ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುನ್ನುಡಿ

ರಾಧಿಕಾ. ವಿ. ಗುಜ್ಜರ್
ಇತ್ತೀಚಿನ ಬರಹಗಳು: ರಾಧಿಕಾ. ವಿ. ಗುಜ್ಜರ್ (ಎಲ್ಲವನ್ನು ಓದಿ)

ನಾಲ್ಕು ತಿಂಗಳ ಹಿಂದೆ 14ನೆಯ ಜೂನ್ 2020 ರಂದು, ನನ್ನ ಪತಿಯವರು ದೈವಾಧೀನರಾದರು. ಇದು ಕೇವಲ ಒಂದು ತಿಂಗಳಲ್ಲಿ ಘಟಿಸಿದ ಅನಿರೀಕ್ಷಿತ ಆಘಾತವಾಗಿತ್ತು. ಬದುಕಿನ ಈ ಅನಿರೀಕ್ಷಿತ ತಿರುವು ಹಾಗೂ ನನ್ನ ಸಂವೇದನಾಶೀಲ ಪ್ರಯಾಣವನ್ನು ಇಲ್ಲಿ ಬರಹವಾಗಿ ದಾಖಲಿಸಿದ್ದೇನೆ. ಜೀವನ ಸಂಗಾತಿ ಮರೆಯಾದ ನಂತರ, ಆ ಖಾಲಿತನ ಎಂದೂ ಹೋಗದು. ಆದರೆ ಬದುಕನ್ನು ಪ್ರೀತಿಸುವುದನ್ನು ಎಂದೂ ಬಿಡಬಾರದು.

ಈ ಬರಹವನ್ನು ನಾನು ಪೂರ್ಣಗೊಳಿಸಿ ಮೇಜಿಗೆ ಇಡುತ್ತೇನೆ ಎಂದು ಊಹಿಸಿರಲಿಲ್ಲ. ಬೇಡವಾದ ನೆನಪುಗಳನ್ನು ಕೆದಕುವುದು ಯಾರಿಗೆ ತಾನೇ ಬೇಕು. ಆದರೆ ಬರೆದ ನಂತರ ನಿಜಕ್ಕೂ ನಿರಾಳವೆನಿಸುತ್ತಿದೆ. ಮನಸ್ಸಿನಲ್ಲಿ ಹೆಪ್ಪುಗಟ್ಟಿದ್ದ ನೋವೆಲ್ಲಾ, ಪುಟಗಳಿಗೆ ಹರಿದು ಹಗುರವಾಗಿದೆ.

ಮರಣವೆಂದರೆ ಮನದಿಂದ ಮರೆಯಾಗುವುದಲ್ಲ

2020 ಇದೇ ಮೇ 11ರ ಬೆಳಿಗ್ಗೆ, ಎಂದಿನಂತೆ ಎಲ್ಲಾ ದಿನಪತ್ರಿಕೆಗಳನ್ನೂ ಗುಡ್ಡೆ ಹಾಕಿಕೊಂಡು ಮನೆಯ ಅಂಗಳದ ಕಲ್ಲಿನ ಕಟ್ಟೆಗೆ ಕುಳಿತು ಚಹಾ ಹೀರುತ್ತಾ ಓದುತ್ತಿದ್ದ ಇವರೊಡನೆ ಕುಳಿತುಕೊಳ್ಳಲು ಹೊರ ಬಂದೆ. ಅದೇ ಸಮಯಕ್ಕೆ ನನ್ನ ಪತಿರಾಯ ರಾಮನ ಜೋಡಿಜೀವ, ಸಹೋದ್ಯೋಗಿ ಲಕ್ಷ್ಮಣ ಬಂದರು. ಕರೋನದ ಕಾರಣದಿಂದಾಗಿ ಮನೆಯೊಳಗೆ ಬನ್ನಿ ಎಂದು ಕರೆಯುವಂತೆಯೂ ಇರಲಿಲ್ಲ. ಆಫೀಸ್ ವಿಷಯವಾಗಿ ಅವಶ್ಯಕ ರಿಜಿಸ್ಟರ್ ಗಾಗೀ ಬಂದವರು, ಮಾತನಾಡುತ್ತಾ, ಸರ್ ನಿಮ್ಮ ಮುಖ ಮತ್ತು ಕೈಗಳು ಹಳದಿ ಎನಿಸುತ್ತಿದೆ, ಹಾಗೆ ಕಣ್ಣು ತೋರಿಸಿ ಎಂದು ಕೇಳಿ, ಇವರು ಕಣ್ಣಗಲಿಸಿ ತೋರಿಸಿದಾಗ, ಸರ್ ಒಮ್ಮೆ ಡಾಕ್ಟರ್ ಬಳಿ ಹೋಗಿಬನ್ನಿ. ಇದು ಜಾಂಡೀಸ್ ಲಕ್ಷಣಗಳು ಅನ್ನಿಸುತ್ತೆ ಎಂದರು. ದಿನವೂ ನೋಡುತ್ತಿದ್ದ ನನಗೆ ಈ ವ್ಯತ್ಯಾಸ ಗೊತ್ತಾಗಿರಲಿಲ್ಲ. ಎಳೆಬಿಸಿಲಿಗೆ ಹತ್ತಿರ ನಿಂತ ಇವರನ್ನು ಒಂದು ವಾರದ ನಂತರ ನೋಡಿದ ಸಹೋದ್ಯೋಗಿಗೆ ಇದು ತಕ್ಷಣ ಗಮನಕ್ಕೆ ಬಂದಿತ್ತು.

