- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ನಮ್ಮ ಕಾಲದ ಸಮಗ್ರ ಮಾಹಿತಿಗಳ ಕಣಜ, ವಿಮರ್ಶಕ, ಲೇಖಕ, ಮಾಧ್ಯಮ ಕರ್ಮಿಗಳಾದ ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರ ಹೊಸ ಪುಸ್ತಕ ಬೆಳ್ಳಿ ತೆರೆಯಲ್ಲಿ ಭಾರತೀಯ ಸೇನೆ ಪುಸ್ತಕ ಲೋಕರ್ಪಣೆಗೊಂಡಿದೆ. ಈ ವಿಶಿಷ್ಟ, ಸಂಗ್ರಹಯೋಗ್ಯ ಪುಸ್ತಕದಿಂದ ಆಯ್ದ ಭಾಗ ನಸುಕು ಓದುಗರಿಗೆ ಎಕ್ಸ್ಲುಸಿವ್ ಆಗಿ ಲಭ್ಯವಿದೆ. ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರಿಗೆ ಹಾಗೂ ಕನ್ನಡ ಓದುಗರಿಗೆ ನಸುಕು ಬಳಗದ ಪರವಾಗಿ ಈ ಹೊಸ ಪುಸ್ತಕದ ನಿಮಿತ್ತ ಶುಭಾಶಯ ಕೋರುತ್ತೇವೆ.
ನಸುಕು ಬಳಗ
ಆರಂಭಿಕ ಘಟ್ಟದಲ್ಲಿನ ಸೇನೆಯ ಕುರಿತ ಚಿತ್ರಗಳು
ಕ್ರಿ.ಶ 1750ರಿಂದಲೂ ಸಿನಿಮ ಕನಸನ್ನು ಯೂರೋಪಿನ ಹಲವು ದೇಶಗಳಲ್ಲೂ ಕಾಣುತ್ತಿದ್ದರು. ಮಧ್ಯಯುಗ ಕಳೆದು ವಿಜ್ಞಾನ ಪ್ರಗತಿ ಆರಂಭವಾದಾಗಿನಿಂದ ಇದಕ್ಕಾಗಿ ಹಲವು ಪ್ರಯತ್ನಗಳು ನಡೆದವು.
1895ರ ಡಿಸಂಬರ್ 28 ಸಿನಿಮಾ ಅರಂಭವಾದ ದಿನ. ಅದಕ್ಕೆ ಕಾರಣಕರ್ತರಾದವರು ಫ್ರಾನ್ಸಿನ ಲ್ಯುಮಿಯರ್ ಸಹೋದರರು. ಒಗ್ಯೂಸ್ಟ್ ಲ್ಯುಮಿಯರ್ ಮತ್ತು ಲೂಯಿ ಲ್ಯುಮಿಯರ್ ಫ್ರಾನ್ಸಿನ ಲಿಯಾನ್ ನಗರದ ಕಲಾವಿದ ಅಂಟ್ವನ್ ಲ್ಯುಮಿಯರ್ನ ಮಕ್ಕಳು. ಈ ಸೋದರರು ವಿಜ್ಞಾನದಲ್ಲಿ ಅಸಕ್ತರಾಗಿದ್ದರು. ಆದರೆ ಅನಾರೋಗ್ಯದ ಕಾರಣ ಶಾಲೆಯನ್ನು ಬಿಡ ಬೇಕಾಗಿ ಬಂದಿತು. ಆಗ ಪ್ರಸಿದ್ದವಾಗಿದ್ದ ಕಿನಿಟೋಸ್ಕೋಪ್ ನೋಡಿ ಸಿನಿಮಾ ಕನಸು ಕಂಡು ಕಠಿಣ ಪರಿಶ್ರಮದಿಂದ ಆದನ್ನು ನನಸಾಗಿಸಿಕೊಂಡರು. ಪ್ಯಾರೀಸಿನ ಬೂಲ್ವಾ ಡೆ ಕ್ಯಾಪ್ಯುಸಿಯಲ್ಲಿ ಮೊದಲ ಪ್ರದರ್ಶನ ನಡೆಯಿತು. ಇಲ್ಲಿಂದ ಮುಂದೆ ಲೂಯಿ ಸೋದರರು ಜಗತ್ತನ್ನೆಲ್ಲಾ ಸುತ್ತಿ ಚಿತ್ರ ಪ್ರದರ್ಶನವನ್ನು ನಡೆಸಿದರು.
ಸಿನಿಮಾ, ಜಗತ್ತಿನಲ್ಲಿ ಕಣ್ಣು ಬಿಟ್ಟ ಆರು ತಿಂಗಳ ಒಳಗೇ ಭಾರತಕ್ಕೆ ಬಂದಿತು. 1897ನೇ ಇಸವಿ ಜುಲೈ 7ರಂದು ಮುಂಬಯಿಯ ಗೇಟ್ ವೇ ಅಫ್ ಇಂಡಿಯಾಕ್ಕೆ ಹೋಗುವಲ್ಲಿದ್ದ ಪ್ರಸಿದ್ದ ವಾಟ್ಸನ್ ಹೋಟಲ್ನಲ್ಲಿ ಭಾರತದಲ್ಲಿನ ಮೊದಲ ಪ್ರದರ್ಶನ ನಡಯಿತು. ದಿನಕ್ಕೆ ನಾಲ್ಕು ಪ್ರದರ್ಶನ, ಪ್ರವೇಶ ಧನ ಒಂದು ರೂಪಾಯಿ.ಆದು ಮುಂಗಾರು ಮಳೆಯ ಕಾಲ, ಮುಂಬಯಲ್ಲಂತೂ ಆ ವರ್ಷ ಜಡಿ ಮಳೆ ಹೀಗಿದ್ದರೂ ಜನರ ಉತ್ಸಾಹ ತಗ್ಗಲಿಲ್ಲ. ಮುಗಿಬಿದ್ದು ಚಲಿಸುವ ಚಿತ್ರಗಳನ್ನು ನೋಡಿದರು. ಮೈ ಮೇಲೆ ರೈಲು ಬಂತು ಎಂದು ಬೆಚ್ಚಿ ಬಿದ್ದರು. ಮಳೆ ಬಂದಾಗ ಕೊಡೆ ಬಿಚ್ಚಿದರು. ಚಿತ್ರಗಳು ಎಲ್ಲಿಂದ ಬರುತ್ತಿವೆ ಎಂದು ಪರೀಕ್ಷಿಸಲು ತೆರೆಯ ಹಿಂದೆ ಬಗ್ಗಿ ನೋಡಿದರು.
ಒಂದು ವಾರದ ನಂತರ ಜನರ ಉತ್ಸಾಹ ತಗ್ಗದಿದ್ದಾಗ ನಾವೆಲ್ಟಿ ಎಂಬ ರಂಗ ಮಂದಿರದಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಯಿತು. ಇದುವರಗೆ ಪ್ರದರ್ಶಿತವಾಗುತ್ತಿದ್ದ ಕಾರ್ಯಕ್ರಮಗಳ ಜೊತೆಗೆ ಇನ್ನಷ್ಟು ಹೊಸ ಆಕರ್ಷಣೆಗಳನ್ನು ಸೇರಿಸಲಾಯಿತು. ಟಿಕೆಟ್ಟಿನ ದರ ಎಂಟು ಆಣೆಯಿಂದ ಎರಡು ರೂಪಾಯಿಗಳವರೆಗೆ ಇತ್ತು. ನಾಟಕಗಳಂತೇ ಆಸನದ ವ್ಯವಸ್ಥೆ ಇತ್ತು. ಮುಂದಿನ 35 ದಿನಗಳೂ ಹೌಸ್ ಪುಲ್. ಆಲ್ಲಿಗೆ ಸಿನಿಮಾ ಎಂಬ ಕಲಾ ಪ್ರಕಾರ ಭಾರತೆಕ್ಕೆ ಕಾಲಿಟ್ಟಿತು. ಮುಂದೆ ವಿಟಾಗ್ರಾಫ್,ಮೋಟಾ ಸ್ಕೋಪ್, ಸ್ಕೋಫ್ ಗ್ರಾರ್ಫ ಸೇರಿದಂತೆ ವಿದೇಶದ ಎಲ್ಲಾ ಚಲನಚಿತ್ರ ತೆಯಾರಿಕಾ ಕಂಪನಿಗಳಿಗೂ ಭಾರತ ಪ್ರಮುಖ ಮಾರುಕಟ್ಟೆಯಾಯಿತು.
