ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮನೆಯೊಳಗೆ ಮನೆಯೊಡೆಯರಿಲ್ಲ

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

ಮನೆಯೊಳಗೆ ಮನೆಯೊಡೆಯರಿಲ್ಲ
ಏನೂ ಹೇಳುವ ಹಾಗೂ ಇಲ್ಲ!

ತೊಟ್ಟಿಯಲಿ ತಟ್ಟೆಗಳು ಬುಟ್ಟಿಯಲಿ ಹಸಿಕಸ
ಬಿಂಜಲು ತಲೆಯ ಸವರುವುದು
ಇಡೀ ವಾರದ ಬಟ್ಟೆ ತೊಳೆಯದೆ ಬಿದ್ದಿದೆ
ವಾಸನೆಯೆ ಎಲ್ಲ ಹೇಳುವುದು

ಗಂಡಹೆಂಡಿರು ಬೇಗ ಎದ್ದು ಹೊರಡುವರು
ಬರುವಾಗ ಸಂಜೆಯಾಗುವುದು
ರಜೆಗಳಲಿ ಸುತ್ತಾಡಿ ಬರುವರಲ್ಲಿಲ್ಲಿ
ವರುಷಗಳು ಕಳೆದುಹೋಗುವವು

ಕಷ್ಟಗಳ ನಡುವೆಯೇ ಇಷ್ಟಾರ್ಥ ಆಗಾಗ
ಫಲಿಸಿತ್ತು ಬಡಬಾಳಿನಲ್ಲಿ
ಮನೆ ಹೊರಗೆ ದುಡಿದದ್ದು ಮನೆ ಕಟ್ಟಲೆಂದು
ಕನಸು ಅರಳಿತು ಕೆಸರಿನಲ್ಲಿ

ಹುಟ್ಟಿ ಬೆಳೆದರು ಮಕ್ಕಳಿಕ್ಕಟ್ಟಿನಲ್ಲೆ
ಇಂದವರು ದೇಶದಲ್ಲಿಲ್ಲ
ಹಿರಿಯ ದಂಪತಿ ನಕ್ಕು ಹೇಳುವರು – ಈಗಲೂ
ಮನೆಯೊಳಗೆ ಮನೆಯೊಡೆಯರಿಲ್ಲ!