ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಲೆನಾಡಿಂದ ಬಂದ ಒಂದು ಹೋರಾಟದ ಕತೆ

ಒಂದು ವ್ಯಕ್ತಿ, ನಿಲುಮೆಗಳು, ಸಿದ್ಧಾಂತಗಳು, ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ತರ್ಕಕ್ಕೆ ಸವಾಲಾಗಿ, ಕಾಲ ಪ್ರವಾಹದಲ್ಲಿ ಮಿಳಿತಗೊಂಡು ಸೇರಿ ಹೋಗುತ್ತವೆ.. .....ಹೀಗೊಬ್ಬ, ತನ್ನ ಸುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲ , ಇಂದಿಲ್ಲದ ಜೀವ ಮಹೇಂದ್ರ ಕುಮಾರ್ ರ ಬಗ್ಗೆ ಲೇಖಕ ವಿಶ್ವಾಸ್ ಭಾರದ್ವಾಜ್ ಕಣ್ಣಿಗೆ ಕಟ್ಟುವಂತೆ, ಮನವ ಮುಟ್ಟುವಂತೆ ಚಿತ್ರಿಸಿದ್ದು ಹೀಗೆ..
ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ಉತ್ತುಂಗಕ್ಕೇರಿದಷ್ಟೇ ವೇಗವಾಗಿ ಪಾತಾಳ ಸೇರಿದರೂ ಮತ್ತೆ ಎದ್ದು ನಿಲ್ಲುವ ಪ್ರಯತ್ನದಲ್ಲಿದ್ದರು; ಆದರೆ ವಿಧಿ? ಮಹೇಂದ್ರ ಕುಮಾರ್ ಎನ್ನುವ ಅಗ್ನಿದಿವ್ಯ ಪ್ರಜ್ವಲಿಸಿ ಉರಿದು ಬೂದಿಯಾದ ಕಥೆ:

ವಿಶ್ವಾಸ್ ಭಾರದ್ವಾಜ್, ಲೇಖಕ, ಪತ್ರಕರ್ತ

ಸಿಡಿಲು ಬಡಿದಂತೆ ಬೆಂಕಿಯುಗುಳುವ ಮಾತುಗಳನ್ನಾಡುತ್ತಿದ್ದ, ಹಿಂದುತ್ವದ ಉಳಿವಿಗಾಗಿ ತಲೆ ಕೊಡಲೂ ಬದ್ಧ, ತಲೆ ತೆಗೆಯಲೂ ಸಿದ್ಧ ಎನ್ನುತ್ತಿದ್ದ ಮಲೆನಾಡಿನ ಕೆಂಪು ಟೊಮ್ಯಾಟೋ ಹಣ್ಣಿನಂತಹ ಯುವಕನ ಹೆಸರು ಮಹೇಂದ್ರ ಕುಮಾರ್. ಪ್ರಾಯಶಃ ಮಹೇಂದ್ರ ಕುಮಾರ್ ರನ್ನು ಮೊದಲ ಬಾರಿಗೆ ನಾನು ನೋಡಿದ್ದು ನಾನು ಪ್ರೌಢಶಾಲೆ ಕಲಿಯುತ್ತಿದ್ದ ಸಂದರ್ಭದಲ್ಲಿ. ಆಗ ಮಹೇಂದ್ರ ಕುಮಾರ್, ಸಂಘ ಪರಿವಾರದ ಪೋಷಾಕಿನಲ್ಲಿದ್ದರು. ಮಹೇಂದ್ರ ಕುಮಾರ್ ಮಾತೆಂದರೆ ಗುಡುಗು, ಸಿಡಿಲು, ಧೋ ಎಂದು ಸುರಿಯುತ್ತಿದ್ದ ಕುಂಭದ್ರೋಣ ಮಳೆ. ನನ್ನೂರು ತ್ಯಾಗರ್ತಿಗೂ ಅವರು ಬಂದಿದ್ದರು. ಮಲೆನಾಡಿನ ಪ್ರತೀ ಹಳ್ಳಿಗಳಿಗೆ ಹೋಗುತ್ತಿದ್ದ ಮಹೇಂದ್ರ ಕುಮಾರ್, ಯುವಕರನ್ನು ಹಿಂದು ಧರ್ಮದ ಉಳಿವಿಗಾಗಿ ಜಾಗೃತಗೊಳಿಸುತ್ತಿದ್ದರು. ಒಂದು