ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಾಲಾಡಿಯಲ್ಲಿ ಹಾರುವ ಓತಿ

ಸುಮಾ ವೀಣಾ

ಕೃತಿಯ ಹೆಸರು: ಹಾಲಾಡಿಯಲ್ಲಿ ಹಾರುವ ಓತಿ

ಕೃತಿಕಾರರ ಹೆಸರು: ಶಶಿಧರ ಹಾಲಾಡಿ

ಪ್ರಕಾಶಕರು: ಅಭಿನವ

ಬೆಲೆ: 150 ರೂಗಳು

ಹಾಲಾಡಿಯಲ್ಲಿ ಹಾರುವ ಓತಿ
ಹಾಲಾಡಿಯಲ್ಲಿ ಹಾರುವ ಓತಿ ಕೃತಿಕಾರರು ಶಶಿಧರ ಹಾಲಾಡಿ

ಹಾಲಾಡಿಯವರು ಹಾಲಾಡಿಯಲ್ಲಿ ..

 ನಿರಾಡಂಬರ ಸುಂದರಿ ಎನ್ನುವಂತೆ ಆಡಂಬರವಿಲ್ಲದ ಭಾಷೆಯಮೂಲಕ ಓದುಗರ ಮನದಲ್ಲಿ ಶಾಶ್ವತವಾಗಿ ಹಚ್ಚುವ ಹಾಗೂ ಚಿಂತನೆಯ, ಸಾಣೆ ಬಯಸುವ ನಮ್ಮ ನೆಲದ ಬನಿಯ ಸಾರ “ಹಾಲಾಡಿಯಲ್ಲಿ ಹಾರುವ ಓತಿ ” ಕೃತಿಯಲ್ಲಿದೆ. “ಹಾಲಾಡಿ ” ಎಂದರೆ ಕುಂದಾಪುರ. ಕುಂದಾಪುರ ಎಂದರೆ ಅಪ್ಯಾಯಮಾನವಾದ ಕನ್ನಡ ಅಲ್ಲವೆ! ಆ ಕುಂದಾಪುರ ಕನ್ನಡ ಇಲ್ಲಿದೆ. ಲೇಖಕರ ಊರಿನ ಸಂಗತಿಗಳು ಇಲ್ಲಿ ಒಂದೊಂದು ಅಧ್ಯಾಯವಾಗಿವೆ. ಲೇಖಕರ ಬಾಲ್ಯದಿಂದ ಈಗ ಅವರು ಇರುವ ಬೆಂಗಳೂರು ಪೇಟೆಯ ಬಹುಮಹಡಿ ಕಟ್ಟಡದವರೆಗೆನ ಬದುಕನ್ನು ಕೃತಿಯಲ್ಲಿ ಸಾಪೇಕ್ಷ ಕಾಣಿಸಿದ್ದಾರೆ.

 ಹಾರುವ ಓತಿ ಮರದಿಂದ ಮರಕ್ಕೆ ತೇಲಿಕೊಂಡು ಹಾರುವ ಜೀವಿ. ಪಶ್ಚಿಮ ಘಟ್ಟ ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವ ಓತಿಯನ್ನು ಬಾಲ್ಯದಿಂದ ಮೊದಲುಗೊಂಡು, ಡಬ್ಬಾ ಕ್ಯಾಮೆರಾ ಹಿಡುದು ಫೊಟೊ ತೆಗೆಯುವಲ್ಲಿರೆಗಿನ ಚಿತ್ರಣವನ್ನು ಕಟ್ಟಿ ಕೊಡುತ್ತಾರೆ. ಹಳೆಯ ಕಾಲದ ಕ್ಯಾಮೆರಾದ ಉಪಯೋಗಗಳು ಮಕ್ಕಳಂತೆ ಆಠವಾಡುವ ಅವುಗಳಿಗೆ ಗ್ಲೈಡಿಂಗ್ ಕಲಿಸಿಕೊಟ್ಟವರು ಯಾರು ಎಂಬ ಪ್ರಶ್ನೆ ಎತ್ತುತ್ತಾ ನಿಸರ್ಗದ ವಿಸ್ಮಯಗಳಿಗೆ ಬೆರಗಾಗುತ್ತಾರೆ. (ಪುಟ ಸಂಖ್ಯೆ 27 ರಲ್ಲಿ ಫೊಟೊ ತೆಗೆಯುವುದಿಲ್ಲ ಮಾರಾಯ, ತನ್ನ ಹಕ್ಕಿ ತನ್ನ ಮರಿಗಳನ್ನು ಕ್ಷೇಮವಾಗಿ ಬೆಳೆಸಲಿ) ಎಂದು ಹೇಳುವಲ್ಲಿ ಪಕ್ಷಿಗಳ ಮೇಲಿರುವ ಕಾಳಜಿ ಎದ್ದುಕಾಣುತ್ತದೆ. 

