ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿಕ್ಷೆ

ನಾಗರತ್ನ ಎಂ ಜಿ.
ಇತ್ತೀಚಿನ ಬರಹಗಳು: ನಾಗರತ್ನ ಎಂ ಜಿ. (ಎಲ್ಲವನ್ನು ಓದಿ)

ಗಂಟೆಗಟ್ಟಲೆ ಮಾತಾಡಿದರೂ ತೃಪ್ತಿಯಿಲ್ಲದೆ ಹೊತ್ತು ಗೊತ್ತಿಲ್ಲದೆ ಮೆಸೇಜ್ ಮಾಡುತ್ತ, ಮಾತಿಗೊಮ್ಮೆ ತನ್ನ ಬಗ್ಗೆ ಕವಿತೆ ಬರೆಯುತ್ತ, ತನ್ನ ಕವನಕ್ಕೆ ನೀನೇ ಸ್ಫೂರ್ತಿ ಎನ್ನುತ್ತಿದ್ದವನು, ಸಾಕು ಸಾಕೆನಿಸುವಷ್ಟು ಪ್ರೀತಿಯ ಹೊಳೆ ಹರಿಸುತ್ತಿದ್ದವನು, ತಾನು ಸಿಗದಿದ್ದರೆ ಟಿಪ್ಪು ಡ್ರಾಪ್ ನಿಂದ ಬಿದ್ದು ಪ್ರಾಣ ಬಿಡುತ್ತೇನೆoದವನು ಇವನೇನಾ..??

ನಾಗರತ್ನ ಎಂ ಜಿ. ಅವರ ಈ ಕೆಳಗಿನ ಕಥೆಯಿಂದ …

ಸುಜಿ ಸುಜಯ ನೋಡಮ್ಮ ಸುರೇಂದ್ರ ಬಂದಿದ್ದಾನೆ” ಬಾಗಿಲು ತೆಗೆದು ಜಾನಕಮ್ಮ ಏನನ್ನೋ ಗೊಣಗುತ್ತಾ ಒಳನಡೆದರು. ರೂಮಿನಲ್ಲಿ ಅಲಂಕರಿಸಿ ಕೊಳ್ಳುತ್ತಿದ್ದ ಸುಜಯ ತಟ್ಟನೆ ಹೊರಗೆ ಹೋಗಲು ಹೊರಟವಳು ಕೋಣೆಯ ಬಾಗಿಲು ವಾಡಕ್ಕೆ ಕೈಇಟ್ಟು ಬಾಗಿಲುದ್ದಕ್ಕೂ ನಿಂತಿದ್ದ ನಗುಮೊಗದ ಒಡೆಯ ಸುರೇಂದ್ರನನ್ನು ಕಂಡು ದೂರ ಸರಿದಾಗ ಮುಗುಳ್ನಗುತ್ತಾ ಅವಳನ್ನೇ ನೋಡುತ್ತಿದ್ದ ಸುರೇಂದ್ರ “
“ಜಿಂಕೆಯಂತೆ ಛಂಗನೆ ಜಿಗಿಯುತ ಬರುವೆ” ಎಂದು ಸುರಿದಾಗ ತನ್ನ ದುಂಬಿ ಕಂಗಳನರಳಿಸಿ ಆಮೇಲೆ ..? ಎಂದಳು
” ಚಂಚಲ ಕಣ್ಣುಗಳ ಅರಳಿಸಿ ನಗುವೆ ”
ಮುಂದುವರೆಸಿದವನು….
ಬೊಗಸೆಯಲ್ಲಿ ಅವಳ ಮುಖ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಅಂದ ಕಂಡು ಮತ್ತನಿಡಲು ಬರೆ…

ತಟ್ಟನೆ ಅವನಿಂದ ಬಿಡಿಸಿಕೊಂಡು ನಾಚುತ ದೂರ ಸರಿದಳು ಸುಜಯ…
“ನಾಚುತ ಮರೆಯಾಗುವೆ ನೀ ನೀರೆ”
ನಗುತ್ತಾ ಮುಗಿಸಿದ ಸುರೇಂದ್ರ….
ಆಯ್ತಾ ನಿನ್ನ ಕವನ ಪಠಣ ಇನ್ನು ಹೊರಡೋಣವೇ? ಕತ್ತು ಕೊಂಕಿಸಿ ಕೇಳಿದ ಅವಳ ಮೋಹಕ ಭಂಗಿಗೆ ಸುರೇಂದ್ರ ನಾಟಕೀಯವಾಗಿ ಬಗ್ಗಿ ‘ನಡೆಯಿರಿ ಮೇಡಂ’ ಎಂದು ಅವಳಿಗೆ ರೂಮಿನಿಂದ ಹೊರಬರಲು ದಾರಿ ಕೊಟ್ಟ.
ಕೈಚೀಲ ಬೀಸುತ್ತ ರೂಮಿನಿಂದ ಹೊರಬಂದು ಸುಜಯ
“ಅಮ್ಮ ಇಲ್ಲೇ ಅರ್ಧ ಗಂಟೆ ಹೋಗಿ ಬರ್ತೀನಿ” ಎನ್ನುತ್ತಾ ಹೆಚ್ಚು ಕಡಿಮೆ ಸುರೇಂದ್ರನನ್ನು ಎಳೆದುಕೊಂಡು ಹೊರಟಳು
“ಬೇಗ ಬಾರೆ ಕತ್ತಲು ಮಾಡ್ಕೊಂಡು ಬರಬೇಡ”
ಎಂದಿನ ರಾಗ ಹಾಡಿದರು ಜಾನಕಮ್ಮ…
ಎಂದಿನ ಅದೇ ತುಂಟ ನಗೆ ಮೂಡಿತು ಸುರೇಂದ್ರನ ತುಟಿಯ ಮೇಲೆ.
ಮನಬಂದ ಕಡೆ ಸುತ್ತಾಡಿ, ಮನ ಬಂದಷ್ಟು ಹರಟಿ ಹೋಟೆಲಿನಲ್ಲಿ ಬೇಕೆನಿಸಿದ್ದನ್ನೆಲ್ಲ ತಿಂದು ಮನೆಯ ಹತ್ತಿರ ಬೈಕ್ನಲ್ಲಿ ಅವಳನ್ನು ಇಳಿಸಿದಾಗ ಅವನನ್ನು ಬಿಡಲಾರದೆ ಬಿಟ್ಟು ಬಂದು ಒಳಗೆ ಹೆಜ್ಜೆ ಇಟ್ಟಾಗ ಗೋಡೆ ಗಡಿಯಾರ ಒಂಭತ್ತು ಹೊಡೆದಿತ್ತು..
ಗಡಿಯಾರದ ಗಂಟೆಯಂತೆಯೇ ಅವಳ ಎದೆಯೂ ಹೊಡೆದುಕೊಂಡಿತ್ತು. ಮೆಲ್ಲಗೆ ಸದ್ದಾಗದಂತೆ ಚಪ್ಪಲಿ ಬಿಟ್ಟು ಹಾಲಿನಲ್ಲಿ ಇಣುಕಿದಾಗ ಪೇಪರ್ ಹಿಡಿದು ಸೋಫಾದ ಮೇಲೆ ಕುಳಿತಿದ್ದ ತಂದೆಯನ್ನು ಕಂಡು ಜೀವ ಬಂದಂತಾಗಿ “ಅಣ್ಣಾ” ಎನ್ನುತ್ತಾ ಅವರನ್ನು ತಬ್ಬಿ ಅವರ ಭುಜದ ಮೇಲೆ ತಲೆ ಇಟ್ಟಳು ಇಪ್ಪತ್ತೊಂದು ವರ್ಷದ ಮಗು. ಪೇಪರ್ ಬದಿಗಿಟ್ಟು ಅವಳ ತಲೆ ತಡವಿದ ಕೇಶವರಾಯರು…
‘ಇಷ್ಟೊತ್ತು ಮಾಡ್ಬಿಟ್ಯಲ್ಲ ಮರಿ ಸುರೇಂದ್ರನ ಜೊತೆ ಹೋಗಿದ್ಯಾ? ಅಂದಾಗ…
“ಅಮ್ಮ ಕೇಳಿಸಿಕೊಳ್ಳುತ್ತಾಳೆ ಮೆಲ್ಲಗೆ” ಎಂದು ಬಾಯಮೇಲೆ ಬೆರಳಿಟ್ಟಳು ಸುಜಯ..
“ನೀನು ಇಲ್ಲಿ ಕೂತು ಅಪ್ಪನ ಹತ್ರ ಚಲ್ಲು ಬಡೀತ ಇದ್ರೆ ನಂಗೆ ಗೊತ್ತಾಗಲ್ವಾ ಐದು ಘಂಟೆಗೆ ಹೋದವಳು ಈಗ ಬರ್ತಾ ಇದೀಯಲ್ಲ ಹೇಳೋರು ಕೇಳೋರು ಯಾರು ಇಲ್ವಾ ನಿಂಗೆ ಒಂದಿನ ಸರಿ ಎರಡು ದಿನ ಸರಿ ಅದೇನೂ ಒಂದಿನ ಬಿಡದ ಹಾಗೆ ಅವನ ಜೊತೆ ಹೋಗೋದು ಕತ್ತಲು ಮಾಡಿಕೊಂಡು ಮನೆಗೆ ಬರೋದು ವಯಸ್ಸಿಗೆ ಬಂದ ಹುಡುಗಿ ಅವನ ಜೊತೆ ಸುತ್ತುತ್ತಿಯಲ್ಲ ಮೈಮೇಲೆ ಜ್ಞಾನಾ ಇದ್ಯಾ ನಿಂಗೆ”?

ಅಡಿಗೆ ಮನೆಯಿಂದ ಹೊರಗೆ ಬಂದ ಜಾನಕಮ್ಮ ಸಾಸಿವೆಯಂತೆ ಚಟಪಟ ಸಿಡಿದರು.
“ಲೇ ಲೇ ಜಾನಕಿ ಮೆಲ್ಲಗೆ ಕಣೆ ಯಾಕೆ ಮಗುನ ಹಾಗೆ ಗದರಿಸ್ತೀಯ ಸುರೇಂದ್ರ ಏನು ಬೇರೆಯವನ? ನಾಳೆ ಇವಳನ್ನು ಮದುವೆಯಾಗುವ ಹುಡುಗ ತಾನೆ ಏನೋ ಸ್ವಲ್ಪ ಹೊತ್ತಾಗಿ ಬಂದ್ರೆ ….”
ಕೇಶವ ರಾಯರ ಮಾತನ್ನು ಪೂರ್ತಿ ಮಾಡಲು ಬಿಡದೆ “ನಾಳೆ ಮದುವೆ ಅಂತಾನೆ ಈಗ ಆರು ತಿಂಗಳಾಯಿತು ಇನ್ನೂ ನಾಲ್ಕು ತಿಂಗಳು ಮುಂದಕ್ಕೆ ಯಾಕೆ ಇಟ್ಟಿದ್ದೀರಿ ಮುಹೂರ್ತನ ನಾಳೆನೇ ಹೋಗಿ ಇದೇ ತಿಂಗಳಲ್ಲಿ ಲಗ್ನಕಟ್ಟಿಸಿಕೊಂಡು ಬನ್ನಿ
ಇವಳನ್ನು ಕಾಯುವುದು ನನ್ ಕೈಲಿ ಆಗಲ್ಲ ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ”
ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಜಾನಕಮ್ಮಒಳಗೆ ಸರಿದರು
“ಏನೋ ಮರಿ ಈ ತಿಂಗಳಲ್ಲೇ ಮದುವೆ ಮಾಡಿ ಮುಗಿಸುವುದಾ?” ಸುಜಯಳ ಕಡೆ ತಿರುಗಿ ಕೇಳಿದಾಗ “ಸುಮ್ಮನಿರಣ್ಣ ಅಮ್ಮ ಏನೋ ಆಡುತ್ತಾಳೆ ಅಂದ್ರೆ ನೀನು ಹಾಗೆ ಮಾಡ್ತೀಯಾ ಇಷ್ಟು ಬೇಗ ಮದುವೆ ಮಾಡ್ಕೊಂಡ್ರೆ ಏನು ಮಜಾ ಇರುತ್ತೆ ನಿಧಾನಕ್ಕೆ ಆಗ್ಲಿ” ಎಂದು ಎದ್ದು ಹೊರಟ ಮಗಳ ತಲೆಯ ಮೇಲೆ ಅಕ್ಕರೆಯಿಂದ ಹೊಡೆದು ತುಂಟಿ ಎನ್ನುತ್ತಾ ಮನದಲ್ಲೇ ನಕ್ಕರು. ಆರೋಗ್ಯ ಆನಂದದಿಂದ ಕಳಕಳಿಸುತ್ತಿದ್ದ ಮಗಳ ಮುಖ ನೋಡಿ ದೇವರೇ ಇವಳನ್ನು ಯಾವಾಗಲೂ ಹೀಗೆ ಇಟ್ಟಿರು ಎಂದು ಕಾಣದ ದೈವಕ್ಕೆ ಕೈಮುಗಿದರು