ಸರಿ ಎಂದಿದ್ದೇ, ನಮ್ಮ ಮನೆಯ ಬಳಿ ಇರುವ ಫ್ಯಾಮಿಲಿ ಡಾಕ್ಟರ್ ಗೆ ಫೋನಾಯಿಸಿ, ವಿಷಯ ತಿಳಿಸಿದೆ. ಅವರು ತಕ್ಷಣ ಬಂದು ರಕ್ತಪರೀಕ್ಷೆಗೆ ಚೀಟಿ ತೆಗೆದುಕೊಂಡು ಹೋಗಿ, ಹಾಗೆ ನಾನೂ ಸಹಾ ಒಮ್ಮೆ ಪರೀಕ್ಷಿಸಿ ನೋಡುತ್ತೇನೆ ಎನ್ನಲು, ಇಬ್ಬರೂ ಅವರನ್ನು ಭೇಟಿಯಾದೆವು. ವೈದ್ಯರು ತೀರಾ ಸ್ವಲ್ಪ ಹಳದಿ ಛಾಯೆ ಇದೆ ಎಂದವರೇ, ಕೆಲವು ವಿವರಗಳನ್ನು ಕೇಳಿ ತಿಳಿದು ರಕ್ತಪರೀಕ್ಷೆಗೆ ಚೀಟಿ ಕೊಟ್ಟರು.

ಅಲ್ಲಿಂದ ಶುರುವಾಯಿತು ನನ್ನ ಮತ್ತು ನನ್ನ ಪತಿಯವರ ಆಸ್ಪತ್ರೆಯ ಪಯಣ. ರಕ್ತ ಪರೀಕ್ಷೆಯ ವರದಿಯಲ್ಲಿ ಇದ್ದ ಯಕೃತ್ತಿನ ತೊಂದರೆಯಿಂದ ಇರಬೇಕಾದ ಯಾವ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ವೈದ್ಯರಿಗೆ ಸವಾಲಾಗಿತ್ತು, ಅವರ ಮೇಜಿನ ಮೇಲಿದ್ದ Reports!!.. ಇದರ ನಂತರ, ಸ್ಕ್ಯಾನಿಂಗ್ ನಲ್ಲಿ ಬಂದ ವರದಿ ಬಹಳ ತೀವ್ರವಿತ್ತು. ಶೇಕಡಾ 30 ಭಾಗ ಯಕೃತ್ತು ರಕ್ತಸ್ರಾವದಿಂದ ಹಾಳಾಗಿತ್ತು. ಅತಿಯಾದ ತಾಮ್ರ ಶೇಖರಣೆಯೇ ಇದಕ್ಕೆ ಕಾರಣವಾಗಿತ್ತು. ಇದು, ಹೊರಗಿನ ಯಾವುದೇ ಆಹಾರ ಅಥವಾ ಔಷಧಿಯ ಪರಿಣಾಮದಿಂದ ಆಗಿರದೆ, ದೇಹದ ಚಟುವಟಿಕೆ ತನ್ನನ್ನು ತಾನೇ ಹಾನಿಗೊಳಿಸಿಕೊಂಡಿತ್ತು. ಬಹಳ ಅಪರೂಪದ ಖಾಯಿಲೆ ಎಂದಾಗಿತ್ತು. ಕರೋನದಿಂದಾಗಿ ಯಾರು ಸಹಾ ಆಸ್ಪತ್ರೆಗೆ ಬರುವಂತೆ ಇರಲಿಲ್ಲ. ವಾರ್ಡ್ ಗಳೂ ಸಹಾ ಜನರಲ್ ಮಾತ್ರ. ಎಲ್ಲರೂ ಕರೆ ಮಾಡಿ ಧೈರ್ಯ ನೀಡುತ್ತಿದ್ದರು.

ನಾವು ಆಸ್ಪತ್ರೆಗೆ ಹೋಗಿ ದಾಖಲಾದ ಮರುದಿನ, ಎಂಡೋಸ್ಕೋಪಿ ವರದಿ ಬಂದಿತು. ಇವರನ್ನು ಪರೀಕ್ಷಿಸುತ್ತಿದ್ದ ಐದು ಜನ ವೈದ್ಯರ ತಂಡ, ತಮ್ಮಲ್ಲೇ ಕೆಲವು ಚರ್ಚೆಗಳನ್ನು ಮುಗಿಸಿಕೊಂಡು, ಒಂದು ಅಂತಿಮ ನಿರ್ಧಾರ ಕೈಗೊಂಡು, ನನ್ನನ್ನು ಬರಹೇಳಿದರು. ನಿಮ್ಮನ್ನು ಬಿಟ್ಟು ಯಾರಾದರೂ ಹಿರಿಯರು ಅಥವಾ ಗಟ್ಟಿಗರು ಇದ್ದರೆ ಹೇಳಿಕಳಿಸಿ, ಕೆಲವು ಗಂಭೀರ ವಿಷಯಗಳು ಇವೆ ಎಂದರು. ಬರುವವರಾರು? ನನಗಂತೂ ನನ್ನ ಜೀವ ಇವರು, ಹೋಗಿದ್ದೆ. ಈ ಕರೋನ ಸಮಯದಲ್ಲಿ ಯಾರೂ, ಬರುವಂತೆಯೂ ಇರಲಿಲ್ಲ. ಕರೆಮಾಡಿ, ನನ್ನ ಕುಟುಂಬದವರಿಗೆ ತಿಳಿಸಿ, ನಾನೇ ವೈದ್ಯರ ತಂಡದ ಬಳಿ ಹೋದೆ. ನನ್ನನ್ನು ಕೂರಿಸಿಕೊಂಡ ಅವರು ಹೇಳಿದ್ದು.., ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ಪತಿಗೆ, ಈಗ ನಾವು ಪ್ರಾರಂಭಿಸುವ ಉಪಚಾರವು ಸ್ಟೆರಾಯ್ಡ್ ಎಂಬ ಔಷಧಗಳು. ಈಗಿರುವ ಇವರ ದೈಹಿಕ ಸ್ಥಿತಿಯಲ್ಲಿ, ಹೀಗೆ ಬಿಟ್ಟರೆ, ಕೆಲವೇ ವಾರಗಳಲ್ಲಿ ಕ್ಯಾನ್ಸರ್ ಆಗಿ ಪರಿವರ್ತಿಸುತ್ತದೆ, ಸ್ಟೆರಾಯ್ಡ್ ಒಂದೇ ಮಾರ್ಗ. ಇದೊಂದು ಔಷಧ ನಾಟಿದರೆ ಹೀಗೆಯೇ ನಿಧಾನ ಗುಣಮುಖರಾಗಿ, ಒಳ್ಳೆಯ ಕಟ್ಟು ನಿಟ್ಟು ಪಥ್ಯದೊಂದಿಗೆ ತಕ್ಕಮಟ್ಟಿಗೆ ಜೀವನ ನಡೆಸಬಹುದು ಎಂದರು.