 ಈಗಂತೂ ಅಡುಗೆ ಎಣ್ಣೆಯದ್ದೆ ಹಂಗಾಮ. ಗಾಣದ ಎಣ್ಣೆಯೋ ರಿಫೈನ್ಡ್ ಆಯಿಲ್ ಇಲ್ಲ ಆಲಿವ್ ಆಯಿಲ್ಲೋ ಇತ್ಯಾದಿ. ಆದರೆ ಹಿಂದೆ ಧೂಪದ ಕಾಯಿಂದ ಎಣ್ಣೆ ತಯಾರಿಸುವ ವಿಚಾರ ತಿಳಿಸುತ್ತಾರೆ. ಪುಟ ಸಂಖ್ಯೆ 30 ರಲ್ಲಿ “ತಾರಿ ಮರ ಹೂತಾಗ” ಎಂಬ ಮಾತು ಬಂದಾಗ ಬೇಂದ್ರೆಯವರ ಕಾವ್ಯ ಒಮ್ಮೆ ಸುಳಿಯಿತು.

 ಮಿಣುಕು ಹುಳುಗಳನ್ನು ಕಂಡು ಲೇಖಕರ ಅಮ್ಮಮ್ಮ “ಆ ಹುಳುವನ್ನು ಬಟ್ಟೆಯಲ್ಲಿ ಕಟ್ಟಿ ಇಡಬೇಕು ಬೆಳಗ್ಗೆ ವರೆಗೆ ಇದ್ದರೆ ಅದು ಕ್ಷುದ್ರ ಕೀಟ, ಇಲ್ಲವಾದರೆ ಅದು ಹಿರಿಯರ ಆತ್ಮವಾಗಿರುತ್ತದೆ” ಎಂಬ ನಂಬಿಕೆ ಹಿರಿಯರು ಪ್ರತಿಯೊಂದು ಪರಿಪ್ರೇಕ್ಷದಲ್ಲೂ ತಮ್ಮ ಪರಂಪರೆಯನ್ನು ಹಿರಿಯರ ಅಸ್ತಿತ್ವವನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರು ಎನ್ನುವ ವಿಷಯ ತಿಳಿದು ಬರುತ್ತದೆ. ಮಿಣುಕು ಹುಳುಗಳ ಶಕ್ತಿಯ ಮೂಲವನ್ನು ಭೇದಿಸಬೇಕು ಎಂದಿರುವುದು ಹಾಲಾಡಿಯವರ ಸಂಶೋಧನಾ ಪ್ರವೃತ್ತಿಯ ಮನಸ್ಸನ್ನು ಸೂಚಿಸುತ್ತದೆ. ಮಕ್ಕಳ ಪಾಲಿನ ವಿಲನ್ ಎಂದರೆ “ಗುಮ್ಮ “. ಕೃತಿಯಲ್ಲಿ ಗೂಬೆಯ ಬಗ್ಗೆ ಮೀನು ಗೂಬೆ ಚಿಟ್ಟಗೂಬೆಗಳ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ. ಕತ್ತಲ ಲೋಕದ ಗೂಬೆಗಳು ಇಲಿಗಳನ್ನು ಹಿಡಿಯುತ್ತವೆ ಹಾಗೂ ಇವು ರೈತ ಮಿತ್ರನೆಂಬ ಹೊಸ ವಿಷಯವನ್ನು ತಿಳಿಸುತ್ತಾರೆ.