ಮೂಕಿಯಿಂದ ಮಾತಿನವರೆಗೆ ಭಾರತೀಯ ಚಿತ್ರರಂಗ ಸಾಗಿ ಬಂದ ಈ ಕಥೆ ರೋಮಾಂಚಕವಾಗಿದೆ. ಈ ಸಾಹಸದಲ್ಲಿ ಭಾಗಿಯಾದವರ್ಯಾರೂ ಸಿರಿವಂತರಾಗಿರಲಿಲ್ಲ, ಚಲನಚಿತ್ರವನ್ನು ಭಾರತಕ್ಕೆ ತರಬೇಕು ಎಂಬ ಒಂದೇ ಕನಸಿಗೆ ಗಂಧದ ಹಾಗೆ ತಮ್ಮನ್ನು ತೇಯ್ದುಕೊಂಡಿದ್ದವರು. ಅವರೆಲ್ಲರ ಸಾಹಸದ ಫಲವಾಗಿಯೇ ಇಂದು ಚಿತ್ರರಂಗ ತನ್ನ ವೈಭವದ ದಿನಗಳನ್ನು ಕಾಣುತ್ತಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ರಾಮಾಯಣ ಮತ್ತು ಮಹಾಭಾರತಗಳು ಭಾರತೀಯ ಕಥಾ ಪ್ರಪಂಚದ ಮೂಲಸೆಲೆಗಳು. ಅವನ್ನು ಕೇವಲ ಕವಿ ರಚಿತ ಎಂದು ಭಾವಿಸುವುದು ಕಷ್ಟ. ಏಕೆಂದರೆ ಸಾವಿರಾರು ವರ್ಷಗಳಲ್ಲಿ ದೇಶದ ಜನ ತಮ್ಮ ಸುಖದು:ಖಗಳನ್ನು ಅಲ್ಲಿ ನೀಗಿ ಕೊಂಡಿದ್ದಾರೆ. ಅಲ್ಲಿನ ಪಾತ್ರಗಳಲ್ಲಿ ಸಾಂತ್ವನ ಕಂಡಿದ್ದಾರೆ, ಭರವಸೆಯ ಬೆಳಕನ್ನು ನೋಡಿದ್ದಾರೆ. ಬದಲಾವಣೆಯ ಹಾದಿಗಳನ್ನು ಗುರುತಿಸಿಕೊಂಡಿದ್ದಾರೆ. ಪೌರಾಣಿಕ ಎಂದು ನಾವು ಕರೆಯುವುದು ಈ ರಾಮಾಯಣ ಮತ್ತು ಮಹಾಭಾರತಗಳ ಬೇರೆ ಬೇರೆ ಕವಲುಗಳೇ. ರಂಗಭೂಮಿ ಸೇರಿದಂತೆ ನಮ್ಮ ಎಲ್ಲಾ ಸಾಂಸ್ಕøತಿಕ ಪ್ರಕಾರಗಳಿಗೂ ಇದೇ ಮೂಲಾಧಾರ. ಆರಂಭಿಕ ಚಲನಚಿತ್ರಗಳಿಗೂ ಇಲ್ಲಿಂದಲೇ ಪ್ರೇರಣೆ ದೊರಕಿತ್ತು. ಆದರೆ ನೇರವಾಗಿ ರಾಮಾಯಣ ಇಲ್ಲವೆ ಮಹಾಭಾರತದ ಕಥೆಯನ್ನು ತರಲು ಆರಂಭಿಕ ಚಿತ್ರ ನಿರ್ಮಾತೃಗಳು ಹಿಂಜೆರೆದರು. ಕಾರಣ ಇಷ್ಟೇ ಈ ಕಥೆಗಳನ್ನೆಲ್ಲಾ ನಾಟಕಗಳಲ್ಲಿ ವೈಭವಪೂರ್ಣವಾಗಿ ನೋಡಿದ್ದ ಪ್ರೇಕ್ಷಕರು ತಾಂತ್ರಿಕವಾಗಿ ಇನ್ನೂ ಬೆಳವಣಿಗೆ ಕಾಣದ ಚಿತ್ರಮಾಧ್ಯಮದ ಮೂಲಕ ನೋಡಿದಾಗ ನಿರಾಶರಾಗ ಬಹುದು ಎನ್ನುವ ಆತಂಕ, ಇದರ ಜೊತೆಗೆ ಈಗಾಗಲೇ ಜನಪ್ರಿಯವಾಗಿದ್ದ ಕಥೆಗಳಲ್ಲಿ ರಾಜಿ ಮಾಡಿಕೊಂಡರೆ ವಿವಾದವಾಗಬಹುದು ಎನ್ನುವ ಹೆದರಿಕೆ, ಹೀಗಾಗಿ ಭಾರತೀಯ ಚಿತ್ರರಂಗದ ಆರಂಭಿಕ ಚಿತ್ರಗಳು ರಾಮಾಯಣ ಮತ್ತು ಮಹಾಭಾರತಗಳ ಉಪಕಥೆಗಳಿಗೆ ಮೊರೆಹೋದವು. ಫಾಲ್ಕೆಯವರ ಹರಿಶ್ಚಂದ್ರ ತೆರೆ ಕಾಣುವುದಕ್ಕೆ ಮೊದಲೇ ನಾನಾಭಾಯಿ ಗೋವಿಂದಚಿತ್ರೆ ಮತ್ತು ಪುರುಷೋತ್ತಮ ರಾಜರಾಮ್ ಟಪ್ನಿಸ್ ಇವರಿಬ್ಬರೂ ಜಾನ್ಸನ್ ಎಂಬ ವಿದೇಶಿ ಛಾಯಾಗ್ರಾಹಕರ ನೆರವನ್ನು ಪಡೆದು ರಾಮಚಂದ್ರ ತೋರ್ಣೆ ಎನ್ನುವವರ ನಿರ್ದೇಶನದಲ್ಲಿ ಎಂಟು ಸಾವಿರ ಅಡಿ ಉದ್ದದ ಪುಂಡಲೀಕ ಚಿತ್ರವನ್ನು ನಿರ್ಮಿಸಿದರು. ಇದು ಶ್ರೀಪಾದ ಸಂಗೀತ ಮಂಡಲಿ ಎಂಬ ವೃತ್ತಿಪರ ನಾಟಕ ಸಂಸ್ಥೆ ಅಭಿನಯಸುತ್ತಿದ್ದ ಪುಂಡಲೀಕ ನಾಟಕದ ತದ್ರೂಪವಾದ ಈ ಚಿತ್ರ ಕಾರೋನೇಷನ್ ಚಿತ್ರಮಂದಿರದಲ್ಲಿ 1912ರ ಮೇ18ರಂದು ತೆರೆ ಕಂಡಿತು. ಇದು ಮಹಭಾರತದ ಉಪಕಥೆಯನ್ನು ಆಧರಿಸಿದ ಭಾರತದ ಮೊದಲ ಚಿತ್ರ. ಮುಂದೆ ಫಾಲ್ಕೆಯವರೇ ಲಂಕಾದಹನ, ಸೇತು ಬಂಧನ ಮೊದಲಾದ ರಾಮಾಯಣದ ಕಥೆಗಳನ್ನು ಸೈರಂಧ್ರಿ, ಪಾರಿಜಾತಪುಷ್ಟಾಪಹರಣದಂತಹ ಮಹಾಭಾರತದ ಕಥೆಗಳನ್ನು ಮೂಕಿಚಿತ್ರಗಳಾಗಿಸಿದರು.