ನಾನು ಕೆಲಕ್ಷಣಗಳಿಗಾಗಿ, ಕೇವಲ ಇವರ ಹಿತೈಷಿಯಾಗೇ ಯೋಚಿಸಿದೆ. ಔಷಧೋಪಚಾರ ಬೇಡ, ಬೇರೆ ಆಸ್ಪತ್ರೆಗೆ ಹೋಗುತ್ತೇನೆ, ಮತ್ತೆ ಓಡಾಡುತ್ತೇನೆ ಎಂದು ಭಂಡತನ ಮಾಡುವಂತೆ ಇಲ್ಲ. ಮನೆಯ ಹೊರಗೆ ಯಾರು ಹೋಗುತ್ತಿಲ್ಲ. ಕರೋನ ಕರೋನ… ಮುಗಿಯಲಿ ಎಂದು ಕಾಯಲು ನಿಂತರೆ, ಈಗಿರುವ ದೈಹಿಕ ಸ್ಥಿತಿಯಲ್ಲಿ, ಕ್ಯಾನ್ಸರ್ ಗೆ ತಿರುಗಿದರೆ, ನರಕ ಯಾತನೆ. ಅತ್ಯಂತ ಆರೋಗ್ಯವಂತ ಹೃದಯ, ಮೂತ್ರಪಿಂಡ ಹಾಗೂ ರಕ್ತವಿದ್ದ ಇವರಿಗೆ ಸ್ಟೆರಾಯ್ಡ್ ಔಷಧ ನಾಟಿದರೆ, ನಾವು ಅದೃಷ್ಟವಂತರು. ಬದುಕಿಸಿಕೊಳ್ಳಲು ಇರುವ ಯಾವ ಅವಕಾಶವನ್ನೂ ಬಿಡಲಾಗದು. ಇಲ್ಲವಾ, ಭಗವಂತ ಇಟ್ಟಂತೆ ಆಗಲಿ ಎಂದುಕೊಂಡೆ. ಔಷಧ ನಾಟದೇ ಇದ್ದರೆ, ಬರುವ ದಿನಗಳು ಏನಾಗುತ್ತದೆ, ಗೊತ್ತಿರಲಿಲ್ಲ.

ವೈದ್ಯರಿಗೆ ಉಪಚಾರ ಪ್ರಾರಂಭಿಸಲು ವಿನಂತಿಸಿ, ಹೊರಬಂದೆ. ಒಂದು…ಇವರು ಮೊದಲಿನಂತೆ ಆಗಲಿ, ಇಲ್ಲವಾ…ನೋವಿಲ್ಲದೆ, ಹತಾಷೆಗಳ ಅನುಭವಿಸದೆ ಮರಣಿಸಲಿ ಎಂದು ಭಗವಂತನ ಮೇಲೆ ಭಾರ ಹಾಕಿಬಿಟ್ಟೆ. ಇವರಿಗೂ, ಯಾವ ವಿಷಯವನ್ನೂ ಸಹಾ ನಾನಾಗಲಿ, ವೈದ್ಯರಾಗಲಿ ತಿಳಿಸಲಿಲ್ಲ. ಆತಂಕಕ್ಕೆ ರೋಗಿ ಗುರಿಯಾದರೆ, ಮತ್ತೆ ಔಷಧ ನಾಟದು.

8ನೆಯ ದಿನಕ್ಕೆ ಮನೆಗೆ ಬಂದೆವು. ಮೊದಲ ಹದಿನೈದು ದಿನ ಏನೂ ಬದಲಾವಣೆ ಇಲ್ಲದೆ, ಎಂದಿನಂತೆ ಇದ್ದರು. ನಂತರದ ಹದಿನೈದು ದಿನಗಳು ಅಕ್ಷರಶಃ ನಾನು ಹುಚ್ಚಿಯಾದೆ. ಮೂರನೆಯ ವಾರದ ರಕ್ತಪರೀಕ್ಷೆ ವರದಿ ಅತ್ಯಂತ ಆಘಾತಕಾರಿಯಾಗಿತ್ತು. ವೈದ್ಯರು ತೀರಾ ಮೌನವಹಿಸಿದರು. ತಾಮ್ರದ ಶೇಖರಣೆಯ ಪ್ರಮಾಣ ವಿಷಮವಾಗಿತ್ತು. ಇವರ ಆರೋಗ್ಯ ಕೈಚೆಲ್ಲಿತ್ತು. ದಿನವೂ, ಬೆಳಿಗ್ಗೆ.. ಸಂಜೆ.. ಪ್ರತೀ ಘಂಟೆ, ನಿಮಿಷ, ಇವರನ್ನೇ ನೋಡುವುದು, ಮತ್ತೆ ಏನೋ ಮನೆಯ ಕೆಲಸ ಮುಂದುವರೆಸುವುದು, ಹೀಗೇ, ಓಡುತ್ತಿತ್ತು ನನ್ನ ಆತಂಕ. ಅಷ್ಟು ಔಷಧಗಳ ಆಕ್ರಮಣವಾಗಿದ್ದರೂ, ಜಟ್ಟಿಯಂತೆ ದೃಢವಾಗಿದ್ದರು. ನಂಬಲು ಆಗದಂತೆ ದಿನವೂ ಸ್ನಾನ, ಪ್ರಾರ್ಥನೆ, ಸೇರಿದಷ್ಟು ಆಹಾರ, ಓದು… ಮಾಡುತ್ತಿದ್ದರು. ಸುಸ್ತು ಇತ್ತು, ಆದರೆ ಜಗ್ಗಿರಲಿಲ್ಲ. 28ನೆಯ ದಿನ ಸ್ವಲ್ಪ ಅಂಬಲಿ, ನೀರು ಅಷ್ಟೇ.. ನಿದ್ದೆ ನಿದ್ದೆ. 29ನೆಯ ದಿನ ಪೂರ್ಣ ನಿದ್ದೆ. ಇತ್ತ ಕಡೆ ಲಕ್ಷ್ಯವಿರಲಿಲ್ಲ. ಬಹುಶಃ ಕೋಮಾದ ಕಡೆ ವಾಲಿದ್ದರು. 30ನೆಯ ದಿನ ತೀರಾ ನಿಧಾನ ಉಸಿರಾಟ. ಯಕೃತ್ತಿನ ನೀರು, ಶ್ವಾಸಕೋಶಗಳಿಗೆ ತುಂಬಿ ಮೂರ್ಚೆಯಲ್ಲೇ ಪೂರ್ಣ ಸ್ಥಬ್ಧರಾದರು. ಹೊಟ್ಟೆನೋವು, ವಾಂತಿ, ಅದು…ಇದು… ಏನೂ ಇಲ್ಲ. ಅಷ್ಟು ದೊಡ್ಡ ತೊಂದರೆ ಇದ್ದವರು, ಶಾಂತ ಮರಣಿಸಿದರು. ನಮ್ಮಿಂದ ಕೊಂಚ ಕೊಂಚವೇ ಜಾರಿ ಪ್ರಯಾಣ ಹೊರಟ ಇವರ ಉಳಿಸಿಕೊಳ್ಳಲು ಆಗದ, ಈ ಜೀವ ಹಿಂಡುವ ಜೀವನಾನುಭವ ನನಗೇ ಏಕೆ ಅನ್ನಿಸಿಬಿಟ್ಟಿತು.