 ಹಾಂತೆ> ಹಾತೆ ಸಬಿಂದುಕ ಹಾಗು ಅಬಿಂದುಕಕ್ಕೆ ಒಳ್ಳೆಯ ಉದಾಹರಣೆ. ಇಲ್ಲಿ ಹಾರ್ಸ್ ಹೇರ್ ವರ್ಮ್ ಬಗ್ಗೆ ಮಾತನಾಡುತ್ತಾ ಅದರ ವಿಚಿತ್ರ ಜೀವನ ಚಕ್ರದ ಬಗ್ಗೆ ತಿಳಿಸುತ್ತಾರೆ. “ಮನವ ಕಾಡುವ ಕಾಡು ಕುಸುಮಗಳು ” ಎನ್ನುವ ಶೀರ್ಷಿಕೆಯ ಬರಹ ಮರೆತೇ ಹೋಗಿರುವ ಹೂಗಳನ್ನು ನೆನಪಿಗೆ ತರಿಸಿತು. ಒಣಗಿದ ನಂತರವೂ ಪರಿಮಳ ಬುರುವ ಸುರಗಿ ಹೂವಿನ ಬಗ್ಗೆ ಪ್ರಸ್ತಾಪಮಾಡುವಲ್ಲಿ ಅಳಿದ ಮೇಲೆಯೂ ಬದುಕುವುದು ಎಂಬ ಮಾತನ್ನು ಈ ಹೂವಿನಿಂದ ತಿಳಿಯಬಹುದು. ಒಣ ಹೂಗಳ ಅಲಂಕಾರ ಇಂದಿನದ್ದಲ್ಲ ಹಳೆಯದೆ ಎಂಬುವುದಕ್ಕೆ ಪುರಾವೆ ದೊರೆಯುತ್ತದೆ. ಕೇದಗೆ ಹೂ, ಅಕ್ಕತಂಗಿಯರ ಹೂ, ಬಗಾಳು ಹೂಗಳ ಪರಿಚಯವಿದೆ. ಇನ್ನು “ಅಬ್ಬೆ ” ಕಾದಂಬರಿಯಲ್ಲಿ ಬರುವ “ಅಬ್ಬ ಕಚ್ಚಿದರೆ ಅಬ್ಬಬ್ಬ ಎನ್ನಲೂ ಸಮಯವಿಲ್ಲ’ ಎಂಬ ಬರಹವು ಅಬ್ಬೆ ಜೇಡ , ಮಿಡಿನಾಗರ, “ಕೂ ಎಂದು ” ಕರೆಸಿ ಬಂದವರನ್ನು ನುಂಗುವ ಹೆಬ್ಬಾವಿನ ಕಥೆ ಇವುಗಳಿಗೆ ಸ್ಪಷ್ಟ ಪುರಾವೆ ಇಲ್ಲದಿದ್ದರೂ ಓದುಗರಿಗೆ ಫ್ಯಾಂಟಸಿ ಅನುಭವವನ್ನು ಕೊಡುತ್ತದೆ.

 ಒಂದರ್ಥದಲ್ಲಿ ನಾವು ಬಡಾಯಿ ಪರಿಸರ ಪ್ರೇಮಿಗಳು ಎಲ್ಲೋ ಅತಿಥಿಗಳು ಎಂದು ಹೋಗಿ ಗಿಡ ನೆಟ್ಟು ನೀರು ಹನಿಸಿ ಫೋಟೊ ತೆಗೆಸಿಕೊಂಡು ಬಂದಿರುತ್ತೇವೆ. ಆ ಗಿಡಗಳು ಏನಾದುವು ಎನ್ನುವ ಕಾಳಜಿ ನಮ್ಮಲ್ಲಿಲ್ಲ ನಮ್ಮ ಪರಿಪರ ಪ್ರೇಮ ಪತ್ರಿಕಾ ಹೇಳಿಕೆಗಳಲ್ಲಿ ಫೋಟೊಗಳಲ್ಲಿ ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್ ನಲ್ಲಿ ಲೈಕ್ಗಳ ನಿರೀಕ್ಷೆಯಲ್ಲಿ ಕಾಲಕಳೆಯುತ್ತವೆ. ಇದು ವಿಷಾದ. ಮುಂದೆ ಲೇಖನದ ಭಾಗಕ್ಕೆ ಹೋದಂತೆ ಜಲಚರಗಳಾದ ಮೊಸಳೆ, ಮೀನುಗಳು ಆಮೆಗಳ ಬಗ್ಗೆ ಕಂಬಳದ ಗದ್ದೆಗಳಬಗ್ಗೆ ಪ್ರಸ್ತಾಪಿಸುತ್ತಾರೆ. ಕುವೆಂಪುರವರ “ಮಲೆನಾಡಿನ ಚಿತ್ರಗಳು ” ಪ್ರಬಂಧಸಂಕಲನದ ಚಿಬ್ಬಲುಗಡ್ಡೆಯ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ. 

