ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

created by Polish

ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ

ಟಿ. ವಿ. ನಟರಾಜ್ ಪಂಡಿತ್

ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಎಂಬ ಸಣ್ಣ ಗ್ರಾಮದಲ್ಲಿ ಉದಯಿಸಿದ ಹೊಯ್ಸಳ ಸಾಮ್ರಾಜ್ಯ ವಿಸ್ತಾರಗೊಂಡಂತೆ ಬೇಲೂರು ಮತ್ತು ಹಳೇಬೀಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಉತ್ತರದಲ್ಲಿ ತುಂಗಭದ್ರಾ ತೀರದವರೆಗೂ ಆಳ್ವಿಕೆ ನಡೆಸಿತು. ಕರ್ನಾಟಕ ಮಾತ್ರವಲ್ಲದೆತಮಿಳುನಾಡಿನ ಶ್ರೀರಂಗಂ, ಕಂಚಿ ಮತ್ತು ಮಧುರೆವರೆಗೂ ರಾಜ್ಯವನ್ನು ವಿಸ್ತರಿಸಿತು. ಆಂಧ್ರ ಮತ್ತು ಕೇರಳದ ಕೆಲ ಭಾಗಗಳೂ ಹೊಯ್ಸಳ ಸಾಮ್ರಾಜ್ಯಕ್ಕೆಸೇರಿದ್ದವು. ರಾಮೇಶ್ವರಂ, ತಿರುಪತಿ, ಪಂಡರಾಪುರ ಮುಂತಾದ ದೂರದ ಊರುಗಳಲ್ಲೂ ಹೊಯ್ಸಳರ ಕೊಡುಗೆಗಳನ್ನು ಕಾಣಬಹುದು.

ಸುಮಾರು 350 ವರ್ಷಗಳ ಹೊಯ್ಸಳ ಅವಧಿಯಲ್ಲಿ ನಿರ್ಮಾಣವಾದ 1500 ಕ್ಕೂ ಅಧಿಕ ದೇವಾಲಯಗಳಲ್ಲಿ ಇಂದು ನೂರಾರು ದೇವಾಲಯಗಳುನಾಮಾವಶೇಷ ಆಗಿವೆ.ಇನ್ನೂ ನೂರಾರು ದೇವಾಲಯಗಳು ಭಗ್ನಾವಸ್ಥೆಯಲ್ಲಿವೆ.

ಇಚ್ಛಾಶಕ್ತಿ ಮತ್ತು ಛಲವೊಂದಿದ್ದರೆ ಎಂತಹ ಕಾರ್ಯವನ್ನೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಭಗ್ನಗೊಂಡು ಪಾಳುಬಿದ್ದಿದ್ದ ಹಾಸನಜಿಲ್ಲೆ ದುದ್ದ ಹೋಬಳಿಯ ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ದೇವಾಲಯವನ್ನು ಹೆಸರಿಸಬಹುದು. ಇನ್ನು ಕೆಲವೇ ವರ್ಷಗಳಲ್ಲಿ ನಾಮಾವಶೇಷಆಗಲಿದ್ದ ಈ ದೇವಾಲಯವು ಈಗ ಜೀರ್ಣೋದ್ಧಾರಗೊಂಡು ನಳನಳಿಸುತ್ತಿದೆ. ಒಂದು ಕಾಲಕ್ಕೆ ಶಿಖರವು ಬಿದ್ದು ಹೋಗಿ, ಗಿಡಗಂಟಿ ಬೆಳೆದು, ಸುತ್ತಲಿನಪರಿಸರವು ದನದ ಕೊಟ್ಟಿಗೆಯಂತಾಗಿದ್ದ ಈ ದೇವಾಲಯ ಈಗ ಸುಸ್ಥಿತಿಗೆ ತಲುಪಿದೆ.