ಮೇ 14ಕ್ಕೆ ಪ್ರಾರಂಭಗೊಂಡ ಚಿಕಿತ್ಸೆ, ಜೂನ್ 14ಕ್ಕೆ, ಇವರು ಕೊನೆಯುಸಿರೆಳೆಯಲು ಮುಕ್ತಾಯವಾಯಿತು.

ಮುಂದೆ….!!!???

31ವರ್ಷಗಳ ನಮ್ಮ ಸಹಪಯಣ ಕೇವಲ 31 ದಿನಗಳಲ್ಲಿ, ಯಕೃತ್ತಿನಲ್ಲಿಯ ಮಿತಿಮೀರಿದ ತಾಮ್ರದ ಶೇಖರಣೆಯ ನೆಪ ಹೇಳಿಕೊಂಡು ಕೊನೆಗೊಂಡಿತ್ತು. ನಮ್ಮನ್ನು ಅಗಲಿಸಿದ, ನಾ ನಂಬಿದ ದೈವ, ನನ್ನವರಿಗೆ ಮಾತ್ರ ಶಾಶ್ವತ ಪರಮಪದ ನೀಡಿ ಗೌರವಿಸಿತ್ತು. ಇದೊಂದು ದಾರಿಯಲ್ಲಿ ಮಾತ್ರ ನಾನು ಅವರೊಡನೆ ಜೊತೆಗೂಡಲಾಗಲಿಲ್ಲ. ಬೇಕು – ಬೇಡ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಇದು ಬದುಕಿನ ದಾರಿಯಲ್ಲವಲ್ಲ. ಇದು ಭಗವಂತ ನಿರ್ಧರಿಸಿದಂತೆ, ವೈಯಕ್ತಿಕವಾಗಿ ಪ್ರದಾನಿಸಲ್ಪಡುವ ಅಂತಿಮ ತೀರ್ಪು.

ನಾನು ಏನು ವಾದ ಮಾಡಿದರೂ, ಏನೆಲ್ಲಾ ಪ್ರಾರ್ಥನೆಗಳನ್ನು ಮಾಡಿದರೂ, ಮರಣವನ್ನು ಮಾತ್ರ ಮುಂದೂಡಲು ಅಥವಾ ಸ್ವಲ್ಪ ಸಮಯಾವಕಾಶ ದೊರೆಯಲು ಸಾಧ್ಯವೇ????…..

ಆಜಾನುಬಾಹು ನನ್ನವರು, ಶೀತಲ ಪೆಟ್ಟಿಗೆಯಲ್ಲಿ ಮೌನವನ್ನಪ್ಪಿ ಮಲಗಿದ್ದರು. ನಮ್ಮ ಕುಟುಂಬದಲ್ಲಿ ಯಾರೂ ಸಹಾ ಇವರು ಮಲಗಿದ ಕೋಣೆಯಲ್ಲಿ ಅಥವಾ ಇವರ ಜೊತೆ ಮಲಗುತ್ತಿರಲಿಲ್ಲ. ನಿನ್ನ ಟೈಗರ್ ಜೊತೆ ನೀನೇ ಮಲಗಮ್ಮ ಎಂದು ತಿಳಿಹಾಸ್ಯ ಮಾಡುತ್ತಿದ್ದರು. ನನ್ನ ಗೊರಕೇಶ್ವರನ ಚಿರನಿದ್ರೆ ಎಷ್ಟು ಪ್ರಶಾಂತವಲ್ಲವಾ!!