ಸುರೇಂದ್ರ ತಂದೆ-ತಾಯಿಗೆ ಒಬ್ಬನೇ ಮಗ. ಆರಡಿ ಎತ್ತರದ ಒತ್ತು ಕೂದಲಿನ ದೃಢಕಾಯ. ರಕ್ತ ಚಿಮ್ಮುವಂತೆ ಇದ್ದ ಮೈಬಣ್ಣದ ಅವನು ಫೈನಲ್ ಇಯರ್ ಬಿಇ ಓದುತ್ತಿರುವಾಗಲೇ ತನ್ನ ಮಗನ ಅಂದಕ್ಕೆ ಮರುಳಾಗಿ ಯಾವ ಹೆಣ್ಣಾದರೂ ಅವನಿಗೆ
ಬಲೆ ಬೀಸುತ್ತಾಳೋ… ಮಗ ತಮ್ಮಿಂದ ಎಲ್ಲಿ ದೂರವಾಗಿ ಬಿಡುತ್ತಾನೋ ಎಂಬ ಆತಂಕದಲ್ಲಿ ಆದಷ್ಟು ಬೇಗ ಮಗನಿಗೆ ಮದುವೆ ಮಾಡಬೇಕೆಂಬ ತವಕ ಪಂಕಜಮ್ಮನವರಿಗೆ. ಅದಕ್ಕೆ ಸರಿಯಾಗಿ ಪತಿಯ ಸ್ನೇಹಿತರಾದ ಕೇಶವರಾಯರೊಂದಿಗೆ ಅವರ ಮಗಳು ಸುಜಯಳನ್ನು ದೇವಸ್ಥಾನದಲ್ಲಿ ಕಂಡಾಗ ಈ ಹುಡುಗಿ ಸುರೇಂದ್ರನಿಗೆ ಸರಿ ಜೋಡಿ ಎಂದುಕೊಂಡವರು ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತಂದಿದ್ದರು.
ಇಷ್ಟು ಬೇಗ ಮದುವೆ ಬೇಡವೆಂದು ಪ್ರತಿಭಟಿಸಿದ ಸುರೇಂದ್ರ ..ಬೆಡಗಿ ಸುಜಯಳನ್ನು ನೋಡಿದಾಗ ತಾಯಿಯ ಇಚ್ಛೆಗೆ ತಲೆಬಾಗಿದ. ಕೊನೆಯ ವರ್ಷದ ಬಿಎಸ್ಸಿ ಓದುತ್ತಿದ್ದ ಸುಜಯಳೊoದಿಗೆ ಅವನ ನಿಶ್ಚಿತಾರ್ಥ ಮುಗಿಸಿ ಇಬ್ಬರ ಪರೀಕ್ಷೆ ಮುಗಿದ ನಂತರ ಮದುವೆಗೆ ಮುಹೂರ್ತ ಇಡಿಸಿ ನಿಶ್ಚಿಂತರಾಗಿದ್ದರು ಪಂಕಜಮ್ಮ.

ಯಾರ ಅಡ್ಡಿ ಆತಂಕಗಳಿಲ್ಲದೆ ಪ್ರತಿದಿನ ಕಾಲೇಜಿನಲ್ಲಿ ಭೇಟಿಯಾಗುತ್ತಿದ್ದ ಸುರೇಂದ್ರ ಸುಜಯರಿಗೆ ಪರೀಕ್ಷೆ ಮುಗಿದು ರಜೆ ಬಂದಾಗ ಮಾತ್ರ ಫಜೀತಿಗೆ ಇಟ್ಟುಕೊಂಡಿತ್ತು. ಮೊದಮೊದಲು ಸಂಕೋಚದಿಂದ ಮನೆಗೆ ಬಂದು ವಿನಯದಿಂದ ಸುಜಯಳನ್ನು ಹೊರಗೆ ಕರೆದುಕೊಂಡು ಹೋಗಲು ಅನುಮತಿ ಕೇಳುತ್ತಿದ್ದ ಸುರೇಂದ್ರ ನಂತರದಲ್ಲಿ ಅದನ್ನು ನಿತ್ಯದ ಪರಿಪಾಠ ಮಾಡಿಕೊಂಡಿದ್ದ.
“ಇವತ್ತು ಅವನು ಬರ್ಲಿ ಕಳಿಸಲ್ಲ ಅಂತ ಖಡಾಖಂಡಿತವಾಗಿ ಹೇಳ್ತೀನಿ…
ಇದೇನಿದು ನಿತ್ಯ ಅವನ ಜೊತೆ ಅಲೆದಾಟ ನಾಚಿಕೆಗೇಡು” ಎಂದು ದೃಢ ಮನಸ್ಸಿನಿಂದ ನಿಶ್ಚಯಿಸಿದ್ದ ಜಾನಕಮ್ಮ ಸುರೇಂದ್ರ ಎದುರಿಗೆ ನಿಂತು ಕೈಕಟ್ಟಿ “ಅಮ್ಮ ಸುಜೀನ ಹೊರಗೆ ಕರ್ಕೊಂಡು ಹೋಗಿ ಬರ್ಲಾ ಒಂದರ್ಧ ಘಂಟೆ? ಎಂದು ವಿನೀತನಾಗಿ ಕೇಳಿದಾಗ ಆರಡಿ ಎತ್ತರದ ಆಜಾನುಬಾಹುವನ್ನು ತಲೆಯೆತ್ತಿ ನೋಡುವ ಸಾಹಸವು ಮಾಡದೆ “ಆಯ್ತಪ್ಪ ಬೇಗ ಬಂದು ಬಿಡು” ಎಂದು ಭಾವಿ ಅಳಿಯನನ್ನು ಎದುರುಹಾಕಿಕೊಳ್ಳಲಾಗದ ತಮ್ಮ ಅಸಹಾಯಕತೆಯನ್ನು ಶಪಿಸುತ್ತ ಒಳ ಸರಿಯುತ್ತಿದ್ದರು. ಅವನು ಅನುಮತಿ ಪಡೆಯುವುದನ್ನೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಸುಜಯ ತಾಯಿ ಹೋದೊಡನೆ ಛಂಗನೆ ಜಿಗಿಯುತ್ತಾ ಅವನ ಬಳಿ ಬಂದು ತೋಳು ಚಿವುಟಿ “ನೀನೇ ಸರಿ ನೋಡು ಅಮ್ಮಂಗೆ ಮೋಡಿ ಮಾಡೋಕೆ” ಎಂದು ಹೊರಡುತ್ತಿದ್ದಳು.
ಹೀಗೆ ಯಾರ ಅಡ್ಡಿ ಆತಂಕ ಇಲ್ಲದೆ ಭಾವಿ ದಂಪತಿಗಳ ಪ್ರೇಮಸಲ್ಲಾಪ ತಿರುಗಾಟ ಅವ್ಯಾಹತವಾಗಿ ಸಾಗಿತ್ತು.

ಹೀಗೆ ಒಂದು ದಿನ ಪಾರ್ಕಿನಲ್ಲಿ ಕುಳಿತು ಹರಟುತ್ತಿದ್ದಾಗ ಸುಜಯನ ಕೈಬೆರಳುಗಳೊoದಿಗೆ ಆಟವಾಡುತ್ತ ಸುರೇಂದ್ರ
“ಸುಜಿ ನಾಳೆ ನಾವಿಬ್ರೂ ನಂದಿಗೆ ಹೋಗೋಣವೆ” ಎಂದಾಗ ಬೆಚ್ಚಿದ ಸುಜಯ “ಆಯ್ತು ನನ್ ಕಥೆ ಮುಗೀತು ನಮ್ಮಮ್ಮ ಕೊಳ್ಳಿ ತೊಗೊಂಡು ಎರಡು ಕಾಲಿಗೂ ಬರೆ ಹಾಕಿಬಿಡ್ತಾರೆ ಅಷ್ಟೇ” ಎಂದಳು..
ಅಯ್ಯೋ ಪೆದ್ದಿ ನಿಮ್ಮಮ್ಮಂಗೆ ಗೊತ್ತಾದ್ರೆ ತಾನೇ ಅದೆಲ್ಲಾ ಆಗೋಕೆ..