ದಕ್ಷಿಣಭಾರತದಲ್ಲಿ ತಯಾರಾದ ಮೊದಲಚಿತ್ರ ಕೀಚಕವಧಾ ಮಹಾಭಾರತದ ಕಥೆಯನ್ನು ಆಧರಿಸಿತ್ತು. ನಂತರ ಸ್ಟಾರ್ ಅಫ್ ದಿ ಈಸ್ಟ್ ಫಿಲಂ ಕಂಪನಿ ಎಂಬ ಹೆಸರಿನಲ್ಲಿ ವೆಂಕಯ್ಯ ಮತ್ತು ಪ್ರಕಾಶ ಜೊತೆಗೂಡಿ ನಿರ್ಮಿಸಿದ ಸಂಸ್ಥೆ ತಯಾರಿಸಿದ ನಾಲ್ಕೂ ಚಿತ್ರಗಳು ರಾಮಾಯಣದ ಉಪಕಥೆಗಳನ್ನೇ ಆಧಾರವಾಗಿಸಿಕೊಂಡಿದ್ದವು. ಮುಂದೆ ಕೂಡ ರಾಮಾಯಣ ಮತ್ತು ಮಹಾಭಾರತಗಳು ವೈಭವಪೂರ್ಣವಾಗಿ ಮೂಡಿ ಬಂದಿದ್ದು ದಕ್ಷಿಣ ಭಾರತದ ಚಿತ್ರಗಳಲ್ಲೇ. ಹಿಂದಿ ಚಿತ್ರರಂಗವಂತೂ ಬಹುಬೇಗ ಸಾಮಾಜಿಕ ಚಿತ್ರಗಳನ್ನು ಪ್ರಧಾನವಾಗಿಸಿಕೊಂಡಿತು. ಅಲ್ಲೊಂದು ಇಲ್ಲೊಂದು ಪೌರಾಣಿಕ ಚಿತ್ರ ಬಂದರೂ ಅದು ಮೈಲಿಗಲ್ಲು ಎನ್ನುವಂತಿರಲಿಲ್ಲ. ದೇಶೀಯ ಭಾಷೆಗಳಲ್ಲಿ ಮರಾಠಿ, ಗುಜರಾತಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಪೌರಾಣಿಕ ಚಿತ್ರಗಳಿಗೆ ಹೆಚ್ಚು ಒತ್ತು ಸಿಕ್ಕಿತು. ಆದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸರಿಸುಮಾರಾಗಿ 1960ರವರೆಗೂ ಪೌರಾಣಿಕ ಚಿತ್ರಗಳು ಪ್ರಧಾನವಾಗಿ ಬಂದವು. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿದ ಎ.ವಿ.ಎಂ, ಜೆಮಿನಿ, ರೇವತಿ ಮೊದಲಾದ ಸ್ಟೂಡಿಯೋಗಳು ಸಂಪೂರ್ಣ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತಗಳನ್ನು ಪೈಪೋಟಿಯ ಮೇಲೆ ನಿರ್ಮಿಸಿದರು. ಚಿತ್ತೂರು.ವಿ.ನಾಗಯ್ಯ, ಎನ್.ಟಿ.ರಾಮರಾವ್, ಎ.ನಾಗೇಶ್ವರ ರಾವ್, ಕಾಂತರಾವ್ ಮೊದಲಾದ ಕಲಾವಿದರು ಈ ಚಿತ್ರಗಳಿಂದ ಜನಪ್ರಿಯರಾದರು. ಇದರ ಜೊತೆಗೆ ಮಹಭಾರತದ ಉಪಕಥೆಗಳಾದ ರಾಜಸೂಯ ಯಾಗ, ಮಯಾಬಜಾರ್, ಕೃಷ್ಣಲೀಲಾ ಮೊದಲಾದವು ದಕ್ಷಿಣ ಭಾರತದಲ್ಲಿ ಬಹು ಜನಪ್ರಿಯ ಚಿತ್ರಗಳಾಗಿ ಮೂಡಿ ಬಂದವು.
ಜಗತ್ತಿನ ಚಿತ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸೇನೆಯ ಕುರಿತ ಚಿತ್ರಗಳು ಮೂಡಿ ಬಂದಿದ್ದು ವಿರಳ ಎಂದೇ ಹೇಳ ಬೇಕು. ಹಾಗೆ ಮೂಡಿ ಬಂದ ಚಿತ್ರಗಳಲ್ಲಿ ಕೂಡ ಡಾಕ್ಯುಮೆಂಟರಿ ಮಾದರಿಯಲ್ಲಿ ಘಟನೆಗಳನ್ನು ಸೆರೆ ಹಿಡಿದು ಭಾವನಾತ್ಮಕ ಪರಿಣಾಮ ಮೂಡಿಸುವುದರಲ್ಲಿ ಆದ್ಯತೆ ಇರುವುದನ್ನು ಕಾಣಬಹುದು. ಭಾರತೀಯ ಚಿತ್ರರಂಗದ ಇತಿಹಾಸವನ್ನು ಗಮನಿಸಿದರೆ ಮೊದಲ ಹಂತದ ಚಿತ್ರಗಳಲ್ಲಿ ಸ್ವಾತಂತ್ರ್ಯದ ಕುರಿತ ತುಡಿತ ಕಾಣುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಆರಂಭಿಕ ಭಾರತೀಯ ಚಿತ್ರ ನಿರ್ಮಾತೃಗಳು ಬ್ರಿಟೀಷ್ ಆಡಳಿತದ ಜೊತೆಗೆ ಸಂಬಂಧವನ್ನು ಇಟ್ಟುಕೊಂಡವರೇ ಆಗಿದ್ದರು. ಇದರ ಜೊತೆಗೆ ಚಿತ್ರಗಳೂ ಕೂಡ ಬ್ರಿಟೀಷ್ ಅಂಕೆಯಲ್ಲಿ ಮೂಡಿ ಬರುತ್ತಿದ್ದವು. ಎರಡನೇ ಹಂತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಆ ಕುರಿತು ಆಸಕ್ತಿಯನ್ನು ಇಟ್ಟುಕೊಂಡಿದ್ದ ಕೆಲವು ನಾಯಕರು ಸಿನಿಮಾ ಮೂಲಕ ಸ್ವಾತಂತ್ರ್ಯದ ತುಡಿತವನ್ನು ಬಿಂಬಿಸಲು ಪ್ರಯತ್ನಿಸಿದರು.