 ಬಯಲು ಸೀಮೆಯವರಿಗೆ ಮಳೆ ಒಂದು ದಿನದ ವಿದ್ಯಮಾನ ಒಂದು ಲೇಖನ ಅಷ್ಟೇ. ಆದರೆ ಮಳೆನಾಡಿನವರಾದ ನಮಗೆ ಅದು ವಿಶೇಷ ಅನುಭೂತಿ; ಎಷ್ಟು ಹಂಚಿಕೊಂಡರೂ ಮುಗಿಯದ ಭಾವದೆಳೆಯ ಮಧುರಗೀತೆ. ದಶಕಗಳು ಉರುಳಿದಂತೆ ಮಳೆಯ ತೀವ್ರತೆ ಕಡಿಮೆಯಾಗುತ್ತಿದೆ. ಆದರ ಹಿಂದೆ ನಮ್ಮದೇ ಕೈವಾಡ ಎಂದು ಪ್ರತ್ಯೇಕ ಹೇಳಬೇಕೇ? ಮಳೆಗಾಲದ ಗಾನಗಳೆ ಬೇರೆ. ಹೌದು! ಮಳೆಗಾಲ ಎಂದರೆ ಮಳೆಗಾನವೇ. ಚಳಿಗೆ ಗಡ ಗಡ ನಡುಗುತ್ತ ಬೆಂಕಿ ಮುಂದೆ ಕುಳಿತು ಏಳಲಾಗದೆ ಹಿಂದೆಕುಳಿತಿದ್ದವರನ್ನು ಎಬ್ಬಿಸುವ ಪರಿ ಕುವೆಂಪುರವರ “ಕಥೆಗಾರ ಮಂಜಣ್ಣನಿಂದ ” ತಿಳಿಯುತ್ತದೆ. ಅಂಥ ಅನೇಕ ಕಥಾನಕದ ಭಂಡಾರಪ್ರತಿಯೊಬ್ಬರಲ್ಲೂ ಇರುತ್ತದೆ ಅದನ್ನು ಹಾಲಾಡಿಯವರು ಕೃಷಿಚಟುವಟಿಕೆಯ ಮಜಲುಗಳನ್ನು ಒಳಗೊಂಡತೆ ಸರಳ ನಿರೂಪಣೆ ಮೂಲಕ ದಾಖಲಿಸಿದ್ದಾರೆ.