ಹಾಗಂದ್ರೇನು ಅಮ್ಮ ಅಣ್ಣಂಗೆ ಹೇಳದೆ ಊರು ಬಿಟ್ಟು ಹೋಗೋಕೆ ಸಾಧ್ಯಾನಾ…

“ನಾವೇನು ಫಾರಿನ್ಗೆ ಹೋಗ್ತಾ ಇದೀವ ನಂದಿ ಇಲ್ಲಿಂದ ಮಹಾ ಎಷ್ಟು ದೂರ ಇದೆ? ಬೆಳಿಗ್ಗೆ ಹೋಗಿ ಸಂಜೆ ಬರಬಹುದು ನೀನು ಬೆಳಿಗ್ಗೆ ಎಂಟಕ್ಕೆ ಮನೆ ಬಿಟ್ಟು ಫ್ರೆಂಡ್ ಮನೆಗೆ ಹೋಗ್ತೀನಿ ಅಲ್ಲೇ ಊಟ ಮಾಡಿ ಸಂಜೆ ಬರ್ತೀನಿ ಅಂತ ಹೇಳ್ಬಿಟ್ಟು ಬಾ ಜುಮ್ ಅಂತ ಜಾಲಿಯಾಗಿ ಬೈಕ್ನಲ್ಲಿ ಹೋಗಿ ಬರೋಣ. ನಾವೇನು ರಾತ್ರಿ ಕಳೆಯೋಕೆ ಹೋಗ್ತಾ ಇಲ್ಲ ಒಂದು ಎಂಟು ಘಂಟೆ ಹೊತ್ತು ಅಷ್ಟೇ”ಎಂದು ಪುಸಲಾಯಿಸಿದ. ದಿನವೆಲ್ಲಾ ಅವನೊಂದಿಗೆ ಇರುವೆನೆಂಬ ಸಂತಸದಲ್ಲಿ ತಾಯಿ ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿ ಹೂ ಎಂದಳು ಸುಜಯ ಮಾರನೆಯ ಬೆಳಿಗ್ಗೆ ರೆಡಿಯಾಗಿ ಅಮ್ಮನ ಮುಂದೆ ನಿಂತು “ನಾನು ನನ್ ಫ್ರೆಂಡ್ಮನೆಗೆ ಹೋಗ್ತೀನಿ ಅವರ ಮನೇಲಿ ಏನೋ ಫಂಕ್ಷನ್ ಇದೆ ಸಂಜೆ ಬಂದು ಬಿಡ್ತೀನಿ” ಎಂದಾಗ ಹಿಂದಿನ ರಾತ್ರಿ ತಮ್ಮೊಂದಿಗೆ ಏನು ಹೇಳದೆ ಮಗಳು ಈಗ ಇದ್ದಕ್ಕಿದ್ದಂತೆ ಹೊರಟಿರುವುದನ್ನು ಕಂಡು ಕೋಪ ಬಂದರೂ ತಿಳಿ ನೀಲಿ ಚೂಡಿದಾರ್ ತೊಟ್ಟು ಗೊಂಬೆಯಂತೆ ಅಲಂಕರಿಸಿಕೊಂಡು ಮುಂದೆ ನಿಂತಿದ್ದ ಅವಳನ್ನು ತಡೆಯಲು ಮನಸ್ಸು ಬಾರದೆ “ಸರಿ ಹುಷಾರಾಗಿ ಹೋಗ್ಬಿಟ್ ಬಾ” ಎಂದಷ್ಟೇ ಹೇಳಿದಾಗ ಖುಷಿಯಿಂದ ಸುಜಯ ತಂದೆಗೂ ಹೇಳಿ ಹೊರಬಿದ್ದಳು. ಹೇಳಿದ ಸಮಯಕ್ಕೆ ಹೇಳಿದ ಜಾಗಕ್ಕೆ ಸರಿಯಾಗಿ ಬಂದ ಸುಜಯಳನ್ನು ಕಂಡಾಗ ಸುರೇಂದ್ರನ ಮುಖ ಅರಳಿತ್ತು. ಬೈಕ್ನಲ್ಲಿ ಅವನ ಹಿಂದೆ ಕುಳಿತು ಅವನನ್ನು ಬಳಸಿ ಅವನ ಬೆನ್ನಿಗೆ ತಲೆ ಆನಿಸಿ ಕುಳಿತಿದ್ದ ಸುಜಯನಿಗೆ ಸ್ವರ್ಗ ಮೂರೇ ಗೇಣು ಅನ್ನಿಸಿತು ಸುರೇಂದ್ರನಂತೂ ಭೂಮಿಯ ಮೇಲೆe ಇರಲಿಲ್ಲ ಯಾರ ಹಂಗೂ ಇಲ್ಲದೆ ತಿಂದು-ಕುಡಿದು ಕುಣಿದು ಕುಪ್ಪಳಿಸಿ ನಂದಿಯಲ್ಲಿ ನಲಿದಾಡಿದರು ಪ್ರೇಮಿಗಳು. ಟಿಪ್ಪು ಡ್ರಾಪ್ನ ಭೀಕರ ರಮಣೀಯತೆಯನ್ನು ನೋಡುತ್ತಿದ್ದ ಸುರೇಂದ್ರ “ಸುಜಿ ನೀನೇನಾದರೂ ದೂರ ಆದ್ರೆ ನಾನು ಇಲ್ಲೇ ಬಂದು ಬಿದ್ದುಬಿಡ್ತೀನಿ” ಎಂದು ಆವೇಶದಿಂದ ಹೇಳಿದಾಗ ತಕ್ಷಣ ಅವನ ಬಾಯಿ ಮುಚ್ಚಿದ ಸುಜಯ “ಬಿಡ್ತು ಅನ್ನೋ ಕೆಟ್ಟ ಮಾತು ಯಾಕೆ ಆಡ್ತೀಯಾ ಇನ್ನು ಮೂರು ತಿಂಗಳಲ್ಲಿ ನಮ್ಮ ಮದುವೆ ಆಗುತ್ತೆ ಆಮೇಲೆ ನಾನು ನೀನು ಇಬ್ಬರೂ ಯಾವಾಗಲೂ ಹೀಗೆ ಇರಬಹುದು”
ಎಂದು ಬರಲಿರುವ ಸುಂದರ ಭವಿಷ್ಯದ ಕನಸು ಕಾಣುತ್ತಾ ಕಣ್ಣು ಮುಚ್ಚಿದಳು.

ಕನಸು ಕಾಣೋಕೆ ಶುರು ಮಾಡಿದ್ಯಾ? ಈ ಬ್ಯೂಟಿಫುಲ್ ಸ್ಪಾಟ್ ನೋಡ್ತಾ ಇದ್ರೆ ನನಗೆ ಒಂದು ಪದ್ಯ ಹೇಳೋಣ ಅನಿಸುತ್ತಿದೆ

ಸಾಕಪ್ಪ ಮಹಾರಾಯ ನಿನ್ನ ಕವನದ ಸಹವಾಸ ಆಗಲೇ 4:30 ಆಯ್ತು ನಡಿ ಇನ್ನೂ ಹೊರಡೋಣ ಲೇಟಾದ್ರೆ ಅಮ್ಮ ಸಹಸ್ರನಾಮಾರ್ಚನೆ ಮಾಡ್ತಾರೆ
ಎಂದು ಅವನ ಕವಿತ್ವಕ್ಕೆ ಬ್ರೇಕ್ ಹಾಕಿ ಅವನನ್ನು ಹೊರಡಿಸಿದಳು .
ಇಬ್ಬರೂ ಹಿಂತಿರುಗುತ್ತಿದ್ದಾಗ ಮಾಮೂಲಾಗಿ ಬೈಕ್ ನಡೆಸುತ್ತಿದ್ದ ಸುರೇಂದ್ರ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿದ. ಹೆದರಿದ ಸುಜಯ “ಬೇಡ ಸೂರಿ ಯಾಕಿಷ್ಟು ಫಾಸ್ಟ್ ಆಗಿ ಹೋಗ್ತಾ ಇದಿಯಾ ಮೊದಲೇ ಡೌನ್ ಬೇರೆ” ಎಂದು ಎಚ್ಚರಿಸಿದಳು.

ಅಯ್ಯೋ ಪುಕ್ಕಲಿ ಸುಮ್ನೆ ಕೂತ್ಕೋ ಫಾಸ್ಟ್ ಆಗಿ ಹೋದರೆ ಏನು ಮಜಾ ಇರುತ್ತೆ ಅಂತ ನಿನಗೇನು ಗೊತ್ತು ಎಂದು ಅವಳ ಎಚ್ಚರಿಕೆಗೆ ಕಿವಿಕೊಡದೆ ಆಕ್ಸಿಲರೇಟರ್ ಅನ್ನು ಮತ್ತಷ್ಟು ಏರಿಸಿದ. ಗಾಳಿಯ ವೇಗದಲ್ಲಿ ಹೋಗುತ್ತಿದ್ದ ಬೈಕಿನ ಶಬ್ದಕ್ಕೆ ಕಿವುಡಾದನಂತೆನಿಸಿ ಅವನನ್ನು ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣು ಮುಚ್ಚಿದಳು. ಅವಳ ಹೆದರಿಕೆ ಕಂಡು ಮೊeಜೆನಿಸಿದ ಸುರೇಂದ್ರ ಬೇಡಬೇಡವೆಂದರೂ ವೇಗವನ್ನು ಹೆಚ್ಚಿಸುತ್ತಲೇ ಇದ್ದ. ಅವಳನ್ನು ರೇಗಿಸುವ ಆತುರದಲ್ಲಿ ಸ್ವಲ್ಪ ಎಚ್ಚರ ತಪ್ಪಿದಾಗ ತಿರುವಿನಲ್ಲಿ ಬರುತ್ತಿದ್ದ ವಾಹನವನ್ನು ಅವಾಯ್ಡ್ ಮಾಡಲು ತಕ್ಷಣಕ್ಕೆ ಬ್ರೇಕ್ ಒತ್ತಿದಾಗ ಆ ವಾಹನ ಮುಂದಕ್ಕೆ ಹಾದುಹೋದರೂ ಅತಿವೇಗದಲ್ಲಿ ಬ್ರೇಕ್ ಹೊತ್ತಿದ್ದರಿಂದ ಬ್ಯಾಲೆನ್ಸ್ ತಪ್ಪಿದ ಗಾಡಿ ಸ್ಕಿಡ್ ಆಗಿ ಸುರೇಂದ್ರನನ್ನು ಬಲಗಡೆ ಹತ್ತು ಅಡಿ ದೂರಕ್ಕೆ ಎತ್ತಿ ಒಗೆದಿತ್ತು. ಅವನು ಬ್ರೇಕ್ ಒತ್ತಿದಾಗ ಗಟ್ಟಿಯಾಗಿ ಗಾಡಿಯನ್ನು ಹಿಡಿದುಕೊಂಡಿದ್ದರಿಂದ ಅಲ್ಲೇ ಮುಂದಕ್ಕೆ ಮುಗ್ಗರಿಸಿ ನೆಲಕ್ಕೆ ಬಿದ್ದ ಸುಜಯಳ ಬಲಗಾಲ ಮೇಲೆ ಬೈಕ್ ಸಂಪೂರ್ಣವಾಗಿ ಬಿದ್ದಾಗ ಕಾಲಿನ ಮೂಳೆಯೆಲ್ಲ ಪುಡಿಪುಡಿ ಆದಂತೆನಿಸಿ
ಪ್ರಾಣ ಹೋಗುವಂತೆ ಅರಚಿದ ಸುಜಯ ಜ್ಞಾನ ತಪ್ಪಿ ಬಿದ್ದಳು. ಅಷ್ಟು ದೂರ ಬಿದ್ದರೂ ಪಕ್ಕದ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಸುರೇಂದ್ರನಿಗೆ ಹೆಚ್ಚು ಪೆಟ್ಟು ಬೀಳದಿದ್ದರೂ ಚೂಪಾದ ಕಲ್ಲು ತಾಗಿ ಎಡಗಾಲಿಗೆ ಆಳವಾದ ಗಾಯವಾಗಿತ್ತು. ಕುಂಟುತ್ತಾ ಎದ್ದು ಬಂದ ಸುರೇಂದ್ರನಿಗೆ ಸುಜಯನ ಸ್ಥಿತಿ ನೋಡಿ ಜಂಘಾಬಲವೇ ಉಡುಗಿತು. ಅದೃಷ್ಟವಶಾತ್ ಹಿಂದಿನಿಂದ ಬರುತ್ತಿದ್ದ ಕಾರೊಂದು ಇವರ ಅವಸ್ಥೆ ನೋಡಿ ನಿಲ್ಲಿಸಿದಾಗ ನಡೆದ ವಿಷಯ ಅವರಿಗೆ ವಿವರಿಸಿ ಅದೇ ಕಾರಿನಲ್ಲಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಸ್ವಯಂ ತಪ್ಪಿನಿಂದ ಆದ ಅಪಘಾತ ಎಂದು ಹೇಳಿದ್ದರಿಂದ ಹೆಚ್ಚೇನೂ ತಕರಾರು ಮಾಡದೇ ವೈದ್ಯರು ಅವನಿಗೆ ಪ್ರಥಮ ಚಿಕಿತ್ಸೆ ನೀಡಲು ಸಹಾಯಕ ವೈದ್ಯರಿಗೆ ಹೇಳಿ ಸುಜಯಳನ್ನು ತುರ್ತು ಚಿಕಿತ್ಸಾ ಕೊಠಡಿಗೆ ಸಾಗಿಸಿದರು. ವಿಷಯ ತಿಳಿದ ಇಬ್ಬರ ತಂದೆ-ತಾಯಿಯರು ಧಾವಿಸಿಬಂದರು. ಹೇಳದೆ ಕೇಳದೆ ಅವಳನ್ನು ಕರೆದುಕೊಂಡು ಹೋಗಿ ಈ ಪ್ರಮಾದಕ್ಕೆ ಕಾರಣನೆಂದು ಜಾನಕಮ್ಮ ಸುರೇಂದ್ರ ನನ್ನು ದೂಷಿಸಿದರೆ ..ಮದುವೆಯ ಮುಂಚೆ ಹೆಣ್ಣುಮಗಳನ್ನು ಅವನೊಂದಿಗೆ ಕಳಿಸಿದ್ದೇ ಅವರ ತಪ್ಪು ಎಂದು ಜಾನಕಮ್ಮ ಆಪಾದಿಸಿದರು. ಸುರೇಂದ್ರ ಮಾತ್ರ ಅಪರಾಧಿ ಪ್ರಜ್ಞೆಯಿಂದ ಕುಗ್ಗಿಹೋಗಿದ್ದ. ಸುಜಯಾಳ ಆಪರೇಷನ್ ಮಾಡಿದ ವೈದ್ಯರು ಕಂಗೆಟ್ಟು ನಿಂತಿದ್ದ ಎಲ್ಲರಿಗೂ “ಕಂಗ್ರಾಟ್ಸ್ ಪ್ರಾಣಕ್ಕೆ ಅಪಾಯ ಇಲ್ಲ ಬಟ್ ಐ ಯಾಮ್ ಸಾರಿ ಆಕೆಯ ಕಾಲನ್ನು ಉಳಿಸೋಕೆ ಆಗ್ಲಿಲ್ಲ ಕಾಲು ತೆಗೆಯಬೇಕಾಯಿತು. ಈ ವಿಷಯದ ಬಗ್ಗೆ ನಾನು ರಾಯರ ಹತ್ರ ಮಾತಾಡಿ ಒಪ್ಪಿಗೆ ತೊಗೊಂಡೇ ಮಾಡಿದ್ದು” ಎಂದು ರಾಯರ ಕಡೆ ನೋಡುತ್ತಾ ಹೇಳಿದರು.
ಆಸ್ಪತ್ರೆ ಎನ್ನುವುದನ್ನು ಮರೆತು ಜಾನಕಮ್ಮ ಹೋ ಎಂದು ಗೋಳಾಡುತ್ತಾ ಅತ್ತರು. ಏನು ಮಾಡಲು ತೋರದೇ ಸುರೇಂದ್ರ ದಿಗ್ಭ್ರಾಂತನಾಗಿ ನಿಂತಿದ್ದ. ಇಂತಹ ಒಂದು ದುರ್ಘಟನೆ ನಡೆಯಬಹುದೆಂದು ಕನಸಿನಲ್ಲಾದರೂ ಎಣಿಸಿದ್ದೆನೆe ತಾನು?
ಪಂಕಜಮ್ಮ ಲೊಚ್ ಲೊಚ್ ಎನ್ನುತ್ತಾ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು.
ಅತಿಯಾದ ಆಘಾತದಿಂದ ಬಳಲಿದ ಕೇಶವರಾಯರು ಮಾತು ಮರೆತು ಎದೆಯ ಮೇಲೆ ಕೈಯಾಡಿಸುತ್ತ ಕಣ್ಣು ಮುಚ್ಚಿ ಕೂತರು. ಆದಷ್ಟೂ ಕಾಲು ಉಳಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ಸ ವೈದ್ಯರು ಕೊನೆಗೂ ಹತಾಶರಾಗಿ ಕೈ ಚೆಲ್ಲಿದರೇ..?

