸ್ವಭಾವ, ಎಂದೆಂದಿಗೂ ಹುಬ್ಬಳ್ಳಿಯಲ್ಲೇ ಇರಬೇಕು ಎಂಬ ನೆಲದ ನಿಜ ಪ್ರೀತಿ, ಆಂಗ್ಲ ಮಾಧ್ಯಮದಲ್ಲಿ ಕಲಿತರೂ ಬಿಡದ ಕಟ್ಟಾ ಕನ್ನಡಾಭಿಮಾನ ಬೆರಗು ಹುಟ್ಟಿಸುತ್ತದೆ. ಸೂಕ್ಷ್ಮ ಮನಸ್ಸಿಗೆ ಇವೆಲ್ಲ ಥಟ್ಟನೆ ವೇದ್ಯವಾಗಿಬಿಡುತ್ತವೆ.

ಹೇಗಿತ್ತು ಪ್ರವಾಸ? ಸಾಕಷ್ಟು ಸಮಯ ಹಾಗೂ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಹೀಗೆ ವಾರಗಟ್ಟಲೆ ತಿರುಗಾಡಬಹುದು ನೀವು. ಸಮಯವಿದ್ದರೆ ಧಾರವಾಡಕ್ಕೂ ಹೋಗಬಹುದು. ಮತ್ತ ಸಿಗೋಣ ಬರ‍್ರೀ.