ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಹ್ಲಾದ್ ಜೋಷಿ
ಇತ್ತೀಚಿನ ಬರಹಗಳು: ಪ್ರಹ್ಲಾದ್ ಜೋಷಿ (ಎಲ್ಲವನ್ನು ಓದಿ)

ಗೋಲ್ಕೊಂಡ ದನಿ ಹಬ್ಬ – ಶ್ರೀ ಪ್ರಹ್ಲಾದ್ ಜೋಷಿಯವರ ಎರಡು ಕವಿತೆಗಳು ಮತ್ತು ವಾಚನ

ಬಳುವಳಿ

ಒಣಗುತಿದೆ ನನ್ನ ಪಂಚೆ ಒಣಗುತಿದೆ ನನ್ನ ಪಂಚೆ
ಎಲ್ಲಿ ತೊಯ್ಯಿಸಲಿ ಈ ಪಂಚೆ, ಎಲ್ಲಿ ಒದ್ದಿ ಮಾಡಲಿ ಈ ಪಂಚೆ
ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯ್ಯಿಸಲೆ
ನಿಮ್ಮ ಕಣ್ಣೀರೂ ಬತ್ತಿಹುದು ಸಮೀಪಿಸುತುದೆ ನನ್ನ ಜೀವನದ ಸಂಜೆ
ಒಣಗುತಿದೆ ನನ್ನ ಪಂಚೆ.

ಒಣಗಿದ ಪಂಚೆಯುಟ್ಟು ಒಣಗಿದ ಕವಿತೆಗಳ ಗೊಣಗುತಿರುವೆ ಗೀಚುತಿರುವೆ, ಗೀಚಿ ಬರಯುತಿರುವೆ
ಕವಿತೆಯಾಗಬಹುದೆಂಬಾಸೆಯಿಂದ
ಎಲ್ಲವೂ ಒಣಗಿವೆ , ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ ನಿಟ್ಟುಸಿರಿನ ಕಾವಿನಿಂದ

ಇದು ಎಂಥ ಬರ, ಒಣಗಿವೆ ಎಲ್ಲಾ ಮರ-ವೃಕ್ಷಗಳು

ಬಯಲೋ ಬಯಲು -ಹುಯಿಲೋ ಹುಯಿಲು
ಇದನು ವರ್ಣಿಸಿ ಕವಿ ಅನ್ನಿಸಿಕೊಳ್ಳಲು ನಾಚಿಕೆಯಾಗುತಿದೆ

ಯಾರಿಗಿಹುದು ನನ್ನ ಒಣಗಿದ ಪಂಚೆಯ ಚಿಂತೆ
ಎಲ್ಲರಿಗೂ ಅವರವರ ದಿನದ ಗಂಜಿಯ ಚಿಂತೆ
ದೇವರೆ ಮಳೆಯಾಗಲಿ ಬೆಳೆಯಾಗಲಿ , ಎಲ್ಲವೂ ಹಸಿರಾಗಲಿ
ಜಗದ ನೋಟ ಕಣ್ಣಿಗೊಂದು ಹಬ್ಬವಾಗಲಿ, ನೋಡಿ ವರ್ಣಿಸುದುದು ಕಬ್ಬವಾಗಲಿ
ಆದರೆ ಎಂದು ತೀರುವದೊ ಈ ಬರ, ಎಂದು ಚಿಗುರುವದೊ ನಾ ನೆಟ್ಟ ಮರ?