ಸಂಜೆ ವೇಳೆ, ತ್ಯಾಗರ್ತಿಯ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಗ್ರೌಂಡಿನಲ್ಲಿ ಯುವಕರನ್ನು ಸುತ್ತ ಕೂರಿಸಿಕೊಂಡು ಮಾತಾಡುತ್ತಿದ್ದ ಅವರನ್ನು ನಾನು ನೋಡಿದಾಗ ನನಗಿನ್ನೂ 14 ವರ್ಷ, 9 ನೇ ತರಗತಿ ಓದುತ್ತಿದ್ದೆ. ಅವರ ಜೊತೆಯಲ್ಲಿ ಸಾಗರ ಭಜರಂಗದಳದ ತಾಲೂಕು ಸಂಚಾಲಕ ಡಿ.ವಿ ಸುಧೀಂದ್ರ ಇದ್ದರು ಎನ್ನುವ ನೆನಪು. ನಂತರದ ದಿನಗಳಲ್ಲಿ ಸುಧೀಂದ್ರ ಬಿಜೆಪಿ ಹೊಕ್ಕು ನಗರಸಭೆಯ ಕೌನ್ಸಲರ್ ಸಹ ಆದರು.

ಅಪ್ಪಟ ಮಲೆನಾಡಿನ ಕೊಪ್ಪದ ಮೂಲದವರಾದ ಮಹೇಂದ್ರ ಕುಮಾರ್, ಆಗಿನ್ನೂ ಕಣ್ಣು ಬಿಡುತ್ತಿದ್ದ ಭಜರಂಗದಳ ಎನ್ನುವ ಹಿಂದೂ ಧರ್ಮ ಜಾಗೃತಿ ಮತ್ತು ರಕ್ಷಕ ಸಂಘಟನೆಯ ಮನೆ ಹೊಕ್ಕಿದ್ದರು. ಕೆಲವೇ ಕಾಲದಲ್ಲಿ ಭಜರಂಗದಳ ಮತ್ತು ಮಹೇಂದ್ರ ಕುಮಾರ್ ಎರಡೂ ರಾಜ್ಯಾದ್ಯಂತ ಪ್ರಸಿದ್ಧಿ ಪಡೆಯಿತು. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ದತ್ತಪೀಠ ವಿವಾದ ಭುಗಿಲೆದ್ದ ಸಂದರ್ಭದಲ್ಲಿ, ಶೋಭಾಯಾತ್ರೆಯ ನೇತೃತ್ವ ವಹಿಸಿ, ಯುವಕರಿಗೆಲ್ಲಾ ಕೇಸರಿ ವಸ್ತ್ರ ತೊಡಿಸಿ, ಮಾಲೆ ಹಾಕಿಸಿದ್ದರು ಮಹೇಂದ್ರ ಕುಮಾರ್. ಮೊದಲು ಭಜರಂಗದಳದಲ್ಲಿದ್ದ ನಂತರ ಶ್ರೀರಾಮ ಸೇನೆ ಎಂಬ ಪ್ರತ್ಯೇಕ ಹಿಂದೂ ಸಂಘಟನೆ ಹುಟ್ಟುಹಾಕಿದ ಪ್ರಮೋದ್ ಮುತಾಲಿಕ್ ಮಹೇಂದ್ರ ಕುಮಾರ್‍ಗೆ ಗುರುವಾಗಿದ್ದವರು. ಮಹೇಂದ್ರ ಕುಮಾರ್‍ರನ್ನು ಭಜರಂಗದಳಕ್ಕೆ ಕರೆತಂದವರೇ ಮುತಾಲಿಕ್. ಈಗಿನ ಕಾರ್ಕಳ ಎಂಎಲ್‍ಎ ಸುನಿಲ್ ಕುಮಾರ್, ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಕೂಡಾ ಹಿಂದೂ ಜಾಗೃತ ಸೇನೆಯಲ್ಲೇ ಇದ್ದರಾದರೂ ರಾಜ್ಯಾದ್ಯಂತ ಮಿಂಚಿನ ಸಂಚಾರ ಮಾಡಿ ದೊಡ್ಡ ಹೆಸರು ಗಳಿಸಿಕೊಂಡಿದ್ದವರು ಮಹೇಂದ್ರ ಕುಮಾರ್. ಆಗ ಅವರಿಗಿದ್ದಷ್ಟು ಹೆಸರು ಖ್ಯಾತಿ ಚಿಕ್ಕಮಗಳೂರಿನ ಸಂಜಾತ ಸಿಟಿ ರವಿಯವರಿಗೂ ಇರಲಿಲ್ಲ.