ಮರುದಿನ 12 ಗಂಟೆ ಮಧ್ಯಾಹ್ನಕ್ಕೆ ಬನಶಂಕರಿ ಚಿತಾಗಾರದಲ್ಲಿ ಟೋಕನ್ ನಿಗದಿತವಾಗಿತ್ತು. ರಾತ್ರಿ, ಒಂದು ನಿಮಿಷವೂ ಕಣ್ಣು ಹತ್ತಲಿಲ್ಲ. ಜಪ ಮಾಡುತ್ತಾ, ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುತ್ತಾ ಇವರ ಪೆಟ್ಟಿಗೆಯ ಪಕ್ಕದಲ್ಲೇ ಕುಳಿತೆ. ಯಾವಾಗಲೂ ಜಪ ಮುಗಿಸಿ, ಜಪದ ಸರವನ್ನು ಇವರಿಗೂ, ಮಕ್ಕಳಿಗೂ ಕಣ್ಣಿಗೊತ್ತಿಸಿ, ಬಲ ಭುಜ ಹಾಗೂ ಎಡ ಭುಜಕ್ಕೆ ಸವರಿ ಆಯುರಾರೋಗ್ಯಕ್ಕೆ ಪ್ರಾರ್ಥಿಸಿ, ದೇವರ ಕೋಣೆಗೆ ವಾಪಸ್ಸು ಇಡುತ್ತಿದ್ದೆ. ಬೆಳಿಗ್ಗೆ ಜಪದ ಸರ ದೇವರ ಕೋಣೆಯ ಬುಟ್ಟಿಯಲ್ಲಿಡಲು ಹೊರಟವಳು, ಶೀತಲ ಪೆಟ್ಟಿಗೆಯ ಮೇಲಿನಿಂದಲೇ ಇವರಿಗೆ ಕಣ್ಣಿಗೊತ್ತಿಸಿದೆ. ಏನೆಂದು ಪ್ರಾರ್ಥಿಸಲಿ ಹೊಳೆಯಲಿಲ್ಲ. ನಾಳೆಯಿಂದ ನಾನು ಜಪ ಮಾಡಿದರೆ, ನನ್ನ ಜಪದ ಪಾಲಿಗೆ ಈ ದೇಹವೂ ಇಲ್ಲ.

ಅಂಗಳದ ಪಾರಿಜಾತದ ಗಿಡ ಅಂದು ಶುಭ್ರ ಹಾಸಂತೆ ಹೂಗಳ ಚೆಲ್ಲಿತ್ತು. ಅದನ್ನು ನಾನು ಬಹಳ ಜತನದಿಂದ ಬೆಳೆಸಿದ್ದೆ. ಇವರ ಅತ್ಯಂತ ಪ್ರಿಯ ಹೂಗಳು ಅವು. ಒಂದು ಬೊಗಸೆ ತಂದು ಪೆಟ್ಟಿಗೆಯ ಮೇಲೆ ಇಟ್ಟೆ. ನನ್ನ ಅತ್ಯಂತ ಪ್ರಿಯಮಿತ್ರನಿಗೆ ವಿದಾಯದ ಪಥದಲ್ಲಿ ಪ್ರಥಮ ಸುಮಗಳು. ಸುಮಾರು 10 ಗಂಟೆಗೆ ವಿಧಿಗಳು ಆರಂಭವಾಗಿ, ಮಧ್ಯಾಹ್ನ 1.15 ಕ್ಕೆ ಚಿತಾಗಾರದ ಕ್ರೇನ್ ನ ಹಳಿಗಳಿಗೆ ಇವರು ಮಲಗಿ ಹೊರಡಲು, ಮುಗಿದವು.

ಜೋಡಿ ಹಳಿಗಳಲ್ಲಿ ಪ್ರಯಾಣ??!!
ಏನೆಲ್ಲಾ ಪ್ರಯಾಣಗಳ
ಆರಂಭಿಸಿದೆ ಈ ಹಳಿ,
ನಡೆಸಿದೆ ಈ ಹಳಿ,
ಅಂತ್ಯಗೊಳಿಸುತ್ತಿದೆ ಈ ಹಳಿ…!!!!

ಚಿತಾಗಾರದಲ್ಲಿ ನಮ್ಮ ಟೋಕನ್ ಗೆ ಒಂದು ರಶೀದಿ ಕೊಟ್ಟರು. ಶೇಷ ಅಸ್ಥಿ ಪಡೆಯಲು. ನಾನೊಪ್ಪಿಸಿದ್ದು!!!???
ಅಷ್ಟು ವರ್ಷಗಳ ನನ್ನ ತಪಸ್ಸನ್ನು,
ನನ್ನ ಜೀವದ ಜೀವವನ್ನು,
ಕಾಯಾ, ವಾಚಾ, ಮನಸಾ ಅಪ್ಪಿ ಒಪ್ಪಿದ್ದ ಮನೋವಿರಾಜನನ್ನು.

ಎಲ್ಲಿ ಹೋಗಿ, ಏನು ಖರೀದಿಸಿದರೂ ರಶೀದಿ ನೀಡಿದರೆ, ನಾನು ಕೈಯಲ್ಲಿ ಹಿಡಿದು ಗುರುಗುಟ್ಟುತ್ತಿದ್ದೆ. ಹಣ ಪಾವತಿಸುವ ಮೊದಲೇ ರಶೀದಿ ಮುದುಡಿ ಉಂಡೆಯಾಗಿ ಇವರ ಬಾಯಿ ಸೇರುತ್ತಿತ್ತು. ಹಣ ಕೊಟ್ಟು ಹೊರ ಬಂದ ನಂತರ ತಿನ್ನಿ….. ತಿನ್ನಿ… ಮಜ್ಜಾ ಮಾಡಿ……ನನ್ನ ಗಾರ್ದಭೇಶ್ವರ ಎಂದು ನಗುತ್ತಿದ್ದೆ. ಹೀಗೂ, ಇವರ ನೆನೆದು ಒಂಟಿ ನಿಲ್ಲುತ್ತೇನೆ ಎಂದು ಎಂದಾದರೂ ಊಹಿಸಿದ್ದೆನಾ…. ಅಂತಹ ಒಂದು ಸಣ್ಣ ಎಳೆಯೂ ಸುಳಿದಿರಲಿಲ್ಲ ಮನಸ್ಸಿಗೆ…!!! ಇನ್ನು, ಪ್ರತೀ ತಿರುವಿಗೂ ಹೀಗೆ ಇವರು ನೆನಪಾಗಿ ದಿಗ್ಗನೆ ಆವರಿಸುತ್ತಾರೆ ಎಂದುಕೊಂಡೆ.