 ಬಯಲು ಸೀಮೆಯವರಿಗೆ “ಹಾವು ” ಅಂದರೆ ಒಂದು ಸರೀಸೃಪ. “ಸರ್ಪ “ವೆಂದರೆ ಒಂದು ಗೌರವ ಭಾವನೆ ಅಷ್ಟೇ. ಆದರೆ ಕರಾವಳಿಯವರಿಗೆ ಅದುವೆ ಪ್ರತ್ಯಕ್ಷ ದೈವ. ಅದನ್ನು ಲೇಖಕರು “ನಾಗರಹಾವು ದೇವರ ಹಾವು ಎಂದು ಕರೆಯುವ ನಮ್ಮೂರು ” ಎಂದು ಬರೆಯುತ್ತಾರೆ . ಅದಕ್ಕೇನಾದರೂ ಆಗಿದೆ ಅದನ್ನು ನೋಡಿಬಿಟ್ಟರಂತೂ ಅದನ್ನು ಸಂಸ್ಕಾರ ಮಾಡುವವರೆಗೆ ಮುಂದೆ ಹೋಗುವುದಿಲ್ಲ; ಹಾಗೆ ಪ್ರತಿಯೊಬ್ಬರ ಮನೆಗೂ ಪ್ರತ್ಯೇಕ ನಾಗನ ಕಲ್ಲುಗಳು ಇರುತ್ತವೆ. ನಾಗಾರಾಧನೆ ಆಚರಣೆಗಳು ಅಲ್ಲಿನ ಜನರ ಪರ್ವಕಾಲ ಎಂಬುದನ್ನು ಲೇಖಕರು ಉಲ್ಲೇಖಿಸುತ್ತಾರೆ. ಅವರ ಕುಟುಂಬದವರಿಗೊಮ್ಮೆ ಹಾವು ಕಚ್ಚಿ ಅನಾಹುತ ಆದದ್ದರ ಬಗ್ಗೆ ಕ್ವಚಿತ್ತಾಗೆ ಪ್ರಸ್ತಾಪಿಸುತ್ತಾರೆ. ಆದುವೆ ಮಂಡಲಹಾವುಗಳ ವಿಚಾರಕ್ಕೆ ಬಂದಂತೆ ರಸ್ತೆ ಬದಿಯಲ್ಲಿ ಹಾದು ಹೋಗುವಾಗ ಕುರುಕಲು ತಿಂಡಿ ವಾಸನೆ ಬಂದರೆ ಅಲ್ಲಿ ಮಂಡಲ ಹಾವುಗಳು ಇರುತ್ತವೆಯೆಂದು ತಿಳಿಯಬೇಕು ಎನ್ನುವ ಟಿಪ್ಸ್ ಕೊಡುವುದರ ಜೊತೆಗೆ ಯಾವುದೇ ಹಾವು ಕಚ್ಚಿದ ಕೂಡಲೆ ಆ್ಯಂಟಿ ವೆನಮ್ ಇಂಜಕ್ಷನ್ ಹಾಗುತುರ್ತು ಚಿಕಿತ್ಸೆ ಪಡೆಯುವುದರ ಬಗ್ಗೆ ಹೇಳಿದ್ದಾರೆ. 