ಮುಂದಿನ ಘಟನೆಗಳೆಲ್ಲ ಚಿತ್ರದಲ್ಲಿ ನಡೆದಂತೆ ನಡೆದು ಹೋಗಿದ್ದವು. ಮೊದಮೊದಲಲ್ಲಿ ಸುರೇಂದ್ರ
ತನ್ನಿಂದಾದ ಅಪರಾಧಕ್ಕೆ ಪ್ರಾಯಶ್ಚಿತ್ತ ಎಂಬಂತೆ ದಿನಕ್ಕೆರಡು ಮೂರು ಬಾರಿ ಆಸ್ಪತ್ರೆಗೆ ಭೇಟಿ ಕೊಡುತ್ತಾ ಆದಷ್ಟು ಹೊತ್ತು ಸುಜಯನೊಂದಿಗೆ ಕಳೆಯುತ್ತ ಅವಳನ್ನು ಸಂತೋಷವಾಗಿಡಲು ಯತ್ನಿಸುತ್ತಿದ್ದ. ತನ್ನ ಕಾಲನ್ನು ತೆಗೆದುಹಾಕಿದ್ದಾರೆ ಎಂದು ತಿಳಿದ ದಿನ ಆಘಾತದಿಂದ ಸುಜಯನ ಪ್ರಾಣ ಹೋಗದಿದ್ದದ್ದು ಹೆಚ್ಚು. ಯಾರೆಷ್ಟೇ ಸಮಾಧಾನ ಮಾಡಿದರೂ ಮಾತನಾಡಿಸಲು ಪ್ರಯತ್ನಿಸಿದರೂ ಮಾತನಾಡದೆ ಯಾವ ಭಾವನೆಯನ್ನು ವ್ಯಕ್ತಪಡಿಸದೇ ತುಟಿ ಬಿಗಿದುಕೊಂಡು ಇದ್ದ ಸುಜಯಳಿಗೆ ವಾಸ್ತವತೆಯ ಪರಿಚಯ ಮಾಡಿಸಿ ಅವಳನ್ನು ಮೊದಲಿನಂತೆ ಮಾತನಾಡುವ ಹಾಗೆ ಮಾಡಬೇಕಾದರೆ ಎಲ್ಲರಿಗೂ ಸಾಕಾಗಿತ್ತು. ತಾನೆಷ್ಟು ಅತ್ತರೂ, ಬಿಗಿದುಕೊಂಡರೂ ತಾನು ಕಳೆದುಕೊಂಡ ಕಾಲು ಮತ್ತೆ ಬರುವುದಿಲ್ಲ ಎಂಬ ಕಟು ಸತ್ಯ ಅರಗಿಸಿಕೊಂಡ ಸುಜಯಳಿಗೆ ಸುರೇಂದ್ರ ಮಾತ್ರ ಎಂದಿಗಿಂತ ಹೆಚ್ಚಿಗೆ ಪ್ರೀತಿ ತೋರಿಸುತ್ತಿರುವುದು ಒಂದು ಸಮಾಧಾನದ ಸಂಗತಿಯಾಗಿತ್ತು. ಸುಮಾರು ಹದಿನೈದು ದಿನಗಳು ಆಸ್ಪತ್ರೆಯಲ್ಲಿದ್ದ ಸುಜಯ ಮನೆಗೆ ಬಂದಳು.

ಮುಂದಿನ ದಿನಗಳಲ್ಲಿ ಅಚ್ಚರಿ ಹುಟ್ಟಿಸುವಂತೆ ಬದಲಾಗಿದ್ದ ಸುರೇಂದ್ರ. ತನ್ನಿಂದಾದ ಅಪರಾಧಕ್ಕೆ ತಾನೆಂದಿಗೂ ಸುಜಯನ ಕೈ ಬಿಡಬಾರದೆಂಬ ಅವನ ನಿರ್ಧಾರ ತಾಯಿ-ತಂದೆ ನೆಂಟರಿಷ್ಟರ ಉಪದೇಶಗಳ ಮುಂದೆ ಸ್ವಲ್ಪಸ್ವಲ್ಪವಾಗಿ ಕುಸಿಯುತ್ತಿತ್ತು. ಅವರ ವಿಷಯ ತಿಳಿದಿದ್ದ ವೈದ್ಯರು ಅವನೊಂದಿಗೆ ಮಾತನಾಡುವಾಗ “ಹೇಗಿದ್ದಾರೆ ನಿಮ್ಮ ಫಿಯಾನ್ಸಿ” ಎನ್ನುತ್ತಿದ್ದಾಗ ಸಹಜವಾಗಿರುತ್ತಿದ್ದ ಸುರೇಂದ್ರನಿಗೆ ಇತ್ತೀಚೆಗೆ ಯಾರಾದರೂ ಸುಜಯಳನ್ನು ತನ್ನ ಫಿಯಾನ್ಸಿ ಎಂದರೆ ಏಕೋ ಸಹ್ಯವಾಗುತ್ತಿರಲಿಲ್ಲ. ಕುಂಟಿಯನ್ನು ಕಟ್ಟಿಕೊಂಡರೆ ನೀನು ಖಂಡಿತ ಸುಖವಾಗಿರುವುದಿಲ್ಲ ಎಂದು ಅವನ ಭೀಕರ ಭವಿಷ್ಯದ ಚಿತ್ರಣವನ್ನು ಅವನ ಮುಂದಿಟ್ಟಿದ್ದ ಪಂಕಜಮ್ಮ ತಮ್ಮ ಮುದ್ದುಗಾರ ಮಗನಿಗೆ ಕಾಲಿಲ್ಲದವಳನ್ನು ಖಂಡಿತ ಕಟ್ಟಲಾರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ತನ್ನಿಂದಲೇ ಸುಜಯ ಕುಂಟಿ ಆದಳು ಎಂದು ಕೊರಗುತ್ತಿದ್ದ ಸುರೇಂದ್ರ ಆ ನಂತರದಲ್ಲಿ ತಾನು ಒಂದು ನೆಪ ಮಾತ್ರ ಅವಳ ಹಣೆಬರಹವೇ ಹಾಗಿದ್ದಲ್ಲಿ ನಾನೇನು ಮಾಡಲು ಸಾಧ್ಯ ಅದಕ್ಕಾಗಿ ತನ್ನ ಬಾಳು ಭವಿಷ್ಯ ಹಾಳಾಗ ಬೇಕೇ ಎಂಬ ಸಿದ್ಧಾಂತಕ್ಕೆ ಬಂದಿದ್ದ. ಕಂಕುಳಿಗೆ ಮರದ ಕೋಲನ್ನು ಆಸರೆಯಾಗಿ ಹಿಡಿದು ಕುಂಟುತ್ತಾ ಬರುವ ಸುಜಯಳನ್ನು ತನ್ನ ಹೆಂಡತಿಯಾಗಿ ಪಕ್ಕದಲ್ಲಿ ಕಲ್ಪಿಸಿಕೊಳ್ಳಲೂ ಹೆದರುತ್ತಿದ್ದ. ಒಂದು ಶುಭ ದಿನ ಪಂಕಜಮ್ಮ ಬಂದು ತಾವು ಈ ನಿಶ್ಚಿತಾರ್ಥ ಮುರಿಯುತ್ತಿದ್ದೇವೆ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿ ಹೋಗಿದ್ದರು. ಸುರೇಂದ್ರ ನನ್ನು ಕಾಡಿಬೇಡಿ ಫಲ ಕಾಣದ ಕೇಶವರಾಯರು ಅಸಹಾಯಕರಾಗಿ ಕೈ ಚೆಲ್ಲಿ ಕೂತರೆ ದೊಡ್ಡವರ ಮಾತಿಗೆ ಬೆಲೆಕೊಡದೆ ಅವನೊಂದಿಗೆ ಹೋಗಿ ತನ್ನ ಬಾಳು ಹಾಳು ಮಾಡಿಕೊಂಡಿದ್ದಲ್ಲದೇ ತಮ್ಮ ಮುಖಕ್ಕೆ ಮಸಿ ಬಳಿದಳು ಎಂದು ಹತ್ತು ಮನೆಗೆ ಕೇಳಿಸುವಂತೆ ಭೋರೆಂದು ಅತ್ತಿದ್ದ ಜಾನಕಮ್ಮ ತಮ್ಮ ಮಗಳನ್ನು ಈ ಸ್ಥಿತಿಗೆ ತಂದಿಟ್ಟ ಸುರೇಂದ್ರನಿಗೆ ಹಿಡಿಹಿಡಿ ಶಾಪ ಹಾಕಿದರು. ಇವರೆಲ್ಲರ ಮಧ್ಯೆ ನಿರ್ಲಿಪ್ತಳಾಗಿದ್ದವಳು ಸುಜಯ ಮಾತ್ರ. ಸುರೇಂದ್ರ ತನ್ನನ್ನು ನಿರಾಕರಿಸಿದ ಎಂದು ತಿಳಿದಾಗ ಅವಳ ಮನಸ್ಸಿಗೆ ನೋವಾಗಲಿಲ್ಲ.. ಕಣ್ಣಿನಿಂದ ನಾಲ್ಕು ಹನಿ ಉರುಳಲಿಲ್ಲ. ಮನಸ್ಸಿಗೆ ಒಂದು ರೀತಿಯ ವೈರಾಗ್ಯ ಆವರಿಸಿತ್ತು. ಆಶ್ಚರ್ಯವೆಂದರೆ ಸುರೇಂದ್ರನ ಮೇಲೆ ಅವಳಿಗೆ ದ್ವೇಷವಾಗಲಿ ಸಿಟ್ಟಾಗಲಿ ಉಂಟಾಗಲಿಲ್ಲ ಬಹುಶಃ ಅವನ ಅಂತರಂಗದ ಪರಿಚಯ ಅವಳಿಗಾಗಿತ್ತೋ ಏನೋ.