ದತ್ತಪೀಠದ ಅದ್ಧೂರಿ ಶೋಭಾಯಾತ್ರೆ, ಗಣೇಶ ಚತುರ್ಥಿ ಮೆರವಣಿಗೆ, ಶಿವಾಜಿ ಜಯಂತಿ, ವಿರಾಟ್ ಹಿಂದೂ ಮಹೋತ್ಸವ ಮುಂತಾದ ಹತ್ತಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸಿ ಜನಸಂಘಟನೆ ಮಾಡುತ್ತಿದ್ದ ಅವರಿಗೆ ಕ್ಷಿಪ್ರಗತಿಯಲ್ಲಿ ಹೆಸರು ಬಂದಿತ್ತು. ಹಳೆಯದೊಂದು ಅಂಬಾಸಡರ್ ಕಾರಿನಲ್ಲಿ ಕೇಸರಿ ಜುಬ್ಬಾತೊಟ್ಟ ಮಹೇಂದ್ರ ಕುಮಾರ್ ಎಲ್ಲೇ ಬಂದಿಳಿದರೂ ಸರಿರಾತ್ರಿಯಲ್ಲಾದರೂ ನೂರಾರು ಜನ ಸೇರುತ್ತಿದ್ದರು. ಕೊರಳು ತುಂಬಾ ಹಾರ, ಬಾಯಿ ತುಂಬಾ ಅಣ್ಣಾ ಅಣ್ಣಾ. ಖ್ಯಾತಿ ಮತ್ತು ವಿವಾದ ಎರಡನ್ನೂ ಸೃಷ್ಟಿಸಿ ಉತ್ತುಂಗದಲ್ಲಿದ್ದ ಮಹೇಂದ್ರ ಕುಮಾರ್, ಸಂಘಪರಿವಾರದ ಹೊಸ್ತಿಲು ದಾಟಿದ್ದು ಅಷ್ಟು ಸುಲಭದ ನಿರ್ಣಯವಾಗಿರಲಿಲ್ಲ. ಅವರಿನ್ನೂ ಹಿಂದೂ ಸಂಘಟನೆಯಲ್ಲೇ ಇದ್ದಿದ್ದರೆ ಇವತ್ತು ನಳಿನ್ ಕುಮಾರ್‍ರನ್ನು ಮೀರಿದ ಅಧಿಕಾರ ಹುದ್ದೆ ಪಡೆದುಕೊಳ್ಳುತ್ತಿದ್ದರು. ಸಿಟಿ ರವಿಯವರನ್ನು ಮೀರಿದ ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದರು; ಗೃಹಸಚಿವರಾಗಿದ್ದರೂ ಅಚ್ಚರಿಯೇನಲ್ಲ. ಕನಿಷ್ಟ ಸುನಿಲ್ ಕುಮಾರ್‍ರಂತೆ ಒಂದು ವಿಧಾನಸಭೆಗೆ ಶಾಸಕರಾಗಿಯಾದರೂ ಆಯ್ಕೆಯಾಗಿರುತ್ತಿದ್ದರು.