ಕನ್ನಡದಲ್ಲಿಯೇ ಆರ್.ನಾಗೇಂದ್ರ ರಾಯರು ರೂಪಿಸಿದ 1941ರಲ್ಲಿ ತೆರೆ ಕಂಡ “ವಸಂತ ಸೇನಾ”ಚಿತ್ರವನ್ನು ಇದಕ್ಕೆ ಉದಾಹರಣೆಯಾಗಿ ನೋಡ ಬಹುದು. ದುರಾದೃಷ್ಟದ ಸಂಗತಿ ಎಂದರೆ ಭಾರತದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಸಿನಿಮಾ ಕುರಿತು ಒಳ್ಳೆಯ ಅಭಿಪ್ರಾಯವಿರಲಿಲ್ಲ. “ಡಾ.ಕೋಟ್ನೀಸ್ ಕಿ ಅಮರ್ ಕಹಾನಿ”ಯಂತಹ ಶ್ರೇಷ್ಠಚಿತ್ರವನ್ನು ನೋಡಲು ಒಪ್ಪದೆ ಜವಾಹರ್ ಲಾಲ್ ನೆಹರೂ ಅವರು ರಾಜಕೀಯ ದುರ್ಬಳಕೆ ಎಂದು ಕರೆದಿದ್ದರು. ಸ್ವಾತಂತ್ರ್ಯಾ ನಂತರ ಭಾರತೀಯ ಸೇನೆ ಹೇಗೆ ರೂಪುಗೊಳ್ಳ ಬೇಕು, ಅದು ರಕ್ಷಣೆಯ ವ್ಯವಸ್ಥೆಯನ್ನು ಹೇಗೆ ಮಾಡಿ ಕೊಳ್ಳ ಬೇಕು ಎಂಬುದರ ಬಗ್ಗೆ ನಮ್ಮ ರಾಜಕೀಯ ನಾಯಕರಿಗೆ ಸ್ಪಷ್ಟ ಕಲ್ಪನೆ ಇರಲೇ ಇಲ್ಲ. ನಂತರ ಕೂಡ ಪಕ್ಷಾತೀತವಾಗಿ ಹೇಳುವುದಾದರೆ ಈಗಲೂ ಇದೆ ಎನ್ನುವುದು ಕಷ್ಟ. ವರ್ಷದ ಬಹುತೇಕ ಭಾಗ ಹಿಮದಿಂದ ಆವೃತವಾಗುವ ಪರ್ವತಾಗ್ರದಲ್ಲಿ ಯುದ್ಧ ನಡೆಸಿ ವಿಜಯಿ ಆಗುವುದು ಭಾರತೀಯ ಸೇನೆಗೆ ಇರುವ ಬಹುದ ದೊಡ್ಡ ಸವಾಲು. ಇಂತಹ ಸವಾಲು ಜಗತ್ತಿನ ಬಹುತೇಕ ದೇಶಗಳಿಗೆ ಇಲ್ಲ ಎನ್ನುವುದನ್ನು ನಾವು ಗಮನಿಸ ಬೇಕು. ಅಲ್ಲೆಲ್ಲ ಯುದ್ಧ ನಡೆಯುವುದು ಸಮತಟ್ಟಾದ ಪ್ರದೇಶದಲ್ಲಿ. ಇದರ ಜೊತೆಗೆ ಸ್ವಾತಂತ್ರ್ಯಾ ನಂತರ ರಕ್ಷಣೆ ಅಗತ್ಯಗಳನ್ನು ನಮ್ಮ ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದವು ಎನ್ನುವುದು ಇನ್ನೊಂದು ಕಹಿ ಸತ್ಯ. ಇದರ ಜೊತೆಗೆ ಮಾಧ್ಯಮಗಳೂ ಕೂಡ ಸೇನೆಯ ಕುರಿತು ಮೊದಲಿಂದಲೂ ಕಹಿಯಾದ ಧೋರಣೆಯನ್ನೇ ತಾಳುತ್ತಾ ಬಂದಿವೆ. ಸೇನೆಯ ತಪ್ಪುಗಳ ಕುರಿತು ಸಿಕ್ಕುವ ಪ್ರಚಾರ ಅದರ ಶೌರ್ಯದ ಕುರಿತು ಸಿಗುವುದಿಲ್ಲ ಎನ್ನುವುದು ಆತಂಕಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಬೆಳ್ಳಿತೆರೆಯಲ್ಲಿ ಸೇನೆ ಚಿತ್ರತವಾಗಿರುವ ಕ್ರಮದ ಕುರಿತ ಅಧ್ಯಯನ ಇಂತಹ ಚಾರಿತ್ರಿಕ ತಪ್ಪುಗಳ ಗ್ರಹಿಕೆ ಕೂಡ ಹೌದು.
ಭಾರತೀಯ ಸೇನೆ ಎನ್ನುವ ಕಲ್ಪನೆ ಸ್ವಾತಂತ್ರ್ಯಕ್ಕೆ ಮೊದಲೇ ಇತ್ತು ಎಂದರೆ ನಿಮಗೆ ಅಚ್ಚರಿಯಾಗ ಬಹುದು. ಬ್ರಿಟೀಷರು ಭಾರತೀಯರನ್ನು ಸೈನ್ಯಕ್ಕೆ ಸೇರಿಸಿ ಕೊಂಡು ಆ ಮೂಲಕ ಒಂದು ಕಡೆ ಚಳುವಳಿಯನ್ನು ಹತ್ತಿಕ್ಕುವ ಇನ್ನೊಂದೆಡೆ ತಮ್ಮ ಜಾಗತಿಕ ಅಸ್ತಿತ್ವವನ್ನು ವಿಸ್ತರಿಸಿ ಕೊಳ್ಳುವ ಪ್ರಯತ್ನವನ್ನು ಮಾಡಿದ್ದರು. ಮೊದಲ ಜಾಗತಿಕ ಯುದ್ಧದಲ್ಲಿ ಒಟ್ಟು 74,187 ಭಾರತೀಯ ಸೈನಿಕರು ಮೃತರಾಗಿದ್ದರು ಎಂದು ದಾಖಲೆಗಳು ಹೇಳುತ್ತವೆ. ಭಾರತೀಯ ಸೇನೆಯು ಮುಖ್ಯವಾಗಿ ಜರ್ಮನಿಯಲ್ಲಿ ಸೆಣಸಿತ್ತು. 1902ರಲ್ಲಿ ಕಮ್ಯಾಂಡರ್-ಇನ್-ಚೀಫ್ ಆಗಿ ನೇಮಕವಾದ ಕಿಚನರ್ ಭಾರತೀಯ ಸೇನೆಯನ್ನು ಸಂಘಟಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 1914ರ ವೇಳಗೆ ಭಾರತೀಯ ಸೇನೆಯಲ್ಲಿ 2,40,000 ಸೈನಿಕರಿದ್ದರು. ಮುಖ್ಯವಾಗಿ ಸೇನೆಯನ್ನು ಬ್ರಿಟೀಷ್ ಸಾಮ್ರಾಜ್ಯದ ಈಜಿಪ್ಟ್, ಸಿಂಗಾಪುರ ಮತ್ತು ಚೀನಾದ ಭಾಗವನ್ನು ಕಾಯುವುದಕ್ಕೆ ಬಳಸಿ ಕೊಳ್ಳಲಾಗುತ್ತಿತ್ತು. ಇದರ ಜೊತೆಗೆ ಭಾರತದ ಕೆಲವು ದೇಶೀಯ ಪ್ರಾಂತ್ಯಗಳು ಕೂಡ ತಮ್ಮದೇ ಆದ ಸೇನೆಯನ್ನು ಹೊಂದಿದ್ದವು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಸ್ಥಿತಿ ಇನ್ನಷ್ಟು ವಿಸ್ತಾರಗೊಂಡಿತ್ತು. ಒಂದು ರೆಜಿಮೆಂಟ್ನ ಬದಲಾಗಿ ಹಲವು ರೆಜಿಮೆಂಟ್ಗಳು ಸ್ಥಾಪನೆಗೊಂಡಿದ್ದವು. 1942ರ ವೇಳೆಗೆ ಮಹಿಳಾ ತುಕಡಿ ಕೂಡ ಸೇರಿ ಕೊಂಡಿತ್ತು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯು ಜರ್ಮನಿ, ಇಟಲಿ, ಜಪಾನ್ ದೇಶಗಳ ಮೇಲೆ ಹೋರಾಟ ನಡೆಸಿತು. 1945ರಲ್ಲಿ ಜಪಾನಿ ಸೇನೆ ಶರಣಾಗತಿ ಹೊಂದುವಲ್ಲಿ ಭಾರತೀಯ ಸೇನೆಯ ಪಾತ್ರ ಬಹಳ ಮುಖ್ಯವಾದದ್ದಾಗಿತ್ತು. ಇದೇ ವೇಳೆಗೆ ಭಾರತೀಯ ಕಾಂಗ್ರೆಸ್ ಕ್ವಿಟ್ ಇಂಡಿಯಾ ಕರೆಯನ್ನು ನೀಡಿತು. ಆಗ ಭಾರತೀಯ ಸೇನೆ ಮಹಾಯುದ್ಧದಲ್ಲಿ ಭಾಗವಹಿಸ ಬಾರದು ಎನ್ನುವ ಕೂಗು ಕೇಳಿ ಬಂದಿತು. ಇನ್ನೊಂದೆಡೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶದ ಹೊರಗೆ ಭಾರತೀಯ ಸೇನೆಯನ್ನು ಕಟ್ಟಿ ಹೋರಾಟವನ್ನು ಮುಂದುವರೆಸಿದರು.