ತಾನು ಪ್ರೀತಿಸಿದ ಸುರೇಂದ್ರ ಇವನಲ್ಲ. ಗಂಟೆಗಟ್ಟಲೆ ಮಾತಾಡಿದರೂ ತೃಪ್ತಿಯಿಲ್ಲದೆ ಹೊತ್ತು ಗೊತ್ತಿಲ್ಲದೆ ಮೆಸೇಜ್ ಮಾಡುತ್ತ, ಮಾತಿಗೊಮ್ಮೆ ತನ್ನ ಬಗ್ಗೆ ಕವಿತೆ ಬರೆಯುತ್ತ, ತನ್ನ ಕವನಕ್ಕೆ ನೀನೇ ಸ್ಫೂರ್ತಿ ಎನ್ನುತ್ತಿದ್ದವನು, ಸಾಕು ಸಾಕೆನಿಸುವಷ್ಟು ಪ್ರೀತಿಯ ಹೊಳೆ ಹರಿಸುತ್ತಿದ್ದವನು, ತಾನು ಸಿಗದಿದ್ದರೆ ಟಿಪ್ಪು ಡ್ರಾಪ್ ನಿಂದ ಬಿದ್ದು ಪ್ರಾಣ ಬಿಡುತ್ತೇನೆoದವನು ಇವನೇನಾ..?? ತನ್ನನ್ನು ಹೃದಯದಿಂದ ಪ್ರೀತಿಸುವ ಮೃದು ಮನಸ್ಸಿನ ಹುಡುಗ ತನ್ನವನು ಎಂದು ತಾನೆಂದುಕೊಂಡಿದ್ದು ತಪ್ಪೇ..? ಹಾಗಾದರೆ ಅವನು ಬರೀ ತನ್ನ ರೂಪವನ್ನು ಪ್ರೀತಿಸುತ್ತಿದ್ದನೆ ತನ್ನ ಚೆಲುವಿಗಷ್ಟೇ ಮಾರು ಹೋಗಿದ್ದನೇ…ಯೋಚಿಸುತ್ತ ತಲೆ ಸಿಡಿದು ಹೋಳಾಗುವಂತೆ ಅನಿಸುತ್ತಿತ್ತು. ದಿನ ಕಳೆದಂತೆ , ತಂದೆ-ತಾಯಿ ಮದುವೆ ತಪ್ಪಿ ಹೋದದ್ದಕ್ಕಾಗಿ ಹಲುಬುತ್ತಿದ್ದರೆ ಅಂತಹ ದುರ್ಬಲ ಮನಸ್ಸಿನ ವ್ಯಕ್ತಿತ್ವದ, ಬಾಹ್ಯಾಡಂಬರದ, ಸ್ವಾರ್ಥಿಯಾದ ಗಂಡಸು ತನ್ನ ಗಂಡ ಆಗುವುದು ತಪ್ಪಿತಲ್ಲ ಎಂದು ಸಮಾಧಾನ ಪಟ್ಟುಕೊಂಡಿದ್ದಳು. ಮುಂದಿನ ಮೂರು ತಿಂಗಳಲ್ಲಿ ಸುರೇಂದ್ರನ ಮದುವೆಯೂ ಆಗಿತ್ತು. ಅವಳಿಗೆ ಲಗ್ನಪತ್ರಿಕೆಯನ್ನು ಕಳಿಸುವ ಭಂಡತನವನ್ನೂ ತೋರಿದ್ದ ಅವನು. ಅವನ ಹೆಂಡತಿ ಸವಿತಾ ಅಪ್ರತಿಮ ಚೆಲುವೆ ಎಂದೂ, ಆಗರ್ಭ ಶ್ರೀಮಂತರ ಒಬ್ಬಳೇ ಮಗಳೆಂದು ಸುಜಯಳ ಗೆಳತಿಯೂ ಸುರೇಂದ್ರನ ದೂರದ ನೆಂಟಳೂ ಆದ ಕವಿತಾಳಿಂದ ತಿಳಿದುಬಂದಿತ್ತು. ಅವಳ ಬಾಯಿಂದ ಅವನ ಮದುವೆಯ ವರ್ಣನೆ ಕೇಳಿ ಬೇಸರ ಬಂದಿತ್ತು. ದೊಡ್ಡ ಬಂಗಲೆ, ಕಾರನ್ನು ಅಳಿಯನಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಸವಿತಾಳ ತಂದೆ ಎಂದು ತಿಳಿದಾಗ ಸುಜಯನ ತುಟಿಯ ಮೇಲೆ ವ್ಯಂಗ್ಯ ನಗೆ ಸುಳಿಯಿತು. ಎಂಜಿನಿಯರ್ ವರನಿಗೆ ಅಷ್ಟು ಕೊಡಲಾರರೇ ಹೆಣ್ಣು ಹೆತ್ತವರು ಎಂದು.

ಆರೆಂಟು ತಿಂಗಳಲ್ಲಿ ಸಂಪೂರ್ಣ ಸುಧಾರಿಸಿಕೊಂಡಿದ್ದ ಸುಜಯ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿದ್ದಳು. ಈ ಮಧ್ಯೆ ಅವಳ ಫಲಿತಾಂಶ ಹೊರಬಿದ್ದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ನಾಲ್ಕಾರು ಕಡೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದಳು. ಬ್ಯಾಂಕಿನ ಪರೀಕ್ಷೆ ಪಾಸು ಮಾಡಿ ಕೆಲಸ ಸಿಗುವ ಭರವಸೆಯಲ್ಲಿ ಕಾಯುತ್ತಿದ್ದಳು. ಅವಳ ಬುದ್ಧಿವಂತಿಕೆಯ ಜೊತೆಗೆ ಈಗ ಅಂಗವಿಕಲತೆಯೂ ಸೇರಿಕೊಂಡು ಅವಳಿಗೆ ಕೆಲಸ ಸಿಗುವುದು ಕಷ್ಟವಾಗಲಿಲ್ಲ. ಈ ಸ್ಥಿತಿಯಲ್ಲಿ ಕೆಲಸಕ್ಕೆ ಹೋಗಬೇಕೇ ಎಂದ ತಂದೆ-ತಾಯಿಯರನ್ನು ಸಮಾಧಾನ ಮಾಡಿ ಬ್ಯಾಂಕಿನ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ನಂತರ ಸುಜಯ ಬಹಳಷ್ಟು ಬದಲಾಗಿದ್ದಳು. ಮೊದಲಿಗಿಂತ ಲವಲವಿಕೆಯಿಂದ ಇರುತ್ತಿದ್ದಳು. ಕೆಲಸದಲ್ಲಿ ಇರುವಷ್ಟು ಹೊತ್ತಾದರೂ ತನ್ನ ನೋವನ್ನು ಮರೆತು ನಗುನಗುತ್ತಾ ಇರುತ್ತಿದ್ದಳು. ಅವಳ ಆತ್ಮವಿಶ್ವಾಸವು ಹೆಚ್ಚಿತ್ತು. ಇಷ್ಟೆಲ್ಲಾ ಆದರೂ ಅವಳಿಗೆ ಒಮ್ಮೊಮ್ಮೆ ಸಹೋದ್ಯೋಗಿಗಳ, ಸಾರ್ವಜನಿಕರ ಕನಿಕರದ ನೋಟ ಕಂಡು ಮೈಯೆಲ್ಲ ಉರಿಯುತ್ತಿತ್ತು. ಬೇರೆಯವರ ಕನಿಕರದ ವಸ್ತುವಾದೆನೇ ತಾನು? ಎಂದು ಕೊರಗುತ್ತಿದ್ದಳು. ಇದ್ದಕ್ಕಿದ್ದಂತೆ ಅವಳಿಗೆ ತಾನೇಕೆ ಕೃತಕ ಕಾಲನ್ನು ಅಳವಡಿಸಿಕೊಳ್ಳಬಾರದು ಕಡೆ ಪಕ್ಷ ತನ್ನ ಪರಿಚಯ ಇಲ್ಲದವರಿಗಾದರೂ ನೋಡಿದ ಕೂಡಲೇ ತಾನು ಕುಂಟಿ ಎಂಬ ಸತ್ಯ ತಿಳಿಯುವುದಿಲ್ಲ ಇದರಿಂದ ಬೀದಿಯಲ್ಲಿ ಹೋಗಿ ಬರುವವರ ಕರುಣೆಯ ನೋಟವನ್ನಾದರೂ ತಪ್ಪಿಸಬಹುದು ಎಂದುಕೊಂಡು ತಂದೆಯನ್ನು ಕೇಳಿದಾಗ ಕೇಶವರಾಯರು ಸಂತೋಷದಿಂದ ಸಮ್ಮತಿಸಿದ್ದರು. ಹೇಗಿದ್ದರೂ ತನ್ನ ಖರ್ಚಿಗಾಗಿ ಮಿಕ್ಕ ಸಂಬಳದ ಹಣವೆಲ್ಲ ಬ್ಯಾಂಕಿನಲ್ಲಿದೆ. ಈಗ ಅದೇ ಹಣದಿಂದಲೇ ಕೃತಕ ಕಾಲನ್ನು ಅಳವಡಿಸಿಕೊಳ್ಳಲು ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದಳು. ಮೊದಮೊದಲು ಅದನ್ನು ಹಾಕಿಕೊಂಡು ನಡೆಯುವಾಗ ಬಹಳ ಹಿಂಸೆಯಾಗುತ್ತಿತ್ತು. ಬಲಗಾಲೂರಿದರೆ ಮೈಯ ನರವೆಲ್ಲ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಅಭ್ಯಾಸವಾದಂತೆಲ್ಲ ಬಹಳ ಸಹಜವಾಗಿ ನಡೆಯುತ್ತಿದ್ದ ಅವಳಿಗೆ ಎಷ್ಟೋ ಬಾರಿ ತಾನು ಕುಂಟಿ ಎಂಬ ಅಂಶವೇ ಮರೆಯುತ್ತಿತ್ತು. ಕೆಲಸಕ್ಕೆ ಹೋಗಿ ಬರುತ್ತಾ ತನ್ನ ದೈನಂದಿನ ಚಟುವಟಿಕೆಯಲ್ಲಿ ಸುಜಯ ನಿಶ್ಚಿಂತಳಾಗಿದ್ದರೂ ಜಾನಕಮ್ಮ, ಕೇಶವರಾಯರು ಮಾತ್ರ ತಮ್ಮ ಮಗಳು ಬಾಳೆಲ್ಲ ಹೀಗೆ ಒಂಟಿಯಾಗಿಯೇ ಇರಬೇಕಾ, ತಮ್ಮ ನಂತರ ಅವಳಿಗೆ ಆಸರೆ ಯಾರು ಯಾರಾದರೂ ಪುಣ್ಯಾತ್ಮ ಅವಳಿಗೆ ಜೊತೆ ಆಗಬಾರದೇ ಎಂದು ಕಂಡ ಕಂಡ ದೇವರಲ್ಲಿ ಹರಕೆ ಹೊತ್ತರು. ಅವರ ಮೊರೆ ದೇವರಿಗೆ ಕೇಳಿತೋ ಎಂಬಂತೆ ಅನಿರೀಕ್ಷಿತವಾಗಿ ಅಂತಹ ಅವಕಾಶ ಒದಗಿಬಂದಿತ್ತು.

ಸುಜಯಳ ಬ್ಯಾಂಕಿನಲ್ಲಿ ಮೊದಲಿದ್ದ ಸಿಡುಕು ಮೂರ್ತಿಯ ಮ್ಯಾನೇಜರ್ ಗೆ ವರ್ಗವಾಗಿ ಆ ಜಾಗಕ್ಕೆ ಸುದರ್ಶನ್ ಬಂದಿದ್ದ. 35 ವರ್ಷದ, ಆಧುನಿಕ ವಿಚಾರದ, ಎಣ್ಣೆಗೆಂಪು, ಬಣ್ಣದ ಎತ್ತರದ ನಿಲುವಿನ ಹಸನ್ಮುಖಿ ತಮಗೆ ಮ್ಯಾನೇಜರಾಗಿ ಬಂದಾಗ ಬ್ಯಾಂಕಿನ ಸಿಬ್ಬಂದಿಗೆಲ್ಲ ನೆಮ್ಮದಿಯಾಗಿತ್ತು. ಬಹಳ ಬೇಗ ತನ್ನ ಸಹೋದ್ಯೋಗಿಗಳ ಮನಸ್ಸನ್ನು ಗೆದ್ದಿದ್ದ ಸುದರ್ಶನ್ ಎಲ್ಲರೊಂದಿಗೂ ಸ್ನೇಹದಿಂದ ನಡೆದುಕೊಳ್ಳುತ್ತಿದ್ದ.
ಸುಜಯಳ ಬಗ್ಗೆ ..ಯಾವುದೇ ವಿಷಯವಾದರೂ ಬಿಚ್ಚುಮನಸ್ಸಿನಿಂದ ಸಂಕೋಚವಿಲ್ಲದೆ ಮಾತಾಡುವ ಒಳ್ಳೆಯ ಕೆಲಸಗಾರ್ತಿ, ಚೆಲುವೆ, ಅವಿವಾಹಿತೆ ಎಂದಷ್ಟೇ ಅಂದುಕೊಂಡಿದ್ದ ಸುದರ್ಶನನಿಗೆ ಅವಳ ಅಂಗವಿಕಲತೆಯ ಬಗ್ಗೆ ತಿಳಿದಾಗ ನೊಂದುಕೊಂಡಿದ್ದ. ಆದರೆ ತನ್ನ ಅಂಗವಿಕಲತೆಯನ್ನು ಕೊಂಚವೂ ತೋರ್ಪಡಿಸಿಕೊಳ್ಳದೆ ಬೇರೆಯವರ ಅನುಕಂಪವನ್ನು ದುರುಪಯೋಗ ಪಡಿಸಿಕೊಳ್ಳದೇ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದ ಅವಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ. ದಿನ ಉರುಳಿದಂತೆ ಅವಳೆಡೆಗೆ ಅರಿವಿಲ್ಲದೆ ನಿಧಾನವಾಗಿ ಆಕರ್ಷಿತನಾಗುತ್ತಿದ್ದ. ಅವಳ ರೂಪ ಗುಣದ ಮುಂದೆ ಅವಳ ವೈಕಲ್ಯ ಬಹಳ ಚಿಕ್ಕ ವಿಷಯ ಎನಿಸಿತ್ತು ಅವನಿಗೆ.
ಸುಜಯ ಸಹ ಅವನ ಬಿಚ್ಚು ಸ್ವಭಾವ ಕಂಡು ಅವನನ್ನು ಹೆಚ್ಚು ಗೌರವದಿಂದ ಕಾಣುತ್ತಿದ್ದಳು.
ಚಿಕ್ಕಂದಿನಿಂದ ಅನಾಥನಾಗಿ ಬೆಳೆದಿದ್ದ ಸುದರ್ಶನ ಆತ್ಮಸ್ಟೈರ್ಯ, ಬುದ್ಧಿ ಬಲದಿಂದ ಮುಂದೆ ಬಂದಿದ್ದ.
ತನಗೆ ಸರಿ ಎನಿಸಿದ್ದನ್ನು ಮಾಡುತ್ತಿದ್ದ. ಆಧುನಿಕ
ಮನೋಭಾವನೆಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಸುದರ್ಶನ್ ಗೆ ಇದ್ದಕ್ಕಿದ್ದಂತೆ ತಾನೇಕೆ ಸುಜಯಳನ್ನು ಮದುವೆಯಾಗಬಾರದು ಎನಿಸಿತ್ತು. ಅವಳನ್ನು ತನ್ನ ಪತ್ನಿಯಾಗಿ ಕಲ್ಪಿಸಿಕೊಂಡಾಗ ಯಾವುದೋ ಅರಿಯದ ಸಂತಸದಿಂದ ಮೈ ಹಗುರವಾಗಿತ್ತು.

ಒಮ್ಮೆ ಸುಜಯ ರೇಷ್ಮೆ ಸೀರೆಯುಟ್ಟು ಹೊಸ ಕಳೆಯಿಂದ ಅವನ ಚೇಂಬರಿಗೆ ಬಂದು ಇವತ್ತು ನನ್ನ ಹುಟ್ಟಿದ ದಿನ ಎಂದು ಸಿಹಿ ಕೊಟ್ಟಾಗ ಅವಳನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ “ಇಷ್ಟರಲ್ಲೆ ಮುಗಿಸಿ ಬಿಡ್ತೀರಾ ಮನೆಗೆ ಕರೆಯಲ್ವಾ?” ಎಂದಾಗ ಅದನ್ನು ನಿರೀಕ್ಷಿಸಿರದ ಅವಳು ಗಲಿಬಿಲಿಗೊಂಡು ಅದಕ್ಕೇನು ಸರ್ ಬನ್ನಿ ಎಂದಳು ತಡವರಿಸುತ್ತಾ.
“ಸುಮ್ಮನೆ ಬನ್ನಿ ಅಂದ್ರೆ ಅಡ್ರೆಸ್ ಬೇಡ್ವಾ..ಲೋಕೇಶನ್?” ಎಂದು ಫೋನ್ ಎತ್ತಿ ಆಡಿಸಿದಾಗ
“ಖಂಡಿತ ಬನ್ನಿ ಸರ್ ಯು ಆರ್ ಮೋಸ್ಟ್ ವೆಲ್ಕಮ್ ಲೋಕೇಶನ್ ಕಳಿಸ್ತೀನಿ” ಎಂದು ಶಿಷ್ಟಾಚಾರಕ್ಕೆ ಎಂಬಂತೆ ಹೇಳಿ ಹೊರನಡೆದಳು. ತುಂಟತನದಿಂದ ಅವಳು ಹೋದ ಕಡೆಯೇ ನೋಡುತ್ತಾ ಸುದರ್ಶನ್ ಸಂಜೆ ಆಡಬೇಕಾಗಿರುವ ಮಾತುಗಳನ್ನು ಮೆಲುಕು ಹಾಕತೊಡಗಿದ. ಸುಮ್ಮನೆ ತನ್ನನ್ನು ಛೇಡಿಸಲು ವಿಳಾಸ ಕೇಳಿದ್ದಾನೆ ಎಂದುಕೊಂಡಿದ್ದ ಸುಜಯ ಆ ವಿಷಯವನ್ನು ಮರೆತೇ ಬಿಟ್ಟಿದ್ದಳು. ಆದರೆ ಸಂಜೆ ಸುಮಾರು ಏಳು ಗಂಟೆ ಸಮಯದಲ್ಲಿ ತನ್ನ ಮನೆಯ ಮುಂದೆ ಕಾರಿನಿಂದ ಇಳಿಯುತ್ತಿದ್ದ ಸುದರ್ಶನನನ್ನು ಕಂಡು ಗಾಬರಿಯಿಂದ ತಂದೆ-ತಾಯಿಗೆ ವಿಷಯ ತಿಳಿಸಿ ದಡಗುಟ್ಟುತ್ತಿದ್ದ ಎದೆಯೊಂದಿಗೆ ಬಾಗಿಲಿಗೆ ಬಂದು ಅವನನ್ನು ಸ್ವಾಗತಿಸಿದಳು. ಅವರೊಂದಿಗೆ ತನ್ನ ಪರಿಚಯ ಮಾಡಿಕೊಂಡ ಸುದರ್ಶನ ನೇರವಾಗಿ ಸುಜಯಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದಾಗ ಮೂರು ಜನರೂ ಚಿತ್ರದಲ್ಲಿನ ಬೊಂಬೆಗಳಂತೆ ನಿಂತರು. ಅವರ ಮೌನವನ್ನು ಅಪಾರ್ಥ ಮಾಡಿಕೊಂಡ ಸುದರ್ಶನ್ “ಇದರಲ್ಲಿ ಬಲವಂತ ಇಲ್ಲ ನಿಮಗೆ ಒಪ್ಪಿಗೆ ಆದ್ರೆ ಮಾತ್ರ ತಿಳಿಸಿ” ಎನ್ನುತ್ತಾ ಹೊರಡಲನುವಾದ. ಆನಂದ ಆಶ್ಚರ್ಯಗಳಿಂದ ಮೂಕರಾಗಿದ್ದ ಕೇಶವರಾಯರು “ಎಂಥ ದೊಡ್ಡ ಮಾತು ಇಂಥ ಒಂದು ಸಂತೋಷದ ಘಳಿಗೆ ನಮ್ಮ ಮಗಳ ಬಾಳಿನಲ್ಲಿ ಬರುತ್ತೆ ಅಂತ ನಾವು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ನಿಜವಾಗಿಯೂ ಅವಳು ಅದೃಷ್ಟ ಮಾಡಿದ್ಲು ಏನಮ್ಮ? ಮಗಳ ಕಡೆ ನೋಡಿದರು. ಜಾನಕಮ್ಮ ಅತಿಯಾದ ಸಂತಸದಿಂದ ದೇವರಿಗೆ ತುಪ್ಪದ ದೀಪ ಹಚ್ಚಲು ಹೋದರು. ಒಂದಿಷ್ಟು ಸುಳಿವು ಕೊಡದೆ ಮನೆಗೆ ಬಂದು ಧಿಡೀರನೆ ಮದುವೆಯ ಪ್ರಸ್ತಾಪ ಮಾಡಿದ ಸುದರ್ಶನನ ವರ್ತನೆ ಅಧಿಕಪ್ರಸಂಗತನ ಎನಿಸಿದರೂ ಅದು ಅವಳ ಮನಸ್ಸಿಗೆ ಆಹಿತಕರವಾಗೇನೂ ಇರಲಿಲ್ಲ. ಆದರೂ ಕೆಲವು ವಿಷಯಗಳನ್ನು ಅವನಿಂದ ಸ್ಪಷ್ಟಪಡಿಸಿಕೊಳ್ಳಬೇಕು ಎಂದುಕೊಳ್ಳುತ್ತ
“ಅಣ್ಣ ಒಂದು ನಿಮಿಷ ಒಳಗೆ ಇರ್ತೀರ ಸ್ವಲ್ಪ ಮಾತಾಡಬೇಕು” ಎಂದಾಗ ಕೇಶವರಾಯರು ಎದ್ದು ಒಳ ಹೋದರು. ಅವನ ಎದುರಿನ ಸೋಫಾದಲ್ಲಿ ಕುಳಿತ ಸುಜಯ “ಸರ್ ನಂಗೆ ನಿಜವಾಗಲೂ ಶಾಕ್ ಆಗ್ತಾ ಇದೆ ರೂಪ, ಗುಣ, ಸಮಾಜದಲ್ಲಿ ಒಳ್ಳೆಯ ಸ್ಥಾನ ಎಲ್ಲಾ ಇರೋ ನೀವು ನನ್ನಂಥ ಕುಂಟಿಯನ್ನು ಮದುವೆ ಆಗ್ತಾ ಇರೋದು ಯಾವ ಸುಖಕ್ಕೋಸ್ಕರ ಈಗ ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ಮದುವೆಯಾಗಿ ನಂತರ ಪಶ್ಚಾತ್ತಾಪ ಆಗಬಹುದು. ನನ್ನ ಹೆಂಡತಿ ಕುಂಟಿ ಅನ್ನೋ ಕೀಳರಿಮೆ ಕಾಡಬಹುದು ಒಂಟಿಕಾಲಿನ ಹೆಂಡತಿಯನ್ನು ಕರೆದುಕೊಂಡು ಹೋಗಲು ಅವಮಾನ ಅನ್ನಿಸಬಹುದು ಆಗ ನಿಮ್ಮ ಬಾಳು ನರಕ ಆಗುತ್ತೆ ನನ್ನ ಆತ್ಮಸ್ಥೈರ್ಯವೂ ಕುಗ್ಗಿ ಹೋಗುತ್ತೆ. ನನಗಿರೋ ಅಷ್ಟಿಷ್ಟು ಮನಃಶಾಂತಿನೂ ಹೊರಟುಹೋಗುತ್ತೆ ಯೋಚನೆ ಮಾಡಿ” ಎಂದಳು ಗಂಭೀರವಾಗಿ.
“ನೋಡಿ ಸುಜಯ ನಿಮ್ಮ ಈ ಬಿಚ್ಚುಮಾತೇ ನನ್ನನ್ನು ಆಕರ್ಷಿಸಿರುವುದು ನನ್ನನ್ನು ನಂಬಿ ಖಂಡಿತ ನಾನು ಕನಿಕರದಿಂದ ನಿಮ್ಮನ್ನು ಮದುವೆ ಆಗ್ತಿಲ್ಲ. ನಿಮ್ಮ ಬುದ್ಧಿವಂತಿಕೆ ರೂಪ ಗುಣದ ಮುಂದೆ ನಿಮಗೆ ಒಂದು ಕಾಲು ಇಲ್ಲ ಅನ್ನುವುದು ನನಗೆ ನ್ಯೂನತೆ ಅಂತ ಅನಿಸ್ತಾ ಇಲ್ಲ ನಾನು ನಿಜವಾದ ಪ್ರೀತಿಯಿಂದ ನಿರ್ಧಾರಕ್ಕೆ ಬಂದಿದ್ದೇನೆಯೇ ಹೊರತು ಆದರ್ಶವಾದಿ ಅಂತ ಹಣೆಪಟ್ಟಿ ಅಂಟಿಸಿಕೊಳ್ಳೋಕೆ ಆಗಲಿ ಅಥವಾ ಕಾಲಿಲ್ಲದ ಹುಡುಗಿಗೆ ಬಾಳು ಕೊಟ್ಟ ಮಹಾತ್ಮ ಅಂತ ಬಿರುದು ತೊಗೊಳೋಕ್ಕೆ ಆಗ್ಲಿ ನಿಮ್ಮನ್ನು ಬಯಸ್ತಾ ಇಲ್ಲ. ನಾನು ಕೇಳಿದ ಮಾತ್ರಕ್ಕೆ ನೀವು ಕೃತಜ್ಞತೆಯಿಂದ ತಕ್ಷಣ ಒಪ್ಪಿಗೆ ಕೊಡಬೇಕು ಅಂತ ಏನಿಲ್ಲ. ನನ್ನಲ್ಲೂ ಕೊರತೆ ಇದೆ ನಾನು ನಿಮಗಿಂತ ಹತ್ತು ಹನ್ನೆರಡು ವರ್ಷ ದೊಡ್ಡವನು ಅಂತ ಸುರದ್ರೂಪಿ ಏನಲ್ಲ ನೋಡೋಕೆ ಸುಮಾರಾಗಿ ಇದ್ದೇನೆ ಅಷ್ಟೇ. ನೀವು ಯೋಚನೆ ಮಾಡಿ ನಂತರ ನನಗೆ ತಿಳಿಸಿ. ಅರ್ಜೆಂಟ್ ಏನಿಲ್ಲ ಎನ್ನುತ್ತಾ ಹೊರಟು ನಿಂತ. ಆಮೇಲೆ ಮತ್ತೊಂದು ವಿಷ್ಯ ನಾನು ಅನಾಥ ನನ್ನವರು ಅಂತ ನನಗೆ ಯಾರು ಇಲ್ಲ. ಮದುವೆಯೇ ಬೇಡ ಅಂತ ಅನ್ಕೊಂಡಿದ್ದೆ. ನಿಮ್ಮನ್ನು ನೋಡಿದ್ಮೇಲೆ ಯಾಕೋ ಮದುವೆ ಆಗೋಣ ಅನ್ನಿಸ್ತು..ಓಕೆ.. ನಾನು ಹೊರಡ್ತೀನಿ.”

