ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಪ್ರೀತಿ ಕೆ.ಎ.
ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)

ಗ್ರೀಷ್ಮಳಿಗೆ ಈಗೊಂದು ತಿಂಗಳಿಂದ ಸುಶಾಂತನ ನಡವಳಿಕೆಯಲ್ಲಿ ಬದಲಾವಣೆಯ ಗಾಳಿ ಹಗೂರಕ್ಕೆ ಹೊಕ್ಕಂತೆ ಅನಿಸುತ್ತಿದೆ. ಅದಕ್ಕೆ ಕಾರಣವೇನಿರಬಹುದೆಂದು ಮಾತ್ರ ಹೊಳೆಯುತ್ತಿಲ್ಲ. ಅವನನ್ನೇ ಕೇಳಿದರೆ ‘ಹಾಗೇನಿಲ್ಲಪ್ಪಾ’ ಎಂದು ಭುಜ ಕುಣಿಸುತ್ತಾನಾದರೂ ಅವಳಿಗೆ ನಂಬಲಾಗುತ್ತಿಲ್ಲ. ಸುಶಾಂತನನ್ನು ಅವಳು ಇಡಿ ಇಡಿಯಾಗಿಯೂ, ಕಣ ಕಣವಾಗಿಯೂ ಬಲ್ಲಳು. ಇನ್ನೆರಡು ತಿಂಗಳು ಕಳೆದರೆ ಅವರ ದಾಂಪತ್ಯಕ್ಕೆ ಏಳು ವರ್ಷ ತುಂಬುತ್ತದೆ. ಇಷ್ಟು ವರ್ಷಗಳೂ ‘ನಾ ನಿನಗೆ, ನೀ ನನಗೆ ‘ ಅನ್ನುವಂತೆ ಬದುಕಿದ್ದವರು. ಇಬ್ಬರಲ್ಲಿ ಯಾರ ಮನಸ್ಸಿನೊಳಗೆ ಏರಿಳಿತವಿದ್ದರೂ ಪರಸ್ಪರ ಗೊತ್ತಾಗುವಷ್ಟು ಅವರೊಳಗಿನ ಬಂಧ ಬೆಸೆದುಕೊಂಡಿತ್ತು. ಹಾಗಿರುವಾಗ ಈಗ ಏಕಾಏಕಿ ಅವನು ಬದಲಾದನೆಂದರೆ ಗೊತ್ತಾಗದಿರಲು ಸಾಧ್ಯವೇ?

ಒಂದು ತಿಂಗಳ ಹಿಂದೆ ಅವನು ಹೀಗಿರಲಿಲ್ಲ. ಸರಳ ಸುಂದರ ಹುಡುಗ ಸುಶಾಂತ. ವರ್ಷ ಮೂವತ್ತಾರಾದರೂ ಗ್ರೀಷ್ಮಳ ಕಣ್ಣಿಗೆ ಅವನಿನ್ನೂ ಹುಡುಗನಂತೆಯೇ ಕಾಣುತ್ತಾನೆ. ಹಿಂದೆ ಮಾಲ್ ಗಳಿಗೆ ಹೋದಾಗಲೆಲ್ಲ ಅವಳೇ ದುಂಬಾಲು ಬಿದ್ದು ಹೆಚ್ಚು ಬೆಲೆಯ ಬ್ರಾಂಡೆಡ್ ಶರ್ಟುಗಳನ್ನು ಕೊಳ್ಳುವಂತೆ ಮಾಡಿದರೂ ಅವನು ಎಲ್ಲವನ್ನೂ ಧರಿಸುತ್ತಿರಲಿಲ್ಲ. ಕೆಲವನ್ನಂತೂ ‘ಇದೆಲ್ಲಾ ಕಾಲೇಜು ಹುಡುಗರು ಹಾಕೋವಂತದ್ದು ಕಣೇ.. ಈ ವಯಸ್ಸಿನಲ್ಲಿ ಹಾಕ್ಕೊಂಡರೆ ಚೆನ್ನಾಗಿರಲ್ಲ’ ಅಂತ ಸಾರಾಸಗಟಾಗಿ ನಿರಾಕರಿಸುತ್ತಿದ್ದ. ಆದರೂ ಒತ್ತಾಯ ಮಾಡಿ ಕೊಂಡದ್ದೆಲ್ಲವೂ ಬೀರುವಿನಲ್ಲಿ ಸುಖವಾಗಿ ನಿದ್ರಿಸಿರುತ್ತಿದ್ದವು. ಅವಳಾದರೋ ಫ್ರಾಕು, ಸ್ಕರ್ಟುಗಳೆಂದು ಏನೇನೋ ದಿರಿಸು ಕೊಂಡು ಧರಿಸುವಾಗ ‘ನೀನಿನ್ನೂ ಹದಿಹರೆಯದ ಹುಡುಗಿಯೇನೇ? ನಿಂಗಾಗಲೇ ಮೂವತ್ತು’ ಎಂದು ಛೇಡಿಸುತ್ತಿದ್ದ. ‘ನಿಂಗೊಂಚೂರೂ ಟೇಸ್ಟೇ ಇಲ್ಲ ಕಣೋ. ಬರೇ ಅರಸಿಕ ನೀನು’ ಎಂದು ಅವಳೂ ಹುಸಿ ಮುನಿಸು ತೋರುತ್ತಿದ್ದಳು. ಆರನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಅವಳು ತುಂಬಾ ದುಡ್ಡು ಸುರಿದು ಘಂಮ್ಮೆನ್ನುವ ಸೆಂಟೊಂದನ್ನು ಅವನಿಗೆ ಉಡುಗೊರೆಯಾಗಿ ಕೊಟ್ಟಾಗ ‘ಸುಮ್ಮನೇ ದುಡ್ಡು ದಂಡ. ನಂಗಂತೂ ಅದರ ಪರಿಮಳಕ್ಕೆ ತಲೆ ತಿರುಗುತ್ತದೆ’ ಅಂದು ಅವಳಿಂದ ಬೆನ್ನಿಗೆ ಗುದ್ದಿಸಿಕೊಂಡಿದ್ದ.

ಇಂತಿಪ್ಪ ಸುಶಾಂತನು ಬೀರುವಿನಲ್ಲಿ ಸುಖಾಸೀನವಾಗಿ ಮಲಗಿದ್ದ ಶರ್ಟುಗಳೆಲ್ಲವನ್ನೂ ಒಂದೊಂದಾಗಿ ಇಸ್ತ್ರಿ ಹಾಕಿ ಧರಿಸಲಾರಂಭಿಸಿದಾಗಲೇ ಗ್ರೀಷ್ಮಳಿಗೆ ಅನುಮಾನ ಶುರುವಾಗಿತ್ತು. ಆದರೂ ‘ಸದ್ಯ ಈಗಲಾದರೂ ಬುದ್ಧಿ ಬಂತಲ್ಲಾ’ ಅಂದು ನಕ್ಕಿದ್ದಳು. ಆದರೆ ಅವಳ ಗುಮಾನಿ ಜಾಸ್ತಿಯಾದದ್ದು ಅವನು ತನ್ನನ್ನು ಇದುವರೆಗೂ ಸಂಭೋದಿಸದಿದ್ದ ಪದಗಳಾದ ಹನಿ, ಡಾರ್ಲಿಂಗ್ ಎಂದೆಲ್ಲಾ ತನ್ನನ್ನು ಕರೆಯಲಾರಂಭಿಸಿದಾಗ. ಕೇಳಿದ್ದಕ್ಕೆ ‘ಹಾಗೇ ಸುಮ್ಮನೆ ‘ ಅಂತ ಕಣ್ಣು ಮಿಟುಕಿಸಿದ್ದ. ಮತ್ತೊಂದು ವಿಷಯವೂ ಅವಳ ಅನುಮಾನವನ್ನು ಪುಷ್ಟೀಕರಿಸುವಂತೆ ನಡೆಯಿತು. ಆಫೀಸಿಗೆ ಹೊರಡುವ ಮುನ್ನ ಇಬ್ಬರೂ ಪರಸ್ಪರ ಹಣೆಗೆ ಮುತ್ತಿಕ್ಕಿಯೇ ಬೈ ಅನ್ನುತ್ತಿದ್ದದ್ದು ರೂಢಿ. ಇಷ್ಟು ವರ್ಷಗಳಲ್ಲಿ ಆಫೀಸಿರುವ ಒಂದು ದಿನವೂ ಅದೊಂದು ಸಂಗತಿ ಮಾತ್ರ ತಪ್ಪಿರಲಿಲ್ಲ, ಕಳೆದೊಂದು ತಿಂಗಳಲ್ಲಿನ ಎಂಟು ದಿವಸಗಳ ಹೊರತಾಗಿ!