ಎರಡು.. ಮೂರು… ನಾಲ್ಕು… ಎನ್ನುತ್ತಾ.. ದಿನಗಳು ಉರುಳಿ, ಹತ್ತರಿಂದ ಹನ್ನೆರಡನೆಯ ದಿನದವರೆಗೆ ಉತ್ತರಕ್ರಿಯೆ ನೆರವೇರಿತು.

ದಿನವೂ ಬೆಳಿಗ್ಗೆ ಎದ್ದು ಏನು ಮಾಡಲಿ ಎಂದು ಗೊತ್ತಾಗದೆ, ಸುಮ್ಮನೆ ದಿನಚರಿ ಮುಗಿಸುತ್ತಿದ್ದೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ, ನಿದ್ದೆ ಮಾಡುತ್ತಿದ್ದ 7-8 ಗಂಟೆಗಳನ್ನು ಬಿಟ್ಟು, ದಿನಪೂರ್ತಿ, ಇವರ ಮತ್ತು ಮಕ್ಕಳ ಸುತ್ತ ಇದ್ದ ನನ್ನ ದಿನಚರಿ, ಮನಸ್ಥಿರವಾಗದೆ, ದಿನಸ್ಥಿರವಾಗದೆ ಮುನ್ನಡೆಯಬೇಕಿತ್ತು. ಏನೋ ಬಿಕೋ ಎನ್ನುವ ಮೌನ ನೋಟಗಳು ಹಾಗೂ ಕಳಾಹೀನವಾಗಿ ನಿಂತ ಮನೆ.

ಡಾಕ್ಟರ್ ಸರ್ಟಿಫಿಕೇಟ್ ಹಿಡಿದು, ಬಿ.ಬಿ.ಎಮ್.ಪಿ. ಕಛೇರಿಗೆ ಹೋಗಿ ಮರಣ ಪ್ರಮಾಣಪತ್ರ ಪಡೆಯುವುದರಿಂದ ಆರಂಭಿಸಿ ಒಂದೊಂದೇ ಕೆಲಸಗಳನ್ನು ಮುಗಿಸಿದೆ. ಮನೆಯಲ್ಲಿ ನಾನೂ ಹಾಗೂ ಕಿರಿಯ ಮಗಳು ಇಬ್ಬರೇ. ಹಿರಿಯ ಮಗಳ ಮಗು, 10 ತಿಂಗಳಿನ ಕೂಸು. ಆಕೆಗೆ ಈ ಕೋರೋನಾದ ಭೀತಿಯಿಂದಾಗಿ, ಹೆಚ್ಚು ಓಡಾಟ ಬೇಡವೆಂದು ನಿರ್ಧರಿಸಿದ್ದೆ. ಮನೆಯಲ್ಲಿ ಎಲ್ಲವೂ ಎಂದಿನಂತೆ ನಡೆಯುತ್ತಿತ್ತು, ಆದರೆ ನನ್ನೊಳಗೆ, ನಾನೊಬ್ಬಳೇ ಹೇಗೆ ಬದುಕು ನಡೆಸುವುದು ಎಂಬ ಮುಳ್ಳು ಅಳುಕುತ್ತಿತ್ತು.

ಬಹಳ ಸರಳೆ ಹಾಗೂ ಅಲ್ಪತೃಪ್ತೆ ನಾನು. ಆನಂದೀವೃತ್ತಿ ಸ್ವಭಾವ. ಎಲ್ಲರಲ್ಲೂ, ಎಲ್ಲದರಲ್ಲೂ ಗುಣಾತ್ಮಕವನ್ನು ಮಾತ್ರ ನೋಡುವವಳು ಹಾಗೂ ಅಳವಡಿಸಿಕೊಳ್ಳುವವಳು. ಇವರು ಯಾವಾಗಲೂ ಹೇಳುತ್ತಿದ್ದರು, ಎಂತಹ ಕ್ಲಿಷ್ಟ ಸನ್ನಿವೇಶವೂ ನಿನ್ನನ್ನು ಕುಸಿದು ಕೂರಿಸಿಲ್ಲ, ಹಾಗೇ ಇರು ನನ್ನ ಗುಜ್ಜರ್ ಎಂದು. ನನಗಿಂತ ಒಂಬತ್ತು ಚಿಲ್ಲರೆ ವರ್ಷ ದೊಡ್ಡವರಾದ ಇವರು, ಧೈರ್ಯಕ್ಕೆ ನನ್ನನ್ನು ಅವಲಂಬಿಸುತ್ತಿದ್ದರು. ನಾನೂ ಅಷ್ಟೇ, ಇವರು ಜೊತೆ ಇದ್ದರೆಂದೇ ದಿಟ್ಟೆ, ಅಲ್ಲವಾ. ಈಗಲೂ ಹಾಗೇ ಗಟ್ಟಿಯಾಗಬೇಕಿತ್ತು.