ಇಂತಹ ಒಂದು ಸಂಕ್ರಮಣ ಕಾಲದಲ್ಲೇ ಭ್ರಮನಿರಸನಗೊಂಡು ಎಲ್ಲದರಿಂದ ವಿಮುಕ್ತರಾದ ಮಹೇಂದ್ರ ಕುಮಾರ್ ಭಜರಂಗದಳ ತೊರೆದರು. ಅದು 2008ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಬಳಿಯ ಎಡೋರೇಷನ್ ಮಾನೆಸ್ಟ್ರಿಯಲ್ಲಿ ಮತಾಂತರ ವಿರೋಧಿಸಿ ನಡೆಸಿದ್ದ ದಾಳಿ ಪ್ರಕರಣ. ದಾಳಿಯಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಆಗ ಭಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಸೆಪ್ಟೆಂಬರ್ 15ರಂದು ಮಂಗಳೂರಿನ ವುಡ್‍ಲ್ಯಾಂಡ್ಸ್ ಹೋಟೆಲಿನಲ್ಲಿ ಪ್ರೆಸ್ ಮೀಟ್ ನಡೆಸಿ ಮತಾಂತರವನ್ನು ಖಂಡಿಸಿ ಚರ್ಚ್ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. ನಂತರ ಇದೇ ಕಾರಣಕ್ಕೆ ಮಹೇಂದ್ರ ಕುಮಾರ್ ಬಂಧನವೂ ಆಗಿತ್ತು. ಆದರೆ ಮಂಗಳೂರಿನ ಏನೂ ಅರಿಯದ ಬಿಲ್ಲವರು, ಮೀನುಗಾರರ ಹುಡುಗರನ್ನೂ ಬಂಧಿಸಿ ಜೈಲಿಗಟ್ಟಿದ್ದನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಪರಿವಾರದ ಪ್ರಮುಖರ ಜೊತೆ ನಿರಂತರ ವಾಗ್ವಾದ ನಡೆಸಿದ್ದರು.

ಪರಿವಾರದಲ್ಲೂ ದೋಷ ಕಂಡ ಅವರು ಕ್ರಮೇಣ ಪರಿವಾರ ತೊರೆಯಲು ಮನಸು ಮಾಡಿದರು. ಹೀಗೆಲ್ಲಾ ಆದ ನಂತರ ಒಂದು ದಿನ ಏಕಾಏಕಿ ಭಜರಂಗದಳ ತೊರೆದು ಮುತಾಲಿಕ್ಕರ ಶ್ರೀರಾಮಸೇನೆಗೆ ಸೇರ್ಪಡೆಗೊಂಡರು. ಕೆಲದಿನಗಳ ಬಳಿಕ ಶ್ರೀರಾಮಸೇನೆಯಿಂದಲೂ ಹೊರಬಂದು ಸಂಘಪರಿವಾರದ ಸಂಬಂಧವನ್ನು ಶಾಶ್ವತವಾಗಿ ದೂರ ಮಾಡಿಕೊಂಡರು. ಚರ್ಚ್ ದಾಳಿ ಪ್ರಕರಣದಲ್ಲಿ ಕಳೆದ ವರ್ಷವಷ್ಟೇ ಮಹೇಂದ್ರ ಕುಮಾರ್‍ರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

ಸಮ ಸಮಾಜವನ್ನು ಕಟ್ಟಬೇಕು, ಕಟ್ಟಕಡೆಯ ವರ್ಗಗಳೂ ಸಮಾಜದ ಮುನ್ನೆಲೆಗೆ ಬರಬೇಕು, ದಲಿತರು ಅಹಿಂದರೂ ಅಭಿವೃದ್ಧಿಯಾಗಬೇಕು, ಸಮಾಜದಲ್ಲಿ ಶಾಂತಿ ನೆಲೆಸಬೇಕು ಹೀಗೆಲ್ಲಾ ಅಪಾರ ಕನಸುಕಂಡಿದ್ದ ಮಹೇಂದ್ರ ಕುಮಾರ್ ಸುಮ್ಮನೆ ಕೂರಲಿಲ್ಲ. ಒಂದಷ್ಟು ಕಾಲ ಕುಮಾರಸ್ವಾಮಿಯವರ ಜೊತೆ ಸೇರಿ ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಓಡಾಡಿದರು. ನನಗೆ ನೆನಪಿರುವಂತೆ ಆಗ ಅವರು ಕೆಲಕಾಲ ಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ಚಾನೆಲ್ ನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ನಂತರ ಅಲ್ಲಿಯೂ ನಿರಾಶರಾಗಿ ಅಲ್ಲಿಂದಲೂ ಹೊರಬಂದರು. ಆನಂತರದ ದಿನಗಳಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಸಂಘಪರಿವಾರದಲ್ಲಿ ಬ್ರಾಹ್ಮಣ್ಯಶಾಹಿ ವ್ಯವಸ್ಥೆಯ ಲೋಪದೋಷಗಳನ್ನು ನೇರವಾಗಿ ಖಂಡಿಸಿ ಮಾತನಾಡುತ್ತಿದ್ದರು. ಪ್ರಗತಿಪರರ ಜೊತೆ ಸೇರಿ ಅವರ ಹಲವು ಕಾರ್ಯಕ್ರಮಗಳ ವೇದಿಕೆ ಹಂಚಿಕೊಂಡು ಭಾಷಣ ಮಾಡುತ್ತಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಕೂಡಾ ಗಟ್ಟಿಯಾಗಿ ಧ್ವನಿಎತ್ತಿ ಮಾತನಾಡುತ್ತಿದ್ದರು.