ಇದೀಗ ಗ್ರೀಷ್ಮಳಿಗೆ ಯಾಕೋ ಏನೋ ಸರಿಯಿಲ್ಲವೆಂಬುದು ಖಚಿತವಾಯಿತು. ಒಮ್ಮೊಮ್ಮೆ ಇದು ‘ಸೆವೆನ್ ಇಯರ್ಸ್ ಇಚ್ಚ್ ‘ ಇರಬಹುದಾ ಎಂದು ಅನಿಸಿತ್ತಾದರೂ ಸುಶಾಂತನ ನಡವಳಿಕೆ ಬೇರೆಯದೇ ಗುಟ್ಟನ್ನು ಅಡಗಿಸಿಕೊಂಡಂತೆ ತೋರಿತ್ತು. ಅವನು ಘಂ ಅನ್ನುವ ಸೆಂಟನ್ನು ಪೂಸಿಕೊಂಡು ಆಫೀಸಿಗೆ ಹೊರಡುವಾಗ ಹೊಸ ವಾಸನೆಯೊಂದು ಅವಳ ಮೂಗಿಗೆ ಬಡಿದಿತ್ತು. ಅವನಿಗೆ ಆಫೀಸಿನಲ್ಲೇ ಯಾರಾದರೂ ಹುಡುಗಿ….? ಸಂಶಯದ ಹುಳು ತಲೆಯೊಳಗೆ ಹೊಕ್ಕಿ ಅದು ಬೃಹದಾಕಾರವಾಗಿ ಬೆಳೆಯುವ ಮೊದಲೇ ಬಗೆಹರಿಸಿಕೊಳ್ಳಬೇಕೆಂದು ಆ ಕ್ಷಣಕ್ಕೆ ಅನ್ನಿಸಿಬಿಟ್ಟಿತು. ಕೂಡಲೇ ನೆನಪಾದದ್ದು ಈ ಹಿಂದೆ ತನ್ನ ಸಹೋದ್ಯೋಗಿಯಾಗಿದ್ದ, ಈಗ ಸುಶಾಂತನ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ರಘು. ಅವಳಿಗೆ ಗೊತ್ತಿದ್ದಂತೆ ರಘು ತುಂಬ ಸಭ್ಯ, ನಂಬಿಕಸ್ಥ, ಯಾವುದನ್ನೂ ಮುಚ್ಚುಮರೆ ಮಾಡುವವನಲ್ಲ; ಸುಖಾಸುಮ್ಮನೆ ಶಂಖ ಊದುವವನಲ್ಲ. ಮೇಲಾಗಿ ಅಂಥದ್ದೇನಾದರೂ ಇದ್ದರೆ ಖಂಡಿತಾ ತನ್ನ ಕಿವಿವರೆಗೆ ಸುದ್ದಿ ಮುಟ್ಟಿಸಿ, ಎಚ್ಚರಿಸಬಲ್ಲ ಹಿತೈಷಿ. ಒಮ್ಮೊಮ್ಮೆ ಸುಶಾಂತ ಮತ್ತು ರಘು ಇಬ್ಬರೂ ಒಟ್ಟಿಗೇ ಆಫೀಸಿಗೆ ಹೋಗಿ ಬರುವುದೂ ಉಂಟು. ಅವನಲ್ಲೇ ಸೂಕ್ಷ್ಮವಾಗಿ ಕೇಳಿದರೆ ಹೇಗೆ ಅಂದುಕೊಂಡು ಆ ಸಂಜೆಯೇ ಫೋನು ಮಾಡಿದಳು. ಅಂಥದ್ದೇನೂ ಇಲ್ಲವೆಂಬುವುದು ಗೊತ್ತಾಗಿ ನಿರಾಳವಾಯ್ತು, ಜೊತೆಗೆ ತಾನು ಹಾಗೆಲ್ಲ ಅಂದುಕೊಂಡದ್ದರ ಬಗ್ಗೆ ನಾಚಿಕೆಯೂ.