ಹೀಗೆ ಒಂದು ದಿನ, ಇವರ ಪುಸ್ತಕಗಳು, ಐ.ಡಿ., ಫೈಲುಗಳು, ಡೈರಿ, ಭಾವಚಿತ್ರಗಳು, ಬಟ್ಟೆಗಳು ಎಂದು ಕಬೋರ್ಡ್ ಖಾಲಿ ಮಾಡುತ್ತಾ ಕುಳಿತಿದ್ದೆ. ಏನೋ ಸಂಕಟ. ತಮ್ಮ ವಸ್ತು ಹಾಗೂ ಬಟ್ಟೆಗಳನ್ನು ಕರಾರುವಕ್ಕಾಗಿ, ನೀಟಾಗಿ, ವ್ಯವಸ್ಥಿತವಾಗಿ ಜೋಡಿಸಿಡುತ್ತಿದ್ದ ನನ್ನವರ ಈ ಖಾಸಗೀ ಆಕರಣೆಗಳು, ಅನುಪಯುಕ್ತವೋ, ಸಂಗ್ರಹ ಯೋಗ್ಯವೋ..?? ನನ್ನವನು ಎಂದು ಪ್ರೀತಿಸುವುದನ್ನು ಕಲಿತಾಗಿನಿಂದಲೂ ಇದ್ದವರು ಇವರೊಬ್ಬರೇ. ಅವರ ನಿರ್ಜೀವ ವಸ್ತುಗಳಿಗೆ ಬೆಲೆ ಬಂದಿದೆಯೇ?? ಯಾಕೆ ಬಂತು?? ಮತ್ತು ಈ ಬಲಹೀನತೆ ನನಗೆ ಏಕೆ?? ಏನೇನೋ ಸಿಕ್ಕುಗಳು. ವಸ್ತುಗಳಿಂದ ನಾನು ನನ್ನ ಜೀವದ ಗೆಳೆಯನ ನೆನಪುಗಳ ಜೀವಂತ ಇಡಲೇ? ಅಕಸ್ಮಾತ್ ಇವು ಇಲ್ಲವಾದರೆ, ಕಳೆದರೆ, ಹಾಳಾದರೆ….ನೆನಪುಗಳ ಕಳೆದುಕೊಳ್ಳುತ್ತೇನೆಯೇ..??!!

ಉತ್ತರವೆನ್ನುವಂತೆ, ನನ್ನ ಸ್ನೇಹ ಯಾವ ಶ್ರೇಣಿ ಎಂದು, ಒಮ್ಮೆ ಒಂದೆರಡು ಸಾಲು ಇವರಿಗೆ ಬರೆದಿದ್ದ ನೋಟ್ ಸಿಕ್ಕಿತು. ನವಿಲುಗರಿಗೆ ಹೋಲಿಸಿ..
“ನವಿಲ ಶರೀರದಿಂದ ರದ್ದಾದ ಗರಿಯಲ್ಲ..
ಕೃಷ್ಣನ ಕಿರೀಟದ ಮಯೂರ ಪಂಖ…” ಎಂದು, ಆ ನೋಟ್ ನಲ್ಲಿ ಬರೆದಿದ್ದೆ. ನೋಡಿ ಒಂದು ಎಳೆಯ ನವಿರು ಭಾವ ಮೂಡಿತು. ಹೊಳೆವ ಹೊಸ ಚಿಗುರು ಎಂದುಕೊಳ್ಳಿ.

ನಾನೂ ಸಹಾ ಹೀಗೆ ನವಿಲ ಗರಿಯಂತೆ ಇರಬೇಕು ಎನಿಸಿತು. ಚಂದವಾಗಿ, ಕಳೆಯಾಗಿ, ಬದುಕನ್ನು ಪ್ರೀತಿಸುವ ಬಣ್ಣದ ಪ್ರತಿಬಿಂಬವಾಗಿ. ನನ್ನವರಿಗೆ ಅದೇ ಇಷ್ಟ. ಏನೇ ನೋವಿರಲಿ, ಬೇಸರವಿರಲಿ, ಕಷ್ಟವಿರಲಿ ಎಂದೂ ಮಂಕಾಗಿ ಇರಬಾರದು. ಅವೆಲ್ಲವನ್ನೂ ನವಿಲ ಗರಿಯು ತನ್ನ ಬೆನ್ನ ಹಿಂದೆ, ಬೂದಿ ಬಣ್ಣದಲ್ಲಿ ಮರೆಮಾಚಿ ಎದುರಿಗೆ ಬಣ್ಣಗಳ, ಕನಸುಗಳ, ಸುಂದರ ಭಾವಗಳ ಧರಿಸುವಂತೆ ನಾನೂ ಸಹಾ ಇವರು ನನಗೆ ಮುಡಿಸಿದ ಜೀವಂತಿಕೆಯನ್ನು, ಜೀವನ ಪ್ರೀತಿಯನ್ನು ಬಾಡದಂತೆ ಧರಿಸಬೇಕು.

ನನ್ನವನನ್ನು ಕಳೆದುಕೊಂಡ ನಂತರ, ನನ್ನನ್ನು ಆವರಿಸಿರುವ ಈ ಖಾಲಿತನ….. ನಾನು ಬೂದಿಯಾಗುವವರೆಗೂ ನನ್ನ ಜೊತೆಯಲ್ಲಿಯೇ ಇರುತ್ತದೆ. ಅದೇ ಭಾವವನ್ನು ನಾನು ಧನಾತ್ಮಕವಾಗಿ ಧರಿಸಿದರೆ, ನನ್ನವರು ನನ್ನಲ್ಲಿ, ಸದಾ ಜೀವಂತವಿರುತ್ತಾರೆ. ಲೋಕಕ್ಕೆ ಅವರು ದಿವಂಗತರ (ಅಸ್ತಂಗತರ) ಸಾಲಿನಲ್ಲಿ ಸೇರಿದ್ದರೂ, ನನ್ನಲ್ಲಿ ಅವರದು ಉದಯ ಶ್ರೇಣಿ. ಬದುಕಿದ್ದಾಗ ನಾವು ಎರಡು ಜೀವ. ಈಗ ಇವರ ಮೌಲ್ಯಗಳ ಗೌರವಿಸುತ್ತಾ, ಅವುಗಳ ಜೊತೆ, ನಾನು ಒಂದೇ ಜೀವ.