ನಮ್ಮ ಧ್ವನಿ ಎನ್ನುವ ಸಂಘಟನೆಯನ್ನು ಕಟ್ಟುವ ಮೂಲಕ ಪ್ರಬಲ ಜನಗಳ ಮುಖ್ಯ ಭೂಮಿಕೆಯ ವಿರೋಧ ಪಕ್ಷವನ್ನು ತಯಾರಿಸುವ ಯೋಜನೆ ಅವರಲ್ಲಿತ್ತು. ತಮ್ಮದೇ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ನಮ್ಮ ಧ್ವನಿ ಕಾರ್ಯಕ್ರಮದಲ್ಲಿ ಸಮಾಜದ ಸ್ಥಿತ್ಯಂತರ ಮತ್ತು ಸಂಘರ್ಷಗಳನ್ನು, ಜ್ವಲಂತ ಸಮಸ್ಯೆಗಳನ್ನು ಅವಲೋಕಿಸುತ್ತಿದ್ದರು. ಪ್ರಭುತ್ವದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿ ಘಟನೆಗಳ ಪೂರ್ವಾಪರ ಅವಲೋಕಿಸುತ್ತಿದ್ದರು. ಇತ್ತೀಚೆಗೆ ಹೆಚ್ಚು ಅಧ್ಯಯನಶೀಲರೂ ಆಗಿದ್ದ ಮಹೇಂದ್ರ ಕುಮಾರ್ ಸಮಾಜದ ದುರ್ಬಲ ವರ್ಗದವರ ಮೇಲೆ ಅನ್ಯಾಯವಾದಾಗಲೆಲ್ಲಾ ತೀವ್ರವಾಗಿ ನೊಂದುಕೊಳ್ಳುತ್ತಿದ್ದರು. ಅವರ ಮನಸಿನ ಮೂಲೆಯಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸುವ ಮಹತ್ವಾಕಾಂಕ್ಷೆಯೂ ಇತ್ತು. ಮಹೇಂದ್ರ ಕುಮಾರ್ ಯಾವ ವಿಷವನ್ನೂ ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಧಿಸುತ್ತಿರಲಿಲ್ಲ. ಅವರ ಸೈದ್ಧಾಂತಿಕ ಎದುರಾಳಿಗಳೂ ಅವರೊಂದಿಗೆ ಸಿದ್ಧಾಂತಗಳಾಚೆಗೆ ಸ್ನೇಹದಿಂದಿರಲು ಸಾಧ್ಯವಿತ್ತು. ಕೆಲ ಕಾಲ ಮುಂಬೈನಲ್ಲಿದ್ದ ಅವರು ಅಲ್ಲಿನ ಸ್ನೇಹಿತರ ಕಾಂಟ್ಯಾಕ್ಟ್ ನಂಬರ್ ಸಹ ಇಟ್ಟುಕೊಂಡಿದ್ದರು. ಯಾವ ಯಡಿಯೂರಪ್ಪನವರು ಮಹೇಂದ್ರ ಕುಮಾರ್ ಅವರನ್ನು ಜೈಲಿಗೆ ಕಳಿಸಿದ್ದರೋ ಅದೇ ಯಡಿಯೂರಪ್ಪನವರ ಆಡಳಿತದ ಒಳ್ಳೆಯ ಕೆಲಸಗಳನ್ನು ಮಹೇಂದ್ರ ಕುಮಾರ್ ಮುಕ್ತವಾಗಿ ಪೂರ್ವಾಗ್ರಹಗಳಿಲ್ಲದೇ ಮೆಚ್ಚಿಕೊಳ್ಳುತ್ತಿದ್ದರು. ಸಂಘ ತೊರೆದರೂ ವಿದ್ಯಾನಂದ ಶಣೈ, ನ. ಕೃಷ್ಣಪ್ಪ ಮುಂತಾದವರನ್ನು ನಿಜವಾದ ತಪಸ್ವಿಗಳು ಎಂದು ಗೌರವಿಸುತ್ತಿದ್ದರು. ಅವರೊಂದಿಗೆ ಯಾರೇ ಜಗಳವಾಡಿದರೂ ಅದನ್ನು ಮನಸಿನಲ್ಲಿಟ್ಟುಕೊಳ್ಳದೇ ಮತ್ತೆ ತಾವೇ ಮಾತಾಡಿಸುವ ದೊಡ್ಡ ಗುಣ ಅವರಲ್ಲಿತ್ತು.