ಅವನನ್ನು ನಿರಾಕರಿಸಲು ಸುಜಯಳಿಗೆ ಹೇಳಿಕೊಳ್ಳುವಂತಹ ಯಾವ ಕಾರಣವೂ ಕಾಣಲಿಲ್ಲ. ಸುರೇಂದ್ರನ0ಥ ಮರುಳುಗೊಳಿಸುವ ರೂಪ ಅವನದಲ್ಲವಾದರೂ ಎಣ್ಣೆಗೆಂಪು ಮೈ ಬಣ್ಣದ ಪ್ರಮಾಣಬದ್ಧ ದೇಹದ ನಗುಮುಖದ ಆಕರ್ಷಕ ವ್ಯಕ್ತಿ ಸುದರ್ಶನ. ಪ್ರತಿಷ್ಠಿತ ಹುದ್ದೆ, ಸ್ವಂತ ಮನೆ, ಕಾರಿನ ಒಡೆಯ.
ಮುಂದಿನ ಕೆಲಸ ಬಹು ಸರಾಗವಾಗಿ ನಡೆದಿತ್ತು ಮಗಳ ಮದುವೆ ನಿಶ್ಚಯವಾದ ಸಂತಸದಲ್ಲಿ ಜಾನಕಮ್ಮ ಕೇಶವ ರಾಯರಿಗೆ ಹರೆಯ ಬಂದಿತ್ತು. ಸುಜಯ ಮತ್ತೊಮ್ಮೆ ಕನಸಿನ ಲೋಕದಲ್ಲಿ ವಿಹರಿಸತೊಡಗಿದಳು. ಆಫೀಸಿನಲ್ಲಿ ಅವಳ ಅದೃಷ್ಟವನ್ನು ಎಲ್ಲರೂ ಕೊಂಡಾಡಿದರೂ, ಒಳಗೊಳಗೆ ಕುರುಬಿದವರೆe ಹೆಚ್ಚು.
ಲಗ್ನಪತ್ರಿಕೆ ಅಚ್ಚಾಗಿ ಬಂದಾಗ ಇದ್ದಕ್ಕಿದ್ದಂತೆ ಸುರೇಂದ್ರನಿಗೇಕೆ ಕಳಿಸಬಾರದು ಎಂಬ ಯೋಚನೆ ಬಂತು ಅವಳಿಗೆ. ಕಳಿಸುವುದು ಏಕೆ ತಾನೇ ಹೋಗಿ ಕೊಟ್ಟು ಬರುತ್ತೇನೆ ಎಂದುಕೊಂಡಳು. ಗೆಳತಿ ಕವಿತಾಳಿಂದ ಅವನ ವಿಳಾಸ ತೆಗೆದುಕೊಂಡು ಒಂದು ಭಾನುವಾರ ಆಸಕ್ತಿಯಿಂದ ಅಲಂಕರಿಸಿಕೊಂಡು ಹೊರಟಳು. ಬೇಕಾದ ಸ್ಥಳ ತಲುಪಿ ಬಂಗಲೆಯ ಹೊರಗಿನ ಗೇಟ್ ದಾಟಿ ಒಳ ಬಂದಾಗ ಮನೆಯ ಬಾಗಿಲು ತೆರೆದೇ ಇತ್ತು. ಕಾಲಿಂಗ್ ಬೆಲ್ ಮಾಡಿದಾಗ ವೀಲ್ ಚೇರಿನಲ್ಲಿ ಬಂದ ಯುವತಿಯೊಬ್ಬಳು ಬಾಗಿಲ ಬಳಿ ಬಂದು ಯಾರು..? ಎಂದಳು. ಅವಳ ಮುಖ ಕoದಿದ್ದರೂ ಅವಳು ಚೆಲುವೆ ಎನ್ನುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಯುವತಿಗೆ ಎರಡೂ ಕಾಲುಗಳು ಇಲ್ಲ ಎನ್ನುವುದು ಸುಜಯಳ ದೃಷ್ಟಿಗೆ ಗೋಚರಿಸಿತು. ಸುಜಯ ಅನುಮಾನಿಸುತ್ತ ನಾನು ಸುರೇಂದ್ರನ ಫ್ರೆಂಡ್ ..ಆ..ಒಂದು ಕಾಲದಲ್ಲಿ… ನೀವು…? ಎನ್ನುತ್ತಾ ನಿಲ್ಲಿಸಿದಳು. ನಾನು ಸವಿತಾ. ಸುರೇಂದ್ರ ನನ್ನ ಹಸ್ಬೆಂಡ್. ಬನ್ನಿ ಒಳಗೆ.. ಸಹಜವಾಗಿ ಹೇಳಿದಾಗ ಸಾವಿರ ಅಡಿಗಳ ಮೇಲಿನಿಂದ ಒಮ್ಮೆಗೆ ಕೆಳಗೆ ಬಿದ್ದಂತೆ ಭಾಸವಾಯಿತು ಸುಜಯಳಿಗೆ.
ನೀವು… ಸವಿತಾ… ಮತ್ತೆ ನಿಮ್ಮ ಕಾಲು …?? ಸಾವಿರ ಪ್ರಶ್ನೆ ಇತ್ತು ಅವಳ ಉದ್ಗಾರದಲ್ಲಿ.

ಓ ಅದಾ..? ತಿರುಪತಿಗೆ ಹೋಗಿ ಬರುವಾಗ ಇವರ ಕೇರ್ಲೆಸ್ ಡ್ರೈವಿಂಗ್ ನಿಂದ ಆದ ಆಕ್ಸಿಡೆಂಟ್ ನಲ್ಲಿ ನನ್ನೆರಡು ಕಾಲುಗಳು ಹೋದವು ಅಷ್ಟೇ .