ಭಾರತೀಯ ಚಿತ್ರರಂಗವನ್ನು ನೋಡಿದರೆ ಆರಂಭಿಕ ಘಟ್ಟದ ಚಿತ್ರಗಳಲ್ಲಿ ಈ ಯಾವ ಉಲ್ಲೇಖವೂ ದೊರಕದಿರುವುದು ನಿರಾಶೆಯನ್ನು ತರುತ್ತದೆ. 1913ರ ಮೇ 3ರಂದು ಮೊದಲ ಭಾರತೀಯ ಮೂಕಿ ಚಿತ್ರ ‘ರಾಜಾ ಹರಿಶ್ವಂದ್ರ’ ಬಿಡುಗಡೆಯಾಯಿತು. ಈ ಚಿತ್ರ ರೂಪಿಸಿದ್ದ ದಾದಾ ಸಾಹೇಬ್ ಫಾಲ್ಕೆಯವರ ‘ಹಿಂದೂಸ್ಥಾನ್ ಫಿಲಂ ಕಂಪನಿ’ಯೇ 97 ಕಥಾ ಚಿತ್ರಗಳನ್ನು 26 ಕಿರು ಚಿತ್ರಗಳನ್ನು ನಿರ್ಮಿಸಿತು. ಇವೆಲ್ಲವೂ ಹೆಚ್ಚಾಗಿ ಪೌರಾಣಿಕ ಚಿತ್ರಗಳೇ ಸಮಕಾಲೀನ ವಸ್ತುವೇ ಇರದಿದ್ದರಿಂದ ಸೇನೆಯ ಪ್ರಸ್ತಾಪ ಕೂಡ ಬಂದಿರಲಿಲ್ಲ. ಆದರೆ ಬ್ರಿಟೀಷರಿಗೆ ಭಾರತೀಯರ ಸಿನಿಮಾ ಕುರಿತು ಭಯ ಇದ್ದೇ ಇತ್ತು. ಹೀಗಾಗಿ ಕಠಿಣ ಸೆನ್ಸಾರ್ ನಿಯಮಗಳನ್ನು ಜಾರಿಗೆ ತಂದಿತು. ಇದಕ್ಕೆ ಕಾರಣವಾದ ಚಿತ್ರ 1917ರಲ್ಲಿ ತೆರೆ ಕಂಡ ಬಾಬೂ ರಾವ್ ಪೆಯಿಂಟರ್ ಅವರ ‘ಕೀಚಕ’ ಚಿತ್ರ. ಖ್ಯಾತ ಗಾಯಕಿ ತಾನಿ ಬಾಯಿ ಕಾಗಿಲ್ಕರ್ ನೀಡಿದ 15 ಸಾವಿರ ಮೂಲ ಬಂಡವಾಳದಿಂದ ‘ಮಹಾರಾಷ್ಟ್ರ ಫಿಲಂ ಕಂಪನಿ’ಯ ಮೂಲಕ ಈ ಚಿತ್ರವು ನಿರ್ಮಾಣಗೊಂಡಿತ್ತು. ಇದರ ವಸ್ತು ಮಹಾಭಾರತದ್ದು ಎನ್ನಿಸುವಂತಿದ್ದರೂ ಸೂಚ್ಯವಾಗಿ ಹೇಳಿದ್ದು ಭಾರತೀಯ ಸ್ವಾತಂತ್ರ್ಯ ಹೋರಾಟದ ಕಥನವನ್ನೇ. ಇಲ್ಲಿ ಬ್ರಿಟೀಷರು ಭಾರತೀಯ ಸೇನೆಯನ್ನು ದುರುಪಯೋಗಗೊಳಿಸಿ ಕೊಳ್ಳುತ್ತಿರುವುದರ ಕುರಿತೂ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಅರ್ಥದಲ್ಲಿ ಇದನ್ನು ಭಾರತೀಯ ಸೇನೆಯ ಕುರಿತು ಮೊದಲ ಚಿತ್ರ ಎಂದು ಕರೆಯ ಬಹುದು. ಬ್ರಿಟೀಷರಿಗೆ ಚಿತ್ರದ ಒಳ ಅರ್ಥ ತಡವಾಗಿ ತಿಳಿದು ಅದನ್ನು ನಿಷೇದಿಸಿದರು. ಆದರೆ ಛಲ ಬಿಡದ ಬಾಬೂರಾವ್ ಅದೇ ಚಿತ್ರವನ್ನು ಸ್ವಲ್ಪ ಬದಲಾವಣೆಯೊಂದಿಗೆ 1919ರಲ್ಲಿ ‘ಸೈರಂದ್ರಿ’ ಎಂದು ಹೆಸರು ಬದಲಾಯಿಸಿ ಮರು ಬಿಡುಗಡೆ ಮಾಡಿದರು. ಈ ಎರಡೂ ಅವತರಣಿಕೆಗಳೂ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದವು. ಸಿನಿಮಾ ಮಾಧ್ಯಮವನ್ನು ರಾಜಕೀಯ ಜಾಗೃತಿಗೆ ಬಳಸಿದ್ದನ್ನು ಮೆಚ್ಚಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಬಾಬೂರಾವ್ ಅವರಿಗೆ ‘ಸಿನಿಮಾ ಕೇಸರಿ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು.