ದೇವಾಲಯದ ಮುಂದೆ ಇರುವ ಶಿಲಾಶಾಸನದ ಪ್ರಕಾರ ಇದರ ನಿರ್ಮಾಣ ಕಾಲ ಕ್ರಿ.ಶ. 1149. ಹೊಯ್ಸಳರ ಪ್ರಸಿದ್ಧ ಅರಸ ವಿಷ್ಣುವರ್ಧನನ ಮಗ 1ನೇನರಸಿಂಹನ ಪಟ್ಟಾಭಿಷೇಕದ ನೆನಪಿಗಾಗಿ ಆತನ ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ ಈ ದೇವಾಲಯವನ್ನು ನಿರ್ಮಿಸಿ ಅನೇಕ ದಾನ  ದತ್ತಿಗಳನ್ನು ನೀಡುತ್ತಾನೆ. ವಿಷ್ಣುವರ್ಧನನ ನಿಧನಾನಂತರ ಹೊಯ್ಸಳ ರಾಜ್ಯದ ಅನೇಕ ಭಾಗಗಳು ಶತ್ರುಗಳ ವಶವಾಗಿರುತ್ತದೆ. ಆ ಭಾಗಗಳನ್ನೆಲ್ಲ ಲಕ್ಷ್ಮಯ್ಯ ಹೆಗ್ಗಡೆ ಮತ್ತೆ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿಸುತ್ತಾನೆ.  ಈ ಸಮಯದಲ್ಲಿ 1ನೇ ನರಸಿಂಹನು ಇನ್ನೂ ಬಾಲಕನಾಗಿದ್ದಾಗ ಹೊಯ್ಸಳ ಮಂತ್ರಿಗಳು ರಾಜ್ಯವನ್ನುಕಾಪಾಡುವ ಹೊಣೆ ಹೊರುತ್ತಾರೆ. ಈ ಶಾಸನದಲ್ಲಿ ದೇವರ ನಿತ್ಯ ಪೂಜಾಧಿಗಳು ಮತ್ತು ಉತ್ಸವಗಳಿಗಾಗಿ ದಾನಗಳನ್ನು ನೀಡಿದ ವಿವರಗಳಿವೆ. ಈ ದಾನಗಳನ್ನು  ಯಾರಾದರೂ ಅಪಹರಿಸಿದರೆ  ಅವರು ಘೋರ ಶಾಪಕ್ಕೆ  ಗುರಿಯಾಗುತ್ತಾರೆ  ಎಂಬ ಶಾಪಾಶಯದ ಶ್ಲೋಕವಿದೆ.

ಏಕಕೂಟ ದೇವಾಲಯವಾದ ಇದು ಪೂರ್ವಾಭಿಮುಖವಾಗಿದೆ. ದ್ರಾವಿಡ ಶೈಲಿಯ ಶಿಖರವಿದ್ದು ಮುಖಮಂಟಪ , ನವರಂಗ, ಸುಂದರವಾದಕಂಬಗಳು, ಅಂತರಾಳ, ಶುಕನಾಸಿ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 6 ಅಡಿ ಎತ್ತರದ ಸುಂದರವಾದ ಚನ್ನಕೇಶವನ ವಿಗ್ರಹವಿದೆ. ಶಂಕ, ಚಕ್ರ, ಗದಾ ಮತ್ತು ಪದ್ಮವನ್ನು ಹಿಡಿದು ನಿಂತಿರುವ ಕೇಶವನ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. 

ದ್ವಾರದ ಮೇಲೆ ಲಲಾಟ ಬಿಂಬದಲ್ಲಿ  ದ್ವಾರಲಕ್ಷ್ಮಿಯ ಸುಂದರವಾದ ಶಿಲ್ಪವಿದೆ. ಈ ಶಿಲ್ಪದ ಎರಡೂ ಕಡೆ ಆನೆಗಳಿದ್ದು ದೇವಿಯ ಪಾದಕ್ಕೆ ನಮಿಸುತ್ತಿವೆ. ಚಾಮರಧಾರಿಣಿಯರು ದೇವಿಗೆ ಚಾಮರ ಸೇವೆ ಮಾಡುತ್ತಿದ್ದಾರೆ. ದ್ವಾರದ ಕೆಳಗಡೆ ದ್ವಾರಪಾಲಕರ ಶಿಲ್ಪಗಳಿವೆ. ನವರಂಗದ ಛಾವಣಿಯಲ್ಲಿಸುಂದರವಾದ ವಿತಾನ / ಭುವನೇಶ್ವರಿ ಇದೆ. ಅಷ್ಟದಿಕ್ಪಾಲಕರ ಕೆತ್ತನೆಯೂ ಇದೆ.