ಧ್ವನಿ ನಿರ್ಲಿಪ್ತವಾಗಿದ್ದರೂ ಮಾತುಗಳು ಅಷ್ಟೇ ಕಹಿಯಾಗಿದೆ ಎನಿಸಿತು. ಏನು ಮಾತನಾಡಲು ತೋರದೆ ಒಳಗೆ ಹೆಜ್ಜೆ ಇಟ್ಟವಳಿಗೆ ಜುಬ್ಬಾ-ಪೈಜಾಮ ಹಾಕಿಕೊಂಡು ಟವಲಿನಿಂದ ತಲೆ ಒರೆಸುತ್ತ ಯಾರು ಸವಿ.. ಬಂದಿರುವುದು ಎಂದು ಒಳಗಿನಿಂದ ಬಂದ ಸುರೇಂದ್ರನನ್ನು ಕಂಡು ಒಂದು ಕ್ಷಣ ಮೈಮರೆತಳು ಸುಜಯ. ಅದೇ ಮೋಹಕ ರೂಪ. ಹುಂ…ಗುಣವಿಲ್ಲದ ರೂಪಕ್ಕೆ ಏನು ಬೆಲೆ? ಅರೆದುಕೊಂಡು ಕುಡಿಯಬೇಕಷ್ಟೇ.. ಮರುಕ್ಷಣ ತಿರಸ್ಕಾರದ ನಗೆ ಮೂಡಿತು ತುಟಿಗಳಲ್ಲಿ. ನಮಸ್ಕಾರ ಎಂದು ಅವಳು ಕೈಜೋಡಿಸಿದಾಗ ಭ್ರಮಿತನಂತೆ ಅವಳೆಡೆಗೆ ನೋಟ ನೆಟ್ಟವನು ಮತ್ತೊಮ್ಮೆ ಅವಳನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದಾಗ ಬಲಗಾಲ ಮೇಲೆ ಅವನ ನೋಟ ಒಂದು ಕ್ಷಣ ನಿಂತಾಗ ಸುಜಯ ಹೆಮ್ಮೆಯಿಂದ ನಕ್ಕಳು. ಸುಜಿ ಐ ಮೀನ್ ಸುಜಯ ನೀವಿಲ್ಲಿ…? ಬನ್ನಿ ….ಕೂತ್ಕೊಳ್ಳಿ …ತಡವರಿಸಿದಾಗ..
ಇಲ್ಲ ಕೂರೋಕೆ ಟೈಮ್ ಇಲ್ಲ ನನ್ನ ಮದುವೆ ಇನ್ವಿಟೇಶನ್ ಕೊಡಕ್ಕೆ ಬಂದೆ ಎನ್ನುತ್ತಾ ಪತ್ರಿಕೆ ಅವನ ಕೈಗಿತ್ತಳು. ಸುರೇಂದ್ರ ಗಲಿಬಿಲಿ ಕೊಂಡಿರುವುದು ಸ್ಪಷ್ಟವಾಗಿತ್ತು. ಹೊಸಬರನ್ನು ನೋಡುವಂತೆ ಅವಳನ್ನು ನಿಟ್ಟಿಸಿದ್ದ. ಮೊದಲಿನ ಮುಗ್ಧೆ ಸುಜಯಳೆ ಇವಳು.. ಅಲ್ಲ ಎಂದಿತು ಅವನ ಮನಸ್ಸು. ಮುಗ್ಧತೆ ಸೂಸುತ್ತಿದ್ದ ಅವಳ ಕಣ್ಣುಗಳು ಇಂದು ಆತ್ಮವಿಶ್ವಾಸದ ಹೊoಬೆಳಕಿನಿಂದ ಬೆಳಗುತ್ತಿದ್ದವು. ತನ್ನನ್ನು ಕಂಡೊಡನೆ ನಾಚಿಕೆಯಿಂದ ಬಾಗುತ್ತಿದ್ದವಳು ಇಂದು ಆತ್ಮವಿಶ್ವಾಸದಿಂದ ತಲೆಯೆತ್ತಿ ನಿಂತಿದ್ದಾಳೆ. ತಾನೇನಾದರೂ ತಪ್ಪಿದೆನೆe ಎಂದು
ನಿಮಗೆ ಮದುವೆನಾ…!! ಹೋ ಕಂಗ್ರಾಟ್ಸ್ ನೀರಸವಾಗಿ ಅಂದವನಿಗೆ…. ಆಗಲ್ಲ ಅಂದ್ಕೊಂಡಿದ್ರೆನೋ ಪ್ರಪಂಚದಲ್ಲಿ ಇನ್ನೂ ಒಳ್ಳೆಯ ಜನ ಇದ್ದಾರೆ. ಖಂಡಿತ ಇಬ್ಬರು ಬನ್ನಿ ..ಎಂದು ಪತ್ರಿಕೆಯಲ್ಲಿ ಸುದರ್ಶನನ ಓದು ಹುದ್ದೆ ಎಲ್ಲವನ್ನೂ ಗಮನಿಸಿ ಅಚ್ಚರಿಯಿಂದ ಮಾತು ಮರೆತು ನಿಂತವನನ್ನು ನೋಡಿ ವಿಜಯದ ನಗೆ ಬೀರುತ್ತ ಹೊರಟಳು.
ಸವಿತಾ ಮಾತ್ರ ಇವರಿಬ್ಬರ ಮಾತು ನಡತೆ ಒಂದೂ ಅರ್ಥವಾಗದೆ ಮಂಕಾಗಿ ಕೂತಿದ್ದಳು. ಸುಜಯಳನ್ನು ನೋಡಿದ ಕೂಡಲೇ ಏನೋ ತಪ್ಪು ಮಾಡಿದವನಂತೆ ಬೆಚ್ಚಿಬಿದ್ದ ಸುರೇಂದ್ರನ ಮುಖದಲ್ಲಿ ಲಗ್ನಪತ್ರಿಕೆ ನೋಡುತ್ತಿದ್ದಂತೆ ಹತಾಶ ಭಾವ ಕಣ್ಣಿನಲ್ಲಿ ಅಚ್ಚರಿ ಛಾಯೆ ಮೂಡಿದ್ದನ್ನು ಅವಳ ಕಣ್ಣುಗಳು ಗಮನಿಸಿದ್ದವು. ಜೊತೆಗೆ ಒಗಟಿನಂತೆ ಮಾತಾಡುತ್ತಿದ್ದ ಸುಜಯ..ಏನೊಂದೂ ಮಾತನಾಡದೆ ಅವರಿಬ್ಬರನ್ನೇ ಮಿಕ ಮಿಕ ನೋಡುತ್ತಿದ್ದಳು ಸವಿತಾ.
ಅವಳು ಹೊರಟಿದ್ದನ್ನು ಕಂಡು ಎಚ್ಚೆತ್ತು ಬಾಗಿಲಿಗೆ ಬಂದ ಸುರೇಂದ್ರ ನಿಧಾನವಾಗಿಯಾದರೂ ದೃಢವಾದ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದ ಸುಜಯಳನ್ನು ದಿಗ್ಭ್ರಾಂತನಾಗಿ ನೋಡುತ್ತಾ ನಿಂತ.

ಈ ವಿಷಯ ಹೇಳಲೆಂದೇ ಕವಿತಾ ನನಗೆ ಎರಡು ಮೂರು ಬಾರಿ ಪ್ರಯತ್ನಿಸಿದ್ದು…? ಅವಳು ಸುರೇಂದ್ರನ ವಿಷಯ ತೆಗೆದಾಗಲೆಲ್ಲ..ಪ್ಲೀಸ್ ಅವ್ನ ವಿಷ್ಯ ಬೇಡ ನಂಗೆ ಇಂಟ್ರೆಸ್ಟ್ ಇಲ್ಲ ಎನ್ನುತ್ತಾ ಅವಳ ಮಾತನ್ನು ಅರ್ಧಕ್ಕೆ ತಡೆಯುತ್ತಿದ್ದೆ ತಾನು…
ಸುಜಯಳ ತಲೆ ಯೋಚನೆಗಳ ಗೂಡಾಗಿತ್ತು. ಒಂದು ಕಾಲಿಲ್ಲದವಳನ್ನು ಮದುವೆಯಾಗಲು ನಿರಾಕರಿಸಿದ ಸುರೇಂದ್ರನ ಹೆಂಡತಿಯ ಎರಡೂ ಕಾಲುಗಳನ್ನು ಕಿತ್ತುಕೊಂಡು ವಿಧಿ ಸೇಡು ತೀರಿಸಿಕೊಂಡಿತ್ತೇ..!! ಯಾಕೋ ಏನೋ ಅವಳಿಗೆ ಗಹಗಹಿಸಿ ನಗಬೇಕೆನಿಸಿತ್ತು. ನಂತರ ತನ್ನ ಯೋಚನೆಯ ಧಾಟಿ ಕಂಡು ಹೇಸಿಗೆ ಎನಿಸಿತು.. ಬೇರೆಯವರ ನೋವಿನಲ್ಲಿ ಸಂತಸ ಕಾಣುವಷ್ಟು ಕೀಳುಮಟ್ಟಕ್ಕೆ ಇಳಿದೆನೇ ನಾನು ..ಹಾಗಾದರೆ ಇಷ್ಟು ದಿನ ಸುರೇಂದ್ರನ ವಿಷಯದಲ್ಲಿ ನಾನು ನಿರ್ಲಿಪ್ತಳಾಗಿದ್ದೆ ಎಂದುಕೊಂಡಿದ್ದು ಬರಿಯ ಸೋಗೇ..? ಒಳಗೊಳಗೆ ಅವನ ಮೇಲಿನ ದ್ವೇಷ ಹೊಗೆಯಾಡುತ್ತಿತ್ತೇ..? ಸೇಡು ತೀರಿಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದೆನೇ..ತನ್ನಂತೆಯೇ ಅವನ ಹೆಂಡತಿಯೂ ಹೆಳವಿ ಎಂದು ತಿಳಿದಾಗ ವಿಚಿತ್ರ ಸಂತೋಷ ಆಗುತ್ತಿದೆಯೇ..??!! ಹೌದೆಂದು ಕೊಳ್ಳಲು ಅವಳ ಮನಸ್ಸು ಸಿದ್ಧವಿರಲಿಲ್ಲ ಈಗಲಾದರೂ ಸುರೇಂದ್ರನಿಗಾಗಿರುವ ನಷ್ಟ ಏನು ಅವನ ಅಚಾತುರ್ಯದಿಂದ ಎರಡು ಮುಗ್ಧ ಜೀವಿಗಳು ಬದುಕಿರುವಷ್ಟು ಕಾಲವೂ ಶಿಕ್ಷೆ ಅನುಭವಿಸುವಂತಾಗಿದೆ. ಹೆಂಡತಿಯ ಐಶ್ವರ್ಯ ಭೋಗಿಸುತ್ತ ಕಾಲ ಕಳೆಯುತ್ತಿರುವ ಅವನ ಮುಖದಲ್ಲಿ ಅವಳಿಗಾದ ಅನ್ಯಾಯದ ಬಗ್ಗೆ ಕಿಂಚಿತ್ತಾದರೂ ನೋವು ಇತ್ತೇ..?? ತಿಳಿಯಲಿಲ್ಲ. ನನಗಾದ ಅನ್ಯಾಯಕ್ಕೆ ದೇವರು ಅವನ ಎರಡು ಕಾಲುಗಳನ್ನು ಕಿತ್ತುಕೊಳ್ಳಬೇಕಿತ್ತು ಆದರೆ ಆಹಾ ವಿಧಿಯೇ ಏನು ನಿನ್ನ ನ್ಯಾಯ…ನನಗೆ ನ್ಯಾಯ ಒದಗಿಸುವ ಆತುರದಲ್ಲಿ ಏನೂ ಅರಿಯದ ಸವಿತಾಗೆ ಅನ್ಯಾಯ… ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ..!!?? ಎಂದುಕೊಂಡಾಗ ಸುಜಯಳ ಕಣ್ಣಮುಂದೆ ಸವಿತಾಳ ಮುಗ್ಧ ಮುಖ ತೇಲಿಬಂತು.

– ನಾಗರತ್ನ ಎಂ ಜಿ.