ಇದೇ ಸಂಸ್ಥೆ ನಿರ್ಮಿಸಿದ್ದ ‘ಸಿಂಹಘಡ’ ಚಿತ್ರದಲ್ಲಿ ಶಿವಾಜಿ ಮಹಾರಾಜರ ಚಿತ್ರಣವಿತ್ತು. ಆ ಕಾಲದ ಸೇನೆಯ ಸಾಹಸದ ಪ್ರಸ್ತಾಪ ಕೂಡ ಇತ್ತು. 1925ರಲ್ಲಿ ರೂಪುಗೊಂಡಿದ್ದ ‘ಶಾರದಾ ಫಿಲಂ ಕಂಪನಿ’ಯವರ ‘ಬಾಜಿರಾವ್ ಮಸ್ತಾನಿ’ಯಲ್ಲಿ ಕೂಡ ಸ್ವಾತಂತ್ರ್ಯದ ಪ್ರಸ್ತಾಪ ಸೇನೆಯ ಸ್ವರೂಪದ ಕುರಿತ ಚಿಂತನೆ ಎರಡೂ ಇದ್ದವು. ದಕ್ಷಿಣ ಭಾರತದಲ್ಲಿ ರೂಪುಗೊಂಡ ಮೊದಲ ಚಿತ್ರವೇ ‘ಕೀಚಕ ವಧಾ’ ಇದನ್ನು ನಟರಾಜ್ ಮೊದಲಿಯಾರ್ ಮತ್ತು ಧರ್ಮಲಿಂಗಂ ‘ಇಂಡಿಯನ್ ಫಿಲಂ ಕಂಪನಿ’ಯ ಮೂಲಕ ರೂಪಿಸಿದ್ದರು. ಆದರೆ ಇದು ಯಾವ ದೃಷ್ಟಿಯಿಂದಲೂ ಸಮಕಾಲೀನ ವಿದ್ಯಮಾನಗಳ ಜೊತೆಗೆ ಹೊಂದಾಣಿಕೆಯನ್ನು ಇಟ್ಟು ಕೊಂಡಿರಲಿಲ್ಲ. ಹಾಗೆ ನೋಡಿದರೆ ಕೆಲ ಮಟ್ಟಿಗೆ ಸೈನ್ಯದ ಹಿನ್ನೆಲೆಯಿಂದ ರೂಪಿತವಾದ ಚಿತ್ರ ಎಂದರೆ 1929ರಲ್ಲಿ ತೆರೆ ಕಂಡ ಬೆಂಗಳೂರಿನಲ್ಲಿಯೇ ಇದ್ದ ಸೂರ್ಯ ಫಿಲಂ ನಿರ್ಮಿಸಿದ್ದ ‘ಚೌಹಾನಿ ತಲವಾರ್’. ಇದು ಸೈನಿಕನ ಬದುಕಿನ ದುರಂತದ ಕಥೆಯನ್ನು ಹೇಳಿತ್ತು. ಸದಾ ಯುದ್ಧದಲ್ಲಿಯೇ ನಿರತನಾದ ಸೈನಿಕನ ಕೌಟಂಬಿಕ ಬದುಕಿನ ಮೇಲೆ ಬೀಳುವ ಆಘಾತಗಳನ್ನು ಇಲ್ಲಿ ಗುರುತಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಅಂದಿನ ಸಮಾಜದ ದೃಷ್ಟಿಕೋನವನ್ನು ಹೇಳಿತ್ತು ಎಂದರೂ ತಪ್ಪಾಗಲಾರದು. ಹರಿಭಾಯ್ ದೇಸಾಯಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಗಣಪತ್ ಬಾಕ್ರೆ, ಜೀನಾ ಪಟೇಲ್, ರೋಷನ್ ಮೊದಲಾದವರು ಅಭಿನಯಿಸಿದ್ದರು. ಇನ್ನೊಂದು ಇಂತಹದೇ ಚಿತ್ರ 1933ರಲ್ಲಿ ರಮೇಶ್ ಫಿಲಂ ಕಂಪನಿ ನಿರ್ಮಿಸಿದ ‘ಖೂನ್ ಕಿ ಬದಲಾ’ ಇದು ದೇಶಗಳ ವೈರತ್ವದಲ್ಲಿ ದಾಳವಾಗುವ ಸೈನಿಕರ ಕಥೆ. ಅಂದಿನ ಸೀಮಿತ ತಂತ್ರಜ್ಞಾನದಲ್ಲಿ ಈ ಚಿತ್ರ ರೂಪಗೊಂಡಿತ್ತು. ಈ ಚಿತ್ರದ ಪ್ರಧಾನ ತಾರಾಗಣದಲ್ಲಿ ಗಣಪತ್ ಬಾಕ್ರೆ ಮತ್ತು ಲಕ್ಷ್ಮಿಬಾಯಿ ಕಾಣಿಸಿ ಕೊಂಡಿದ್ದರು.
1931ರಲ್ಲಿ ‘ಆಲಂ ಆರಾ’ ಬಿಡುಗಡೆಯಾಗುವುದರೊಂದಿಗೆ ಟಾಕಿ ಚಿತ್ರಗಳ ಪರಂಪರೆ ಆರಂಭವಾಯಿತು. ಹಾಗೆ ನೋಡಿದರೆ ಮೂಕಿ ಎಂಬ ಹೆಸರು ಬಂದಿದ್ದೇ ಟಾಕಿ ಬಂದ ನಂತರ ಅದಕ್ಕಿಂತ ಮೊದಲು ಅವನ್ನೆಲ್ಲಾ ಬಯೋಸ್ಕೋಪ್ ಎಂದು ಕರೆಯುತ್ತಿದ್ದರು. ಅದೇ ವರ್ಷ ತಮಿಳು, ತೆಲುಗು ಭಾಷೆಗಳಲ್ಲಿಯೂ ಮಾತಿನ ಚಿತ್ರಗಳು ಬಂದವು. ಕನ್ನಡದಲ್ಲಿ 1934ರಲ್ಲಿ ಬಂದಿತು. ಮಾತಿನ ಸಿನಿಮಾಗಳು ಬಂದರೂ ಭಾರತೀಯ ಸೇನೆಯ ಕುರಿತ ಚಿತ್ರಗಳು ಬರಲೇ ಇಲ್ಲ. ಇದಕ್ಕೆ ಕೆಲವು ಮುಖ್ಯ ಕಾರಣಗಳಿದ್ದವು. ಸ್ವಾತಂತ್ರ್ಯ ಹೋರಾಟದ ಕುರಿತು ಕಣ್ಣಿಟ್ಟಿದ್ದ ಬ್ರಿಟೀಷ್ ಅಧಿಕಾರಿಗಳು ಪ್ರತಿಯೊಂದು ಚಿತ್ರವನ್ನೂ ಸೆನ್ಸಾರ್ ಮಾಡುತ್ತಿದ್ದರು. ಮೂಕಿ ಚಿತ್ರಗಳಲ್ಲಿ ಭಾಷೆ ಇರುತ್ತಿರಲಿಲ್ಲವಾದ್ದರಿಂದ ಕೆಲವು ಚಿತ್ರಗಳು ಉಪಾಯದಿಂದ ಕಣ್ತಪ್ಪಿಸುವುದು ಸಾಧ್ಯವಿತ್ತು. ಆದರೆ ಭಾಷೆ ಬಂದ ಮೇಲೆ ಅದು ಕಷ್ಟವಾಯಿತು. ಅನೇಕ ಚಿತ್ರ ನಿರ್ಮಾಪಕರು ಬ್ರಿಟೀಷ್ ಸರ್ಕಾರದೊಂದಿಗೆ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಸಂಬಂಧ ಹೊಂದಿದ್ದರು ಹೀಗಾಗಿ ಈ ಸಂಬಂಧಕ್ಕೆ ಧಕ್ಕೆ ಆಗುವಂತಹ ಯಾವ ಚಿತ್ರಗಳನ್ನೂ ಅವರು ರೂಪಿಸುತ್ತಿರಲಿಲ್ಲ. ಬಹಳ ಮುಖ್ಯವಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೇ ಚಲನಚಿತ್ರದ ಶಕ್ತಿಯ ಕುರಿತು ನಂಬಿಕೆ ಇರಲಿಲ್ಲ. ಅದು ಜನರ ಮನಸ್ಸನ್ನು ಕೆಡಿಸುವ ಪಾಶ್ಚ್ಯಾತ್ಯ ಮಾಧ್ಯಮ ಎಂದೇ ಭಾವಿಸಿದ್ದರು. ಆದರೆ ಜಗತ್ತಿನೆ ಬೇರೆಡೆ ಸಿನಿಮಾ ಮಾಧ್ಯಮದ ಮಹತ್ವವನ್ನು ಗುರುತಿಸಿ ಅದನ್ನು ಸ್ವಂತ ಪ್ರಚಾರಕ್ಕೆ ಬಳಸಿ ಕೊಳ್ಳುವ ತಂತ್ರ ಆಗಲೇ ಬಳಕೆಯಲ್ಲಿತ್ತು. ಇದಕ್ಕೆ ಉದಾಹರಣೆಯಾಗಿ ಲೆನಿ ರೆಫಿನ್ ಸ್ಟಾಲ್ ನಿರ್ದೇಶಿಸಿರುವ ‘ಟ್ರೈಂಫ್ ಆಫ್ ದ ವಿಲ್’ ಡಾಕ್ಯೂಮಂಟರಿಯನ್ನು ನೋಡ ಬಹುದು. 