ಮಳೆಯಾದಾಗ ತೊಯ್ಯಿಸಲು ಈ ಪಂಚೆ ನಾನೇ ಇರದಿರಬಹುದು
ಬಾಳ ಸಂಜೆಯ ದಾಟಿ ದೂರ ಸಾಗಿರಬಹುದು
ಆದರೂ ಪ್ರಾರ್ಥಿಸುವೆ ಮಳೆಯಾಗಲೆಂದು

ನಾನಿದ್ದರೂ ನಾನಿರದಿದ್ದರೂ ನಾ ಬಿಟ್ಟು ಹೋಗುವೆ ನಾನುಟ್ಟ ಪಂಚೆ
ನಾನುಟ್ಟ ಪಂಚೆಯಂದು ಅಲಕ್ಷಿಸದಿರಿ
ಇದು ಕುಮಾರವ್ಯಾಸನುಟ್ಟ ಪಂಚೆ-
ಅವನು ನನಗೆ ಕೊಟ್ಟ ಪಂಚೆ; ‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯ ಪಂಚೆ’

ಉಟ್ಟು ನೋಡಿರಿ ಮಳೆಯಾದಗ-

ನಾ ಹೋಗುವೆ ಮತ್ತೆ ಬರುವೆ
ಮಳೆ ನೀರಿನ ಹನಿಗಳಾಗಿ ಬೀಳುವೆ- ಬಿದ್ದು ನಿಮ್ಮ ಬರವ ತೀರಿಸುವೆ

ನಾ ನೆಟ್ಟ ಮರದ ಹೂವಾಗುವೆ
ಆದರೆ ಆ ಹೂವನ್ನು ವರ್ಣಿಸಲು ಮರೆಯದಿರಿ ನಿಮ್ಮ ವರ್ಣನೆಯಲಿ ನಾನೊಂದು ಕವನವಾಗುವೆ ಕವಿಯಾಗದಿದ್ದರೂ ಚಿಂತೆಯಿಲ್ಲ ; ನೀವು ಬರೆದ ಕವನವಾದರೂ ಆಗುವೆ.

ಅಡಿಟಿಪ್ಪಣಿ: “ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವದು” ಎಂದು ರಾಷ್ಟ್ರಕವಿ ಕುವೆಂಪು, ಕುಮಾರವ್ಯಾಸನೆಂದೇ ಖ್ಯಾತಿ ಹೊಂದಿರುವ ಮಹಾಕವಿ ಗದುಗಿನ ನಾರಾಣಪ್ಪನವರ ಬಗ್ಗೆ ತಮ್ಮ ಕವನದ ಮೂಲಕ ಹಾಡಿ ಹೊಗಳಿದ್ದಾರೆ.

ಭಾಮಿನೀ ಷಟ್ಪದಿಯಲ್ಲಿ ‘ಮಹಾಭಾರತ’ ಕಾವ್ಯವನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಿಧಿಯನ್ನು ಇತ್ತ ಮಹಾಕವಿಯ ಕುರಿತು ಸ್ಥಳದ ಐತಿಹ್ಯ ಹಾಗೂ ಒಂದು ವದಂತಿಯ ಪ್ರಕಾರ – ಕವಿ ನಾರಾಣಪ್ಪ ಕಾವ್ಯ ರಚನೆಗೆ ತೊಡಗುವ ಮುನ್ನ ಗದಗಿನ ವೀರನಾರಾಯಣ ದೇವಾಲಯದ ಮುಂದಿರುವ ಹೊಂಡದಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನುಟ್ಟುಕೊಂಡು ವೀರನಾರಾಯಣ ದೇವಸ್ಥಾನದಲ್ಲಿ ಪಂಚೆ ಒಣಗುವ ತನಕ ಕಾವ್ಯರಚನೆ ಮಾಡುತ್ತಿದ್ದರು , ಮತ್ತೆ ಮರುದಿನ ಇದೇ ರೀತಿ ಮಿಂದು ಒದ್ದೆ ಪಂಚೆಯನ್ನುಟ್ಟು ಕಾವ್ಯರಚನೆ ಮುಂದುವರೆಸುತ್ತಿದ್ದರು ಎಂದು ಪ್ರತೀತಿ.
ಒದ್ದೆ ಪಂಚೆಯನ್ನು ಕಾವ್ಯ ಸ್ಫೂರ್ಥಿಯ ಪ್ರತೀಕವಾಗಿಟ್ಟುಕೊಂಡು ಆ ಹಿನ್ನೆಲೆಯಲ್ಲಿ ಕವಿತೆಯ ರಚನೆ ಮಾಡಲಾಗಿದೆ.