ನಾನು ಸುದ್ದಿ ವಾಹಿನಿಯೊಂದರಲ್ಲಿ ಎಡಿಟೋರಿಯಲ್ ಔಟ್‍ಪುಟ್ ಜವಾಬ್ದಾರಿ ಹೊತ್ತ ಸಂದರ್ಭದಲ್ಲಿ ಹಲವು ಡಿಬೆಟ್‍ಗಳಿಗೆ ಮಹೇಂದ್ರ ಕುಮಾರ್‍ರನ್ನು ಕರೆಸುತ್ತಿದ್ದೆ. ಕಾರ್ಯಕ್ರಮ ಆರಂಭವಾಗುವ ಅರ್ಧ ಗಂಟೆ ಮೊದಲೇ ಹಾಜರಿರುತ್ತಿದ್ದ ಅವರು, ಕಾರ್ಯಕ್ರಮ ಮುಗಿದ ನಂತರವೂ ಅರ್ಧಗಂಟೆ ಕುಳಿತು ಮುಕ್ತವಾಗಿ ಲೋಕಾಭಿರಾಮ ಹರಟುತ್ತಿದ್ದರು. ನಾನು ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಬಂದ ನಂತರ ಮಹೇಂದ್ರ ಕುಮಾರ್‍ರನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿತ್ತು. ನಾನು ಕೆಲಸ ಮಾಡಿದ ಮೂರು ಚಾನೆಲ್‍ಗಳಲ್ಲೂ ಮಹೇಂದ್ರ ಕುಮಾರ್ ಪ್ಯಾನಲಿಸ್ಟ್ ಆಗಿ ಬರುತ್ತಿದ್ದರಿಂದ ಸಾಕಷ್ಟು ಹತ್ತಿರದ ಪರಿಚಯ-ಒಡನಾಟಗಳೂ ಇದ್ದವು. ಎರಡು ವರ್ಷಗಳ ಹಿಂದೆ ಅವರ ಫೋನ್ ನಂಬರ್ ಡಿಲೀಟ್ ಆಗಿತ್ತು. ಆಗ ಕೊಡಗಿನಲ್ಲಿ ಜಲಪ್ರವಾಹದ ಸಂಕಟ. ನಾವು ಒಂದಷ್ಟು ಜನ ಕೊಡಗಿನ ನಿರಾಶ್ರಿತ ಮಂದಿಯ ಬದುಕು ಕಟ್ಟಿಕೊಳ್ಳಲು ನೆರವಾಗಲು ರಂಗಸಪ್ತಾಹ ನಡೆಸಿದ್ದೆವು. ಆ ಸಂದರ್ಭದಲ್ಲಿ ಒಂದೆರಡು ಸಲ ಮಹೇಂದ್ರ ಕುಮಾರ್ ಬಂದಿದ್ದರು. ಅವರ ನಂಬರ್ ಡಿಲೀಟ್ ಆದ ವಿಷಯ ಹೇಳಿದ್ದೆ. ‘ನಾನು ಭಜರಂಗದಳದಲ್ಲೇ ಇದ್ದಿದ್ದರೆ ನಂಬರ್ ಡಿಲೀಟ್ ಆಗುತ್ತಿರಲಿಲ್ಲ, ಈಗ ಪ್ರಗತಿಪರನಾಗಿದ್ದೇನೆ ಇದು ಸಹಜ’ ಎಂದು ತಮಾಷೆ ಮಾಡಿ ನಕ್ಕಿದ್ದರು. ಅದು ಅವರನ್ನು ಕಾಡಿದ್ದ ವಿಷಾದವೂ ಆಗಿತ್ತು. ಹಿಂದೂ ಪರ ಸಂಘಟನೆಯಿಂದ ಹೊರಬಿದ್ದ ಮೇಲೆ ಅವರ ಹಿಂದೆ ಮುಂದೆ ಸುತ್ತುತ್ತಿದ್ದವರೇ ವಾಚಾಮಗೋಚರ ಅವರನ್ನು ನಿಂದಿಸುತ್ತಿದ್ದರು. ಫೇಸ್‍ಬುಕ್‍ನಲ್ಲಿ ಅವರ ಮೇಲೆ ಧರ್ಮದ್ರೋಹಿ ಎನ್ನುವ ಆಪಾದನೆ ಹೊರೆಸಿ ಆತ್ಮಘಾತುಕ ಟೀಕೆಗಳನ್ನು ಮಾಡುತ್ತಿದ್ದರು. ಇನ್ನು ಅವರು ಹಿಂದೂ ಸಂಘಟನೆಯಿಂದ ಬಂದ ಕಾರಣದಿಂದಲೇ ಅನೇಕ ಪ್ರಗತಿಪರರೂ ಅವರನ್ನು ಸಂದೇಹದಿಂದ ನೋಡುತ್ತಿದ್ದರು. ಕಡೆಗೂ ಅವರು ಯಾರಿಗೂ ಅರ್ಥವಾಗಲೇ ಇಲ್ಲ. ಅವರಿಗೂ ಬೇಡವಾಗಿ, ಇವರಿಗೂ ಬೇಡವಾಗಿ ಒಂಟಿಯಾಗೇ ಉಳಿದರು.

ಇತ್ತೀಚೆಗೆ ಎಲ್ಲೋ ಸಿಕ್ಕವರು ಆತ್ಮಚರಿತ್ರೆ ಬರೆಯುತ್ತಿದ್ದೇನೆ ಎಂದಿದ್ದರು, ನಾನು ಬೇಡ ಸರ್ ಈಗ ಜನ ಪುಸ್ತಕ ಓದುವುದನ್ನು ಕಡಿಮೆ ಮಾಡಿದ್ದಾರೆ, ನೀವು ವೀಡಿಯೋ ಬಯೋಗ್ರಫಿ ಮಾಡಿ. ನಿಮ್ಮ ಬದುಕಿನ ಮಹತ್ವದ ಸಂಗತಿಗಳನ್ನು ನೋಟ್ಸ್ ಮಾಡಿಕೊಂಡು ‘ನಿಮ್ಮ ಧ್ವನಿ’ ಕಾರ್ಯಕ್ರಮದಲ್ಲಿ ಸರಣಿ ವೀಡಿಯೋ ಮಾಡಿ ಎಂದಿದ್ದೆ. ಆ ಸಲಹೆ ಅವರಿಗೆ ಹಿಡಿಸಿತ್ತೇನೋ. ಆದರೆ ದುರಂತ, ಆತ್ಮಚರಿತ್ರೆಯನ್ನು ಪೂರ್ಣಗೊಳಿಸದೇ 46ನೇ ವಯಸ್ಸಿಗೆ ಬದುಕನ್ನೇ ಮುಗಿಸಿಬಿಟ್ಟರು. ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಇತ್ತೋ ಏನೋ, ಹಾಗಾಗಿಯೇ ಆತ್ಮಚರಿತ್ರೆ ಬರೆಯುವ ನಿರ್ಧಾರ ಮಾಡಿದ್ದರೇನೋ ಎಂದು ಈಗ ಅನ್ನಿಸುತ್ತಿದೆ. ಅದೇನೇ ಇರಲಿ, ಮಹೇಂದ್ರ ಕುಮಾರ್ ಕೊಪ್ಪ ಎನ್ನುವ ಅದಮ್ಯ ಉತ್ಸಾಹದ ಅಪರಿಮಿತ ಛಲದ ಹೋರಾಟಗಾರನೊಬ್ಬನ ಬದುಕು ಮುಕ್ತಾಯಗೊಂಡಿದೆ. ಸಮಾಜ ಕಟ್ಟುವ ಅವರ ಕನಸುಗಳು ಗತಿಯೇನು?