1934ರಲ್ಲಿ ರೂಪುಗೊಂಡ ಈ ಚಿತ್ರದಲ್ಲಿ ‘ನಾಯಕನೆಂದರೆ ಹೀಗಿರ ಬೇಕು’ ಎಂಬ ಭಾವನೆಯನ್ನು ರೂಪಿಸುವಂತಹ ದೃಶ್ಯಗಳಿವೆ. ಹಿಟ್ಲರ್ನನ್ನೇ ಕೇಂದ್ರವಾಗಿರಿಸಿ ಕೊಂಡ ದೃಶ್ಯಗಳು, ಭಾವಾವೇಶ ಗೊಂಡ ಜನರ ಘೋಷಣೆಗಳು, ಹಿಟ್ಲರ್ ಮತ್ತು ಅವನ ಮಂತ್ರಿ ಮಂಡಲದ ಸದಸ್ಯರ ಆವೇಶಭರಿತ ಭಾಷಣಗಳು ಎಲ್ಲವೂ ಇಲ್ಲಿದೆ. ನಾಜಿ ಪಕ್ಷದ ರ್ಯಾಲಿಗೆ ಹಿಟ್ಲರ್ ಬರುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಕೆಲವು ಮೋಡಗಳ ದೃಶ್ಯಗಳು, ನಂತರ ಹಿಟ್ಲರ್ ಇರುವ ವಿಮಾನ, ಅವನು ಕೆಳಗಿಳಿಯುವ ರಾಜಠೀವಿ, ಜನರ ಉದ್ಗಾರ, ಇಳಿದ ಹಿಟ್ಲರ್ ರ್ಯಾಲಿ ನಡುವಿನ ಮಗುವನ್ನು ಮುದ್ದಾಡುವುದು ಎಲ್ಲವೂ ಎಂತಹ ಪರಿಣಾಮವನ್ನು ಬೀರಿದ್ದವು ಎಂದು ಊಹಿಸುವುದು ಕಷ್ಟವಲ್ಲ. ಇಂತಹ ಪ್ರಯೋಗಕ್ಕೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದ ನಾಯಕರು ಮನಸ್ಸು ಮಾಡಲಿಲ್ಲ ಅಥವಾ ಅವರಿಗೆ ಇಂತಹ ಸಾಧ್ಯತೆಯೇ ಪರಿಚಯವಿರಲಿಲ್ಲ. ಆಗ ಹೆಚ್ಚಾಗಿ ಬರುತ್ತಿದ್ದ ಪೌರಾಣಿಕ ಚಿತ್ರಗಳಲ್ಲಿ ಕೂಡ ಸೇನೆ, ಯುದ್ಧದ ದೃಶ್ಯಗಳಿದ್ದವು. ಆದರೆ ಅವರು ನಾಟಕದ ಅನುಕರಣೆಯೇ ಆಗಿದ್ದವು. ವಾಸ್ತವಿಕ ಅಂಶಗಳನ್ನು ಅಳವಡಿಸಿ ಕೊಳ್ಳುವ ಪ್ರಯತ್ನಗಳು ನಡೆದಿರಲಿಲ್ಲ ಎಂದೇ ಹೇಳ ಬೇಕು. ಉದಾಹರಣೆಗೆ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ ಉದಾಹರಣೆಯನ್ನೇ ನೋಡುವುದಾದರೆ ಇದರಲ್ಲಿಯ ಯುದ್ಧದ ಸನ್ನಿವೇಶವನ್ನು ಕೊಲ್ಹಾಪುರದಲ್ಲಿ ಚಿತ್ರಿಸಲಾಗಿತ್ತು. ಇಡೀ ಸಿನಿಮಾ ರೂಪುಗೊಂಡಿದ್ದೇ ಕೊಲ್ಹಾಪುರ ಸಿನಿಟೋನ್ನಲ್ಲಿ. ಅಕ್ಕ ಪಕ್ಕದ ಹಳ್ಳಿಗಳೆಲ್ಲಲ್ಲಾ ಯುದ್ಧದ ಚಿತ್ರೀಕರಣದಲ್ಲಿ ಭಾಗವಹಿಸಲು ಇಷ್ಟವಿರುವವರು ಬರ ಬೇಕೆಂದು ಡಂಗೂರ ಸಾರಲಾಗಿತ್ತು. ಸಾಕಷ್ಟು ಜನಸಂದಣಿ ಸೇರಿತ್ತು. ರಾವಣನ ಸೈನ್ಯ ಮತ್ತು ರಾಮನ ಸೈನ್ಯಕ್ಕೆ ಬೇರೆ ಬೇರೆ ಬಣ್ಣದ ಉಡುಪನ್ನು ಗೋಣಿಚೀಲದಲ್ಲಿ ಹೊಲಿಸಲಾಗಿತ್ತು. ಇದು ಕಪ್ಪು-ಬಿಳುಪು ಚಿತ್ರವಾದರೂ ಗೊಂದಲವಾಗದಿರಲಿ ಎಂದು ಹೀಗೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರ್ದೇಶಕ ವೈ.ವಿ.ರಾವ್ ಲಕ್ಷ್ಮಣನ ಪಾತ್ರವನ್ನು ವಹಿಸಿದ್ದರು. ಯುದ್ಧದ ಸನ್ನಿವೇಶದಲ್ಲಿ ಒಂದೆಡೆ ರಾಮನ ಸೇನೆ ಇದರ ನೇತೃತ್ವ ವಹಿಸಿದ್ದರು. ಇನ್ನೊಂದೆಡೆ ರಾವಣನ ಸೇನೆ ಇದರ ನೇತೃತ್ವ ವಹಿಸಿದ್ದವರು ಇಂದ್ರಜಿತುವಿನ ಪಾತ್ರವನ್ನು ವಹಿಸಿದ್ದ ಸುಬ್ಬಯ್ಯ ನಾಯ್ಡು. ‘ಸಾರ್ಟ್’ ಎಂದ ಕೂಡಲೇ ರಥವನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಓಡಿಸಿ ಎದುರು ಬಂದವರಿಗೆ ಹೊಡೆಯುವಂತೆ ನಟನೆ ಮಾಡ ಬೇಕು ಎನ್ನುವುದು ನಿರ್ದೇಶನ. ಆದರೆ ಆಗಿದ್ದೇ ಬೇರೆ ಎರಡೂ ಸೇನೆಯೂ ಜಯಘೋಷ ಕೂಗುತ್ತಾ ನುಗ್ಗಿದಾಗ ಇಂತಹ ವಾತಾವರಣದ ಕಲ್ಪನೆಯೇ ಇಲ್ಲದ ರಥಕ್ಕೆ ಕಟ್ಟಿದ್ದ ಕುದುರೆಗಳು ಬೆದರಿದವು. ರಥ ಉದ್ದೇಶಿತ ಗುರಿಯನ್ನು ಬಿಟ್ಟು ಜನರ ಮೇಲೆಯೇ ನುಗ್ಗಿತು. ಜನ ದಿಕ್ಕಾಪಾಲಾಗಿ ಯಾರ ಸೈನ್ಯದವರು ಯಾರು ಎಂಬುದೇ ಗೊಂದಲವಾಯಿತು. ಮತ್ತೆ ಮತ್ತೆ ಚಿತ್ರೀಕರಣವನ್ನು ನಡೆಸಿ ಸರಿ ಬಂದ ದೃಶ್ಯಗಳನ್ನು ಜೋಡಿಸಿ ಯುದ್ಧದ ದೃಶ್ಯವನ್ನು ರೂಪಿಸ ಬೇಕಾಯಿತು.
