ಇತ್ತೀಚಿನ ಬರಹಗಳು: ರಮ್ಯಾ ವಿನಯ್ (ಎಲ್ಲವನ್ನು ಓದಿ)
- (ಹುಸಿ)ನಿರೀಕ್ಷೆ - ಜನವರಿ 22, 2022
- ಇನ್ನೇನು ಬೇಕಿದೆ…? - ಏಪ್ರಿಲ್ 6, 2021
- ರಮ್ಯ- ಬಿಂದು - ಜನವರಿ 21, 2021
ನೀನೇರಿದ ಎತ್ತರವನ್ನು
ತಲುಪಬಹುದಿತ್ತೇನೋ
ನಾನಿನ್ನೂ
ಮೆಟ್ಟಿಲುಗಳನ್ನು ಎಣಿಸುತ್ತ
ಕಳೆದುಹೋಗಿದ್ದೇನೆ
*****
ಹಳೆಯ ಸಾಲುಗಳನ್ನಾದರೂ
ನೆನಪಿಸಿಕೋ ಮತ್ತೊಮ್ಮೆ
ತೇಲಬೇಕಿದೆ ನೆನಪಿನಲೆಯಲ್ಲಿ
ಮರೆತೆಲ್ಲ ದುಗುಡ
*****
ಕುದಿಯುತ್ತಿದ್ದ ಚಹಾದೊಂದಿಗೆ
ಮಿಳಿತವಾಗಿದ್ದವೆಷ್ಟೋ ಭಾವಗಳು
ಉಕ್ಕಿದಾಗಲೇ ಅರಿವಾದದ್ದು
ತಾಪವು ಹದ ತಪ್ಪಿತ್ತೆಂದು
*****
ಕರಗುವುದರ ಅರಿವಿದ್ದರೂ
ದೀಪ ಉರಿಯುತ್ತಲೇ ಇತ್ತು
ಬಹುಶಃ ಅದೂ
ಪ್ರೇಮಿಯಾಗಿರಬೇಕು…
*****
ಕತ್ತಲೆಯ ಮುಸುಕನ್ನು
ಸರಿಸದಿರು ಗೆಳೆಯಾ
ಮುಚ್ಚದ ಕಣ್ಣುಗಳು
ಕೆಂಪಾದ ಕೆನ್ನೆ ಕಂಡೀತು
*****
ಸುಗಮವಲ್ಲವೀ ಪಯಣ
ಸಾಗಿಹೆ ಕೊನೆಯರಿಯದ
ದಾರಿಗೆ
ಕಮರಿಹೋಗಿದೆ ಕನಸು
ದೂರು ಹೇಳಲಿ ಯಾರಿಗೆ
*****
ಎಂದೂ ಕಾಣದ ಕನಸೊಂದು
ರೆಪ್ಪೆ ಮೇಲೆ ಕೂತಿದೆ
ಮನದಲೀಗ ಬೆಳಗಿವೆ
ಸಾಲು ಹಣತೆ
*****
ಹೆಚ್ಚಿನ ಬರಹಗಳಿಗಾಗಿ
ಪತ್ತಂಗಿ ಎಸ್ ಮುರಳಿ ಆಯ್ದ ೧೦ ಚುಟುಕುಗಳು
ಪ್ರೀತಿ
ಬಾ ವರ್ಷಧಾರೆ…