  “ಮನೆ ಸುತ್ತಲೂ ಮರಗಳ ಪರಿಷೆ ” ಇಲ್ಲಿ ಹಾಲಾಡಿಯವರು ಹಳ್ಳಿಯ ಸುತ್ತ ಮುತ್ತ ಬೆಳೆದಿರುವ ಅನೇಕ ಮರಗಳ ಬಗ್ಗೆ ಹೇಳುತ್ತಾ ಅಮಟೆಕಾಯಿಯ ಉಪ್ಪಿನಕಾಯಿ, ಗೊಜ್ಜು, ಹುಳಿ, ಹುರುಳಿ ಸಾರಿಗೆ ಅದನ್ನು ಸೇರಿಸುವ ಬಗೆ, ಮಾವಿನಕಾಯಿಯ ಅನೇಕ ಬಗೆಗಳು ಅವುಗಳ ಉಪ್ಪಿನಕಾಯಿ ರುಚಿ ಇತ್ಯಾದಿಗಳನ್ನು ರಸಮಯವಾಗಿ ವಿವರಿಸಿದ್ದಾರೆ. ಈ ಕೃತಿ ಓದುವ ಓದುಗರು ಉಪ್ಪಿನಕಾಯಿ ಪ್ರಿಯರು, ಎದ್ದು ಉಪ್ಪಿನಕಾಯಿ ನೆಕ್ಕುತ್ತಲೇ ಈ ಕೃತಿಯನ್ನು ಓದಿ ಮುಗಿಸುವರು ಅಷ್ಟು ರಸವತ್ತಾದ ಭಾಗವಿದು. ಅಧ್ಯಾಯದಿಂದ ಅಧ್ಯಾಯಕ್ಕೆ ಹಾಲಾಡಿಯವರು ಗಂಭೀರ ವಿಷಯಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ ಎನ್ನುವುದನ್ನು “ಹರಿಯುವತೊರೆಯ ನೀರಿನಲ್ಲಿ ಶಕ್ತಿ ಜಾಸ್ತಿ! ಹೌದೆ! ” ಎನ್ನುವ ಶೀರ್ಷಿಕೆಯಡಿ ನೋಡಬಹುದು. ಆರ್.ಓ. ನೀರು ಎಷ್ಟು ಹಾನಿಕಾರಕ, ನಾವು ಫಿಲ್ಟರ್ಮಾಡುವುದು ಕಸವನ್ನಲ್ಲ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಎನ್ನುವುದನ್ನು ಈ ಅಧ್ಯಾಯದಲ್ಲಿ ನೋಡಬಹುದು. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವಾಗ ಇಂದಿನ ಹಾಗೆ ವಾಟರ್ ಬಾಟಲ್ ಇಲ್ಲದೆ ಇರುವಾಗ ಹತ್ತಿರದ ತೊರೆಯ ನೀರನ್ನೆ ಬೊಗಸೆಯಲ್ಲಿ ಅದೂ ಸಂಜೆ ವೇಳೆ ಹೀರುವ ಪರಿಯನ್ನು ಸರಳವಾಗಿ ನಿರೂಪಣೆ ಮಾಡಿದ್ದಾರೆ. ಇಲ್ಲಿ ಅನೇಕ ಬಗೆಯ ಮರಗಳ ಹೆಸರನ್ನು ಉಲ್ಲೇಖಿಸಿರುವುದು ಅವರ ಪ್ರಕೃತಿ ಪ್ರೇಮ ಮತ್ತು ಬೆಳೆದು ಬಂದ ಪರಿಸರದ ಅರಿವನ್ನು ಮೂಡಿಸುತ್ತದೆ. ” ಹರಿವ ನೀರಿಗೆ, ಸಾವಿರ ಕೊಡ ನೀರಿಗೆ ಶಾಸ್ತ್ರದ ಕಟ್ಟಿಲ್ಲ ” ಎನ್ನುವ ನುಡಿಗಟ್ಟು ಇಲ್ಲಿದೆ ನುಡಿಗಟ್ಟು ಎಂದರೆ ಎರೆಡರಿಂದ ನಾಲ್ಕು ಪದಗಳೆ ಹೆಚ್ಚು ಇಲ್ಲಿ ದೀರ್ಘವಾದ ನುಡಿಗಟ್ಟೊಂದರ ಪರಿಚಯವಾಗುತ್ತದೆ. ಫಲಗಾಳಿ ” ಇಲ್ಲಿ ಬಳಸಿರುವ ಅನನ್ಯಪದ ತಂಗಾಳಿಗೆ ಪರ್ಯಾಯವಾಗಿ ಬಳಸಿದ್ದಾರೆ. ಒಡಗತೆ ಎದುರುಗತೆಯ ಪ್ರಸ್ತಾಪವೂ ಇಲ್ಲಿ ಬರುತ್ತದೆ. 

  “ಮನೆಯ ಸುತ್ತಲಿನ ಗೆಳೆಯರು ” ಇಲ್ಲಿಯೂ ಮರಗಳ ಬಗ್ಗೆ ಅದರಲ್ಲೂ ಹಣ್ಣಿನ ಮರಗಳ ಬಗೆಗೆ ಮಾಹಿತಿ ಇದೆ. ಆಕೇಶಿಯಾ ಮರಗಳ ಹಾವಳಿ ಬಗ್ಗೆ ಇಲ್ಲಿ ಪ್ರಸ್ತಾಪವಾಗುತ್ತದೆ. ಇದು ಪೂರ್ಣ ಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ ” ದೀರ್ಘ ಗದ್ಯದಲ್ಲೂ ಪ್ರಸ್ತಾಪವಾಗಿದೆ. ದಾಸವಾಳ ಎಂದರೆ ಗಿಡವಲ್ಲ ನಮ್ಮ ಮಳೆನಾಡುಗಳಲ್ಲಿ ಅದು ಮರವೆ. ಅಂಥ ಮರಗಳ ಪ್ರಸ್ತಾಪವೂ ಇಲ್ಲಿದೆ. ಅಬ್ಲಿಕಟ್ಟೆ, ಕಬ್ಬನಾಲೆ, ಪುನರ್ಪುಳಿ (ಹುಳಿಗೆ ಪರ್ಯಾಯವಾದುದು ); ಧೂಪದ ಮರದ ಪ್ರಸ್ತಾಪವೂ ಇಲ್ಲದೆ ಮಳೆಗಾಲದ ಸಂಜೀವಿನ ಧೂಪದ ಮರದ ಬಗ್ಗೆಯೂ ಮಂಪ್ಸ್ ಆದಾಗ ದತ್ತೂರದ ಬೀಜಗಳನ್ನು ಅರೆದು ಹಚ್ಚುತ್ತಿದ್ದುದು ಇಲ್ಲಿ ಪ್ರಸ್ತಾಪವಾಗಿದೆ. ಆದರೂ ಎಲ್ಲದಕ್ಕೂ ಮನೆಮದ್ದು ಪರಿಹಾರವಲ್ಲ ಎಂಬುದು ಹಾಲಾಡಿಯವರು ಅವರದೆ ಕುರು ಚರಿತ್ರೆಯ ಮೂಲಕ ಮನನಮಾಡಿಸಿದ್ದಾರೆ. 