ಭಾರತೀಯ ಸೇನೆಯ ಕುರಿತು ಬಂದ ಮೊದಲ ಚಿತ್ರ ಎಂದು ಕರೆಯ ಬಹುದಾದದ್ದು 1946ರಲ್ಲಿ ತೆರೆ ಕಂಡ ‘ಡಾ. ಕೊಟ್ನಿಸ್ ಕಿ ಅಮರ್ ಕಹಾನಿ’ ಇದನ್ನು ಪ್ರಭಾತ್ ಸಂಸ್ಥೆಯ ಮೂಲಕ ಹಿಂದಿ, ಇಂಗ್ಲೀಷ್, ಉರ್ದು ಹೀಗೆ ಮೂರು ಭಾಷೆಗಳಲ್ಲಿ ರೂಪಿಸಲಾಗಿತ್ತು. ಕೆ.ಎ.ಅಬ್ಬಾಸ್ ಅವರ ‘ಅಂಡ್ ಒನ್ ಡಿಡ್ ನಾಟ್ ಕಮ್ ಬ್ಯಾಕ್’ ಕಾದಂಬರಿಯನ್ನು ಆಧರಿಸಿದ್ದ ಚಿತ್ರವನ್ನು ವಿ.ಶಾಂತರಾಂ ಅವರು ನಿರ್ದೇಶಿಸಿದ್ದರು. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಚೀನಾ ಸೇನೆಯ ಸೇವೆಯಲ್ಲಿದ್ದ ಡಾ.ದ್ವಾರಕನಾಥ್ ಕೊಟ್ನೀಸ್ ಅವರ ಜೀವನದ ಸತ್ಯ ಘಟನೆಗಳೇ ಚಿತ್ರಕ್ಕೆ ಆಧಾರ. ಸೇನೆಯಲ್ಲಿ ಸೇವೆ ಸಲ್ಲಿಸುವಾಗಲೇ ಕೊಟ್ನೀಸ್ ಅವರಿಗೆ ಚೀನಿ ನರ್ಸ್ ಚಿಂಗ್ ಲಾನ್ ಪರಿಚಯವಾಗುತ್ತದೆ. ಆಗ ಪ್ಲೇಗ್ ಎಲ್ಲೆಡೆ ವ್ಯಾಪಿಸುತ್ತಿದ್ದ ಕಾಲ. ಇಬ್ಬರೂ ಪ್ಲೇಗ್ ನಿರ್ಮೂಲನಕ್ಕೆ ಪ್ರಯತ್ನಿಸುತ್ತಾರೆ. ಕೊಟ್ನೀಸ್ ಅವರನ್ನು ಜಪಾನಿ ಸೇನೆ ಬಂಧಿಸಿ ನಂತರ ಬಿಡುಗಡೆ ಮಾಡುತ್ತದೆ. ಅವರು ಕೊನೆಗೆ ತಾವೇ ಸ್ವತ: ಪ್ಲೇಗ್ಗೆ ಬಲಿಯಾಗುತ್ತಾರೆ. ಸೇನಾ ಜೀವನದ ಮಾನವೀಯ ಮೊಗ್ಗಲಗಳನ್ನು ಪರಿಚಯಿಸಿದ್ದ ಚಿತ್ರ ಸೇನೆಯ ಕುರಿತು ಭಾರತದಲ್ಲಿ ಬಂದ ಆರಂಭಿಕ ಚಿತ್ರಗಳಲ್ಲಿ ಒಂದು ಎಂದೆನ್ನಿಸಿ ಕೊಂಡಿದೆ. ಶಾಂತಾರಂ ಅವರೇ ಕೊಟ್ನೀಸ್ ಅವರ ಪಾತ್ರವನ್ನು ಮಾಡಿದ್ದರು. ಜಯಶ್ರೀ, ಬಾಬೂರಾವ್ ಪೆಂಡೇಕರ್, ಜಾನಕಿದಾಸ್, ಕೇಶವ ರಾವ್ ದಾತೆ, ಮಾಸ್ಟರ್ ವಿನಾಯಕ್, ಪ್ರತಿಮಾ ದೇವಿ ಮೊದಲಾದವರು ಚಿತ್ರದ ಪ್ರಧಾನ ಪಾತ್ರಗಳಲ್ಲಿದ್ದರು. ಈ ಚಿತ್ರದ ಕಲಾ ವಿನ್ಯಾಸ ಮತ್ತು ಪೋಸ್ಟರ್ಗಳನ್ನು ಪ್ರಸಿದ್ದ ಕಲಾವಿದ ಎಸ್.ಎಂ ಪಂಡಿತ್ ಮಾಡಿದ್ದು ಒಂದು ವಿಶೇಷ. ಇಂದಿಗೂ ಕ್ಲಾಸಿಕ್ ಎಂದು ಪರಿಗಣಿತವಾಗಿರುವ ಈ ಚಿತ್ರದಲ್ಲಿ ನೇರವಾಗಿ ಭಾರತೀಯ ಸೇನೆ ಬರದಿದ್ದರೂ ಸೇನೆಗೆ ಸಂಬಂಧ ಪಟ್ಟ ವಿವರಗಳಿದ್ದವು. ಈ ಚಿತ್ರವನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಮುಖ್ಯಪಾತ್ರ ವಹಿಸಿದ್ದವರೇ ಒಪ್ಪಿ ಕೊಳ್ಳಲಿಲ್ಲ. ಇದು ಬೇರೆಯವರೂ ಸೇನೆಯ ಮಾತ್ರ ಚಿತ್ರ ನಿರ್ಮಿಸುವುದರ ಮೇಲೆ ಪರಿಣಾಮವನ್ನು ಬೀರಿತು. ಬಹಳ ವರ್ಷಗಳ ಕಾಲ ಸೇನೆ ಕುರಿತ ಚಿತ್ರಗಳು ಬಾರದೆ ಹೋಗಿದ್ದಕ್ಕೆ ಇದೂ ಒಂದು ಕಾರಣವಾಗಿತ್ತು ಎನ್ನ ಬಹುದು.
ಇದೇ ವರ್ಷ ತೆರೆ ಕಂಡ ತಮಿಳು ಚಿತ್ರ ‘ಬರ್ಮರಾಣಿ’. ಇದು ಜಪಾನಿಯರು ಬರ್ಮ ಮೇಲೆ ಆಕ್ರಮಣ ಮಾಡಿದಾಗ ಅವರನ್ನು ಎದುರಿಸಿದ ವೀರರಾಣಿಯ ಐತಿಹಾಸಿಕ ಕಥೆ. ಕೆ.ಎಲ್.ವಿ. ವತ್ಸಲ ಇದರಲ್ಲಿ ಬರ್ಮರಾಣಿಯ ಪಾತ್ರವನ್ನು ನಿರ್ವಹಿಸಿದ್ದರು. ಇದರಲ್ಲಿ ಕನ್ನಡಿಗರಾದ ಹೊನ್ನಪ್ಪ ಭಾಗವತರ್ ಅಭಿನಯಿಸಿದ್ದರು. ಅವರು ಆಧುನಿಕತೆಯ ಪಾತ್ರವನ್ನು ಮಾಡ ಬೇಕಾಯಿತು. ತಮ್ಮ ನೀಳ ಕೂದಲನ್ನು ಕತ್ತರಿಸಿಕೊಂಡು ಕ್ರಾಫ್ ಬಿಡ ಬೇಕಾಯಿತು. ಕೆಲವು ಸನ್ನಿವೇಶಗಳಲ್ಲಿ ಸಿಗರೇಟ್ ಕೂಡ ಸೇದುವಂತೆ ನಟಿಸ ಬೇಕಾಯಿತು. ಇದು ಅವರಿಗೆ ಇಷ್ಟವಿಲ್ಲದಿದ್ದರೂ ಕಾಂಟ್ರಾಕ್ಟ್ಗೆ ಕಟ್ಟು ಬಿದ್ದು ಅಭಿನಯಿಸ ಬೇಕಾಯಿತು. ಜನ ಕೂಡ ಅವರಿಂದ ಇಂತಹ ಪಾತ್ರವನ್ನು ಅಪೇಕ್ಷಿಸಿರಲಿಲ್ಲ ಎನ್ನುವಂತೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿಯೂ ವಿಫಲವಾಯಿತು. ಈ ಚಿತ್ರದಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ಕೆಲವು ದೃಶ್ಯಗಳಿದ್ದವು. ಆದರೆ ಅವ್ಯಾವುದೂ ಅಥೆಂಟಿಕ್ ಎನ್ನಿಸುವಂತಿರಲಿಲ್ಲ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಹಾಲಾಡಿಯಲ್ಲಿ ಹಾರುವ ಓತಿ