ಮತ್ತೆ ಒಂದು ವಾರ ಕಳೆದಿರಬಹುದು. ಯಾವಾಗಲೂ ದಿಂಬಿಗೆ ತಲೆ ಇಟ್ಟ ಕೂಡಲೇ ಸುಖನಿದ್ರೆ ಹತ್ತಿ ಅವಳಿಗೆ ಎಚ್ಚರವಾಗುತ್ತಿದ್ದದ್ದು ಮರುದಿನ ಬೆಳಗ್ಗೆ ಅಲಾರಾಂ ಹೊಡೆದಾಗಲೇ. ಆ ರಾತ್ರಿ ಮಾತ್ರ ಮಧ್ಯರಾತ್ರಿ ಕಳೆದ ಮೇಲೊಮ್ಮೆ ಎಚ್ಚರವಾಗಿತ್ತು. ಪಕ್ಕಕ್ಕೆ ಹೊರಳಿ ನೋಡುತ್ತಾಳೆ ಮಂದ ಬೆಳಕು ಕಾಣಿಸುತ್ತಿದೆ ಸುಶಾಂತನ ಬ್ಲಾಂಕೆಟ್ ಒಳಗಿಂದ! ಇಷ್ಟು ಹೊತ್ತಲ್ಲಿ ಮೊಬೈಲು ಹಿಡಿದುಕೊಂಡು ಇವನೇನು ಮಾಡುತ್ತಿದ್ದಾನೆ ಅನ್ನಿಸಿ ಅವನ ಭುಜ ಹಿಡಿದು ಕೇಳಿದಳು. ಒಂದು ಕ್ಷಣ ತಬ್ಬಿಬ್ಬಾದವನು ‘ನಿದ್ದೆ ಬರ್ತಿರಲಿಲ್ಲ ಕಣೇ. ಅದಕ್ಕೇ ಗೇಮ್ ಆಡ್ತಿದ್ದೆ ‘ ಅಂದ. ನಿಜವಿರಬಹುದೇ? ಅಲ್ಲ ತನ್ನ ಭಾವನೆಗಳೊಂದಿಗೇ ಆಡುತ್ತಿದ್ದಾನೆಯೇ ಕಣ್ಣು ಮುಚ್ಚಾಲೆಯಾಟ? ಮನಸ್ಸು ತಲ್ಲಣಿಸಿದರೂ ಮರು ಮಾತಾಡದೆ ತನ್ನ ಬ್ಲಾಂಕೆಟ್ ಹೊದ್ದುಕೊಂಡಳು. ಆದರೆ ನಿದ್ದೆ ಬರಲಿಲ್ಲ. ಬರುವಂತೆಯೂ ಇರಲಿಲ್ಲ.

ಸಿಕ್ಕು ಸಣ್ಣದೇ ಇರಬಹುದು. ಆದರೆ ಆರಂಭದಲ್ಲೇ ಬಿಡಿಸದಿದ್ದರೆ ಅದು ಜಟಿಲವಾಗುತ್ತಾ ಹೋಗಿ ಕೊನೆಗೆ ಬಿಡಿಸಲಾಗುವುದಿಲ್ಲ ಎನ್ನುವುದನ್ನು ಬದುಕು ಅದಾಗಲೇ ಕಲಿಸಿಕೊಟ್ಟಿತ್ತು ಗ್ರೀಷ್ಮಳಿಗೆ. ನೋಡಿರಲಿಲ್ಲವೇ ಅವಳು ತನ್ನ ಅಕ್ಕ, ಚಿಕ್ಕಮ್ಮ, ಅತ್ತೆಯ ಮಗಳು, ಅವರೆಲ್ಲರ ಗೋಳನ್ನು? ಕಥೆಗಳು ಬೇರೆ ಬೇರೆಯಾಗಿದ್ದರೂ ಅವರೆಲ್ಲರೂ ಪಟ್ಟ ನೋವು ಮಾತ್ರ ಒಂದೇ. ಹೇಗಾದರೂ ಮಾಡಿ ಸಿಕ್ಕನ್ನು ನಾಜೂಕಾಗಿ ಬಿಡಿಸಬೇಕೆಂದುಕೊಂಡಳು.

ಮರುದಿನ ಸುಶಾಂತ ಸ್ನಾನಕ್ಕೆ ಹೋಗಿದ್ದಾಗ ಅವನ ಫೋನನ್ನು ಕೈಗೆತ್ತಿಕೊಂಡಳು. ವಾಟ್ಸಾಪ್ ಓಪನ್ ಮಾಡಿ ಫೀಮೇಲ್ ಹೆಸರುಗಳನ್ನು ಮಾತ್ರ ಚೆಕ್ ಮಾಡತೊಡಗಿದಳು. ಹೆಚ್ಚಿನವರು ತನಗೆ ಗೊತ್ತಿದ್ದವರೇ. ಅರೇ ಅದ್ಯಾರದ್ದು ಡಿಪಿ. ಎಲ್ಲೋ ನೋಡಿದ ಹಾಗಿದೆಯಲ್ಲ. ಚಾಟ್ ಓಪನ್ ಮಾಡಿ ನೋಡಿದಳು. ತೀರಾ ಸಲಿಗೆಯಿಂದ ಮಾಡಿದಂತಹ ಮೆಸ್ಸೇಜುಗಳೇನಿರದಿದ್ದರೂ ಹಲವು ಹೃದಯ ಹೊತ್ತ ಇಮೋಜಿಗಳು ಎಕ್ಸ್ಚೇಂಜ್ ಆಗಿದ್ದವು. ಪೂರ್ತಿ ನೋಡುವ ಹೊತ್ತಿಗೆ ಅವನು ಸ್ನಾನ ಮುಗಿಸಿದ ಸೂಚನೆ ಸಿಕ್ಕಿ ಫೋನನ್ನು ಸ್ವಸ್ಥಾನದಲ್ಲಿಟ್ಟಳು. ಅಡುಗೆ ಮನೆಯಲ್ಲಿ ಚಪಾತಿಯೊಂದು ಸೀದು ಹೋಗಿತ್ತು; ಆಲೂ ಪಲ್ಯ ಸ್ವಲ್ಪ ತಳ ಹಿಡಿದಿತ್ತು. ಅದು ನಂತರದ ದಿನಗಳಲ್ಲಿ ಕೆಲವು ಬಾರಿ ಪುನರಾವರ್ತನೆಯಾಯಿತು.

ಎಷ್ಟು ಯೋಚಿಸಿದರೂ ಆ ಹುಡುಗಿಯ ಮುಖ ಈ ಹಿಂದೆ ತಾನೆಲ್ಲಿ ನೋಡಿದ್ದೆಂದು ಗ್ರೀಷ್ಮಳಿಗೆ ನೆನಪಾಗಲಿಲ್ಲ. ಆ ದಿನ ಸುಮ್ಮನೇ ಫೇಸುಬುಕ್ಕು ನೋಡುತ್ತಾ ಕೂತಿದ್ದಳು. ಅರೇ.. ಅದೇ ಮುಖವಲ್ಲವೇ ಸುಶಾಂತನ ವಾಟ್ಸಾಪ್ ನಲ್ಲಿದ್ದದ್ದು? ಫೇಸುಬುಕ್ ತೋರಿಸುವಂತೆ ಅವಳೂ ತನ್ನ ಫ್ರೆಂಡೇ! ಈಗ ನೆನಪಾಗಿತ್ತು ಒಂದೊಂದಾಗಿ.. ಕೆಲವು ವರ್ಷಗಳ ಹಿಂದೆ ಆ ಹುಡುಗಿ ತನಗೆ ಹಲವು ಬಾರಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದದ್ದು.. ಮ್ಯೂಚುಯಲ್ ಫ್ರೆಂಡ್ ಲಿಸ್ಟ್ ನಲ್ಲಿ ಸುಶಾಂತನ ಹೆಸರಿದ್ದದ್ದು.. ಅವನಲ್ಲಿ ಕೇಳಿದಾಗ ಅದು ಯಾರೋ ಅವನದ್ದೇ ಊರಿನವಳು ಈಗ ಅಷ್ಟು ಕಾಂಟಾಕ್ಟ್ ನಲ್ಲಿಲ್ಲವೆಂದದ್ದು.. ತಾನು ರಿಕ್ವೆಸ್ಟ್ ಸ್ವೀಕೃತ ಮಾಡಿದ್ದು.. ಎಲ್ಲವೂ. ಕೂಡಲೇ ಆ ಹುಡುಗಿಯ ಪ್ರೊಫೈಲ್ ತೆಗೆದು ನೋಡಿದಳು. ಚಿತ್ರ ವಿಚಿತ್ರ ಭಂಗಿಯ ಹತ್ತಾರು ಫೋಟೋಗಳಿದ್ದವು. ಇತ್ತೀಚಿನ ಎಲ್ಲ ಫೋಟೋಗಳಿಗೂ ಸುಶಾಂತನ ಲೈಕುಗಳಿದ್ದವು. ಅವನ ಪ್ರೊಫೈಲನ್ನೂ ಗಣಿಗಾರಿಕೆ ಮಾಡಿದ್ದರೂ ಹೆಚ್ಚೇನೂ ಸುಳಿವು ಸಿಗಲಿಲ್ಲ. ಅವಳಿಗೆ ಇನ್ನೇನೋ ನೆನಪಾಗಿ ತನ್ನ ಪ್ರೊಫೈಲನ್ನೇ ಚೆಕ್ ಮಾಡತೊಡಗಿದಳು. ಕೆಲವೇ ಕೆಲವು ಫೋಟೋಗಳನ್ನು ತಾನು ಹಾಕಿಕೊಂಡದ್ದು. ಇತ್ತೀಚೆಗಿನ ತಾನು ಮತ್ತು ಸುಶಾಂತ ಒಟ್ಟಿಗೆ ನಿಂತಿದ್ದ ಫೋಟೋಗಳಿಗೆಲ್ಲಾ ಆ ಹುಡುಗಿಯ ಹಾರ್ಟ್ ಇಮೋಜಿಗಳಿದ್ದವು.

ಮತ್ತೆರಡು ದಿನದ ಪತ್ತೇದಾರಿಕೆಯಲ್ಲಿ ಸಿಕ್ಕಿದ ಇನ್ನಷ್ಟು ವಿಷಯಗಳು ಗ್ರೀಷ್ಮಳ ತಲೆ ಕೆಡಿಸಿಬಿಟ್ಟವು. ಅವಳು ಢಾಳಾಗಿ ಮೇಕಪ್ಪು ಹಚ್ಚಿ ಮಾದಕವಾಗಿ ನಿಂತ ಫೋಟೋಗಳಿಗೆ ಇವನ ಅಷ್ಟೇ ಮಾದಕವಾದ ಕಾಮೆಂಟುಗಳು. ತಾನು ಅಪರೂಪಕ್ಕೆಂಬಂತೆ ಗಾಢ ವರ್ಣದ ಲಿಪ್ ಸ್ಟಿಕ್ಕನ್ನು ಹಾಕುವಾಗಲೆಲ್ಲ ಅದೆಲ್ಲ ತನಗೆ ಚೂರೂ ಹಿಡಿಸುವುದಿಲ್ಲವೆಂದು ಆಗಾಗ್ಗೆ ಹೇಳುತ್ತಿದ್ದ, ಹಚ್ಚಲೇಬೇಕೆಂದರೆ ತಿಳಿ ಗುಲಾಬಿ ವರ್ಣದ ಲಿಪ್ ಸ್ಟಿಕ್ಕು ಬಳಸೆಂದು ಹೇಳುತ್ತಿದ್ದ ಸುಶಾಂತ ಬೇಡ ಬೇಡವೆಂದರೂ ನೆನಪಾದ. ಅವನ ಮೊಬೈಲು ಗ್ಯಾಲರಿಯನ್ನಿಡೀ ತಡಕಾಡುವಾಗ ಸಿಕ್ಕಿತು ಅವನ ಥರಹೇವಾರಿ ಶರ್ಟುಗಳ ಕಾರಣ. ದಿನಕ್ಕೆ ಹತ್ತಾರು ಸೆಲ್ಫಿಗಳು. ಇವನು ಹಾಗೆ ತೆಗೆದು ಕಳಿಸಿದ ಸೆಲ್ಫಿಗಳಿಗೆಲ್ಲಾ ಅವಳು ಕಳಿಸಿದ ರಕ್ತಗೆಂಪಿನ ಹೃದಯಗಳ ಜೊತೆಗೆ ಕಾಮೆಂಟುಗಳು.