 ಇನ್ನು “ಸಹ್ಯಾದ್ರಿ ಕಾಡಿನಲ್ಲಿ ಟೈಮ್ ಬಾಂಬ್” ಅನ್ನುವ ಶೀರ್ಷಿಕೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿರುವ ಅಪಾಯಗಳ ಬಗ್ಗೆಯೂ ಇಲ್ಲಿ ಹೇಳಿದ್ದಾರೆ. “ಗೊಂಡಾರಣ್ಯಕ್ಕೆ ಮರುಹುಟ್ಟು” ನೀಡಿದ ವಿದೇಶೀ ಉದಾಹರಣೆ ನೀಡುವುದರ ಮೂಲಕ ಸ್ವದೇಶದಲ್ಲೂ ಕೂಡ ಇಂತಹ ಕಾರ್ಯಗಳು ಬೇಕು ಎನ್ನುತ್ತಾರೆ. ಪುನುಗು ಬೆಕ್ಕು ಒಂದು ನಿಶಾಚರ ಪ್ರಾಣಿ. ಕರಾವಳಿ ಭಾಗದಲ್ಲಿ ಅದು ಇದ್ದ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ. ಸೆಂಟ್ ಹಾಕುವುದು ಬಹಳ ಹಿಂದೆಯೇ ಇತ್ತು; ಕೃತಕವಾದವು ಬಂದ ನಂತರ ಪುನುಗು ಬೆಕ್ಕುಗಳ ಬಗ್ಗೆ ಆಸಕ್ತಿ ಕಳೆದು ಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಹಾಗೆ ಕಾಸ್ಟ್ಲಿ ಕಾಫಿ ಸಿವಿಟ್ ಕಾಫಿ ಬಗ್ಗೆ ಪ್ರಸ್ತಾಪವಿದೆ. ಕಂಬಳಿ ಹುಳುಗಳ ಬಗ್ಗೆ ಮಾತನಾಡುತ್ತಾ ಅವು ಚಿಟ್ಟೆಯಾಗಿ ಪರಿವರ್ತನೆಯಾಗುವಲ್ಲಿಯವರೆಗೆ ನಮಗೆ ಕಾಯುವ ತಾಳ್ಮೆಯಿಲ್ಲದೆ ಅಪಾರ್ಟ್ಮೆಂಟಿನ ಜನರು ರಾಸಾಯನಿಕ ಸಿಂಪಡಿಸಿದ್ದರ ಬಗ್ಗೆ ಅಸಮಾಧಾಣ ವ್ಯಕ್ತಪಡಿಸಿ ಮನುಷ್ಯ ಪ್ರಕೃತಿಯ ಎಲ್ಲವನ್ನೂ ಪಡೆದುಕೊಂಡು ಪ್ರಕೃತಿಯ ಪರಿಪ್ರೇಕ್ಷಗಳಿಗೆ ಹೇಗೆ ವಿಮುಖರಾಗುತ್ತಾರೆ ಎನ್ನುವುದನ್ನು ಖೇದದಿಂದ ಹೇಳಿದ್ದಾರೆ. 