ನನ್ನ ವರ್ತಮಾನ ಹಾಗೂ ಭವಿಷ್ಯಕ್ಕೆ, ಈಗ ನಾನು ಅಪ್ಪಿ ಅಳವಡಿಸಿಕೊಂಡಿರುವ ನೀತಿ ಎಂದರೆ…
ನೀವು ಬದುಕಿಗೆ ವಿದಾಯ ಹೇಳಿ ಅಶರೀರರಾಗಿದ್ದೀರ ಎಂಬ ಸತ್ಯವನ್ನು ಒಪ್ಪಿದ್ದೇನೆ, ಆದರೆ ನನ್ನ ಮನಸ್ಸಿನಿಂದ ಮರೆಯಾಗಿಲ್ಲ. ಈಗಲೂ ಮತ್ತೆ ಮತ್ತೆ ನಿಮ್ಮನ್ನೇ ಪ್ರೀತಿಸುತ್ತಾ , ಬದುಕಿರುವವರೆಗೂ, ಬದುಕನ್ನೂ ಸಹಾ ಪ್ರೀತಿಸುತ್ತೇನೆ”

ಅಂತಿಮವಾಗಿ, ನನ್ನ ಈ ವೈಯಕ್ತಿಕ ಅಭಿವ್ಯಕ್ತಿಗೆ, ನನ್ನದೇ ಕವನದ ಸಾಲುಗಳ ಹಸ್ತಾಕ್ಷರ..

ಅನು(ಉ)ಪಸ್ಥಿತಿ

ಬಂದವರೆಲ್ಲ ಮೊದಲು ಕೇಳುತ್ತಾರೆ
ಬಿಕೋ ಎನ್ನುತ್ತಿದೇ ಎಲ್ಲ, ಅವನಿಲ್ಲ ಅಲ್ಲವಾ?..
ನೋಟ ತಗ್ಗಿಸುತ್ತಾ ನಕ್ಕುಬಿಡುತ್ತೇನೆ
ನಡೆದಾಡಿ ಕಾಣುವ ದೇಹ ಮಾತ್ರ ಸಂಗಾತಿಯೇ??!!

ಬೆಳಗೆದ್ದು ಕಣ್ಬಿಟ್ಟು ಕೂಡಲೇ
ದಿಂಬಿಗಡರಿದ ಮೈಯ ಘಮ, ಅಲ್ಲಿಯೇ ಇದೆ,
ಕಿಟಕಿ ತೆರೆದು ಪರದೆ ಸರಿಸಿದರೆ
ಬೆಳಕಿಗೆ ಕಣ್ಣು ಕಿರಿದುಮಾಡಿ ತೋರುವ ಆ ಮುನಿಸು, ಅಲ್ಲಿಯೇ ಇದೆ,
ಸ್ನಾನಕ್ಕೆ ನಿಂತು, ಎಲ್ಲ ಹಾಡುಗಳ ಗುನುಗಿ
ಮರೆತ ಟವಲ್ ಗಾಗಿ ಕರೆಯುತ್ತಾನೆಂದು ಹೊರಚಿಲಕಕ್ಕೆ ಸಿಕ್ಕಿಸಿದ್ದು, ಅಲ್ಲಿಯೇ ಇದೆ,
ಕನ್ನಡಿಯ ಎದುರು ಬಾಚಿ ತಯಾರಾಗಿ
ಹೊರಡುವಾಗ ತಲೆ ಕೆರೆವನೆಂದು ಇಟ್ಟ ಸಾಕ್ಸ್ ಕರ್ಚೀಫ್, ಹಾಗೇ ಇದೆ

ತಟ್ಟೆಗೆ ಕೈಹಾಕಿ, ಬಿಸಿ ತಟ್ಟುತ್ತಲೇ ಎನ್ನುವ ಉಫ್..
ಪೇಪರ್ ಓದುತ್ತಾ ಆಗಾಗ ಕೈ ಒದರುವ ಮಿಸುಕು..
ಪದಬಂಧ ಮಾಡುತ್ತಾ, ಬಾಯಲ್ಲಿ ಪೆನ್ ಕ್ಯಾಪಿಟ್ಟು ತೊದಲುವುದು..
ಲೆಕ್ಕ ಮಾಡುತ್ತಾ, ಕ್ಯಾಲ್ಕುಲೇಟರ್ ಕುಟ್ಟುವುದು..ಕೇಳುತ್ತಿದೆ

ಅವನಿರುವಿಕೆ
ಕಾಣುವ ಮರದಂತಿರಬಹುದು ಎಲ್ಲರಿಗೆ,
ನನ್ನರಿವಲ್ಲಿ
ಆತ ಮನದಾಳಕ್ಕಿಳಿದ ಬೇರುಗಳು….

ರಾಧಿಕಾ. ವಿ. ಗುಜ್ಜರ್,ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರದವರು. ಪ್ರೌಢ ಶಿಕ್ಷಣವನ್ನು ಎಂ.ಕೆ.ಇ.ಟಿ.ಶಾಲೆಯಲ್ಲೂ ಹಾಗೂ ಬಿ.ಕಾಮ್. ಪದವಿ ಶಿಕ್ಷಣವನ್ನು ಎಸ್.ಜೆ.ವಿ.ಪಿ. ಕಾಲೇಜಿನಲ್ಲಿಯೂ ಪೂರ್ಣಗೊಳಿಸಿದ್ದಾರೆ. ವೈವಾಹಿಕ ಜೀವನವನ್ನು ಚಿಕ್ಕಮಗಳೂರಿನಲ್ಲಿ ಆರಂಭಿಸಿ, ಪ್ರಸ್ತುತ ಬೆಂಗಳೂರಿನ ವಾಸಿ. ಇಬ್ಬರು ಹೆಣ್ಣುಮಕ್ಕಳ ತಾಯಿ ಹಾಗೂ ಒಂದು ಮುದ್ದಾದ ಮೊಮ್ಮಗಳು ಇದ್ದಾಳೆ. ಇವರ ಪತಿಯವರು ಇತ್ತೀಚೆಗೆ, ಜೂನ್ ತಿಂಗಳಲ್ಲಿ ದಿವಂಗತರಾಗಿದ್ದು,ಆ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡು ಇದೀಗ ತಮ್ಮನ್ನು ಸಂಪೂರ್ಣವಾಗಿ ಬರವಣಿಗೆಗೆ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ.