ಸಾಹಿತ್ಯ ನಮ್ಮೆಲ್ಲರ ನಿತ್ಯದ ಬದುಕಿನ ಅವಿಭಾಜ್ಯ ಅಂಗ. ಕಾಲ ಬದಲಾದಂತೆ ಸಾಹಿತ್ಯದ ಅಭಿವ್ಯಕ್ತಿ, ಅಭಿರುಚಿಯೂ ಬದಲಾಗಿದೆ. ಆದರೆ, ಕವಿತೆಗಳು ಈಗಲೂ ಆಪ್ತ ಹಾಗೂ ಚೇತೋಹಾರಿ ಅನಿಸುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ, ಅಲ್ವಾ ?
ದೀಪಾವಳಿ ಕಳೆದಿದೆ, ಆದರೆ ನಮ್ಮೆಲ್ಲರ ಕಂಗಳಲ್ಲಿ ಇನ್ನೂ ಆ ದೀಪದ ಕುಡಿಯ ಬಿಂಬ ಹಾಗೇ ಉಳಿದಿದೆ. ಜೊತೆಗೆ ನವೆಂಬರ್ ಅಂದಕೂಡಲೇ ಕನ್ನಡಿಗರಿಗೆ ಅದು ಹಬ್ಬದ ಸಂಭ್ರಮ. ನಸುಕು.ಕಾಮ್ ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರದ ಬರೆಹಗಳನ್ನು ಪ್ರಕಟಿಸುತ್ತ ಬಂದಿರುವ ಅಂತರ್ಜಾಲ ಪತ್ರಿಕೆ. ಈ ಕನ್ನಡ ಮಾಸದಲ್ಲಿ, ದಿನಾಂಕ ೨೯ ನವೆಂಬರ್ ೨೦೨೦ರಂದು ೫ ಗಂಟೆಗೆ ಚೊಚ್ಚಲ ಅಂತರ್ಜಾಲ (Zoom Video Call ಮತ್ತು Facebook Live) ಕವಿಗೋಷ್ಠಿಯನ್ನು ನಸುಕು ಹಮ್ಮಿಕೊಂಡಿತ್ತು. ಆ ಕವಿಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಕವಿತೆಗಳನ್ನು ಹಾಗೂ ಅಧ್ಯಕ್ಷೀಯ ನುಡಿಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ
–ನಸುಕು ಬಳಗ
***********
ಅಂಗಳದಂಚಿಗೆ
ಅಂಗಳದಂಚಿಗೆ ಹಬ್ಬಿದ
ಜಾಜಿಬಳ್ಳಿಯ ಚಿಗುರಿನ ಮೈತುಂಬ
ಅರೆಬಿರಿದ ಮೊಗ್ಗುಗಳು
ಕಣ್ಣಂಚಿನ ಕನಸುಗಳಂತೆ!
ನೆಲದ ಹೊಕ್ಕುಳಲೊಂದು ಬೇರ ಇಳಿಸಿ
ಬೆವರ ಹನಿಯನ್ನೇ ಉಸಿರಾಡಿ
ರೆಕ್ಕೆಗಳ ಹರಡಿದವು ಆಗಸಕ್ಕೆ
ಸದ್ದುಗದ್ದಲದ ಹಂಗಿಲ್ಲದ ಸುಖ
ಸೀಮೆ ದಾಟಿದ ಹೊತ್ತು
ಕಂಬದ ಮೇಲೊಂದು ಮರಿಚಿಟ್ಟೆ
ಅತ್ತಿಂದಿತ್ತ ಸರಿದು
ಬಣ್ಣದ ಕನಸುಗಳ ಸಾಗಿಸುತ್ತಿದೆ
ಕನಸಿನಲ್ಲಿಯೂ ಹಮ್ಮು ಹೊತ್ತ
ಹೂನಗೆಯ ಹುಡುಗನ ನೆನಪಲ್ಲಿ
ಕಣ್ರೆಪ್ಪೆಯ ಕೂದಲೊಂದು
ಏಕಾಂತ ತೊರೆದು
ಬಯಲ ಸೇರುವ ಹೊತ್ತು
ಅಂಗೈ ಮೇಲಿನ ಮೊಗ್ಗು ಬಿರಿದು
ಮುಷ್ಟಿತುಂಬ ಅರಳುತ್ತಿದೆ
ತಲುಪಿರಬಹುದು ಹಾರಿದ ಕೂದಲೆಳೆ
ಆತನೆದೆಯ ಆಳಕ್ಕೆ
ಅಂಗಳಕ್ಕೆ ಗೋಡೆಗಳ ಗಡಿಯಿಲ್ಲ
ಚುಕ್ಕಿಯಿಟ್ಟು ಬರೆದ
ಹೂವಿನ ರಂಗೋಲಿಯ ಮೈಮೇಲೀಗ
ಕನಸಿನ ಬಣ್ಣಗಳು ಹರಿದಾಡಿ
ಅಂಟಿಕೊಂಡಿವೆ
ಗೆರೆಗಳ ನಡುವಿನ ನಿವಾತದಲ್ಲಿ
ಅಂತರಗಳ ಮೀರುವ ಮೌನದಲಿ
ಅರ್ಧಕ್ಕೆ ನಿಂತ ಮಾತುಗಳೆಲ್ಲ
ಹರಿಯುತ್ತಿವೆ ಜೀವಜಲವಾಗಿ
ಅಂಗಳದಂಚಿಗೆ
ಅಲ್ಲೊಂದು ಮರಿಹಕ್ಕಿ
ರೆಕ್ಕೆ ಬಲಿವ ಗಳಿಗೆಗಾಗಿ ಕಾಯುತ್ತಿರಬಹುದು
ಅದರ ಕನಸಲ್ಲೂ ಇರಬಹುದು
ಜಾಜಿಯ ಮೊಗ್ಗಿನ
ಪರಿಮಳದಂಥ ಹುಡುಗ
- ಅಂಜನಾ ಹೆಗಡೆ
**********
ಜಗದಗಲ ಬೇರಿನ ಮರಕೆ
ನಿನ್ನ ತಿಳಿವಿಗೊಂದೇ ಸಾಧ್ಯ ಇಂಥ ಸೌಂದರ್ಯಪ್ರಜ್ಞೆ
ಕೃಕೈ ಹಿಸುಕಿಕೊಳ್ಳುವ ನನ್ನಂಥವರ ನೆರಳೂ ಇಲ್ಲದಿರಲಿ ಇಲ್ಲಿ
ಮುಗಿದರೂ ಮುಗಿಯದಂತಹ ಹಗಲ ಬೆನ್ನಿಗೆಷ್ಟು ಸಾವಿನ ಹೆಗಲು
ಸತ್ತ ದೇಹಕ್ಕೆ ಮತ್ತೆ ಜೀವ ತರುವಂಥ ಕಾಲದ ಅನಾದಿ ಅಗ್ನಿಯೇ
ಜೀವದ ರೆಪ್ಪೆಯಾಡುವವು ಪರಮಾತ್ಮ ಕೈ ಚಾಚಿ ಕರೆದ ಹಾಗೆ
ಇಂಥ ಸಮಯಕ್ಕೆ ಕ್ಷಿತಿಜವೇ ಆಡುವುದು ಕಣ್ಣಿನಿದಿರು
ಮೊಳಗಿದ ಸಿಟ್ಟು ತಟ್ಟಿರಬೇಕು ಈಗ ಎಲ್ಲೆಡೆ ಬರಿಯ ಮೌನ
ಕೊಂಬು ಅಲುಗಾಡಲಷ್ಟೇ ಸಾಕಲ್ಲವೇ ಎಲ್ಲ ನಶ್ವರದ ಹಾದಿ
ಬಿಸಿಲಿಗೆ ತನ್ನ ತುಂಬು ಮೈಯೊಡ್ಡಿ ನಿಂತ ಮಂಜುಹುಡಿಯಂಥ ಹೂವೇ
ಪಟಪಟನೆ ರೆಕ್ಕೆ ಬಡಿದವಳೆ ಹಾರಿ ಹೋಗುವಳು ಪರಲೋಕಪಿತನೆಡೆಗೆ
ಇಷ್ಟದೇವರು ನೆಟ್ಟ ಜಗದಗಲ ಬೇರಿನ ಮರಕೆ ನೀರೆರೆವ ಭ್ರಮೆಯೇ
ಬದುಕಿನುದ್ದಕ್ಕೂ ಬೆನ್ನು ಕೊಟ್ಟ ಸಂತನಿಗೇ ಮೊಗಚುವುದು ಕಡಗೋಲು
ಅಶರೀರ ವಾಣಿಯೇ ಹೇಳು , ಒಂದಾಗುವುದಕ್ಕೆ
ಹೇಗೆ ಅಣುವಾಗುವುದು ಮತ್ತೆ ಮತ್ತೆ ಅವತರಿಸಿ ಬರುವ ದೇವರೊಳಗೆ
- ಕೃಷ್ಣ ದೇವಾಂಗಮಠ
**********
ಅಕಾಲ ಮಳೆ
ಅಕಾಲದ ಮಳೆ ನಿನ್ನೆ
ನನ್ನೆದುರು ಅಚಾನಕ ನಿಂತ
ಅಚ್ಚರಿ ನೋಡಿದೆ
ಬಿಡಿಬಿಡಿಸಿ ದಿಟ್ಟಿಸಿದೆ.
ಪಕ್ಕದಲ್ಲಿ ಪಕ್ಕಾ ಹೆಂಡತಿ ಈ ಕಡೆ ಮಗಳು
ಇವನನ್ನೂ ಮೀರಿಸಿದ ಮಗ ಹಿಂದೆ.
ಇವರ ಕಣ್ಣಿನೊಳಗಿನ ನನ್ನ ಪರಿಚಯ ಸಿಗಬೇಕಿತ್ತು
ಇವನೋ ಹೊಲದ ನಡುವಿನ ಬೆರ್ಚಪ್ಪ. ನೋಡುತ್ತಿದ್ದ.
ಅವರೊಳಗಿನ ನನ್ನ ಬಿಸಾಕುವಂತೆ..
“ಹೇಗಿದ್ದೀ”- ನಕ್ಕು ಕುಶಲ ಉಪಚಾರದ ಪ್ರಶ್ನೆ
ಅವನೂ ಹಗುರಾದ ತೆಳುತೆಳು ಮಾತು ಹೆಕ್ಕಿ
ಸರಿದು ಬಿಡುವ ಮುನ್ನ ಆ ಕಣ್ಣ ಹುಡುಕಿದೆ
ಮಲಗಿದ್ದ ನನ್ನದೇ ನೆರಳ ಚಿವುಟಿ ನಡೆದೆ
ಹಿಂಬಾಲಿಸಿದ ಬೆನ್ನಿನಲಿ ನೆಟ್ಟ ಕಣ್ಣು
ಅವನ ಹೆಜ್ಜೆಯ ವಿಳಾಸ ವಿವರಿಸುತಿತ್ತು
ಕೊನೆಗೂ ಮೂಲೆಯಲ್ಲಿ ನೆರಳಿಗೆ ವಿಶ್ರಾಂತಿ..
ಹಾಗೇ,ಇದ್ದ ಹಾಗೆ ಇರುವೆ ಎಂದ
ನೆರಳು ಅವನೊಳಗೆ ಇಳಿದಿರುವಾಗ
ನನ್ನದೇನು ಮಾತು?
ಅದೆಷ್ಟೋ ಸಲ ಕನಸಿಗೆ ಬಂದಿದ್ದೆ. ನಾನು ಅರಳಿದೆ.
ಯಾವುದೋ ಗಲ್ಲಿ ಸುತ್ತಿದಂತೆ. ಅದೇನೋ ಮಾತು
ಅವಸರದಲೇ ಆಡಿದಂತೆ.
ಅದೇ ಕನಸು- ಚಿತ್ರವಷ್ಷೇ ನಿಲ್ಲುತ್ತದೆ
ಮಾತು ಉಜ್ಜಿ ಹೋದಂತೆ ಅರೆ ಮಂಪರು ಅರ್ಧ ಕನಸು
ನನ್ನನೂ ಒಮ್ಮೆ ನಿನ್ನ ಕನಸಿಗೆ ಅದೇ ಬೀದಿಗೆ..
ಪುರುಸೊತ್ತಾಗಿ ಸಿಕ್ಕಿ ಆ ಉಳಿದರ್ಧ ಹೇಳಿಬಿಡು
ಚೆಲ್ಲಿಬಿಟ್ಟ ಬಣ್ಣ ಚಿತ್ತಾರ ಆಗದು
ಬೇಲಿ ಕಟ್ಟುವ ಕಾಯಕದಲಿ ನಾ ನಿರತೆ ನಿತ್ಯ
ಬೇಕಿದ್ದರೆ ಕಣ್ಣ ಕೊನೆಯ ಹನಿಯೊಂದನು
ಉದಾರವಾಗೇ ನೀಡುವೆ
ಬಣ್ಣ ಕಲಸಿಕೋ ಚಿತ್ತ ಚಿತ್ರದ ರಂಗಿಗೆ
ಕುಂಚದಲಿ ಮಹಲು ಕುಟೀರ
ಭರಭರ ಬಂದೆ ಹೊರಬಂದೆ
ಅವನು ಉಳಿದೇ ಹೋದ
ನೆರಳ ತಬ್ಬುವ ಕಾಯಕ
ಈಗ.
- ಪೂರ್ಣಿಮಾ ಸುರೇಶ್
**********
ಕಿಮ್ಮತ್ತಿನ ಸಂತೆ
ಎಷ್ಟೆಂದು ಕೊಳ್ಳುವುದು ಈ ಕವಡೆ
ಮಣಿಸರಗಳನ್ನು
ಸಂತೆಯ ಉದ್ದಗಲ ದಾರಿಯ ಎರಡೂ
ಕಡೆ ಅವೇ. ಸಣ್ಣ ದೊಡ್ಡ
ಕೆಂಪು ನೀಲಿ ಹಸಿರು ಕರಿ ಬಿಳಿ
ಬಣ್ಣ ಬಣ್ಣ ಅವಳ ಕಣ್ಣುಗಳಂಥ
ಎಷ್ಟೆಂದು ಕೊಳ್ಳುವುದು
ತಿನ್ನಲು ಏನೂ ಇಲ್ಲದಿರುವಾಗ
ಎನ್ನುತ್ತ ನಾನು ಬೀಸು ಹೆಜ್ಜೆಗಳಲ್ಲಿ
ಹೊರಬರುತ್ತೇನೆ. ಹೇರಿವೆ
ಕತ್ತು ಎದೆ ಕೈಕಾಲುಗಳಲ್ಲಿ ಈ ಕವಡೆ
ಈ ಮಣಿಸರ ಭಾರ
ನಡೆನಡೆದು ಬರುತ್ತೇನೆ ಆ
ಭಗ್ನ ಅರಮನೆಗೆ. ಆ ಮುರುಕು
ಆಸನ ಯಾವ ರಾಯನ ಕಾಲದ್ದು
ಹತ್ತಿ ಕೂತಾಗ ಬಂದಿದೆ ಕೈಗೊಂದು
ಮಂತ್ರದಂಡ ಆಡಿಸಿದರೆ ಸಾಕು
ತೆರೆಯುತ್ತ ಮಾಯಾಲೋಕ
ಈ ಚಿಪ್ಪು ಕವಡೆ ಮಣಿ
ಮುತ್ತು ರತ್ನಗಳಾಗಲಿ
ಎಂದೇನೂ ಕೇಳುವುದಿಲ್ಲ-
ಆ ಬೀದಿಯ ಕೊನೆಯ
ಮನುಷ್ಯನ ತೆರೆದ ಪಾತ್ರೆಗೆ
ಈ ಮಣಿಗಳ ತೂಕದ ಅನ್ನ
ದಿನವೂ ಬೀಳಲಿ ಸಾಕು
ಈಗ ಅರಮನೆ ಮಾಯ
ಮಂತ್ರ-ದಂಡ ಮಾಯ
ದೇವರು ಕೂಡ
ಉಳಿದೇ ಇವೆ
ಚಿಪ್ಪು ಮಣಿಸರ ಕವಡೆ
ಕಿಮ್ಮತ್ತಿನ ಸಂತೆ.
- ಡಾ.ಗೋವಿಂದ ಹೆಗಡೆ
**********
ಮೂರು ಮೊಟ್ಟೆ
ಬಟ್ಟಲು ಗೂಡಿನಲ್ಲಿ
ನೀಲಿಬಣ್ಣ ಕಪ್ಪುಚುಕ್ಕೆಯ ನಾಕು
ಮೊಟ್ಟೆಗಳು
ನನ್ನ ಹಕ್ಕಿತಲೆ ಮತ್ತೆ ಮತ್ತೆ ಇಣುಕಿದಾಗ
ಮಗ ಹೇಳಿದ:
ಇಲ್ಲಮ್ಮ ಮೂರು ಮೊಟ್ಟೆಗಳು
ಕುತೂಹಲದ ಮನಸ್ಸು ಇಣುಕಿತು ಮತ್ತೆ ಮತ್ತೆ
ಅರೆ!
ಮೂರು ಮೊಟ್ಟೆ
ನಿಜ ಹೇಳಿ ನಾ ಹೇಳಿದ್ದು , ಸುಳ್ಳೋ ನಿಜವೋ
ಹಕ್ಕಿಯನ್ನು ಕೇಳೋಣವೆಂದರೆ
ಅದು ಪುರ್ರೆಂದು ಹಾರಿ ಹೋಗಿದೆ
ಮಗನ ಮೇಲೆ ಸಿಟ್ಟು ನನಗೆ
ಮಗ, ಹೋಗಿ ಹಕ್ಕಿಯನ್ನೇ ಕೇಳೆಂದ
ನಾನು ನೋಡಿದಾಗ ನಾಕೆ ಮೊಟ್ಟೆ.
ಬೆಕ್ಕು ಹೇಳಿತು
ನಾನೊಂದು ಮೊಟ್ಟೆಯನು ತಿಂದೆ
ಬೆಕ್ಕಿನ ಮೇಲೆ ನಖಶಿಖಾಂತ ಸಿಟ್ಟು ನನಗೆ
ಅರೆ!
ನಾನು ನೋಡಿದಾಗ ನಾಕೇ ಮೊಟ್ಟೆ
ಹೌದಾ ?
ಅಲ್ಲವಾ !?
- ಎಮ್ ಆರ್ ಭಗವತಿ
**********
ಹಾರಿದ ಹಕ್ಕಿಯೂ ತೇಲುವ ನೆನಹೂ
ಹಾರಿದೆ ಮನ
ಹಕ್ಕಿಯ ಹಾಡಿನ
ಜಾಡು ಹಿಡಿದು
ಹಾರಿದ ಹಕ್ಕಿಯ
ತಾವನರಸಿ
ಜಾರಿದೆ ದಿನ
ಇನ್ನೂ ಏರಲಾಗದೇ
ಬಯಲಿನ ಬೆಟ್ಟ
ಕಪ್ಪು ಕತ್ತಲಿನ
ಚರ್ಮವ ಚರಚರ
ಹರಿದು
ಬೆಳಕಿನ ಬಣ್ಣ
ಕಣ್ಣೊಡೆಯದೇ
ಕೇಳಿಸದು ಹಾಡು?
ಕಿವಿ ತುಂಬಿದ ಸದ್ದುಗಳ
ಖಾಲಿಯಾಗಿಸುತ
ಲೋಕಸಂಚಾರ ಹೊರಟ ಸ್ವರವೊಂದು
ಹಾದುಹೋದ
ದಿಶೆಯ ದಿಟ್ಟಿಸುತ
ನೆನಹೊಂದು ತೇಲಿದೆ
ಇದೀಗ
ಎತ್ತಲಿಂದಲೋ
ಹಾರಿಬಂದ ರೆಕ್ಕೆ
ತುಪ್ಪಳಗಳ
ಚೂರುಪಾರು
ಇಲ್ಲೇ, ಎಲ್ಲೋ
ಸನಿಹದಲ್ಲೇ ಇರುವ
ಗಾಯಗೊಂಡ
ಹಕ್ಕಿಯ ಸುಳಿವು
ಕೇಳಿಸದು ಹೊಸಹಾಡು
ಕಾಣಿಸಿಕೊಳ್ಳದು ಹಕ್ಕಿ
ಕುಕ್ಕಿ, ಕುಕ್ಕಿ ಹೆಕ್ಕಿ, ಹೆಕ್ಕಿ
ಹಿಡಿದೆಳೆಯದೇ
ಹಾಡಿನ ಎಳೆಯೊಂದ
ನಿನ್ನದೂ ನನ್ನದೂ
ಎದೆಯೊಳಗಿಂದ
- ಡಾ. ಚಿದಾನಂದ ಕಮ್ಮಾರ್
**********
ಒಂದು ಖಾಲಿ ಜಾಗ
ಎಲ್ಲರ ಬಳಿಯೂ ಎಲ್ಲರೊಳಗೂ
ಇರಬಹುದು ಒಂದೊಂದು ಖಾಲಿ ಜಾಗ.
ಹಿತ್ತಲಿನಲ್ಲಿಯೋ? ಮುಂದಣ ಅಂಗಳದಲ್ಲಿಯೋ?
ಒಳಕೋಣೆಯೊಳಗೋ? ಅಥವಾ ಯಾವುದೋ
ಅದೃಶ್ಯ ಎಡೆಯಲ್ಲಿ ತೀರಾ ಖಾಸಾಗಿಯಾಗಿ.
ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ
ಕುರಿತು ಯೋಚಿಸಿಯೇ ಇರುತ್ತಾರೆ.
ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ?
ಭತ್ತ ಬೆಳೆಯುವುದಾ?
ತುಸು ಹೆಚ್ಚೇ ಇದ್ದರೆ ಕಟ್ಟಡ ಕಟ್ಟಿಸಿ
ಬಿಕರಿಗಿಡುವುದಾ?
ಅವರವರ ಅನುಕೂಲಕ್ಕೆ ತಕ್ಕ ಹಾಗೆ
ಅಗತ್ಯಕ್ಕೆ ತಕ್ಕ ಹಾಗೆ.
ಇವರೇ ವಾರಸುದಾರರು ಅಂತ
ಬೆಟ್ಟು ಮಾಡಿ ತೋರಿಸಲಾಗದ ಅಸಹಾಯಕತೆಯಲ್ಲಿ
ಖಾಲಿ ಜಾಗವೊಂದು ಅವರಿವರ ಕೈಗೂಸಾಗುತ್ತಲೇ ಸಾಗುತ್ತದೆ
ವ್ಯಾಪಾರ-ವಹಿವಾಟು ಭರದಲ್ಲಿ ಕುದುರುತ್ತದೆ.
ಕಟ್ಟಡವಾದರೆ ಉಸಿರಾಡದೆಯೂ
ಹಲವು ಕಾಲ ಹಾಗೇ ಉಳಿದುಕೊಂಡು ಬಿಡುತ್ತದೆ.
ಬಿತ್ತಿದ್ದು ಬೆಳೆದದ್ದು ಕಾಲಕಾಲಕ್ಕೆ
ಹುಟ್ಟಿ,ಸತ್ತು,ಮರುಹುಟ್ಟು ಪಡೆದು
ಬದಲಾಗುತ್ತಲೇ ಇರುತ್ತದೆ.
ಹಾಗೇ..
ಎಷ್ಟು ಸುಲಭದಲ್ಲಿ ಈ ಖಾಲಿ ಜಾಗಗಳು
ತುಂಬಿಕೊಳ್ಳುತ್ತಲೇ ಬರಿದಾಗುತ್ತವೆ
ಕ್ರಯ-ವಿಕ್ರಯಗಳ ತಕ್ಕಡಿಯೊಳಗೆ
ತೂಗಿಸಿಕೊಂಡೇ ನಿಲ್ಲುತ್ತವೆ.
ಬಹುಕಾಲದಿಂದ ನೋಡುತ್ತಲೇ ಇರುವೆ
ಇಲ್ಲೊಂದು ಅಗೋಚರ ಖಾಲಿ ಸ್ಥಳ
ಹಾಗೇ ಉಳಿದುಕೊಂಡು ಬಿಟ್ಟಿದೆ.
ನಿರಾಕಾರ ಗಾಳಿ ಹೊತ್ತು ತರುವ ಅಪರೂಪದ
ಪರಿಮಳವಷ್ಟೇ ಅಲ್ಲಿ ಸುಳಿದಾಡುತ್ತದೆ.
ಒಂದು ನಿಶ್ಯಬ್ದ ಮಿಡುಕಾಟ
ಕಂಡದ್ದೂ ಕಾಣದ್ದೂ ಎಂದಿಗೂ ದೊರಕದ್ದು ಮಾತ್ರ
ಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.
ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ.
ಕುತೂಹಲವಿದ್ದರೆ, ಒಮ್ಮೆ ಮುಟ್ಟಿ
ಕಣ್ಬಿಟ್ಟು ನೋಡಿಕೊಳ್ಳಿ.
ಆ ಒಂದು ಖಾಲಿ ಜಾಗ ಬಹುಶ:
ನಿಮ್ಮದೇ ಇರಬಹುದೇನೋ..?.
- ಸ್ಮಿತಾ ಅಮೃತರಾಜ್, ಸಂಪಾಜೆ
**********
ಒಂದು ಕೋಣೆಯ ಹೆಜ್ಜೆ
ಮುಸ್ಸಂಜೆಯೇನಲ್ಲ,
ನೆರಳೊಂದು ಮಲಗಿತ್ತು
ಊರ ಪೂರ ಹರಡಿ..
ಹೊಕ್ಕೇನು ಪರಿಚಯವಿರದ ಕಟ್ಟಡದ
ಕೋಣೆಯ ದೀಪವೊಂದು ಆರಿರಲಿಲ್ಲ;
ಇನ್ನೂರು ಮಾರುಗಳ ದೂರದಲ್ಲಿ
ತಿಳಿಯಲಿಲ್ಲ ಗಂಟೆ ಎರಡೋ ಮೂರೋ
ಇಲ್ಲಾ, ಅದರ ಮೇಲೆ ಮತ್ತರ್ಧವೋ…
ತಾಸುಗಳಾದವು ಯಾರೂ ಕೇಳದ
ಮುದುಕಿಯೊಬ್ಬಳು ಕವಳ ಕುಟ್ಟಿ ಮಲಗಿ..
ನೆರಿಗೆ ಎದ್ದಿರಬಹುದು
ಕೆಂಪು ದೀಪದ ಕೆನ್ನೆ ತಿಕ್ಕಿ..!
ಮಲಗಿಹರು ಸೊಳ್ಳೆ ಪರದೆ ಎಳೆದು
ಹೂವಾಡಗಿತ್ತಿ ಮತ್ತು ಪರಿವಾರ
ಎರಡು ಗಂಟೆ ಮುಚ್ಚಿದ
ಅಂಗಡಿಯ ಮಡಿಲಲ್ಲಿ..
ಯಾರಿರಬಹುದು ದೀಪ ಆರಿಸದೇ ಇದ್ದವರು
ಇಲ್ಲಾ , ಮಧ್ಯ ರಾತ್ರಿ ಎದ್ದವರು..
ಮನೆಯ ಯಜಮಾನಗೆ ಹೊಟ್ಟೆನೋವೇ?
ಹಟಕ್ಕೆ ಬಿದ್ದಿಹಳೇ ಮೊಲೆ ಹಾಲಿಗಾಗಿ
ಮೂರನೇ ಮಗಳ ಮೊದಲನೇ ಮಗಳು..
ತಿಗಣೆಯೊಂದು ಸಂಸಾರ ನಡೆಸಿತ್ತೇ
ಕಲೆಯಿಲ್ಲದ ಚಾದರದ ಅಡಿಯಲ್ಲಿ ಇಷ್ಟು ದಿನ..
ಇಲ್ಲಾ ಕಿರಿ ಮಗನ ಖಾಯಂ ಚಟವಿರಬಹುದೇ
ಮಲಗುವುದು ರಾತ್ರಿ ಪೂರ ದೀಪ ಆರಿಸದೇ..
ಹುಡುಕುತ್ತಿರಬಹುದೇ ತಾತ ತನ್ನ ಗೀರಿನ ಚಾಳೀಸು
ಕುಡಿಯುವುದ ಮರೆತು ಎರಡು ಚಮಚ ಔಷಧಿ..
ಇಷ್ಟಿಷ್ಟೇ ಹತ್ತಿರವಾಗುವ ಸಾವು ನೋಡಲು
ಮಧ್ಯಮ ವರ್ಗದ ಮಧ್ಯದ ಮಗನಿಗೆ ಭಯವೇ..
ನಾನೇಕೆ ಕುಳಿತಿದ್ದೇನೆ ಅಪರಾತ್ರಿ ಜಗದ ಮಾತಿಗಾಗಿ..
ಹೊರನಡೆಯುವವರು ಯಾರಿರಬಹುದೀಗ
ಕಟ್ಟಡದ ಸಮಗ್ರ ಶಿಸ್ತಿನಲ್ಲಿ ಎದ್ದು ಕೂತವರಲ್ಲಿ.. !
ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ
ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ
- ಶ್ರೀ ತಲಗೇರಿ
**********
ಮಾರ್ಜನ
ಅಕ್ಕಿ ತೊಳೆವುದು ಸುಲಭವಲ್ಲ
ಮುಳುಗುವಷ್ಟು ನೀರು ಹಾಕಿ
ಮೆಲ್ಲಗೆ ಕೈಹಾಕಿ ತೊಳೆಯಬೇಕು
ಧೂಳು ಹೋಗುವಂತೆ,
ಕಾಳಿಗೂ ನೋವಾಗದಂತೆ.
ತೊಳೆದು ನೀರ ಚೆಲ್ಲುವಾಗ
ನೆಲ್ಲಿನ ಸಿಪ್ಪೆ, ಕಸ, ಕಲ್ಲು
ಎಲ್ಲವೂ ಸೋರಿ ಹೋಗಬೇಕು
ನಾಲ್ಕು ಹನಿ ಕಣ್ಣೀರೂ ಜತೆಗೆ.
ಅಕ್ಕಚ್ಚು ಉಳಿಯದಿರಲಿ,
ಬೇಡದ ಕಹಿ ನೆನಪೂ ಹೀಗೆ.
ತೊಳೆವ ಭರಕೆ ಒಂದು ಕಾಳೂ
ಹೊರ ಹೋಗದಿರಲಿ ಎಚ್ಚರ,
ಎಲ್ಲರೂ ಇದ್ದರಷ್ಟೇ ಅದು ಸಂಸಾರ.
ಇಲ್ಲಿ ಸಲ್ಲದ ಹೆಸರುಕಾಳೋ, ಬಟಾಣಿಯೋ
ಸಿಕ್ಕರೆ ಎತ್ತಿಟ್ಟಿರಿ ಸಂಜೆಗೆ,
ಅವನ ನೆನಪಿನ ಹಾಗೆ.
ಮೂರು ಸಲ ತೊಳೆದಾಗ
ಬಣ್ಣ, ಧೂಳು ಎಲ್ಲ ತೊಲಗಿ
ಬೆಳ್ಳನೆ ಬೆಳಗಬೇಕು ಅಕ್ಕಿ,
ಕರಿ ಚುಕ್ಕೆಯೂ ಇರದಂತೆ.
ಇಷ್ಟಾದರೆ ಉರಿವ ಬೆಂಕಿಗಿಟ್ಟುಬಿಡಿ,
ಬೇಯುವುದು ಸುಖವಾಗಿ
- ವಿದ್ಯಾರಶ್ಮಿ ಪೆಲತ್ತಡ್ಕ
**********
ಜೊನಾಥನ್‌ಗೆ
ನೀನು ಹುಟ್ಟಿದ ದಿನ ಹುಣ್ಣಿಮೆಯೇ ಆಗಿರಬೇಕು
ಸಮುದ್ರದಡದಲಿ ಅಲೆಗಳ ಹುಚ್ಚುಮೊರೆತ
ಮೊಟ್ಟೆಯಿಂದ ಹೊರಬಂದರೂ ಚಿಪ್ಪಿನಿಂದ ಹೊರಬರಲು ದಿನಗಳೇ ಹಿಡಿಯಿತು
ಮೊದಲ ಹೆಜ್ಜೆ ಯಾವ ದಿಕ್ಕಿಗಿರಿಸಿದೆ?
ನೆನೆದರೀಗಲೂ ಪುಳಕ: ಉಕ್ಕುನೊರೆಗಳ ಸೊಕ್ಕುತೆರೆಗಳ ಮೇಲೇರಿಳಿದು ಈಜಿದ್ದು,
ಶಾರ್ಕು ತಿಮಿಂಗಿಲಗಳ ಭಾರೀ ಉರಗಗಳ ಬಾಯಿಂದ ತಪ್ಪಿಸಿಕೊಂಡಿದ್ದು..
ಚಿಪ್ಪು ಗಟ್ಟಿಯಾಗುತ್ತ ಹೋದಂತೆ, ಅಮ್ಮನಾಸರೆಯೆ ಬಿಟ್ಟು ಹೊರಹೊರಟಂತೆ,
ತಲೆಯೆತ್ತಿ ನಡೆದೆ. ವಿಷ್ಣುವಿನವತಾರವೇ ಆದ ನಿನಗೆ ದೀರ್ಘಾಯುಷ್ಯದಾಶೀರ್ವಾದ
ಅದಾರು ಮಾಡಿದ್ದರೋ ತಿಳಿಯೆ. ಜಾತಕ ಬೇರೆ ಎಟಕುತ್ತಿಲ್ಲ.
ಮಳೆಗಾಲಗಳ ಕಥೆ ಹೇಳು ಜೊನಾಥನ್, ಎಷ್ಟು ಬೇಸಿಗೆಗಳ ಕಂಡೆ?
ಬಿರುಗಾಳಿಗಳ ಕಥೆ ಹೇಳು ಜೊನಾಥನ್, ಎಷ್ಟು ವಿರಹಗಳನುಂಡೆ?
ಮಹಾಯುದ್ಧಗಳ ಕಥೆ ಹೇಳು ಜೊನಾಥನ್, ಎಷ್ಟು ವಿದ್ರೋಹಗಳಿಗೆ ಸಾಕ್ಷಿಯಾದೆ?
ಸಂಗಾತಗಳ ಸಂಭ್ರಮವ ನೆನೆದು ನಗುವಾಗ,
ಸಂಗಾತಿಗಳಿಟ್ಟ ಮೊಟ್ಟೆಗಳ ಮೂಸಿ ನೋಡಿದ ಪರಿಮಳ
ಈಗಲೂ ನಿನ್ನ ಮೂಗನರಳಿಸುವಾಗ, ಅರೆಕುರುಡಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುವಾಗ
ನೆನಪ ಭಾರವನ್ನೇ ನೀನು ಚಿಪ್ಪ ಮೇಲಿಟ್ಟು ನಡೆಯುತ್ತಿರುವಂತೆ ಭಾಸ..
ಯಾವ ರಾಣಿ ಎಂದು ಎಂಥ ಯುವರಾಜನನ್ನು ಹೆತ್ತಳು
ಯಾವ ಸೇನಾಧಿಪತಿ ಯಾವ ರಾಜ್ಯದ ಮೇಲೆ ದಂಡೆತ್ತಿಹೋದ
ಯಾವ ಜೀವಸಂಕುಲ ಹೇಗೆ ಬೆಳೆದು ನಳನಳಿಸಿ ನಶಿಸಿಹೋಯಿತು
ಯಾವ ನದಿಯ ದಿಕ್ಕು ಬದಲಿಸಲಾಯ್ತು, ವಿಕಿರಣಗಳ ಶಾಪ ಎಲ್ಲಿಗೆ ತಟ್ಟಿತು
ಯಾವ ಸಾಮ್ರಾಜ್ಯ ಒಡೆದು ಚೂರಾಯ್ತು, ಸುಂದರಿಯ ನತ್ತು ಹೇಗೆ ಕಳೆಯಿತು
ಎಲ್ಲ ಪ್ರಶ್ನೆಗಳಿಗೂ ನಿನ್ನಲ್ಲುತ್ತರವಿದೆ. ಅವರ ಧ್ವಜವನ್ನಿಳಿಸಿ ನಮ್ಮ ಧ್ವಜವೇರಿಸಿ
ಮೆರೆದ ಸಾಹಸಗಳನ್ನೂ, ಆಕಾಶಕ್ಕೇರಿದ ರಾಕೆಟ್ಟುಗಳನ್ನೂ,
ಹಿಮಕಂದರಳಿಗೆ ಜಾರಿಬಿದ್ದ ಮುಕುಟಗಳನ್ನೂ, ಮರಳಿ ಬಂದ ಪತ್ರಗಳ ಸಂಕಟಗಳನ್ನೂ,
ಸಾಲುಗಟ್ಟಿ ನಡೆದ ಇರುವೆಗಳು ತಲುಪಿದ ಹುತ್ತವನ್ನೂ, ಕಮರಿದ ಬೆಳಕುಗಳನ್ನೂ
ನೀ ನೋಡಿ ಬಲ್ಲೆ. ಸುಕ್ಕುಗಟ್ಟಿದ ಚರ್ಮದೊಳಗೆ ಹೆಪ್ಪುಗಟ್ಟಿದ ನಿಟ್ಟುಸಿರುಗಳಲಿ
ಈ ಜಗಹೃದಯದ ಉಶ್ವಾಸ ನಿಶ್ವಾಸಗಳೆಲ್ಲ ಅಡಗಿದಂತಿದೆ.
ಕಥೆ ಹೇಳು ಜೋ, ನಿನ್ನ ಚಿಪ್ಪ ಮೇಲೆ ಬಿದ್ದು ಜಾರಿದ ಮಳೆಹನಿಗಳ ಕಥೆ ಹೇಳು.
ಕೂತ ಧೂಳನ್ನು ಹಾರಿಸಿದ ಗಾಳಿಯ ಕಥೆ ಹೇಳು.
ತಿಂದ ಹಣ್ಣುಗಳ, ಮಳೆಹುಳಗಳ, ಬ್ರೆಡ್ಡಚೂರುಗಳ ರುಚಿ ಹಂಚಿಕೋ.
ಸಾವಿರ ಋತುಗಳ ತಿರುವಿನಲಿ ಕಂಡ ಚಿತ್ರಗಳ ನನಗೆ ದಯಪಾಲಿಸು.
ಇತಿಹಾಸಕಾರನಾಗುವ ಹಂಬಲದಿಂದಲ್ಲ, ಕಥೆ ಕೇಳುವ ಖುಷಿಗಾಗಿ
ನಿನ್ನ ಬೆನ್ನು ಬಿದ್ದಿದ್ದೇನೆ. ಕತ್ತೇರಿಸಿ ಹೇಳು. ರಾತ್ರಿಗಳು ಕರಗಿ ಹಗಲಾಗಲಿ.
ಹಗಲಳಿದು ಮುಸ್ಸಂಜೆಯಾಗಲಿ. ನಾನು ಇಲ್ಲೇ ಕೂತಿರುವೆ ನಿನ್ನ ಸಂಗಡ.
ಕಥೆ ಹೇಳು ಜೊನಾಥನ್, ಆ ಕಥೆ ಹೇಳು.
[ಜೊನಾಥನ್ ಎಂಬುದು ಸುಮಾರು ೧೮೨ ವರ್ಷ ವಯಸ್ಸಿನ ಆಮೆ. ದಕ್ಷಿಣ ಅಟ್ಲಾಂಟಿಕ್ ಸಾಗರದ ಬಳಿಯಿರುವ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸವಿದೆ. ಸದ್ಯಕ್ಕೆ ಜೀವಂತವಿರುವ ಅತೀ ಹಿರಿಯ ಸರೀಸೃಪ ಇದೆಂದು ನಂಬಲಾಗಿದೆ]
- ಸುಶ್ರುತ ದೊಡ್ಡೇರಿ
**********
ಅಧ್ಯಕ್ಷೀಯ ಮಾತು
ದೀಪಾವಳಿ ಕಳೆದರೂ ಯಾವತ್ತಿಗೂ ನಮ್ಮೆಲ್ಲರ ಕಂಗಳಲ್ಲಿ ಇನ್ನೂ ಆ ದೀಪದ ಕುಡಿಯ ಬಿಂಬ ಹಾಗೇ ಉಳಿದಿರುತ್ತದೆ. ಜೊತೆಗೆ ನವೆಂಬರ್ ಅಂದಕೂಡಲೇ ಕನ್ನಡಿಗರಿಗೆ ಅದು ನಾಡು ನುಡಿಯ ಹಬ್ಬದ ಸಂಭ್ರಮ. ನಸುಕು.ಕಾಮ್ ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರದ ಬರೆಹಗಳನ್ನು ಪ್ರಕಟಿಸುತ್ತ ಹೊಸ ಬರಹಗಾರರಿಗೆ ಏರುಮಣೆಯಾದ ಅಂತರ್ಜಾಲ ಪತ್ರಿಕೆ. ನಸುಕು.ಕಾಮ್ ಬಳಗ ಇದೇ ೨೯/೧೧/೨೦೨೦ ರಂದು ಕವಿಗೋಷ್ಠಿಯನ್ನು ಆಯೋಜಿಸಿತ್ತು ಮತ್ತು ಆ ಗೋಷ್ಠಿಯ ಅಧ್ಯಕ್ಷನನ್ನಾಗಿ ನನ್ನನ್ನು ನಿಯೋಜಿಸಿತ್ತು.
ಕಾರ್ಯಕ್ರಮದ ಹಿಂದಿನ ದಿನವೇ ಕವಿಗೋಷ್ಠಿಯಲ್ಲಿ ಕವಿ ಓದಲಿರುವ ಕವಿತೆಗಳನ್ನು ಶ್ರೀ ತಲಗೇರಿಯವರು ತಲುಪಿಸಿ ಆಯಾ ಕವಿಗಳ ವರ್ತಮಾನದ ಕಾವ್ಯಕೃಷಿ ಮತ್ತು ಒಟ್ಟೂ ಕಾವ್ಯದ ನಡಿಗೆಯ ರೀತಿಯನ್ನು ಅಧ್ಯಯನ ಮಾಡುವ ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ನಸುಕು.ಕಾಂ ಬಳಗವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಮತ್ತು ಇಂಥ ಕಾರ್ಯಕ್ರಮದ ಮೂಲಕ ಕಾವ್ಯದ ನಡಿಗೆಯನ್ನು ಅರಿಯುವ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ.
ಕಾರ್ಯಕ್ರಮದ ನಂತರ ಡಾ.ಗೋವಿಂದ ಹೆಗಡೆ, ವಿಜಯ್ ದಾರಿಹೋಕ ಮತ್ತು ಶ್ರೀ ತಲಗೇರಿಯವರು ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡಿ ಕವಿಗೋಷ್ಠಿಯ ಕವಿತೆಗಳನ್ನು ಕುರಿತ ಟಿಪ್ಪಣಿಯೊಂದನ್ನು ನಸುಕು.ಕಾಂಗಾಗಿ ಬರೆಯಲು ಕೋರಿದ್ದರು. ಆ ದಿನ ಕವಿಗೋಷ್ಠಿಯ ಅಧ್ಯಕ್ಷೀಯ ಮಾತಲ್ಲಿ ಎಲ್ಲವನ್ನೂ ಹೇಳಿರುವಾಗ ಮತ್ತು ಅದನ್ನು ಪುನಃ ಸ್ವತಃ ಮತ್ತೆ ಕೇಳಿದಾಗ ತೀರ ದೀರ್ಘವಾಗಿದ್ದ ಆ ಮಾತನ್ನು ಮತ್ತೆ ಬರಹಕ್ಕೆ ಇಳಿಸುವ ಔಚಿತ್ಯ ಕಾಣದೇ ಹೋದರೂ ಮಾತಿಗೆ ಕಟ್ಟು ಬಿದ್ದ ಕಾರಣಕ್ಕಾಗಿ ಮತ್ತು ಆ ಎಲ್ಲ ಕವಿತೆಗಳ ಮರು ಓದು ನನ್ನಲ್ಲಿ ಉಂಟುಮಾಡಿದ ತಲ್ಲಣ ಮತ್ತು ಆ ಕ್ಷಣದ ಪ್ರತಿಕ್ರಿಯೆಯನ್ನು ಹೀಗೆ ದಾಖಲಿಸುತ್ತಿದ್ದೇನೆ.
ಬಹುತೇಕ ಕವಿಗೋಷ್ಠಿಗಳು ಅದರಲ್ಲೂ ಅಂತರ್ಜಾಲದಲ್ಲಿ ನಡೆಯುವ ಕವಿಗೋಷ್ಠಿಗಳು ತಾಂತ್ರಿಕ ಕಾರಣಗಳಿಂದಾಗಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಸರಿಯಾದ ಪೂರ್ವ ಸಿದ್ಧತೆ ಇಲ್ಲದ ಕಾರಣದಿಂದಾಗಿ ನಿರೂಪಕರ ಎಡವಟ್ಟಿನಿಂದಾಗಿ ಉತ್ಸುಕತೆ ಮತ್ತು ಕುತೂಹಲವನ್ನು ಕಾಪಾಡಿಕೊಳ್ಳುವುದು ದುಸ್ತರವಾಗಿ ಪೇಲವವಾಗುತ್ತವೆ. ಆದರೆ ಹಣತೆ ಕವಿಗೋಷ್ಠಿ ಪೂರ್ವನಿರ್ಧಾರಿತ ಸಮಯಕ್ಕೆ ತಾಂತ್ರಿಕ ತೊಂದರೆಯಿಲ್ಲದೇ ಆರಂಭವಾಗಿ ಕಡೆಯವರೆಗೂ ನೆಟ್ವರ್ಕ್ ಸಮಸ್ಯೆ ಅಥವಾ ಇತರೆ ಯಾವ ತೊಂದರೆ ಇಲ್ಲದೆ ಸಂಪನ್ನವಾದುದಕ್ಕೆ ತಂಡದ ತಾಂತ್ರಿಕ ನೈಪುಣ್ಯವನ್ನು ಅಭಿನಂದಿಸುತ್ತೇನೆ. ಮತ್ತು ನಿರೂಪಣೆಯ ಹೊಣೆ ಹೊತ್ತಿದ್ದ ರಶ್ಮಿ ಭಟ್ ಕಾರಣಗಿರಿ ಅವರ ದೀರ್ಘವಲ್ಲದ ಆದರೆ ಅಗತ್ಯವಿದ್ದಷ್ಟು ವಿಚಾರವನ್ನು ಸ್ಪಷ್ಟವಾಗಿ ಉಚ್ಛರಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ.
ಅಂಜನಾ ಹೆಗಡೆಯವರು “ಅಂಗಳದಂಚಿಗೆ” ಕವಿತೆಯನ್ನು ಮೊದಲಿಗೆ ಓದುವ ಮೂಲಕ ಕವಿಗೋಷ್ಠಿ ಆರಂಭಿಸಿದರು. ಅವರ ಕವಿತೆ ಕವಿಗೋಷ್ಠಿಯ ಉದ್ಘಾಟನೆಯ ಮಾತಿನಂತೆ ಪ್ರಸ್ತುತ ವರ್ತಮಾನದ ತವಕ ತಲ್ಲಣಗಳ ನಡುವೆಯೂ ಟಿಸಿಲೊಡೆಯುವ ಗರಿಕೆಯ ಹಸಿರಿನಂತೆ ಕಂಡಿತು. ಕವಿತೆಯ ಶೀರ್ಷಿಕೆ “ಅಂಗಳದಂಚಿಗೆ” ಎನ್ನುವುದೇ ಸದ್ಯದ ಪದ್ಯದ ಸ್ಥಿತಿಯನ್ನು ಹೇಳಿತು. ಅಂದರೆ ಅಂಗಳದ ನಡುವಲ್ಲಿ ಅರಳಿ ಶೋಭಿಸಬೇಕಿದ್ದ ಕವಿತೆ ಇತ್ತೀಚೆಗೆ ಅದೇ ಅಂಗಳದ ಅಂಚಿಗೆ ನೂಕಲ್ಪಟ್ಟರೂ ನೆಲದ ಹೊಕ್ಕುಳಲ್ಲಿ ಬೇರನಿಳಿಸಿ ಅರೆಬಿರಿದ ಮೊಗ್ಗುಗಳೋಪಾದಿಯಲ್ಲಿ ಅರಳಿ ನಗುತ್ತಲೇ ಕಾವ್ಯ ರಸಿಕರ ಹೃನ್ಮನಗಳನ್ನು ತಣಿಸುತ್ತಿದೆ. ಕಲ್ಪನೆಯ ಕೂಸಿಗೆ ಮಾತಿನ ಅಲಂಕಾರ ತೊಡಿಸುವ ಕಾವ್ಯಕ್ರಿಯೆ ಕೂಡ ಆ ರಸಿಕನ ಅಂದಾಜಿನ ಅಂಗಳಕ್ಕೆ ಗೋಡೆಗಳ ಗಡಿ ದಾಟುವ ತವಕ. ಅದಕ್ಕೇ ಈ ಪದ್ಯದ ಕೊನೆ ಒಂದು ಉದ್ದೇಶಿತ ಘನತೆಗೆ ತುಡಿಯುತ್ತಿದೆ. ಮರಿಹಕ್ಕಿ ತನ್ನ ರೆಕ್ಕೆ ಬಲಿಯುವ ಘಳಿಗೆಗಾಗಿ ಕಾಯುತ್ತಿದೆ ಮತ್ತು ಆ ಹಕ್ಕಿಯ ಕನಸಲ್ಲೂ ಜಾಜಿ ಪರಿಮಳದ ಹುಡುಗನೇ ಇದ್ದಾನೆ. ಹೌದು ನಾವೆಲ್ಲರೂ ನಮ್ಮ ಕಾವ್ಯದ ಹಕ್ಕಿಯ ರೆಕ್ಕೆ ಬಲಿಯಲೆಂದೂ ಅದು ಈವರೆಗೂ ಕಾಣದ ಕನಸ ಹುಡುಗನ ಜೊತೆಯಾಗಿ ಹಾರಲೆಂದೂ ಕಾಯುತ್ತಲೇ ಇದ್ದೇವೆ.
ಅತಿ ಕಿರಿಯ ವಯಸ್ಸಿಗೇ ಸಾಧ್ಯತೆಗಳ ಬಾನಂಗಳದ ತುಂಬ ವಿಹರಿಸುತ್ತಿರುವ ಕೃಷ್ಣ ದೇವಾಂಗಮಠ “ಜಗದಗಲ ಬೇರಿನ ಮರಕೆ” ಶೀರ್ಷಿಕೆಯ ಪದ್ಯವನ್ನು ಓದುತ್ತಿದ್ದಾಗ ಕೂಡ ಅವರ ಭಾವ ವಲಯ ಕಂಪಿಸುತ್ತಿದ್ದುದ್ದನ್ನೂ ಅವರ ಅರಿವು ಜಾಗರದಾಚೆಗೆ ಚಾಚಿದ ವಿಸ್ತರತೆಯ ರೂಹಿನಲ್ಲಿ ಭ್ರಮಿಸಿ ತೂಗುತ್ತಿದ್ದುದನ್ನೂ ಗಮನಿಸಿದರೆ ಈ ಕವಿ ತನ್ನ ವಯಸ್ಸು ಮತ್ತು ಅನುಭವದಾಚೆಯ ವಿಸ್ತರಣಕ್ಕೆ ಕೈ ಚಾಚುತ್ತ ನಿಜದ ಕಾಣ್ಕೆಗಳನ್ನು ನಿರಾಕರಿಸುತ್ತಿದ್ದಾರೆಂಬ ಊಹೆಗೆ ಪುಷ್ಟಿ ಸಿಕ್ಕಿತು. ಅವರ ಕವಿತೆ ಕೂಡ ಧೇನಿಸುತ್ತಿರುವುದು ಜಗದಗಲ ಆವರಿಸಿಯೂ ಮತ್ತೂ ವಿಸ್ತರಗೊಳುವ ಮರದ ಬೇರಿಗೆ. ಗಜಲುಗಳ ಮೂಲಕವೇ ಪ್ರಸಿದ್ಧರಾಗಿರುವ ಈ ಕವಿಗೆ ಶಬ್ದ ಭಂಡಾರವನ್ನು ಒಳಗೊಳ್ಳುವ ಬಯಕೆಯಂತೆಯೇ ಒಟ್ಟೂ ಸೃಷ್ಟಿಯ ಬಗೆಗೆ ಎನಿತು ಕೌತುಕ ಮತ್ತು ವಿಸ್ಮಯಗಳಿವೆ ಎಂದರೆ ಅದನ್ನು ದೇವಾಂಗಮಠ ಕವಿತೆಯನ್ನಾಗಿಸುವ ರೀತಿ ಅನನ್ಯವೇ ಆಗಿದೆ. ಇಷ್ಟ ದೇವರು ನೆಟ್ಟ ಜಗದಗಲ ಬೇರಿನ ಮರಕ್ಕೆ ನೀರೆರೆಯುವುದನ್ನು ಭ್ರಮೆಯೆಂದು ತಿಳಿದಿದ್ದರೂ ಈ ಕವಿಗೆ ಮತ್ತೆ ಮತ್ತೆ ಅವತರಿಸಿ ಬರುವ ದೇವನೊಳಗಿನ ಅಣುವಾಗುವ ಹೆಬ್ಬಯಕೆ ಇದೆ, “ಪರಮಾತ್ಮನೇ ಕೈ ಚಾಚಿ ಕರೆದ ಹಾಗೆ ಕ್ಷಿತಿಜವೇ ಆಡುವುದು ಕಣ್ಣಿನಿದಿರು” ಎನ್ನುವ ಅನುಭವದಾಚೆಯ ಕನಸಿನ ಈ ಯುವ ಕವಿಯ ಭವಿಷ್ಯದ ಕಾವ್ಯಕೃಷಿಯ ಬಗ್ಗೆ ಭರವಸೆ ಇಟ್ಟುಕೊಳ್ಳಲೇಬೇಕಿದೆ.
ಸ್ವತಃ ರಂಗ ನಟಿಯೂ ರಂಗ ತಜ್ಞೆಯೂ ಆಗಿರುವ ಪೂರ್ಣಿಮಾ ಸುರೇಶರ ರಚನೆಗಳು ಯಾವತ್ತಿಗೂ ವ್ಯಕ್ತದಾಚೆಯ ಅವ್ಯಕ್ತವನ್ನು ಲೌಕಿಕದಾಚೆಯ ಅಲೌಕಿಕದ ಪಲುಕುಗಳನ್ನು ಧೇನಿಸುತ್ತಲೇ ಇರುತ್ತದೆ. ಅವರು ಪ್ರಸ್ತುತ ಪಡಿಸಿದ “ಅಕಾಲ ಮಳೆ” ಪದ್ಯ ಕೂಡ ಇಂಥದೇ ಪ್ರಯತ್ನದ ಮುಂದುವರೆದ ಭಾಗವಾಗಿ ಕಾಣುತ್ತದೆ. ಚೆಲ್ಲಿ ಬಿಟ್ಟ ಬಣ್ಣ ಚಿತ್ತಾರವಾಗದೆಂಬ ಅರಿವು ಇರುವ ಈ ಕವಿ ಹಿಂಬಾಲಿಸಿದ ಬೆನ್ನಿನಲ್ಲೇ ಕಣ್ಣು ನೆಟ್ಟು ಅವನ ಹೆಜ್ಜೆಯ ವಿಳಾ(ಲಾ)ಸವನ್ನು ಹಿಡಿಯಬಲ್ಲವರು. “ಭರ ಭರ ಬಂದೆ ಹೊರ ಬಂದೆ” ಎನ್ನುವುದು ಕೂಡ ಆ ಬರವಿನಲ್ಲಿ ಇರುವ ಅವಸರ ಮತ್ತು ದೃಢತೆಯ ಸಂಕೇತವಾಗಿಯೇ ಕಾಣುವಾಗ ಅವನು ಉಳಿಸಿ ಹೋಗಿದ್ದು ಏನು ಮತ್ತು ಅವನ ನೆರಳನ್ನು ತಬ್ಬುವ ಬಯಕೆ ಕವಿ(ತೆ)ಯ ಆಂತರ್ಯದ ಸ್ಪಷ್ಟ ಕನಸಾಗಿಯೂ ಕಾಣುತ್ತದೆ.
“ಕಿಮ್ಮತ್ತಿನ ಸಂತೆ” ಎಂಬ ರೂಪಕವೇ ಶೀರ್ಷಿಕೆಯಾದ ಡಾ. ಗೋವಿಂದ ಹೆಗಡೆಯವರ ಕವಿತೆಯ ಆಶಯ ಸಾಮಾಜಿಕ ನ್ಯಾಯದ ಪರವಾದ ಸ್ಪಷ್ಟ ದನಿಯಾಗಿ ಕೇಳಿಸುತ್ತದೆ. ಅಂಥ ಸಂತೆಯ ತುಂಬ ತುಂಬಿರುವ ಕವಡೆ, ಮಣಿಸರಗಳ ಅಲಂಕಾರದ ವಸ್ತುಗಳ ನಡುವೆ ನಡೆಯುತ್ತ ನಡೆಯುತ್ತ ಕವಿ ಭಗ್ನ ಅರಮನೆಯ ಮುರುಕು ಆಸನದ ಮೇಲೆ ಕೂತ ಕೂಡಲೇ ಅವನ ಕೈಗೆ ಬಂದ ಮಂತ್ರದಂಡವನ್ನಾಡಿಸಿ ಬೀದಿಯ ಕೊನೆಯ ಮನುಷ್ಯನ ತೆರೆದ ಪಾತ್ರೆಗೆ ಅನ್ನ ಬೀಳಲಿ ಎಂದು ಪ್ರಾರ್ಥಿಸುತ್ತಾನೆ. ಅವನ ಪ್ರಾರ್ಥನೆ ಈಡೇರಿತೋ ಇಲ್ಲವೋ ಅದಕ್ಕೆ ಮೊದಲೇ ಕೈಯಲ್ಲಿದ್ದ ಮಂತ್ರದಂಡವೂ ಅಹುದೆನ್ನುವ ದೇವರೂ ಮಾಯವಾಗಿ ಚಿಪ್ಪು ಮಣಿಸರ ಮತ್ತು ಕವಡೆಯಷ್ಟೇ ಕಿಮ್ಮತ್ತಿನ ಸಂತೆಯ ಸರಕಾಗಿ ಉಳಿಯಿತು ಎಂದು ಕವಿ ಸಂಕಟಪಡುತ್ತಿದ್ದಾನೆ.
ಇಲ್ಲಿ ವ್ಯಾಪಾರಕಿಟ್ಟಿರುವ ಕವಡೆ ಚಿಪ್ಪು ಮಣಿಸರಗಳು ಕವಡೆಯಷ್ಟೂ ಕಿಮ್ಮತ್ತಿಲ್ಲದಿರುವ ಸರಕುಗಳು. ಆದರೂ ಆ ಅಂಥ ಸರಕನ್ನು ಬೀದಿಯ ಕೊನೆಯ ಮನುಷ್ಯನ ಪಾತ್ರೆಯ ತುಂಬಾ ಅನ್ನವಾಗಿ ಕಾಣ ಬಯಸುವ ಕವಿಯ ಕನಸು ಬರಿ ಸೋಜಿಗವನ್ನಷ್ಟೇ ಅಲ್ಲದೆ ಸಾಮಾಜಿಕನ ಆದ್ಯ ಕನಸಾಗಿ ಓದುಗ ಗ್ರಹಿಸಿದರೆ ಆಗ ಕಿಮ್ಮತ್ತಿರುವುದು ಸಂತೆಗೋ ಅಥವ ಅಲ್ಲಿ ವ್ಯಾಪಾರಕ್ಕೆ ಇಟ್ಟಿರುವ ಸರಕಿಗೋ ಎಂಬ ಜಿಜ್ಞಾಸೆ ತಟ್ಟಿದರೆ ಮಾತ್ರ ಈ ಕವಿತೆ ಒಳಕ್ಕೆ ಇಳಿದೀತು.
Ambiguity ಅಂದರೆ ದ್ವಂದ್ವ ಎನ್ನುವುದು ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಬಹು ಮುಖ್ಯ ಪರಿಕಲ್ಪನೆ. ಪಾತ್ರೆಯಲ್ಲಿ ಅರ್ಧ ಮಾತ್ರ ಇರುವ ನೀರು ಧನಾತ್ಮಕ ಚಿಂತನೆಯಲ್ಲಿ ಇಷ್ಟಾದರೂ ಇದೆಯಲ್ಲ ಎನ್ನಿಸಿದರೆ ಋಣಾತ್ಮಕ ನಿಲುವು ಅರ್ಧ ಮಾತ್ರ ಇದೆಯಲ್ಲಎಂಬ ಹತಾಶೆಯೇ ಆಗಿ ಬದಲಾಗಿ ನಿರಾಶೆ ಮೂಡಿಸುತ್ತದೆ. ಎಂ ಆರ್ ಭಗವತಿ ಅಪರೂಪಕ್ಕೆ ಪದ್ಯ ಬರೆಯುವವರು. ಇತ್ತೀಚೆಗೆ ಕವಿತೆಯಂಥದೇ ಛಾಯಾ ಚಿತ್ರಗಳ ಮೂಲಕ ಪ್ರಕೃತಿ ಹಕ್ಕಿ ಚಿಟ್ಟೆಗಳ ಮೂಲಕ ಸೃಷ್ಟಿಯ ಸೊಬಗನ್ನು ಸೆರೆ ಹಿಡಿಯುತ್ತಿರುವವರು. ಅವರ “ಮೂರು ಮೊಟ್ಟೆ” ಒಂದು ದ್ವಂದ್ವವನ್ನು ಹೇಳುವುದರ ಮೂಲಕ ವಿಭ್ರಮೆಗೆ ತಳ್ಳುತ್ತಲೇ ಆಲೋಚನೆಗೂ ತಳ್ಳುವ ಮತ್ತು ಸಮಸ್ಯೆಯನ್ನು ಮುಂದೊಡ್ಡಿ ಅದನ್ನು ಪರಿಹರಿಸಿಕೊ ಎನ್ನುವ ನಿಲುವಿನ ಚಮತ್ಕಾರಿಕ ಕವಿತೆ.
ಈ ಪದ್ಯದಲ್ಲಿ ಕವಿ ಕಂಡಾಗ ಗೂಡಿನಲ್ಲಿ ಇದ್ದುದು ನೀಲಿ ಬಣ್ಣ ಕಪ್ಪು ಚುಕ್ಕೆಯ ನಾಕು ಮೊಟ್ಟೆಗಳು. ಆದರೆ ಕವಿಯ ಮಗ ಅಲ್ಲಿರುವುದು ಮೂರು ಮೊಟ್ಟೆ ಮಾತ್ರ ಎಂದಂದು ಗೊಂದಲಕ್ಕೆ ದೂಡುತ್ತಾನೆ. ಪುರ್ರೆಂದು ಹಾರಿ ಹೋಗಿದೆ ಹಕ್ಕಿ ಸಿಕ್ಕದೇ ಪಕ್ಕದಲ್ಲಿದ್ದ ಬೆಕ್ಕು ಮೊಟ್ಟೆಯೊಂದನ್ನು ತಿಂದೆ ಎಂದದ್ದು ದಿಟವೇ? ಹಾರಿ ಹೋದದ್ದು ಹಕ್ಕಿಯೇ ತಿಂದದ್ದು ಬೆಕ್ಕೇ ಈ ಇಂಥ ದ್ವಂದ್ವಗಳೇ ಬದುಕ ಮೊಟ್ಟೆಯ ಬುಟ್ಟಿಯ ಲೆಕ್ಕ ಸಿಕ್ಕದ ಹಕೀಕತ್ತಲ್ಲವೇ? ಪದ್ಯ ಎಂದರೆ ಬರಿಯ ಸಂಭ್ರಮವಲ್ಲ, ಸಂಕಟವೂ ಅಲ್ಲ, ಭ್ರಮೆಯೂ ಕೂಡ ಅನ್ನುವುದನ್ನು ಹೇಳುತ್ತಲೇ ದ್ವಂದ್ವಕ್ಕೆ ದೂಡಿದ್ದು ಈ ಕವಿತೆ.
“ಹಾರಿದ ಹಕ್ಕಿಯೂ ತೇಲುವ ನೆನಹೂ” ಎನ್ನುವ ಕವಿತೆ ಶ್ರೀ ಚಿದಾನಂದ ಕಮ್ಮಾರರದ್ದು. ನೋವುಗಳೇ ಇಲ್ಲದ ಬದುಕು ಅಸಾಧ್ಯವೆಂದು ತಿಳಿದಿರುವ ಈ ಕವಿ ಹಾಡಿನ ಜಾಡಲ್ಲಿ ಹಕ್ಕಿ ಹಿಡಿಯ ಹೋಗಿ ಸೋಲುತ್ತಾರೆ. ಹಾರಿಬಂದ ರೆಕ್ಕೆಯ ತುಪ್ಪಳದ ಚೂರು ಪಾರುಗಳು ಗಾಯಗೊಂಡ ಹಕ್ಕಿಯ ಸುಳಿವನ್ನು ಕೊಟ್ಟಿತೆಂದು ದುಃಖಿಸುವ ಕವಿ ಕುಕ್ಕಿ ಕುಕ್ಕಿ ಹೆಕ್ಕಿ ಹೆಕ್ಕಿ ಹಿಡಿದೆಳೆಯದೇ ಹಾಡಿನ ಎಳೆಯೊಂದ ಕೇಳಿಸದು ಹೊಸ ಹಾಡು ಯಾರ ಎದೆಯೊಳಗಿಂದ ಎಂಬ ಸಹಜ ನ್ಯಾಯವನ್ನು ಪದ್ಯದ ಮೂಲಕ ನಿರೂಪಿಸುತ್ತಾರೆ. ಬೇಂದ್ರೆ ಕಾಣಿಸಿದ ಹಕ್ಕಿ, ಕಾಲಾಂತರದಲ್ಲಿ ಬದಲಾದ ಪ್ರತಿಮೆಯಾಗಿ ನಿಲ್ಲುವುದನ್ನು ಕಾವ್ಯಾಸಕ್ತರು ಇಲ್ಲಿ ಪರಿಗಣಿಸಲೇ ಬೇಕು. ಮತ್ತು ಕಾಲದ ಅನಂತ ಪ್ರವಾಹವು ಕಾವ್ಯ ಕೃಷಿಯ ಹತಾರಕ್ಕೆ ಬೇರೆಯದೇ ಆದ ವ್ಯಾಖ್ಯೆಯನ್ನು ಕೊಡಮಾಡಿ ರೂಪಕಗಳಿಗೂ ಪ್ರತಿಮೆಗಳಿಗೂ ಅರ್ಥಾಂತರವನ್ನು ಉಂಟು ಮಾಡಿರುವ ಸತ್ಯವನ್ನೂ ಅರಿಯಬೇಕು.
ಸ್ಮಿತಾ ಅಮೃತರಾಜ್ ಸಂಪಾಜೆ “ಒಂದು ಖಾಲಿ ಜಾಗ” ಪದ್ಯ ಬಳಸಿದ ಪ್ರತಿಮೆ ಹಳೆಯದೇ ಆದರೂ ಆ ಕವಿತೆ ಧೇನಿಸಿದ ವಸ್ತು ವಿಷಯ ವಿಸ್ತಾರ ಮತ್ತು ಆಳದ್ದು. “ಉಪರಮ” ಎಂದಂದ ಮನೋವೈಜ್ಞಾನಿಕ ಸುಳಿವು ಕೂಡ ಈ ಪದ್ಯದ ಆಂತರಂಗ ಎಂಬುದನ್ನು ಡಿವಿಜಿ ಮತ್ತು ಕೈಲಾಸಂ ಓದಿದವರಿಗೆ ತಕ್ಷಣಕ್ಕೆ ಹೊಳೆಯುತ್ತದೆ ಕೂಡ. ಮನಸ್ಸನ್ನು ಊದುಗೊಳವೆ ಮಾಡಿಕೊ ಎಂದು ಹೇಳಿದ ಕೈಲಾಸಂ ಮತ್ತು ಮನಸನ್ನು ರಗಳೆಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮೂರು ವಿಭಾಗ ಮಾಡಿಕೊ ಎಂದಂದು ದಾರಿ ತೋರಿದ ಡಿವಿಜಿ ಅವರಂತೆಯೇ ಈ ಕವಿತೆಯ ವಸ್ತುವೂ ನಮ್ಮ ನಮ್ಮ ಅಂತರಂಗದಲ್ಲಿ ಉಳಿದು ಹೋಗಿರುವ ಖಾಲಿ ಜಾಗ ನಿರುಕಿಸುವುದಕ್ಕೆ ಸಾಧ್ಯವಾದರೆ ಅದೆಷ್ಟು ಚಂದ. ನಿಜದ ಕವಿತೆ ಗೆಲ್ಲುವುದು ಈ ಥರದ ಸಾಮಾನ್ಯ ಪ್ರತಿಮೆಗಳನ್ನು ಅಸಾಮಾನ್ಯಗೊಳಿಸುವ ಪ್ರಸ್ತುತಿಯ ಮೂಲಕ. ಬಹು ಆಯಾಮದ ಮತ್ತು ಪದ್ಯದ ಹದ ಹಿಡಿದ ಈ ರಚನೆಗಾಗಿ ಕವಿಯನ್ನು ಅಭಿನಂದಿಸಲೇ ಬೇಕು.
“ಒಂದು ಕೋಣೆಯ ಹೆಜ್ಜೆ” ಕವಿತೆಯ ಶಿಲ್ಪಿ ಶ್ರೀ ತಲಗೇರಿ ತಮ್ಮ ರಚನೆಗಳಲ್ಲಿ ಅನೂಹ್ಯವಾದುದನ್ನು ಊಹೆಯ ನೆರಳಲ್ಲಿ ಇಡಿಕರಿಸುತ್ತಲೇ ಅಲೌಕಿಕವನ್ನು ಲೌಕಿಕಗೊಳಿಸುವ ಮಹತ್ತೆಂದು ನಂಬಿದುದನ್ನು ವಿಶ್ವಾಸದ ಕುರುಹಾಗಿ ಬದಲು ಮಾಡುವುದರಲ್ಲಿ ನಿಸ್ಸೀಮರು. ಹಾಗಾಗಿಯೇ ಶ್ರೀ ಅವರನ್ನು ಕವಿ ಎನ್ನುವ ಬದಲು ಶಿಲ್ಪಿ ಎಂದೇ ಕರೆಯಬೇಕು. ಕವಿಯು ಪದಗಳಲ್ಲಿ ಆಟವಾಡುತ್ತಾನಾದರೆ ಶಿಲ್ಪಿಯು ಕಲ್ಲಲ್ಲೂ ಹೂ ಅರಳಿಸುವ ಸಾಹಸ ಮಾಡುತ್ತಾನೆ. ಶ್ರೀ ತಲಗೇರಿ ಕೂಡ ಇಷ್ಟೂ ದಿನ ನಂಬಿದುದನ್ನು ನಿವಾರಿಸುವ ಧೈರ್ಯಮಾಡುತ್ತ ದೃಷ್ಟಿಗೆ ಇರಬಹುದಾದ ಮತ್ತೊಂದು ಆಯಾಮದತ್ತಲೂ ನೋಡುವಂತೆ ಪ್ರೇರೇಪಿಸುತ್ತಾರೆ. ಆದರೆ ಅವರ ಈ ಕ್ರಮದಲ್ಲಿ ಎಲ್ಲೂ ಹಕ್ಕೊತ್ತಾಯವಾಗಲಿ ಅಥವ ಇದು ಆಗೇ ಆಗುತ್ತದೆ ಎನ್ನುವ ಹಟವಾಗಲಿ ಇರದೆ ಬರಿಯದೊಂದು ನಿವೇದನೆ ಇದ್ದೇ ಇರುತ್ತದೆ. ಅಧ್ಯಾತ್ಮದ ಅನುಸರಣೆಯ ಕ್ರಮಕ್ಕೆ ತೀರ ವಿರುದ್ಧವೇ ಆದ ಈ ಯೋಚನೆ ಕೂಡ ಕಾವ್ಯ ರಚನೆಯ ವ್ಯಾಖ್ಯೆಗೆ ಮತ್ತೊಂದು ಆಯಾಮವನ್ನು ಮತ್ತು ಚಿಂತನೆಯನ್ನು ಕೊಡುತ್ತಿದೆ ಎನ್ನುವುದು ತಕ್ಷಣಕ್ಕೆ ಹೊಳೆದ ಪ್ರತಿಕ್ರಿಯೆ. ಆದರೂ ಕೃಷ್ಣ ದೇವಾಂಗ ಮಠ, ಶ್ರೀ ತಲಗೇರಿ ಥರದ ಯುವಕರು ತಮ್ಮ ವಯಸ್ಸಿಗೆ ಸಹಹವಾದ ಒಲವು ಪ್ರೇಮ ವಿರಹವೇ ಮುಂತಾದ ಸಂಗತಿಗಳ ಹೊರತಾದ ಬಲು ಭಾರವಾದ ವಸ್ತು ವಿಶೇಷಗಳಿಗೆ ಯಾಕಾದರೂ ತಡಕುತ್ತಾರೋ ಇವರೆಲ್ಲ ಹಿರಿಯ ಕವಿ ಕೆ.ಎಸ್.ನ ಅವರನ್ನು ಮತ್ತೆ ಮತ್ತೆ ಓದಿಕೊಳ್ಳುವ ಬದುಕಿನ ಸಹಜ ಸರಳ ವಸ್ತುಗಳಲ್ಲಿಯೂ ಒದಗಬಹುದಾದ ವೈವಿಧ್ಯತೆಯ ಕಾವ್ಯ ಪರಿಮಳವನ್ನೂ ಅರಿಯಲೇ ಬೇಕಾದ ಅಗತ್ಯತೆ ಇದ್ದೇ ಇದೆ.
ಮಹಿಳಾ ಕಾವ್ಯವು ಕೂಡ ಬಂಡಾಯ ಮತ್ತು ದಲಿತ ಕಾವ್ಯ ಧ್ವನಿಗಳಂತೆಯೇ ಮತ್ತೆಲ್ಲೋ ಮರೆಯಾಗಿ ಹೋಯಿತೆ ಎನ್ನುವ ಆತಂಕವನ್ನು ದೂರ ಮಾಡಿದ್ದು ವಿದ್ಯಾರಶ್ಮಿ ಪೆಲ್ಲತಡ್ಕ ಅವರ ವಿಶಿಷ್ಠವೂ ಸಹಜವೂ ಭಾರವೂ ಅಲ್ಲದ ಆದರೆ ಖಂಡಿತಾ ಹಗುರವಲ್ಲದ ವಸ್ತುವಿನ ಅದ್ಭುತ ವಿನ್ಯಾಸ ಮತ್ತು ಕರಾರುವಾಕು ಸಂಯೋಜನೆಯ ಪದ್ಯ ” ಮಾರ್ಜನ” ಪದ್ಯ ಸುರುವಾಗುವುದು ಅನ್ನ ಮಾಡಲು ಅಕ್ಕಿ ತೊಳೆಯುವ ಕ್ರಿಯೆಯಿಂದ. ಅಕ್ಕಿಯನ್ನು ತೊಳೆಯುವುದು ಕೂಡ ಎಲೆಕ್ಟ್ರಿಕ್ ರೈಸ್ ಕುಕರ್ ಮತ್ತು ಇಂಡಕ್ಷನ್ ಸ್ಟೌ ಯುಗದಲ್ಲಿ ಅನಿವಾರ್ಯವೇನೂ ಅಲ್ಲದ ಕೆಲಸ. ಬೇಡವೆಂದರೂ ಸ. ಉಷಾ ಅವರ “ಒಲೆ ಬದಲಾಗಿದೆ ಉರಿ ಬದಲಾಗಿದೆಯೇ” ಎನ್ನುವ ಸರ್ವಕಾಲಿಕ ಪ್ರಶ್ನೆಯನ್ನೇ ಇಲ್ಲಿ ಈ ಕವಿತೆಯೂ ಧೇನಿಸಿದ್ದು ಶೃತವಾಗುತ್ತದೆ. ಧೂಳು ಹೋಗುವಂತೆ, ಕಾಳಿಗೂ ನೋವಾಗದಂತೆ ಅಕ್ಕಿಯನ್ನು ತೊಳೆವುದು ಸುಲಭದ ಮಾತೇನೂ ಅಲ್ಲವಲ್ಲ. ಎಚ್ಚರ ತಪ್ಪಿದರೆ ನೀರಿನ ಜೊತೆ ಅಕ್ಕಿಯೂ ಚರಂಡಿ ಸೇರುವ ಭಯ ಜೊತೆಗೇ ಇರಬಹುದಾದ ಕಪ್ಪುಮಣ್ಣ ಹೆಂಟೆಯ ಹೊರಗಿಟ್ಟು ಅಪರೂಪಕ್ಕೆ ಇದ್ದೂ ಬಿಡಬಹುದಾದ ಬಟಾಣಿ ಕಾಳನ್ನು ಬೇರೆಯೇ ತೆಗೆದಿಟ್ಟು…..ಅಕ್ಕಚ್ಚು ಉಳಿಯದಿರಲಿ ಬೇಡದ ಕಹಿ ನೆನಪೂ ಹೀಗೆ ಎಂದೆನ್ನುತ್ತಲೇ ಉರಿವ ಬೆಂಕಿಗೆ ಇಟ್ಟುಬಿಡಿ ಬೇಯುವುದು ಸುಖವಾಗಿ ಎಂದು ಪದ್ಯ ಮುಗಿಯುವಾಗ ಸಣ್ಣದೊಂದು ಕನಲು, ಒಂದು ಉಮ್ಮಳ ಒಂದು ದೀರ್ಘ ಉಸಿರು ಹೊಮ್ಮುತ್ತದಲ್ಲಾ ಅದಕ್ಕಿಂತ ಬೇರೆ ಏನಿದೆ ಸಂ’ಭಾವನೆ’?. ವಿದ್ಯಾರಶ್ಮಿ ಪೆಲ್ಲತಡ್ಕ “ಗೌರಿದುಃಖ” ಸಂಕಲನದ ನಂತರವೂ ಗಟ್ಟಿಯಾಗಿ ಹಿಡಿದ ಅವರ ಪದ್ಯಗಳ ಸ್ಥಾಯೀ ಭಾವ ಈ ಕವಿತೆ.
ಇನ್ನು ಈ ಕವಿಗೋಷ್ಠಿಯ ಕಡೆಯ ಪದ್ಯ ಸುಶ್ರುತ ದೊಡ್ಡೇರಿ ಅವರ “ಜೊನಾಥನ್ ಗೆ”. ಜೊನಾಥನ್ ಅನ್ನುವುದು ದಕ್ಷಿಣ ಅಟ್ಲಾಂಟಿಕ್ ಸಾಗರಕ್ಕೆ ಹತ್ತಿರ ಇರುವ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸವಿರುವ ಸುಮಾರು ೧೮೨ ವರ್ಷದ ಆಮೆ. ಸದ್ಯಕ್ಕೆ ಜೀವಂತವಿರುವ ಅತೀ ಹಿರಿಯ ಸರೀಸೃಪ ಇದು. ಈ Amphibian ಪ್ರಾಣಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುವ ಕವಿ ಇಡೀ ಮನುಕುಲದ ಇತಿಹಾಸದುದ್ದಕ್ಕೂ ಕಂಡುಂಡ ಅನುಭವಗಳಾಚೆಗೂ ಮಾಗದ ಮನುಷ್ಯನ ದುರಾಸೆ ಮತ್ತು ಅತ್ಯಾಚಾರಗಳನ್ನು ಕಥನ ಕ್ರಮದಲ್ಲಿ ಪೋಣಿಸಿ ಆ ಮೂಲಕ ಕವಿತೆಯೊಂದು ವಿಸ್ತಾರಗೊಳ್ಳಬಹುದಾದ ಚಾಚನ್ನು ಪ್ರಾಂಜಲವಾಗಿ ನಿರೂಪಿಸುತ್ತಾರೆ. “ರಾತ್ರಿಗಳು ಕರಗಿ ಹಗಲಾಗಲಿ, ಹಗಲಿಳಿದು ಮುಸ್ಸಂಜೆಯಾಗಲಿ, ನಾನು ಇಲ್ಲೇ ಕೂತಿರುವೆ ನಿನ್ನ ಸಂಗಡ ಕಥೆ ಹೇಳು ಜೊನಾಥನ್, ಕಥೆ ಹೇಳು” ಎನ್ನುವ ನಿವೇದನೆಯ ಮೂಲಕ ಬದಲಾಗದ ಮನಸ್ಥಿತಿಯನ್ನು ಮಾಗದ ಮನಸ್ಸುಗಳ ದೌರ್ಬಲ್ಯಗಳನ್ನೂ ವಿಷದೀಕರಿಸುತ್ತಾರೆ.
ಈ ಹತ್ತು ಕವಿತೆಗಳ ಆಂತರ್ಯವನ್ನು ಶೋಧಿಸುವುದು ಅಥವ ಆ ರಚನೆಗಳ ಹಿಂದಣ ಅನಂತತೆಯ ಮಾಪಕವನ್ನು ಹಿಡಿಯುವುದು ನನ್ನ ಉದ್ದೇಶ ಅಲ್ಲವೇ ಅಲ್ಲ. ಪರಂತು ಕಾವ್ಯ ಪರಂಪರೆಯ ವಿಸ್ತರಿತ ಆಯಾಮಗಳಲ್ಲಿ ಆಧುನಿಕ ಕಾವ್ಯವು ನವ್ಯ ನವೋದಯ ಬಂಡಾಯಗಳನ್ನೆಲ್ಲ ಆವಾಹಿಸಿಕೊಂಡ, ಅದ್ಭುತ ರಾಚನಿಕ ಕಲ್ಪನೆಗಳನ್ನೆಲ್ಲ ಬಿಟ್ಟುಕೊಟ್ಟ ವರ್ತಮಾನದ ಕಾವ್ಯಕ್ಕೆ ಕಾಲ ದೇಶಗಳ ವಸ್ತು ವೈವಿಧ್ಯದ ಭಿನ್ನತೆಯ ನಡುವೆಯೇ ಕಡೆಗೂ ಉಳಿಯುವ ಬಿಕ್ಕುಗಳೇ ಯಾವತ್ತಿಗೂ ಉಳಿಯುವ ಕಾವ್ಯದ “ಸಿಕ್ಕು” ಗಳಾಗಿಯೇ ಅರಳುತ್ತವೆಂಬ ಉಳಿಯುತ್ತವೆಂಬ ಮಾತಿಗೆ ಪುರಾವೆ ಮತ್ತೆ ಸಿಕ್ಕಿತೆನ್ನುವ ಭರವಸೆಯಲ್ಲಿ ಈ ಹೊತ್ತಿನ ಕಾವ್ಯ ಕೃಷಿಯ ಪ್ರಾತಿನಿಧಿಕ ಕವಿಗಳನ್ನು ಹೆಕ್ಕಿ ಕವಿತೆಯೆಂಬ ಹಕ್ಕಿಯ ದರುಶನವನ್ನು ಮಾಡಿಸಿದ ನಸುಕು.ಕಾಂ ಬಳಗದ ಹಣತೆ ಕವಿಗೋಷ್ಠಿಯ ಆಯೋಜಕರಿಗೆ ಕೃತಜ್ಞನಾಗಿದ್ದೇನೆ.
ಕವಿಗೋಷ್ಠಿಯಲ್ಲಿ ನನ್ನ ಪದ್ಯ;
ಕಾಲ ಕಲಿಸಿದ ಪಾಠ
ಹಣ್ಣೆಲೆಯೊಂದು ತೊಟ್ಟು ಕಳಚಿ
ಸಂಬಂಧ ತೊರೆದುಕೊಳ್ಳುವಾಗ ಗಗನದಾಚೆಯ
ಗಗನಕ್ಕೆ ಮುಖಮಾಡಿ
ನಿಂತ ಸ್ಥಾವರದ ಮರ,
ಆ ಮರದ ಮೇಲೇ ಸವಾರಿಯೇರಿ
ಕೊಂಬೆ ತುದಿಯಲ್ಲಿ ಕೂತ
ಜಂಗಮದ ಹಕ್ಕಿ
ತಮ್ಮ ತಮ್ಮೊಳಗೇ
ಕಳೆದು ಹೋಗಿದ್ದವು.
ಗುರುತ್ವಾಕರ್ಷಣೆಗೆ ಸಿಲುಕಿದ
ಎಲೆ ಗಾಳಿಯಲೆಗುಂಟ ಇಳಿದು,
ಏರಿ ಮತ್ತೆ ಮರು ಕ್ಷಣವೇ ಹೌಹಾರಿ
-ದ ಹೊಂಬಣ್ಣದ ಮುದಿಯೆಲೆ ನೇರ
ಮರದ ಬುಡಕ್ಕೇ ಬಿತ್ತು.
ಅದರ ನರ ಮಂಡಲದಲ್ಲಿ
ಬಿಸಿಲ ಝಳದಷ್ಟೇ ಬಿಸಿ
ತಾಸೆರಡು ತಾಸೊಳಗೇ ಬಾಡಿ
ಮರದ ಬುಡಕ್ಕೆ ಪೊಡಮಟ್ಟಿತು.
ದಪ್ಪ ಕಾಂಡ ಬರಸೆಳೆದು
ಮಲ್ಲಿಗೆಯಂತೆ ಮೈಗಾನಿಸಿ ಹಿಡಿದು
ಕ್ಷೇಮ ವಿಚಾರಿಸಿ ಕುಶಲ ವಿಚಾರಿಸಿತು,
‘ಮುಗಿಯಿತಾಯುಷ್ಯ, ಮುಂದಿಲ್ಲ ಭವಿಷ್ಯ’ ಬಿಕ್ಕಿದೆಲೆಗೆ ಕಾಂಡದ ಸಮಾಧಾನ
‘ಈಗಷ್ಟೇ ಮಾಗಿದ್ದೀ, ಮಣ್ಣೊಳಗೆ ಮಣ್ಣಾಗು ಸಾರ ಹೀರುವ ಬೇರಿಗೆ ಗೊಬ್ಬರವಾಗು ಮತ್ತೆ ಚಿಗುರು, ಎಲೆ, ಹೂ, ಬೀಜ
ಸಲ್ಲದು ಕಾಲ ಚಕ್ರದವಜ್ಞೆ, ವ್ಯರ್ಥ ಜಗಳ’
ಆವತ್ತಿನಿಂದ ಹೀಗೆ;
ಹಣ್ಣೆಲೆಯುದುರುತ್ತದೆ,
ಚಿಗುರು ಮೊಗ್ಗೊಡೆಯುತ್ತದೆ
ಹೂವು, ಕಾಯಿ, ಹಣ್ಣು, ಮತ್ತೆ ಹಣ್ಣೆಲೆ,,,,
ಈಗ ಸ್ಥಾವರ ಮರದ ಧ್ಯಾನ
ಹಾಗೇ ಜಂಗಮ ಹಕ್ಕಿಯ ಜ್ಞಾನ
ಎರಡೂ ಹಣ್ಣಾದವರಿಗೆ ಅರ್ಥವಾಗುತ್ತದೆ.
- ಡಿ ಎಸ್ ರಾಮಸ್ವಾಮಿ
**********
ಕಾರ್ಯಕ್ರಮದ ನಿರೂಪಣೆ
ರಶ್ಮಿ ಭಟ್ ಕಾರಣಗಿರಿ
***********
ಹೆಚ್ಚಿನ ಬರಹಗಳಿಗಾಗಿ
ಮಹಾದೇವ ಕಾನತ್ತಿಲ ಕವಿತೆಗಳು
ಶ್ರೀ ಪ್ರಹ್ಲಾದ್ ಜೋಷಿ