ದೇವಾಲಯದ ಹೊರಗೋಡೆಗಳು ಹಲವು ಶಿಲ್ಪಗಳಿಂದ ಅಲಂಕೃತವಾಗಿದ್ದು ವಿಷ್ಣುವಿನ ಅವತಾರಗಳು ಮತ್ತು ಚತುರ್ವಿ0ಶತಿ ಮೂರ್ತಿಗಳನ್ನುಕಾಣಬಹುದು. ವೀರನಾರಾಯಣ, ಕೇಶವ, ಮಾಧವ, ವರಾಹ, ಜನಾರ್ಧನ, ನರಸಿಂಹ, ವಾಮನ, ಗೋವರ್ಧನಗಿರಿಧಾರಿ ಕೃಷ್ಣ, ಲಕ್ಷ್ಮೀನಾರಾಯಣ, ದರ್ಪಣ ಸುಂದರಿ, ಕಾಪಾಲಿಕ ಮತ್ತು ವಿಷಕನ್ಯೆ, ಮರ್ಕಟ ಪೀಡಿತ ಮದನಿಕೆ, ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರು, ಮತ್ಸ್ಯಯಂತ್ರಭೇದಕ ಅರ್ಜುನ …ಇನ್ನೂ ಮುಂತಾದ ಸುಂದರವಾದ ಶಿಲ್ಪಗಳಿವೆ. ಹೊಯ್ಸಳರ ಸಾಮಾನ್ಯ ರಚನೆಯಾದ ನಕ್ಷತ್ರಾಕಾರದ ಜಗತಿ ಮತ್ತು ಪ್ರದಕ್ಷಿಣಾ ಪಥ ಇಲ್ಲಿ ಕಾಣುವುದಿಲ್ಲ. ಇದೇ ಗ್ರಾಮದಲ್ಲಿ ಹೊಯ್ಸಳರ ಕಾಲದ್ದೇ ಆದ ಶಿವಾಲಯವೂ ಇದೆ.

ಪ್ರಸ್ತುತ ದೇವಾಲಯದ ಸುತ್ತಲೂ ರಕ್ಷಣಾ ಗೋಡೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹಾಸನದ “ಆಸರೆ ಟ್ರಸ್ಟ್” ನವರು ನಿತ್ಯ ಪೂಜಾಧಿಗಳಿಗಾಗಿತುಳಸಿ ಮತ್ತು ಹೂವಿನ ಗಿಡಗಳು ಹಾಗೂ ಭಕ್ತಾದಿಗಳಿಗಾಗಿ ಕಲ್ಲುಬೆಂಚಿನ ವ್ಯವಸ್ಥೆ ಮಾಡಲಿದ್ದಾರೆ. 

ಸ್ಥಳೀಯವಾಗಿ ಶ್ರೀ ಸ್ವಾಮಿಗೌಡರು, ಅರ್ಚಕರಾದ ಶ್ರಿನೀವಾಸ್ ಮತ್ತು ಸಹೋದರರು ಹಾಗೂ ಹೊನ್ನಾವರ ಗ್ರಾಮದ ಗ್ರಾಮಸ್ಥರು ನಿತ್ಯ ಪೂಜಾವ್ಯವಸ್ಥೆಯನ್ನು ನಿರ್ವಹಿಸಲಿದ್ದಾರೆ. 

https://maps.google.com/?cid=14519339923179817246

ಪ್ರವಾಸಿಗರು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

ನಟರಾಜ್ ಪಂಡಿತ್ 9964536150,

ರಾಮಸ್ವಾಮಿ 8453428187,

ವಿನೋದ್ ಕುಮಾರ್ 9880737654,

‘ಆಸರೆ ಟ್ರಸ್ಟ್ ಹಾಸನ’ ಶ್ರೀಧರ್ ಮತ್ತು ಗುರುಪ್ರಸಾದ್ ಕಾಮತ್ 9448318198,

ಹೊನ್ನಾವರ ಸ್ವಾಮಿ ಗೌಡರು 9480547758,

ಅರ್ಚಕರಾದ ಶ್ರೀನಿವಾಸ್ ಮತ್ತು ಸಹೋದರರು 9535411376.

ಜೀರ್ಣೋದ್ಧಾರಪೂರ್ವ ಚಿತ್ರಗಳು : ಶ್ರೀ ರಾಜೇಶ್ ನಾಯಕ್, Parampara Conservation ಮತ್ತು Temples of Karnataka

ಚನ್ನಕೇಶವ ಮೂರ್ತಿಯ ಚಿತ್ರಗಳು : ಶ್ರೀ ಕೆಂಗೇರಿ ಚಕ್ರಪಾಣಿ

ದೇವಾಲಯದ ಉಳಿದ ಚಿತ್ರಗಳು : ಶಶಿಧರ್