 ಕೊಡಚಾದ್ರಿಗೆ ರೋಪ್ ವೇ ಮಾಡುವ ನಿರ್ಧಾರಗಳ ಬಗ್ಗೆ ಇರುವವಾದ ಪ್ರತಿವಾದಗಳ ಬಗ್ಗೆ ಪ್ರಸ್ತಾಪಿಸುವಾಗ ನಾಗೇಶ ಹೆಗಡೆ ಅವರಬರಹಗಳೆ ಕಣ್ಮುಂದೆ ಬಂದವು. ಅಬ್ಲಿಕಟ್ಟೆ, ಕಬ್ಬಿನಾಲೆ, ಕಟ್ಟಿನಗುಂಡಿ, ಹರನಗುಡ್ಡೆ, ಗುಳಿನಬೈಲು, ಮೇಲ್ ಕೂಡಿಗೆ ಕೆಳ ಕೂಡಿಗೆ ಮೊದಲಾದಹೆಸರುಗಳ ಹಿಂದೆ ಇರುವ ಸ್ಥಳಿತಿಹಾಸವೂ ಇಲ್ಲಿದೆ . ಪಶ್ಚಿಮ ಘಟ್ಟಗಳವಿಶೇಷತೆ ಹಾಗು ಸಮಸ್ಯೆಗಳ ಕುರಿತು ಹೆಚ್ಚು ಬರೆಯುವವರು ನಾಗೇಶ್ ಹೆಗಡೆಯವರು, ಪ್ರಾಣಿ ಸಂಕುಲ ಸಸ್ಯಸಂಕುಲದ ಬಗ್ಗೆ ಛಾಯಾಚಿತ್ರತಗೆಯುವ ಹಾಗೂ ವಿಶಿಷ್ಟವಾಗಿ ಬರೆಯುವವರು ಕೃಪಾಕರ್ ಹಾಗೂ ಸೇನಾನಿ – ಈ ಮೂವರ ಕಾಳಜಿಯುಕ್ತ ಬರಹಗಳಂತೆ ಶಶಿಧರ ಹಾಲಾಡಿಯವರ ಬರಹಗಳು ಇವೆ. 

 ಪರಿಸರ ಕಾಳಜಿ ಮತ್ತು ನ್ಯಾಸ್ಟಲಾಜಿಕ್ ಚಿಂತನೆಗಳು ಹಾಲಾಡಿಯವರ ಬರಹಗಳ ಮುಖ್ಯ ದ್ರವ್ಯ. ಹಾಗೆ ವೈಜ್ಞಾನಿಕವಾಗಿ ಇಲ್ಲಿನ ವಸ್ತುಗಳನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ. ಕೃತಿಯನ್ನು ಓದುತ್ತಾ ಹೋದಂತೆ ಪೂರ್ಣಚಂದ್ರ ತೇಜಸ್ವಿಯವರು, ಕಲೀಮ್ ಉಲ್ಲಾರ ನೆನಪುಗಳಾಗುತ್ತವೆ. “ಹಾಲಾಡಿಯಲ್ಲಿ ಹಾರುವ ಓತಿ ” ಕೃತಿಯ ಶೀರ್ಷಿಕೆಯಾಗಿರುವಂತೆ ನಿರೂಪಿತವಾಗಿರುವ ಒಂದು ಅಧ್ಯಾಯವೂ ಹೌದು! ಒಟ್ಟಾರೆಹಾಲಾಡಿಯವರು ತಾವು ಹುಟ್ಟಿ ಬೆಳೆದ ಪರಿಸರದಲ್ಲಿ ಕಂಡ ಪರಿಪ್ರೇಕ್ಷಗಳನ್ನು ಸಾಂಸ್ಕೃತಿಕ ,ಸಾಹಿತ್ಯಿಕ, ವೈಜ್ಞಾನಿಕ ಹಿನ್ನೆಲೆಯಿಂದ ಸರಳವಾಗಿ ನಿರೂಪಿಸಿ ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. 

*ಸುಮಾವೀಣಾ