ಗ್ರೀಷ್ಮಳ ಪತ್ತೆದಾರಿಕೆಯೊಂದೂ ಗೊತ್ತಿಲ್ಲದ ಸುಶಾಂತ ಅವಳೊಂದಿಗೆ ಸಹಜವಾಗಿಯೇ ಇದ್ದ. ಮೊದಲಿನಿಂದಲೂ ಅವರಿಬ್ಬರೊಳಗೆ ಯಾವ ಒಡಂಬಡಿಕೆಯೂ ಇಲ್ಲದಿದ್ದರೂ ಅವರು ಪರಸ್ಪರರ ಫೋನುಗಳನ್ನು ಮುಟ್ಟುತ್ತಿರಲಿಲ್ಲ. ಅಷ್ಟು ಮಾತ್ರದ ಪ್ರೈವೆಸಿ ಪ್ರತಿಯೊಬ್ಬನಿಗೂ ಇರಬೇಕೆಂದು ಇಬ್ಬರೂ ಬಲವಾಗಿ ನಂಬಿದಂತಿತ್ತು. ಅಲ್ಲದೇ ಅಂತಹ ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛಾಚಾರವಾಗಲಾರದೆಂಬ ನಂಬಿಕೆಯೂ. ಅಷ್ಟಕ್ಕೂ ಅವನ ಫೋನನ್ನು ಹೀಗೆಲ್ಲಾ ಜಾಲಾಡುವ ಪರಿಸ್ಥಿತಿ ಒಂದು ದಿನ ಬರಬಹುದೆಂದು ಸ್ವತಃ ಗ್ರೀಷ್ಮಳಿಗೂ ಗೊತ್ತಿರಲಿಲ್ಲ. ಅದಕ್ಕೇ ಏನೋ ಅವನ ಫೋನು ಜಾಲಾಡುವಾಗಲೆಲ್ಲಾ ಅವಳೊಂದು ಥರದ ಅಪರಾಧೀ ಭಾವದಲ್ಲಿ ಬೇಯುತ್ತಿದ್ದದ್ದು, ಅವನು ಸಿಕ್ಕಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡದ್ದರ ಬಗ್ಗೆ ಖೇದವಿದ್ದರೂ!

ಕಾಲಿಗೆ ಹೊಕ್ಕ ಮುಳ್ಳನ್ನು ಜಾಗ್ರತೆಯಿಂದ ತೆಗೆಯಲೇಬೇಕೆನಿಸಿತು. ಮುಳ್ಳು ಒಳ ಸೇರಿ ವ್ರಣವಾಗಲೂ ಬಿಡಬಾರದು, ಕಾಲಿಗೆ ನೋವಾಗಲೂ ಬಾರದು. ಏನು ಮಾಡುವುದೆಂದು ಕಂಗೆಟ್ಟು ಕುಳಿತಾಗ ಏನೋ ಹೊಳೆದಂತಾಯಿತು. ತಟ್ಟನೇ ಆ ಹುಡುಗಿಯ ಫೇಸುಬುಕ್ಕು ಪ್ರೊಫೈಲ್ ತೆರೆದಳು. ಅವಳ ಹೊಸದೊಂದು ಫೋಟೋ ಕಂಡಿತು. ಅದಕ್ಕೆ ಸುಶಾಂತ ವಾಟ್ಸಪ್ಪಿನಲ್ಲಿ ಕಳಿಸಿದ್ದ ಕಾಮೆಂಟನ್ನೇ ಬರೆದಳು-‘ಹೇ ಮಾದಕ ಕಂಗಳ ಚೆಲುವೆ, ಯಾರನ್ನು ತಿನ್ನಲು ಹೊಂಚು ಹಾಕಿದ್ದಿ? ‘. ಅಷ್ಟಕ್ಕೇ ಸುಮ್ಮನಾಗದೆ ಸುಶಾಂತನ ಫೇಸುಬುಕ್ಕು ಪ್ರೊಫೈಲ್ ತೆರೆದು ಅವನದೊಂದು ಫೋಟೋಗೂ ಕಾಮೆಂಟಿಸಿದಳು-‘ಹೇ ಮನ್ಮಥಾ, ನೀನು ಕರೆದರೆ ಒಲ್ಲೆ ಎನ್ನುವೆಯೇನು? ‘.

ಅಷ್ಟೇ.. ಅದೇ ದಿನ ಸುಶಾಂತನ ಫೋನಿನಿಂದ ಆ ಹುಡುಗಿಯ ಹೆಸರು ಮಾಯವಾಗಿತ್ತು; ಮತ್ತೆರಡು ವಾರದಲ್ಲಿ ಅವನ ಮನದಿಂದಲೂ!