ಮನದಾಳದ ಪದ

ಪದವೊಂದು ಹಾಡ್ತೀನಿ ಎದೆಯ ಕದ ತೆರೆದು
ಕೇಳು
ನೋವನುಂಡ ಸ್ವರ ತೇಲಿ ಬಂದಾವ, ನೀಡಲಾರವು ಮುದವ
ತುಟಿತನ ಬಂದು ಹರಳುಗಟ್ಟ್ಯಾವ

ಹಗುರವಾಗಲಿ ಎದೆ ಅಂತ
ಪದವೊಂದು ಹಾಡ್ತೀನಿ.

ನಡೆಯುತ್ತ ನಡೆಯುತ್ತ ದಾರಿ ಸವೆಯಲಿ ಎಂದು
ಪದವೊಂದು ಹಾಡ್ತೀನಿ.

ಮುಳ್ಳು ಬೇಲಿಯ ಹಾದಿ ,ಕಲ್ಲುಗಳು ಬಹಳ
ಅಂಗಾಲಿನ ಗಾಯಕ್ಕೆ ಬಾಮು ಸವರಲು
ನಾನು ಪದವೊಂದು ಹಾಡ್ತೀನಿ.

ಕವಿದ ಕತ್ತಲೆಯೊಳಗ ಬೆಳಕು ಮೂಡಿತೆಂಬ
ಹುಚ್ಚು ಭರವಸೆಯಲ್ಲಿ ನಾನು …..

ದಾರಿಗುಂಟ ಕಿವಿಯೊಳು ನಿನ್ನ ಹೆಜ್ಜೆಯ ತಾಳ
ತಪ್ಪದೇ ಇರಲೆಂದು ಪದವೊಂದ …

ತಿರುಗಿ ನೋಡದಂತೆ ಆ ತಿರುವಿನೊಳಗ
ನೀ ಜಾರಿ ಹೋಗುವ ಮುನ್ನ , ಪದವೊಂದ …

ಗಾಳಿಯಲಿ ತೇಲಿದ ಪದಗಳ ಅಲಿಗಳ ಮ್ಯಾಲೆ
ಸವಾರಿ ಮಾಡಿ ನಮ್ಮ ದಿಕ್ಕುಗಳು ಬದಲಾದಾಗ
ಪದವೊಂದು …

ನಾನೊಂದು ಬದಿ ನೀನೊಂದು ಬದಿ
ನಡುವ ಹರದೈತಿ ಸಮಯದಾ ನದಿ
ಆದರೂ ಎದೆಗುದಿಯ ತಾಳದೆ
ನಾನು ಪದವೊಂದು …

ಅರಿವು ಮರೆವಿನ ನಡುವಣ ಗೆರೆಯು ತಾ ಬಲು ತೆಳವು
ಧಾಟಿ ಮರೆಯುವ ಮುನ್ನ ನಾನು ಪದವೊಂದು …

ಎಲ್ಲರೂ ಬಲ್ಲರು ಕಲ್ಲು ಕರಗದು ಎಂದು
ಹುಲ್ಲು ಚಿಗಿರೀತು ಎಂದು ಪದವೊಂದು..

ನಾನು ನಾನಾಗಿರದೆ ನಾನೇ ಪದವಾಗುವ ತನಕ
ಬಾನಿನ ಕಿರಣಗಳ ತಂತಿಗಳ ಮೀಟಿ
ಬುವಿಯ ಮದ್ದಳೆಯ ತಕಧಿಮಿಗೆ ಕುಣಿಯುತ್ತ
ಮಿದುವಾಗಿ ನಿಮ್ಮ ಕರಣ ಸೇರುವ ತನಕ
ನಾನು ಪದವೊಂದ ಹಾಡ್ತೀನಿ , ಪದವೊಂದ ಹಾಡ್ತೀನಿ